Breaking News
Home / featured / ನೀರಿಲ್ಲದೆ ಕಂಗಾಲಾದ ಧರ್ಮಸ್ಥಳ ಮಂಜುನಾಥ !

ನೀರಿಲ್ಲದೆ ಕಂಗಾಲಾದ ಧರ್ಮಸ್ಥಳ ಮಂಜುನಾಥ !

ಯಾದಗಿರಿ: ಬಹಳಷ್ಟು ಜನರಿಗೆ ವಿವೇಕ ಕಡಿಮೆ. ಹೀಗಾಗಿ ಅವರು ದೇವರನ್ನು ಹುಡುಕುತ್ತ ಎಲ್ಲಲ್ಲೋ ಅಲೆಯುತ್ತಾರೆ. ಕೆಲವರು ಗುಡಿಗಳಲ್ಲಿ ಹುಡುಕಿದರೆ, ಇನ್ನು ಕೆಲವರು ಮಸೀದಿ, ದರ್ಗಾಳಲ್ಲಿ ನೋಡುತ್ತಾರೆ. ಮಗದೊಂದಿಷ್ಟು ಜನ ಚರ್ಚ ಮುಂತಾದೆಡೆ ಹುಡುಕುತ್ತಾರೆ. ಆದರೆ ಯಾರಿಗೂ ದೇವರು ಸಿಕ್ಕಿಲ್ಲ. ಸಿಕ್ಕಿಲ್ಲವೆಂದು ಗಟ್ಟಿಯಾಗಿ ಈ ಮೇಲಿನ ಜನವರ್ಗದವರು ಯಾರೂ ಯಾರಿಗೆ ಹೇಳಿಲ್ಲ. ಏಕೆಂದರೆ ಅವರ ಬುದ್ದಿಗೆ, ಭಾವಕ್ಕೆ ಇತಿ ಮಿತಿ ಇದೆ. ಇಂಥವರು ಜೀವನ ಪೂರ್ತಿ ಹೀಗೇ ಅಂಡಲೆದಲೆದು ಒಂದು ದಿನ ಸತ್ತು ಹೋಗುತ್ತಾರೆ. ಅವರ ಪೀಳಿಗೆಯೂ ಸಹ ಇವರಂತೆ ಅನುಸರಿಸಿ ದೇವರನ್ನು ಕಾಣದೆ ಹೋಗುತ್ತಾರೆ.

ಶತ ಶತಮಾನಗಳಿಂದಲೂ ನಮ್ಮ ದೇಶದಲ್ಲಿ ಕಟ್ಟಲ್ಪಡುವ ಧಾರ್ಮಿಕ (?) ಕಟ್ಟಡಗಳು ಕಟ್ಟುತ್ತಲೇ ಹೊರಟಿದ್ದಾರೆ. ಮೂವ್ವತ್ತ್ಮೂರು ಕೋಟಿ ದೇವರಿದ್ದರು ಇನ್ನೂ ಹೊಸ ಹೊಸ ದೇವರು ಸಾಲುತ್ತಿಲ್ಲ ! ಹೊಸ ಹೊಸ ದೇವರುಗಳನ್ನು ಧಾರ್ಮಿಕ ವಿಜ್ಞಾನಿಗಳು (!) ಕಂಡು ಹಿಡಿಯುತ್ತಲೇ ಇದ್ದಾರೆ. ಗ್ರಾಹಕ(ಭಕ್ತ) ಮಾತ್ರ ಎಲ್ಲವುಗಳಿಗೂ ಮುಗಿಬಿದ್ದು ಹೋಗುತ್ತಿದ್ದಾನೆ. ಆಯಾ ಪುಣ್ಯ( ಉಳಿದವು ಪಾಪ ಕ್ಷೇತ್ರಗಳೆ ?) ಕ್ಷೇತ್ರಗಳಿಗೆ ಹೋಗಿ ಮುಕ್ತಿ ಪಡೆದೆವೆಂಬ ಭ್ರಾಂತಿಯಲ್ಲಿ ಜನ ದುಬೆ ಎಂದು ಹೋಗುತ್ತಿದ್ದಾರೆ. ಇದರಿಂದಾಗಿ ಮೊನ್ನೆ ಮೊನ್ನೆ ನಮ್ಮ ಕಣ್ಣೆದುರು ಹುಟ್ಟಿದ ದೇವಸ್ಥಾನಗಳಲ್ಲಿ ಭರ್ಜರಿ (ವ್ಯಾಪಾರ ?) ಜನ ಸೇರುತ್ತಿವೆ. ಈ ಭ್ರಾಂತಿ ಹೋಗುವುದು ಯಾವಾಗ ?

