Breaking News
Home / featured / ವೈದಿಕರು ತೋಡಿದ ಖೆಡ್ಡಾದಲ್ಲಿ ಬಿದ್ದ ಲಿಂಗಾಯತವೆಂಬ ಆನೆ !

ವೈದಿಕರು ತೋಡಿದ ಖೆಡ್ಡಾದಲ್ಲಿ ಬಿದ್ದ ಲಿಂಗಾಯತವೆಂಬ ಆನೆ !

ವೈದಿಕರು ತೋಡಿದ ಖೆಡ್ಡಾದಲ್ಲಿ ಬಿದ್ದ ಲಿಂಗಾಯತವೆಂಬ ಆನೆ !

ಯಾದಗಿರಿ : ಲಿಂಗಾಯತರ ಕಲ್ಯಾಣ ಮಹೋತ್ಸವ, ಗುರು ಪ್ರವೇಶಗಳಿಗೆ ಹೋಗುವುದೆಂದರೆ ನನಗೆ ಹೇವರಿಕೆ ಉಂಟಾಗುತ್ತಿದೆ. ತೀರಾ ಆತ್ಮೀಯರು ಒಂದಷ್ಟು ಬಸವ ತತ್ವದ ಕಡೆ ವಾಲಿದ ಜನ ಇದ್ದಾರೆಂದು ಗೊತ್ತಾದ ಮೇಲೆ ಆ ಕಡೆ ಹಣಕಿ ಹಾಕುತ್ತೇನೆ. ಇನ್ನು ಹಲವು ಸಲ ಸಮಾಜದಲ್ಲಿ ಎಲ್ಲರ ಜೊತೆಗೂಡಿ ಹೋಗಬೇಕಾಗಿದೆ ಎಂಬ ಕಾರಣಕ್ಕೆ ಅನಿವಾರ್ಯವಾಗಿದ್ದಾಗ ಹೋಗುತ್ತೇನೆ. ನನ್ನ ದೇಹ ಅಲ್ಲಿದ್ದರೂ ಮನಸ್ಸು ಮಾತ್ರ ನೀರಿನಿಂದ ತೆಗೆದ ಮೀನಿನಂತೆ ವಿಲಿ ವಿಲಿ ಒದ್ದಾಡುತ್ತಿರುತ್ತದೆ. ಯಾವಾಗ ಇವರ ಮನೆ ದಾಟಿ ಹೊರಗೆ ಹೋಗುತ್ತೇನೆ ಎಂಬ ಧಾವಂತ ನನ್ನಲ್ಲಿ ಹುಟ್ಟಿಕೊಳ್ಳುತ್ತದೆ. ಲಿಂಗಾಯತರು ಕರ್ಮಠರು ಹೇಳಿದ ಪೂಜೆ ಮಾಡಿಸುವಾಗಲಂತೂ ನಾನು ಹೋಗುವುದೆ ಇಲ್ಲ. ಅಲ್ಲಿ ಪೂಜೆಗಿಂತ ಪೂಜೆಯ ವೈಭವ ಯಥೇಚ್ಛವಾಗಿರುತ್ತದೆ, ಈ ಸತ್ಯವನ್ನು ಅರಿಯದ ವ್ಯಕ್ತಿ ಮಾತ್ರ ತಾನು ಮಾತ್ರ ದೊಡ್ಡ ಪೂಜೆ ಮಾಡಿಸಿದೆ ಎಂಬ ಭ್ರಮೆಯಲ್ಲಿ ತೇಲುತ್ತಿರುತ್ತಾನೆ.

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ
ಅಗೆದು ಕಳೆದೆನಯ್ಯಾ, ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ ಬಗಿದು
ಬಿತ್ತಿದೆನಯ್ಯಾ ಬ್ರಹ್ಮ ಬೀಜವ
ಅಖಂಡಮಂಡಲವೆಂಬ ಬಾವಿ, ಪವನವೆ ರಾಟಾಳ
ಸುಷುಮ್ನಾಳದಿಂದ ಉದಕವ ತಿದ್ದಿ
ಬಸವಗಳೈವರು ಹಸಗೆಡಿಸಿಹವೆಂಬ ಸಮತೆ
ಸೈರಣೆಯೆಂಬ ಬೇಲಿಯನಿಕ್ಕು,
ಆವಾಗಲೂ ಈ ತೋಂಟದಲ್ಲಿ ಜಾಗರವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

