Breaking News
Home / featured / ಸಾಣೇಹಳ್ಳಿ ಶ್ರೀಗಳ ನಿಲುವು ಸ್ವಾಗತಾರ್ಹವಾಗಿದೆ

ಸಾಣೇಹಳ್ಳಿ ಶ್ರೀಗಳ ನಿಲುವು ಸ್ವಾಗತಾರ್ಹವಾಗಿದೆ

ಸಾಣೇಹಳ್ಳಿ : ಲಿಂಗಾಯತ ಸಮೂದಾಯದ ಸಾಕ್ಷಿ ಪ್ರಜ್ಞೆಯಾಗಿರುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ನಿನ್ನೆ ತಮ್ಮ ಮಠದ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿಯೇ ಪೀಠತ್ಯಾಗ ಮಾಡುವ ಇಂಗಿತ ವ್ಯಕ್ತಪಡಿಸಿದ್ದು ಸ್ವಾಗತಾರ್ಹವಾಗಿದೆ.

ಅವರ ಈ ನಿಲುವು ಕೆಲವರಿಗೆ ಆಘಾತ ತಂದರೆ, ಹಲವರಿಗೆ ಆಶ್ಚರ್ಯ ತಂದಿದೆ.ಅವರನ್ನು ಅತ್ಯಂತ ಸಮಿಪದಿಂದ ಕಂಡವರಿಗೆ,ಅವರೊಂದಿಗೆ ಒಡನಾಟ ಹೊಂದಿದವರಿಗೆ ಅವರ ನಿಲುವಿನಲ್ಲಿ ಯಾವ ಆಶ್ಚರ್ಯವೂ ಕಂಡಿಲ್ಲ.ಮತ್ತೆ ಕಲ್ಯಾಣ ಅಭಿಯಾನದಲ್ಲಿ ಅವರೊಂದಿಗೆ ನಾನು ಒಡನಾಡಿದ ಸಂದರ್ಭದಲ್ಲಿ ಅವರಲ್ಲಿರುವ ಬಸವನಿಷ್ಠೆ, ಸರಳತೆ, ಜೀವಪರ-ಜನಪರ ಕಾಳಜಿ, ಸಮಯಪ್ರಜ್ಞೆ,ಸ್ಷಟವಾದ ಮಾತುಗಳು,ಮಗುವಿನಂತ ಮನಸ್ಸು, ಬದ್ಧತೆ,ಕಾಯಕನಿಷ್ಟೆ, ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಸಂಸ್ಕೃತಿ ಕಂಡು ತುಂಬಾ ಖುಷಿ ಆಗಿತ್ತು.

ವೈಯಕ್ತಿಕವಾಗಿ ನಮಗೆ ಮಠಪೀಠಗಳ ಬಗ್ಗೆ ಅಷ್ಟೇನೂ ಪ್ರೀತಿ, ಗೌರವವಿಲ್ಲ.ಏಕೆಂದರೆ ಬಸವಾದಿಗಳು ಕಟ್ಟಲು ಬಯಸಿದ ಸಮಾಜದಲ್ಲಿ ಮಠಪೀಠಗಳಿಲ್ಲ.ಇವೆಲ್ಲವೂ ಹದಿನೈದನೆಯ ಶತಮಾನದ ನಂತರ ಉದಯಿಸಿವೆ.ಮಠಪೀಠಗಳು ನಮ್ಮನ್ನು ಮೂಲಭೂತವಾದಿಗಳಾಗಿಸಿ ಕೊನೆಗೂ ಒಯ್ದು ಸಂಘ ಪರಿವಾರದ ಅಂಗಳದಲ್ಲಿ ನಿಲ್ಲುಸುತ್ತಾರೆ ಎನ್ನುವ ಅರಿವು ನನಗಿದೆ. ಮೇಲಾಗಿ ಮಠಪೀಠಗಳು ಜಾತಿಯತೆ,ಭ್ರಷ್ಟಾಚಾರ, ಕೋಮುವಾದ ಪೋಷಣೆ ಮಾಡುವ ನರ್ಸರಿ ಸ್ಕೂಲಗಳಾಗಿರುವುದು ಸುಳ್ಳಲ್ಲ.ಹಾಗಂತ ಎಲ್ಲಾ ಶ್ರೀಗಳು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ತಪ್ಪಾಗುತ್ತದೆ. ಸಾಣೇಹಳ್ಳಿಯ ಪಂಡಿತಾರಾಧ್ಯರಂತಹ ಕೆಲವು ಅಪರೂಪದ ಸ್ವಾಮೀಜಿಗಳು ಇನ್ನು ನಮ್ಮ ನಡುವೆ ಇರುವುದು ಸುಳ್ಳಲ್ಲ.

