Breaking News
Home / featured / ವಚನ ವಿಶ್ಲೇಷಣೆ: ಪುರದ ನಾಗಣ್ಣ

ವಚನ ವಿಶ್ಲೇಷಣೆ: ಪುರದ ನಾಗಣ್ಣ

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ :
ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ
ದೇವಾ ನಿಮ್ಮತ್ತಲೊಂದೆಳವುತ್ತಲದೆ.
ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿ ಯಿಡುವೆನಯ್ಯಾ ನಾನು ?

ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ.
ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ.
ಅಂದಂದಿನರಿವು ಅಂದಂದಿನ
ಮರವೆಗೆ ಸರಿಯಯ್ಯಾ.

ತಂದೆ ಈ ದಂದುಗವ ಮಾಣಿಸಿ
ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ           ಅಮರಗುಂಡದ ಮಲ್ಲಿಕಾರ್ಜುನಾ..                    ಪುರದ ನಾಗಣ್ಣ.                   ವಚನ ಅನುಸಂಧಾನ:-

                        ಹನ್ನೆರಡನೆಯ ಶತಮಾನದ ಕಾಲಘಟ್ಟ
ಒಟ್ಟಾರೆ ಹೇಳುವುದಾದರೆ ಅದೊಂದು ವ್ಯಕ್ತಿ ಮತ್ತು ಸಮಾಜದ ಆಂತರ್ಯದ ಲ್ಲಿನ ಸರ್ವತೋಮುಖದ ಸಂಘರ್ಷದ ಪರ್ವ ಕಾಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಅಪ್ಪ ಬಸವಾದಿ ಶರಣರು ಮಾಡಿದ ಆ ಕಲ್ಯಾಣ ಕ್ರಾಂತಿಯ ಚಾರಿತ್ರಿಕ ಘಟನೆಗಳನ್ನು ಹಾಗೂ ವಚನಗಳ ಆಂತರ್ಯದ ಆಳ ವನ್ನು ಪರಿಶೀಲನೆ ಮಾಡಿ ನೋಡ ಬಹು ದಾಗಿದೆ. ಇಂದು ಶರಣರು ಹಾಗೂ ವಚನ ಗಳು ಜನಮಾನಸದಲ್ಲಿ ಉನ್ನತ ಸ್ಥಾನವ ನ್ನು ಪಡೆದಿವೆಯೇನೋ ನಿಜ. ಆದರೆ, ಅಂದು ಶರಣರು ಎದುರಿಸಿದಾ ಸಂಘರ್ಷ ವ್ಯಕ್ತಿ ನೆಲೆಯಲ್ಲಿ ಹಾಗೂ ಸಾಮಾಜಿಕ ನೆಲೆಯಲ್ಲಿ ಎಂಥಾ ಕಡುಕ ಷ್ಟದ್ದಿತ್ತು ಎಂಬ ಸಂಗತಿಯೇ ಹೃನ್ಮನಗಳ ಹಿಂಡುತ್ತದೆ. ಇಲ್ಲಿ ಅಂತಹುದೇ ಭಾವನೆ ಗೆ ಪೂರಕವಾದ ಪುರದ ನಾಗಣ್ಣನವರ ಪ್ರಸ್ತುತ ವಚನವಿದೆ ಪರಿಶೀಲಿಸೋಣ.

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ: ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ
ದೇವಾ ನಿಮ್ಮತ್ತಲೊಂದೆಳವುತ್ತಲದೆ.
ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿ ಯಿಡುವೆನಯ್ಯಾ ನಾನು ?

ಈ ವಚನ ಅನುಸಂಧಾನದ ಪ್ರಾರಂಭಿಕ ಪ್ರಸ್ತಾವನೆ ನುಡಿಗಳ ಬೆಳಕಿನಲ್ಲಿ ಪ್ರಸ್ತುತ ವಚನದ ಒಳತೋಟಿಯನ್ನು ಗ್ರಹಿಸುವ ದಾದರೆ, ಇಲ್ಲಿ ವಚನಕಾರರು ಅಂದಿನ ಕಾಲದ ವ್ಯಕ್ತಿ ತಾನು ಭಕ್ತಿಯ ಮಾರ್ಗಕ್ಕೆ ಬರುವ ಹಂಬಲದಿಂದ ಶರಣನಾಗಲು ಬಂದು ಸೇರಿದಂತೆಯೇ ಎದುರಿಸುವ ಆಂತರಿಕ ಸಂಘರ್ಷದ ತುಮುಲವನ್ನು ಪ್ರಾತಿನಿಧಿಕವಾಗಿ ಚಿತ್ರಿಸಿದಂತಿದೆ. ಇಲ್ಲಿ
ಕಾಯದ ಅರುವಿನ ಅಂಗಪ್ರಜ್ಞೆಯಲ್ಲಿ ತನ್ನನ್ನು ತಾನು ಪರಿಶೀಲಿಸಿ ನೋಡಿದರೆ ಸ್ಪಷ್ಟವಾಗಿ ಎರಡು ಸ್ಥಿತಿ ಕಂಡಿವೆ.ಅದರ ಬಗ್ಗೆ ವಚನಕಾರರು ತಮ್ಮ ಇಷ್ಟಲಿಂಗಕ್ಕೆ ನಿವೇದನೆ ಮಾಡಿಕೊಂಡು, ಒಂದು ಭ್ರಾಂತಿಯತ್ತ ಎಳೆಯುತ್ತದೆ ಮತ್ತೊಂದು ನಿಮ್ಮತ್ತ ಎಳೆಯುತ್ತದೆ ದೇವಾ ಎನ್ನುವರು. ಇವು ಪರಸ್ಪರ ಅರಿತು ಅನುಸರಿಸಿ ನಡೆಯದೇ ಇರುವಾಗ ನಾನು ಸತ್ಪಥಕ್ಕೆ ಹೇಗೆ ಅಡಿಯಿಡಲು ಸಾಧ್ಯವೆನ್ನುವರು.

ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ.        ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ.  ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ.

ಹೀಗೆ ಅವುಗಳ ಪರಸ್ಪರರ ಸಂಘರ್ಷದಲ್ಲಿ ಕಾಲಚಕ್ರದಲ್ಲಿ ಹುಟ್ಟಿ, ಕರ್ಮ ಚಕ್ರದಲ್ಲಿ ಯೇ ಆಯುಷ್ಯ ಕಳೆಯುತ್ತಿದೆ. ಎರಡು ತಲೆಯ ಗಂಡಬೇರುಂಡ ಪಕ್ಷಿಯಂತೆ ಒಂದು ತಲೆಯಿಂದ ವಿಷವನ್ನು ಮತ್ತೊಂದ ರಿಂದ ನಿರ್ವಿಷವನ್ನು ಸೇವಿಸಿದಂತೆ ಆಗಿದೆ. ಅಂದಂದಿನ ಅರಿವು ಅಂದಂದಿಗೇ ಮರೆತು ಹೋಯಿತೆಂದು ಪರಿತಪಿಸುವರು. ಮುಂದೆ;

ತಂದೆ ಈ ದಂದುಗವ ಮಾಣಿಸಿ
ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.

ಇಷ್ಟಲಿಂಗ ಸಾಧನೆಯನ್ನು ಮಾಡಲು ಯಾವಾಗ ಯತ್ನಿಸುತ್ತಿದ್ದಾರೆಯೋ ಆಗ ಈ ರೀತಿಯ ಗೊಂದಲ ಉಂಟಾಗುತ್ತದೆ.
ಇದನ್ನು ಹೋಗಲಾಡಿಸಿ, ‘ನಿಮ್ಮ ನಿಜಾ ನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ’ ಎಂದು ಪರಿಪರಿಯಾಗಿ ಬಿನ್ನವಿಸುವಲ್ಲಿ; ಶರಣತತ್ವ ಗಳ (ಇಷ್ಟಲಿಂಗದ) ನಿಜವಾದ ಅನುಷ್ಠಾನ ಎಷ್ಟು ಕಷ್ಟದ್ದೆಂಬುದನ್ನು ಈ ವಚನದಲ್ಲಿ ಲೌಕಿಕದ ನೇರ ಅನುಭವದ ಚಿತ್ರಣ ನೀಡುವ ಮೂಲಕ ಸ್ಪಷ್ಟಪಡಿಸಲಾಗಿದೆ.
———————————————————–
ಸಂಕ್ಷಿಪ್ತ ಪರಿಚಯ:-

೧೨ನೆಯ ಶತಮಾನದ ಶರಣ ಪುರದ ನಾಗಣ್ಣ; ‘ಅಮರಗುಂಡ’ ಎಂಬೂರಿನ ಮಲ್ಲಿಕಾರ್ಜುನೆಂಬವರ ಮಗನೆಂದು ಹೇಳಲಾಗಿದೆ. ಇದು ತುಮಕೂರು ಜಿಲ್ಲೆ ಯ ಗುಬ್ಬಿ ಎಂದು ಮಾಹಿತಿ ಹೇಳುತ್ತವೆ. ನಂತರ ಇವರು ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲೊಬ್ಬ ವಚನಕಾರ ಶರಣರಾ ಗಿದ್ದಾರೆ. ‘ಅಮರಗುಂಡದ ಮಲ್ಲಿಕಾರ್ಜುನ’ ಅಂಕಿತದಲ್ಲಿವರು ರಚಿಸಿದ ಒಂಭತ್ತು ವಚನಗಳು ದೊರೆತಿವೆ. ಇವುಗಳಲ್ಲಿ; ಬಸವಾದಿ ಶರಣರ ಸ್ತುತಿ, ನಿಜಾನಂದ ಭಕ್ತಿಯ ಬಯಕೆ, ಗುರುಪಾದೋದಕದ ಮಹಿಮೆ, ಶರಣನ ಸ್ವರೂಪ, ಲಿಂಗನಿಷ್ಠೆ ಇವುಗಳಿಲ್ಲಿ ನೆಲೆ ಪಡೆದಿದ್ದು, ಕೆಲ ವಚನ ಗಳು ಬೆಡಗಿನ ಪರಿಭಾಷೆಯಲ್ಲಿವೆ.
ಶರಣ ಅಳಗುಂಡಿ ಅಂದಾನಯ್ಯ.    ‌‌‌‌‌‌‌          ಬೆಳಗಾವಿ

 

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!