ಸಂಪ್ರದಾಯದ ಹೆಸರಿನಲ್ಲಿ ಜನರನ್ನು ಶೋಷಿಸುತ್ತಿದ್ದ ಸನಾತನಿಗಳ ಬಣ್ಣವನ್ನು ಶರಣರು ಅಡಿಗಡಿಗೆ ಬಯಲುಗೊಳಿಸಿದ್ದಾರೆ. ಹೋಮˌ ಹವನದ ಹೆಸರಿನಲ್ಲಿ ಬೆಲೆ ಬಾಳುವ ಪ್ರದಾರ್ಥಗಳನ್ನೆಲ್ಲ ಬೆಂಕಿಗಾಹುತಿ ನೀಡಿ ಬಡವರ ಪಾಲಿನ ಸಂಪತ್ತನ್ನು ನಷ್ಟ ಮಾಡುತ್ತಿದ್ದ ಪುರೋಹಿತಶಾಹಿ ವರ್ಗವು ಈ ಜಗತ್ತಿಗೆ ಮುಸುಕಿದ ಹೊಗೆ ಎಂದು ಶರಣ ಘಟ್ಟಿಯಾಳಯ್ಯ ಈ ಕೆಳಗಿನ ವಚನದಲ್ಲಿ ಮಾರ್ಮಿಕವಾಗಿ ಹೇಳಿದ್ದಾನೆ :
” ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ
ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು.
ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ.
ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.”
~ ಶರಣ ಘಟ್ಟಿವಾಳಯ್ಯ
ಗ್ರಾಮ ಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು.
ಗ್ರಾಮ ಮಧ್ಯದಲೊಂದು ಹೋಮದ ಗುಂಡಿ ಇದ್ದರೆ ಸಂಪ್ರದಾಯವಾದಿಗಳು ಆ ಹೋಮಕ್ಕೆ ವಿವಿಧ ವಸ್ತು ˌ ಪ್ರಾಣಿಗಳನ್ನು ಆಹುತಿ ಕೊಡುವರು ಎನ್ನುವ ಶರಣ ಘಟ್ಟಿವಾಳಯ್ಯನ ಸಾಂಕೇತಿಕ ಭಾಷೆ ಈ ದೇಶದ ಪ್ರತಿ ಹಳ್ಳಿಗಳಲ್ಲಿರುವ ವೈದಿಕರ ಸಂತತಿ ಮತ್ತು ಅವರು ದೇವರು ಮತ್ತು ಧರ್ಮದ ಹೆಸರಿನಲ್ಲಿ ಆಚರಿಸುವ ಅಮಾನುಷ ಸಂಪ್ರದಾಯಗಳು ಈ ನೆಲದ ಬಡವರನ್ನು ಆಹುತಿ ಪಡೆಯುತ್ತಿವೆ ಎಂದು ವರ್ಣಿಸುತ್ತಿದೆ.
ಹೊಗೆ ಜಗವಾಗಿ ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ.
ವೈದಿಕರು ಸಂಪ್ರದಾಯದ ಹೆಸರಿನಲ್ಲಿ ಹಾಕುವ ಹೋಮ ಕುಂಡದೊಳಗಿನ ಬೆಂಕಿಯು ನಮ್ಮ ಸುತ್ತಲು ಅಜ್ಞಾನದ ಹೊಗೆಯನ್ನು ಆವರಿಸುವಂತೆ ಮಾಡಿದೆ. ವೈದಿಕರ ಅವೈಜ್ಞಾನಿಕ ಆಚರಣೆಗಳಿಂದ ಈ ನೆಲದ ಜನರ ಚಿಂತನಾ ಶಕ್ತಿ ಕುಂದಿ ಅವರ ಮಿದುಳಿಗೆ ಹೊಗೆ ಆವರಿಸಿದೆ. ಹೊಗೆಯೇ ಜಗವಾಗಿˌ ಜಗವೇ ಹೊಗೆಯಾಗಿ ಇಡೀ ಭಾರತಖಂಡವೇ ಅಜ್ಞಾನದ ಹೊಗೆಯೆಂಬ ಕತ್ತಲೆಯಲ್ಲಿ ಮುಳುಗಿದೆ. ಇದೊಂದು ಹಾಸ್ಯಾಸ್ಪದವಾದ ನಡೆˌ ಮತ್ತು ನಗೆಗೇಡು ಪ್ರಸಂಗ.
ನಗೆ ಹೊಗೆವರಿದಲ್ಲಿ ಹೊಗೆ ಜಗವಾದದೆ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದೆ.
ಈ ಹಾಸ್ಯಾಸ್ಪದವಾದ ವೈದಿಕ ಸಂಪ್ರದಾಯಗಳು ಅಜ್ಞಾನದ ಹೊಗೆ (ಮುಸುಕಿನಲ್ಲಿ)ಯಲ್ಲಿ ಜನರನ್ನು ಮುಳುಗಿಸಿವೆ. ಈ ಅಜ್ಞಾನವೆಂಬ ಹೊಗೆ ಎಂದಿಗೂ ಪ್ರಾಯೋಗಾತ್ಮಕವಾದ ನೈಜ ಜಗತ್ತು ಅಥವ ಜ್ಞಾನ ಆಗಲಾರದು ಎನ್ನುತ್ತಾನೆ ಶರಣ ಘಟ್ಟಿವಾಳಯ್ಯ.
ಡಾ. ಜೆ ಎಸ್ ಪಾಟೀಲ.