Breaking News
Home / featured / ಚಿತ್ರದುರ್ಗದ ಶಿಮುಶ ಬಸವಣ್ಣನವರಿಗೆ ಅಪಚಾರ ಮಾಡಿರುವರೆ….?

ಚಿತ್ರದುರ್ಗದ ಶಿಮುಶ ಬಸವಣ್ಣನವರಿಗೆ ಅಪಚಾರ ಮಾಡಿರುವರೆ….?

 

ಯಾದಗಿರಿ: ಚಿತ್ರದುರ್ಗದ ಮುರುಘಾ ಶರಣರಿಗೆ ಅಂಟಿದ ಪ್ರಚಾರದ ಹುಚ್ಚು ಇಂದು ನಿನ್ನೆಯದಲ್ಲ. ಅವರು ಯಾವತ್ತು ಜಗದ್ಗುರು ಪದವಿಯನ್ನು ತೊರೆದರೊ ಅಂದೇ ಅದರ ಹುಳುಗಳು ಅವರ ತಲೆಯನ್ನು ಹೊಕ್ಕವು. ಬಹಳಷ್ಟು ಜನರಿಗೆ ಜಗದ್ಗುರು ಪದವಿ ತೊರೆದುದು ಬಹುದೊಡ್ಡ ಸಾಧನೆಯಾಗಿ ಕಾಣಬಹುದು. ಆದರೆ ಶರಣ ಪದವಿ ಜಗದ್ಗುರು ಪದವಿಗಿಂತಲೂ ದೊಡ್ಡದು ಎಂಬುದು ಗೊತ್ತಿಲ್ಲ.

ಇಹಪರನಲ್ಲ, ಪರಾಪರನಲ್ಲ,
ಭಾವಿಸಿ ಭಾವಿಯಲ್ಲ, ಕಾಮಿಸಿ ಕಾಮಿಯಲ್ಲ.
ಅನಾಯಾಸ ನಿರಂಜನನು ಸಿದ್ಧ ಸೋಮನಾಥಲಿಂಗಾ
ನಿಮ್ಮ ಶರಣ ಬಳಸಿ ಬಳಸುವವನಲ್ಲ
ಅಮುಗಿದೇವಯ್ಯ

ಅರಿಯದೆ ಅರಸಿದಡೆ ಮನದ ವಿಕಾರ
ಸುಳಿದರಸಿದಡೆ ಪವನ ವಿಕಾರ, ನಿಂದರಸಿದಡೆ ದೇಹವಿಕಾರ
ಒಳಗನರಸಿದಡೆ ಜ್ಞಾನವಿಕಾರ.
ಅರಸದೆ ಬೆರಸಿದಡೆ ಆತನೆ ಶರಣ ಗುಹೇಶ್ವರಈ ವಚನಗಳನ್ನು ಗಮನಿಸಿದರೆ ಸಾಕು ಶರಣ ಪದವಿ ಎಂಥ ಮೌಲಿಕವಾದುದು ಎಂಬುದು ಯಾರಿಗಾದರೂ ಗೊತ್ತಾಗುತ್ತದೆ. ಜಗದ್ಗುರು ಪದವಿ ತಿರಸ್ಕರಿಸಿದ್ದು ದೊಡ್ಡದ್ದು ಅನ್ನುವುದಕ್ಕಿಂತ ಶರಣ ಪದವಿಗೆ ತಕ್ಕಂತೆ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಗಳು ನಡೆಯುತ್ತಿದ್ದಾರೆಯೆ ? ಎಂಬುದು ಪ್ರಮುಖವಾಗುತ್ತದೆ. ಇದೆಲ್ಲ ಒತ್ತಟ್ಟಿಗಿರಲಿ,

