Breaking News
Home / featured / ಪೂಜಾರಿಗೋಳು ಅಂತ ಸುಳ್ಳ್ ಹೇಳಿ ಕೆಲ್ಸ ಮಾಡ್ತಿದಿನ್ರೀ..!!

ಪೂಜಾರಿಗೋಳು ಅಂತ ಸುಳ್ಳ್ ಹೇಳಿ ಕೆಲ್ಸ ಮಾಡ್ತಿದಿನ್ರೀ..!!

ನಾನು ನನ್ನ ಬೈಕ್ ನಿಲ್ಲಿಸಲಿಲ್ಲ….

ಹೌದು. ಕರೋನಾ ರೋಗದ ಸಲುವಾಗಿ ಇಡಿ ಭಾರತ ಲಾಕ್ ಡೌನ್ ಆಗಿದೆ. ಪೋಲೀಸರು ಎಲ್ಲಾ ಕಡೆ ಬ್ಯಾರಿಕೇಡ್ ಗಳಿಂದ ರೋಡ್ ಬ್ಲಾಕ್ ಮಾಡಿ ಬಹುತೇಕ ಬೈಕ್ ಸವಾರರಿಗೆ ಲಾಠಿ ರುಚಿ ಬಡಿಸುತ್ತಿದ್ದಾರೆ.

ನಾನೋ ಸರಕಾರಿ ನೌಕರ. ಪೋಲಿಸರು ಕೇಳಿದರೆ ನನ್ನ ಐಡಿಕಾರ್ಡ್ ತೋರಿಸಿ, ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದೇನೆಂದು ಸುಳ್ಳು ಹೇಳಿ ತಪ್ಪಿಸಿಕೊಂಡು ಹೋಗಬಹುದು ಎಂದು ಯೋಚಿಸುತ್ತಾ ಗುಲಬರ್ಗಾದಿಂದ ಜೇವರ್ಗಿ ಕಡೆಗೆ ಹೊರಟಿದ್ದೆ.

ಗುಲಬರ್ಗಾದ ರಾಮಮಂದಿರ ದಾಟಿ ಸುಮಾರು ಮೂರು ಕಿ.ಮಿ. ದೂರದಲ್ಲಿದ್ದೆ. ಸುಮಾರು ೫೫ ಆಸುಪಾಸಿನ ಒಬ್ಬ ಮಹಿಳೆ ಕೈಮಾಡಿದಳು. ಹೌದು. ನಾನು ಬೈಕ್ ನಿಲ್ಲಿಸಲಿಲ್ಲ. ಒಬ್ಬನೇ ಬೈಕ್ ಮೇಲೆ ಹೋಗುವಾಗ ಮುಂದೆ ಎಲ್ಲಾದ್ರೂ ಪೋಲೀಸರು ಇದ್ದರೆ ಮೇಲಿನ ಪೂರ್ವಯೋಜನೆಯಂತೆ ಪಾರಾಗಬಹುದು. ಹಿಂದೆ ಕೂರಿಸಿಕೊಂಡು ಹೋಗುವಾಗ ಪೋರಿಸರ ಕೈಗೆ ಸಿಕ್ರೆ ಸುಮ್ನೆ ಯಾಕೆ ರಿಸ್ಕು ಅಂತ ನಾನು ಬೈಕ್ ನಿಲ್ಲಿಸಲಿಲ್ಲ.

ಅವರ ಕೈಯಲ್ಲಿದ್ದ ವಿಮಲ್ ಪಾನ್ ಮಸಾಲ ಮುದ್ರೆಯ ಕೈಚೀಲವನ್ನು ಗಮನಿಸಿದ್ದ ನಾನು ಬೈಕ್ ನಿಲ್ಲಿಸುವಷ್ಟರಲ್ಲಿ ಸುಮಾರು ೩೦೦ ಮೀಟರ್ ಮುಂದೆ ಕ್ರಮಿಸಿದ್ದೆ. ಬೈಕ್ ನಿಲ್ಲಿಸಿ ಆ ಹಿರಿಯ ಮಹಿಳೆಯನ್ನು ಹಿಂದಿರುಗಿ ನೋಡಿ ಕೈಮಾಡಿ ಕರೆದೆ. ಅವರು ನನ್ನಕಡೆ ಓಡಿ ಬರುತ್ತಿದ್ದರು.

