ವಿಜಯಪುರ : ಮಾರಕ ಕೊರೋನಾ ಕಾಯಿಲೆ ಹಿನ್ನಲೆಯಲ್ಲಿ ಇಡೀ ವಿಶ್ವಕ್ಕೆ ಆಪತ್ತು ಎದುರಾಗಿದ್ದು, ಜನತೆ ಸಂಯಮದಿಂದ ವರ್ತಿಸಿ, ತಮ್ಮ ಆರೋಗ್ಯ ರಕ್ಷಿಸಿಕೊಳ್ಳುವ ತುರ್ತು ಈಗ ಇದೆ ಎಂದು ಮಾಜಿ ಗೃಹ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಜಗತ್ತಿನಾದ್ಯಂತ ಹರಿಡಿರುವ ಈ ಮಾರಣಾಂತಿಕ ಕಾಯಿಲೆಯಿಂದ ಇಡೀ ವಿಶ್ವವೇ ನಲುಗಿಹೋಗಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಸುಧಾರಿಸಿದರೂ, ಆರ್ಥಿಕ ಸಂಕಷ್ಟಗಳು ಮುಂದೆವರೆಯಲಿವೆ. ಎರಡನೇಯ ಮಹಾಯುದ್ಧದ ನಂತರದ ಜಗತ್ತು ಇಷ್ಟು ದೊಡ್ಡ ಸವಾಲು ಎದುರಿಸುವಂತಾಗಿದ್ದು, ಈ ಆರ್ಥಿಕ ಸಂಕಷ್ಟದಿಂದ ಮರಳಲು ಕನಿಷ್ಠ ಒಂದು ವರ್ಷ ಸಮಯ ಬೇಕಾಗುತ್ತದೆ.
ವಿಶೇಷವಾಗಿ ಬಡವರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಸ್ಥರು ಈ ಸ್ಥಿತಿಯಲ್ಲಿ ನಲುಗುವಂತಾಗಿದೆ.ಸರ್ಕಾರ ವಿವಿಧ ರಾಜ್ಯಗಳ ಮಾದರಿಯಲ್ಲಿ ಬಡತನ ರೇಖೆಗಳಿಗಿಂತ ಕೆಳಗಿರುವ ಜನರಿಗೆ ಹೆಚ್ಚುವರಿ ಪಡಿತರ ಹಾಗೂ ಅವರಿಗೆ ದಿನಗೂಲಿ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲು ಸರ್ಕಾರ ಕ್ರಮ ಜರುಗಿಸಬೇಕು.
ಈಗ ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವುದು ಪ್ರಥಮ ಆದ್ಯತೆಯಾಗಿದ್ದು, ಜನತೆ ಅತೀ ಹೆಚ್ಚಿನ ಗಮನವನ್ನು ನೀಡಬೇಕು. ಬಿ.ಎಲ್.ಡಿ.ಇ ಸಂಸ್ಥೆಯಿಂದ ಅಗತ್ಯವಿರುವ ಎಲ್ಲ ನೆರವು ನೀಡವುದಾಗಿ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ಎಂ.ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಲ್.ಡಿ.ಇ ಸಂಸ್ಥೆ ಹಾಗೂ ಎಂ.ಬಿ.ಪಾಟೀಲ
ಕೊರೋನಾ ರೋಗವನ್ನು ತಡೆಗಟ್ಟಲು ಕೈಗಳನ್ನು ಸ್ವಚ್ಚಗೊಳಿಸಲು ಬರುವ ಸೈನಿಟೈಸರ್ ಮಾರುಕಟ್ಟೆಯಲ್ಲಿ ಅಲಭ್ಯತೆಯನ್ನು ಗಮನಿಸಿ, ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜು “ಕೊರೋಕ್ಲಿನ್” ಎಂಬ ಹೆಸರಿನಲ್ಲಿ ಸೈನಿಟೈಸರ್ ಉತ್ಪಾದಿಸುತ್ತಿದ್ದು, ಜಿಲ್ಲಾಡಳಿತ ಕಾಲೇಜಿನ ಈ ಪ್ರಯತ್ನ ಶ್ಲಾಘನೆ ವ್ಯಕ್ತಪಡಿಸಿ, ಇದನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿ, ಜಿಲ್ಲಾಡಳಿತಕ್ಕೆ ಒದಗಿಸುವಂತೆ ಕೋರಿದೆ.