ತೀರಾ ಇತ್ತೀಚೆಗೆ ಪ್ರಜಾವಾಣಿಯ ದಿ.೧೧-೫-೨೦೧೯ ರ ‘ವಚನಾಮೃತ’ ಅಂಕಣದಲ್ಲಿ ಜೇಡರ ದಾಸಿಮಯ್ಯನ ಬಗೆಗೆ ಬರೆಯುತ್ತ “ಜೇಡರ ದಾಸಿಮಯ್ಯ ನೇಯ್ಗೆ ಕಾಯಕ ಮಾಡುತ್ತ, ವಚನ ವಾಙ್ಞಯಕ್ಕೆ ಒಂದು ತಳಹದಿ, ಒಂದು ಪರಂಪರೆ ಹಾಕಿಕೊಟ್ಟ ಆದ್ಯ ವಚನಕಾರ ಜೇಡರ ದಾಸಿಮಯ್ಯ ; ತನ್ನ ವಚನಗಳ ಸಾಹಿತ್ಯಿಕ ಗುಣ ಹಾಗೂ ಮೌಲ್ಯಗಳಿಂದಾಗಿ ಬಸವ ಪೂರ್ವದ ಶ್ರೇಷ್ಠ ವಚನಕಾರ.’’, “ ದಾಸಿಮಯ್ಯ ನಡೆಸುತ್ತಿದ್ದ ಶಿವ ಕಾರುಣ್ಯ ಗೋಷ್ಠಿಗಳು ಮುಂದೆ ಬಸವಣ್ಣನವರ ಕಾಲದಲ್ಲಿ ‘ಅನುಭವ ಮಂಟಪ’ದಂತಹ ಪ್ರಸಿದ್ಧ ವಿಚಾರ ಗೋಷ್ಠಿಗಳು ರೂಪುಗೊಳ್ಳಲು ಕಾರಣವಾಯಿತು. ನವ ಸಮಾಜದ ದೃಷ್ಟಿಯಿಂದ ದಾಸಿಮಯ್ಯ ಪ್ರಾರಂಭಿಸಿದ ಧಾರ್ಮಿಕ ಸಾಮಾಜಿಕ ಸುಧಾರಣೆಗಳು ಮುಂದುವರೆಗೆ ಬಸವಣ್ಣ ಮತ್ತು ಸಮಕಾಲೀನ ಶರಣರ ಕಾಲದಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಮುಂದುವರೆದುದನ್ನು ಕಾಣಬಹುದು.” ಎಂಬುದನ್ನು ಬರೆದಿದ್ದಾರೆ. ಕೊನೆಯಲ್ಲಿ ದಾಸಿಮಯ್ಯನ ಆದರ್ಶ ವ್ಯಕ್ತಿತ್ವ ಬಸವಣ್ಣ ಹಾಗೂ ಇತರ ಶರಣರ ಮೇಲೆ ಪ್ರಭಾವ ಬೀರಿವೆ. ಬಸವಣ್ಣನವರ ಸಮಗ್ರ ಚಟುವಟಿಕೆಗಳಿಗೆ ದಾಸಿಮಯ್ಯ ಪ್ರೇರಕ ಶಕ್ತಿ’’ ಎಂದು ವಿವರಿಸಿದ್ದಾರೆ.

ಒಟ್ಟಿನಲ್ಲಿ ಚಿತ್ರದುರ್ಗದ ಮುರುಘಾ ಶರಣರಿಗೆ ಜೇಡರ ದಾಸಿಮಯ್ಯ ಬಸವಣ್ಣನವರಿಗಿಂತಲೂ ಪೂರ್ವದಲ್ಲಿ ಇದ್ದವರು ಎಂದು ನಮ್ಮನ್ನೆಲ್ಲ ನಂಬಿಸಲು ಹೊರಟಿದ್ದಾರೆ. ಈ ನಂಬಿಕೆಗಳನ್ನು ಜನ ಸಾಮಾನ್ಯರಲ್ಲಿ ಹೇರುವ ಮೂಲಕ ಬಸವಣ್ಣನವರ ಮೇರು ವ್ಯಕ್ತಿತ್ವವನ್ನು ಕುಬ್ಜಗೊಳಿಸಬೇಕೆಂದು ಹುನ್ನಾರ ಇದೆಯೆ…? ಎಂಬ ಪ್ರಶ್ನೆ ಹಲವರಿಗೆ ಮೂಡಿರುವುದು ಸುಳ್ಳಲ್ಲ.

