Breaking News
Home / featured / ಪೂಜ್ಯ ಮಹಾಮಾತೆ ಮಹಾದೇವಿ ತಾಯಿಗೆ ನುಡಿ ನಮನ

ಪೂಜ್ಯ ಮಹಾಮಾತೆ ಮಹಾದೇವಿ ತಾಯಿಗೆ ನುಡಿ ನಮನ

ಸಚ್ಚಿದಾನಂದ ಚಟ್ನಳ್ಳಿ : 

ಕೆಲವು ವರ್ಷಗಳ ಹಿಂದೆ ಬಸವ ಮಂಟಪದಲ್ಲಿ ಕೆಲವೊಂದು ಹಳೆಯ ಭಾವಚಿತ್ರಗಳ ಸಂಗ್ರಹ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಮೂರು ಭಾವಚಿತ್ರಗಳು ನನ್ನ ಗಮನ ಸೆಳೆದವು. ಒಂದು ಕ್ಷಣ ಸರ್ವಾಂಗದಲ್ಲಿ ಕಂಪನವಾಯಿತು. ನನಗರಿವಿಲ್ಲದೆ ಕಣ್ಣಿನಿಂದ ಅಶ್ರು ಬಿಂದುಗಳು ಬರಲಾರಂಭಿಸಿದವು! ಕಾರಣ, ಆ ಭಾವಚಿತ್ರಗಳು 1972ನೇ ಇಸವಿಯಲ್ಲಿ ಬೆಂಗಳೂರಿನ ಬಸವ ಮಂಟಪ ಕಟ್ಟುವಾಗ ತೆಗೆದಂಥವುಗಳು. ಆ ಮೂರು ಭಾವಚಿತ್ರದಲ್ಲಿ ಪೂಜ್ಯ ಮಾತಾಜಿಯವರು ತಲೆಯ ಮೇಲೆ ಸೆರಗನ್ನು ಹೊದ್ದು ಸಿಮೆಂಟಿನ ಬುಟ್ಟಿಯನ್ನು ಹೊತ್ತಿದ್ದಾರೆ. ಇನ್ನೊಂದರಲ್ಲಿ ಪೂಜ್ಯ ಗಂಗಾ ಮಾತಾಜಿಯವರು, ಬುಟ್ಟಿಯಲ್ಲಿ ಇಟ್ಟಿಗೆ ಹೊತ್ತಿದ್ದಾರೆ. ಮತ್ತೊಂದು ಮೂರು ಭಾವಚಿತ್ರದಲ್ಲಿ ಪೂಜ್ಯ ಅಪ್ಪಾಜಿಯವರು ಕಾಂಕ್ರೀಟ್ನ್ನು ಬುಟ್ಟಿಯಲ್ಲಿ ತುಂಬುತ್ತಿದ್ದಾರೆ. ನಾವು ಇಂದು ಬೆಂಗಳೂರಿನಲ್ಲಿ ಯಾವ ಕಟ್ಟಡದಲ್ಲಿ ಕುಳಿತು, ಪ್ರಾರ್ಥನೆ ಮಾಡುತ್ತಿದ್ದೇವೆಯೋ ಆ ಕಟ್ಟಡ ಸಾಮಾನ್ಯವಾದುದಲ್ಲ. ಅದರಲ್ಲಿ ಬಸವ ಧರ್ಮದ ತ್ರೈರತ್ನಗಳಾದ ಪೂಜ್ಯ ಅಪ್ಪಾಜಿ, ಪೂಜ್ಯ ಮಾತಾಜಿ, ಹಾಗೂ ಪೂಜ್ಯ ಗಂಗಾ ಮಾತಾಜಿಯವರ ಬೆವರಿನ ಹನಿಗಳು ಸೇರಿಕೊಂಡಿವೆ. ಅವರ ದಿವ್ಯ ಶರೀರದ ಪರಿಶ್ರಮದಿಂದ ಈ ಬಸವ ಮಂಟಪ ನಿರ್ಮಾಣವಾಗಿದೆ. ಬಸವ ಮಂಟಪ ಕಟ್ಟುವಾಗ ಮಾತಾಜಿಯವರು ಕಲ್ಲು, ಇಟ್ಟಿಗೆ ಕಾಂಕ್ರಿಟ್ನ್ನು ತಲೆಯ ಮೇಲೆ ಹೊತ್ತಿದ್ದಾರೆ ಎಂದು ಅರಿತಾಗ ನನ್ನ ಶರೀರದಲ್ಲಿ ಕಂಪನವಾಯಿತು. ಈ ಚಿತ್ರಗಳನ್ನು ನೋಡಿದಾಗ

ಆಳಾಗ ಬಲ್ಲವನು ಆಳುವನು ಅರಸಾಗಿ|
ಆಳಾಗಿ ಬಾಳಲರಿಯದವನು | ಕಡೆಯಲ್ಲಿ
ಹಾಳಾಗಿ ಹೋಹ ಸರ್ವಜ್ಞ||
ಎನ್ನುವ ಸರ್ವಜ್ಞನ ವಾಣಿಗೆ ಪ್ರತ್ಯಕ್ಷ ಸಾಕ್ಷಿ ಇದ್ದಂತೆ ಇದೆಯಲ್ಲವೇ?

