Breaking News
Home / featured / ಲಿಂ. ತೋಂಟದ ಸಿಧ್ಧಲಿಂಗ ಜಗದ್ಗುರುಗಳ ಸ್ಮರಣೋತ್ಸವ ಹಾಗೂ ಅನುಭವ ಮಂಟಪ ಲೋಕಾರ್ಪಣೆ..

ಲಿಂ. ತೋಂಟದ ಸಿಧ್ಧಲಿಂಗ ಜಗದ್ಗುರುಗಳ ಸ್ಮರಣೋತ್ಸವ ಹಾಗೂ ಅನುಭವ ಮಂಟಪ ಲೋಕಾರ್ಪಣೆ..

ಲಿಂ. ತೋಂಟದ ಸಿಧ್ಧಲಿಂಗ ಜಗದ್ಗುರುಗಳ ಪ್ರಥಮ ಸ್ಮರಣೋತ್ಸವ ಹಾಗೂ ಅನುಭವ ಮಂಟಪ ಲೋಕಾರ್ಪಣೆ…

ದಿ: 09 ಅಕ್ಟೋಬರ್ 2019 ಗುರುವಾರ ಮು 10:30


ಗದಗ : 12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಏರಿದ ಶೂನ್ಯ ಸಿಂಹಾಸನವನ್ನು 300 ವರ್ಷಗಳ ನಂತರ ಎಡೆಯೂರಿನ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಏರಿದರು

ಕನ್ನಡಕ್ಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ಎನ್ನ ಆನಂದಜೋಗುಳದ ಹರಕೆಯಿದು ಮರೆಯದಿರು ಚಿನ್ನಮರೆತೆಯಾದರೆ ನೀನು ಮರೆತಂತೆ ನನ್ನ
ಎಂಬ ಕನ್ನಡ ತಾಯಿಯ ಜೋಗುಳದ ಹಾಡನ್ನು ಸಿ.ಮ. ಮಣ್ಣೂರು ಶಿಕ್ಷಕರಿಂದ ಕಿವಿಯೊಳಗೆ ಮಾತ್ರವಲ್ಲ ಎದೆಯೊಳಗೆ ಇಳಿಸಿಕೊಂಡು, ಕನ್ನಡದ ಜಗದ್ಗುರುವಾಗಿ ಬೆಳಗಿದ ಡಂಬಳ-ಗದಗ ತೋಂಟದಾರ್ಯ ಮಠದ ಜ.ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಈಗ ಕನ್ನಡ ನೆಲದಲ್ಲಿ ಐಕ್ಯರಾಗಿದ್ದಾರೆ.

ಶ್ರೀಗಳ ಮಾತೋಶ್ರೀ ಮೂಲತಃ ಮಹಾರಾಷ್ಟ್ರದವರು. ಆದರೆ ಅವರ ಸುಪುತ್ರ ಕನ್ನಡದ ಸ್ವಾಮಿಯಾಗಿ ಮೆರೆದುದು ಈ ನೆಲದ ಪುಣ್ಯ. ಪ್ರಾಥಮಿಕ ಶಾಲೆ ಶಿಕ್ಷಕರ ಕನ್ನಡ ಪಾಠಗಳಿಂದ ಪ್ರೇರಿತರಾಗಿದ್ದ ಬಾಲಕ ಸಿದ್ಧರಾಮ ಮುಂದೆ ಡಂಬಳ-ಗದಗ ತೋಂಟದಾರ್ಯ ಮಠದ ಪೀಠಾಧಿಪತಿಯಾಗಿ, ಗೋಕಾಕ ಚಳವಳಿ, ನಂಜುಡಪ್ಪ ವರದಿ ಅನುಷ್ಠಾನ, ಪೋಸ್ಕೋ ವಿರೋಧಿ ಹೋರಾಟ, ಕಳಸಾ-ಬಂಡೂರಿ/ಮಹದಾಯಿ ಹೋರಾಟ, ಕಪ್ಪತಗುಡ್ಡ ರಕ್ಷಣೆ ಜೊತೆಗೆ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ತೋಂಟದ ಶ್ರೀಗಳು ನಡೆಸಿದ ಹೋರಾಟ ಈಗ ಇತಿಹಾಸದ ಪುಟ ಸೇರಿವೆ.

12ನೇ ಶತಮಾನದಲ್ಲಿ ಅಲ್ಲಮಪ್ರಭುಗಳು ಏರಿದ ಶೂನ್ಯ ಸಿಂಹಾಸನವನ್ನು 300 ವರ್ಷಗಳ ನಂತರ ಎಡೆಯೂರಿನ ತೋಂಟದ ಸಿದ್ಧಲಿಂಗ ಶಿವಯೋಗಿಗಳು ಏರಿದರು. ಅಂಥ ಶೂನ್ಯ ಸಿಂಹಾಸನ ಪರಂಪರೆಯ ಡಂಬಳ-ಗದಗ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಯಾಗಿ ಜ.ಡಾ. ಸಿದ್ಧಲಿಂಗ ಸ್ವಾಮೀಜಿ, 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡರು. ಅಂದಿನಿಂದ ವೈಚಾರಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದ ಶ್ರೀಗಳು, ಕೋಮು ಸೌಹಾರ್ದ, ಮೂಢನಂಬಿಕೆ ವಿರುದ್ಧ ಹೋರಾಡುವ ಜೊತೆಗೆ ಕನ್ನಡ ನಾಡು, ನುಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ.

