Breaking News
Home / featured / ಕೆ ಪಿ ಪೂರ್ಣಚಂದ್ರ ತೇಜಸ್ವಿ ನೆನಪಿನಲ್ಲಿ…

ಕೆ ಪಿ ಪೂರ್ಣಚಂದ್ರ ತೇಜಸ್ವಿ ನೆನಪಿನಲ್ಲಿ…

ಕನ್ನಡ ಸಾಹಿತ್ಯ ಲೋಕವನ್ನು ತಮ್ಮ ಸಾಹಿತ್ಯ ಸುಧೆಯಿಂದ ಬೆಳಗಿದ ಪೂರ್ಣಚಂದ್ರ ತೇಜಸ್ವಿಯವರು ಮರೆಯಾಗಿ ಇಂದಿಗೆ 13 ವರ್ಷಗಳಾದವು. ತೇಜಸ್ವಿಯವರು ಶ್ರೇಷ್ಠ ವಿಚಾರದ, ವಿಭಿನ್ನ ಅಭಿರುಚಿಯ, ಬಹುಮುಖ ಪ್ರತಿಭೆಯಾಗಿದ್ದರು.

ತೇಜಸ್ವಿ ನುಡಿಗಳು

 •  ತಲೆ ತಪ್ಪಿಸಿಕೊಂಡು ಎಲ್ಲೋ ಬದುಕಿ ಮುದಿಯಾಗಿ ಕಾರಣವಿಲ್ಲದೆ ಸಾಯುವುದಕ್ಕಿಂತ ಸಕಾರಣವಾದ ಸಾವನ್ನು ಎದುರಿಸುವುದು ಎಷ್ಟೋ ವಾಸಿ.
  -ಜುಗಾರಿ ಕ್ರಾಸ್
 •  ನಮ್ಮ ಮಾತಿಗೆ ಅರ್ಥ ಬರಬೇಕಾದರೆ ಮಾತನಾಡುವಷ್ಟೇ ಮಾತನಾಡದೆ ಇರುವುದೂ ಅಗತ್ಯ.
 •  ನಮ್ಮ ಮಾತಿಗೆ ಅರ್ಥ ಬರುವುದು ನಮ್ಮ ನಡವಳಿಕೆಯಿಂದ
 •  ರೈತರು ಎಷ್ಟೇ ಬಡವರಾದರು ಆತ್ಮ ಗೌರವ ಉಳ್ಳವರು
 •  ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷೀ ಎಂದರೆ ಹೋಮೋಸೆಪಿಯನ್. – ಕರ್ವಾಲೋ
 •  ನನಗೆ ಕಾಲ ಕಳೆಯುವುದು ಹೇಗೆಂಬ ಚಿಂತೆಗಿಂತ ಕಾಲ ಕಳೆದು ಹೋಗುತ್ತದಲ್ಲಾ ಎನ್ನುವುದೇ ಚಿಂತೆ
 • ಯಾರಿಗೆ ತಾವಿರುವಲ್ಲಿ ಸಂತೋಷ ಉತ್ಸಾಹ ಕುತುಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದು ವ್ಯರ್ಥ.
 • ಸುಮ್ಮನೆ ನಮಗೆ ಅಗತ್ಯ ಇದ್ದಷ್ಟು ಮಾತ್ರ ತಿಳಿದುಕೊಂಡು, ಮಿಕ್ಕುದ್ದನ್ನ ನೋಡಿ ಅಚ್ಚರಿಪಡುತ್ತ ಇದ್ದು ಬಿಡುವುದು ಒಳ್ಳೆಯದು – ಪರಿಸರದ ಕತೆ
 • ನಮ್ಮ ಪಾಲಿಗೆ ಭೂಮಿ ಹಾಳಾಗುತ್ತದೆಯೇ ಹೊರತು ಅದರ ಪಾಲಿಗಲ್ಲ.
