Breaking News
Home / featured / ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯ ಮರುಗು ಹೆಚ್ಚಿಸಿದ ಕಲಾಮೇಳ, ಸ್ತಬ್ಧಚಿತ್ರ ಪ್ರದರ್ಶನ, ಶರಣರ ಮೇಲೆ ಆಗಸದಿಂದ ಪುಷ್ಪವೃಷ್ಟಿ

ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯ ಮರುಗು ಹೆಚ್ಚಿಸಿದ ಕಲಾಮೇಳ, ಸ್ತಬ್ಧಚಿತ್ರ ಪ್ರದರ್ಶನ, ಶರಣರ ಮೇಲೆ ಆಗಸದಿಂದ ಪುಷ್ಪವೃಷ್ಟಿ

ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯ ಮರುಗು ಹೆಚ್ಚಿಸಿದ ಕಲಾಮೇಳ, ಸ್ತಬ್ಧಚಿತ್ರ ಪ್ರದರ್ಶನ

ಶರಣರ ಮೇಲೆ ಆಗಸದಿಂದ ಪುಷ್ಪವೃಷ್ಟಿ


ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾರೋಟಿನಲ್ಲಿ ಸಾಗಿದರು.

ಹುಲಿ ವೇಷ ಕುಣಿತ


ಯುದ್ಧ ವಿಮಾನದೊಂದಿಗೆ ವಿಂಗ್ ಕಮಾಂಡರ್‌ ಅಭಿನಂದನ್‌‌

ಚಿತ್ರದುರ್ಗ: ಹಬ್ಬದ ಸಂಭ್ರಮದಲ್ಲಿದ್ದ ಜನರು ಬಿ.ಡಿ.ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ನೀಲಿ ಆಗಸದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್‌ ಭುವಿಯತ್ತ ಇಳಿದು ಭಕ್ತರ ಗಮನ ಸೆಳೆಯಿತು. ಗಾಂಧಿ ವೃತ್ತದ ಬಳಿ ಸಾಗುತ್ತಿದ್ದ ಶಿವಮೂರ್ತಿ ಮುರುಘಾ ಶರಣರ ಸಾರೋಟಿನ ಮೇಲೆ ಪುಷ್ಪವೃಷ್ಟಿ ಸುರಿಸಿತು. ಆಗಸದಿಂದ ಸುರಿದ ಹೂಮಳೆಗೆ ಭಕ್ತ ಸಮೂಹ ಪುಳಕಗೊಂಡಿತು.

ಶರಣ ಸಂಸ್ಕೃತಿ ಉತ್ಸವದ ವಿಜಯದಶಮಿಯ ದಿನ ಶಿವಮೂರ್ತಿ ಮುರುಘಾ ಶರಣರು ಕೋಟೆನಗರಿಯ ರಾಜಬೀದಿಗಳಲ್ಲಿ ಸಾರೋಟಿನಲ್ಲಿ ಸಾಗಿದರು. ಏಳುಸುತ್ತಿನ ಕೋಟೆಯ ಕಡೆಗೆ ಜಾನಪದ ಕಲಾಮೇಳದೊಂದಿಗೆ ಹೊರಟಿದ್ದ ಮೆರವಣಿಗೆಯ ಮೇಲೆ ಮಂಗಳವಾರ ಮಧ್ಯಾಹ್ನ 2.13ರ ಸುಮಾರಿಗೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಸುರಿಸಲಾಯಿತು. ಜಾನಪದ ಕಲಾಮೇಳ, ಸ್ತಬ್ಧಚಿತ್ರಗಳು ಮೆರವಣಿಗೆಯನ್ನು ಇನ್ನಷ್ಟು ಆಕರ್ಷಣೀಯವಾಗಿಸಿದವು.

ಶರಣ ಸಂಸ್ಕೃತಿ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಾನಪದ ಕಲಾಮೇಳಕ್ಕೆ ಚಿಕ್ಕಕೆರೂರು ವಿರಕ್ತಮಠದ ಚಂದ್ರಶೇಖರ ಸ್ವಾಮೀಜಿ ಚಾಲನೆ ನೀಡಿದರು. ವಿವಿಧ ಪುಷ್ಪಗಳಿಂದ ಅಲಂಕೃತಗೊಂಡಿದ್ದ ಸಾರೋಟಿನ ಮಾದರಿಯ ವಾಹನದಲ್ಲಿ ಶರಣರು ಆಸೀನರಾದರು. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಕಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಶರಣರೊಂದಿಗೆ ವಾಹನದಲ್ಲಿ ಸಾಗಿದರು.

