Breaking News
Home / featured / ಜಡ ದೇಗುಲದೊಳಗಿಲ್ಲ ನಮ್ಮ ಅಖಂಡ ಘನ ಲಿಂಗವು

ಜಡ ದೇಗುಲದೊಳಗಿಲ್ಲ ನಮ್ಮ ಅಖಂಡ ಘನ ಲಿಂಗವು

ವಿಜಯಪುರ: ಬಸವ ಪೂರ್ವದ ಕಾಲಘಟ್ಟ ಶೂದ್ರರಿಗೆ ಅಕ್ಷರಶಃ ನರಕಮಯವಾಗಿತ್ತು. ದೇವರು ಧರ್ಮದ ಹೆಸರಿನಲ್ಲಿ ದಮನಿತರ ಮೇಲೆ ವೈದಿಕರ ದಬ್ಬಾಳಿಕೆ ಮೇರೆ ಮೀರಿತ್ತು. ದೇವಸ್ಥಾನಗಳು ಸುಲಿಗೆಯ ಕೇಂದ್ರಗಳಾಗಿದ್ದವು. ಸನಾತನ ವೈದಿಕರು ಕಟ್ಟಿದ ಕಾಲ್ಪನಿಕ ಕಥೆಗಳು ಭಾರತೀಯರ ಧರ್ಮಗ್ರಂಥಗಳೆಂದು ಬಿಂಬಿಸಲ್ಪಟ್ಟಿದ್ದವು. ಕಾಲ್ಪನಿಕ ವಿಷ್ಣು ಸರ್ವೋತ್ತಮನೆಂತಲೂ ಆತನನ್ನು ಭಕ್ತಿಯಿಂದ ಪೂಜಿಸಿದರೆ ಮೋಕ್ಷ ಕಾಣಬಹುದೆಂತಲು ದೇಗುಲಗಳಲ್ಲಿನ ಪುರೋಹಿತರು ಸುಳ್ಳು ಹೇಳಿ ಜನರನ್ನು ಶೋಷಿಸುತ್ತಿದ್ದರು. ಆ ಸಮಯದಲ್ಲಿ ಬಸವಣ್ಣನವರು ಇಷ್ಟಲಿಂಗ ಪೂಜೆಯ ಪರಿಕಲ್ಪನೆಯನ್ನು ಜಾರಿಗೆ ತಂದು ಜನರು ದೇಗುಲಗಳಿಗೆ ಹೋಗಿ ಪುರೋಹಿತರಿಂದ ಸುಲಿಗೆಗೊಳಗಾಗುವುದನ್ನು ತಪ್ಪಿಸಿದರು. ಅಧ್ಯಾತ್ಮಕ್ಕೆ ಅನುಭಾವದ ಮೆರಗನಿತ್ತು ಒಂದು ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿದರು. ಗುರು ಬಸವಣ್ಣನವರು ಜಡ ದೇಗುಲಗಳನ್ನು ದಿಕ್ಕರಿಸಲು ಸಲಹೆ ನೀಡಿದ ಅಂಥ ಒಂದು ವಚನ :