ಅಂದು ಲಿಂಗಾಯತ ಧರ್ಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಸವ ಮಂಟಪ ಬೆಂಗಳೂರಿನಲ್ಲಿ ಕಟ್ಟುವಾಗ ಸ್ವತಃ ಪೂಜ್ಯ ಮಾತಾಜಿಯವರು, ಅಪ್ಪಾಜಿಯವರು, ಗಂಗಾ ಮಾತಾಜಿಯವರು ಆಳಿನಂತೆ ಕಟ್ಟಡ ಕಟ್ಟಲಿಕ್ಕೆ ಸಿಮೆಂಟು , ಇಟ್ಟಿಗೆ, ಮಣ್ಣು, ಕಲ್ಲು, ನೀರುಗಳನ್ನು ತಲೆಯ ಮೇಲೆ ಹೊತ್ತು ಕೆಲಸ ಮಾಡಿದ್ದಾರೆ. ಪಕ್ಕದಲ್ಲಿದ್ದ ಬಾಡಿಗೆ ಮನೆಯಲ್ಲಿ ಉಳಿದು ಕಟ್ಟಡ ಕಟ್ಟಲಿಕ್ಕಾಗಿ ಹಗಲೆಲ್ಲಾ ದುಡಿದು ಸಾಯಂಕಾಲ ಪ್ರವಚನ ಮಾಡಿದುದರಿಂದ ಇಂದು ನಮ್ಮಂಥ ಅಸಂಖ್ಯಾತ ಶರಣರ ಹೃದಯ ಸಿಂಹಾಸನದ ಮೇಲೆ ರಾರಾಜಿಸುವ ಅರಸಿಯಾಗಿದ್ದಾರೆ ಪೂಜ್ಯ ಮಾತಾಜಿಯವರು.
ಪೂಜ್ಯ ಮಾತಾಜಿಯವರ ತಾಯಿ ತಂದೆಯರಾದ ಶರಣೆ ಗಂಗಮ್ಮ ತಾಯಿ, ಮತ್ತು ಶರಣ ಡಾ. ಬಸಪ್ಪನವರು ಬೆಂಗಳೂರಿನ ಬಸವ ಮಂಟಪ ನಿವೇಶನದ ದಾಸೋಹಿಗಳು. ಆಗರ್ಭ ಶ್ರೀಮಂತ ಮನೆತನದವರು ಪೂಜ್ಯ ಮಾತಾಜಿಯವರು. ಅವರ ತಂದೆಯವರಾದ ಲಿಂ. ಡಾ. ಬಸಪ್ಪನವರು ಈ ಬಸವ ಮಂಟಪದ ನಿವೇಶನದಲ್ಲಿ ನರ್ಸಿಂಗ್ ಹೋಮ್ (ಆಸ್ಪತ್ರೆ) ಕಟ್ಟಿಸಬೇಕು, ತಮ್ಮ ಮಗಳನ್ನು ವೈದ್ಯರನ್ನಾಗಿ ಮಾಡಿ ಈ ನರ್ಸಿಂಗ್ ಹೋಮ್ ಅವರಿಗೆ ವಹಿಸಿಕೊಡಬೇಕು ಎನ್ನುವ ಸಂಕಲ್ಪದಿಂದ ಖರೀದಿಸಿದ್ದರು. ಅವರ ಸಂಕಲ್ಪದಂತೆ ಆ ನಿವೇಶನದಲ್ಲಿ ಆಸ್ಪತ್ರೆಯಾಗಲಿಲ್ಲ, ಅವರ ಮಗಳು ವೈದ್ಯರಾಗಲಿಲ್ಲ. ಆದರೇನಂತೆ? ಅದಕ್ಕೂ ಮಿಗಿಲಾದ ಭವರೋಗ ವೈದ್ಯರಾಗಿದ್ದಾರೆ ಜೀವನದಲ್ಲಿ ನೊಂದವರ ಬೆಂದವರ ಅನೇಕ ಜೀವಗಳನ್ನು ಉಳಿಸಿದ್ದಾರೆ, ಆತ್ಮ ಹತ್ಯೆ ಮಾಡಿಕೊಳ್ಳಬೇಕು ಎಂದು ಮನೆಯಲ್ಲಿ ವಿಷ ತಂದಿಟ್ಟು ಒಂದೇ ಒಂದು ಪ್ರವಚನ ಕೇಳಿ ಸಾಯೋಣ ಎಂದು ಬಂದವರು ಪ್ರವಚನ ಕೇಳಿ, ಹೊಸ ಮನುಷ್ಯರಾಗಿ ಪುನರ್ಜನ್ಮ ಪಡೆದಂತೆ ಇಂದು ಅನೇಕರು ಜೀವನದಲ್ಲಿ ಮತ್ತೆ ಎದ್ದು ನಿಂತ ಅನೇಕ ಘಟನೆಗಳಿವೆ. ಇಲ್ಲಿ ನರ್ಸಿಂಗ್ ಹೋಮ್ ಆಗುವ ಬದಲಿಗೆ, ಬಸವ ಮಂಟಪವಾಯಿತು. ವಿಶ್ವ ಕಲ್ಯಾಣ ಮಿಷನ್ ಎನ್ನುವ ಸಂಸ್ಥೆಯಾಯಿತು. ಇದರ ಮೂಲಕ ಅನೇಕ ಗ್ರಂಥಗಳು ಎನ್ನುವ ಔಷಧಿಗಳು ಜನಮನಕ್ಕೆ ದೊರೆತು, ಅಂತಃಸತ್ವವನ್ನು ಗಳಿಸಿಕೊಂಡು ಮತ್ತೆ ಲಿಂಗಾಯತ ಧರ್ಮ ತಲೆ ಎತ್ತಿ ನಿಲ್ಲಲು ಸಾಧ್ಯವಾಯಿತು.