ಬೈಕ್ ಹತ್ತಿ ಕೂರುತ್ತಿದ್ದಂತೆಯೆ,
~ಎಪ್ಪಾ ಪುಣ್ಯ ಬರ್ಲೆಪ್ಪಾ ನಿಂಗೆ. ನಂಗೇ ಅತಾತ ಫರಹತಾಬಾದ್ ತನಕ ಬಿಡಪ್ಪಾ ಅಂಥ ಮಾತು ಶುರುಮಾಡಿದವರು ಜೇವರ್ಗಿ ಕಡೆ ಹೊಂಟಿರೇನಪ್ಪಾ ಅಂಥ ಕೇಳಿದ್ರು.
*ಹೂಂ ರಿ ಅಂದೆ ನಾನು.

~ಯವಾದೋ ರೋಗ ಬಂದು ಬಸ್ ಎಲ್ಲಾ ಬಂದ್ ಆಗ್ಯಾವ ಎಪ್ಪಾ, ಜೀಪೂನು ಇಲ್ಲ ಆಟೋನು ಇಲ್ಲ. ನೀ ನಿಲ್ಸಿದ್ದಿಲ್ಲಂದ್ರೆ ಈ ಬಿಸ್ಲಾಗ ೩೫ ಕಿ.ಮಿ. ನಡ್ಕೊಂತ ನಮ್ಮೂರಿಗಿ ಹೋಗ್ಬೇಕಿತ್ತು ಅಂದ್ರು.

*ಗೊತ್ತಿದ್ರೂ ಮತ್ತೇಕೆ ಊರಿಬಿಟ್ಟು ಬಂದ್ರಿ ಅಂದೆ.
~ಇಲ್ಲೇ ರಾಮಮಂದಿರ ಬಲ್ಲಿ ಮನಿಕೆಲಸ ಮಾಡ್ತಿನೆಪ್ಪಾ ನಾನು. ನಮ್ಮೂರು ಫರತಾಬಾದಿಂದ ಒಳಗಡೆಗೆ ೧೫ ಕಿ.ಮಿ. ಏನೋ ಆಗ್ತಾದ್ರಿ. ಕಲಬುರಗಿಯಿಂದ ೩೦ ರೂ. ಟಿಕಿಟ್ ಆದ್ನೋಡ್ರಿ ಅಂದ್ರು.

*ಬಂದ್ ಇರುವುದು ಗೊತ್ತೆ ಇದೆ. ಇನ್ನೂ ಹದಿನೈದು ದಿನ ಮನೆಕೆಲಸಕ್ಕೆ ಬರಲ್ಲ ಅಂಥ ಹೇಳಿ ಊರಲ್ಲೇ ಇರ್ಬೆಕಿಲ್ರಿ ಅಂದೆ.
~ಇಲ್ಲೆಪ್ಪಾ, ನಾನು ಇಲ್ಲಿ 7 ಮನೆಗಳ ಬಾಂಡೆ ಬಟ್ಟಿ ತೊಳಿತಿನಿ. ಒಬ್ರೊಬ್ರು ತಿಂಗಳಿಗೆ ೫೦೦ ರೂ., ಒಬ್ಬೊಬ್ರು ೬೦೦ ರೂ ಕೊಡ್ತಾರ್ರಿ. ತಿಂಗ್ಳಾ ನಂಗೆ ಸುಮಾರು 35೦೦ ಚಿಲ್ಲರೇ ಪಗಾರ್ ಬರ್ತಾದ್ರಿ. ದಿನಕ್ಕೆ 14೦ ರೂ ಬೀಳ್ತಾದ್ರಿ ಅಂದ್ರು ಅವರು ಲೆಕ್ಕಾಚಾರದಲ್ಲಿ.

