Breaking News
Home / featured / ಬಸವಧರ್ಮದ ವೀರಮಾತೆ ಕೆಳದಿ ಚೆನ್ನಮ್ಮ

ಬಸವಧರ್ಮದ ವೀರಮಾತೆ ಕೆಳದಿ ಚೆನ್ನಮ್ಮ

ಕೆಳದಿಯ ಚನ್ನಮ್ಮ ಕಿತ್ತೂರು ಚೆನ್ನಮ್ಮಳಿಗಿಂತ ಸುಮಾರೂ ಒಂದುನೂರ ಇಪ್ಪತ್ತುವರ್ಷಗಳ ಹಿಂದಿನ ರಾಣಿ. ಬಸವಾದಿ ಶರಣರ ನಿಲುವುಗಳ ಸದಾ ಕಾಲ ಜಾರಿಗೆ ತಂದ ಮಹಾ ವೀರರಾಣಿ. ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ದಾಸೋಹ ಕಾಯಕಗಳಿಗೆ ಹೆಚ್ಚು ಒತ್ತುಕೊಟ್ಟು ಬಸವ ಧರ್ಮವನ್ನು ರಾಜಧರ್ಮವಾಗಿಸಿ ಮೆರೆದ ಮಹಾರಾಣಿ.

ಪ್ರತಿ ದಿನವೂ ತ್ರಿಕಾಲ ಲಿಂಗಪೂಜೆ ಜಂಗಮ ಸೇವೆ, ಅರಿವು ಆಚಾರಗಳ ಜೊತೆಗೆ ನುಡಿದಂತೆ ನಡೆಯಲೇ ಬೇಕು ಎಂದು ಕಟ್ಟಾಜ್ಞೆ ಹೊರಡಿಸಿದ ಮೊದಲ ಮಹಾರಾಣಿ. ಇವರ ಬಗ್ಗೆ ಅಪ್ಪಾಜಿಯವರು ಬಹಳ ವಿವರವಾಗಿ ತಿಳಿಸಿದ್ದರು.

ಹೌದು, ಆಗ ನನಗಿನ್ನೂ ಹತ್ತುವರ್ಷವಿರಬಹುದು, ಕಲಿಕೆಯೇ ಉಸಿರು ಎಂಬಂತೆ ನನ್ನ ಬೆಳಸುತ್ತಿದ್ದ ತಾಯಿ ತಂದೆಯರಿಂದ ಕಿತ್ತೂರಿನ ರಾಣಿ ಚನ್ನಮ್ಮಳ ಬಗ್ಗೆ ಬಹಳ ಆಳವಾಗಿ ತಿಳಿದಿದ್ದೆ.(ಈಗಾಗಲೇ ಕಿತ್ತೂರು ಚನ್ನಮ್ಮಳ ಲೇಖನ ಬರೆದಿರವೆ)
ದಿನವೂ ಚನ್ನಮ್ಮಳ ಬಗ್ಗೆನೇ ಮಾತಾಡುತ್ತಿದ್ದೆ. ಅವರ ಮುಂದೆ ನಾನೂ ಚನ್ನಮ್ಮಳಂತೆ ಕಚ್ಚೆ ಕಟ್ಟಿ ಖಡ್ಗಹಿಡಿದು ಕುಣಿದು ತೋರಿಸುತ್ತಿದೆ.

ನನ್ನೊಳಗಿನ ಕಲಿಕೆಯ ಆಸಕ್ತಿಯ ಬಹಳ ಸೂಕ್ಷ್ಮವಾಗಿ ಗಮನಿಸಿದ್ದ ಅಪ್ಪಾಜಿ ಅವ್ವಂದಿರು ನನಗೆ ಆಗಾಗ ಈ ನಾಡಿನ ಹಲವು ವೀರಗಾತೆಗಳ ಹೇಳುತ್ತಿದ್ದರು.
ಒಂದುದಿನ ಅಪ್ಪಾಜಿ ನನ್ನ ಕರೆದು ಹೇ ದೀಪಕ್ಕಾ ಬಾ ಇಲ್ಲಿ ನಿನಗೆ ಇನ್ನೊಬ್ಬ ಚೆನ್ನಮ್ಮಳ ಬಗ್ಗೆ ಹೇಳ್ತಿನಿ ಅಂದ್ರು.