ತನುವ ತೋಂಟವ ಮಾಡಿ ಮನವ ಗುದ್ದಲಿ ಮಾಡಿ ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ
ಒಡೆದು ಸಂಸಾರದ ಹೆಂಟೆಯ
ಬಗಿದು ಬಿತ್ತಿದೆನಯ್ಯಾ ಬ್ರಹ್ಮಬೀಜವ. ಅಖಂಡಮಂಡಲವೆಂಬ ಬಾವಿ,
ಪವನವೆ ರಾಟಾಳ ಸುಷುಮ್ನನಾಳದಿಂದ
ಉದಕವ ತಿದ್ದಿ ಬಸವಗಳೈವರು ಹಸಗೆಡಿಸಿಹವೆಂದು ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ,
ಆವಾಗಳೂ ಈ ತೋಂಟದಲ್ಲಿ ಜಾಗರವಿದ್ದು
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

ಆಸೆಯೆಂಬ ಸಂಸಾರದ ಹೆಂಟೆಯ ಒಡೆಯದೆ ಭ್ರಮ್ಮ ಬೀಜ ಬಿತ್ತಲಾಗುವುದೆ ? ನಮ್ಮ ಮನದ ಮೂಲೆ ಮೂಲೆಯಲ್ಲಿ ಅಡಗಿರುವ ಭ್ರಾಂತಿಗಳ ತೊಲಗಿಸದೆ ನಿಜ ಮುಕ್ತಿ ಕಾಣಲು ಸಾಧ್ಯವೆ ? ಒಡಲೊಳು ವಂಚಿಸುತ್ತ ಧಾರ್ಮಿಕ ಕ್ಷೇತ್ರಗಳಿಗೆ ಸುತ್ತಿದರೆ ಏನಾದರೂ ಆಗುತ್ತದೆಯೆ ? ಆ ಕ್ಷೇತ್ರದ ದೇವರು ಏನಾದರು ಕೊಡಲು ಸಾಧ್ಯವೆ ? ಅಥವಾ ಕೊಡಬಲ್ಲ‌ನೆ ! ನಾವೆಲ್ಲ ಆ ದೇವನ ಮಕ್ಕಳು ಎಂಬ ಸಮಾನತೆಯ ಪಥದಲ್ಲಿ ನಡೆಯಬೇಕಿದೆ. ಪರಸ್ಪರ ಸೈರಣೆ, ಸಂಸ್ಕಾರಗಳಿಂದ ಬಾಳಬೇಕಿದೆ. ಆಗ ಮಾತ್ರ ದೇವರು ನಮಗೆ ನಮ್ಮೊಳಗೆ ಪ್ರಕಟಗೊಳ್ಳುತ್ತಾನೆ.

ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು, ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು, ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ,
ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ? ನಾಡೆಲ್ಲಕ್ಕೊರಿ ಪೂಜಿಸಿದಾತಗೊ?
ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.

ಯಾರೋ ಬೆಳೆದ ಹೂವಿನ ಗಿಡದ ಹೂವ ಕೊಯಿದು, ಯಾರೋ ಕಟ್ಟಿಸಿದ ಕೆರೆಯ ನೀರ ತಂದು ಪೂಜಿಸುವ ನಾವುಗಳು, ಆ ಲಾಭ ನಮಗೇ ಸಿಗಲಿ ಅಂದರೆ ಹೇಗೆ ? ಹೀಗಾಗಿ ಅಂಬಿಗರ ಚೌಡಯ್ಯ ಆ ಪೂಜೆಯ ಫಲ ಹೂವಿಗೋ ? ನೀರಿಗೋ ? ಅಥವಾ ಆ ದೇವರನ್ನು ಪೂಜಿಸುವ ಪೂಜಾರಿಗೋ ? ಎಂದು ಪ್ರಶ್ನಿಸುತ್ತಾರೆ. ಆದರೂ ಆ ದೇವರನ್ನು ಪೂಜಿಸುವ ಎತ್ತುಗಡೆಯಿಂದ ನಾವು ಹೊರಬರಲು ಸಾಧ್ಯವಾಗಿಲ್ಲ. ಯಾರೋ ಮಾಡಿದ್ದನ್ನು ಇನ್ನಾರಿಗೋ ಅರ್ಪಿಸಿ ನಾವು ಮಾಡಿದ್ದೇವೆ ಎಂಬುದೆ ದೊಡ್ಡ ಭ್ರಮೆ ಅಲ್ಲವೆ ? ಏಕೆಂದರೆ :

ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ.
ಸುಳಿದು ಬೀಸುವ ವಾಯು ನಿಮ್ಮ ದಾನ.
ನಿಮ್ಮ ದಾನವನುಂಡು
ಅನ್ಯರ ಹೊಗಳುವಕುನ್ನಿಗಳನೇನೆಂಬೆ,
ರಾಮನಾಥ.