ಮುರುಘಾ ಮಠದಿಂದ ಹೊರಟ ಮೆರವಣಿಗೆ ಪುಣೆ–ಬೆಂಗಳೂರು ರಸ್ತೆಯ ಮೂಲಕ ನಗರ ಪ್ರವೇಶಿಸಿತು. ಬಿ.ಡಿ. ರಸ್ತೆಗೆ ಬರುತ್ತಿದ್ದಂತೆ ಮೆರವಣಿಗೆ ರಂಗು ಪಡೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡು ಶರಣರಿಗೆ ನಮಿಸಿದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಗಾಂಧಿ ವೃತ್ತ, ಪ್ರವಾಸಿ ಮಂದಿರ, ಅಂಬೇಡ್ಕರ್‌ ವೃತ್ತ, ಬಸವಮಂಟಪ ರಸ್ತೆ, ರಂಗಯ್ಯನ ಬಾಗಿಲು, ದೊಡ್ಡಪೇಟೆ ಮೂಲಕ ಕೋಟೆಯ ಮೇಲುದುರ್ಗ ತಲುಪಿತು. ಹಳೆ ಮುರುಘಾ ಮಠದ ಆವರಣದಲ್ಲಿ ರಾಜವಂಶಸ್ಥರು ಶರಣರಿಗೆ ಭಕ್ತಿ ಸಮರ್ಪಣೆ ಮಾಡಿದರು.

ಬಿ.ಡಿ.ರಸ್ತೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ದಾಟಿದ ಬಳಿಕ ಮೆರವಣಿಗೆ ಮೆರುಗು ಪಡೆಯಿತು. ಸಾವಿರಾರು ಜನರು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಕಟ್ಟಡ, ಮನೆಯ ಚಾವಣಿ ಏರಿ ಮೆರವಣಿಗೆ ಕಣ್ತುಂಬಿಕೊಳ್ಳುತ್ತಿದ್ದರು. ಶರಣರನ್ನು ಹೊತ್ತು ಸಾಗುತ್ತಿದ್ದ ಸಾರೋಟು ಮಾದರಿಯ ವಾಹನ ಗಾಂಧಿ ವೃತ್ತಕ್ಕೆ ಬರುವ ಹೊತ್ತಿಗೆ ನೆತ್ತಿ ಸುಡುವ ಬಿಸಿಲಿನ ತಾಪ ಹೆಚ್ಚಾಗಿತ್ತು. ಬಿರು ಬಿಸಿಲಿನಲ್ಲಿ ಆಗಸದಲ್ಲಿ ಕಾಣಿಸಿಕೊಂಡ ಹೆಲಿಕಾಪ್ಟರ್‌ನತ್ತ ಎಲ್ಲರ ದೃಷ್ಟಿ ಹರಿಯಿತು. ನೋಡ ನೋಡುತ್ತಿದ್ದಂತೆ ತರಹೇವಾರಿ ಪುಷ್ಪಗಳು ಮೆರವಣಿಗೆಯ ಮೇಲೆ ಸುರಿದವು.

ಹೆಲಿಕಾಪ್ಟರ್‌ ಭೂಮಿಯ ಸಮೀಪಕ್ಕೆ ಬಂದಿದ್ದರಿಂದ ದೂಳು ಮೇಲೆದ್ದಿತು. ಎರಡು ಬಾರಿ ಬಾನಂಗಳದಲ್ಲಿ ಕಾಣಿಸಿಕೊಂಡ ಹೆಲಿಕಾಪ್ಟರ್‌ ನಾಲ್ಕು ಬಾರಿ ಹೂಮಳೆ ಸುರಿಸಿತು. ರಸ್ತೆಯ ಉದ್ದಗಲಕ್ಕೂ ಸಾಗುತ್ತಿದ್ದ ಮೆರವಣಿಗೆಯ ಮೇಲೂ ಪುಷ್ಪವೃಷ್ಟಿ ಸುರಿಸಿದ್ದು ಈ ಬಾರಿಯ ವಿಶೇಷ. ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡ ಜನರು ಹರ್ಷೋದ್ಗಾರ ಮಾಡಿ ನಮಿಸಿದರು.

ಗಮನ ಸೆಳೆದ ಕಲಾಮೇಳ:
ಶರಣ ಸಂಸ್ಕೃತಿ ಉತ್ಸವದ ಮತ್ತೊಂದು ಆಕರ್ಷಣೆ ಜಾನಪದ ಕಲಾಮೇಳ. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾತಂಡಗಳು ಜಂಬೂಸವಾರಿ ನೆನಪಿಸಿ
ದವು. ಹಾಡುತ್ತ, ಕುಣಿಯುತ್ತ ಜನಪದ ಸಂಸ್ಕೃತಿಯ ವೈಭವ ಮರುಕಳಿಸುವಂತೆ ಮಾಡಿದವು. ಬಿರು ಬಿಸಿಲಿನಲ್ಲಿಯೂ ಸಾಗುತ್ತಿದ್ದ ಕಲಾಮೇಳವನ್ನು ಜನರು ವೀಕ್ಷಿಸಿದರು. ಮೆರವಣಿಗೆಯ ಸುಮಾರು ಒಂದು ಕಿ.ಮೀ ಉದ್ದದವರೆಗೆ ಕಲಾಮೇಳಗಳು ಇದ್ದವು.

