Breaking News
Home / featured / ದಿನಕ್ಕೊಂದು ವಚನ

ದಿನಕ್ಕೊಂದು ವಚನ

ಅಂಗಲಿಂಗ ಸಂಬಂಧಿಗಳು ನಿಮ್ಮನರಿಯರು.
ಪ್ರಾಣಲಿಂಗ ಸಂಬಂಧಿಗಳು ನಿಮ್ಮನರಿಯರು. ಎಂತೆನೆ,
ಅಂಗಲಿಂಗವೆಂದು, ಪ್ರಾಣಲಿಂಗವೆಂದು
ಉಭಯದ ಸಂದುಂಟೆ ?

ಕರ್ಪುರ ಕುಂಭದಲ್ಲಿ
ಹಾಕಿದ ಕಿಚ್ಚು ಒಳಗು ಬೆಂದು,
ಹೊರಗು ನಿಂದುದುಂಟೆ ?

ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು
ಉಭಯದ ಗುಟ್ಟಿನಲ್ಲಿ ಮತ್ತರಾದರಿಗೆ
ಇಷ್ಟ ದೃಷ್ಟದಲ್ಲಿ ಇಲ್ಲ,
ಆತ್ಮನು ನಿಶ್ಚಯದಲ್ಲಿ ನಿಲ್ಲ.
ಬಸವಣ್ಣಪ್ರಿಯ ನಾಗರೇಶ್ವರ ಲಿಂಗವನೆತ್ತ ಬಲ್ಲರೊ ? 

ಬೊಕ್ಕಸದ ಚಿಕ್ಕಣ್ಣ
———————————————–
ವಚನ ಅನುಸಂಧಾನ

ಶರಣರ ತತ್ವ ಚಿಂತನೆಗಳ ವಿಕಾಸದಲ್ಲಿನ ವಿನ್ಯಾಸದ ಪರಿಯೇ ಅನನ್ಯವಾದುದು. ಹಾಗೂ ಅವರುಗಳು ನಿರೂಪಿಸುವಂಥ ಶರಣ ಸಿದ್ಧಾಂತಗಳ ಗಮ್ಯದೆಡೆಗಿನ ನಡಿ ಗೆಯ ನಾವಿನ್ಯವೂ ನವನವೀನವಾದು ದೇ. ಅದು ಇಹಪರವನ್ನು ಲೌಕಿಕಾಲೌಕಿ ಕವನ್ನು ಏಕಕಾಲದಲ್ಲಿ ತನ್ನೊಳಗೆ ಇಂಬಿ ಟ್ಟುಕೊಂಡು ಅನೂಹ್ಯದೆಡೆಗೆ ಹಾರುವ ಚಿತ್ತಚಿನ್ಮಯನ ಚಿದ್ಪಕ್ಷಿಯ ಬೆಡಗೇಸರಿ.
ಈ ಬೆಡಗಿನ ನಡಿಗೆಯ ನುಡಿ ಬೆಳಕಿನಲ್ಲಿ ಪ್ರಸ್ತುತ ಬೊಕ್ಕಸದ ಚಿಕ್ಕಣ್ಣ ಶರಣರ ಈ ವಚನದ ಅನುಸಂಧಾನ ನಡೆಸೋಣ.

ಅಂಗಲಿಂಗ ಸಂಬಂಧಿಗಳು ನಿಮ್ಮನರಿಯರು.
ಪ್ರಾಣಲಿಂಗ ಸಂಬಂಧಿಗಳು ನಿಮ್ಮನರಿಯರು. ಎಂತೆನೆ,
ಅಂಗಲಿಂಗವೆಂದು,ಪ್ರಾಣಲಿಂಗವೆಂದು

ಉಭಯದ ಸಂದುಂಟೆ ?

ಎಂದು ವಚನವು ಪ್ರಶ್ನೆ ಕೇಳುವಲ್ಲಿ; ಅಂಗಲಿಂಗವೆಂದು ಹಾಗೂ ಪ್ರಾಣಲಿಂಗ
ವೆಂದು ಅವುಗಳ ಸಂಬಂಧ ಹೊಂದಿದ ವರು ನಿಮ್ಮನ್ನು ಸರಿಯಾಗಿ ಅರಿಯರು ಎನ್ನುವಲ್ಲಿಗೆ ಪ್ರಶ್ನೆಯು ಪೂರ್ಣವಾಗಿಲ್ಲ.
ಈ ಎರಡು ರೂಪದಲ್ಲಿ ತೋರುವುದಕ್ಕೆ ಸಂದುಂಟೇ?ಎಂಬಲ್ಲಿ ಇಲ್ಲ ಎಂಬುವ ಉತ್ತರವೂ ಅಡಗಿದ ಬೆಡಗೂ ಬೆರಗೇ.

ಕರ್ಪುರ ಕುಂಭದಲ್ಲಿ
ಹಾಕಿದ ಕಿಚ್ಚು ಒಳಗು ಬೆಂದು,
ಹೊರಗು ನಿಂದುದುಂಟೆ ?

ಕರ್ಪೂರ ಎಂಬ ‘ಅಂಗ’ದಲ್ಲಿ ಚಿಲ್ಲಿಂಗ ಎಂಬ ಕಿಚ್ಚು ಹಾಕಿದರೆ,ಅದು ಒಳಗಷ್ಟೇ ಉರಿದು ಬೆಂದು, ಹೊರಗೆ ಬೆಂದಿಲ್ಲವೆನ್ನ ಬಹುದೇ ಎನ್ನುವಲ್ಲಿ ಅದಕ್ಕೆ ಉತ್ತರವೂ ಇಲ್ಲ ಬೆಂದಿದೆ ಎನ್ನುವುದೇ ಆಗಿದೆ. ಹೀಗೆ ಬೊಕ್ಕಸದ ಚಿಕ್ಕಣ್ಣ ಶರಣರು; ಅಂಗ, ಲಿಂಗ ಮತ್ತು ಪ್ರಾಣ ಇವು ಬೇರೆ ಬೇರೆ ಆಗಿರದೇ ಒಂದೇ ಆಗಿವೆ ಎಂಬ ಶರಣ ತತ್ವದ ಸತ್ಯವನ್ನು ಸಾರುತ್ತಾರೆ. ವಚನ ಮತ್ತೂ ಮುಂದುವರಿದಿದೆ.

ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು
ಉಭಯದ ಗುಟ್ಟಿನಲ್ಲಿಮತ್ತರಾದರಿಗೆ

ಇಷ್ಟ ದೃಷ್ಟದಲ್ಲಿ ಇಲ್ಲ,

ಆತ್ಮನು ನಿಶ್ಚಯದಲ್ಲಿ ನಿಲ್ಲ.
ಬಸವಣ್ಣಪ್ರಿಯ ನಾಗರೇಶ್ವರಲಿಂಗವನೆತ್ತ ಬಲ್ಲರೊ ?

ಈ ರೀತಿಯಲ್ಲಿ ಇಷ್ಟಲಿಂಗ ಮತ್ತು ಪ್ರಾಣ ಲಿಂಗ ಎರಡೆಂಬ ಹುಂಬರಿಗೆ ಇಷ್ಟಲಿಂಗ ದೃಷ್ಟಿಯಲ್ಲಿ ಇರುವದಿಲ್ಲ, ಪ್ರಾಣಲಿಂಗ ಎಂಬ ಆತ್ಮವು ಮನದ ನಿಶ್ಚಯದಲ್ಲಿ ಎಂದಿಗೂ ನಿಲ್ಲುವುದಿಲ್ಲ ಎಂಬ ಸತ್ಯವು ಶತಸಿದ್ಧವಾಗಿರುವಾಗ, ಇಂತಹ ಎರಡೆಂಬ ಎಡಬಿಡಂಗಿ ಎಡಚರಿಗೆ ಬಸವಣ್ಣಪ್ರಿಯ ನಾಗರೇಶ್ವರಲಿಂಗವ ಅರಿಯಲು ಸಾಧ್ಯವಿಲ್ಲ ಎನ್ನು ಮೂಲಕ ಅಂಗಲಿಂಗ ಹಾಗೂ ಪ್ರಾಣಲಿಂಗ ಇವು ಒಂದೇ ಎಂಬ ಶರಣತತ್ವದ ಘನತೆಯ ಈ ವಚನದಲ್ಲಿ ಎತ್ತಿ ತೋರಲಾಗಿದೆ.
————————————————–
ಸಂಕ್ಷಿಪ್ತ ಪರಿಚಯ

ಬೊಕ್ಕಸದ ಚಿಕ್ಕಣ್ಣ ಶರಣ ೧೨ನೆಯ ಶತ ಮಾನದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿ ಯ ‘ಕಾಯಕ’ದಲ್ಲಿದ್ದವರು. ಹಾಗೆಯೇ, ‘ಅಂಗ’ ಬೊಕ್ಕಸದ ಮಂದಿರಕ್ಕೂ ಎಂತಹ ಬೀಗ ಹಾಕ ಬೇಕೆಂಬುದು ಇವರಿಗೆ ಚೆನ್ನಾಗಿ ಗೊತ್ತಿತ್ತೆಂಬುದನ್ನು ಇವರ ವಚನಗಳನ್ನು ಓದಿದಾಗ ತಿಳಿಯುತ್ತದೆ.

ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಇವರೂ ಒಬ್ಬ ವಚನಕಾರ ಶರಣರಾಗಿದ್ದಾರೆ. ‘ಬಸವಣ್ಣಪ್ರಿಯ ನಾಗರೇಶ್ವರ ಲಿಂಗ’ ಅಂಕಿತದಲ್ಲಿ ಇವರು ರಚಿಸಿದ ೧೦ ವಚನಗಳು ದೊರೆತಿವೆ.

ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕ ಗಳನ್ನಾಗಿ ಬಳಸಿರುವರು. ಕಾಯಕದಿಂದ ಶಿವಜ್ಞಾನವನ್ನೂ, ಶಿವನ ನ್ನೂ ತಿಳಿಯಲು ಸಾಧ್ಯವೆನ್ನುವರು. ತಮ್ಮ ಕಾಯಕ ಅಪ್ಪ ಬಸವಣ್ಣ ಮತ್ತು ಚನ್ನಬಸ ವಣ್ಣ ಕೊಟ್ಟದ್ದು ಎಂದಿರುವರು. ಶೀತವುಳ್ಳ ನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣ ವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು ಎನ್ನುವ ಇವರ ವ್ಯಾವಹಾರಿಕ ಗುಣವು ಮೆಚ್ಚುವಂತಹುದು. ಕ್ರಿಯೆ ಮತ್ತು ಜ್ಞಾನ ಸಮನ್ವಯತೆಯಿಂದ ಪರಿಶುದ್ಧ ಅರಿವಿನ ಬೆಳಕನ್ನು ಪಡೆದಾಗಲೇ ಬೊಕ್ಕಸದ ಕಾಯಕದ ಲೆಕ್ಕವನ್ನು ಒಪ್ಪಿಸಬಹುದು ಎಂಬುದನ್ನಿವರು ಹೆಮ್ಮೆಯಿಂದ ಹೇಳಿ ಕೊಂಡ ಅಪರೂಪದ ಪರಿಶುದ್ಧಭಾವದ ಶರಣರಿವರು.

ಅಳಗುಂಡಿ ಅಂದಾನಯ್ಯ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!