ವಿಶ್ವವೆಲ್ಲವೂ ಅವನ ಸೃಷ್ಠಿ. ಎಲ್ಲವೂ ಅವನ ಎಂಜಲು. ಅವನದನ್ನು ಅವನಿಗೆ ಅರ್ಪಿಸಿ , ಪೂಜೆಯ ಮೂಲಕ ಬೇಡಿಕೊಳ್ಳುವ ಇರಾದೆ ದುರಾಶೆಯ ಮನುಷ್ಯನಿಗೆ ಇದೆ. ನಮ್ಮ ದುರಾಶೆಯ ಮೂಸೆಯಲ್ಲಿಯೇ ಮನುಷ್ಯ ನಿರ್ಮಿತ ಲಕ್ಷಾಂತರ ದೇವರುಗಳು ಸೃಷ್ಟಿಯಾಗಿವೆ. ಈ ದೇವರುಗಳ ನಿರ್ಮಾತೃ ಮುಲ್ಲಾ, ಪಾದ್ರಿ, ಪುರೋಹಿತ. ನಮಗೆ ಅಂಗೈಯಲ್ಲಿ ಮುಕ್ತಿ , ಸ್ವರ್ಗ ತೋರಿಸಿ ನಮ್ಮಿಂದ ಸುಲಿಗೆ ಮಾಡಿ ತಾನು ಮಾತ್ರ ಸರ್ಗದಲ್ಲಿ ಇದ್ದು ನಮ್ಮನ್ನು ನರಕದಲ್ಲಿ ಇಕ್ಕುವ ವ್ಯಕ್ತಿ ! ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡ ಶರಣರು ಸ್ಪಷ್ಟವಾಗಿ ಹೇಳಿಬಿಟ್ಟರು.

ದೇವರು ದೇವರು ಎಂಬಿರಿ ದೇವರಿಗೆ ಪ್ರಳಯವುಂಟೆ ? ದೇವರು ಪ್ರಳಯವಾದಡೆ ಜಗವು ಉಳಿಯಬಲ್ಲುದೆ ? ಎಲಾ ಮರುಳಗಳಿರಾ,
ಕಲ್ಲು ದೇವರೆಂಬಿರಿ, ಕಲ್ಲು ದೇವರಾದಡೆ ವಜ್ರಾಯುಧದಿಂದ ಪ್ರಳಯವಾಗದೆ ?
ಕಟ್ಟಿಗೆ ದೇವರೆಂಬಿರಿ, ಕಟ್ಟಿಗೆ ದೇವರೆಂದರೆ
ಅಗ್ನಿಯಿಂದ ಪ್ರಳಯವಾಗದೆ ?
ಮಣ್ಣು ದೇವರೆಂಬಿರಿ, ಮಣ್ಣು ದೇವರಾದಡೆ
ಜಲದಿಂದ ಪ್ರಳಯವಾಗದೆ ?
ನೀರು ದೇವರೆಂಬಿರಿ, ನೀರು ದೇವರಾದಡೆ
ಅಗ್ನಿಯಿಂದ ಅರತುಹೋಗದೆ ?
ಅಗ್ನಿ ದೇವರೆಂಬಿರಿ, ಅಗ್ನಿ ದೇವರಾದಡೆ
ಜಲದಿಂದ ಪ್ರಳಯವಾಗದೆ ?
ಇಂತೀ ದೇವರೆಂದು ನಂಬಿ ಪೂಜಿಸಿದ
ಜೀವಾತ್ಮರು ಇರುವೆ ಮೊದಲು ಆನೆ ಕಡೆ ಎಂಬತ್ನಾಲ್ಕುಲಕ್ಷ ಯೋನಿದ್ವಾರದಲ್ಲಿ ರಾಟಾಳ ತಿರುಗಿದಂತೆ ಜನನಮರಣಗಳಿಂದ
ಎಡೆಯಾಡುತಿಪ್ಪರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.

ಎಂಬ ಕಠೋರ ಮಾತುಗಳ ಮೂಲಕ ಮನುಷ್ಯನ ಅಜ್ಞಾನವನ್ನು ಬಡಿದೆಚ್ಚರಿಸಿದರು. ಆದರೂ ನಾವು ಮಾತ್ರ ಸುತ್ತುವುದನ್ನು ಬಿಟ್ಟಿಲ್ಲ.

ಎಲ್ಲವನ್ನೂ ಕೊಡುತ್ತಾನೆ ಎಂದು ನಂಬಿಸಲಾಗುವ ಧರ್ಮಸ್ಥಳದ ಮಂಜುನಾಥ ದೇವರು ತನ್ನನ್ನು ಹುಡುಕಿಕೊಂಡು ಬರುವ ಭಕ್ತರಿಗೆ ನೀರನ್ನೂ ನೀಡಲಾರದಷ್ಟು ಬಡವನಾದನೆ ? ಕುಡಿಯಲು ನೀರು ಸಹ ಪೂರೈಸಲಾಗದ ದೇವರು ದೇವರೆ ?

ಎಲ್ಲಿಗೆ ಬಂತು ನೋಡಿ, ನಮ್ಮ ದೇವರ ಸ್ಥಿತಿ. ಆತ್ಮಾವಲೋಕನದ ಮೂಲಕ ನಿಜ ದೇವರ ನಾವು ಅರಿಯಬೇಕಿದೆ. ಉದ್ವೇಗ, ಅಂಧಕಾರ, ಮೌಢ್ಯಗಳಿಗೆ ಖಂಡಿತ ನಿಜ ದೇವರ ಇರವು ಅರ್ಥವಾಗೋದಿಲ್ಲ.

ವಿಶ್ವಾರಾಧ್ಯ ಸತ್ಯಂಪೇಟೆ ಬಸವಮಾರ್ಗ ಪ್ರತಿಷ್ಠಾನ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!