ಪೂಜ್ಯ ಮಾತಾಜಿಯವರ ತಂದೆಯವರಾದ ಶರಣ. ಲಿಂ. ಡಾ. ಬಸಪ್ಪನವರ ಸಂಕಲ್ಪವೂ ಹುಸಿಯಾಗಲಿಲ್ಲ; ಅವರು ಕಲ್ಪಿಸಿ ಕೊಂಡಿರುವುದಕ್ಕಿಂತ ಹೆಚ್ಚಿನ ಜನಸೇವೆ ಬಸವ ಮಂಟಪದಿಂದ ಆಗಿದೆ ಎನ್ನುವುದರಲ್ಲಿ ಸಂದೇಹವೇನಿಲ್ಲ. ಆದರೆ ಅವರ ನಿಜ ಸಂಕಲ್ಪದಂತೆ ಬಸವ ಮಂಟಪದ ಪಕ್ಕದಲ್ಲಿಯೇ ಇಂದು ಸಿಟಿ ಆಸ್ಪತ್ರೆ ಎನ್ನುವ ಬೃಹತ್ತಾದ ಆಸ್ಪತ್ರೆಯಾಗಿರುವುದು, ಮಹಾತ್ಮರ ಸಂಕಲ್ಪಗಳು ಹುಸಿಯಾಗುವುದಿಲ್ಲ ಎನ್ನುವುದಕ್ಕೆ ಜೀವಂತ ಉದಾಹರಣೆ ಆಗಿದೆ!

ಸಚ್ಚಿದಾನಂದ ಸ್ವರೂಪವಾದ, ನಿತ್ಯ ನಿರಂಜನ ಪರಂಜ್ಯೋತಿ, ನಿತ್ಯ ನಿಜವನ್ನೊಳಕೊಂಡ, ಅರಿವಿನ ಬೆಳಗನುಟ್ಟು ನಿಂದ ನಿರಂಜನ ಜಂಗಮ ಪೂಜ್ಯ ಮಾತಾಜಿಯವರ ಹುಟ್ಟುಹಬ್ಬ ಮಾರ್ಚ 13ರಂದು ಬಂದಿದೆ. ಎನ್ನ ಅನುಭಾವದ ಗಮ್ಯ, ಎನ್ನರುಹಿನ ವಿಶ್ರಾಮ ಎನ್ನ ಭಾವದ ಬಯಕೆ ಎನ್ನ ನಿಜದ ನಿಲುವಾದ ಪೂಜ್ಯ ಮಾತಾಜಿಯವರು, ತ್ಯಾಗಾಂಗದ ಮೇಲೆ ನಿಂದು, ಭೋಗಾಂಗದ ಮೇಲೇರಿ ಯೋಗಾಂಗದ ಮೇಲೆ ಸ್ಥಿರಗೊಂಡು, ಕೋಟಿ ಜನರ ಮುಕ್ತಿಗಾಗಿ ತಾನೆ ಆದಿ ಶಕ್ತಿಯಾಗಿದ್ದಾರೆ.

ಭವ ಭವದಲ್ಲಿ ಭಕ್ತನಾದರೆ ಆ ಭವವೇ ಲೇಸು ಕಂಡಯ್ಯ.
ಎಂದೆಂದೂ ನಾನಿದನೇ ಬಯಸುವೆ ತಂದೆ ಕರುಣಿಸಯ್ಯ ಕೂಡಲಸಂಗಮದೇವಾ.