 • ಮುಖ್ಯ ವಿಷಯ ಬಿಟ್ಟು ಅಡ್ಡ ದಾರಿ ತುಳಿಯಬೇಡಿ, ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತಿವಿ, ಕಾಲ ಸರೀತಾ ಇದೆ.
 • ಎಷ್ಟನ್ನು ನಾವು ಕಣ್ಣಿಗೆ ಕಂಡರೂ
  ನೋಡದೆ ಬಿಟ್ಟಿದ್ದೇವೋ ಏನೋ – ಕರ್ವಾಲೊ
 • ನನ್ನ ಹಾಗೆ ನೀನೂ ಬದುಕು ಎಂದು ಸಲಹೆ ನೀಡಬಹುದೇ ಹೊರತು, ನಾನು ಹೇಗಾದರೂ ಬದುಕುತ್ತೇನೆ, ನೀನು ಹೀಗೆ ಬದುಕು ಎಂದು ಹೇಳುವುದು ಸರಿಯಲ್ಲ.
 • ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ
  ಯಾವತ್ತೂ ಭಯಾನಕ ಹೋರಾಟದ ಫಲವೇ ಹೊರತು ಸುಲಭಕ್ಕೆ ಸಿಗುವುದಿಲ್ಲ.
 • ಭಾರತದ ಆಧುನೀಕರಣದ ಕತೆಯೆಂದರೆ ಒಬ್ಬರ ಅನ್ನ ಇನ್ನೊಬ್ಬರು ಕಿತ್ತುಕೊಂಡ ಕತೆ.
 • ನಮ್ಮ ವಿದ್ಯಾಭ್ಯಾಸವೇ ನಮ್ಮ ಹುಡುಗರನ್ನು ಹಳ್ಳಿಗಳಿಗೆ ಪರಕೀಯರನ್ನಾಗಿ ಮಾಡುತ್ತಿರುವ ಉದಾರಣೆಯ ಬೆಳಕಿನಲ್ಲಿ ಯೋಚಿಸಿ.
 • ಒಂದು ದೇಶ ಆಧುನಿಕವಾಗುತ್ತಾ, ಕೈಗಾರಿಕೀಕರಣವಾಗುತ್ತಾ ಹೋದಂತೆ ಕೃಷಿಯನ್ನು ಒಂದು ಜೀವನ ಮಾರ್ಗವೆಂದು ಪರಿಗಣಿಸುವವರು ಅಥವಾ ವ್ಯಕ್ತಿಗಳಲ್ಲಿ ಆ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಭೂಮಿ ಕಾರ್ಖಾನೆಯ ಯಂತ್ರದಂತೆ ಉತ್ಪಾದಿಸುವ ಒಂದು ಸಲಕರಣೆಯಾಗುತ್ತದೆ. ಮನುಷ್ಯ ಅಲ್ಲಿ ಬದುಕಿ ಬಾಳಿ ತನ್ನ ಸಾರ್ಥಕ್ಯ ಕಂಡುಕೊಳ್ಳುವುದು ಪರಿಸರವಾಗಿ ಅಪ್ರಮುಖವಾಗುತ್ತದೆ.
 • ನಮ್ಮ ಆಡಳಿತ ವ್ಯವಸ್ಥೆ ಕೇಂದ್ರೀಕರಣಗೊಳ್ಳುತ್ತಾ ಹೋದಂತೆ ನಮ್ಮ ಗ್ರಾಮಗಳಿಂದಲೂ ರೈತರಿಂದಲೂ ದೂರವಾಗುತ್ತಾ ಪರೋಕ್ಷವಾಗುತ್ತಾ ಹೋಗುತ್ತದೆ.
