Breaking News
Home / featured / ನೂತನ ಅನುಭವ ಮಂಟಪ ಸಮಾನತೆ, ಸೌಹಾರ್ದತೆಯ ಸಂಕೇತವಾಗಲಿ.

ನೂತನ ಅನುಭವ ಮಂಟಪ ಸಮಾನತೆ, ಸೌಹಾರ್ದತೆಯ ಸಂಕೇತವಾಗಲಿ.

ಸಿದ್ದಪ್ಪ ಮೂಲಗೆ. ಬೀದರ ಸಮಾಜದ ಸಮಸ್ತ ಕ್ಷೇತ್ರಗಳ ಕಸುಬುಗಳ ಮತ್ತು ಕಾಯಕಗಳ ಶ್ರಮಜೀವಿಗಳನ್ನು ಕರೆದು ಅವರ ಬದುಕಿನ ಸುಖ-ದುಃಖಗಳನ್ನು ಕೇಳಿ ಅವರನ್ನು ಎದೆಗಪ್ಪಿಕೊಂಡು ಅವರ ಬದುಕಿನ ವಾಸ್ತವಗಳ ಹಿಂದಿನ ಕಾರಣವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಅವರನ್ನೆಲ್ಲ ಒಟ್ಟಾಗಿಯೇ ಹೊಸ ಮಾರ್ಗದಲ್ಲಿ ನಡೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು.

ಸತ್ಕಾರಣವಾಗಿ ಹತ್ತಾರು ವರ್ಷಗಳಲ್ಲಿಯೆ ಸಾವಿರ ಸಾವಿರ ಸಂಖ್ಯೆಯ ಶ್ರಮಜೀವಿಗಳು ಬಸವಣ್ಣನವರ ಸುತ್ತ ಅಣಿ ನೆರದಿದ್ದು ಜಾಗತಿಕ ಮಾನವ ನಾಗರಿಕತೆಯ ಚರಿತ್ರೆಯಲ್ಲೆಯೇ ಅಪೂರ್ವವಾದದ್ದು ಮತ್ತು ಅನನ್ಯವಾದುದು. ಹೀಗೆ ಹೊಸ ಮಾರ್ಗಾನುಯಾಯಿಗಳಾಗಿ ನವ ಸಮಾಜದ ನಿರ್ಮಾಣದ ಅಭಿಲಾಷೆಗಳಾಗಿ ಕಲ್ಯಾಣದಲ್ಲಿ ಸಮಾವೇಶಗೊಂಡ ವಿವಿಧ ಕಾಯಕಜೀವಿಗಳು ಶೋಷಣೆ ರಹಿತವಾದ ಸಮಸಮಾಜದ ಕನಸು ಕಂಡು ಅದನ್ನು ಆಗುಮಾಡಲು ಪ್ರತಿದಿನ ಸಾಯಂಕಾಲ ತಮ್ಮ ತಮ್ಮ ದಿನದ ಕಾಯಕಗಳನ್ನು ಪೂರೈಸಿ ಬಸವಣ್ಣನವರ ಮನೆಯಲ್ಲೋ ಅಥವಾ ಇತರ ಶರಣರ ಅಂಗಳದಲ್ಲಿಯೋ ತಾತ್ವಿಕ ಚರ್ಚೆಗಾಗಿ ಒಂದೇಡೆ ಸೇರುತ್ತಿದ್ದರು.

ಹೀಗೆ ಸೇರುತ್ತಿದ್ದವರ ಸಂಖ್ಯೆ ದಿನದಿಂದ ದಿನಕ್ಕೆ ಕ್ರಮೇಣ ಹೆಚ್ಚಾಗಿದ್ದುದ್ದರ ಕಾರಣದಿಂದಾಗಿ ಅವರು ತಮ್ಮ ಸಾಯಂಕಾಲದ ಚರ್ಚೆಗೆ ಎಲ್ಲರಿಗೂ ಅನುಕೂಲಕರವಾದ ಎಲ್ಲಿವೋ ಒಂದು ಪ್ರಶಸ್ತವಾದ ಸ್ಥಳ ಹುಡುಕಿಕೊಂಡು ಅಲ್ಲಿಯೇ ಒಂದು ವಿಶಾಲವಾದ ಚಪ್ಪರ ಹಾಕಿ ಅದರ ಕೆಳಗೆ ಒಂದು ಕಡೆ ಪುಟ್ಟ ಕಟ್ಟೆಯನ್ನು ಕಟ್ಟಿ ಅದರ ಮೇಲೆ ಅಂದಿನ ಚರ್ಚಾ ಸಮಾವೇಶದ ಅಧ್ಯಕ್ಷತೆ ವಹಿಸುವರಿಗೆ ಅಲ್ಲಿ ಅವಕಾಶ ಕಲ್ಪಿಸಲಾಗುತ್ತಿತ್ತು.