ಎನ್ನುವ ಗುರು ಬಸವಣ್ಣನವರ ವಾಣಿಯಂತೆ ಮಾತಾಜಿಯವರು ಅನೇಕ ಬಾರಿ ತಮ್ಮ ಪ್ರವಚನಗಳಲ್ಲಿ “ನನಗೆ ಮುಕ್ತಿ ಬೇಡ ಆರಂಭದಲ್ಲಿ ಮುಕ್ತಿಯ ಆಸೆಯಿಂದ ಅಧ್ಯಾತ್ಮ ಜೀವನಕ್ಕೆ ಬಂದರೂ ಬಸವ ತತ್ವವನ್ನು ಅಧ್ಯಯನ ಮಾಡಿದ ಮೇಲೆ ಮುಕ್ತಿ ಸಪ್ಪೆ ಅನಿಸ್ತಿದೆ” ಎಂದು ಅನೇಕ ಬಾರಿ ಹೇಳುತ್ತದ್ದರು. “ಮತ್ತೆ ಮತ್ತೆ ನನಗೆ ಜನ್ಮ ಕೊಟ್ಟು ನಿನ್ನ ಸೇವೆಯನ್ನು ಮಾಡಿಸಿಕೊ” ಎಂದು ಗುರು ಬಸವಣ್ಣನವರಲ್ಲಿ ಮೊರೆಯಿಡುತ್ತಿದ್ದರು.

ಅವರು ತಮ್ಮ ಜೀವನದುದ್ದಕ್ಕೂ ಹೋರಾಟವನ್ನೇ ಮಾಡಿಕೊಂಡು ಬಂದರು. ಜೀವನದ ಕೊನೆ ಕ್ಷಣದವರಿಗೂ ಸಾವಿನೊಡನೆ ಹೋರಾಡಿದರು. ಮಾಡಿರುವ ಕೆಲಸ ಅಲ್ಪ ಮಾಡಬೇಕಾದುದು ಇನ್ನು ಬಹಾಳಷ್ಟಿದೆ ಎಂದು ತಮ್ಮ ಪ್ರತಿ ಹುಟ್ಟು ಹಬ್ಬದಂದು ಹೇಳುತ್ತಿದ್ದರು. ದೇಹ ತುಂಬಾ ದಣಿವುಗೊಂಡು ಮುಪ್ಪಾಗಿತ್ತು. ಹೀಗಾಗಿ ಆತ್ಮ ಚೈತನ್ಯ ಹಾರಿ ಹೋಯಿತು. ಅವರ ಹಂಬಲದಂತೆ ಖಂಡಿತ ಅವರಿಗೆ ಮರು ಜನ್ಮ ದೊರೆತು ಮತ್ತೆ ಗುರು ಬಸವಣ್ಣನವರ ಸೇವೆ ಮಾಡುತ್ತಾರೆ ಎನ್ನುವ ಭರವಸೆ ಮತ್ತು ಹಂಬಲ ನನಗಿದೆ.

ಲಿಂಗಾಯತ ಧರ್ಮದಲ್ಲಿ ಸಾವಿಗೆ ಯಾರು ಭಯ ಪಡುವುದಿಲ್ಲ. ಸಾವೆಂದರೆ ಸೂತಕವೂ ಅಲ್ಲ ದುಃಖದ ಸನ್ನಿವೇಶವೂ ಅಲ್ಲ. ಅದು ಜೀವನದ ಕೊನೆಯ ಸಂಭ್ರಮ. ಆದರೆ ಅಂದು ಪರಮ ಪೂಜ್ಯ ಲಿಂಗಾನಂದ ಗುರುದೇವರ ಲಿಂಗೈಕ್ಯ ಕಳೆದ ವರ್ಷ ಮಾತಾಜಿಯವರ ಲಿಂಗೈಕ್ಯ ಮಾತ್ರ ನಮಗೆ ಸಂಭ್ರಮ ಅಂತ ಅನಿಸ್ತಾನೆ ಇಲ್ಲ. ಅಂದು ಲಿಂಗಾನಂದ ಗುರುದೇವರು ನಗುನಗುತ್ತ ಸಂಭ್ರಮದಿಂದಲೇ ಲಿಂಗೈಕ್ಯರಾದರು ಅದರೆ ನಮಗೆ ಇಂದಿಗೂ ಆ ದಿನ ಸಂಭ್ರಮದ ದಿನ ಅಂತ ಅನಿಸಲೇ ಇಲ್ಲ. ಸ್ವತಃ ಮಾತಾಜಿಯವರಿಗೂ ಲಿಂಗೈಕ್ಯ ಆಗಲಿಕ್ಕೆ ಇಷ್ಟ ಇರಲಿಲ್ಲ ಅದಕ್ಕೆ ಅವರು ೨ ವರ್ಷದಿಂದ ಸಾವಿನೊಂದಿಗೆ ಸೆಣಸುತ್ತಲೇ ಬಂದಿದ್ದಾರೆ. ಆದರೆ ಸಾವಿನ ಶಕ್ತಿ ಹಿರಿದಾಗಿ ಅವರ ಶಕ್ತಿ ಶೂನ್ಯವಾಗಿ ಶೂನ್ಯದಲ್ಲಿಯೇ ಬಯಲಾಗಿದ್ದಾರೆ.

