Breaking News
Home / featured / ಅಂಬೇಡ್ಕರರು ಮತ್ತು ಬಸವತತ್ವದ ದಾರಿ

ಅಂಬೇಡ್ಕರರು ಮತ್ತು ಬಸವತತ್ವದ ದಾರಿ

ಬೆಳಗಾವಿ: 12 ನೇ ಶತಮಾನದಲ್ಲಿ ಬಸವಾದಿ ಶರಣರು ಹುಟ್ಟಿ ಬರದಿದ್ದರೇ, ಇಂದು ಭಾರತ ಭಾರತವಾಗಿ ಉಳಿಯುತ್ತಿರಲಿಲ್ಲ. 20ನೇ ಶತಮಾನದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರು ಹುಟ್ಟದಿದ್ದರೇ, 20-21 ನೇ ಶತಮಾನವು ಭಾತರದ ಪಾಲಿಗೆ ಶೂನ್ಯ ಶತಮಾನವಾಗುತ್ತಿತ್ತು. ವಿಶ್ವದ ಅಂಗಳದಲ್ಲಿ ಭಾರತಕ್ಕೆ ಅಸ್ತಿತ್ವವೇ ಇರುತ್ತಿರಲಿಲ್ಲ.

12 ನೇ ಶತಮಾನದಲ್ಲಿ ಬಸವಾದಿ ಶರಣರು ಮಂಡಿಸಿದ್ದ ಪ್ರಸ್ತಾವನೆಗಳಿಗೆ 21 ನೇ ಶತಮಾನ ಅನುಮೋದನೆ ನೀಡುತ್ತಿದೆ. ಮಾನವನ ಬದುಕು ಇರುವದು ಗುಡಿ- ಗುಂಡಾರ, ತೀರ್ಥ-ಪ್ರಸಾದಗಳಲ್ಲಿ ಅಲ್ಲ. ಹೋಮ-ಹವನ, ಪಾದಪೂಜೆಗಳಲ್ಲಿ, ಮಂಗಳಾರತಿಗಳಲ್ಲಿ ಅಲ್ಲ. ಗುಡಿ ಗುಂಡಾರಗಳ ಆಚೆ ಕಾಯಕ ಮತ್ತು ದಾಸೋಹದಲ್ಲಿಯೇ ಮನುಷ್ಯನ ಹಸಿವಿನ ಸಂಕಟ ತೀರಿಸುವ ಮತ್ತು ನೆಮ್ಮದಿಯ ಜೀವನದ ಸತ್ಯ ಅಡಗಿದೆ ಎಂಬುದನ್ನು ಬಸವಾದಿ ಶರಣರು ಸಾಧಿಸಿ ತೋರಿಸಿದ್ದರು. ಬೇಡುವವರಿಲ್ಲದ ಬಡತನ ರಹಿತ ಕಲ್ಯಾಣ ರಾಜ್ಯವನ್ನು ರೂಪಿಸಿದ್ದರು.
ಮನುಷ್ಯನ ದೌರ್ಬಲ್ಯಗಳ ದುರ್ಲಾಭ ಪಡೆಯಲು ಹೆಣೆಯಲಾಗಿದ್ದ ಧರ್ಮದ ಭಯವನ್ನು ಮೆಟ್ಟಿ ನಿಂತರು. ಮನುಷ್ಯನು ಮಾನವನಾಗಿ ಬದುಕಲು ಬೇಕಾಗಿರುವದು ಅರಿವು, ಅರಿವೆ, ಅಕ್ಷರ, ಆಹಾರ, ಔಷಧ ಮತ್ತು ಸೂರು ಎಂಬ ಸತ್ಯವನ್ನು ಜಗತ್ತಿನ ಮುಂದೆ ಸಾಬೀತು ಪಡಿಸುವ ಮೂಲಕ ಈ ಯಾವುದನ್ನು ನೀಡದ ದೇವರು ಮತ್ತು ಧರ್ಮಗಳನ್ನು ಗೆದ್ದರು. ನವ ಮಾನವರಾದರು. ಇಡಿ ವಿಶ್ವದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಾಕ್ಷರ ಸಮಾವನ್ನು ಕಟ್ಟಿದರು.