ಗೋಕಾಕ್‌ ಚಳವಳಿ

ಗೋಕಾಕ ವರದಿ ಜಾರಿಗೆ ಬರಲಿ ಎಂಬ ಘೋಷಣೆಯೊಂದಿಗೆ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಧಾರವಾಡದಲ್ಲಿ 1982 ಏಪ್ರಿಲ್‌ 4ರಂದು ಹೋರಾಟ ಆರಂಭಿಸಿತು. ಆದರೆ ತೋಂಟದ ಶ್ರೀಗಳು ಅದಕ್ಕೂ ಮುನ್ನವೇ (15.2.1982) ಗೋಕಾಕ ವರದಿ ಜಾರಿಗೆ ತರುವ ಸಲುವಾಗಿ ಹೋರಾಟಕ್ಕೆ ಸಿದ್ಧರಾಗಿ, ಕನ್ನಡಕ್ಕೆ ಅಗ್ರ ಪೂಜೆ ಎಂಬುದನ್ನು ಸಾಬೀತುಪಡಿಸಿ. ಜಾತಿ, ಮತ, ಪಂಥ ಬೇಧಗಳನ್ನು ಬದಿಗೊತ್ತಿ ಉಗ್ರ ಹೋರಾಟ ಪ್ರಾರಂಭಿಸಿ ಎಂದು ಕರೆ ಕೊಟ್ಟಿದ್ದರು. ಮುಂದೆ ಗೋಕಾಕ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೇ, 1982ರ ಜೂನ್‌ 28ರಂದು ಶಿವಾನುಭವದಲ್ಲಿ ಗೋಕಾಕ ಚಳವಳಿಯ ವಿಜಯೋತ್ಸವ ಆಚರಣೆಗೆ ತೋಂಟದ ಶ್ರೀಗಳು ಕಾರಣರಾದರು.

ಶಾಸ್ತ್ರೀಯ ಸ್ಥಾನಮಾನಕ್ಕೆ ಹೋರಾಟ

ಜಗತ್ತಿನ ಪ್ರಬುದ್ಧ ಭಾಷೆಗಳಲ್ಲಿ ಒಂದಾಗಿರುವ, 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು ಎಂದು ತೋಂಟದ ಶ್ರೀಗಳು ಹೋರಾಟ ನಡೆಸಿದ್ದರು. ಉತ್ತರ ಕರ್ನಾಟಕದ ಬಂಡಾಯದ ನೆಲ ನರಗುಂದದಲ್ಲಿ 2007 ಜನವರಿ 9 ರಂದು ನಾಡಿನ ಹಲವು ಮಠಾಧೀಶರೊಂದಿಗೆ ಪಾದಯಾತ್ರೆ ನಡೆಸಿ ಗಮನ ಸೆಳೆದಿದ್ದರು.ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಡಾ. ನಂಜುಂಡಪ್ಪ ವರದಿ ಅನುಷ್ಠಾನ ಒಂದೇ ದಾರಿ ಎಂದು ತೋಂಟದ ಶ್ರೀಗಳು ಪ್ರಬಲವಾಗಿ ಪ್ರತಿಪಾದಿಸಿದ್ದರು.

ಗುಂಡೂರಾವ್‌, ಪಟೇಲ್‌ರನ್ನೂ ಬಿಟ್ಟಿಲ್ಲ

ಗೋಕಾಕ ವರದಿ ಜಾರಿಗೆ ಸಂಬಂಧಿಸಿದಂತೆ ಮೀನಮೇಷ ಎಣಿಸುತ್ತಿದ್ದ ಅಂದಿನ ಮುಖ್ಯಮಂತ್ರಿ ಗುಂಡೂರಾವ್‌ ಅವರನ್ನು ತೋಂಟದ ಶ್ರೀಗಳು ಟೀಕಿಸಿದಂತೆ ಕನ್ನಡ ಅನುಷ್ಠಾನವನ್ನು ಗಂಭೀರವಾಗಿ ಪರಿಗಣಿಸದ ಜೆ.ಎಚ್‌. ಪಟೇಲ ಸರಕಾರವನ್ನೂ ಟೀಕಿಸಿದ್ದರು. 1997ರಂದು ಶ್ರೀಮಠದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಜೆ.ಎಚ್‌. ಪಟೇಲ ಕನ್ನಡ ಅನುಷ್ಠಾನ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗದೇ ಇರಲು ಸರಕಾರ ಕಾರಣವಲ್ಲ ಎಂದಿದ್ದರು. ಪಟೇಲರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿದ್ದ ಶ್ರೀಗಳು, ಕನ್ನಡ ಅನುಷ್ಠಾನದ ವಿಷಯದಲ್ಲಿ ಸರಕಾರ ಗಂಭೀರವಾಗಿ ವರ್ತಿಸುತ್ತಿಲ್ಲ ಎಂದು ತಿರುಗೇಟು ನೀಡಿದ್ದರು.

