Breaking News
Home / featured / ನಾಯಿಗಳಂತೆ ರಸ್ತೆಗೆ ಬರ್ತೀರಿ : ಜನಗಳನ್ನು ‘ನಾಯಿಗಳಂತೆ’ ಇಟ್ಟವರು ನೀವಲ್ಲವೆ ?

ನಾಯಿಗಳಂತೆ ರಸ್ತೆಗೆ ಬರ್ತೀರಿ : ಜನಗಳನ್ನು ‘ನಾಯಿಗಳಂತೆ’ ಇಟ್ಟವರು ನೀವಲ್ಲವೆ ?

ವಿಜಯಪುರ : ಕೊರೊನಾ ಈಗ ನಮ್ಮ ದೇಶದ ಒಟ್ಟು ‘ದಿನಮಾನ’ಗಳಿಗೆ ಕನ್ನಡಿ ಹಿಡಿದಿದೆ.

ನಮ್ಮಜನಕ್ಕೆ ಮೊದಲಿಂದಲೂ ಸಂಸ್ಕಾರ ಕೊಡಲಿಲ್ಲ, ಶಿಕ್ಷಣ ಕೊಡಲಿಲ್ಲ, ಸೌಲಭ್ಯ ಕೊಡಲಿಲ್ಲ. ಅವರಿಗೆ ಈಗಂತೀರಿ ‘ಪ್ರಾಣಿಗಳ ಹಾಗೆ ರೋಡಿಗೆ ಬರ್ತೀರಿ’ ಅಂತ. ಅಷ್ಟಕ್ಕೂ ಜನಗಳನ್ನು ಪ್ರಾಣಿಗಳ ಹಾಗೆ ಇಟ್ಟವರು ಯಾರು? ‘ಏನ್ ಜನಗಳ್ರಿ ಇವ್ರು..’ ಅಂತೀರಿ. ದನಗಳನ್ನಾಗಿ ನೋಡಿದವರು ಯಾರು? ವಿವಿಧತೆಯಲ್ಲಿನ ಏಕತೆಯ ನಮ್ಮ ನೆಲಕ್ಕೆ ಸಾವಿರಾರು ವರ್ಷದ ಸಂಸ್ಕೃತಿಯಂತೆ! ಆ ಸಂಸ್ಕೃತಿ ಎಷ್ಟು ಜನಕ್ಕೆ ಮುಟ್ಟಿತು? ಮುಟ್ಟಿಸಿದ್ದೀರಿ? ಉಳ್ಳವರ ಪಡಸಾಲೆಗಷ್ಟೇ ಇತ್ತು ಎಲ್ಲವೂ. ಉಳಿದವರು ಎಲ್ಲೋ ದೂರದಲ್ಲಿ ಬದುಕಿದ್ದರು. ಜನರನ್ನು ಕಲಿಯಗುಡಲಿಲ್ಲ, ನಡೆಯಗುಡಲಿಲ್ಲ, ಸೌಕರ್ಯ ನೀಡಲಿಲ್ಲ. ಪ್ರಜಾಪ್ರಭುತ್ವವಾಗಿ ಎಲ್ಲರೂ ಸಮಾನರು ಅನ್ನೋವರೆಗೂ ಬಹುತೇಕ ಎಲ್ಲರೂ ಹೇಗೋ ಬದುಕುತ್ತಿದ್ದರು. ಅವರನ್ನು ಗಟ್ಟಿಯಾಗಿಸಿದ್ದು ನಮ್ಮ ನೆಲದ ಸಹಜ ಪಾರದರ್ಶಕ ಗುಣ ಅಷ್ಟೇ, ಮತ್ತೂ ಅವರೊಳಗೂ ಕಾಣದಂತಿದ್ದ ಅದೇ ಮಣ್ಣಿನ ಅಷ್ಟಿಷ್ಟು ಸಂಸ್ಕೃತಿಯೇ ಆಗಿತ್ತು.