ಪೂಜ್ಯರ 73ವರ್ಷಗಳ ಜೀವನದಲ್ಲಿ 54ವರ್ಷಗಳು ಧರ್ಮಕ್ಕಾಗಿ ಸವೆದಿವೆ. ತಮ್ಮ 19ನೆಯ ವಯಸ್ಸಿನಲ್ಲಿಯೇ ಜಂಗಮ ದೀಕ್ಷೆ ಪಡೆದ ಮಾತಾಜಿಯವರ ಒಂದೊಂದು ಸಾಧನೆಯೂ ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ಮೈಲಿಗಲ್ಲಾಗಿ ನಿಲ್ಲುತ್ತದೆ. ಅವರು ಬರೆದ ಒಂದೊಂದು ಗ್ರಂಥವು ಲಿಂಗಾಯತ ಧರ್ಮದ ಪುನರುತ್ಥಾನದಲ್ಲಿ ದಾರಿ ದೀಪಗಳಾಗುತ್ತವೆ.

ಪೂಜ್ಯ ಮಾತಾಜಿಯವರು ಸಾಮಾನ್ಯರಲ್ಲ, ಅವರು ಮಹಾತ್ಮರು. ಅವರನ್ನು ಮಹಾತ್ಮ ಬುದ್ಧರೊಂದಿಗೆ ಹೋಲಿಸಬಹುದು. ಬುದ್ಧ , ರಾಜಕುಮಾರ ಸಿದ್ಧಾರ್ಥನಾಗಿದ್ದಾಗ ಕೇವಲ ಒಬ್ಬನೇ ರೋಗಿ, ಒಬ್ಬನೇ ಮುದುಕ, ಒಂದೇ ಶವವನ್ನು ನೋಡಿದ. ಜೀವನ ನಶ್ವರವೆಂದು ತಿಳಿದು, ಸತ್ಯದ ಮಾರ್ಗ ಕಂಡುಕೊಳ್ಳಲಿಕ್ಕೆ ಅರಮನೆಯನ್ನು ತೊರೆದ. ತಪಸ್ಸು ಮಾಡಿ ಪರಮಾತ್ಮನ ಸಾಕ್ಷಾತ್ಕಾರ ಪಡೆದು ಬುದ್ಧನಾದ. ನಾವು ದಿನ ನಿತ್ಯವೂ ನೂರಾರು ರೋಗಿಗಳನ್ನು ಸಾವಿರಾರು ಮುದುಕರನ್ನು ಹಲವಾರು ಶವಗಳನ್ನು ನೋಡಿದರೂ, ನಮ್ಮಲ್ಲಿ ಬದಲಾವಣೆ ಬರುತ್ತಿಲ್ಲ. ಅದೇ ರೀತಿ ಪೂಜ್ಯ ಮಾತಾಜಿಯವರು ಪೂಜ್ಯ ಲಿಂಗಾನಂದ ಅಪ್ಪಾಜಿಯವರ ಒಂದೇ ಒಂದು ಪ್ರವಚನ ಕೇಳಿ ಪರಿವರ್ತಿತರಾಗಿ ಇಂಥ ಅಮೂಲ್ಯ ಧರ್ಮವನ್ನು ಒಂದೇ ಪ್ರವಚನದಿಂದ ಅರ್ಥ ಮಾಡಿಕೊಂಡು ತಮ್ಮ ಜೀವನವನ್ನು ಬಸವ ತತ್ವಕ್ಕಾಗಿ ಮುಡುಪಾಗಿಟ್ಟರು. ಪೂಜ್ಯ ಮಾತಾಜಿಯವರು ಯಾವ ರಾಜಕುಮಾರಿಗಿಂತಲೂ ಕಡಿಮೆ ಇರಲಿಲ್ಲ, ಅಗರ್ಭ ಶ್ರೀಮಂತ ಮನೆತನದವರು, ನೂರಾರು ಎಕರೆ ತೋಟ, ಗದ್ದೆ, ಅವರೇ ಹೇಳುವಂತೆ, ಅವರು ಕಾಲೇಜು ಓದುವಾಗ ಅವರ ಮೈಮೇಲೆ 350 ಗ್ರಾಂಗಿಂತ ಹೆಚ್ಚು ಬಂಗಾರವಿತ್ತಂತೆ, ಪ್ರವಚನ ಕೇಳಿದ ನಂತರ ಸರಳ ಜೀವನಕ್ಕೆ ಒಲಿದು, ಇಂದು ನಮ್ಮೆಲ್ಲರ ಗುರು, ಬಸವ ಧರ್ಮ ಪೀಠದ ಮಹಾಜಗದ್ಗುರುವಾಗಿದ್ದಾರೆ. ಮಾತಾಜಿಯವರಿಗಿಂತ ಮೊದಲು ಅನೇಕರು ಅನೇಕ ಸಲ ಅಪ್ಪಾಜಿಯವರ ಪ್ರವಚನ ಕೇಳಿದರೂ ಅವರಲ್ಲಿ ವೈರಾಗ್ಯ ಬರಲಿಲ್ಲ. ನಾವು ಇಂದು ಮಾತಾಜಿಯವರ ನೂರಾರು ಪ್ರವಚನ ಕೇಳಿದ ಮೇಲೂ, ನಮ್ಮಲ್ಲಿ ಇನ್ನೂ ಅವರಷ್ಟು ಕಳಕಳಿ, ತ್ಯಾಗ ಮನೋಭಾವನೆ ಬರುತ್ತಿಲ್ಲ! ಇದೇ ಮಹಾತ್ಮರಿಗೂ ಸಾಮಾನ್ಯರಿಗೂ ಇರುವ ವ್ಯತ್ಯಾಸ.