12 ನೇ ಶತಮಾನದಲ್ಲಿಯ ಬಸವಾದಿ ಶರಣರ ಪ್ರಸ್ತಾವನೆಗಳಿಗೆ 21 ನೇ ಶತಮಾನವು ಅನುಮೋದನೆ ನೀಡಲು ಡಾ.ಬಾಬಾಸಾಹೇಬ ಅಂಬೇಡ್ಕರ ಎಂಬ ಮಹಾಮೇಧಾವಿ ಕಾರಣ ಎಂಬುದು ಇಂದು ಭಾರತೀಯರು ಅರಿಯಬೇಕಾದ ಮತ್ತು ಅರಗಿಸಿಕೊಳ್ಳಬೇಕಾದ ಪರಿಪೂರ್ಣ ಸತ್ಯ. ಡಾ.ಬಾಬಾಸಾಹೇಬ ಅಂಬೇಡ್ಕರ ಎಂಬುದು 21 ನೇ ಶತಮಾನವು ಕಂಡ ವಿಸ್ಮಯಕಾರಿ ಅಚ್ಚರಿ. ಬಸವ ಚಳುವಳಿಯ ನಂತರ ಮತ್ತೆ ಅಕ್ಷರ ಲೋಕದಿಂದ ದೂರ ತಳ್ಳಲ್ಪಟ್ಟಿದ್ದ ಶೋಷಿತ ಸಮುದಾಯಗಳನ್ನು ಮತ್ತೆ ಅಕ್ಷರ ಲೋಕಕ್ಕೆ ತಂದು ಕಟ್ಟಿ ಹಾಕುವ ಮೂಲಕ ಬಹುದೊಡ್ಡ ಅಕ್ಷರ ಮತ್ತು ವೈಚಾರಿಕ ಕ್ರಾಂತಿಗೆ ಭದ್ರ ಬುನಾದಿ ಹಾಕಿದ್ದೇ ಭೀಮ ಶಕ್ತಿ. ಬಸವಾದಿ ಶರಣರ ಚಳುವಳಿಯ ನಂತರ ಈ ಜಗತ್ತು ಕಂಡ ಅತ್ಯಂತ ವಿಸ್ಮಯಕಾರಿ ಚಳುವಳಿಯೆಂದರೆ, ಅದು ಸ್ವಾತಂತ್ರ್ಯದ ಚಳುವಳಿ. ಸ್ವಾತಂತ್ರ ಚಳುವಳಿಯು ಕೇವಲ ಈ ದೇಶವನ್ನು ಬ್ರಿಟಿಷರಿಂದ ಕಸಿದುಕೊಳ್ಳುವ ಚಳುವಳಿಯಾಗಿರಲಿಲ್ಲ. ಬ್ರಿಟಿಷರಿಂದ ದೇಶವನ್ನು ಕಸಿದುಕೊಂಡ ನಂತರ ಅದು ಭಾರತವಾಗಿರಬೇಕು ಎಂಬ ಉದ್ದೇಶ ಹೊಂದಿತ್ತು. ಸ್ವಾತಂತ್ರ ಭಾರತಕ್ಕೆ ಅಕ್ಷರ ಬೇಕು. ಅನ್ನ ಬೇಕು. ಬಹುಜನರಿಗೆ ವಾಕ್ ಸ್ವಾತಂತ್ರದ ಶಕ್ತಿ ನೀಡಬೇಕು ಎಂಬ ಮುಂಜಾಗ್ರತಾ ಕ್ರಮವಾಗಿ ಬಹುದೊಡ್ಡ ಸಾಹಿತ್ಯವನ್ನು ಸ್ವಾತಂತ್ರ ಚಳುವಳಿ ನಮಗೆ ಕಟ್ಟಿಕೊಟ್ಟಿತ್ತು. ಆ ಚಳುವಳಿಯ ಸತ್ವಯುತ ಸಾಹಿತ್ಯವೇ ಅಂಬೇಡ್ಕರರ ವಿಚಾರ ಧಾರೆಗಳು.ದೇಶವ್ಯಾಪಿ ವ್ಯಾಪಿಸಿದ್ದ ನಾಯಕರೆಲ್ಲರನ್ನು ಎದುರು ಹಾಕಿಕೊಂಡು, ತಾವು ನಂಬಿದ್ದ ಬಹುಜನರ ಹಿತಪರ ನಿಲುವು ಮತ್ತು ಸಾಹಿತ್ಯವನ್ನು ಸ್ವಾತಂತ್ರ್ಯೋತ್ತರ ಭಾರತದವರೆಗೆ ತಂದು ತಲುಪಿಸಿದ್ದು, ಇಂದು ಅದು ವಿಶ್ವವ್ಯಾಪಿ ಆಗುತ್ತಿರುವದಕ್ಕೆ ಡಾ.ಬಾಬಾಸಾಹೇಬರಲ್ಲಿ ಅಡಗಿದ್ದ ಆ ಭೀಮ ಶಕ್ತಿಗೆ ಸಾಕ್ಷಿಯಾಗಿದೆ. ಅಂಬೇಡ್ಕರರು ಹುಟ್ಟಿ ಬರದಿದ್ದರೇ, ಇಂದು ವೈಚಾರಿಕ ಚಿಂತನೆಗಳಿಗೆ ವೇದಿಕೆಯೇ ಇರುತ್ತಿರಲಿಲ್ಲ. ಶೋಷಿತ ಸಮುದಾಯಗಳಿಗೆ ಬದುಕುವ ಯಾವ ಆಶ್ರಯವೇ ಇರುತ್ತಿರಲಿಲ್ಲ. ಅಂಬೇಡ್ಕರರಿಂದಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶೋಷಿತ ಸಮುದಾಯಗಳು ಮತ್ತು ವೈಚಾರಿಕ ಚಿಂತನೆಯು ಧೈತ್ಯ ಶಕ್ತಿಯಾಗಿನಿಂತಿದೆ.