ಅವರೊಂದಿಗೆ ನಮಗೂ ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಖತಃ ಭೇಟಿಯಾದಾಗ ನಮ್ಮ ತಕರಾರುಗಳು ಅವರೆದುರು ಸಾಕಷ್ಟು ಸಲ ಸ್ಪಷ್ಟವಾಗಿ ಹೇಳಿದ್ದೇವೆ.ನಮ್ಮ ತಕರಾರುಗಳು ಸಮಾಧಾನದಿಂದ ಆಲಿಸಿ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ಚರ್ಚೆ, ಸಂವಾದದಲ್ಲಿ ಅವರಿಗೆ ಅಚಲವಾದ ನಂಬಿಕೆ.ಇತ್ತೀಚೆಗೆ ಮತ್ತೆ ಕಲ್ಯಾಣ ವಿಧ್ಯಾರ್ಥಿಗಳ ಸಂವಾದದಲ್ಲಿ ಸಾರ್ವಜನಿಕರು ಮತ್ತು ಯುವಜನತೆ ಕೇಳುವ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತವಾದ ಉತ್ತರಗಳನ್ನು ನೀಡಲು ಪ್ರಯತ್ನಿಸಿದ್ದಾರೆ.

ಈ ಸಂವಾದ ಸಂಸ್ಕೃತಿ ಗೌರವಿಸಿ ಸಾರ್ವಜನಿಕರಿಗೆ ಮುಕ್ತವಾಗಿ ಪ್ರಶ್ನೆ ಕೇಳುವ ಅವಕಾಶ ಕೊಟ್ಟಿದ್ದು ಪ್ರಾಯಶಃ ಸಾಣೇಹಳ್ಳಿಯ ಶ್ರೀಗಳೇ ಮೊದಲಿಗರು ಎನಿಸುತ್ತದೆ.
ನಮ್ಮಲ್ಲಿ ಬಹುತೇಕರು ಪ್ರಶ್ನೆ ಕೇಳುವ ಸಂಸ್ಕೃತಿ ಇಷ್ಟ ಪಡುವದಿಲ್ಲ.ಯಾಕೆಂದರೆ ಇದು ನಮ್ಮ ಬುಡಕ್ಕೆ ನೀರು ಬರುತ್ತವೆ ಎನ್ನುವ ಅರಿವು ಅವರಿಗಿದೆ. ಅವರು ಏನಿದ್ದರೂ ಆಶಿರ್ವಚನ ನೀಡಲು ಮಾತ್ರ.

ಇಂತಹ ಪರಿಸ್ಥಿತಿಯಲ್ಲಿ ಸಾಣೇಹಳ್ಳಿಯ ಸ್ವಾಮೀಜಿ ಪೀಠತ್ಯಾಗ ಮಾಡ್ತಾರೆ ಅಂತ ಘೋಷಣೆ ಮಾಡಿದ್ದಾರೆ ಎಂದು ರಾತ್ರಿ ರೈತ ಸಂಘದ ಮುಖಂಡರಾದ ಚಿತ್ರದುರ್ಗದ ಎನ್ ಶಂಕ್ರೇಪ್ಪ ನುಲೆನೂರ ಅವರು ನನಗೆ ಫೋನ್ ಮಾಡಿ ತಿಳಿಸಿದ್ದಾಗ ನನಗಂತೂ ತುಂಬಾ ಖುಷಿ ಆಯ್ತು.ತಕ್ಷಣ ರಾತ್ರಿ 10:30ಕ್ಕೆ ಅಭಿನಂದನೆಗಳು ತಿಳಿಸಲು ಶ್ರೀಗಳಿಗೆ ಫೋನ್ ಮಾಡಿದ್ದೆ.ಅವರು ಫೋನ ತೆಗೆದರು ಆದರೆ ಕಾರ್ಯಕ್ರಮದಲ್ಲಿ ಇರುವದರಿಂದ ಅವರೊಂದಿಗೆ ಮಾತನಾಡಲು ಆಗಲಿಲ್ಲ. ಬೆಳಿಗ್ಗೆ ಬೆಳಿಗ್ಗೆ ಮತ್ತೆ ಫೋನ್ ಮಾಡಿದ್ದಾಗ ಸುದಿರ್ಘವಾಗಿ ಅವರೊಂದಿಗೆ ಮಾತಾಡಿ ಅವರು ತೆಗೆದುಕೊಂಡು ನಿಲುವಿಗೆ ಕಾರಣಗಳು ನೀಡಿದರು.ಅವರ ನಿಲುವನ್ನು ಮನದುಂಬಿ ಸ್ವಾಗತಿಸಿ ಅವರಿಗೆ ಅಭಿನಂದನೆಗಳು ತಿಳಿಸಿದ್ದೆ.