ಕರಾವಳಿ ಭಾಗದಿಂದ ಬಂದಿದ್ದ ಚೆಂಡೆ–ಮದ್ದಳೆ ಆಕರ್ಷಕವಾಗಿತ್ತು. ಚೆಂಡೆಯ ನಿನಾದಕ್ಕೆ ತಾಳ ಹಾಕುತ್ತಿದ್ದ ಹೆಂಗಳೆಯರು ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಗಂಡುಕಲೆ ಎಂದೇ ಪ್ರಖ್ಯಾತವಾಗಿರುವ ಡೊಳ್ಳು ಕುಣಿತವನ್ನು ಸಾಗರದ ಮಹಿಳಾ ತಂಡ ಅದ್ಭುತವಾಗಿ ಪ್ರದರ್ಶಿಸಿತು. ಮ್ಯಾಸಬೇಡರ ‘ಖಾಸಪಡೆ’ ಚಿತ್ರದುರ್ಗದ ಸಂಸ್ಕೃತಿ ಬಿಂಬಿಸಿತು. ಹುಲಿ ಕುಣಿತ, ಹಗಲುವೇಷ, ಗಾರುಡಿ ಗೊಂಬೆ ಕುಣಿತ, ಪೂಜಾ ಕುಣಿತ, ಮಹಿಳಾ ಮತ್ತು ಪುರುಷರ ವೀರಗಾಸೆ ಕುಣಿತ ಆಕರ್ಷಕವಾಗಿದ್ದವು.

ಝಾಂಜ್ ಮೇಳ, ಜಗ್ಗಲಗಿ ಮೇಳ, ನಗಾರಿ, ಹಲಗೆ ಮಜಾಲ್, ರಾಕ್ಷಸಿ, ಹುಲಿ ಕರಡಿ ವೇಷ, ತಮಟೆ, ದಟ್ಟಿಕುಣಿತ, ಕಹಳೆತಂಡ, ನಂದಿ
ಕೋಲು, ಹುಲಿವೇಷ, ಭೂತನೃತ್ಯ, ಕಿಂದರಿಜೋಗಿ, ಸೋಮನಕುಣಿತ, ಬೀಸುಕಂಸಾಳೆ, ಕಣಿ ಹಲಗೆ, ಜಟ್ಟಿ ಮೇಳ, ಕೋಲಾಟ, ಲಂಬಾಣಿ ನೃತ್ಯ, ನಂದಿಕೋಲು ಸಮಾಳ, ಕರಡಿ ಚಮಾಳ ವಾದ್ಯಗಳನ್ನು ಜನರು ಕಣ್ತುಂಬಿಕೊಂಡರು.

ಜಾಗೃತಿ ಮೂಡಿಸಿದ ಸ್ತಬ್ಧಚಿತ್ರ: ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ಯುದ್ಧ ವಿಮಾನದೊಂದಿಗೆ ಕಾಣಿಸಿಕೊಂಡ ಸ್ತಬ್ಧಚಿತ್ರ ಗಮನ ಸೆಳೆಯಿತು. ಬಸವೇಶ್ವರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಈ ಸ್ತಬ್ಧಚಿತ್ರ ನಿರ್ಮಿಸಿದ್ದರು. ಎಸ್‌ಜೆಎಂ ವಿದ್ಯಾಪೀಠದ ವಿದ್ಯಾರ್ಥಿಗಳ ಸ್ತಬ್ಧಚಿತ್ರಗಳು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದವು.

ಸೌರ ವಿದ್ಯುತ್‌, ಮಳೆನೀರು ಸಂಗ್ರಹ, ಪರಿಸರ ಸ್ನೇಹಿ ದೀಪಾವಳಿ, ಸಾಮೂಹಿಕ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಜಲಶಕ್ತಿ ಅಭಿಯಾನ, ಕುಂಬಾರಿಕೆ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಶಾಂತವೀರ ಸ್ವಾಮೀಜಿ ಹಾಗೂ ಛತ್ರಪತಿ ಶಿವಾಜಿ ಭೇಟಿಯ ಸನ್ನಿವೇಶ, ಜಯದೇವ ಸ್ವಾಮೀಜಿ ಮತ್ತು ಮಹಾತ್ಮ ಗಾಂಧಿ ಮುಖಾಮುಖಿಯಾದ ಚಿತ್ರಣವನ್ನು ಸ್ತಬ್ಧಚಿತ್ರಗಳು ಕಟ್ಟಿಕೊಟ್ಟವು.

ದಣಿದ ಕಲಾವಿದರಿಗೆ ನೀರು, ಪಾನಕ, ಮಜ್ಜಿಗೆ, ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಶರಣರ ಸಾರೋಟಿನ ಬಳಿ ಬಂದ ಭಕ್ತರು ಫಲಪುಷ್ಪ ಕಾಣಿಕೆಗಳನ್ನು ಪಡೆದು ಪುನೀತರಾದರು. ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ, ಪಟೇಲ್ ಶಿವಕುಮಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಇದ್ದರು.

ಸುದ್ದಿಮೂಲ : ಪ್ರಜಾವಾಣಿ ವಾರ್ತೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!