ಒಡನೇ ಕಿವಿನಿಮಿರಿ, ಏನಪ್ಪಾಜೀ ? ಇನ್ನೊಬ್ಬ ಚನ್ನಮ್ಮ ಯಾರದು ಅಂತ ಕೇಳಿದ್ದೆ ತಡ, ಕನ್ನಡನಾಡಿನ ಮತ್ತೊರ್ವ ವೀರರಮಣಿ , ಬಸವಧರ್ಮದ ಮಹಾ ಅರಿವಿನಾ ನಿಧಿ, ವೀರಕನ್ನಡತಿ, ಬಲುಗಟ್ಟಿಗಿತ್ತಿ, ಲಿಂಗಾಂಗಯೋಗಿಣಿ , ತ್ರಿಕಾಲಲಿಂಗಪೂಜಾ ನಿಷ್ಠೆಯಿಂದ ಬಸವಚನ್ನಬಸವರ ತತ್ವಗಳಲ್ಲಿ ಬಲವಾದ ನಂಬಿಕೆ ಇಟ್ಟು ನಮ್ಮ‌ನಾಡನ್ನಾಳಿದ ಹೆಮ್ಮೆಯ ಪುತ್ರಿ ಕೆಳದಿಯ ಚನ್ನಮ್ಮಳ ಬಗ್ಗೆ ಸವಿವರವಾಗಿ ಹೇಳಿ ನನಗೆ ಆ ತಾಯಿಯ ಗಟ್ಟಿತನ, ನಡೆನುಡಿ ಸಿದ್ಧಾಂತಗಳ ಒಪ್ಪಿನಡೆದ ಬಗೆಯ ಬಗ್ಗೆ

ರಾಜ್ಯದ ಹೆಸರು: ಕೆಳದಿ ಸಂಸ್ಥಾನ
ರಾಜಧಾನಿ : ಕೆಳದಿ, ಬಿದನೂರು, ಇಕ್ಕೇರಿ.

ಸಾಮ್ರಾಜ್ಯದ ಸ್ಥಾಪಕರು: ಲಿಂಗಾಯತರಾದ ಚೌಡಪ್ಪನಾಯಕ , ಇವರೇ ಕೆಳದಿಸಾಮ್ರಾಜ್ಯದ ಸ್ಥಾಪಕರು. ಇವರ ತಂದೆ ಬಸವಪ್ಪ , ತಾಯಿ ಬಸವಾಂಬೆ. ಕೃಷಿಕಾಯಕದ ಕುಟುಂಬದಿಂದ ಬಂದವರು.

ಪ್ರಸಿದ್ಧ ರಾಜರಾಣಿಯರು: ಚೌಡಪ್ಪನಾಯಕ, ವೆಂಕಟಪ್ಪನಾಯಕ, “ಶಿಸ್ತಿನ” ಶಿವಪ್ಪನಾಯಕ(ಇವರೇ ಬಹಳ ಪ್ರಸಿದ್ದರು) ನಂತರ ಸೋಮಶೇಖರ ನಾಯಕ ಇತನ ಹೆಂಡತಿಯೇ ಕೆಳದಿಯ ರಾಣಿ ಚನ್ನಮ್ಮ.
ನಂತರದಲ್ಲಿ ಬಸವಪ್ಪ ನಾಯಕ,(ಇವರು ಕೆಳದಿ ಚನ್ನಮ್ಮಳ ದತ್ತುಮಗ) ಚನ್ನಬಸವಪ್ಪ ನಾಯಕ, ವಿರಮ್ಮಾಜಿ.

ಕೆಳದಿಯ ಚನ್ನಮ್ಮ: (1671ರಿಂದ 1698 ವರೆಗೆ ರಾಜ್ಯಭಾರ)
ಚನ್ನಮ್ಮಳು ಲಿಂಗಮ್ಮ ತಾಯಿ & ಸಿದ್ದಪ್ಪಶೆಟ್ಟರ ಮಗಳು. ಅಚಾನಕ್ ಆಗಿ ರಾಜ್ಯದ ರಾಜ ಸೋಮಶೇಖರ ನಾಯಕರು ಈಕೆಯ ಆಕಸ್ಮಿಕವಾಗಿ ನೋಡಿ, ಚನ್ನಮ್ಮಳ ಸೌಂದರ್ಯ ಮತ್ತು ಔದಾರ್ಯಕ್ಕೆ ಮಾರುಹೋಗಿ ಮದುವೆಯಾಗಿ ಚನ್ನಮ್ಮಳನ್ನು ಪಟ್ಟದ ರಾಣಿಯಾಗಿ ಮಾಡುತ್ತಾನೆ. ನಂತರದ ದಿನಗಳಲ್ಲಿ ಕೆಲವು ದುಚ್ಚಟ ದುರ್ಜನರ ಸಂಗಕ್ಕೆ ಬಲಿಯಾಗಿ ಕುತಂತ್ರದಿಂದ ಕೊಲೆಯಾಗಿ ಸತ್ತುಹೋಗುತ್ತಾನೆ. ಅಂತಹ ಸಂರ್ಭದಲ್ಲಿ ರಾಜ್ಯದ ಆಸ್ಥಾನಕ್ಕಾಗಿ ಆಂತರಿಕ ಕಚ್ಚಾಟ ಮತ್ತು ಕುತಂತ್ರಗಳು ನಡೆದಾಗ, ಸ್ವತಃ ಚನ್ನಮ್ಮಳೇ ರಾಜ್ಯವ ಮುನ್ನೆಡೆಸುತ್ತಾಳೆ. ನಿರಂತರ 25 ವರ್ಷಗಳ ಕಾಲ ರಾಜ್ಯವನ್ನು ಆಳಿ ಕೆಳದಿಯ ಸಂಸ್ಥಾನವನ್ನು ಉಚ್ಚ್ರಾಯ ಸ್ಥಾನಕ್ಕೆ ಕೊಂಡ್ಯೊಯ್ಯುತ್ತಾಳೆ.

