ಕಾಗವಾಡ: “ಹೌದೋ ಹುಲಿಯಾ” – ಈ ಒಂದು ಡೈಲಾಗ್ ಯಾರಿಗೆ ತಾನೆ ನೆನಪಿಲ್ಲಾ ಹೇಳಿ. ಅದರಲ್ಲೂ ಸೋಶಿಯಲ್ ಮಿಡಿಯಾದಲ್ಲಂತೂ ಅತಿ ಹೆಚ್ಚು ಟ್ರೋಲ್ ಆದ ಡೈಲಾಗ್ ಇದು. ಅಷ್ಟಕ್ಕೂ ಹೌದು ಹುಲಿಯಾ ವಿಚಾರ ಮತ್ಯಾಕೆ ಬಂತು ಅಂತಾ ನೀವು ತಲೆ ಕೆಡಿಸಿಕೊಂಡಿರಬಹುದು.
ಕಾಗವಾಡ ಉಪ ಚುನಾವಣೆಯಲ್ಲಿ ಸಂದರ್ಭದಲ್ಲಿ ಸಿದ್ದರಾಮಯ್ಯ ಭಾಷಣದ ವೇಳೆ ಐನಾಪುರ ಗ್ರಾಮದ ಪೀರಪ್ಪ ಕಟ್ಟೀಮನಿ ಕುಡಿದ ಮತ್ತಿನಲ್ಲಿ ಈ ಡೈಲಾಗ್ ಹೊಡೆಯುವ ಮೂಲಕ ರಾತ್ರೊ ರಾತ್ರಿ ಫೇಮಸ್ ಆಗಿ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತನನ್ನ ಕರೆಸಿ ಭೇಟಿ ಆಗಿದ್ದು ಈಗ ಹಳೆಯ ವಿಚಾರ. ಸದಾ ಕುಡಿದ ಅಮಲಿನಲ್ಲೆ ತೆಲಾಡುತ್ತಿದ್ದ ಪೀರಪ್ಪ ಕಟ್ಟೀಮನಿ ಈಗ ಎಣ್ಣೆ ಸಿಗದ ಪರಿಣಾಮ ಎಣ್ಣೆಯನ್ನೇ ಬಿಟ್ಟು ಸಾಚಾ ಆಗಿದ್ದಾನೆ. ತನ್ನಂತೆ ಕುಡಿಯುತ್ತಿದ್ದವರಿಗೆ ಪೀರಪ್ಪ ಬುದ್ದಿವಾದ ಹೇಳುವುದನ್ನೂ ಆರಂಭಿಸಿದ್ದಾನೆ.

ಲಾಕ್ಡೌನ್ನಿಂದಾಗಿ ಮದ್ಯದ ಅಂಗಡಿ ಬಂದ ಆಗಿದ್ದರಿಂದ ಮದ್ಯಪ್ರಿಯರ ಕುಟುಂಬಗಳು ನೆಮ್ಮದಿ ಜೀವನ ಸಾಗಿಸುತ್ತಿವೆ. ಇದಕ್ಕೆ ಐನಾಪೂರದ ಹೌದು ಹುಲಿಯಾ ಖ್ಯಾತಿಯ ಪೀರಪ್ಪ ಕಟ್ಟಿಮನಿಯೆ ಸಾಕ್ಷಿ. ಪೀರಪ್ಪ ಪ್ರತಿನಿತ್ಯ 5 ಕ್ವಾಟರಷ್ಟು ಮದ್ಯ ಸೇವನೆ ಮಾಡಿ, ದುಡಿದು ಬಂದ ಹಣ ಅಲ್ಲದೆ ತನ್ನ ಹೆಂಡತಿ ಕಡೆಯಿಂದಲೂ ಹಣ ಪಡೆಯುತ್ತಿದ್ದ. ಆದರೆ, ಸಾರಾಯಿ ಬಂದ್ ಆಗಿರುವದರಿಂದ ಪೀರಪ್ಪ ಹಾಗೂ ಆತನ ಹೆಂಡತಿ ತಂಗೆವ್ವ ಪ್ರತಿನಿತ್ಯ ರೈತರ ಹೊಲದಲ್ಲಿ ಕೂಲಿ ಕೆಲಸ ಮಾಡಿ ನೆಮ್ಮದಿಯ ಜೀವನ ಸಾಗಿಸುತ್ತಿರುವದು ಕಂಡು ಬಂದಿದೆ.
ಹಲವಾರು ವರ್ಷಗಳಿಂದ ನನ್ನ ಹೆಂಡತಿ, ಮಕ್ಕಳು, ಓಣಿಯವರು, ಸಂಬಂಧಿಕರು ಬುದ್ದಿವಾದ ಹೇಳಿದ್ದರೂ ನಾನು ಸಾರಾಯಿ ಕುಡಿಯುವುದನ್ನು ಬಿಟ್ಟಿರಲಿಲ್ಲ. ನನಗೆ ಸಾರಾಯಿ ಬಿಡುವ ಮದ್ದು ಕೊಟ್ಟರೂ ಬಿಡಲು ಸಾಧ್ಯವಾಗಿರಲಿಲ್ಲ. ಯಾವಾಗಲೂ ಸಾರಾಯಿಗಾಗಿ ಹಪಹಪಿಸುತ್ತಿದ್ದೆ. ಆದರೆ, ಈಗ ನನಗೆ ಬುದ್ದಿ ಬಂದಿದೆ. ಇನ್ನಷ್ಟು ದಿನ ಸಾರಾಯಿ ಬಂದ್ ಆದರೆ ನನ್ನ ಹಾಗೆ ಸಾವಿರಾರು ಜನ ಸಾರಾಯಿ ಬಿಡಬಹುದು ಎಂದು ಪೀರಪ್ಪ ಹೇಳುತ್ತಾನೆ. ಅಲ್ಲದೆ ಸಾರಾಯಿ ಕುಡಿಬೇಡಿ ಎಂದು ಅನ್ಯ ಕುಡುಕರಿಗೆ ಬುದ್ದಿವಾದ ಹೇಳಲೂ ಆರಂಭಿಸಿದ್ದಾನೆ.
ನನ್ನ ಗಂಡ ಪ್ರತಿದಿನ ಮದ್ಯ ಸೇವನೆ ಮಾಡುತ್ತಿರುವುದರಿಂದ ನನ್ನ ಬದುಕು ಅತ್ಯಂತ ದುಸ್ತರವಾಗಿತ್ತು. ನಮಗೆ ಸ್ವಂತ ಮನೆಯಿಲ್ಲ. ದುಡಿದರೆ ಮಾತ್ರ ಜೀವನ ನಡೆಯುವುದು. ಆದರೆ ನನ್ನ ಗಂಡ ಎಂದೂ ಮನೆಗೆ ಬಿಡಿಗಾಸೂ ಕೊಡುತ್ತಿರಲಿಲ್ಲ. ನಾನು ದುಡಿದು ತಂದ ಹಣವನ್ನೇ ಕಸಿದುಕೊಂಡು ಕುಡಿದು ಜಗಳವಾಡುತ್ತಿದ್ದ. ಈಗ ಸಾರಾಯಿ ಬಂದ್ ಆದಾಗಿನಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ ಎಂದು ಪೀರಪ್ಪ ನ ಹೆಂಡತಿ ತೆಂಗವ್ವ ಹೇಳುತ್ತಾಳೆ.