ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ,
ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ.
ಬೀಜ ಒಳಗು, ಹಿಪ್ಪೆ ಹೊರಗು
ರಸ ಮಧ್ಯದಲ್ಲಿಪ್ಪ ಭೇದವ ನೋಡಾ.
ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು,
ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು,
ಉಭಯದ ಬಲಿಕೆಯಿಂದ ಮಧುರರಸ
ನಿಂದುದ ಕಂಡು,
ಹಿಪ್ಪೆ ಬೀಜ ಹೊರಗಾದುದನರಿತು
ಆ ರಸಪಾನವ ಸ್ವೀಕರಿಸುವಲ್ಲಿ
ಜ್ಞಾನದಿಂದ ಒದಗಿದ ಕ್ರೀ
ಕ್ರೀಯಿಂದ ಒದಗಿದ ಜ್ಞಾನ.
ಇಂತೀ ಭೇದವಲ್ಲದೆ ಮಾತಿಗೆ
ಮಾತ ಗಂಟನಿಕ್ಕಿ
ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ
ಮಾತು ಸಾಕಂತಿರಲಿ.
ಕ್ರೀಯಲ್ಲಿ ಮಾರ್ಗ,
ಭಾವದಲ್ಲಿ ನೆಮ್ಮುಗೆ,
ದಿವ್ಯ ಜ್ಞಾನದಲ್ಲಿ ಕೂಟ.
ಇದು ಸದ್ಯೋಜಾತ ಲಿಂಗದ
ಷಟ್ಸ್ಥಲ ಲೇಪದಾಟ.
ಅವಸರದ ರೇಕಣ್ಣ.
ವಚನ ಅನುಸಂಧಾನ:
ಅಪ್ಪ ಬಸವಾದಿ ಶರಣರು; ಅಷ್ಟಾವರಣ, ಷಟಸ್ಥಲ, ಪಂಚಾಚಾರ, ಕಾಯಕ, ದಾಸೋಹಗಳಂಥ ಅತ್ಯ ಮೂಲ್ಯವಾದ ತತ್ವ ಸಿದ್ಧಾಂತಗಳ ಮೂಲಕ ಸಾಕ್ಷಾತ್ ತಮ್ಮ ಅರಿವು ಆಚರಣೆಗಳನ್ನು ನಡೆ ನುಡಿಯ ಸಾಂಗತ್ಯ ಸಾಮರಸ್ಯದ ಪರಿಣಾಮ ದಿಂದ ‘ಅನುಭಾವ’ದ ಶರಣ ಮಾರ್ಗವ ನ್ನು ರೂಪಿಸಿ,ಅದಕ್ಕೆ ವಚನ ಸಂವಿಧಾನ ರಚಿಸುವ ಮೂಲಕ, ಬಸವ/ವಚನ/ಶರಣ/ಲಿಂಗಾಯತ ಹೀಗೆ ಹಲವು ಹೆಸರಲ್ಲಿ ಗುರುತಿಸಲ್ಪಡುವ ಧರ್ಮವ ನ್ನು ಕಟ್ಟಿ ನಮಗಾಗಿ ವಚನ ಸಾಹಿತ್ಯವ ನ್ನು ತಮ್ಮ ಬಲಿದಾನ ಕೊಟ್ಟು ಬಿಟ್ಟು ಹೋಗಿದ್ದಾರೆ.
ಶರಣರ ತ್ಯಾಗ ಬಲಿದಾನದ ನಿಟ್ಟಿನತ್ತ ದೃಷ್ಟಿಯಿಟ್ಟು ಶರಣರಾದ ಅವಸರದ ರೇಕಣ್ಣನವರ ಈ ಮೇಲಿನ ವಚನದ ಅನುಸಂಧಾನವನ್ನೀಗ ಮಾಡೋಣ.
ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ,
ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ.
ಬೀಜ ಒಳಗು, ಹಿಪ್ಪೆ ಹೊರಗು
ರಸ ಮಧ್ಯದಲ್ಲಿಪ್ಪ ಭೇದವ ನೋಡಾ.