ಶಿಕ್ಷಣ ಪ್ರೀತಿ

ಶಿಕ್ಷ ಣ ಪಡೆಯುವದು ಕೇವಲ ಜ್ಞಾನಾರ್ಜನೆಗೆ ಮಾತ್ರವಾಗದೆ, ಅದು ಉದ್ಯೋಗ ದೊರಕಿಸಿಕೊಡಲು ಸಹಾಯವಾಗಬೇಕು ಎಂಬ ಉದ್ದೇಶದಿಂದ ಡಂಬಳದಲ್ಲಿ 1983 ರಲ್ಲಿ ವೃತ್ತಿ ತರಬೇತಿ ಕೇಂದ್ರ( ಐಟಿಐ) ತೆರೆದು ಗ್ರಾಮೀಣ ವಿದ್ಯಾರ್ಥಿಗಳು ಉದ್ಯೋಗಸ್ಥರಾಗಲು ಮುನ್ನುಡಿ ಬರೆದರು. ಹಾಗೆ ಹೈಸ್ಕೂಲ್‌, ಮತ್ತು ಗದಗ ಇತರ ಕಡೆಗೆ ವೈದ್ಯಕೀಯ ಎಂಜಿನಿಯರಿಂಗ್‌ ಕಾಲೇಜು, ಡಿಪೊ್ಲೕಮಾ, ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿವರೆಗೂ ಶಿಕ್ಷ ಣ ದಾಸೋಹ ನಿರಂತರ ನಡೆದಿದೆ.

ಡಂಬಳಕ್ಕೆ ಪಾದಯಾತ್ರೆ

ಮಠಕ್ಕೆ ಬಂದ ಶ್ರೀಗಳು 1971 ರಿಂದ1981 ರವರೆಗೆ 10 ವರ್ಷಗಳ ಕಾಲ ಗದುಗಿನ ತೋಂಟದಾರ್ಯ ಮಠದಿಂದ ಡಂಬಳದವರೆಗೆ ಪ್ರತಿ ಅಮಾವಾಸ್ಯೆಗೆ ಪಾದಯಾತ್ರೆ ಕೈಗೊಂಡರು. ಇದು ವೈಚಾರಿಕತೆ ಹಿನ್ನೆಲೆಯಲ್ಲಿ ಭಕ್ತರ ಮೇಲೆ ಪರಿಣಾಮ ಬೀರಿತು. ಶ್ರೀಗಳ ಪಾದಯಾತ್ರೆ ಬಗ್ಗೆ ಕುತೂಹಲ ತಾಳಿದ ಅನೇಕ ಭಕ್ತರು ಕೂಡಾ ಹಿಂದಿನ ರಾತ್ರಿ ಗದಗ ಮಠದಲ್ಲಿ ವಾಸ್ತವ್ಯ ಮಾಡಿ ನಂತರ ಅವರ ಜತೆಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಶ್ರೀಗಳು ಡಂಬಳ ಪ್ರವೇಶ ಮಾಡುತ್ತಿದ್ದಂತೆ ಭಕ್ತರು ಅದರಲ್ಲಿಯೂ ಬಂಡಿ ಮನೆತನದ ಡೊಳ್ಳು ಬಾರಿಸುವ ಕಲಾವಿದರು, ಇತರ ಭಕ್ತರು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದರು. ಇದರಿಂದ ಶ್ರೀಗಳು ಭಕ್ತರೊಂದಿಗೆ ಭಾವನಾತ್ಮಕವಾಗಿ ಬೆರೆಯುವಂತಾಯಿತು. ಗದಗನ ಕೌತಾಳ ವೀರಪ್ಪ ಸೇರಿದಂತೆ ಇತರರು ಕಾಯಂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು.

ಚಿಂತಕರ ಸ್ನೇಹಜೀವಿ

ಡಂಬಳದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ಡೊಳ್ಳಿನ ಹಾಡುಗಳಿಗೆ ವಿಶೇಷ ಪ್ರಾಧಾನ್ಯತೆ ಕೊಡುವ ಸ್ವಾಮಿಗಳು ಕುಸ್ತಿ ಪಟುಗಳು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರ ಸ್ನೇಹ ಜೀವಿಗಳಾಗಿದ್ದರು. ಆಡು ಮುಟ್ಟದ ಗಿಡ ಇಲ್ಲ ಅವರು ಅರಿಯದ ವಿಷಯವೇ ಇರಲಿಲ್ಲ, ಅದನ್ನೆ ಭಕ್ತರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರಕಾರಕ್ಕೆ ನೇರವಾಗಿ ತಮ್ಮ ಉಕ್ಕಿನ ಕಂಠದಿಂದ ಚಾಟಿ ಬೀಸುತ್ತಿದ್ದರು.

ತಿನ್ನುವ ಅನ್ನ ನೆಲಕ್ಕೆ ಬೇಡ

ಡಂಬಳ ಮೂಲ ಪರಂಪರೆಯಂತೆ ಪ್ರತಿ ವರ್ಷ ಫೆಬ್ರುವರಿ ತಿಂಗಳಲ್ಲಿ ಜರುಗುವ ತೋಂಟದಾರ್ಯ ಜಾತ್ರೆಯಲ್ಲಿ ರಥ ಸಾಗುವ ಮುನ್ನ ತೇರಿನ ನಾಲ್ಕು ಗಾಲಿಗೆ ಅನ್ನ ಇಟ್ಟು ನಂತರ ತೇರು ಸಾಗುತ್ತಿತ್ತು, 1970 ರಲ್ಲಿ ಮಠಕ್ಕೆ ಪಟ್ಟಾಧಿಕಾರಿಯಾಗಿ ಬಂದ ವರ್ಷವೇ ಗಾಲಿಗೆ ಅನ್ನ ಹಾಕುವುದನ್ನು ಬಿಡಿಸಿದರು. ನೂರಾರು ಜನರು ತಿನ್ನುವ ಅನ್ನ ನೆಲಕ್ಕೆ ಹಾಕಿ ತುಳಿದುಕೊಂಡು ರಥೋತ್ಸವ ಮಾಡಿದರೆ ಏನು ಸಾರ್ಥಕ ಎಂಬುದನ್ನು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು. ಅದನ್ನು ಭಕ್ತರು ಒಪ್ಪಿ ಗಾಲಿಗೆ ಅನ್ನ ಇಡುವ ಪದ್ಧತಿ ಬಿಡಲಾಯಿತು.