ನೀವಲ್ಲ!‌ ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಮೊನ್ನೆ ಮೊನ್ನೆಗೆ ಹೊರಗೆ ಹೊಲಸು ಮಾಡಬೇಡಿ, ಪಾಯಖಾನೆ ಕಟ್ಟಿಸಿಕೊಳ್ಳಿ ಎನ್ನಲಾಯಿತು. ಮೊದಲಿಂದಲೂ ಶಿಕ್ಷಣ ನೀಡಿದ್ದರೆ‌‌ ಜನರಿಗೆ ಸಂಸ್ಕಾರ ಬರುತ್ತಿತ್ತು. ಸೌಲಭ್ಯ ನೀಡಿದ್ದರೆ ಚಂದಗೆ ಇರುತ್ತಿದ್ದರು. ಎಲ್ಲ ಬರೋಬ್ಬರಿಯಾಗಿದ್ದರೆ, ಇಂತಹ ಸಮಯದಲ್ಲಿ ಅವರು ಶಿಸ್ತಾಗಿ ‘ಕೊರೊನಾ’ ವಿರುದ್ಧ ಸುರಕ್ಷಿತವಾಗಿರುತ್ತಿದ್ದರು. ಆದರೆ, ನೀವೇನೂ ಮಾಡಲೇ ಇಲ್ಲ. ಮಾಡಿಯೂ ಮಾಡದಂತಿದೆ ನಿಮ್ಮದು, ಬಾಯಿ ಮಾತಿಗೆ. ಇನ್ನೂ ಈಗಲೂ ನಮ್ಮವರು ಹೊಟ್ಟೆ ತುಂಬಿಕೊಳ್ಳಲೇ ಬಡಿದಾಡಬೇಕಿದೆ. ಅದು ಅವರಿಗೆ ಕೊರೊನಾ ಬಂದು ಸಾಯುವುದಕ್ಕಿಂತ ಹೆಚ್ಚಿನದಾಗಿದೆ. ಅವರು ಮೊದಲೇ ಸುರಕ್ಷಿತವಾಗಿಲ್ಲ. ಇನ್ನು ಹ್ಯಾಗೆ ಸಂಯಮಿಗಳಾಗಿ, ಪ್ರಜ್ಞಾವಂತರಾಗಿ ಇರಲು ಸಾಧ್ಯ?