” ಆವ್ಹಾನಿಸಿ ಕರೆವಲ್ಲಿ ಎಲ್ಲಿರ್ದನೋ,
ಈರೇಳು ಲೋಕ ಹದಿನಾಲ್ಕು ಭುವನಂಗಳನೊಳಗೊಂಡಿಪ್ಪ ದಿವ್ಯವಸ್ತು?
ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿ ಅಡಗಿರ್ದನೋ ಮುಳ್ಳೂರ ತೆರಹಿಲ್ಲದಿರ್ಪ ಅಖಂಡವಸ್ತು?
ಬರಿಯ ಮಾತಿನ ಬಳಕೆಯ ತೂತ ಜ್ಞಾನವ ಬಿಟ್ಟು, ನೆಟ್ಟನೆ ತನ್ನ ಕರಸ್ಥಲದೊಳಗಿರ್ಪ ಇಷ್ಟಲಿಂಗವ ದಿಟ್ಟಿಸಿ ನೋಡಲು, ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯನಿಶ್ಚಯ ಒದಗೆ, ಈ ದಿವ್ಯನಿಶ್ಚಯದಿಂದ ಕುಳವಡಗಿ ಅದ್ವೈತತಪ್ಪುದು. ಇದು ಕಾರಣ, ನಮ್ಮ ಕೂಡಲಸಂಗನ ಶರಣ ಆವ್ಹಾನ-ವಿಸರ್ಜನೆಯೆಂಬುಭಯ
ಜಡತೆಯ ಬಿಟ್ಟು ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದವರಿಗೆ ಸ್ವಯಂ ಲಿಂಗವಾದ ಕಾಣಿರೋ.”

ಆವ್ಹಾನಿಸಿ ಕರೆವಲ್ಲಿ ಎಲ್ಲಿರ್ದನೋ ಈರೇಳು ಲೋಕ ಹದಿನಾಲ್ಕು ಭುವನಂಗಳನೊಳಗೊಂಡಿಪ್ಪ ದಿವ್ಯವಸ್ತು?

ದೇವರು ಎಂದರೆ ಹದಿನಾಲ್ಕು ಭುವನಗಳನ್ನೆಲ್ಲ ವ್ಯಾಪಿಸಿದವನೆಂದು ನಮ್ಮ ಸನಾತನ ಸಂಪ್ರದಾಯಗಳು ನಂಬುತ್ತವೆ. ಮನೆಯಲ್ಲಿ ಸತ್ಯನಾರಾಯಣನ ಪೂಜೆ ಏರ್ಪಡಿಸಿ ಪುರೋಹಿತನನ್ನು ಕರೆಸಿ ಪೂಜೆ ಮಾಡಿ ಕಥಾವಾಚನ ಮಾಡುವುದು ಒಂದು ಸನಾತನ ಮೌಢ್ಯ. ಈ ರೀತಿ ಪೂಜೆಗಳು ಮಾಡುವಾಗ ಸಂಪ್ರದಾಯದಂತೆ ದೇವರ ವಿಗ್ರಹ/ಭಾವಚಿತ್ರವನ್ನು ಮಂಟಪದಲ್ಲಿ ಪ್ರತಿಷ್ಟಾಪಿಸುತ್ತಾ ಮಂತ್ರ ತಂತ್ರಗಳು ಹೇಳಿ ಆ ದೇವರನ್ನು ಪೂಜಾರಿ ಶಾಸ್ತ್ರೋಕ್ತವಾಗಿ ಅವ್ಹಾನಿಸುವುದು ವಾಡಿಕೆ. ಹೀಗೆ ಯಾರೊ ಪುಣ್ಯ ಬೇಕೆಂದು ಪೂಜೆ ಮಾಡಿಸುತ್ತಾರೆ. ಇನ್ಯಾರೊ ಆ ಪೂಜೆ ಮಾಡುತ್ತ ಆ ದೇವರನ್ನು ಅವ್ಹಾನಿಸುತ್ತಾರೆ. ಇದೆಲ್ಲವೂ ಗೋಜಲು ಗೋಜಲು. ಅವ್ಹಾನಿಸಿ ಕೂಡಿಸಿ ಪೂಜಿಸಲು ಆ ಅಖಂಡ ಘನವಸ್ತು ಈ ಹುಲು ಮಾನವರ ಕೈಗೆ ಸಿಗುವುದೆಂತು !ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿ ಅಡಗಿರ್ದನೋ ಮುಳ್ಳೂರ ತೆರಹಿಲ್ಲದಿರ್ಪ ಅಖಂಡವಸ್ತು ?

ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ದೇವರ ಪೂಜೆಯನ್ನು ಮಾಡಿ ಮುಗಿಸಿˌ ಮಾರನೆಯ ದಿನ ಮತ್ತೊಮ್ಮೆ ಉತ್ತರ ಪೂಜೆಯ ನೆಪದಲ್ಲಿ ದಕ್ಷಿಣೆ ಪ್ರತ್ಯೇಕವಾಗಿ ಪಡೆದು ಪೂಜೆ ಮಾಡಿˌ ನಿನ್ನೆ ಮಂಟಪದಲ್ಲಿ ಪ್ರತಿಷ್ಟಾಪಿಸಿದ ದೇವರನ್ನು ವಿಜರ್ಸಿಸುವುದು ಸನಾತನ ವೈದಿಕರ ಸಂಪ್ರದಾಯ. ಈ ರೀತಿಯಾಗಿ ಅಖಂಡ ಘನವಸ್ತುವಾದ ಆ ದೇವರು ಈ ಹುಲು ಮಾನವರು ಅವ್ಹಾನಿಸಿದಾಗ ಬರುತ್ತಾನೆ ಮತ್ತು ವಿಸರ್ಜಿಸಿದಾಗ ಹೋಗುತ್ತಾನೆ ಎನ್ನುವುದು ಸನಾತನಿಗಳ ಟೊಳ್ಳು ಮತ್ತು ಹಗುರವಾದ ನಂಬಿಕೆ.

ಬರಿಯ ಮಾತಿನ ಬಳಕೆಯ_ತೂತ ಜ್ಞಾನವ ಬಿಟ್ಟು ನೆಟ್ಟನೆ ತನ್ನ ಕರಸ್ಥಲದೊಳಗಿರ್ಪ ಇಷ್ಟಲಿಂಗವ ದಿಟ್ಟಿಸಿ ನೋಡಲು,

ಈ ಸನಾತನಿ ಕರ್ಮಠ ವೈದಿಕರ ಪೂಜೆಗಳೆಂದರೆ ಬರಿ ಮಾತಿನ ಗೋಪುರ. ಈ ಮಾತಿನ ಗೋಪುರವನ್ನು ಬಸವಣ್ಣನವರು ತೂತು ಜ್ಞಾನ ಎಂದು ವರ್ಣಿಸುತ್ತಾರೆ. ಹಾಗೆಂದರೆ ತೂತಾದ ಪಾತ್ರೆಯಲ್ಲಿ ಹೇಗೆ ಜಲವನ್ನು ಹಿಡಿದಿಡಲಾಗದೊ ಅದೇ ರೀತಿ ಈ ಒಣ ಮಾತಿನ ಸನಾತನಿಗಳ ಪೂಜೆ ಅದೊಂದು ಅಜ್ಞಾನದ ಗೊಡ್ಡು ಮೌಢ್ಯ. ಅದನ್ನು ಬಿಟ್ಟು ಲಿಂಗಾಯತನಾದವನು ತನ್ನ ಕರಸ್ಥಳದೊಳಗಿರುವ ಇಷ್ಟಲಿಂಗವನ್ನು ತದೇಕ ಚಿತ್ತದಿಂದ ವಿಕ್ಷಿಸಿ ಲಿಂಗ ನಿರೀಕ್ಷಣ ಮಾಡಬೇಕು.

ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯನಿಶ್ಚಯ ಒದಗೆ ಈ ದಿವ್ಯನಿಶ್ಚಯದಿಂದ ಕುಳವಡಗಿ ಅದ್ವೈತ ತಪ್ಪುದು.