ಸದಾ ವೈದಿಕರ ಸುತ್ತ ಮುತ್ತ ಓಡಾಡುವ ಲಿಂಗಾಯತರು ತನುವ ತೋಂಟವ ಮಾಡುವುದು ಯಾವಾಗ ? ಕ್ಷಣ ಕ್ಷಣವೂ ಅವರನ್ನು ರಾಹುಕಾಲ ಗುಳಿಕ ಕಾಲ ಯಮಗಂಡ ಕಾಲ ಯಮನಾಗಿ ಒಂದೆ ಸಮ ಕಾಡುತ್ತಿರುತ್ತವೆ. ವಾರ ತಿಥಿ ಮಿತಿಗಳ ಬುಟ್ಟಿಗೆ ಬಿದ್ದು ತಮ್ಮ ಸ್ವತಂತ್ರ ಮತಿಯನ್ನು ಒತ್ತಿ ಇಟ್ಟಿದ್ದಾರೆ.

ಆದಿತ್ಯವಾರ ಸೋಮವಾರ ಮಂಗಳವಾರವೆಂದು
ಏಳು ವಾರವ ಹೆಸರಿಟ್ಟು ನುಡಿವರು,
ನಾವಿದನರಿಯೆವು. ಗುಹೇಶ್ವರ ಶರಣ
ಚೆನ್ನಬಸವಣ್ಣಂಗೆ ಮೂರೇ ವಾರ.

ಎಂದು ಅಲ್ಲಮಪ್ರಭುಗಳು ಹೇಳಿದ್ದರೂ ಸಹ ವಾರಗಳು ಲಿಂಗಾಯತರಿಗೆ ಉರುಲಾಗಿ ಕಾಡುತ್ತಿವೆ. ಸೋಮವಾರ, ಮಂಗಳವಾರ, ಬುಧುವಾರ, ಗುರುವಾರ, ಶುಕ್ರವಾರ, ಶನಿವಾರ ನಾವು ನಮ್ಮ ಅನುಕೂಲಕ್ಕಾಗಿ ಮಾಡಿಕೊಂಡವುಗಳು ಎಂಬ ಪರಿಕಲ್ಪನೆ ನಮಗೆ ಇಲ್ಲವಾಗಿದೆ. ದಿನ ವಾರಗಳು ಶ್ರೆÃಷ್ಠ ಕನಿಷ್ಠವಾಗಿ ನಮ್ಮನ್ನು ಒದ್ದಾಡಿಸುತ್ತಿವೆ. ನಮಗೆ ಇರುವ ಮೂರು ವಾರಗಳೆಂದರೆ ಅರಿವೇ ಗುರು. ಆಚಾರವೇ ಲಿಂಗ. ಅರಿವು ಆಚಾರವನ್ನು ಅಳವಡಿಸಿಕೊಂಡು ಅದನ್ನು ಜನ ಮಾನಸಕ್ಕೆ ತಲುಪಿಸುವವನೆ ಜಂಗಮ. ಇವು ಮೂರು ಲಿಂಗಾಯತರಿಗೆ ಶ್ರೇಷ್ಠ. ನಮಗೆ ಗೊತ್ತಿಲ್ಲದೆ ನಮ್ಮ ಮನವೆಂಬ ಹೊಲದಲ್ಲಿ ದೊಡ್ಡ ಹೆಂಟೆಗಳು ತಲೆಎತ್ತಿ ನಿಂತಿವೆ. ಅವುಗಳನ್ನೆಲ್ಲ ವಿಚಾರದ ಉದಕದಿಂದ ಸಮಗೊಳಿಸಬೇಕಿದೆ. ಹೊಲವನ್ನು ಕಸ ಕಡ್ಡಿಗಳಿಂದ ಮಡ್ಡಸ ಮಾಡಬೇಕಿದೆ. ಆದರೆ ಲಿಂಗಾಯತರಿಗೆ ಈ ಪ್ರಜ್ಞೆ ಇಲ್ಲವೆ ಇಲ್ಲ. ಏಕೆಂದರೆ ಪ್ರತಿಯೊಂದಕ್ಕೂ ನಾವು ಏಕೆ ತಲೆ ಕೆಡಿಸಿಕೊಳ್ಳಬೇಕು. ದುಡಿಯುವುದಷ್ಟೆ ನಮ್ಮ ಕೆಲಸ. ದೇವರು ದಿಂಡಿರು, ಒಳ್ಳೆಯದು- ಕೆಟ್ಟದ್ದು, ಧಾರ್ಮಿಕ ಆಚರಣೆ ಮುಂತಾದವೆಲ್ಲ ನಮ್ಮ ನಮ್ಮ ಸ್ವಾಮಿ( ಜಂಗಮ) ನೋಡಿಕೊಳ್ಳುತ್ತಾನೆ ಎಂದು ಬಲವಾಗಿ ನಂಬಿದ್ದಾರೆ. ಹೀಗಾಗಿ ತಾವು ನಂಬಿದ ಜಂಗಮನ ಉಗುಳನ್ನು ದಾಟದೆ, ಅಲ್ಲೆ ಲಿಬಿ ಬಿಲಿ ಒದ್ದಾಡುತ್ತಿದ್ದಾರೆ. ಅವರು ಉತ್ತರ ಅಂದರೆ ಇವರು ಉತ್ತರ. ಅವನು ದಕ್ಷಿಣ ಅಂದರೆ ಇವರೂ ದಕ್ಷಿಣ. ನೀನು ಹೇಳಿದ್ದು ಸರಿಯಲ್ಲ ಎಂದು ಹೇಳುವ ಎದೆಗಾರಿಕೆ ಇವರಿಗೆ ಇಲ್ಲವೇ ಇಲ್ಲ. ಹೀಗಾಗಿ ಲಿಂಗಾಯತರನ್ನು ಅವರ ಸ್ವಾಮಿ ಅಲ್ಲ, ಅವರೆ ಹಿಂದಿನಿಂದಲೂ ನಂಬಿಸಿಕೊಡು ಬಂದ ಒಂದು ಸಣ್ಣ ನಿಂಬೆಕಾಯಿ, ಕ್ಯಾರು, ಕರಿದಾರ, ಟೆಂಗಿನ ಕಾಯಿಗಳು ಹೆದರಿಸುತ್ತವೆ. ಅಮವಾಸೆ ಹುಣ್ಣಿವೆಗಳು ಭಯವನ್ನು ಹುಟ್ಟುಹಾಕಿವೆ.