ಅಲ್ಲಮಪ್ರಭುನಂತಹ ವಿರಳ ಜ್ಞಾನಿ ಆನುಭವಿಕ ಚರಮಸ್ಥಿತಿಗೆ ಮುಟ್ಟಿದ ದಾರ್ಶನಿಕ ಕಲ್ಯಾಣಕ್ಕೆ ಬಂದನಂತರ ಅವರಿಗೆ ಖಾಯಂ ಅಧ್ಯಕ್ಷರನ್ನಾಗಿ ಮಾಡಿ. ಅದಕ್ಕೆ ಅನುಭವ ಮಂಟಪ ಎಂಬ ಹೆಸರಿಟ್ಟು ಕರೆಯತೋಡಗಿದರು.ಅಲ್ಲಿ ಸಮಾವೇಶಗೊಳ್ಳುತ್ತಿದ್ದ ಕಾಯಕಜೀವಿಗಳ ಬದುಕಿನ ಜ್ವಲಂತ ಅನುಭವಗಳ ಮಥನ ನಡೆಸಿ ಅದು ಅವರವರ ವಚನಗಳಲ್ಲಿ ರೂಪಗೊಳ್ಳುವಂತೆ ಅನುವು ಮಾಡಿಕೊಟ್ಟರು. ಅಲ್ಲಿನ ಚರ್ಚೆಯ ಮೂಲಕ ಹೊರ ಹೊಮ್ಮಿದ ಚಿಂತನೆಗಳು ಸಕಲ ಶರಣರ ಸನ್ಮಾರ್ಗದರ್ಶನದ ಅನುಭಾವವಾಗಿ ಮಾರ್ಪಟ್ಟಿದ್ದಕ್ಕೆ ಅನೇಕರ ವಚನಗಳಲ್ಲಿಯೇ ನಮಗೆ ಸಾಕ್ಷಾಧಾರಗಳು ದೊರೆಯುತ್ತವೆ.

ಶರಣರು ಕಾಯಕಜೀವಿಗಳು,ಅವರು ಸ್ಥಾವರ ನಿರಾಕರಿಸಿ ಜಂಗಮಕ್ಕೆ ಆದ್ಯತೆ ನೀಡಿದವರು. ಅವರು ಒಂದು ಸಾಧಾರಣ ಚಪ್ಪರದ ಕೆಳಗೆ ಕೂತು ಚರ್ಚೆ ನಡೆಸುತ್ತಿದ್ದರು ವಿನಹಃ ಸುಸಜ್ಜಿತವಾಗಿ ಭವ್ಯವಾದ ಕಟ್ಟಣ ಕಟ್ಟಲು ಅಸಾಧ್ಯ.ಅನುಭವ ಮಂಟಪದ ಭವ್ಯ ಕಲ್ಪನೆ 15ನೆಯ ಶತಮಾನದ ಶೂನ್ಯ ಸಂಪಾದನೆಕಾರರ ಸೃಷ್ಟಿಯೆಂಬುದು ನಿರ್ವಿವಾದ.

ಅನುಭವ ಮಂಟಪದ ನಿರ್ಮಾಪಕರಾದ ಬಸವಾದಿಗರು ಸಾಮಾನ್ಯ ಕಾಯಕದಲ್ಲಿ ನಿರತರಾಗಿದ್ದವರು.ಒಂದು ಭವ್ಯವಾದ ಕಟ್ಟಡ ಕಟ್ಟಲು ವಾಸ್ತವವಾಗಿ ಅವರಿಂದ ಅಸಾಧ್ಯದ ಕೆಲಸ.ಮೇಲಾಗಿ ಅವರು ಸ್ಥಾವರ ಕಟ್ಟಡಗಳಲ್ಲಿ ನಂಬಿಕೆ ಇಟ್ಟವರಲ್ಲ.ಅನುಕೂಲಕ್ಕೆಂದು ನಿರ್ಮಿಸಿಕೊಂಡಿದ್ದ ಸಾಧಾರಣ ಚಪ್ಪರಕ್ಕೂ ಪ್ರತಿಕ್ರಾಂತಿಕಾರರ ಅಂದರೆ ಶರಣಕ್ರಾಂತಿಯ ವಿರೋಧಿಗಳಾದ ವೈದಿಕರ ಕೈ ಮೇಲಾದಾಗ ಬಸವಾದಿಗರ ತಾತ್ವಿಕ, ವೈಚಾರಿಕ ಮತ್ತು ಸಂಘರ್ಷದ ಸಂಕೇತವಾಗಿದ್ದ ಆ ಚಪ್ಪರಕ್ಕೂ ಕೊಳ್ಳಿ ಇಟ್ಟು ಬೂದಿ ಮಾಡಿದರು.