 • ನಾನು ಕಣ್ಣಿಗೆ ಕಂಡದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ. – ವಿಮರ್ಶೆಯ ವಿಮರ್ಶೆ
 • ಮಾತೃಭಾಷೆ ಎಷ್ಟೊಂದು ಆಪ್ತ ಮತ್ತು ಆತ್ಮೀಯ. ನಮ್ಮ ಆಲೋಚನೆಗೂ ಅಭಿವ್ಯಕ್ತಿಗೂ ಮಧ್ಯೆ ಕಂದರವೇ ಇರುವುದಿಲ್ಲ.
 • ಒಬ್ಬ ಶ್ರೇಷ್ಠ ಬರಹಗಾರ ಮತ್ತು ಸಾಮಾನ್ಯ ಬರಹಗಾರನ ನಡುವೆ ಇರೋ ವ್ಯತ್ಯಾಸ ಇಷ್ಟೇ. ಶ್ರೇಷ್ಠ ಬರಹಗಾರ ತನ್ನ ವಿರುದ್ಧ ತಾನು ಯೋಚನೆ ಮಾಡೋ ಶಕ್ತಿ ಪಡೆದಿರಬೇಕು.
 • ಅವಾರ್ಡ್ ಫಿಲಂಗಳು ಮತ್ತು ಮಾರುಕಟ್ಟೆ ಫಿಲಂಗಳು ಅಂತ ಖಚಿತವಾದ ವಿಭಾಗವಾದ ಹಾಗೆ ಪ್ರಶಸ್ತಿಗಳ ಹಿಂದೆ ಹೋದ್ರೆ ಪ್ರಶಸ್ತಿಗಾಗಿ ಬರೆದಿರೋ ಸಾಹಿತ್ಯ ಅಂತ ಒಂದು ವಿಭಾಗ ಶುರು ಆಗತ್ತೆ.
 • ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಕನ್ನಡವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾಗದಿದ್ದರೆ ಕನ್ನಡ ಭಾಷೆ ಉಳಿಯುವುದೇ ಇಲ್ಲ.
 • ನಮ್ಮ ವಿದ್ಯಾಭ್ಯಾಸ ಕ್ರಮವೇ ಸಂಪೂರ್ಣ ತಪ್ಪಾಗಿದೆಯೆಂದು ನನಗನ್ನಿಸುತ್ತದೆ. ಬದುಕುತ್ತಾ ಬದುಕಿಗೆ ಅಗತ್ಯವಾದದ್ದನೆಲ್ಲಾ ತಿಳಿದುಕೊಳ್ಳುತ್ತಾ ಹೋಗುವ ಹೊಸಬಗೆಯ ವಿದ್ಯಾರ್ಜನೆಯ ಮಾರ್ಗಗಳನ್ನು ನಾವು ಅನ್ವೇಷಿಸಬೇಕು.
 • ನನಗೂ ಕಾಡಿಗೂ ಇರುವ ಸಂಬಂಧ ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳ ಜೊತೆ ಇರುವ ಸಂಬಂಧದಂತೆ ವಿವರಿಸಲಸಾಧ್ಯವಾದಷ್ಟು ನಿಗೂಢವಾದದ್ದು.
 • ಸಮಾಜವಾದ ಮನುಷ್ಯರೆಲ್ಲರಲ್ಲೂ ಸಮಾನತೆಯನ್ನು ಬೋಧಿಸಿದ್ದರೆ ಇಕಾಲಜಿ ಇಡೀ ವಿಶ್ವದ ಸರ್ವಚರಾಚರ ವಸ್ತುಗಳೂ ಸಮಾನ, ಮುಖ್ಯ ಎಂದು ಸಾಕ್ಷ್ಯಾಧಾರಗಳ ಸಮೇತ ತೋರಿಸಿಕೊಡುತ್ತಿದೆ.
