ಶರಣ ಚಂದ್ರಗೌಡ ಪಾಟೀಲ. ಹಿರಿಯ ಪತ್ರಕರ್ತರು,
ಚನ್ನಮ್ಮನ ಕಿತ್ತೂರು : ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿದ್ದು ಉತ್ತರ ಭಾರತದಲ್ಲೂ ಗಟ್ಟಿ ಛಾಪು ಮೂಡಿಸಿದ ಪಾಟೀಲ ಪುಟ್ಟಪ್ಪ ನಿಧನದಿಂದ ಕರ್ನಾಟಕ ಎಲ್ಲ ರಂಗ ಬಡವಾಗಿದೆ.
ಕರ್ನಾಟಕ ಮೂಲೆ ಮೂಲೆಗೂ ಸುತ್ತಿ ಅಲ್ಲಿಯ ಹೋರಾಟಗಳಲ್ಲೂ ಭಾಗವಹಿಸಿ ಬೆಂಬಲ ನೀಡುತಿದ್ದರು.
ಕಿತ್ತೂರು ತಾಲೂಕು ರಚಿಸಬೇಕೆಂದು ನಾಲ್ಕು ದಶಕದಿಂದ ಒತ್ತಾಸೆ ನಡೆದಿತ್ತು. ಮುಂದುವರೆದು 2003ರಲ್ಲಿ ಹೋರಾಟ ಮಾಡಲು ಯುವಕರು ಹಿರಿಯರು ಕೂಡಿ ಸ್ಥಳೀಯವಾಗಿ ಹೋರಾಟ ಸಮಿತಿ ರಚಿಸಲಾಯಿತು. ಅದರಡಿ ರಾಷ್ಟ್ರೀಯ ಹೆದ್ದಾರಿ ಹತ್ತಿರ ಮಹಾರಾಣಿ ಪಕ್ಕದಲ್ಲಿ ನಿತ್ಯ ಹೋರಾಟ ಪ್ರಾರಂಭವಾಗಿತ್ತು.
ಆಗ ಒಂದಿನ ಪಾಪು ಇಲ್ಲಿ ಬಂದರು.ನಾನಿದ್ದೀನಿ ಬಿಡಿ ತಾಲೂಕ ಆಗುತ್ತದೆ. ನಾನಿರುವಾಗ ನೀವೆಲ್ಲ ಏಕೆ ಹೋರಾಟ ಮಾಡಬೇಕು ಅಂದರು.ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಮಂತ್ರಿ ನನ್ನ ಬಾಜು ಕುಳಿತಿರುತ್ತಾರೆ ಹೇಳುತ್ತೇನೆ ಎಂದರು.
ಆಗ ಬೆಳಗಾವಿಯಲ್ಲಿ 70ನೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷರು ಆಗಿ ಪಾಪು ಆಯ್ಕೆಯಾಗಿದ್ದರು. ಉದ್ಘಾಟನೆ ಮಾಡಲು ಅಂದಿನ ಮುಖ್ಯ ಮಂತ್ರಿ ಎಸ್ ಎಮ್ ಕೃಷ್ಣ ಬೆಳಗಾವಿಗೆ ಬಂದಿದ್ದರು. ಹೋರಾಟ ಸಮಿತಿಯವರು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮು. ಮ. ಭೆಟ್ಟಿಯಾಗಿ ಸಮ್ಮೇಳನದಲ್ಲಿ ತಾಲೂಕ ಘೋಷಿಸಲು ವಿನಂತಿಸಲಾಯಿತು.