ಬಸವಾದಿಗರ ಲಕ್ಷಾಂತರ ವಚನಗಳನ್ನು ಸುಟ್ಟು,ಬರ್ಬರವಾಗಿ ಸಾವಿರಾರು ಶರಣರನ್ನ ಹತ್ಯಾಕಾಂಡ ಮಾಡಿದ ಮತ್ತು ಚಪ್ಪರದ ಅನುಭವ ಮಂಟಪವನ್ನು ಬೆಂಕಿಗೆ ಆಹುತಿ ಮಾಡಿದ ಅಂದಿನ ವೈದಿಕರ ಚಿಂತನೆಗಳನ್ನು ಇಂದು ಬಳುವಳಿ ಮಾಡಿಕೊಂಡಿರುವ ಸಂಘಪರಿವಾರದವರ ಅದರ ರಾಜಕೀಯ ವಿಂಗ್ ಆದ ಬಿಜೆಪಿಗರು ತಮ್ಮ ರಾಜಕೀಯ ಅನುಕೂಲಕ್ಕಾಗಿ ಗಾಳಿಯಲ್ಲಿ ತೆಲಿಬಿಟ್ಟ ಗಾಳಿಸುದ್ದಿಯ ಮಾತುಗಳಿಗೆ ಕಟ್ಟುಬಿದ್ದು ಖಾಸಗಿ ವ್ಯಕ್ತಿಯ ಒಡೆತನದಲ್ಲಿರುವ ಇಂದಿನ ಪೀರ್ ಪಾಷಾ ಬಂಗಲೆಯೇ ಅಂದಿನ ಮೂಲ ಅನುಭವ ಮಂಟಪ ಎಂಬ ಕಪೋಲಕಲ್ಪಿತ ಸಂಗತಿಯನ್ನು ನಂಬಿ ಕಲ್ಯಾಣದ ನೆಲದಲ್ಲಿ ಕೋಮುವಾದದ ಬೀಜ ಬಿತ್ತಿ,ಸಮಾಜದ ಸೌಹಾರ್ದತೆ ಹಾಳು ಗೆಡವಿದರೆ ಅದು ಬಸವಾದಿಗರಿಗೆ ಬಗೆಯುವ ದ್ರೋಹವಾಗುತ್ತದೆ.

ಕೆಲವರು ಸಂಘಿಗ್ಯಾಂಗಿನ ಕುತಂತ್ರಕ್ಕೆ ಬಲಿಯಾಗಿ ಕಲ್ಯಾಣದ ಪೀರ್ ಪಾಷಾ ಬಂಗಲೆಯೇ ವಶಪಡಿಸಿಕೊಂಡು ಅದನ್ನು ಕೆಡವಿ ಆ ಸ್ಥಳದಲ್ಲೇ ಭವ್ಯವಾದ ನೂತನ ಅನುಭವ ಮಂಟಪ ಕಟ್ಟಬೇಕು ಅಥವಾ ಇದು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅಧಿನ ಪಡೆದು ಇದೆ ಪ್ರಾಚ್ಯ ಅನುಭವ ಮಂಟಪವೆಂದು ಪ್ರವಾಸೋದ್ಯಮಿಗಳಿಗೆ ತೋರಿಸಲಾದರೂ ಇದನ್ನು ವಶಪಡಿಸಿಕೊಳ್ಳಬೇಕು ಎಂದು ವಿತಂಡವಾದ ಮಾಡುತ್ತಿರುವ ನಮಗೂ ಮತ್ತು ತಮ್ಮ ರಾಜಕೀಯ ಹಿಡನ್ ಅಜೆಂಡಾವನ್ನು ಸಾಕಾರಗೊಳಿಸಲು ಅಯೋಧ್ಯೆಯಲ್ಲಿ ಮಸೀದಿ ಧ್ವಂಸ ಮಾಡಿ, ಆ ಸ್ಥಳದಲ್ಲಿ ಕಾಲ್ಪನಿಕ, ಪೌರಾಣಿಕ ವ್ಯಕ್ತಿಯ ಮಂದಿರ ಕಟ್ಟುತ್ತಿರುವ ಸಂಘಪರಿವಾರದವರಿಗೂ ವ್ಯತ್ಯಾಸವೇನು ಉಳಿಯುತ್ತದೆ? ಅಷ್ಟಕ್ಕೂ ಈಗಿನ ಪೀರ್ ಪಾಷಾ ಬಂಗಲೆಯೇ ಮೂಲ ಅನುಭವ ಮಂಟಪ ಎಂದು ವಾದಿಸಲು ಸಂಘಪರಿವಾರದ ಕಪೋಲಕಲ್ಪಿತ ಗಾಳಿ ಸುದ್ದಿಯ ಮಾತುಗಳು ಹೊರತು ಪಡಿಸಿದರೆ, ಇದೆ ಸ್ಥಳದಲ್ಲಿ ಮೂಲ ಅನುಭವ ಮಂಟಪ ಇತ್ತೆಂದು ಸಿದ್ದಮಾಡಿ ತೋರಿಸಿದ ಅಧ್ಯಯನ-ಸಂಶೋಧನಾ ವರದಿಗಳು ಮತ್ತು ಇತರೆ ದಾಖಲೆಗಳು ಏನಾದರೂ ಇವೆಯೇ? ಏನು ಇಲ್ಲ.