 • ನಾವು ಎಷ್ಟು ಕೆಟ್ಟ ರಾಜಕಾರಣಿಗಳನ್ನೂ ಅಧಿಕಾರಶಾಹಿಯನ್ನೂ ನಿರ್ಮಾಣ ಮಾಡಿದ್ದೇವೆಂದರೆ ಅತಿವೃಷ್ಟಿ, ಅನಾವೃಷ್ಟಿ, ಬರ, ಭೂಕಂಪ, ಯುದ್ಧ ಮೊದಲಾದ ಯಾವುದೇ ವಿಪತ್ತು ಬಂದರೂ ಅದನ್ನು ಸ್ವಾರ್ಥಕ್ಕೆ ಉಪಯೋಗಿಸುತ್ತಾರೆ. ಮುಂದುವರೆದ ರಾಷ್ಟ್ರಗಳ ಕುತಂತ್ರಿ ನೀತಿಯಷ್ಟೇ ಇವರು ನಮಗೆ ಅಪಾಯಕಾರಿಗಳು.
 • ಯಾವ ಭಾಷೆಯಲ್ಲಿ ಸಮಕಾಲೀನ ಸಾಹಿತ್ಯ ಇಲ್ಲವೋ ಅಲ್ಲಿ ಆ ಭಾಷೆಯ ಪ್ರಾಚೀನ ಸಾಹಿತ್ಯ ನಿಧಾನವಾಗಿ ತನ್ನ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಬರುತ್ತದೆ.
 • ನಮ್ಮ ರಾಜಕಾರಣಿಗಳಲ್ಲಿ ಅನೇಕರು ಕೇಂದ್ರೀಕೃತ ಆಡಳಿತ ಪದ್ಧತಿಯ ರುಚಿ ಕಂಡಿದ್ದಾರೆ. ಹಳ್ಳಿಗಳ ಸಂಪತ್ತನ್ನೆಲ್ಲಾ ಸೂರೆ ಹೊಡೆದು ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಾ ಮಜಾ ಉಡಾಯಿಸುವುದೇ ರಾಜಕಾರಣ ಎಂದು ತಿಳಿದಿದ್ದಾರೆ.
 • ಭಾರತದಲ್ಲಿ ಇರುವುದು ಪ್ರಜಾಪ್ರಭುತ್ವವಾದರೂ ಮಿತಿಮೀರಿದ ಕೇಂದ್ರೀಕರಣದ ದೆಸೆಯಿಂದ ಸರ್ಕಾರದ ಧೋರಣೆಗಳನ್ನು ರೀತಿ ನೀತಿಗಳನ್ನು ರೂಪಿಸುವವರು ಗ್ರಾಮಗಳ ಮತ್ತು ಕೃಷಿಕ್ಷೇತ್ರದ ವಾಸ್ತವಾಂಶಗಳನ್ನು ಗ್ರಹಿಸದಷ್ಟು ದೂರಾಗಿದ್ದಾರೆ.
 • ಕೃಷಿಕ ಭಾರತದಲ್ಲಿ ಮನಸ್ಸು, ಆತ್ಮ, ವ್ಯಕ್ತತ್ವಗಳಿಲ್ಲದ ಕೇವಲ ಉತ್ಪಾದಕನಾಗಿ ಮಾತ್ರ ಅಸ್ತಿತ್ವ ಪಡೆದಿದ್ದಾನೆ.
 • ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಸಾಹಿತ್ಯದ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.
 • ನನಗೆ ಕಷ್ಟಪಟ್ಟು ಓದಿದ್ದು ಗೊತ್ತೇ ಇಲ್ಲ. ಬರೇ ಕ್ಲಾಸಿನಲ್ಲಿ ಶ್ರದ್ಧೆಯಿಂದ ಪಾಠ ಕೇಳಿ ಮಾತ್ರವೇ ಈವರೆಗೂ ನಾನು ತರಗತಿಗಳಲ್ಲಿ ಪಾಸಾಗಿರುವವನು. ಆದರೆ ನಮಗೆ ಅಂಥ ವಿದ್ಯಾಗುರುಗಳು ದೊರತಿದ್ದರೆಂಬುದು ಇಲ್ಲಿ ಬಹುಮುಖ್ಯ. ಅವರಲ್ಲಿ ಪೂಜ್ಯ ಜಿ.ಎಸ್.ಶಿವರುದ್ರಪ್ಪನವರು ಒಬ್ಬರೆಂದು ನಾನು ಹೆಮ್ಮೆಯಿಂದ ಹೇಳಬಲ್ಲೆ.
 • ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಶ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ.
  – ಪರಿಸರದ ಕತೆ
 •  ನನ್ನ ಜೀವನವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ.
 • ಮತಧರ್ಮ ನಮ್ಮಲ್ಲಿ ಪ್ರಜ್ಞಾಪೂರ್ವಕ ವಲಯದಲ್ಲಿ ಮಾಡುವ ಹಾನಿಗಿಂತ ಭೀಕರವಾದುದು ಪ್ರಜ್ಞಾತೀತ ವಲಯದಲ್ಲಿ ಅದು ಮಾಡುವ ಹಾನಿ.
  – ವಿಮರ್ಶೆಯ ವಿಮರ್ಶೆ
 • ಕತೆಯೆಂದರೆ ನಿರಂತರವಾಗಿ ಹರಿಯುವ ಜೀವನಕ್ಕೆ ಒಂದು ಚೌಕಟ್ಟು ಹಾಕುತ್ತದೆಯಷ್ಟೆ.
  – ಪೂರ್ಣಚಂದ್ರ ತೇಜಸ್ವಿ, ಕಿರಗೂರಿನ ಗಯ್ಯಾಳಿಗಳು
 • ಪ್ರಕೃತಿ ಮತ್ತು ಪರಿಸರದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಇರುವ ಕುತೂಹಲಕ್ಕೆ ಮುಖ್ಯ ಕಾರಣ ನಮ್ಮ ತಂದೆಯವರು.
 • ಬೇರೆಯವರನ್ನ ಕೊಂದು ಉಳಿಸಿಕೊಳ್ಳಬೇಕಾದ ಧರ್ಮವೇನಾದರು ಇದೆಯಾ.

‌‌                                ಪೂಚಂತೆ ಕನ್ನಡ ಸಾಹಿತ್ಯ ವಾಹಿನಿಯ ಬೆರಗು. ಸಿದ್ಧ ಸೂತ್ರಗಳನ್ನು ಬದಿಗಿಟ್ಟು ಹೊಸ ನುಡಿಗಟ್ಟುಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಹೊಸ ಹೊಳಪು ನೀಡಿದ ಅನನ್ಯ ಲೇಖಕ. ಮಲೆನಾಡಿನ ನಿಸರ್ಗ ಸಿರಿಯ ಮಡಿಲಲ್ಲಿ ಬಾಲ್ಯ ಕಳೆದ ಪೂಚಂತೆ ದಟ್ಟ ಕಾನನದ ಪ್ರಭಾವಕ್ಕೆ ಒಳಗಾಗಿ ನಿಸರ್ಗವನ್ನೇ ಪಠ್ಯವನ್ನಾಗಿ ಮಾಡಿಕೊಂಡರು. ಸಮಾಜಮುಖಿ ನಿಲುವಿನ ಜೊತೆಗೆ ವೈಚಾರಿಕ ಪ್ರಜ್ಞೆಯನ್ನು ಹೊಂದಿದ್ದ ತೇಜಸ್ವಿಯವರು ಸೃಷ್ಟಿಯ ಒಡಲಲ್ಲಿ ಜರುಗುವ ವಿಸ್ಮಯಗಳಿಗೆ ಬೆರಗಾಗಿ, ಜೀವಸಂಕುಲಗಳ ವಿಕಾಸಕ್ಕೆ ಪರಿಸರದ ಕೊಡುಗೆ ಅನಂತ ಎಂದು