ಆದ್ದರಿಂದಲೆ ಲಿಂಗಾಯತರು ತಮ್ಮ ಗುರು ಪ್ರವೇಶವನ್ನು ಕರ್ಮಠರ ಕರೆದು ಯಜ್ಞ ಯಾಗಗಳನ್ನು ಆಚರಿಸುವ ಮೂಲಕ ನೆರವೇರಿಸುತ್ತಾರೆ. ಮನೆಯ ತುಂಬಾ ದೇವರಗಳ(?) ಅಕರಾಳ ವಿಕರಾಳ ಬೊಂಬೆಗಳನ್ನು ಮಾಡಿ ಖುಷಿ ಪಡುತ್ತಾರೆ. ಹೊಸ ಮನೆಗೆ ತಮ್ಮ ಬಂಧು ಬಳಗವನ್ನು ಕರೆದು ಅವರಿಗೆಲ್ಲ ವಿವೇಕದ ಪ್ರಸಾಧ ಹಂಚಬೇಕಾದವರು ಭಯದಿಂದ ಗಡ ಗಡ ನಡುಗಿ ಪುರೋಹಿತ ಆಟ ಆಡಿಸಿದಂತೆ ಆಡುವ ಕಠ ಪುತ್ಥಲಿಗಳಾಗಿದ್ದಾರೆ. ತಮ್ಮ ಮನೆಗೆ ಎಲ್ಲರನ್ನು ಕರೆದು ಆಹ್ವಾನಿಸಬೇಕಾದವರು ದನವನ್ನು ಮನೆಯೊಳಗೆ ಬಿಟ್ಟುಕೊಂಡು ಕೊಂಡವಾಡಿ ಮಾಡಿಕೊಂಡಿದ್ದಾರೆ. ಮನೆಯ ತುಂಬಾ ದನದ ಮೂತ್ರ ಚಿಮುಕಿಸಿ ಖುಷಿಯಾಗಿದ್ದಾರೆ ! ವಾಸ್ತು ಹೇಳುವ ತಿರಬೋಕಿಯ ಮಾತು ಕೇಳಿ ಹೆತ್ತಮ್ಮ ವಿಧವೆ ಎಂಬ ಕಾರಣಕ್ಕೆ ಅವಳನ್ನು ಪೂಜೆಯಿಂದ ದೂರ ಇರಿಸಿ ಸಂಪ್ರದಾಯ ಪರಿಪಾಲನೆ ಮಾಡಿದ್ದಾರೆ !?
ಇವರ ಮನೆಯ ಪೂಜಾ ಕಾರ್ಯಕ್ರಮಗಳಿಗೆ ಬರುವ ಗಡವಳಿಗೆ ಪಕ್ಕಾ ಗೊತ್ತು. ಇವರೆಲ್ಲ ನಮ್ಮ ಕೈಗೊಂಬೆಗಳು ಎಂದು ಹೀಗಾಗಿ ಇವರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾರೆ. ಉಠಾಬೈಠ ಮಾಡಿಸುತ್ತಾರೆ. ಸಾಕಷ್ಟು ಹಣವನ್ನು ಕೆಬರಿಕೊಳ್ಳುತ್ತಾರೆ. ಕೊಟ್ಟವ ಕೊಡಂಗಿ ಆದರೆ ಇಸಗೊಂಡವ ಈರಭದ್ರನಾಗಿ ಕುಳಿತ್ತಿದ್ದಾನೆ. ಆಗಲೂ ಲಿಂಗಾಯತರು ತಮ್ಮ ಮೀಸೆಗೆ ಮಣ್ಣು ಹತ್ತಿಲ್ಲದಂತೆ ಕುಳಿತುಕೊಂಡಿದ್ದಾರೆ. ತಮ್ಮ ಮೇಲೆ ತಮಗೆ ನಂಬಿಕೆ ಇಲ್ಲದ ಜನ ಬೇರೆಯವನರನ್ನು ಎಷ್ಟು ನಂಬುತ್ತಾರೊ ?