ಈ ನಿಸರ್ಗದಲ್ಲಿ, ಲಿಂಗದೇವನ ರಾಜತೇಜದಲ್ಲಿ ಒಂದು ನಿಯಮವಿದೆ. ಈ ಲೋಕದ ಉದ್ಧಾರಕ್ಕಾಗಿ ಮಹಾತ್ಮರು ಲಿಂಗದೇವನ ವಿಶೇಷ ಕಾರುಣ್ಯವನ್ನು ಹೊತ್ತು ಪೂರ್ಣಾವತಾರಿಗಳಾಗಿ ಮತ್ರ್ಯಲೋಕದಲ್ಲಿ ಹುಟ್ಟುತ್ತಾರೆ. ಆ ಮಹಾತ್ಮರು ಬಂದ ಮಣಿಹವನ್ನು ಪೂರೈಸಲು ಇನ್ನು ಅನೇಕರು ಅಂಶಾವತಾರಿಗಳಾಗಿ ಹುಟ್ಟಿ ಬರುತ್ತಾರೆ. 12ನೆಯ ಶತಮಾನದಲ್ಲಿ ಗುರುಬಸವಣ್ಣನವರು ದೇವನ ಕರುಣೆಯನ್ನು ಧರಿಸಿಕೊಂಡು ಪೂರ್ಣಾವತಾರಿಗಳಾಗಿ ಇಳೆಗೆ ಬಂದರು. ಅವರು ಬಂದ ಬಳಲಿಕೆಯ ಕಳೆಯಲು ಚನ್ನಬಸವಣ್ಣನವರು, ಅಲ್ಲಮ ಪ್ರಭುದೇವರು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವರು ಬಂದು ಗುರುಬಸವಣ್ಣನವರು ಕೈಗೊಂಡ ಕಾರ್ಯದಲ್ಲಿ ಹೆಗಲುಕೊಟ್ಟು ಆ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದನ್ನು ಕಾಣುತ್ತೇವೆ.