ಅಡ್ಡಪಲ್ಲಕ್ಕಿ ನಿರಾಕರಣೆ

ಗ್ರಾಮದೊಳಗೆ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಸ್ವಾಮಿಗಳು ಕುಳಿತುಕೊಳ್ಳಲು ಒಪ್ಪದೆ ಭಕ್ತರ ಮಧ್ಯೆ ನಡೆದುಕೊಂಡು ಬರಲು ಇಚ್ಛೆ ಪಟ್ಟರು, ಭಕ್ತರು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದರೂ ಮನುಷ್ಯರ ಮೇಲೆ ಮನುಷ್ಯ ಕುಳಿತುಕೊಳ್ಳುವದು ಮಹಾಪರಾಧ ಎಂದು ಅದನ್ನು ನಿರಾಕರಿಸಿದರು.

ಜಾತ್ಯತೀತ ನಿಲುವು

ಹಳೆಯ ಮೌಢ್ಯ, ಮತ್ತು ಜಾತಿಯ ಜಾಡ್ಯವನ್ನು ಬಿಡಿಸಿ ಮಠದಲ್ಲಿ ಹರಿಜನ, ಹಿಂದುಳಿದ ಎಲ್ಲ ವರ್ಗದ ಭಕ್ತರಿಗೆ ಪ್ರವೇಶ ಕೊಡಿಸುವ ಮೂಲಕ ಜಾತ್ಯತೀತತೆ ಮೆರೆದರು.

ಕಾಯಕಯೋಗಿ, ಕೃಷಿಕ ಸ್ವಾಮೀಜಿ

ಡಾ.ಸಿದ್ಧ್ದಲಿಂಗ ಸ್ವಾಮಿಗಳು ಮಠಕ್ಕೆ ಸ್ವಾಮಿಗಳಾಗಿ ಬಂದಾಗ ಮಠದ ಪರಿಸ್ಥಿತಿ ಅಷ್ಟು ಸರಿಯಾಗಿರಲಿಲ್ಲ, ಮಠದಲ್ಲಿ ಏನೂ ಇರಲಿಲ್ಲ, ಜಮೀನುಗಳು ಕೂಡಾ ಪಾಳು ಬಿದ್ದು ಬೆಳೆಯುತ್ತಿರಲಿಲ್ಲ. ಧೃತಿಗೆಡದ ಸ್ವಾಮಿಗಳು ಸ್ವತಃ ಮಡಿ ಹೊಲ, ಮಾನೆ ಹೊಲ ಇತರ ಹೊಲಗಳಲ್ಲಿ ಕೃಷಿಯಲ್ಲಿ ತೊಡಗಿದರು. ಮಠದ ಜಿ.ವಿ.ಹಿರೇಮಠ ಮತ್ತು ಡಂಬಳ ಭಕ್ತರೊಂದಿಗೆ ಮಠದ ಬೆಳವಣಿಗೆ ಕುರಿತು ಚರ್ಚಿಸಿದರು. ಬರಗಾಲದ ಬವಣೆಯಲ್ಲಿ ಕೃಷಿ ಮಾಡಲು ಆಗುವುದಿಲ್ಲ ಎಂದು ಭಕ್ತರು ಹೇಳಿದರೂ ಇರುವ ಜಮೀನಿನನ್ನು ದುರಸ್ತಿಗೊಳಿಸಲು ಮುಂದಾದರು. ಬರುವ ಕಜ್ಜಾಯದಿಂದ ಮಠದಲ್ಲಿರುವವರು ಊಟ ಮಾಡುತ್ತ ಸ್ವತಃ ಸ್ವಾಮಿಗಳು ಮಡಿ ಹೊಲದಲ್ಲಿ ಕೊಳವೆಬಾವಿ ತೋಡಿಸಿದರು. ನಂತರ ಗ್ರಾಮದಲ್ಲಿರುವ ಹಾಳು ಮಣ್ಣು ಹೊಲಕ್ಕೆ ಹೇರಿಸಿ ದ್ರಾಕ್ಷಿ, ದಾಳಿಂಬೆ ಬೆಳೆಯಲು ಮುಂದಾದರು. ಕೃಷಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದಂತೆ ಮಠದ ಜೀರ್ಣೋದ್ಧಾರ ಮಾಡಿದರು.

ಮಠದ ಆವರಣದಲ್ಲಿದ್ದ ಗೋಬರ್‌ ಗ್ಯಾಸ್‌ ಅನಿಲ ಘಟಕದ ಸೆಗಣಿಯನ್ನು ಸ್ವತಃ ಸ್ವಚ್ಛಗೊಳಿಸುತ್ತಿದ್ದರು.