ಆದರೂ ಎಸ್ ಎಮ್ ಕೆ ಸಮ್ಮೇಳನದಲ್ಲಿ ಭಾಷಣ ಮಾಡುವಾಗ ಕಿತ್ತೂರು ತಾಲೂಕ ಬಗ್ಗೆ ಚಕಾರ ಎತ್ತಲಿಲ್ಲ. ಭಾಷಣ ಮುಗಿಸಿ ಬಂದು ಪಾಪು ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕೂಡ್ರುವ ಮೊದಲೇ ಪಾಪು ಎಚ್ಚರಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಿದವರಲ್ಲಿ ಕಾಲು ಭಾಗ ಜನ ಕಿತ್ತೂರಿಂದ ಬಂದಿದ್ದಾರೆ. ಅವರೆಲ್ಲ ಗಲಾಟೆ ಮಾಡುತ್ತಾರೆ. ಬೇಗ ಕಿತ್ತೂರು ಚೆನ್ನಮ್ಮಾ ತಾಲೂಕ ರಚಿಸುವುದಾಗಿ ಹೇಳಿ ಎಂದು ಘರ್ಜಿಸಿದರು. ಗತಿ ಇಲ್ಲದ ಕೃಷ್ಣ ಪುನ್ಹ ಮೈಕ್ ಮುಂದೆ ಬಂದು ಸದ್ಯದಲ್ಲಿ ಮಹಾರಾಣಿ ಚನ್ನಮ್ಮಾಜಿ ವಿಶೇಷ ತಾಲೂಕ ರಚಿಸಿ ಕಿತ್ತೂರು ಕೇಂದ್ರವಾಗಿಸುವುದಾಗಿ ಘೋಷಿಸಿದರು.
ಇನ್ನೊಂದು ಘಟನೆ ಇಲ್ಲಿ ನೆನಪಿಸಬೇಕು ಹುಬ್ಬಳ್ಳಿಯಲ್ಲಿ ನಾಟಕ ಕಂಪನಿ ಬಂದಿತ್ತು. ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ ನಡೆದಿತ್ತು. ಅದರಲ್ಲಿ ಸಂಗೊಳ್ಳಿ ರಾಯಣ್ಣ ಪಾತ್ರವನ್ನು ಹಾಸ್ಯ ಪಾತ್ರವಾಗಿ ಮಾಡಿದ್ದರು.
ಸುದ್ದಿ ತಿಳಿದು ಬಂದ ಮಾಡಿಸಲು ಕಿತ್ತೂರಿಂದ ಅಂದಿನ ಕಲ್ಮಠ ಪೀಠಾಧಿಪತಿಯಾಗಿದ್ದ ಶಿವಬಸ ಸ್ವಾಮಿಗಳು, ಚೆನ್ನಪ್ಪ ಮಾರಿಹಾಳ, ಪ್ರದೀಪ ಮೇಲಿನಮನಿ, ನಾನು ಹೋಗಿದ್ದೆವು. ನಾಟಕ ನೋಡಿ ರಾಯಣ್ಣ ಪಾತ್ರ ಬಂದಾಗ ಪ್ರತಿಭಟಿಸಿದೆವು. ಬಂದ ಮಾಡಲು ಒತ್ತಾಯಿಸಿದೆವು. ರಾಯಣ್ಣ ಚರಿತ್ರೆ ಅರುವಿದೆವು.
ಅಲ್ಲಿಂದ ಹೋಗಿಪ್ರಪಂಚ ಕಚೇರಿಯಲ್ಲಿ ಪಾಪು ಭೇಟಿ ಆದೆವು.
ಪಾಪು ತಕ್ಷಣ ಆ ಕಂಪನಿ ಮಾಲಕನನ್ನು ಕರೆಯಲು ಕಳಿಸಿದರು. ಅವರು ಬಂದ ತಕ್ಷಣ ನಾಟಕದಲ್ಲಿ ರಾಯಣ್ಣ ಪಾತ್ರ ಹೇಗಿರಬೇಕೆಂದು ಹೇಳಿ ಬದಲಿಸಲು ತಿಳಿಸಿದರು.
ಕಿತ್ತೂರಿಗೂ ಪಾಪು ಅವರಿಗೂ ಬಹಳ ಹೋರಾಟ ನಂಟಿದೆ ಉದಾಹರಣೆಗಾಗಿ ಎರಡು ಘಟನೆ ಈ ಸಂದರ್ಭದಲ್ಲಿ ನೆನಪಿಸಿದೆ.