ಅರಿತರು. ಪ್ರಕೃತಿಯಲ್ಲಿ ಜರುಗುವ ಸಣ್ಣ ಪುಟ್ಟ ಸಂಗತಿಗಳು ಅವರ ಗಮನ ಸೆಳೆದವು. ಪೂಚಂತೆ ಅವರ ಸಾಹಿತ್ಯದ ಕೇಂದ್ರ ಬಿಂದು ಪರಿಸರ. ಪರಿಸರದೆಡೆಗಿನ ಕುತೂಹಲವೇ ಅವರನ್ನು ಒಬ್ಬ ಅತ್ಯುತ್ತಮ ಛಾಯಾಗ್ರಹಕರನ್ನಾಗಿ, ಅಪರೂಪದ ಲೇಖಕರನ್ನಾಗಿ ರೂಪಿಸಿತು. ತಮ್ಮ ಬದುಕಿನ ಅನುಭವಗಳನ್ನೇ ಕಥೆಯ ರೂಪದಲ್ಲಿ ಪ್ರಕಟಿಸಿದರು. ಬದುಕಿನ ಹಲವು ಆಯಾಮಗಳಿಗೆ ತಮ್ಮನ್ನು ತೆರೆದುಕೊಂಡಿದ್ದ ಅವರು ಸಿತಾರ್ ವಾದಕರಾಗಿ, ವರ್ಣಚಿತ್ರಕಾರರಾಗಿಯೂ ಗಮನ ಸೆಳೆದರು. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನು ಸಹ ಒಬ್ಬ ವಿಜ್ಞಾನಿ ಎಂಬುದನ್ನು ತಮ್ಮ ಅತ್ಯಂತ ಜನಪ್ರಿಯ ಕೃತಿಯಾದ “ಕರ್ವಾಲೋ” ದ ” ಮಂದಣ್ಣ” ನ ಮೂಲಕ ನಿರೂಪಿಸಿದ್ದಾರೆ. ನಿಸರ್ಗದ ಅಚ್ಚರಿಗಳನ್ನು ಅರಿತುಕೊಂಡಿದ್ದ ಮಂದಣ್ಣ ಒಬ್ಬ ಪರಿಸರ ತಜ್ಞ / ವಿಜ್ಞಾನಿಯೂ ಹೌದು ಎಂದು ನಮಗೆ ಮನದಟ್ಟಾಗುತ್ತದೆ. ಹಳೆಯ ತತ್ವಶಾಸ್ತ್ರಗಳನ್ನೇ ನೆಚ್ಚಿಕೊಂಡು ಮೌಢ್ಯದ ಸೆರಗಿನಲ್ಲಿಯೇ ಬದುಕು ಸಾಗಿಸುವವರನ್ನು ಕಂಡರೆ ಅವರಿಗೆ ಸಾತ್ವಿಕ ಕೋಪದ ಜೊತೆಗೆ ಕನಿಕರದ ಭಾವವೂ ಹುಟ್ಟುತ್ತಿತ್ತು. ನಮ್ಮ ಆಡಳಿತದಲ್ಲಿ ಕನ್ನಡ ತಂತ್ರಾಂಶದ ಮಹತ್ವವನ್ನು ಅರಿತಿದ್ದ ಪೂಚಂತೆ ಅವರು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರು ವಹಿಸಿದ ಪಾತ್ರ ಗಮನಾರ್ಹವಾದುದು. ಪರಿಸರದ ಉಳಿವಿಗಾಗಿ ಅವರು ಮಾಡಿದ ಹೋರಾಟ ಪ್ರತಿಯೊಬ್ಬರಿಗೂ ಮಾದರಿಯಾಗುವಂತದು. ಪರಿಸರವಾದಿಯಾಗಿ, ಚಿಂತಕರಾಗಿ , ಅನ್ವೇಷಕರಾಗಿ ಬಾಳಿದ ಪೂಚಂತೆ ಅನೇಕ ಯುವಕರಿಗೆ ಆದರ್ಶವಾದಿಯಾಗಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!