ಪೀಠತ್ಯಾಗ ಅಂದಾಕ್ಷಣ ಅವರು ಮಾಡುತ್ತಿರುವ ಜನಪರ ಕಾರ್ಯಗಳನ್ನು ಮೊಟಕುಗೊಳಿಸಿ ತಮ್ಮ ಉಳಿದ ಬದುಕು ಕೇವಲ ಧ್ಯಾನ-ಪೂಜೆಯಲ್ಲೇ ಮಾತ್ರ ಕಾಲ ಕಳೆಯುತ್ತಾರೆ ಎಂದರ್ಥವಲ್ಲ.ಮಠದ ಆಡಳಿತಾತ್ಮಕ ಕಾರ್ಯಗಳಿಂದ ಬಿಡುವು ಪಡೆದು ಅವರ ಜನಪರವಾದ ಕಾರ್ಯಗಳನ್ನು ವಿಸ್ತರಿಸಿ ಮತ್ತಷ್ಟೂ ಪರಿಣಾಮಕಾರಿಯಾಗಿ ಮಾಡುತ್ತಾರೆ ಎಂದರ್ಥ.
ಅವರು ಪೂಜೆಯನ್ನೆ ಕಾಯಕ ಮಾಡಿಕೊಂಡು,ಮಠದಲ್ಲಿ ತಿಂದುಂಡು ಸ್ಥಾವರಗೊಂಡ ಸ್ವಾಮೀಜಿಯಲ್ಲ.ಕಾಯಕವೇ ಪೂಜೆಯಂದು ತಿಳಿದು ಅದರಂತೆಯೇ ಬದುಕುತ್ತಿರುವ ಜನಪರ ಸ್ವಾಮೀಜಿ.

ಅವರು ಯಾವುದೇ ಕೆಲಸ ಕೈಗೆತ್ತಿಕೊಂಡರೂ ಅದನ್ನು ಕಾಳಜಿ, ಮುತುವರ್ಜಿವಹಿಸಿ ಬದ್ಧತೆಯಿಂದ ಆ ಕೆಲಸ ಮಾಡುತ್ತಾರೆ. ಪ್ರಭುತ್ವಕ್ಕೆ ಯಾವತ್ತು ಬಕೆಟ್ ಹಿಡಿದ ಸ್ವಾಮೀಜಿಯಲ್ಲ. ಇವರ ಬದ್ಧತೆಯ ಬದುಕು ಕಂಡು ಜಾಗತಿಕ ಲಿಂಗಾಯತ ಮಹಾಸಭೆಯ ಮುಖಂಡರರಾದ ಶೀವಾನಂದ ಜಾಮದಾರ ಮತ್ತು ಜಿ ಬಿ ಪಾಟೀಲರು ಅನೇಕ ಸಲ ನೀವು ಲಿಂಗಾಯತ ಹೋರಾಟದ ನೇತೃತ್ವದ ವಹಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡಿದ್ದರು.ಕೆಲವು ಕಾರಣಗಳಿಂದ ಅವರ ಮನವಿಯನ್ನು ವಿನಯಪೂರ್ವಕವಾಗಿ ನಿರಾಕರಿಸುತ್ತ ಬಂದಿದ್ದಾರೆ.