ಬಾಲ್ಯ: ತಂದೆ ತಾಯಿಯರು ಬಸವ ತತ್ವ ನಿಷ್ಟರಾಗಿದ್ದರು. ಎಡೆಯೂರಿನ ಸಿದ್ದಲಿಂಗೇಶ್ವರ ಶರಣರ ಅನುಯಾಯಿಗಳಾಗಿದ್ದು. ಅವರ ವಚನಗಳನ್ನೇ ಸದಾ ಕಾಲ ಮಗಳು ಚನ್ನಾಂಬೆಗೆ ಕಲಿಸಿ , ಅಪ್ಪ ಬಸವನ ಹೆಸರಿನ ಘನವ ಆಕೆಯಲ್ಲಿ ತುಂಬಿದ್ದರು. ನೂರೊಂದು ವಿರಕ್ತರಲ್ಲಿ ಒಂದಾಗಿದ್ದ ಗದಗಿನ ಡಂಬಳ ಮಠದಿಂದ ಲಿಂಗದಿಕ್ಷೆಯ ಪಡೆದಿದ್ದಳು. ಚಿಕ್ಕ ವಯಸ್ಸಿನಲ್ಲೇ ಅಕಸ್ಮಿಕವಾಗಿ ಕೆಳದಿಯ ರಾಜನ ಮದುವೆಯಾಗಿ ರಾಣಿಯಾದಳು.

ಸಾಧನೆಗಳು: ಅಳಿದುಹೋಗುತ್ತಿದ್ದ ಕನ್ನಡದ ಕೆಳದಿ ಸಾಮ್ರಾಜ್ಯವನ್ನು ಮತ್ತೆ ಗಟ್ಟಿಯಾಗಿ ಕಟ್ಟಿ ಸಲಹಿದ ಮಾತೆ. ಶಿವಾಜಿಯ ಮಗನು ಜೀವ ಭಯಧಿಂದ ಆಶ್ರಯ ಕೇಳಿ ಬಂದಾಗ ಮಗನಂತೆ ಸಲಹಿ ಸಂರಕ್ಷಿಸಿ ಮರಾಠರೆಲ್ಲರ ಬಾಯಲ್ಲಿ ಕನ್ನಡದ ಮಹಾಮಾತೆಯಾದವಳು.

ದೇಶವನ್ನೆಲ್ಲಾ ಗೆದ್ದು ಮಹಾರಾಷ್ಟ್ರದ ಮರಾಠ ಸಾಮ್ರಾಜ್ಯವನ್ನು ದ್ವಂಸಗೊಳಿಸಿ ದಕ್ಷಿಣಕ್ಕೆ ದಾಳಿ ಇಡಲು ಬಂದ ಔರಂಗಜೇಬನನ್ನು ಸೋಲಿಸಿ ಹೋಡಿಸಿದ ಕನ್ನಡದ ಏಕೈಕ ರಾಣಿ. ಮೈಸೂರು ಒಡೆಯರುಗಳ ಕ್ಷುಲ್ಲಕ ಬುದ್ದಿಗೆ ತಕ್ಕ ಉತ್ತರವಿತ್ತು ಸೋಲಿಸಿದ ವೀರರಾಣಿ ನಮ್ಮ ಕೆಳದಿಯ ಅರಸಿ, ಬಸವಪ್ಪನ ಅನುಕ್ಷಣವೂ ನೆನೆನೆನೆದು ಲಿಂಗಾಯತ ಧರ್ಮವ ಬಲಗೊಳಿಸಿ ಬಯಲಾದವಳು.