ಪೋಸ್ಕೋ ಓಡಿಸಿದ ಸ್ವಾಮೀಜಿ

ಕಪ್ಪತಗುಡ್ಡಕ್ಕೆ ಧಕ್ಕೆ ತರುವ ಹಳ್ಳಿಗುಡಿ ಬಳಿ ಸ್ಥಾಪಿಸಲು ಉದ್ದೇಶಿಸಿದ ಬೃಹತಾಕಾರದ ವಿದೇಶಿ ಕಂಪನಿ ಪೋಸ್ಕೋ ಉಕ್ಕಿನ ಕಾರ್ಖಾನೆ ಇಲ್ಲಿಂದ ಕಾಲ್ಕಿಳಲು ಜ.ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳೇ ಮೊದಲು ಧ್ವನಿ ಎತ್ತಿದ್ದು. 2008ರಲ್ಲಿ ವಿಜಯ ಕರ್ನಾಟಕದಲ್ಲಿ ಪ್ರಥಮ ಸಂದರ್ಶನ ನೀಡಿದ ಸ್ವಾಮಿಗಳು ಯಾವುದೇ ಕಾರಣಕ್ಕೆ ಪೋಸ್ಕೋ ಸ್ಥಾಪನೆಯಾಗಿ ಇಲ್ಲಿಯ ರೈತರು ಬೀದಿ ಪಾಲಾಗುವುದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಹಾಗೆ ಈ ಸಂದರ್ಭದಲ್ಲಿ ಕೆಲವರು ಪೋಸ್ಕೋ ಪರವಾಗಿ ಹೋರಾಟ ನಡೆಯಿಸಿ ಸ್ವಾಮಿಗಳ ವಿರುದ್ಧವೂ ಪ್ರತಿಭಟಿಸಿದರು. ಅದರ ಬಗ್ಗೆ ಗಮನ ಕೊಡದೆ ಮುಂಡರಗಿ ತಾಲೂಕಿನ ರೈತರ ಮತ್ತು ಜನರ ಸ್ಥಿತಿ ಮತ್ತೊಂದು ಸೊಂಡೂರು ಆಗಬಾರದು ಎಂದಿದ್ದರು. ಹಾಗೆ ಕಪ್ಪತಗುಡ್ಡ ನಾಶವಾದರೆ ಈ ಭಾಗದ ಜನರ ಬದುಕೇ ನಾಶವಾದಂತೆ ಎಂದು ಕಪ್ಪತಗುಡ್ಡ ಸಂರಕ್ಷ ಣೆಗೆ ಒತ್ತಾಯಿಸಿ ಗದುಗಿನಲ್ಲಿ ನಡೆಸಿದ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸರಕಾರ ಮಣಿಯುವಂತೆ ಮಾಡಿದ್ದರು.

ಪರಿಸರ ಪ್ರೇಮಿ

ಡಂಬಳ, ಡೋಣಿ, ತಾಂಡಾ, ಅತ್ತಿಕಟ್ಟಿ, ದಿಂಡೂರ, ಕಡಕೋಳ ಇತರ ಕಪ್ಪತಗುಡ್ಡ ವ್ಯಾಪ್ತಿಯಲ್ಲಿ ಕಪ್ಪತಗುಡ್ಡ ಅಳಿವು ಉಳಿವು ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಪರಿಸರ ವೇದಿಕೆ ಸಹಯೋಗದಲ್ಲಿ ಆಯೋಜಿಸಿ ಜಾಗೃತಗೊಳಿಸಿದರು. ಹಾಗೆ ಪರಿಸರ ಕ್ಷೇತ್ರದಲ್ಲಿ ಸೇವೆ ಸಲ್ಲಿಸದವರಿಗೆ ಪ್ರತಿ ವರ್ಷ ಪ್ರಶಸ್ತಿ ಕೂಡಾ ಮಠದ ವತಿಯಿಂದ ಕೊಡುವ ಯೋಜನೆ ಹಾಕಿಕೊಂಡಿದ್ದರು.

ತೋಂಟದಾರ್ಯ ಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುವುದನ್ನು ನಿರಾಕರಿಸಿದರು. ಪಲ್ಲಕ್ಕಿ ಹೊರುವವರು ಮನುಷ್ಯರೇ ಎಂದು ಪ್ರೀತಿ ತೋರಿ ಎಲ್ಲರೂ ಸಮಾನರು, ಜಾತಿ ಹೋಗಬೇಕು ಎಂಬುದನ್ನು ಪದೇ ಪದೇ ಹೇಳುತ್ತಿದ್ದರು. ತಾಯಿ ಕರುಣೆಯ ಸ್ವಾಮಿಗಳು ಇಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ, ಸ್ವಾಮಿಗಳು ನಮ್ಮನ್ನು ಅನಾಥರನ್ನಾಗಿ ಮಾಡಿಹೋದರು-ಮರಿತಮಪ್ಪ ಆದಮ್ಮನವರ, ಡಂಬಳ

ಡಂಬಳದಲ್ಲಿ ಪ್ರತಿ ವರ್ಷ ಮಘಾ ನಕ್ಷ ತರದಲ್ಲಿ ಜರುಗುವ ತೋಂಟದಾರ್ಯ ಜಾತ್ರಾ ಮಹೋತ್ಸವದಲ್ಲಿ ಜ.ಡಾ.ತೋಂಟದ ಸಿದ್ದಲಿಂಗ ಸ್ವಾಮಿಗಳು ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡುತ್ತಿದ್ದರು.

ಡಂಬಳ ತೋಂಟದಾರ್ಯ ಮಠಕ್ಕೆ ಪಟ್ಟಾಧಿಕಾರಿಯಾಗಿ ಬಂದಾಗ ಮೊದಲಿನ ಅಡ್ಡ ಪಲ್ಲಕ್ಕಿಯಲ್ಲಿ ಕುಳಿತು ಮೆರವಣಿಗೆ ಮಾಡಿಕೊಳ್ಳುವದನ್ನು ತ್ಯಜಿಸಿ ಪಲ್ಲಕ್ಕಿಯಲ್ಲಿ ವಚನ ಕಟ್ಟು ಇರಿಸಿ ಪಾದಯಾತ್ರೆಯಲ್ಲಿ ಹೋಗುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಜ.ಡಾ.ತೋಂಟದ ಸಿದ್ಧಲಿಂಗ ಸ್ವಾಮಿಗಳು.