*ನಿಮ್ಮೂರಲ್ಲೇ ಹೊಲದ ಕೆಲಸಕ್ಕೆ ಹೋದ್ರೆ ಚೊಲೊ ಬರ್ತಾದಲ್ರಿ ರೊಕ್ಕ ಅಂದೆ.
~ನನ್ ಗಂಡ ಚೊಲೊ ಇಲ್ರಿ. ನನ್ನ ತಂಗಿಗಿ ಮಾಡ್ಕೊಂಡು (ಮದುವೆ) ನಂಗೆ ಬಾಳ್ ತ್ರಾಸ್ ಕೊಟ್ಟಾನ್ರಿ. ಮೊದ್ಲು ನನ್ನ ಬಾಳ್ ಚೊಲೊ ನೋಡ್ಕೊಂಡಾನ್ರಿ. ಹೊರಗೆಲ್ಲೂ ನನ್ನ ಕೆಲಸಕ್ಕೆ ಕಳ್ಸಿಲ್ರಿ. ಹಂಗಾಗಿ ನಂಗೆ ಹೊಲದ ಕೆಲ್ಸ ಬರಲ್ರಿ. ಅವ್ನು ಬಿಟ್ಮೇಲೆ ಬಾಳ್ ತ್ರಾಸಾಗಿ ಈ ಮನಿ ಕೆಲ್ಸ ಮಾಡೋಕೆ ಶುರು ಮಾಡಿದೆರಿ. ಪೋಲಿಸ್ ಕೇಸ್ ಕೂಡ ಮಾಡಿದೆರಿ ಆದ್ರೆ ಅವ್ನು ನಂಗೆ ಅಟಾಪ್ ಆಗ್ಲಿಲ್ರಿ ಅಂದ್ರು.

*ಮಕ್ಳು ಎಷ್ಟು ಜನರು ಅದಾರ್ರಿ ನಿಮ್ಗೆ. ಅವ್ರು ಏನ್ ಮಾಡ್ತಾರೆ ಅಂಥ ಕೇಳ್ದೆ.
~ಮೂವರು ಅದಾರ್ರಿ. ಇಬ್ರು ಗಂಡ್ಮಕ್ಳುರಿ. ಒಬ್ಬಕಿ ಹೆಣ್ಮಗ್ಳುರಿ. ದೊಡ್ಡಂವ ಚೊಲೊ ಓಡ್ತಾನ್ರಿ. ಪೋಲಿಸ್ ಕೆಲ್ಸಕ್ಕೆ 6೦೦೦೦ ಸಾವಿರ ಕೇಳ್ತಿದ್ದಾನ್ರಿ. ಸಣ್ಣಂವ 1೦ ನೇ ಅದಾನ್ರಿ. ಹುಡ್ಗಿ 7 ನೇ ಅದಾಳ್ರಿ.

*ದೊಡ್ಡ ಹುಡುಗ ಏನೂ ಕೆಲಸ ಮಾಡಲ್ಲೇನ್ರಿ ಅಂದೆ.
~ಇಲ್ರಿ ಏನೂ ಮಾಡಲ್ರಿ. ಊರಾಗೇ ಇರ್ತಾನ್ರಿ. ನಾವಿರೋತಕ ನೋಡ್ಕೋಬೇಕಲ್ರಿ. ಅದ್ಕೆ ಇಲ್ಲಿ ಬಂದು ಕೆಲ್ಸ ಮಾಡ್ತಿನ್ರಿ. ವಾರದಲ್ಲಿ 1೦೦ ರೂ. ಚೀಟಿ ಕಟ್ತೀನ್ರಿ. ಅಕಿ ಸಂಘದಕಿ ಒಟ್ಟ ಬಿಡಲ್ರಿ. ಸಾಕ್ಸಾಕ್ ಆಗ್ಯಾದ್ರಿ ಅಕಿನ ಕಾಲಾಗ್ ಅಂದ್ರು.

(ನಗು ಬಂತು ನಕ್ಕೆ)

*ಭಾರತ ಬಂದ್ ಆಗಿರುವ ಸಲುವಾಗಿ ಯಾವ ಸಾಲದ ಕಂತು ಕೂಡ ಮೂರು ತಿಂಗಳು ಕಟ್ಟಂಗಿಲ್ಲ ಅಂಥ ಮೋದಿ ಹೇಳ್ಯಾನ್ರಿ ಇವತ್ತು ಅಂತ ಅವರಿಗೆ ತಿಳಿಯುವ ಹಾಗೇ ಹೇಳಿದೆ.
~ಮೂರು ತಿಂಗ್ಳು ಹೇಳ್ಯಾನ್ರಿ!?. ಚೊಲೋ ಆಯ್ತು ನೋಡ್ರಿ. ನೀವಿದ್ದಿದ್ದಿಲ್ಲ ಅಂದ್ರೆ ಇದು ನಂಗೆ ಗೊತ್ತೇ ಆಗ್ತಿದ್ದಿಲ್ಲ ನೋಡ್ರಿ. ಚೊಲೊ ಆಯ್ತ್ರಿ ನೀವು ಸಿಕ್ಕಿದ್ದು ಅಂದ್ರು.