ಪಾಪು ಅವರಿಗೆ 94ವರ್ಷ ಆಗಿದ್ದಾಗ ಕಾಲಿಗೆ ಪೆಟ್ಟು ಮಾಡಿಕೊಂಡು ಮನೆಯಲ್ಲೇ ಇರಬೇಕಾಗಿತ್ತು. ಆಗ ಬೈಲೂರು ನಿಜಗುಣಾನಂದ ಪೂಜ್ಯರು ನಾವು ನೋಡಲು ಹೋಗಿದ್ದೆವು. ಮುಂದೆ ನಡೆಯಲು ಅಸಾಧ್ಯ, ಅವರ ಶ್ರೀಮತಿ ಬಾಜು ಕೊಣೆಯಲ್ಲಿ ಖಾಯಿಲಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಆದರೂ ನಾಡಿನ ಬಗ್ಗೆ ಅದಮ್ಮೆ ಚೈತನ್ಯ. ರಾಜ್ಯದ ಅನೇಕ ಸಮಸ್ಯ ಕುರಿತು ಚರ್ಚಿಸಲು ದೆಹಲಿಗೆ ಹೋಗುವುದಾಗಿ ಹೇಳುತ್ತಿದ್ದರು.
ನೀವು ಬೇಗ ಗುಣಮುಖರಾಗಿ ಶತಾಯುಷಿ ಆಗಿರೆಂದು ಹೇಳಿದ್ದಕ್ಕೆ, ನಿಮ್ಮ ಲೆಕ್ಕಕ್ಕೆ ಇನ್ನು ಕೇವಲ ಆರು ವರ್ಷಕ್ಕೆ ಸಾಯಿರಿ ಎಂದು ಹೇಳುತ್ತಿದ್ದಿರೇನು ಎಂದು ಪ್ರಶ್ನಿಸಿದರು. ಪಾಪು ಮಾನಸಿಕವಾಗಿ ಅಷ್ಟು ಸದೃಢವಾಗಿದ್ದರು.
ರಾಜ್ಯದಲ್ಲಿ ರಾಜ್ಯಸಭಾ, ಲೋಕಸಭಾ, ವಿಧಾನಸಭಾ ಸದಸ್ಯರು ಆಗಿದ್ದವರೆಲ್ಲರೂ ಬೆಂಗಳೂರಲ್ಲಿ ಪ್ಲಾಟ್ ತಗೆದುಕೊಂಡು ಮನೆ ಕಟ್ಟಿದ್ದಾರೆ ಆದರೆ ನಾನು ಮಾತ್ರ ಇಲ್ಲೇ ಇದ್ದೇನೆ. ಬೆಂಗಳೂರಲ್ಲಿ ನನ್ನದು ಒಂದು ಮನೆ ಇದೆ ಆದರೆ ಅಲ್ಲಿ ಉಳಿಯಲು ಬರುಲ್ಲ ಅದಕ್ಕೆ ವಿಧಾನಸೌಧ ಎನ್ನುತ್ತಾರೆ ಎಂದರು.
ಮುಂದುವರೆದು ಮನೆ ಚಿಕ್ಕದಿರಬೇಕು ದೊಡ್ಡದಿದ್ದರೆ ಕಸಗುಡಿಸುವುದು ಕಷ್ಟ. ನಮ್ಮ ಮನೆಯಲ್ಲಿ ನನಗೆ ಒಬ್ಬರು, ಶ್ರೀಮತಿಗೆ ಒಬ್ಬರು ಕೆಲಸಮಾಡುತ್ತಿದ್ದಾರೆ. ಅಡುಗೆ ಮಾಡುವವಳು ಮತ್ತೊಬ್ಬಳು. ರೊಟ್ಟಿ ಮಾಡುವವಳು ಎರಡು ದಿನ ಬಂದಿರಲಿಲ್ಲ. ಇವರಿಗೆ ರೊಟ್ಟಿ ಮಾಡಲು ಹೇಳಿದರೆ ಬೇರೆ ಸಂಬಳ ಕೊಡಬೇಕೆಂದರು ಹೀಗಿದ್ದಾಗ ದೊಡ್ಡ ಮನೆ ಕಟ್ಟುವುದರಿಂದ ಕಷ್ಟ ಹೆಚ್ಚು ಎಂದರು.
ಪಾಪು ನಿಧನ ಸುದ್ದಿ ಬರುತ್ತಿದ್ದಂತೆ ಅವರ ಕುರಿತು ನೆನಪುಗಳು ಪಟಪಟನೆ ಸ್ಮೃತಿ ಪಠಣದಲ್ಲಿ ಸುತ್ತಲು ಹತ್ತಿವೆ.ಹಾಗೆ ಒಂದೆರೆಡು ಹಂಚಿಕೊಂಡಿರುವೆ.