ಶರಣ ಧರ್ಮದ ಬಹು ಮಹತ್ವದ ತತ್ವ ಷಟಸ್ಥಲ ಸಿದ್ಧಾಂತ.ಇದರ ಕುರಿತು ಇಲ್ಲಿ ಅತ್ಯಂತ ಅರ್ಥಪೂರ್ಣವಾದ ಸುಂದರ ರೂಪಕದ ಮೂಲಕ ಷಟಸ್ಥಲ ಸಾಧನಾ ಮಾರ್ಗದ ವಿವಿಧ ಹಂತಗಳಲ್ಲಿನ ಬೆಳವ ಣಿಗೆಯ ವಿಕಾಸದ ಹಂತವನ್ನು ವಚನದ ಈ ಪ್ರಾರಂಭಿಕ ಸಾಲುಗಳಲ್ಲಿ ಅವಸರದ ರೇಕಣ್ಣ ಶರಣರು ಆಕರ್ಷಕವಾಗಿ ಕಟ್ಟಿ ಕೊಟ್ಟಿದ್ದಾರೆ. ಅದು ಹೇಗೆಂದು ನೋಡುವ; ಷಟಸ್ಥಲ ಮೆಟ್ಟಿ (ಸಾಧನೆ ಮಾಡಿ) ನಡೆದಲ್ಲಿ ಅದು ಪಕ್ವವಾದ ಹೆಣ್ಣಿನ ಹಾಗೆ ಹಿಪ್ಪೆ ಬೀಜದ ಮಧ್ಯ ದಲ್ಲಿನ ರಸದಂತೆ ಒಳಗೆ ಬೀಜ ಹೊರಗೆ ಹಿಪ್ಪೆಯ ಹಾಗೆ ರಸ ಮಧ್ಯದಲ್ಲಿರುವ ಬೆರಗಿನ ನಿಸರ್ಗದ ಈ ಜೈವಿಕ ವ್ಯವಸ್ಥೆ ಯ ಅದ್ಭುತ ನೋಡಾ ಎಂದು ತಮ್ಮ ವಚನಾಂಕಿತದ ದೈವದಲ್ಲಿ ನಿವೇದನೆ ಮಾಡುತ್ತಾರೆ. ವಚನ ಮುಂದುವರಿದು,
ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು,
ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು,
ಉಭಯದ ಬಲಿಕೆಯಿಂದ ಮಧುರ ರಸ
ನಿಂದುದ ಕಂಡು,
ಹೀಗೆ, ಹಿಪ್ಪೆ ಬೀಜ ಮತ್ತು ರಸ ಇವುಗ ಳು ಒಂದಕ್ಕೊಂದು ಪರಸ್ಪರ ಪೂರಕವಾ ಗಿ ಅನುಸರಿಸಿ ಬೆಳವಣಿಗೆ ಹೊಂದುತ್ತ ವೆ. ಅದರಂತೆಯೇ ವ್ಯಕ್ತಿಯ ತನುವಿನ ಲ್ಲಿ ಕೂಡಾ ಷಟಸ್ಥಲ ಮೆಟ್ಟಿ ನಡೆಯುವ ಸಾಧಕನ ಆಂತರಿಕ ಬೆಳವಣಿಗೆ ಇರುತ್ತ ದೆಂದು ನಾವಿಲ್ಲಿ ತಿಳಿದುಕೊಳ್ಳಬಹುದು. ಮುಂದುವರಿದ ವಚನದಲ್ಲಿ;
ಹಿಪ್ಪೆ ಬೀಜ ಹೊರಗಾದುದನರಿತು
ಆ ರಸಪಾನವ ಸ್ವೀಕರಿಸುವಲ್ಲಿ
ಜ್ಞಾನದಿಂದ ಒದಗಿದ ಕ್ರೀ
ಕ್ರೀಯಿಂದ ಒದಗಿದ ಜ್ಞಾನ.