ಪ್ರತಿಯೊಬ್ಬರ ಹೆಸರು ಹೇಳಿ ಕರೆಯುತ್ತಿದ್ದ ತಾಯಿ ಹೃದಯ ಹೊಂದಿದ ಸ್ವಾಮೀಜಿಯನ್ನು ಕಳೆದುಕೊಂಡ ನಾವು ಯಜಮಾನ ಇಲ್ಲದ ಮನೆಯಂತಾಗಿದ್ದೇವೆ. ಅವರ ನೇರ ಮತ್ತು ನಿಷ್ಠುರ ನುಡಿಗಳು ನಮ್ಮನ್ನು ಸದಾ ಜಾಗೃತಿ ಇಡುವಂತೆ ಮಾಡಿವೆ-ಗೋಣಿಬಸಪ್ಪ ಕೊರ್ಲಹಳ್ಳಿ, ಅಧ್ಯಕ್ಷ , ತೋಂಟದಾರ್ಯ ಪರಿಸರ ಸಂರಕ್ಷಣೆ ವೇದಿಕೆ ಡಂಬಳ

ಎಷ್ಟೇ ಖರ್ಚಾದರೂ ಮಠಕ್ಕೆ ಬರುವ ಭಕ್ತರ ಕಾಳಜಿ ಮಾಡಬೇಕು ಎಂದು ಸ್ವಾಮೀಜಿ ಪದೇ ಪದೆ ಹೇಳುತ್ತಿದ್ದರು. ಪ್ರತಿ ಅಮಾವಾಸ್ಯೆಗೆ ಡಂಬಳಕ್ಕೆ ಬಂದಾಗ ನಾನು ಊರಲ್ಲಿ ಇರಲೇಬೇಕು. ಒಡಹುಟ್ಟಿದ ತಮ್ಮನಿಗಿಂತ ಹೆಚ್ಚಾಗಿ ನನ್ನನ್ನು ಕಾಣುತ್ತಿದ್ದರು. ಅವರಿಲ್ಲದ ಮಠ ನಾವು ನೆನಸಿಕೊಂಡರೆ ಅಳು ತಡೆಯಲಾಗುವುದಿಲ್ಲ-ಜಿ.ವಿ. ಹಿರೇಮಠ, ವ್ಯವಸ್ಥಾಪಕರು, ತೋಂಟದಾರ್ಯ ಮಠ, ಡಂಬಳ
ತೋಂಟದಾರ್ಯ ಮಠ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಜಗದ್ಗುರು ಗೋಕಾಕ್‌ ಚಳುವಳಿ

ಮೌಢ್ಯದ ಜಾಡ್ಯ ಬಿಡಿಸಿದ ಡಾ. ತೋಂಟದ ಶ್ರೀ

ಮುಂಡರಗಿ: ಡಂಬಳ ತೋಂಟದಾರ್ಯ ಮಠಕ್ಕೆ ಸ್ವಾಮಿಗಳಾಗಿ ಬಂದ ಜ.ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ ಜನಸಾಮಾನ್ಯರ ಸ್ವಾಮಿಗಳಾಗಿ ಬೆರೆತರು. ಶರಣ ಮತ್ತು ಕಾಯಕ ಸಂಸ್ಕೃತಿ ತಳಹದಿ ಮೇಲೆ ಇತರರಿಗೆ ಮೇಲ್ಪಂಕ್ತಿಯಾಗಿದ್ದರು. ಪಲ್ಲಕ್ಕಿಯಲ್ಲಿ ಕುಳಿತು ಕೇವಲ ಬೋಧನೆಗೆ, ಆಶೀರ್ವಚನಕ್ಕೆ ಸೀಮಿತಗೊಳ್ಳದೆ ಡಂಬಳದಲ್ಲಿ ಪ್ರತಿ ಅಮಾಸ್ಯೆಗೆ ಶಿವಾನುಭವ ಮಾಡುವ ಮೂಲಕ ಭಕ್ತರು ಮಠಕ್ಕೆ ಬರುವಂತೆ ಪ್ರೇರೇಪಿಸಿದರು.
ಆರಂಭದಲ್ಲಿ ಚಿಕ್ಕ ವಯಸ್ಸಿನ ಸ್ವಾಮಿಗಳು ಏನು ಮಾಡುತ್ತಾರೆ ಎಂದು ಭಕ್ತರು ಅಂದುಕೊಂಡಿದ್ದರು. ಜನಸಾಮಾನ್ಯರ ಆಡುಭಾಷೆಯ ಅವರ ನೇರ ಭಾಷಣ ಭಕ್ತರ ಮೇಲೆ ಪರಿಣಾಮ ಬೀರಿತು. ಹೀಗಾಗಿ ಅವರು ಜನಸಾಮಾನ್ಯರ ಸ್ವಾಮೀಜಿ ಎನ್ನಿಸಿಕೊಂಡರು. ಈಗ ಎರಡನೇ ಬಸವಣ್ಣ ಎಂದು ಕರೆಯಿಸಿಕೊಂಡ ಸ್ವಾಮೀಜಿ ಇಲ್ಲ ಎಂದರೆ ನಂಬಲಸಾಧ್ಯ.