ಹಳ್ಳಿಗಳ ದೇಶ ನಮ್ಮದು, ಬಡವರ ದೇಶ ನಮ್ಮದು. ಏನಾದರೂ ಸಹಿಸಿಕೊಳ್ಳುವ, ಏನೂ ಮಾಡದಿದ್ದರೂ ನೀವು ಒಳ್ಳೆಯವರೆನ್ನುವ ‘ಒಳ್ಳೆಯ’ ಜನ ಅವರು. ಅವರಿಗೇನು ಒಳ್ಳೆಯದು ಮಾಡಿದಿರಿ ಹೇಳಿ ನೀವು?
ಭಾರತ ಕೃಷಿ ಪ್ರಧಾನ ಅಂತೀರಿ, ಕೃಷಿಗೇನು ಮಾಡಿದಿರಿ? ಸಂಡಾಸಲ್ಲಿ ಇಡೋ ಸಣ್ಣ ಮಗ್ಗಿಗೆ production cost ಅಂತಾ ಲೆಕ್ಕ ಹಚ್ಚಿ ಬೆಲೆ ನಿಗದಿ ಆಗುತ್ತೆ. ಆದರೆ, ನಮ್ಮ ಹಳ್ಳಿಗರು ಬೆವರು ಸುರಿಸಿ, ರಕ್ತ ಸುಟಗೊಂಡು ಬೆಳೆವ ಬೆಳೆಗೆ ಇವತ್ತಿಗೂ ಬೆಲೆ ಇಲ್ಲ. ಅವರು ತಾವೇ ಬೆಳೆದ ಜೋಳದ ಒಂದು ರೊಟ್ಟಿಯನ್ನೂ ನೆಮ್ಮದಿಯಿಂದ ಉಣ್ಣುವಂತಿಲ್ಲ. ರೈತರೆಲ್ಲ ನಿಮ್ಮ ಕಣ್ಣುಗಳಲ್ಲಿ ಈಗಲೂ uncultured ಜನ. ದುಡಿಯೋ ವರ್ಗವಂತೂ ಎಂದಿಗೂ ನಿಮಗೆ ಪ್ರಿಯರೆನಿಸಲೇ ಇಲ್ಲ. ಅವರೆಲ್ಲ ಸುಖವಾಗೇ ಇಲ್ಲ, ಸುಸಂಸ್ಕೃತರಾಗೋದು ದೂರವೇ ಉಳಿಯಿತು. ಈಗ ಕೊರೊನಾ ಉಳ್ಳವರ, ಇರದವರ ನಡುವೆ ಗೆರೆ ಎಳೆದು ಬಿಡುತ್ತಿದೆ. ಸೌಲಭ್ಯ ಎನ್ನುವುದು ಮುಟ್ಟಬೇಕಾದವರಿಗೆ ಮುಟ್ಟದೇ, ಬರೀ ಚುನಾವಣೆ ವಿಷಯಗಳಾದದ್ದೇ ಹೆಚ್ಚು. ಇನ್ನು, ಎಲ್ಲರನ್ನು ಯಾಕೆ ಸುಧಾರಿಸಬೇಕು ಅವರವರು ಬದುಕಲಿ ಎನ್ನುವ ಬುದ್ಧಿವಂತರಿಗೂ ಕೊರತೆ ಇಲ್ಲ. ಹಾಗಾಗಲ್ಲ, ತೆರಿಗೆಯಿಂದ ನಡೆಯೋ ಸರಕಾರ ಮತ್ತು ಅದಕ್ಕಿಂತ ಮೊದಲಿನ ರಾಜಾಡಳಿತಗಳೂ ಈಗಿನ ಆಗಿನ ‘ರಾಜರು’ ತಮ್ಮ ಪ್ರಜೆಗಳ ಒಟ್ಟು ಬೌದ್ಧಿಕ ಮಟ್ಟ ಸೇರಿ ಎಲ್ಲವೂ ಸುಧಾರಿಸಿ, ಅವರಿಗೆ ಸಹ್ಯ ಬದುಕು ನೀಡುವುದು ಕರ್ತವ್ಯ. ನಿಮಗೊಂದು ಉತ್ತಮ ನೌಕರಿ ಇದೆ, ಮನೇಲಿ ಕುಂತು ‘ಏನಪಾ ನನ್ನ ದೇಶದ ಜನಾ.. ಭಾಳ ಕನಿಷ್ಠ.. ಒಂದಷ್ಟು ದಿನಾ ಸುಮ್ಮಿರಕ್ಕಾಗಕ್ಕಾಗಲ್ಲೇನು ಮನ್ಯಾಗ’ ಅನ್ನಬಹುದು. ಮೊದಲಿಂದ ಅವರು ಮನುಷ್ಯರಾಗಿ ಹೇಗೆ ಬದುಕಿದ್ದಾರೆ ಮತ್ತು ಬದುಕಿಸಲಾಗಿದೆ ಅನ್ನೋದನ್ನೂ ಸ್ವಲ್ಪ ಹೃದಯದಿಂದ ನೋಡಿ. ಯಾರಿಗೂ ಸಾಯಬೇಕು ಅಂತ ಅನ್ನಿಸಲ್ಲ. ಬದುಕುವ ಉಮ್ಮೇದಿಯೂ ನಮ್ಮ ಜನಗಳಿಗೆ ಬಂದಿರಬೇಕಲ್ಲ? ಬೇಕಾದರೆ ‘ಈಗ ಹೃದಯದಿಂದ ನೋಡುವ ಸಮಯವಲ್ಲ’ ಇದು ಅಂತ ಅವರನ್ನು ಲಾಠಿಯಿಂದ ಹೊಡೆದು ಓಡಿಸಿ, ಬಾಗಿಲು ಹಾಕಿಕೊಳ್ಳಿ. ಆದರೆ, ಕೊರೊನಾ ಹೋದ ಮೇಲಾದರೂ ಅವರ ಮನೆಯ ಬಾಗಿಲು ತೆಗೆದು, ಇಷ್ಟು ದಿನ ‘ಹೆಂಗೆ ಬದುಕಿದ್ರಿ’ ಅಂತಾನಾದ್ರೂ ಕೇಳಿ! ಪುಣ್ಯ ಬರುತ್ತೆ.
ಕೊರೊನಾ ಇಂತಹ ವಿಷಮ ಸ್ಥಿತಿ ಸೃಷ್ಟಿಸಿ ನಮ್ಮ ದೇವರು, ನಂಬಿಕೆಗಳನ್ನು ಸಹ ಅಲುಗಾಡಿಸಿದ್ದಲ್ಲದೇ ನಮ್ಮದೇಶದ ಸಾಮಾಜಿಕ ಬದುಕನ್ನೂ ತೆರೆದಿಟ್ಟಿದೆ. ನಮ್ಮನ್ನು ನಾವು ಅರಿಯುವಂತೆ ಮಾಡಿ, ಅಂತರ್ಮುಖಿಯಾಗಿಸುತ್ತಿದೆ. ಇಷ್ಟು ದಿನದ ಬದುಕನ್ನು ಲೆಕ್ಕ ಹಾಕುವಂತೆ ಮಾಡಿದೆ.
ಸಾವಿರಾರು ಕೋಟಿ ಸುರಿದರೂ ಬಹುತೇಕರು ಬಡವರಾಗೇ ಉಳಿದಿದ್ದಾರೆ. ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ. ಸೌಲಭ್ಯ ಎನ್ನುವುದು ಒಂಜರ ಸಿಕ್ಕು, ಮತ್ತೊಂಜರ ದೂರ ಸರಿದು ‘ಎಷ್ಟಪ್ಪಾ ಇವರಿಗೆ ಅಕ್ಕಿ ಗೋಧಿ, ಪುಗಸಟ್ಟೆ ಊಟ’ ಅಂತ ಹೊಟ್ಟೆ ತುಂಬಿದವರಿಂದ ಅನ್ನಿಸಿಕೊಳ್ಳುವವರೆಗೆ ಚಾಚಿದೆಯಷ್ಟೇ. ಭ್ರಷ್ಟಾಚಾರ, ಅನಾಚಾರ, ಅಪ್ರಾಮಾಣಿಕತೆ ಹಾಗೂ ಅಮಾನವೀಯತೆ ನಮ್ಮನ್ನು ಆಳುವವರ ಮೆದುಳು ಮೈಯಲ್ಲೆಲ್ಲ ತುಂಬಿ ಹೋಗಿ ದೇಶದ ‘ಕೈಲಾಗದ ಜನರ’ ಸಂಸ್ಕಾರ ಕಳೆದು ಹೋಗುವಂತೆ ಮಾಡಿದೆ. ಕೊರೊನಾ ಬಂದು ನಮ್ಮನ್ನು, ನಮ್ಮವರನ್ನೂ ಬಯಲು ಮಾಡಿದೆ. ಇನ್ನೆಷ್ಟು ದಿನ ನೀನು ಇರ್ತಿಯೋ ಪ್ರಿಯ ಕೊರೊನಾ, ಅಷ್ಟು ದಿನ ನಾವು ಬೆತ್ತಲಾಗುತ್ತಲೇ ಇರುತ್ತೇವೆ. ಸತ್ತವರು ಸತ್ತರು, ಇದ್ದವರು ಸಾಯುತ್ತ ಬದುಕುತ್ತಲೇ ಇರುತ್ತಾರೆ.. ನೀನಿಲ್ಲದಿದ್ದರೂ. ಬದಲಾಗುವವರೆಗೂ, ಬದಲಾಯಿಸುವವರೆಗೂ ಹೀಗೇ.