ಅಂಬೇಡ್ಕರ್ ಅವರು ಬಿತ್ತಿ ಹೋಗಿರುವ ವೈಚಾರಿಕ ಚಿಂತನೆಗಳು ಮತ್ತು ಈ ದೇಶಕ್ಕೆ ಅರ್ಪಿಸಿರುವ ಸಂವಿಧಾನ ಎಂಬ ರಾಷ್ಟ್ರ ಗ್ರಂಥದಿಂದಾಗಿ ಭಾರತವು ಇಂದು ಜಗತ್ತಿನ ಮುಂದೆ ಬಹು ವಿಶಿಷ್ಟವಾದ ದೇಶವಾಗಿ ನಿಂತಿದೆ. ಜಗತ್ತಿನ ಹತ್ತು ಹಲವು ದೇಶಗಳಲ್ಲಿ ವಿಮರ್ಶ, ಅಧ್ಯಯನ ಮತ್ತು ಅವಲೋಕನವಾಗುತ್ತಿರುವದು ಬಸವ-ಅಂಬೇಡ್ಕರರ ಸಾಹಿತ್ಯ ಮಾತ್ರ ಎಂಬುದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕಾದ ವಿಷಯ.ನೆರೆಯ ನೇಪಾಳ ಸೇರಿದಂತೆ ಅನೇಕ ದೇಶಗಳ ಶೋಷಿತ ಸಮುದಾಯಗಳು ಮತ್ತು ಸಾಮಾಜಿಕ ಹೋರಾಟಗಾರರಿಗೆ ಅಂಬೇಡ್ಕರರ ವಿಚಾರ ಧಾರೆಗಳೇ ಪ್ರೇರಣೆಯಾಗಿವೆ. ಅಂಬೇಡ್ಕರರ ವಿಚಾರ ಧಾರೆಗಳು ಇಂದು ಜಗತ್ತನ್ನೆ ಆಳುತ್ತಿವೆ. ಜಗತ್ತನ್ನು ಆಳುತ್ತಿರುವ ಆ ಮಹಾಚೇತನ ಜನಿಸಿದ ಐತಿಹಾಸಿಕ ದಿನವಾಗಿರುವ ಎಪ್ರಿಲ್ 14 ರಂದು ನಿಮ್ಮ ನಿಮ್ಮ ಮನೆಗಳಲ್ಲಿ, ಮನಗಳಲ್ಲಿ ದೀಪಗಳನ್ನು ಹಚ್ಚಿರಿ, ಜ್ಯೋತಿಗಳನ್ನು ಪ್ರಜ್ವಲಿಸಿರಿ, ಮನಸಾರೆ ಚಪ್ಪಾಳೆ ತಟ್ಟಿರಿ. ಕೋಟಿ ಕೋಟಿ ನಮನ ಸಲ್ಲಿಸಿರಿ.

ಶರಣು-ಶರಣಾರ್ಥಿಗಳು
ಆರ್.ಎಸ್.ದರ್ಗೆ, ಪತ್ರಕರ್ತ
ಅಧ್ಯಕ್ಷರು: ಬಸವ ಭೀಮ ಸೇನೆ, ಬೆಳಗಾವಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಂಡಾಯ ಜಗದ್ಗುರು ಜೊತೆಗೆ ಮಾತುಕತೆ: ಪುಸ್ತಕ ಬಿಡುಗಡೆ

ಬೆಳಗಾವಿ: ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ದ್ವಿತೀಯ ಪುಣ್ಯಸ್ಮರಣೆ ನಿಮಿತ್ತ ಹಾಗೂ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರ ಗ್ರಹ ಪ್ರವೇಶ …

Leave a Reply

Your email address will not be published. Required fields are marked *

error: Content is protected !!