~ಎಪ್ಪಾ, ನೀವು ಎಷ್ಟು ಜನ ………. ಕೇಳಿದ್ರು.
*ಎಲ್ಲಾ ಹೇಳ್ದೆ ನಾನು.
~ದೇವ್ರು ಚೊಲೊ ಮಾಡ್ಯಾನ್ ಬಿಡ್ರಿ ನಿಮಗ ಅಂದ್ರು.
(ನಗು ಬಂತು ಮತ್ತೆ. ನಕ್ಕೆ)

*ನಂಗೊಂದು ರೂಮ್ ಬೇಕಿತ್ತು, ನೀವು ಕೆಲ್ಸ ಮಾಡೋ ಮನೇಲಿ ಸಿಂಗಲ್ ರೂಮ್ ಇದ್ರೆ ನೋಡಿ ಹೇಳ್ರಿ ಅಂದೆ.
~ಒಂದು ಮನೇಲಿ ಒಂದು ರೂಮ್ ಆದ್ರಿ. ಆ ರೂಮಲ್ಲಿ ಮೊದ್ಲು ಒಬ್ಬಾಕಿ ಲಿಂಗಾಯತ್ರ ಹುಡ್ಗಿ ಇದ್ದುಳ್ರಿ. ಈಗ ಬಿಟ್ಟಾಳ್ರಿ ಅಕಿ. ಕೇಳ್ತಿನ್ರಿ ಮಾಲಾಕ್ರಿಗಿ. ಮಾಲಾಕ್ರು ಬ್ರಾಮುಂಡ್ರುರ್ರಿ. ಬಾಳ್ ಚೊಲೊ ಅದಾರ್ರಿ. ನಾನು ಎಸ್ಸಿಗೋಳ್ ಮಂದಿರಿ. ಅದೇ ಜೈಭೀಮ್ ಅಂತಾರಲ್ರಿ ಆ ಮಂದಿರಿ. ಎಸ್ಸಿಗೋಳ್ ಅಂದ್ರೆ ಕೆಲ್ಸ ಕೊಡಲ್ಲ ಅಂತ ಪೂಜಾರಿಗೋಳು ಅಂತ ಸುಳ್ ಹೇಳಿ ಕೆಲ್ಸ ಮಾಡ್ತಿದಿನ್ರಿ. ಏಳು ವರ್ಷ ಆಯ್ತ್ರಿ ಈಗ ನಾ ಕೆಲ್ಸ ಮಾಡಕತ್ತು.

~ಕಮಾನ್ ಬಂದಾಗ ಹೇಳ್ತಿನ್ರಿ. ಅಲ್ಲೇ ಇಳುಸ್ರಿ ನನಗೆ. ಅಲ್ಲೇ ನಿಮ್ ನಂಬರ್ ಕೊಡ್ರಿ. ನಾ ಪೋನ್ ಮಾಡಿ ಹೇಳ್ತಿನ್ರಿ ನಾಳಿಗಿ ನಿಮಗ ಅಂದ್ರು.

ಅನ್ನುವಷ್ಟರಲ್ಲಿ ಫರತಾಬಾದ್ ಮುಂದೆ ಇರುವ ಕಮಾನ್ ಬಂತು. ಬೈಕ್ ನಿಲ್ಲಿಸಿದೆ. ಕೆಳಗಿಳಿದರು.

~ಬಾಳ್ ಚೊಲೊ ಸಿಕ್ರಿ ನೀವು ಇವತ್ತು. ಇಲ್ಲಾಂದ್ರೆ 35 ಕಿ.ಮಿ. ಇಂಥ ಬಿಸ್ಲಾಗ್ ನಡ್ಕೊಂತ ಬರ್ಬೇಕಿತ್ರಿ ನಾ. ನಿನ್ನೆ ನಡ್ಕೊಂತಾನೆ ಬಂದಿನೋಡ್ರಿ. ನಾಳೆನೂ ಯಾರಾನ ನಿಮ್ಮಂಗ ಸಿಕ್ರೆ ಚೊಲೊ ಆಗ್ತಾದ್ರಿ ಅಂದ್ರು.