ಆದರಿಂದ ಈಗ ನಾವು ಅನುಭವ ಮಂಟಪದ ಮೂಲ ಸ್ಥಳ ಹುಡುಕುವುದು ನಿರರ್ಥಕ. ಅದು ಬಸವಾದಿಗರ ಜಂಗಮ ಪರಿಕಲ್ಪನೆಗೆ ವಿರುದ್ಧವಾದ ನಡೆ.ಜತೆಗೆ ಶರಣರು ನಿರ್ಮಿಸಿದ ನೀಜವಾದ ಅನುಭವ ಮಂಟಪ ಸಹಸ್ರ ಮುಖಿಯಾಗಿ ಪ್ರತಿಯೊಬ್ಬ ಶರಣರ ಹೃನ್ಮನಗಳಲ್ಲಿತ್ತು.ಶರಣ ತತ್ವ-ಚಿಂತನೆ ನಿಂತ ನೀರಲ್ಲ.ಸ್ಥಗಿತಗೊಂಡ ಪ್ರವಾಹವಲ್ಲ.ಅದು ನಿರಂತರ ಚಲನಶೀಲವಾದದ್ದು. ಆದರಿಂದ ಅದರ ಸ್ಪೂರ್ತಿಯ ಪ್ರಭಾವದ ಅಡಿಯಲ್ಲಿ ಭಾಲ್ಕಿಯ ಬಸವಲಿಂಗ ಪಟ್ಟದೇವರ ನೇತೃತ್ವದಲ್ಲಿ ಇಂದು ನಿರ್ಮಿಸುತ್ತಿರುವ ಅನುಭವ ಮಂಟಪಕ್ಕೆ ಗೊರುಚ ನೇತೃತ್ವದ ಅಧ್ಯಯನ ತಂಡ ಗೊತ್ತು ಪಡಿಸಿದ ಸ್ಥಳ ಪ್ರಶಸ್ತವಾಗಿದೆ.

ಈ ಸ್ಥಳದಲ್ಲೇ ಭವ್ಯವಾದ ಅನುಭವ ಮಂಟಪ ನಿರ್ಮಿಸುತ್ತಿರುವದು ಸ್ವಾಗತಾರ್ಹವಾಗಿದೆ.ಪ್ರಸ್ತುತ ಕಲ್ಯಾಣದಲ್ಲಿರುವ ಅನುಭವ ಮಂಟಪ ನಿರ್ಮಿಸಲು ಭಾಲ್ಕಿಯ ಚನ್ನಬಸವ ಪಟ್ಟದೇವರು ತಮ್ಮ ಬೆವರು ಸುರಿಸಿ ಸ್ವತಃ ಕಲ್ಲು ಮಣ್ಣು ಗಾರೆಹೊತ್ತು ಕಟ್ಟಿದ್ದು ಇತಿಹಾಸ. ಅದೆ ಪರಿಸರದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪ ಸಮಾನತೆ ಮತ್ತು ಸೌಹಾರ್ದತೆಯ ಸಂಕೇತವಾಗಲಿ.

ಇದನ್ನು ನಿರ್ಮಿಸಲು ಹಗಲಿರುಳು ಶ್ರಮಿಸುತ್ತಿರುವ ಭಾಲ್ಕಿ ಶ್ರೀಗಳ ಕೈ ಬಲಪಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!