ಈ ರೀತಿಯಾಗಿ ಶುಷ್ಕ ಸನಾತನಿಗಳ ಗೊಡ್ಡು ಸಂಪ್ರದಾಯದ ಪೂಜೆ ಮಾಡದೆ ಲಿಂಗಾಯತನೊಬ್ಬ ಇಷ್ಟಲಿಂಗ ನಿರೀಕ್ಷಣ ಮಾಡಿದರೆ ಅದರಿಂದ ಮನಕ್ಕೆ ಮನ ಸಂಧಾನವಾಗಿ ಅಂದರೆ ದಿವ್ಯ ಜ್ಞಾನ ಸ್ಪುರಿಸಿˌ ಏಕಾಗ್ರತೆˌ ಏಕ ಮನಸ್ಸು ಅಳವಡುವ ಮೂಲಕ ದೇವರು ಮತ್ತು ಭಕ್ತ ಬೇರೆ ಬೇರೆ ಎಂದ ದ್ವೈತವು ಅಡಗಿಹೋಗುತ್ತದೆ. ಆಗ ಏಕೊ ಭಾವ ನೆಲೆಗೊಳ್ಳುತ್ತದೆ.

ಇದು ಕಾರಣ ನಮ್ಮ ಕೂಡಲಸಂಗನ ಶರಣ ಆವ್ಹಾನ ವಿಸರ್ಜನೆಯೆಂಬುಭಯ ಜಡತೆಯ ಬಿಟ್ಟು  ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದವರಿಗೆ ಸ್ವಯಂ ಲಿಂಗವಾದ ಕಾಣಿರೋ.

ಈ ರೀತಿಯಾಗಿ ದೇವರನ್ನು ಅವ್ಹಾನಿಸಿ ಪ್ರತಿಷ್ಟಾಪಿಸಿˌ ಪೂಜಿಸಿˌ ಕೊನೆಗೆ ಆ ದೇವರನ್ನು ವಿಸರ್ಜಿಸುವ ಜಡ ಸಂಪ್ರದಾಯವನ್ನು ಬಿಟ್ಟು ತನ್ನ ಕರಸ್ಥಳದೊಳಗಿರುವ ದೇವರನ್ನು ಪೂಜಿಸಿˌ ಧ್ಯಾನಿಸಿ ಕೊನೆಗೆ ಆ ದೇವನೆ ತಾನಾಗಬೇಕು. ಅಂದರೆ ಲಿಂಗಾಯತ ಅನುಭಾವ ತತ್ವ ದೇವರು ಮತ್ತು ಭಕ್ತನ ನಡುವಿನ ಅಗಾದವಾದ ಕಂದಕವನ್ನು ಅಳಿಸಿ ಹಾಕುತ್ತದೆ. ಅನುಭಾವ ಸಾಧನೆಯಿಂದ ಭಕ್ತನೇ ದೇವನಾಗುತ್ತಾನೆಂದು ಹೇಳುತ್ತದೆ. ಅಂದರೆ ದೇವರು ಮತ್ತು ಭಕ್ತನೆಂಬ ಬೇಧವಳಿಸಿ ಭಕ್ತನೇ ದೇವನಾಗುವ ಪ್ರಕ್ರೀಯೆ ಇಷ್ಟಲಿಂಗ ಪೂಜೆಯಿಂದ ನೆಲೆಗೊಳ್ಳುತ್ತದೆ ಎನ್ನುತ್ತಾರೆ ಬಸವಣ್ಣನವರು. ಇಲ್ಲಿ ಮನುಷ್ಯನಲ್ಲಿ ದೇವರಿದ್ದಾನೆˌ ಹೊರಗೆ ಹುಡುಕುವ ಅಗತ್ಯವಿರುವುದಿಲ್ಲ. ಆ ದೇವರನ್ನು ನಮ್ಮೊಳಗೆ ಹುಡುಕಿ ಕೊನೆಗೆ ನಾವೇ ದೇವರಾಗಬಹುದು ಎನ್ನುವುದು ಬಸವ ತತ್ವದ ನಿಜ ಬೋಧೆಯಾಗಿದೆ.

ಶರಣ: ಡಾ. ಜೆ ಎಸ್ ಪಾಟೀಲ.

ವಿಜಯಪುರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!