ವಿಜಯಪುರದ ಮೂಲ ಸಿಂದಗಿಯ ಗಟ್ಟಿತನದ ಮಾತುಗಳಲ್ಲಿ ಭಕ್ತರಿಗೆ ನೇರವಾಗಿ ತಲುಪುವಂತೆ ಮೌಢ್ಯ ಮತ್ತು ಕಂದಾಚಾರಗಳಿಂದ ಆಗುವ ತೊಂದರೆ ಮತ್ತು ಶೋಷಿತರನ್ನು ಮೇಲೆತ್ತುವ ಬಗ್ಗೆ ಕಾಳಜಿ ವಹಿಸಿದಂತೆ ಭಕ್ತರು ಶ್ರೀಗಳಿಗೆ ಹತ್ತಿರವಾದರು.

ಡಂಬಳದಿಂದ ಮೂರು ಕಿ.ಮೀ ದೂರ ಇರುವ ಮಡಿ ಹೊಲಕ್ಕೆ ಶ್ರೀಗಳು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರು. ನಂತರ ಮಠದ ಚಕ್ಕಡಿಯಲ್ಲಿ ಭಕ್ತರನ್ನು ದಾರಿಯುದ್ದಕ್ಕೂ ಮಾತನಾಡಿಸುತ್ತ ಹೋಗಿ ನಂತರ ಟ್ರ್ಯಾಕ್ಟರ್‌ನಲ್ಲಿ ಹಾಗೆ ಮಠದ ಜೀಪಿನಲ್ಲಿ ಹೀಗೆ ಸಾಮಾನ್ಯ ವ್ಯಕ್ತಿಯಾಗಿ ಇಂದು ದೇಶ ಕಂಡ ಅಪರೂಪದ ಪ್ರಗತಿಪರ ಸ್ವಾಮಿಗಳಾದರು.

ಜನರಲ್ಲಿ ಕಾಯಕ ಪ್ರೀತಿ ಹೆಚ್ಚಿಸಲು ಜಾತ್ರೆ ವೇಳೆಯಲ್ಲಿ ಹೈನುಗಾರಿಕೆ, ಹಗ್ಗ ಹೊಸೆಯುವ, ನೇಗಿಲು ಹೊಡೆಯುವ, ರಾಸುಗಳ ಸ್ಪರ್ಧೆ, ಬೆಳೆ ಕ್ಷೇತ್ರೋತ್ಸವ, ವಿವಿಧ ತಳಿಗಳ ಪರಿಚಯ ಜತೆಗೆ ಎತ್ತು ಮತ್ತು ಗೋವುಗಳ ರಕ್ಷ ಣೆ ಮಾಡಿದರು. ಮಠಕ್ಕೆ ಬರುವ ಬಡ ಕುಟುಂಬಗಳಿಗೆ ಜೀವನ ನಡೆಸಲು ಉಚಿತ ಆಕಳುಗಳನ್ನು ಕೊಟ್ಟಿದ್ದಾರೆ.

ಹೊಸ ಪರಂಪರಗೆ ನಾಂದಿ:

ಜಾತ್ರೆ ಎಂದರೆ ಮೋಜು ಮಜಲು ಮಾಡುವದಲ್ಲ, ಉತ್ತತ್ತಿ ಬಾಳೆ ಹಣ್ಣು ಎಸೆಯುವದು ಅಲ್ಲ ಅದೊಂದು ಜನರ ಭಾವೈಕ್ಯತೆ ಬೆಸೆಯುವಂತಾಗಬೇಕು, ಎಲ್ಲ ಜಾತಿ ವರ್ಗದವರು ಒಟ್ಟಾಗಬೇಕು ಎಂದು ಪ್ರತಿ ವರ್ಷ ಆಚರಿಸುವ ಜಾತ್ರಾ ಮಹೋತ್ಸವಕ್ಕೆ ಎಲ್ಲ ಸಮುದಾಯದವರನ್ನು ಒಳಗೊಂಡ ಜಾತ್ರಾ ಸಮಿತಿ ಮಾಡಿ ಪ್ರತಿ ವರ್ಷ ಒಂದೊಂದು ಸಮುದಾಯದವರನ್ನು ಅಧ್ಯಕ್ಷ ರನ್ನಾಗಿ ಆ ಮೂಲಕ ಸಮಿತಿ ಸದಸ್ಯರು ಕೂಡಿಕೊಂಡು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಭಕ್ತರೇ ನಿರ್ವಹಿಸುವ ಜಾತ್ರೆಯಾಗಬೇಕು ಎಂಬ ನಿರ್ಧಾರದಿಂದ ಪ್ರತಿ ವರ್ಷ ಜಾತ್ರೆ ನಿಮಿತ್ತ ಎಲ್ಲರೂ ಕೋಮುಸೌಹಾರ್ಧತೆಯಿಂದ ಇರಲು ಜಾತ್ರೆ ನೆಪದಲ್ಲಿ ಎಲ್ಲರನ್ನೂ ಕೂಡಿಸುವ ಹೊಸ ಪರಂಪರೆಗೆ ನಾಂದಿ ಹಾಡಿದ ಸ್ವಾಮಿಗಳೆಂದರೆ ಸಿದ್ದಲಿಂಗ ಸ್ವಾಮಿಗಳು ಮಾತ್ರ. ಡಂಬಳ ಸೇರಿದಂತೆ ಮುಂಡರಗಿ, ಡೋಣಿ, ಅತ್ತಿಕಟ್ಟಿ, ದಿಂಡೂರ, ಮೇವುಂಡಿ, ಪೇಠಾಲೂರು, ಜಂತ್ಲಿಶಿರೂರ, ರಾಮೇನಹಳ್ಳಿ, ಯಕಲಾಸಪೂರ, ಹೈತಾಪೂರ, ಕದಾಂಪೂರ, ನಾರಾಯಣಪೂರ, ಹೆಸರೂರು, ಗದಗ ಇತರ ಗ್ರಾಮಗಳಲ್ಲಿ ದೇಣಿಗೆ ಸಂಗ್ರಹಿಸಿ ಅದೇ ಹಣದಿಂದ ಭಕ್ತರು ಜಾತ್ರೆ ನೆರವೇರಿಸುವಂತೆ ಪ್ರೇರೇಪಿಸಿದ ಶ್ರೀಗಳು ಜಾತ್ರೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸುವ ಪರಿಪಾಠ ಹೊಂದಲಾಗಿತ್ತು. ಜಾತ್ರೆ ಹೊಸ ಸ್ವರೂಪ ಪಡೆದು ಎಲ್ಲ ಜಾತಿಯವರು ಒಟ್ಟಾಗಿ ಕುಳಿತುಕೊಂಡು ಊಟ ಮಾಡುವ ರೊಟ್ಟಿ ಜಾತ್ರೆ ವಿಶೇಷ ಮಹತ್ವ ಪಡೆದು ರಾಜ್ಯಾದ್ಯಂತ ರೊಟ್ಟಿ ಜಾತ್ರೆಗೆ ಆಗಮಿಸುವಂತಾಯಿತು. ಹೀಗೆ ಶ್ರೀಗಳು ಹೊಸ ಪರಿಕಲ್ಪನೆ ಮತ್ತು ನೈಜತೆ ಮೈಗೂಡಿಸಿಕೊಂಡು ಸೋಹಂ ಎಂದೆನಿಸದೆ ದಾಸೋಹ ಎಂದೆನಿಸಯ್ಯ ಎಂಬ ಶರಣರ ಉಕ್ತಿಯಂತೆ ಜ್ಞಾನದಾಸೋಹದ ಜತೆಗೆ ಪುಸ್ತಕ ದಾಸೋಹ ಕನ್ನಡ ಉಳಿವಿಗಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸುವ ಹೋರಾಟ ರೂಪಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.