ಕೊರೊನಾ ಕವನ

ಹಸಿವನ್ನು ನಿಲ್ಲಿಸಲಾಗುತ್ತಿದೆ
ರೋಡು ರೋಡಲ್ಲಿ
ಲಾಠಿ ಹಿಡಿದು.

ನಡೆದಷ್ಟು ದೂರ,
ಹೊಟ್ಟೆ ಸತ್ತವರ ಊರು.

ಹಸುಗೂಸುಗಳ ಗಂಟಲಕ್ಕಿಲ್ಲ
ಹನಿ ನೀರು.

ಒಣ ದೇಹಗಳ ಹೊತ್ತು
ಹೋಗುವವರಿಗೆಲ್ಲ
ತುತ್ತು ಕೂಳಿಲ್ಲ.

ರೋಗ ಇವರಲ್ಲಿಲ್ಲ,
ರಾಡಿ ಅವರಲ್ಲೇ ಎಲ್ಲ.

ಆದರೂ ಹಸಿದವರ
ಹೊಟ್ಟೆಯನ್ನೇ ತೊಳೆಸುತ್ತಾರೆ
ಮತ್ತೆ ಮತ್ತೆ.

ದುಡಿದು ಕಟ್ಟಿದ
ಬಿಲ್ಡಿಂಗುಗಳಲ್ಲಿ, ಬೆವರ
ಹರಿಸಿದ ಫ್ಯಾಕ್ಟರಿಗಳಲ್ಲಿ
ಹಸಿವಿನದೇ ಉಸಿರು.

ತಂಪನೆ ರೂಮಲ್ಲೆಲ್ಲ
ಕಾಲು ಚಾಚಿ ಬಿದ್ದವರೆಲ್ಲ
ಕೇಳುತ್ತಾರೆ ಇವರಿಗೇ
ಹೊಟ್ಟೆ ತುಂಬಿದ ಹದಿನೆಂಟು ಪ್ರಶ್ನೆ!

ಮೇಲೆ ಕುಂತವರು, ಕೆಳಗಿದ್ದವರು
‘ಮನೇಲಿರಿ ಮನೇಲಿರಿ’ ಅಂತಾರೆ,
ಮಸಣದವರ ಮರೆತೇ.

ಬಡವರ ದುಡಿತದಿಂದಲೇ
ಸಿರಿವಂತ, ಮಾರೋಗ
ಹ್ವಾದ ಮ್ಯಾಲೆ ಮತ್ತೆ ಬೇಕು
ಇವರೇ ನಿಮ್ಮನೆಗೆ.

ಜರ ಮನುಷ್ಯರಾಗಿ
ಮನುಷ್ಯರ ನೋಡಿರೋ,
ಇನ್ನಾದರೂ.

ಶಿವಕುಮಾರ್ ಉಪ್ಪಿನ,
ಪತ್ರಕರ್ತರು ಬರಹಗಾರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!