ಏಕೆಂದರೆ ಬಸವಣ್ಣನವರ ಸಮಕಾಲೀನ ಜೇಡರ ದಾಸಿಮಯ್ಯ ಎಂಬುದು ಸಂಶೋಧನೆಗಳಿಂದ ಈಗಾಗಲೇ ನಿರ್ಧಾರಿತವಾದ ಸತ್ಯವಾಗಿದೆ. ಅಂದಿನ ಅನುಭವ ಮಂಟಪದಲ್ಲಿ ಜೇಡರ ದಾಸಿಮಯ್ಯ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಓಹಿಲಯ್ಯ, ಉದ್ಧಟಯ್ಯ ಮತ್ತು ದಾಸಿಮಯ್ಯನ ಪತ್ನಿ ದುಗ್ಗಳೆ ಇವರೆಲ್ಲರೂ ಇದ್ದರು ಎಂಬ ಸತ್ಯ ಸಹ ವಚನಗಳಿಂದ ನಮಗೆ ತಿಳಿದು ಬರುತ್ತದೆ. ದುಗ್ಗಳೆಯ ವಚನಗಳಲ್ಲಿಯೂ ಬಸವಣ್ಣನವರ ಮೇರು ವ್ಯಕ್ತಿತ್ವವನ್ನು ಕೊಂಡಾಡಿದ ಸಂಗತಿಯೂ ನಮಗೆ ಆಕೆಯ ವಚನಗಳ ಮೂಲಕ ತಿಳಿಯುತ್ತದೆ.

ಬಸವಣ್ಣನಿಂದ ಗುರು ಪ್ರಸಾದಿಯಾದೆನು
ಚೆನ್ನಬಸವಣ್ಣನಿಂದ ಲಿಂಗ ಪ್ರಸಾದಿಯಾದೆನು
ಪ್ರಭುದೇವರಿಂದ ಜಂಗಮ ಪ್ರಸಾಧಿಯಾದೆನು
ಮರುಳ ಶಂಕರ ದೇವರಿಂದ ಮಹಾಪ್ರಸಾದಿಯಾದೆನು
ಇಂತೀ ಚತುರ್ವಿಧವು ಏಕೀಭವಿಸಿ ಪ್ರಾಣಲಿಂಗವಾದ ಮಹಾಮಹಿಮಂಗೆ
ಶರಣೆಂದು ಬದುಕಿದೆನಯ್ಯಾ ದಾಸಯ್ಯ ಪ್ರಿಯ ರಾಮನಾಥ

ಭಕ್ತನಾದಡೆ ಬಸವಣ್ಣನಂತಾಗಬೇಕು
ಜಂಗಮವಾದಡೆ ಪ್ರಭುದೇವರಂತಾಗಬೇಕು
ಯೋಗಿಯಾದಡೆ ಸಿದ್ಧರಾಮಯ್ಯನಂತಾಗಬೇಕು
ಐಕ್ಯನಾದಡೆ ಅಜಗಣ್ಣನಂತಾಗಬೇಕು
ಇಂತಿವರ ಕಾರುಣ್ಯ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ
ತತ್ವದ ಮಾತು ಎನಗೇಕಯ್ಯಾ
ದಾಸಯ್ಯ ಪ್ರಿಯ ರಾಮನಾಥ ?

ಚಿತ್ರದುರ್ಗದ ಶರಣರು ಬರೆದಂತೆ ಭಾವಿಸುವುದೇ ಆದರೆ ಜೇಡರ ದಾಸಿಮಯ್ಯನ ಪತ್ನಿ ದುಗ್ಗಳೆ ‘ಬಸವಣ್ಣನಿಂದ ಗುರು ಪ್ರಸಾದಿಯಾದೆನು’ ಎಂದು ಬರೆಯುತ್ತಿರಲಿಲ್ಲ. ‘ಭಕ್ತನಾದಡೆ ಬಸವಣ್ಣನಂತಾಗಬೇಕು’ ಎಂಬ ಅನುಭವದ ಮಾತುಗಳನ್ನು ಹೇಳುತ್ತಿರಲಿಲ್ಲ. ಇದಷ್ಟೇ ಅಲ್ಲದೆ ಬಸವಣ್ಣನವರ ಸಮಕಾಲೀನರಾದ ಶಿವಯೋಗಿ ಸಿದ್ಧರಾಮ, ಅಜಗಣ್ಣ , ಪ್ರಭುದೇವ, ಮರುಳ ಶಂಕರ , ಚೆನ್ನಬಸವಣ್ಣನವರನ್ನೂ ಆಕೆ ಅವರವರ ವೈಶಿಷ್ಟ್ಯಕ್ಕಾಗಿ ಇಲ್ಲಿ ನೆನೆದುದನ್ನು ನಾವು ನೋಡಬಹುದು. ಜೇಡರ ದಾಸಿಮಯ್ಯನ ಪತ್ನಿ ಬಸವಣ್ಣನವರಿಗಿಂತಲೂ ಪೂರ್ವದಲ್ಲಿಯೆ ಇದ್ದಿದ್ದರೆ ಬಸವಣ್ಣ ಹಾಗೂ ಅವರ ಸಮಕಾಲೀನ ಶರಣರನ್ನು ನೆನೆಯುವ ಅವಶ್ಯಕತೆಯೆ ಇರುತ್ತಿರಲಿಲ್ಲ.

ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ ?
ಕಡೆಗೀಲು ಬಂಡಿಗಾಧಾರ
ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢ ಶರಣರ
ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ

ಎಂಬ ಜೇಡರ ದಾಸಿಮಯ್ಯನವರ ವಚನ ಗಮನಿಸಿದರೆ ‘ಮೃಢ ಶರಣರ ನುಡಿಗಡಣವೇ ಕಡೆಗೀಲು’ ಎಂಬ ಮಾತು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಮುರುಘಾ ಶರಣರು ಬರೆದಂತೆ, ಅಥವಾ ತಿಳಕೊಂಡಂತೆ ಜೇಡರ ದಾಸಿಮಯ್ಯ ಆದ್ಯ ವಚನಕಾರ ಆಗಿದ್ದರೆ ಆತನೂ ಕೂಡ ಇನ್ನಾವುದೋ ಶರಣರ ಮಾತುಗಳು ಕಡೆಗೀಲು ಅಂತ ಹೇಳುತ್ತಾರಲ್ಲ ? ಹಾಗಾದರೆ ಜೇಡರ ದಾಸಿಮಯ್ಯನವರಿಗಿಂತಲೂ ಪೂರ್ವದಲ್ಲಿ ಶರಣರು ಇದ್ದರೆ ? !

ಇಲ್ಲದೆ ಇರುವ ಶರಣರನ್ನು ಇದ್ದಂತೆ ತಿಳಿಸುವ ಮೂಲಕ ಬಸವಣ್ಣನವರನ್ನು ಅಪ್ರಸ್ತುತ ಮಾಡಬೇಕೆಂಬ ಚಿತ್ರದುರ್ಗದ ಜಗದ್ಗುರುಗಳ ತಪ್ಪು ತಿಳುವಳಿಕೆ ನಿಜಕ್ಕೂ ಖಂಡನಾರ್ಹ.

ಕರಿಯನಿತ್ತಡೆ ಒಲ್ಲೆ ಸಿರಿಯನಿತ್ತಡೆ ಒಲ್ಲೆ
ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ
ನಿಮ್ಮ ಶರಣರ ಸೂಳ್ನುಡಿಯ
ಒಂದರೆ ಘಳಿಗೆಯಿತ್ತಡೆ ನಿಮ್ಮನಿತ್ತೆ ಕಾಣಾ ರಾಮನಾಥ

ಎಂಬ ಮಾತೂ ಸಹ ಜೇಡರ ದಾಸಿಮಯ್ಯ ಬಸವಣ್ಣನವರ ಸಮಕಾಲೀನ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಹುಡುಕಿದರು ಎಂಬಂತೆ ಬಸವಣ್ಣನವರನ್ನು ಸಣ್ಣವರನ್ನಾಗಿ ಮಾಡಿ ತಾವು ಏನು ಪಡೆಯಬೇಕೆಂದು ಬಯಸಿದ್ದಾರೋ ಆ ಮುರುಘಾ ಮಠದ ಜಗದ್ಗುರುಗಳಿಗೆ ಗೊತ್ತು !?