ಬಿರುದುಗಳು: “ಪೆಪ್ಪರ್ ಕ್ವೀನ್”ಮೆಣಸಿನರಾಣಿ” ಅರಬ್ ಮತ್ತು ಪೋರ್ಚುಗೀಸ ದೇಶದಲ್ಲೆಲ್ಲಾ ಈಕೆಯ ಹೆಸರನ್ನು ಮೆಣಸಿನ ರಾಣಿ(ಒಡತಿ) ಎಂದು ಕರೆಯುತ್ತಿದ್ದರಲ್ಲದೆ. #ಬಸವನಾಂಪ್ರಿಯೆ ಎಂಬ ಬಿರುದನ್ನು ತಿಮ್ಮಣ್ಣನವರಿಂದ, ಕನ್ನಡಸಿಂಹಿಣಿ ಎಂಬ ಬಿರುದನ್ನು ಔರಂಗಜೇಬನಿಂದ ಪಡೆದಳು. ನಂತರ ಕಣ್ಣಿಗೆ ಕಂಡ “ಕನ್ನಡದ ಭವಾನಿ‌ದೇವಿ” ಎಂದು ಮರಾಠಸಾಮ್ರಾಜ್ಯದ ಶಿವಾಜಿಯ ಮಗ ರಾಜಾರಾಮನು ಹಾಡಿ ಕೊಂಡಾಡುತ್ತಾನೆ.

ರಾಜಧರ್ಮ: ಬಸವಪ್ರಣೀತ ಲಿಂಗಾಯತ ಧರ್ಮ

ಸರ್ವಧರ್ಮ ಸಮನ್ವಯತೆ: ಲಿಂಗಾಯತ ಧರ್ಮದ ಆದರ್ಶಗಳ ಹೊತ್ತು ಸಕಲ ಜೀವಾತ್ಮರಿಗೂ ಲೇಸಬಯಸಿದ ತಾಯಿ. ಜಂಗಮರಿಗೆ ದಾಸೋಹ, ಮಠಗಳಿಗೆ ದತ್ತಿ ಮತ್ತು ಬಸವ ಪ್ರವಚನಗಳ ನಿತ್ಯನಡೆಸುವ ವ್ಯವಸ್ಥೆ ಮಾಡಿದ್ದಳು. ಹಿಂದೂ ಧರ್ಮದ ಹಲವು ದೇವಾಲಯಗಳಿಗೆ ದತ್ತಿ ದೇಣಿಗೆಯ ಕೊಟ್ಟಿದ್ದಳು. ಕ್ರೈಸ್ತ ಮುಸಲ್ಮಾನರಿಗೂ ಚರ್ಚು ಮಸಿದಿಗಳ ಕಟ್ಟಿಸಿ ಸರ್ವರ ಧಾರ್ಮಿಕ ಭಾವನೆಗಳಿಗೆ ಗೌರವಿಸಿದ್ದಳು.

ರಾಜನೀತಿ: ಮಕ್ಕಳಿಲ್ಲದ ಚನ್ನಮ್ಮ ತಮ್ಮ ಸಂಭದಿಯಾಗಿದ್ದ ಮಾರ್ಕಪ್ಪ ಶೆಟ್ಟಿಯ ಚಿಕ್ಕ ಮಗನನ್ನು ದತ್ತು ಪಡೆದು ತನ್ನ ಆರಾದ್ಯ ದೇವನಾದ ಅಪ್ಪ ಬಸವಣ್ಣನವರ ಹೆಸರನ್ನೇ ಇಟ್ಟು. ಪ್ರೀತಿಯಿಂದ ಬಸವಪ್ಪ ನಾಯಕ ಎಂದು ನಾಮಕರಣ ಮಾಡಿ ತಾನೇ ರಾಜ ತರಬೇತಿ‌ನೀಡುವುದರ ಜೊತೆಗೆ ಬಸವ ಧರ್ಮದ ಸಾಮಾಜಿಕ ತತ್ವಗಳ ಮಗನಿಗೆ ತುಂಬಿದ್ದಳು.