ಈ ಮಾಗಿದ ಹಣ್ಣಿನ ಸಿಪ್ಪೆ ಮತ್ತು ಬೀಜ ಹೊರಗಾದುದನ್ನು ತಿಳಿದು ಆ ರಸ ಸ್ವೀಕ ರಿಸಿದ ರೀತಿಯಲ್ಲಿ ಷಟಸ್ಥಲ ಸಾಧಕನ ಪರಿಯೂ ಇರುತ್ತದೆ ಎಂದು ತಿಳಿಯ ಬೇಕು. ಜ್ಞಾನದಿಂದ ಅಂದರೆ ಅರಿವಿ ನಿಂದ ದೊರೆಯುವ ಕ್ರಿಯೆ ಹಾಗೂ ಆ ಕ್ರಿಯೆ ಯಿಂದ ಸಿಗುವ ಜ್ಞಾನಕ್ಕೆ ಪರಸ್ಪರ ಸಂಬಂಧ ಇರುತ್ತದೆ. ವಚನದ ಮುಂದಿ ನ ಸಾಲಿನಲ್ಲಿ ಏನಿದೆ ನೋಡೋಣ,
ಇಂತೀ ಭೇದವಲ್ಲದೆ
ಮಾತಿಗೆ ಮಾತ ಗಂಟನಿಕ್ಕಿ
ನಿಹಿತ ವರ್ತನವಿಲ್ಲದೆ ಸರ್ವತೂತಾಲಂಬರ
ಮಾತು ಸಾಕಂತಿರಲಿ.
ಕ್ರೀಯಲ್ಲಿ ಮಾರ್ಗ,
ಭಾವದಲ್ಲಿ ನೆಮ್ಮುಗೆ,
ದಿವ್ಯ ಜ್ಞಾನದಲ್ಲಿ ಕೂಟ.
ಇದು ಸದ್ಯೋಜಾತ ಲಿಂಗದ
ಷಟ್ಸ್ಥಲ ಲೇಪದಾಟ.
ಈ ರೀತಿಯಲ್ಲಿ ಷಟಸ್ಥಲ ಸಾಧನೆ ಇರು ವಾಗ, ಅದನ್ನು ಕ್ರಿಯಾತ್ಮಕವಾಗಿ ಅನು ಷ್ಠಾನಕ್ಕೆ ತಾರದೇ ಕೇವಲ ಒಣ ಮಾತಿಗೆ ಮಾತು ಪೋಣಿಸಿ ಮಾತನಾಡುವಂಥಾ ಉತ್ತರ ಕುಮಾರರ ಜಂಭದ ಪೌರುಷ ಸಾಕು. ಕ್ರಿಯಾ ಮಾರ್ಗ ಹಿಡಿದು, ಭಾವ ದಲ್ಲಿ ದೃಢತೆಯನ್ನು ಹೊಂದಿ,ದಿವ್ಯಜ್ಞಾನ ದಲ್ಲಿ “ಇಷ್ಟಲಿಂಗ”ದ ನಿಜವಾದ ರೀತಿಯ ಅನುಸಂಧಾನ ನೆರವೇರಿಸಿದರೆ ಆಗ ಅದುವೇ ನಿಜವಾದ ಸದ್ಯೋಜಾತಲಿಂಗ ದ ‘ಷಟಸ್ಥಳದ ಕೂಟ’ವಾಗಿರುತ್ತದೆಂದು ಪ್ರಸ್ತುತ ವಚನವು; ನಿಜವಾದ “ಷಟಸ್ಥಳ” ದ ಸಾಧನೆಯ ಕುರಿತಂತೆ ಒಂದು ಹಣ್ಣಿನ ರೂಪಕದ ಮಾದರಿ ದೃಷ್ಟಾಂತದ ಮೂಲಕ ಸ್ಪಷ್ಟವಾಗಿ ಹೇಳಲಾಗಿದೆ.
ಲೇಖನ: ಅಳಗುಂಡಿ ಅಂದಾನಯ್ಯ