ಅದೇ ರೀತಿ ಪೂಜ್ಯ ಅಪ್ಪಾಜಿಯವರು ಗುರುಬಸವಣ್ಣನವರಿಂದ ಅನುಗ್ರಹಗೊಂಡು, ಬಸವ ತತ್ವದ, ಲಿಂಗಾಯತ ಧರ್ಮದ ಪುನರುತ್ಥಾನ ಕಾರ್ಯ ಕೈಗೊಂಡಾಗ ಅಕ್ಕಮಹಾದೇವಿ ತಾಯಿಯವರ ಅನುಗ್ರಹ ಪಡೆದು ಪೂಜ್ಯ ಮಾತಾಜಿಯವರು, ಅಪ್ಪಾಜಿಯವರು ಬಂದ ಕಾರ್ಯಕ್ಕೆ ನೆರವಾದರು. ಅವರ ಬಳಲಿಕೆಯನ್ನು ತೊಡೆದು ಹಾಕಿದರು. ಇದನ್ನು ನೋಡಿದಾಗ ಅಪ್ಪಾಜಿಯವರು ಅವತಾರಿಯಾಗಿ ಬಂದು ಕಾರ್ಯ ಮಾಡುತ್ತಿರುವಾಗ ಅಂಶಾವತಾರಿಗಳಾಗಿ ಪೂಜ್ಯ ಮಾತಾಜಿ, ಪೂಜ್ಯ ಗಂಗಾ ಮಾತಾಜಿ ಹಾಗೂ ಇನ್ನುಳಿದ ಅನೇಕ ಜಂಗಮರು ಬಂದು ಈ ಕಾರ್ಯದಲ್ಲಿ ಕೈಗೂಡಿಸಿರುವುದನ್ನು ನೋಡಿದಾಗ ಪೂಜ್ಯ ಮಾತಾಜಿಯವರು ಖಂಡಿತವಾಗಿಯೂ ಆದಿ ಶರಣರ ಸಂಕಲ್ಪದಂತೆಯೇ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಪೋಲಿಯೋ ಒಂದು ಭಯಾನಕ ರೋಗ. ಅದನ್ನು ಮನುಕುಲದಿಂದ ಹೊಡೆದೋಡಿಸಲು ಜಾನ್.ಇ.ಸಾಲ್ಕ್ ಎನ್ನುವ ವಿಜ್ಞಾನಿ ಲಸಿಕೆಯನ್ನು ಕಂಡು ಹಿಡಿದ. ಆ ವಿಜ್ಞಾನಿ ಕೇವಲ ಲಸಿಕೆಯನ್ನು ಕಂಡು ಹಿಡಿದ ಮಾತ್ರಕ್ಕೆ ಪೋಲಿಯೋ ರೋಗ ನಿವಾರಣೆಯಾಗಲು ಸಾಧ್ಯವಿದೆಯೇ? ಇಲ್ಲ. ಮೊನ್ನೆ ಲಕ್ಷ ಲಕ್ಷ ವೈದ್ಯಕೀಯ ಕಾರ್ಯಕರ್ತರು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಪ್ರತಿಯೊಂದು ಓಣಿ ಓಣಿಯಲ್ಲೂ ಒಂದು ಶಿಬಿರ ಮಾಡಿಕೊಂಡು ಎಲ್ಲಾ ಮಕ್ಕಳಿಗೂ ಪೋ ಲಿಯೋ ಲಸಿಕೆಯನ್ನು ಹಾಕಿದರು. ಸರಕಾರ ಇದಕ್ಕಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ವರ್ಷದಲ್ಲಿ ಎರಡು-ಮೂರು ಬಾರಿ ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಮಾಡುವ ಮುಖಾಂತರ ಲಸಿಕೆ ಹಾಕುವ ಕಾರ್ಯಕ್ರಮ ನಡೆಸುತ್ತದೆ. ಇದರಿಂದ ಮನುಕುಲದಲ್ಲಿ ಈ ರೋಗ ನಿವಾರಣೆಯಾಗುತ್ತಿದೆ.