ಕಲ್ಯಾಣ ಮಹೋತ್ಸವದಲ್ಲಂತೂ ಕ್ವಿಂಟಾಲಗಟ್ಟಲೆ ಅಕ್ಕಿ ಕಾಳನ್ನು ಕಾಲಲ್ಲಿ ಚೆಲ್ಲಾಪಿಲ್ಲಿಯಾಗಿ ಚೆಲ್ಲಿ, ಅದರ ಮೇಲೆ ತುಳಿದಾಡುತ್ತ ತಮ್ಮ ದಾಷ್ಟçö್ರ್ಯವನ್ನು ತೋರುತ್ತಿದ್ದಾರೆ. ಅನ್ನದ ಒಂದು ಅಗುಳನ್ನು ಸ್ವತಃ ತಾನೆ ತಯಾರಿಸಲಾಗದ ಮನುಷ್ಯ. ನೂರಾರು ಜನ ಉಣ್ಣುವ ಅನ್ನವನ್ನು ಚೆಲ್ಲುವ ಅಧಿಕಾರ ನೀಡಿದವರು ಯಾರು ? ಅನ್ನವನ್ನು ಪ್ರಸಾದವೆಂದು ಹೇಳುವ ಲಿಂಗಾಯತರ ಮದುವೆಗಳಲ್ಲಿ ಊಟದ ತಾಟುಗಳಲ್ಲಿ ಉಳಿಸಿದ್ದು ಮುಸುರೆಗೆ ಹಾಕಲಾಗುತ್ತದೆ. ದೊಡ್ಡ ದೊಡ್ಡ ಮದುವೆ ನಡೆದ ಮಾರನೆಯ ದಿನ ಡಿಗ್ಗಿ ಗಟ್ಟಲೆ ಅನ್ನ ಬೀದಿಯಲ್ಲಿ ಬಿದ್ದಿರುತ್ತದೆ. ಈ ಅಪ್ಯಾಯನ ಪ್ರಸಾದ ಕೆಡಿಸಬಾರದು ಎಂದು ಹೇಳುವವರು ಯಾರು ಇಲ್ಲವಾಗಿದೆ. ಇಡೀ ಮನುಷ್ಯ ಜನಾಂಗಕ್ಕೆ ದಿಕ್ಕಾಗಬೇಕಾಗಿದ್ದ ಲಿಂಗಾಯತರೆ ದಿಕ್ಕು ತಪ್ಪಿ ವರ್ತಿಸುತ್ತಿದ್ದಾರೆ. ಉಪ್ಪು ತನ್ನ ರುಚಿ ಕಳಕೊಂಡರೆ ಆ ರುಚಿಯನ್ನು ತುಂಬುವವರು ಯಾರು ? ಆನೆ ಯಾರೋ ತೋಡಿದ ಖೆಡ್ಡಾದಲ್ಲಿ ಬಿದ್ದಿದೆ. ಈ ಆನೆ ತನ್ನ ಸ್ವಸಾಮರ್ಥ್ಯದ ಬಲದಿಂದ ಮೇಲೆ ಬರಬೇಕು, ಅಲ್ಲವೆ ?

೦ ವಿಶ್ವಾರಾಧ್ಯ ಸತ್ಯಂಪೇಟೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!