ಈಕೆಯ ಕಾಲದಲ್ಲಿ ಹಲವು ಯುದ್ದಗಳು ಬಂದೆರಗಿದರೂ ಎದೆಗುಂದದೆ ಪ್ರದಾನ ಮಂತ್ರಿ ತಿಮ್ಮಣ್ಣ ನಾಯಕ ಮತ್ತು ಹಲವು ಮಂತ್ರಿ ಗಳ ಬಳಿ ವಿಚಾರ ಪ್ರಸ್ತಾಪಿಸಿ ಮಗನ ಅನಿಸಿಕೆ ಪಡೆದು ಮುಂದಿನ ಹೆಜ್ಜೆ ಇಡಲು ರಾಜ್ಯದ ಯುವಕರನ್ನು ಉದ್ದೇಶಿಸುವ ಸಭೆಗಳ ಮಾಡುತ್ತಿದ್ದಳು.
ಚನ್ನಮ್ಮಳ ಮಾತುಗಳು ಶರಣರ ವಾಕ್ಯದಂತೆ ನಡೆನುಡಿಯಲ್ಲಿ ಒಂದಾಗಿದ್ದವು. ನಾಡಿನ ಯುವಕರಿಗೆ ಆದರ್ಶವಾಗಿದ್ದಳು ಮಹಾರಾಣಿ.

ಹೀಗೆ ಕನ್ನಡ ನಾಡಿನ ಕೆಚ್ಚೆದೆಯ ವೀರತನದ ಚನ್ನಮ್ಮಳು, ದೇಶವನ್ನೇ ಗೆದ್ದು ಕೊಳ್ಳೆ ಹೊಡೆಯಲು ಬಂದ ಕ್ರೂರಾತಿ ಕ್ರೂರ ರಾಜರುಗಳಿಗೆ ಸಿಂಹಸ್ವಪ್ನಳಾಗಿ, ಶಿವಾಜಿಯ ವಂಶಕಾಪಾಡಿ ಕನ್ನಡನಾಡಿನ ಘನತೆಯ ಮೆರೆದು ಬಸವ ಧರ್ಮದ ಸಾಮಾಜಿಕ ಧಾರ್ಮಿಕ ನೀತಿಗಳನ್ನು ರಾಜನೀತಿಗಳಾಗಿಸಿ, “ದುಡಿಯುವ ವರ್ಗಕ್ಕೆ” ನಿಜತಾಯಿಯಾಗಿ, ಸಾಸಿರ ದಾಸೋಹಗಳ ಮಾಡಿ ನಾಡನ್ನು ಸಮೃದ್ದಿಗೊಳಿಸಿ ಸಾಕಿದ ವೀರರಾಣಿ ಕೆಳದಿಯ ಚನ್ನಮ್ಮಳ ನೆನೆದು ಶರಣೆಂದು.

ಸರಳ ಸಹಬಾಳ್ವೆ ಸಮಾನತೆ ಕಾಯಕ ದಾಸೋಹಗಳಿಂದ ಕೂಡಿದ ರಾಜ್ಯ ವೈಚಾರಿಕತೆಯ ಕಲ್ಯಾಣರಾಜ್ಯವಾಗಬಲ್ಲದು ಎಂದು ಕಲಿಸಿದ ಅಪ್ಪ ಬಸವರಾಜರ ನೆನೆದು ಶರಣೆಂದು.

ಆಧುನಿಕ ಭಾರತಕ್ಕೆ ನಿಜರಾಜನಾಗಿ ಸಮಾನತೆಯ ಕಾನೂನು ಬಿತ್ತಿ ಕೋಮುವಾದಿಗಳ ಎದೆಯ ಝಲ್ಲೆನಿಸುವಂತೆ ಗರ್ಜಿಸಿ, ಹಿಂದುಳಿದ ಸಕಲರಿಗೂ ತಾಯಿಯಾಗಿ ಬಂದು ಮಾನವತೆಯ ಮಹಾಪರ್ವವೇ ಆಗಿಹೊದ ಜ್ಞಾನನಿಧಿ ಅಂಬೇಡ್ಕರ್ ಅವರ ನೆನೆದು ಶರಣೆಂದು

ನಾಡಿನ ಆಗುಹೋಗುಗಳ ಬಹಳ ಸೂಕ್ಷಮಾಗಿ ಅವಲೋಕಿಸುತ್ತಾ ಜಾತಿ ಮತ ಪಂಥಗಳ ಮೀರಿ ಸದಾ ಸತ್ಯ ಮತ್ತು ವೈಚಾರಿಕ ನಿಲುವುಗಳ ಸಮಾಜದಲ್ಲಿ ಜಾಗೃತಗೊಳಿಸುತ್ತಲಿರುವ ನಿಮ್ಮೆಲರಿಗೂ ಶರಣು ಶರಣಾರ್ಥಿ

ದೀಪ್ತಿ ಎಸ್ ಪಾಟೀಲ್
ಬಸವಪ್ರಿಯಳು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!