*ವಿಮಲ್ ಪಾನ್ ಮಸಾಲದ ಮುದ್ರೆ ಇರುವ ಕೈಚೀಲವನ್ನು ನೋಡಿ, ಏನಿದೆ ಇದರಲ್ಲಿ ಅಂದೆ.
~ಮನಿ ಕೆಲ್ಸಕ್ಕೆ ಹೋಗೋ ಮಾಲಾಕ್ರು ಏನರ ಊಟ ಕೊಡ್ತಾರ್ರಿ. ಅದು ಮನಿಗಿ ತೊಗೊಂಡು ಹೋಗ್ತಿನ್ರಿ ಅಂತ ಅಂದು ಸೆರಗು ತಲೆಮೇಲೆ ಹಾಕ್ಕೊಂಡ್ರು.
(ಮೂಖನಾದೆ).

ಭಾರತೀಯ ಬಹುತೇಕ ಕಡುಬಡತನದ ಕುಟುಂಬಗಳು ಇವನ್ನು ರೂಡಿಗತ ಮಾಡಿಕೊಂಡು ಕಲ್ಮಶಗೊಂಡ ವ್ಯವಸ್ಥೆಗೆ ತಮ್ಮನ್ನು ತಾವೇ ಒಗ್ಗೂಡಿಸಿಕೊಂಡಿದ್ದಾರೆ.

ಭಾರತ ಹಳ್ಳಿಗಳ ದೇಶ. ಬಹುತೇಕ ಭಾರತೀಯರು ಬದುಕುತ್ತಿರುವುದೇ ಹೀಗೆ. ಸರಕಾರ ಇಂತಹ ಕಡುಬಡವರನ್ನು ಗುರುತಿಸಿ ಕನಿಷ್ಟ ಗುಣಮಟ್ಟದ ಜೀವನಪದ್ದತಿಯನ್ನಾದರೂ ಒದಗಿಸಬೇಕು.

ಪ್ರಸ್ತುತ ಸರಕಾರ ತೆಗೆದುಕೊಂಡ ಬಂದ್ ನಿರ್ಧಾರವು ಒಂದು ಮಗ್ಗಲಿನಿಂದ ಸರಿ ಇದ್ದರೂ ಇನ್ನೊಂದು ಮಗ್ಗಲಿನಿಂದ ಗಾಯದ ಮೇಲೆ ಕೆಂಡದಬರೆ ಎಳೆದಂತಾಗಿದೆ ಒಂದು ಹೊತ್ತಿನ ಊಟಕ್ಕಾಗಿ ದುಡಿಯುವ ಕಡುಬಡ ವರ್ಗದ ಜನರಿಗೆ.

ಇಡೀ ಭಾರತವೇ ಬಂದ್ ಆಗುವಂತೆ ಮಾಡಿರುವ ಕರೋನಾ ವೈರಸ್ ಗೆ ಅಂಜಿ ಪ್ರಯಾಣಿಸುತ್ತಿದ್ದ ನಾನು ಆ ಮಹಿಳೆಯ ಬದುಕುವ ಛಲವನ್ನು ನೋಡಿ ನಿಬ್ಬೆರಗಾದೆ.

ಜಾತಿವ್ಯವಸ್ಥೆಯನ್ನು ಇದ್ದಹಾಗೇ ಒಪ್ಪಿಕೊಳ್ಳುವಂತೆ ಮಾಡಿರುವ ಕರಾಳ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಬಹಳ ಮರುಗಿತು ಮನಸು.

ಈ ಬಡತನ, ಶ್ರೀಮಂತಿಗೆ, ಬದುಕುವ ಛಲ, ಅನಿವಾರ್ಯತೆ, ಅನೂಕೂಲ, ರೂಡಿಗತ-ಬದುಕು ಸಾಮಾಜಿಕ, ರಾಜಕೀಯ, ನೈತಿಕ ಹಾಗೂ ಇನ್ನಿತರ ವ್ಯವಸ್ಥೆಗಳು ಇನ್ನೂ ಗಲೀಜುಗಳಿಂದ ಕೂಡಿವೆ ಎಂದೂ ನಿರೂಪಿಸಲು ಇದೊಂದು ಉದಾಹರಣೆ ಅಷ್ಟೇ.

* HS Sinnur

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!