ದಲಿತರು, ಹಿಂದುಳಿದ ಅದರಲ್ಲಿಯೂ ಲಂಬಾಣಿ ಸಮುದಾಯದವರ ಮೇಲೆ ವಿಶೇಷ ಪ್ರೀತಿ ಮತ್ತು ಕಾಳಜಿ ಹೊಂದಿದ ಕಾರಣ ದಿಂಡೂರ ಭಾಗದ ಅನೇಕ ಬಡ ಲಂಬಾಣಿ ಕುಟುಂಬದ ಮಕ್ಕಳನ್ನು ದತ್ತು ತೆಗೆದುಕೊಂಡು ಶಾಲೆ ಕಾಲೇಜು ಓದಿಸಿ ಇಂದು ಅವರು ದೊಡ್ಡ ಹುದ್ದೆಯಲ್ಲಿದ್ದಾರೆ. ಮಠದ ವತಿಯಿಂದ ದೇವದಾಸಿಯರಿಗೆ ಮದುವೆ ಮಾಡಿಸಿ ಕ್ರಾಂತಿ ಮಾಡಿದ ಶ್ರೀಗಳು ಆರಂಭದಲ್ಲಿ ಭಕ್ತರ ಮನೆಗೆ ಜೋಳಿಗೆ ಹಿಡಿದುಕೊಂಡು ಬಿಕ್ಷೆ ಬೇಡುವ ಬದಲು ಮಠದ ಜಮೀನುಗಳಲ್ಲಿ ಸ್ವತ: ದುಡಿದು, ಭಕ್ತರೊಂದಿಗೆ ಬೆರೆತು ಸ್ವತ: ಭಕ್ತರಿಗೆ ಉಣಬಡಿಸುತ್ತ ಭಕ್ತರು, ಸ್ವಾಮಿಗಳ ನಡುವೆ ಭಿನ್ನ ಸಲ್ಲದು ಎಂಬ ಭಾವ ಹೊಂದಿದ ಕಾರಣ ಸ್ವಾಮಿಗಳು ಬಹುಬೇಕ ಭಕ್ತರ ಮನದಲ್ಲಿ ಬೇರೂರಿದರು. ಹೀಗಾಗಿ ಡಂಬಳ ಭಕ್ತರ ಬಗ್ಗೆ ಕೆಲವು ಬಾರಿ ಸಿಟ್ಟಿನಿಂದ ಬುದ್ದಿ ಮಾತು ಹೇಳಿದರೂ ಅವರ ಬಗ್ಗೆ ವಿಶೇಷ ಅಕ್ಕರೆ ಇತ್ತು.

ಹಳೆ ಗೊಡವೆಯಂತಿದ್ದ ಮಠವನ್ನು ಆಧುನಕಿರಣಗೊಳಿಸಿ, ವಿಶಾಲವಾದ ತೋಂಟದಾರ್ಯ ಕಲಾಭವನ ನಿರ್ಮಾಣಗೊಂಡು ವಿವಾಹ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅನುಕೂಲವಾಗುವ ಭವನ ನಿರ್ಮಾಣವಾಗಿದೆ.

ಕೃಪೆ: fb_messenger
🙏

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!