ಬಸವಣ್ಣನವರು ಯಾರು ? ಎಂಬುದು ಇಡಿ ಜಗತ್ತಿಗೆ ಗೊತ್ತಾಗಿದೆ. ಗುರು ಲಿಂಗ ಜಂಗಮಕ್ಕೂ ಬಸವಣ್ಣನವರೆ ಆಧಾರ ಎಂಬ ಸತ್ಯ ವಚನ ಪ್ರೇಮಿಗಳಿಗೆಲ್ಲ ಮನದಟ್ಟಾಗಿದೆ. ದೇವರಾಗಬಹುದು, ಬಸವಣ್ಣನವರಾಗಲು ಸಾಧ್ಯವಿಲ್ಲ ಎಂಬ ಉದ್ಘಾರ ಅಲ್ಲಮಪ್ರಭುಗಳಿಂದ ಆಗಿದೆ. ದೇವಲೋಕ, ಪಾತಾಳ ಲೋಕ, ಮರ್ತ್ಯಲೋಕ , ನಾಗಲೋಕಗಳಿಗೂ ಬಸವಣ್ಣನವರೆ ಏಕೆ ದೇವರು ? ಎಂಬ ಸಂಗತಿಯನ್ನು ಜಗತ್ತಿಗೆ ಶಿವಶರಣೆ ಅಕ್ಕಮಹಾದೇವಿ ಅಂದೇ ಹೇಳಿಬಿಟ್ಟಾಗಿದೆ. ಬಸವ ಎಂಬ ಮೂರಕ್ಷರದಲ್ಲಿ ಅಸಾಧ್ಯವೂ ಸಾಧ್ಯ ಎಂಬ ಸಂಗತಿ ಚಿತ್ರದುರ್ಗದ ಜಗದ್ಗುರುಗಳಿಗೆ ಗೊತ್ತಿಲ್ಲದಿರುವ ಸಂಗತಿ ಅಲ್ಲ. ಜಗತ್ತಿನ ಮೊಟ್ಟ ಮೊದಲ ಸಂಸತ್ತನ್ನು ಸ್ಥಾಪಿಸಿದ, ಕರುಣೆಯ ಕಡಲು ಬಸವಣ್ಣನವರೆಂಬುದು ಗೊತ್ತಿದ್ದರೂ ಇವರುಗಳು ಆಡುವ ಆಟಕ್ಕೆ ಏನೆನ್ನಬೇಕು ?
ಅಲ್ಲದೆ ಜೇಡರ ದಾಸಿಮಯ್ಯನ ಕುರಿತು ಬಸವಣ್ಣನವರು ತಮ್ಮ ಒಂದು ವಚನದಲ್ಲಿ :

ಭಕ್ತಿ ಇಲ್ಲದ ಬಡವ ನಾನಯ್ಯಾ
ದಾಸಯ್ಯನ ಮನೆಯಲ್ಲೂ ಬೇಡಿದೆ
ಚೆನ್ನಯ್ಯನ ಮನೆಯಲ್ಲೂ ಬೇಡಿದೆ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ
ಎಲ್ಲ ಪುರಾತನರು ನೆರೆದು ಭಕ್ತಿಯ ಭಿಕ್ಷೆಯನ್ನಿಕ್ಕಿದೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ

ಎಂಬ ಮಾತುಗಳು ಅರ್ಥವಾಗದೆ ಹೋದವೆ ?
ಹಿಂದೊಮ್ಮೆ ವಚನ ಸಾಹಿತ್ಯವನ್ನು ಹಾಗೂ ವಚನಕಾರರ ಗಟ್ಟಿ ನಿಲುವುಗಳನ್ನು ಸಂಪೂರ್ಣ ಅರಿಯದೆ ತಾವು ಹೀರೋ ಆಗಬೇಕು ಎಂಬ ಭ್ರಮೆಯಲ್ಲಿಯೋ ಏನೋ ‘ಬಸವಣ್ಣವರು ಹೊಳೆ ಹಾರಿ ಆತ್ಮ ಹತ್ಯೆ ಮಾಡಿಕೊಂಡರು’ ಎಂಬ ಬಾಲಿಷ ಮಾತುಗಳನ್ನು ಆಡುವ ಮೂಲಕ ಬಸವವಾದಿ ಲಿಂಗಣ್ಣ ಸತ್ಯಂಪೇಟೆ, ಬಸವಪ್ರಭು ಪಾಟೀಲ, ಡಾ.ಪಾಟೀಲ ಪುಟ್ಟಪ್ಪ ಮುಂತಾದವರಿಂದ ಹೆಟ್ಟಿಸಿಕೊಂಡರು.

ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕೊನೆಗೆ ಬಸವ ಕಲ್ಯಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ “ನಾನು ಹಾಗೆ ಹೇಳಿಯೇ ಇಲ್ಲ , ಪತ್ರಿಕೆಯವರು ತಪ್ಪಾಗಿ ಬರೆದಿದ್ದಾರೆ’’ ಎಂದು ತಿಪ್ಪೆ ಸಾರಿಸಿದರು. ಆದರೆ ಅಂದು ಕೂಡ ಚಿತ್ರದುರ್ಗದ ವಿರಕ್ತ ಮಠದಿಂದಲೆ ಆ ಪತ್ರಿಕೆಗೆ ಸೈಕ್ಲೋಸ್ಟೇಂಲ್ ಪ್ರತಿ ತಲುಪಿತ್ತು ಎಂಬುದು ನನ್ನ ಗಮನಕ್ಕೆ ಆ ಪತ್ರಿಕೆಯವರು ತಂದಿದ್ದರು.

ಈಗಲಾದರೂ ಚಿತ್ರದುರ್ಗದ ಶರಣರು ತಮ್ಮ ಪ್ರಚಾರಕ್ಕಾಗಿ ಅವುಡಾಸವುಡಾ ಹೇಳಿಕೆಗಳನ್ನು, ಬರಹಗಳನ್ನು ಬರೆಯುವುದು ಬಿಟ್ಟು ಸರಿಯಾಗಿ ಅಧ್ಯಯನ ಮಾಡಿ ಶರಣರ ಕುರಿತು ಬರೆಯಲಿ. ‘ಪಂಚಾಚಾರ್ಯರು ಬಸವಣ್ಣನರ ಬಹಿರಂಗ ದ್ರೋಹಿಗಳಾದರೆ ವಿರಕ್ತರು ಬಸವಣ್ಣನವರ ಅಂತರಂಗ ದ್ರೋಹಿಗಳು’ ಎಂಬ ಮಾತಿಗೆ ಮುರುಘಾ ಶರಣರು ಒಳಗಾಗದಿರಲಿ. ‘ಲಿಂಗಾಯತ ಧರ್ಮಕ್ಕೆ ಹೊರ ವೈರಿಗಳಿಗಿಂತಲೂ ಒಳಗಿರುವ ಶತೃಗಳೆ ಅಪಾಯಕಾರಿ’ ಎಂಬ ಮಾತನ್ನು ಹುಸಿಯಾಗಿಸಲಿ, ತಪ್ಪು ತಿಳುವಳಿಕೆಯಿಂದ ಬರೆದಿದ್ದರೆ ಕೂಡಲೆ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಮೂಲಕ ಸರಿಪಡಿಸಿಕೊಳ್ಳಲಿ. ಇಲ್ಲವಾದರೆ ಪ್ರಜ್ಞಾವಂತ ಲಿಂಗಾಯತ ಇಷ್ಟು ದಿನ ಸುಮ್ಮನೆ ಕುಳಿತಂತೆ ಕೈಕಟ್ಟಿ ಕೂಡಲಾರ. ಅವರು ಹೋದಲ್ಲಿ ಬಂದಲ್ಲಿ ಎಲ್ಲ ಕಡೆಯೂ ಪ್ರಶ್ನೆಗಳ ಸರಮಾಲೆಯನ್ನೆ ಹೊತ್ತುಕೊಂಡು ತಿರುಗಾಡಬೇಕಾಗುತ್ತದೆ. ತಾವು ಕುಳಿತ ಖುರ್ಚಿಯ ಘನತೆ ಗೌರವವನ್ನು ಕಾಪಾಡುವುದು ಅವರ ಕೈಯಲ್ಲಿಯೆ ಇದೆ, ಅಲ್ಲವೆ ?

೦ ವಿಶ್ವಾರಾಧ್ಯ ಸತ್ಯಂಪೇಟೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!