Breaking News
Home / featured / ಲಿಂಗಾಯತ ಧರ್ಮದ ಮಾನ್ಯತೆ ಸಿಗದಂತೆ ಷಡ್ಯಂತ್ರ’

ಲಿಂಗಾಯತ ಧರ್ಮದ ಮಾನ್ಯತೆ ಸಿಗದಂತೆ ಷಡ್ಯಂತ್ರ’

 

ಬೆಳಗಾವಿಯಲ್ಲಿ ಬಸವ ಜಯಂತಿ ಅಂಗವಾಗಿ ಬಸವ ಭೀಮ ಸೇನೆ ಮಂಗಳವಾರ ಆಯೋಜಿಸಿದ್ದ ನಾಡ ಹಬ್ಬ ಮತ್ತು ಬಸವಾದಿ ಶರಣರ ಸ್ಮರಣಾರ್ಥ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿದರು

ಬೆಳಗಾವಿ: ‘ಸ್ವತಂತ್ರ ಧರ್ಮದ ಮಾನ್ಯತೆ ಸಿಗದಂತೆ ನೋಡಿಕೊಳ್ಳುವ ಮೂಲಕ ಲಿಂಗಾಯತ ಧರ್ಮದ ಸಂಸ್ಕೃತಿಯನ್ನು ಅಳಿಸುವ ಷಡ್ಯಂತ್ರ ನಡೆದಿದೆ. ಇದರ ವಿರುದ್ಧ ಇಡೀ ಬಸವ ಸಮಾಜ ಒಂದಾಗಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಬಸವ ಜಯಂತಿ ಅಂಗವಾಗಿ ಬಸವ ಭೀಮ ಸೇನೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಾಡ ಹಬ್ಬ ಮತ್ತು ಬಸವಾದಿ ಶರಣರ ಸ್ಮರಣಾರ್ಥ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಲಿಂಗಾಯತ ಧರ್ಮ ವಿಸ್ಮಯಕಾರಿ ಧರ್ಮ. 99 ಕಾಯಕ ಜೀವಿ ಜಾತಿ ಉಪ ಜಾತಿಗಳನ್ನು ಒಂದುಗೂಡಿಸಿ, ಕಾಯಕ ಮತ್ತು ದಾಸೋಹ ಸಂಸ್ಕೃತಿಯ ಈ ವಿಶಿಷ್ಟ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗಲೇಬೇಕು. ಆಗ ಬಸವ ಸಮಾಜ ಬಲಿಷ್ಠವಾಗುತ್ತದೆ. ಸಮಾಜ ಒಂದಾಗದಂತೆ ನೋಡಿಕೊಳ್ಳುವ ಮೂಲಕ ರಾಜಕೀಯ ಲಾಭ ಪಡೆಯಬೇಕು ಎಂಬ ದುರುದ್ದೇಶದಿಂದ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನಾವೆಲ್ಲರೂ ಮೆಟ್ಟಿ ನಿಲ್ಲಬೇಕು’ ಎಂದು ತಿಳಿಸಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ವರ್ಣ ವ್ಯವಸ್ಥೆಯ ವಿರುದ್ಧ ಬಸವಾದಿ ಶರಣರು ನಡೆಸಿದ್ದ ಕ್ರಾಂತಿಯು ಸಮ ಸಮಾಜ ನಿರ್ಮಿಸುವ ದಿಸೆಯಲ್ಲಿ ದೊಡ್ಡ ಕೊಡುಗೆಯಾಗಿದೆ. ಶರಣರ ಆಶಯ
ದಂತೆ ನಾವು ಬಲಿಷ್ಠ ಸಮಾಜವನ್ನು ರೂಪಿಸಬೇಕು’ ಎಂದರು.

ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ಮಾತನಾಡಿ, ‘ಲಿಂಗಾಯತ ಧರ್ಮದ ಹೋರಾಟಕ್ಕೆ ನಮ್ಮ ಸಮಾಜದ ಸಂಪೂರ್ಣ ಬೆಂಬಲವಿದೆ. ಧರ್ಮದ ಮಾನ್ಯತೆ ಸಿಕ್ಕ ದಿನವೇ ನಾನು ಲಿಂಗಾಯತ ಧರ್ಮ ಸ್ವೀಕರಿಸುತ್ತೇನೆ. ದೇಶದಾದ್ಯಂತ ಹರಡುತ್ತಿರುವ ಮನುವಾದದ ವಿರುದ್ಧ ಎಲ್ಲ ಶೋಷಿತ ಸಮುದಾಯದವರು ಒಂದಾಗಿ ಹೋರಾಡಬೇಕು’ ಎಂದು ತಿಳಿಸಿದರು.

ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ ಮಾತನಾಡಿ, ‘ಬಸವ ಸಮಾಜವು ಸನಾತನ ಧರ್ಮ ಹೇರಿರುವ ಆಚರಣೆಗಳಿಂದ ಹೊರ ಬರಬೇಕು. ದಸರಾ ನಮಗೆ ನಾಡ ಹಬ್ಬವಲ್ಲ. ಒಂದು ನಗರ ಕಟ್ಟಿದವನು ನಾಡ ದೊರೆ ಅಲ್ಲ. ನಮ್ಮ ಬದುಕು ಕಟ್ಟಿಕೊಟ್ಟ ಬಸವಣ್ಣನ ಜನ್ಮ ದಿನವೇ ನಮಗೆ ನಾಡಹಬ್ಬವಾಗಬೇಕು. ಅವರೇ ನಮಗೆ ನಾಡ ದೊರೆ’ ಎಂದು ಪ್ರತಿಪಾದಿಸಿದರು.

ಬಸವಾದಿ ಶರಣರ ಸ್ಮರಣಾರ್ಥ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಶಿಕಾರಿಪುರದ ಕಾಂಚನ ಕುಮಾರ ಮತ್ತು ಪ್ರವೀಣ ಹದಡಿ ಹಾಗೂ ಗದಗದ ಮಹಾಲಿಂಗ ಶಾಸ್ತ್ರಿ ಮಾತನಾಡಿದರು.

ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ಉದ್ಘಾಟಿಸಿದರು. ಲಿಂಗಾಯತ ಸೇವಾ ಸಮಿತಿ ಅಧ್ಯಕ್ಷ ಪ್ರದೀಪ ತೆಲಸಂಗ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಸುರೇಶ ತಳವಾರ ನಿರೂಪಿಸಿದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!