Breaking News
Home / featured / ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?

ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?

ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?
ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?

ಒಂದಂಗದ ಕಣ್ಣು ಉಭಯದಲ್ಲಿ ಒಂದು
ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆ ಸಂದಿತ್ತು.
-ಡಕ್ಕೆಯ ಬೊಮ್ಮಣ್ಣ

              ವಚನ ಅನುಸಂಧಾನ

ಶರಣರ ಬದುಕಿನ ಸಿದ್ದಾಂತವು ಅತ್ಯಂತ ವೈಜ್ಞಾನಿಕ ಮತ್ತು ವೈಚಾರಿಕವಾದುದು. ಹಾಗಾಗಿ, ಅವರ ಲೌಕಿಕದ ಬದುಕಿನ ರೀತಿ ನೀತಿಯು, ಅರಿವು ಆಚರಣೆಯು ಲೋಕದ ಜನರ ದೃಷ್ಟಿಯಲ್ಲಿ ವಿಶೇಷ ವಾಗಿ ಹಾಗೂ ವಿಶಿಷ್ಟವಾಗಿ ತೋರುತ್ತದೆ

ಆದರೆ, ಶರಣರು ಮಾತ್ರ ತಮ್ಮಅರಿವಿನ ಗ್ರಹಿಕೆಯ ನಿಜದ ನೆಲೆಯನ್ನು ಬಿಟ್ಟು ಕೊಡದೇ,ಅದನ್ನು ಅನುಸರಿಸಿ ಆಚರಿಸಿ ತಮ್ಮ ನಿರ್ದಿಷ್ಟವಾದ ಗುರಿಯನ್ನು ಸಾಧಿ ಸುವ ಛಲಗಾರರಾದರು. ಹಾಗಾಗಿ, ಶರಣರು ಲೌಕಿಕರ ದೃಷ್ಟಿಗೆ ಬೆರಗಿನ ಬೆಳಕಾಗಿ ತೋರುವರು.

ಈ ವಿಚಾರದ ಹಿನ್ನೆಲೆಯಲ್ಲಿ; ಶರಣ ಢಕ್ಕೆಯ ಬೊಮ್ಮಣ್ಣನವರ ಪ್ರಸ್ತುತ ವಚನವನ್ನು ಚಿಂತನೆಯ ಮಾಡೋಣ.

ಸತಿಯ ಗುಣವ ಪತಿ ನೋಡಬೇಕಲ್ಲದೆ
ಪತಿಯ ಗುಣವ ಸತಿ ನೋಡಬಹುದೆ ಎಂಬರು.
ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ?
ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ?

ಸಾಮಾನ್ಯವಾಗಿ ಜನಮಾನಸದಲ್ಲಿ; ಸತಿಯು ಪತಿಯನ್ನು ಅನುಸರಿಸಿ ನಡೆಯಬೇಕು ಎಂಬ ಭಾವ ಬಲವಾಗಿಯೇ ಬೇರೂರಿದೆ. ಹಾಗಾಗಿ, ಪತಿಯು ಸತಿಗೆ ಪ್ರಶ್ನೆ ಮಾಡಬಹು ದು ಆದರೆ, ಆ ಹಕ್ಕು ಸತಿಗಿಲ್ಲ. ಈ ಧೋರಣೆಯನ್ನು ನಮ್ಮ ಶರಣರು ಒಪ್ಪುವುದಿಲ್ಲ. ಸತಿ ಪತಿಗಳು ಪರಸ್ಪರರು ಸರ್ವ ಸಮಾನರು. ಯಾರೂ ಹೆಚ್ಚಿನವರಲ್ಲ. ಅದಕ್ಕೇ “ಸತಿಪತಿ ಒಂದಾಗಿ ಮಾಡಿದ ಭಕ್ತಿ ಹಿತವಾಗಿಪ್ಪುದು” ಎನ್ನುವುದು ಅವರ ದೃಢವಾದ ನಿಲುವಾಗಿದೆ.

ಶರಣರು ತಮ್ಮ ಈ ಧೋರಣೆಯನ್ನು ವೈಜ್ಞಾನಿಕ ಮತ್ತು ವೈದ್ಯಕೀಯ ನೆಲೆಯಲ್ಲಿ ಹೀಗೆ ವಿವೇಚಿಸುತ್ತಾರೆ. ಒಂದು ವೇಳೆ ಸತಿಗೆ ಸೋಂಕು ತಗುಲಿದರೆ ಪತಿಗೆ ಕೇಡಾಗದೇ? ಅದರಂತೆಯೇ ಪತಿಗೆ ಸೋಂಕು ತಗುಲಿದರೆ ಸತಿಗೆಯೂ ಕೇಡಾಗದೆ!? ಎಂದು ತರ್ಕಬದ್ಧವಾಗಿ ಪ್ರಶ್ನಿಸಿ ತಿಳಿಸುತ್ತಾರೆ.

ಒಂದಂಗದ ಕಣ್ಣು ಉಭಯದಲ್ಲಿ ಒಂದು
ಹಿಂಗಲಿಕ್ಕೆ ಭಂಗವಾರಿಗೆಂಬುದ ತಿಳಿದಲ್ಲಿಯೆ
ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸಲೆಸಂದಿತ್ತು.

ಒಬ್ಬೊಬ್ಬರಿಗೆ ಎರಡೆರಡು ಕಣ್ಣುಗಳು ಇರುತ್ತವೆ. ಈ ಎರಡೆ ರಡೂ ಕಣ್ಣಿನ ಮೂಲಕ ಕಾಣುವ ದೃಷ್ಟಿ ಮಾತ್ರ ಒಂದೇ ಇರು ತ್ತದೆ. ಅದರಲ್ಲಿ ಒಂದು ಕಣ್ಣಿಗೆ ದೋಷ ಬಂದರೂ ಅದರ ಪರಿಣಾಮ ಮಾತ್ರ ಎರಡೂ ಕಣ್ಣುಗಳು ಅನುಭವಿಸ ಬೇಕಾಗುತ್ತದೆ. ಈ ವೈಚಾರಿಕ, ವೈಜ್ಞಾನಿಕ, ವೈದ್ಯಕೀಯ ಸತ್ಯವನ್ನು ತಿಳಿದು ,ಸತಿ ಪತಿ ಸಮಾನರೆಂದು ಭಾವಿಸಿ ಬಾಳಿ ನಡೆದಲ್ಲಿ ಅದು ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಫಲ ಸಲ್ಲುತ್ತದೆ ಎಂಬುದು ವಚನದ ತಿರುಳಿನ ಸಂದೇಶವಾಗಿದೆ.

ಶರಣ : ಅಳಗುಂಡಿ ಅಂದಾನಯ್ಯ
ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!