ಶಿವಾನಂದ ಜಾಮದಾರ್ ಅವರು ನೀವು ಶ್ರೀಗಳ ಮನವೊಲಿಸಿ ಎಂದಿದ್ದರು. ನನಗೂ ಇದು ಒಳ್ಳೆಯ ಬೆಳವಣಿಗೆ ಎಂದು ಭಾವಿಸಿ ಅವರೆದುರು ಒಂದೇರಡು ಸಲ ಈ ವಿಷಯ ಪ್ರಸ್ತಾಪ ಮಾಡಿದ್ದೆ.ಆಗ ಅವರ ನಿರಾಕರಣೆಗೆ ಕಾರಣಗಳನ್ನು ತಿಳಿಸಿದಾಗ ನಾನು ಅನಿವಾರ್ಯವಾಗಿ ಮೌನಕ್ಕೆ ಜಾರಿದೆ.ಬಹುಶಃ ಜಾಮದಾರವರು ಮತ್ತು ಜಿ ಬಿ ಪಾಟೀಲರು ಇನ್ನು ಆ ಪ್ರಯತ್ನದಲ್ಲಿದ್ದಾರೆಂದು ಎನಿಸುತ್ತದೆ.ಅವರ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಏಕೆಂದರೆ ಸಾಣೇಹಳ್ಳಿಯ ಪಂಡಿತಾರಾಧ್ಯರು ಮತ್ತು ಅವರ ಜತೆಗೇ ಬೈಲೂರಿನ ನೀಜಗುಣಾನಂದರು ಲಿಂಗಾಯತ ಹೋರಾಟದ ರಥವನ್ನು ಮುನ್ನಡೆಸಲು ಒಪ್ಪಿದರೆ ಅದು ನಿಜಕ್ಕೂ ಒಂದು ಚರಿತ್ರಾರ್ಹ ಬೆಳವಣಿಗೆ ಆಗುತ್ತದೆ. ಇವರಿಬ್ಬರ ನೇತೃತ್ವದಲ್ಲಿ ಹೋರಾಟ ನಡೆದರೆ ಅದು ದಡ ಸೇರುತ್ತದೆ ಎನ್ನುವ ನಂಬಿಕೆ ಎಲ್ಲರಿಗೂ ಇದೆ. ಲಿಂಗಾಯತ ವಿರೋಧಿಗಳು ಹೋರಾಟದ ಮಜಲುಗಳು ಅರಿಯದೇ ಲಿಂಗಾಯತ ಹೋರಾಟ ಕ್ಷೀಣಿಸಿದೆ ಎನ್ನುವ ಭ್ರಮೆಯಲ್ಲಿ ಇದ್ದಾರೆ.ಅದು ಬಸವಾದಿಗಳು ಮತ್ತು ಅವರ ಚಿಂತನೆಗಳು ಈ ನೆಲದಲ್ಲಿ ಜೀವಂತವಾಗಿರುವರೆಗೂ ಅದು ಗುಪ್ತಗಾಮಿನಿಯಾಗಿ ಎಂದೆಂದಿಗೂ ಹರಿದಾಡುತ್ತದೆ.ಹೋರಾಟ ಕ್ಷೀಣಿಸಲು ಅಸಾಧ್ಯ.ಅದು ಅವರ ತಿರುಕನ ಕನಸು ಅಷ್ಟೇ.

ಲಿಂಗಾಯತ ಹೋರಾಟ ಸಮಾಜದಲ್ಲಿ ಬಸವಪ್ರಜ್ಞೆ ಮೂಡಿಸಿದೆ.ಸಾಗರದಾಚೆಗೂ ಲಿಂಗಾಯತ ಹೋರಾಟದ ಕೂಗು ದಾಟಿದೆ. ಲಿಂಗಾಯತ ಸಮೂದಾಯದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ ಪ್ರಜ್ಞೆ ಮೂಡಿಸುವುದು ವಿಶಾಲವಾದ ಜನಚಳವಳಿಗಳು ಮತ್ತು ಇದಕ್ಕೆ ಪೂರಕವಾಗಿ ಬರುವ ವೈಚಾರಿಕ ಬರಹಗಳು ಮಾತ್ರ.

ಈ ನೆಲದಲ್ಲಿ ಕೋಮುವಾದಿ ಪಕ್ಷಗಳು ಬೇರು ಬಿಡಲು ಲಿಂಗಾಯತ ಸಮೂದಾಯದ ಬಹಳ ದೊಡ್ಡ ಪಾಲಿದೆ.ಯಾವ ಶಕ್ತಿಗಳು ಅಂದು ಬಸವಾದಿಗಳನ್ನ,ನಿನ್ನೆ ಕಲಬುರ್ಗಿಯವರನ್ನು, ಇಂದು ಲಿಂಗಾಯತ ಹೋರಾಟ ವಿರೋಧಿಸುತ್ತಿದ್ದಾವೋ ಅದೆ ಶಕ್ತಿಗಳು ಬಲಗೊಳ್ಳಲು ರಾಜಕೀಯ ಪ್ರಜ್ಞೆಯ ಕೊರತೆಯಿಂದ ಅವರ ಕೈ ಬಲಪಡಿಸುತ್ತಿದದ್ದು ದುರದೃಷ್ಟಕರ.ನಮ್ಮ ಪರಂಪರಾಗತ ಶತ್ರುಗಳು ಯಾರು, ಮಿತ್ರರು ಯಾರೆಂಬ ಅರಿವು ಚಳವಳಿ ಮಾತ್ರ ಮೂಡಿಸುತ್ತದೆ.

ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯುವುದು ಮತ್ತು ಜನಸಮೂದಾಯದಲ್ಲಿ ಬಸವ ಪ್ರಜ್ಞೆ ಮೂಡಿಸುವುದು ಅಷ್ಟೊಂದು ಸುಲಭವಲ್ಲ.ಅದು ವಿಶಾಲವಾದ ಜನಚಳಯಿಂದ ಮಾತ್ರ ಆಗುಮಾಡಬಹುದು.ಈ ದುರಿತ ಕಾಲದಲ್ಲಿ ಸಾಣೇಹಳ್ಳಿಯ ಶ್ರೀಗಳು ಮತ್ತು ನೀಜಗುಣಾನಂದರು ನೇತೃತ್ವ ವಹಿಸಿಕೊಂಡು,ಎಲ್ಲಾ ಬಸವಪರ ಸಂಘಟನೆಗಳು ಮತ್ತು ಸ್ವಾಮೀಜಿಗಳು ಅವರ ಜತೆಗೂಡಿದರೆ ಈ ನೆಲದಲ್ಲಿ ವಿಶಾಲವಾದ ಜನಚಳವಳಿ ಕಟ್ಟಬಹುದು.

ಒಂದು ವೇಳೆ ನಾವು ಕಾನೂನಿನ ಮೂಲಕ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆದರು ಸಹ,ಜನತೆಯಲ್ಲಿ ಬಸವಪ್ರಜ್ಞೆ ಮೂಡಲು ಅಸಾಧ್ಯ. ಈ ಧರ್ಮವೂ ಸಹ ಹಿಂದೂ ಧರ್ಮದ ಛಾಯೆಯಲ್ಲಿ ಉಳಿದು ತನ್ನ ಮೊನಚು ಕಳೆದುಕೊಂಡು ಹತ್ತರಲ್ಲಿ ಹನ್ನೊಂದನೇ ಧರ್ಮವಾಗಿ ಉಳಿಯುತ್ತದೆ. ಬಸವಾದಿಗಳು ಕಟ್ಟಲು ಬಯಸಿದ ಸಮ ಸಮಾಜದ ಕನಸು ಕನಸಾಗಿಯೇ ಉಳಿಯುತ್ತದೆ.

ಬಸವಾದಿಗಳ ಕನಸು ನನಸಾಗಿಸಲು ಈ ನೆಲದಲ್ಲಿ ಉಭಯ ಶ್ರೀಗಳ ನೇತೃತ್ವದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಸಂಘಟನೆಯ ಅಡಿಯಲ್ಲಿ ವಿಶಾಲವಾದ ಲಿಂಗಾಯತ ಜನಚಳವಳಿ ಹುಟ್ಟಲ್ಲೆಂದು ಆಶಿಸುತ್ತೇನೆ.

– ಸಿದ್ದಪ್ಪ ಮೂಲಗೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!