ಅದೇ ರೀತಿ ಗುರು ಮಾತಾಜಿಯವರೆನ್ನುವ ವಿಜ್ಞಾನಿ ನಮ್ಮ ಪರಮಗುರು ಬಸವಣ್ಣನವರೆಂಬ ಮಹಾವಿಜ್ಞಾನಿ ಕೊಟ್ಟ ಲಿಂಗಾಯತ ಧರ್ಮ ಎನ್ನುವ ಎನ್ನುವ ಲಸಿಕೆ ಕಂಡು ಹಿಡಿದರು. ಮನುಕುಲದ ಮನಸ್ಸಿಗೆ ಅಂಟಿರುವ ಜಾತೀಯತೆ, ಮೂಢನಂಬಿಕೆ, ದ್ವೇಷ, ಅಸೂಯೆಗಳೆಂಬ ರೋಗಗಳು ಲಿಂಗಾಯತ ಧರ್ಮ ಎನ್ನುವ ಲಸಿಕೆ ಹಾಕುವುದರ ಮೂಲಕ ನಿವಾರಣೆಯಾಗುತ್ತವೆ. ಇದಕ್ಕಾಗಿ ನಾವು ಬಸವ ಭಕ್ತರು ಸಾವಿರ ಸಾವಿರ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಧರ್ಮ ಪ್ರಚಾರಕ್ಕಾಗಿ ಮುಂದೆ ಬರಬೇಕು, ಪ್ರತಿಯೊಂದು ಮನೆ ಮನೆಯಲ್ಲಿರುವ ಮನಗಳಿಗೂ ಈ ಧರ್ಮದ ಲಸಿಕೆಯನ್ನು ನಾವು ಹಾಕಬೇಕು. ಅಂದಾಗ ಮಾತ್ರ ಮನುಕುಲದ ಈ ಮಾನಸಿಕ ರೋಗ ಹೋಗಿ ಈ ಭೂಮಿಯ ಮೇಲೆ ಶಾಂತಿ ನೆಮ್ಮದಿಗಳು ನೆಲೆಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಬನ್ನಿ ಧರ್ಮ ಬಾಂಧವರೆ ತತ್ವಕ್ಕಾಗಿ ನಾವು ಕೂಡ ದುಡಿಯೋಣ. ಕರ್ತಾರನ ಕಮ್ಮಟವಾದ ಈ ಮತ್ರ್ಯಲೋಕವನ್ನು ಸುಂದರಗೊಳಿಸೋಣ.
ತಮ್ಮ ಜೀವನದ ಸಾರ್ಥಕವಾದ 73ವರ್ಷಗಳನ್ನು ಪೂರೈಸಿದ ಮಾತಾಜಿಯವರು ನೊಂದವರ ನಂದಾದೀಪ, ಬಡವರ ಬಂಧು,ಶೋಷಿತರ ಸಂಜೀವಿನಿ, ಸ್ತ್ರೀಕುಲದ ಭಾಗ್ಯದೇವತೆ, ಆಳವಾದ ಅಧ್ಯಯನ ಮಾಡಿದ ವಿದ್ವಾಂಸರು ಮತ್ತು ವಿದ್ವಜ್ಜನ ಪ್ರಶಂಸಿತರು, ಅಪೂರ್ವ ವಾಗ್ಮಿಗಳು, ಕ್ರಾಂತಿಕಾರಿ ಬರವಣಿಗೆಯುಳ್ಳ ಲೇಖಕಿ, ನಡೆವ ಗ್ರಂಥಾಲಯ, ನುಡಿವ ಬಸವ ಪ್ರಕಾಶ, ಶಾರೀರಿಕ ತಪ, ವಾಙ್ಮಯ ತಪ ಮತ್ತು ಮಾನಸಿಕ ತಪವೆಂಬ ಮೂರು ಬಗೆಯ ತಪಗೈದ ಉನ್ನತ ತಪಸ್ವಿಗಳು ಸಾಹಿತ್ಯ ಗಂಗೋತ್ರಿ, ವಚನ ಸಾಹಿತ್ಯ ವಿಶಾರದೆ, ಧರ್ಮಕ್ರಾಂತಿಯ ದಿವ್ಯಜ್ಯೋತಿ, ಅಭಿನವ ಅಕ್ಕಮಹಾದೇವಿ, ಪ್ರಥಮ ಮಹಿಳಾ ಜಗದ್ಗುರು ಬಂಗಾರ ಕಿರೀಟ ಬಯಸದ ಜನಪ್ರಿಯತೆಯ ಕಿರೀಟ ಧಾರಿಣಿ, ಚಿನ್ಮೂಲಾದ್ರಿಯ ಚಿತ್ಕಳೆ, ಎಲ್ಲಕ್ಕೂ ಮಿಗಿಲಾಗಿ ಲಿಂಗಾಯತ ಧರ್ಮ ಪುನರುತ್ಥಾರಕರು ಮತ್ತು ವಿಶ್ವ ಧರ್ಮ ಪ್ರವಚನಕಾರರ ನಿರ್ಮಾಪಕರು.

ಇಂಥಹ ಮಹಾಗುರು ಮಾತಾಜಿಯವರು 73 ವರ್ಷ ಪೂರೈಸಿ74ನೇ ವರ್ಷಕ್ಕೆ ಪಾದಾರ್ಪಣೆ ಮಾಡಿ ಒಂದು ದಿನವೂ ಉಳಿಯಲಿಲ್ಲ. ತಮ್ಮ ಪ್ರವಚನದಲ್ಲಿ Date of Birth ಯಾವಾಗಲೂ Date of Deathನ್ನು ತನ್ನ ಹಿಂದೆಯೇ ಕಟ್ಟಿಕೊಂಡು ಬರುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದರು. ಅದೇ ರೀತಿ 1946ರ ಮಾರ್ಚ 13ರಂದು ಜನಿಸಿ 2019ರ ಮಾರ್ಚ 14ರಂದು ಲಿಂಗೈಕ್ಯರಾಗಿರುವುದು ಒಂದು ವೈಶಿಷ್ಟ್ಯವೇ ಸರಿ.

ಇಂದು ಇಂಥಹ ಮಹಾ ಗುರು ಮಾತಾಜಿಯವರ 75ನೇ ಜನ್ಮದಿನ ನಾಳೆ ಅವರ ಎರಡನೆಯ ಲಿಂಗೈಕ್ಯ ಸಂಸ್ಮರಣೆ. ಇಂಥ ಗುರುವನ್ನು ಜಗತ್ತಿಗೆ ನೀಡಿದ ಲಿಂಗದೇವನಿಗೆ ಶರಣೆಂದು ಮಾತಾಜಿಯವರನ್ನು ಸ್ಮರಿಸೋಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!