ಶನಿವಾರ ರಾತ್ರಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಬಿ.ಎಲ್.ಡಿ.ಇ ವತಿಯಿಂದ ಎಲ್ಲ ವೈದ್ಯಕೀಯ ಫಾರ್ಮುಲಾಗಳನ್ನು ಬಳಸಿ, ಸ್ಥಳೀಯವಾಗಿ ಕೊರೋಕ್ಲಿನ್ ಸೈನಿಟೈಸರ್ ಉತ್ಪಾದಿಸಲಾಗಿದ್ದು, ಇದನ್ನು ಬಳಸಲು ಅನುಮತಿ ನೀಡಬೇಕೆಂದು ಆಡಳಿತಾಧಿಕಾರಿ ಡಾ.ರಾಘವೇಂದ್ರ ಕುಲಕರ್ಣಿ ಕೇಳಿದ್ದರು.
ಇದಕ್ಕೆ ಸ್ಪಂಧಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ “ಎಲ್ಲಡೆಯೂ ಸೈನಿಟೈಸರ್ ಸಿಗುತ್ತಿಲ್ಲ. ಕಾರ್ಖಾನೆಗಳಲ್ಲಿ ತಯಾರಾದ ದಾಸ್ತಾನು ಮುಗಿದಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ಸ್ಥಳೀಯ ಸಕ್ಕರೆ ಕಾರ್ಖಾನೆಗಳ ಡಿಸ್ಟಿಲಿರಿಗಳನ್ನು ಬಳಸಿಕೊಂಡು ಅಲ್ಲಿರುವ ಸ್ಪಿರಿಟ್ನಿಂದ ಹ್ಯಾಂಡ್ ಸೈನಿಟೈಸರ್ ಗಳನ್ನು ಉತ್ಪಾದಿಸಲು ಅನುಮತಿ ನೀಡಿದೆ. ಆದ್ದರಿಂದ ಬಿ.ಎಲ್.ಡಿ.ಇ ಸಂಸ್ಥೆ ಫಾರ್ಮಸಿ ಕಾಲೇಜಿನ ನುರಿತ ತಂತ್ರಜ್ಞರು ಸ್ಥಳೀಯ ಚಿಕ್ಕಗಲಗಲಿಯ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯ ಡಿಸ್ಟಲರಿಯನ್ನು ಬಳಸಿ, ಅಲ್ಲಿಯೇ ತಮ್ಮ ಕಾಲೇಜಿನ ತಂಡವನ್ನು ನಿಯೋಜಿಸಿ, ಬೃಹತ್ ಪ್ರಮಾಣದಲ್ಲಿ ಹ್ಯಾಂಡ್ ಸೈನಿಟೈಸರ್ ಉತ್ಪಾದಿಸಿ ಜಿಲ್ಲಾಡಳಿತಕ್ಕೆ ನೀಡುವಂತೆ” ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಎಂ.ಬಿ.ಪಾಟೀಲ್ ರವರಿಗೆ ದೂರವಾಣಿಯಲ್ಲಿ ಕೋರಿದರು. ಸಂಸ್ಥೆಯಿಂದ ಜಿಲ್ಲಾಡಳಿತಕ್ಕೆ ಅಗತ್ಯವಿರುವ ಎಲ್ಲ ನೆರವು ತಾಂತ್ರಿಕ ಮಾಹಿತಿ, ಸಿಬ್ಬಂದಿಯನ್ನು ಒದಗಿಸುವುದಾಗಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಅದರನ್ವಯ ಫಾರ್ಮಸಿ ಕಾಲೇಜು ಪ್ರಾಚಾರ್ಯ ಡಾ.ಆರ್.ಬಿ.ಕೊಟ್ನಾಳ, ತಾಂತ್ರಿಕ ತಜ್ಞ ಶ್ರೀಪಾದ ಪೊದ್ದಾರ ಇಂದು ನಂದಿ ಸಕ್ಕರೆ ಕಾರ್ಖಾನೆಗೆ ಅಗತ್ಯ ಪರಿಕರಗಳು ಹಾಗೂ ಕಚ್ಚಾ ಸಾಮಗ್ರಿಗಳೊಂದಿಗೆ ಭೇಟಿ ನೀಡಿದ್ದು, ಅಲ್ಲಿನ ಡಿಸ್ಟಲರಿಯಲ್ಲಿ ಈ ಕುರಿತು ಕಾರ್ಯಪ್ರವೃತ್ತರಾಗಿದ್ದು, ಪ್ರಥಮ ದಿನವೇ 500 ಲೀಟರ್ ನಷ್ಟು ಸೆನಟಸರ್ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ಎಲ್ಲ ಸೇನಿಟೈಸರನ್ನು ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಲಾಗುವುದು ಎಂದು ಸಂಸ್ಥೆ ಆಡಳಿತಾಧಿಕಾರಿ ಡಾ ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಮಾಹಿತಿ : ಡಾ.ಮಹಾಂತೇಶ ಬಿರಾದಾರ. ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿಗಳು.