Breaking News
Home / featured / ಬೆಡಗಿನ ಬಂಡಾಯ ವಚನಕಾರ ಹಡಪದ ಅಪ್ಪಣ್ಣ.

ಬೆಡಗಿನ ಬಂಡಾಯ ವಚನಕಾರ ಹಡಪದ ಅಪ್ಪಣ್ಣ.

ಹನ್ನೆರಡನೇ ಶತಮಾನದ ಶರಣ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಅನುಭವ ಮಂಟಪದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಹಡಪದ ಅಪ್ಪಣ್ಣನವರು.ಇವರು ಕ್ಷೌರಿಕ ವೃತ್ತಿಯ ಕಾಯಕದಲ್ಲಿ ಕೈಲಾಸ ಕಾಣುತ್ತ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿ ಮುಂಚೂಣಿಯಲ್ಲಿದ್ದರು. ಕುಲಕಸಬುಗಳ ಆಧಾರದ ಮೇಲೆಯೆ ಜಾತಿಯ ವ್ಯವಸ್ಥೆಯನ್ನು ಮಾಡಿ ಸಮಾಜದಲ್ಲಿ ಮೇಲು ಕೀಲುಗಳೆಂಬ ಕವಲುಗಳನ್ನು ಸೃಷ್ಟಿಸಿದ್ದರು.ಕ್ಷೌರಿಕ ವೃತ್ತಿಯನ್ನು ಮಾಡುವ ಸವಿತಾ (ಹಡಪದ) ಸಮಾಜದವರಾಗಿದ್ದ, ಹಡಪದ ಅಪ್ಪಣ್ಣನವರು ಮಾಡುವ ಕಾಯಕ ಕನಿಷ್ಠವೆಂದು ಭಾವಿಸಿದ್ದ ಸಮುದಾಯದ ಬಾಯಿ ಮುಚ್ಚುವಂತೆ ಬಸವಣ್ಣನವರು ಅನುಭವ ಮಂಟಪವೆಂಬ ಸಂಸತ್ತಿನಲ್ಲಿ ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡು ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನು ಮಾಡಿದರು.ಬಸವಾದಿ ಪ್ರಮಥರ ಜೊತೆಯಲ್ಲಿದ್ದ ಹಡಪದ ಅಪ್ಪಣ್ಣನವರು ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಬಸವಣ್ಣನವರಿಗೆ ಆಪ್ತವಾಗಿದ್ದರು. ಅನುಭವ ಮಂಟಪದ ಆಪ್ತ ಕಾರ್ಯದರ್ಶಿ ಹುದ್ದೆಯನ್ನು ಯಾರಿಗೂ ಮುಜುಗುರವಾಗದಂತೆ ಸಮರ್ಥ ರೀತಿಯಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಒಬ್ಬ ಕಾರ್ಯದರ್ಶಿಯು ಯಾವ ರೀತಿ ಆ ಹುದ್ದೆಯನ್ನು ನಿಭಾಯಿಸಿಕೊಂಡು ಹೋಗಬೇಕೆಂಬುದಕ್ಕೆ ಹಡಪದ ಆಪ್ಪಣ್ಣನವರಿಗಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ. ಅವರ ಕಾಯಕ ನಿಷ್ಠೆಯೇ ಶ್ರೀರಕ್ಷೆಯಾಗಿ ಸಮಾಜಕ್ಕೆ ಬೆಳಕಾಗಿ, ದಮನಿತರ ದನಿಯಾಗಿ, ದಾರಿ ತಪ್ಪಿತ ಸಮಾಜವನ್ನು ಸರಿದಾರಿಯಲ್ಲಿ ನಡೆಸಿದರು. ಅಂದಿನ ಕಾಲದಲ್ಲಿ ಹಡಪದ ಜನಾಂಗದವರು ಬೆಳಿಗ್ಗೆ ಎದುರುಗಡೆ ಬಂದರೆ ಸಾಕು ಅನಿಷ್ಠವೆಂದುಕೊಂಡು, ಇಂದು ಏನೋ ಗಂಡಾಂತರ ಕಾದಿದೆಯೆಂದು ಭಾವಿಸುತ್ತಿದ್ದರು. ಇಂಥಹ ಮೂಢ ನಂಬಿಕೆಯನ್ನು ಹೋಗಲಾಡಿಸುವುದಕ್ಕಾಗಿಯೆ ಬಸವಣ್ಣನವರು ಯಾರೇ ಬಂದರೂ ಮೊದಲು ಹಡಪದ ಅಪ್ಪಣ್ಣನವರನ್ನು ನೋಡಿಕೊಂಡು ಬರಬೇಕೆಂಬ ನಿಯಮವನ್ನೇ ಮಾಡಿದ್ದರೆಂಬ ಪ್ರತೀತಿ ಇದೆ. ಮತ್ತೊಂದು ಐತಿಹ್ಯದ ಪ್ರಕಾರ ’ಅಪ್ಪಣ್ಣನವರದು ತಾಂಬೂಲ ಕರಂಡ ಕಾಯಕವನ್ನು ಮಾಡುತ್ತ ಶರಣ ಶರಣೆಯರಿಗೆ ತಾಂಬೂಲ ಹಂಚುತ್ತಿದ್ದರು. “ಹಡಪ” ಎಂದರೆ ತಾಂಬೂಲದ ಚೀಲ. ಇನ್ನೊಂದು ಅರ್ಥದಲ್ಲಿ ಕ್ಷೌರ ಮಾಡುವ ಕಾಯಕದ ಚೀಲ. ಧರ್ಮಪತ್ನಿ ಶರಣೆ ಮತ್ತು ವಚನಕಾರ್ತಿ ಲಿಂಗಮ್ಮ ಅವರೊಂದಿಗೆ ಅನ್ಯೋನ್ಯ ದಾಂಪತ್ಯ ಜೀವನವನ್ನು ಸಾಗಿಸುತ್ತ, ಚೆನ್ನಬಸವೇಶ್ವರ ಗುರುವನ್ನು ಧ್ಯಾನಿಸಿದವರು. ಬನವಾಸಿಯ ಮಧುಕೇಶ್ವರ ದೇವಾಲಯದ ಶಿವೋತ್ಸವ ಮಂಟಪದ ಗಗ್ಗರಿ ಕಲ್ಲಿನ ಮೇಲಿರುವ ಶರಣರ ಶಿಲ್ಪಗಳಲ್ಲಿ ಅಪ್ಪಣ್ಣನ ವಿಗ್ರಹವನ್ನು ಕಾಣಬಹುದು. ಅಪ್ಪಣ್ಣ ‘ಬಸವಪ್ರಿಯ ಕೂಡಲಚೆನ್ನಬಸವಣ್ಣ’ ಅಂಕಿತದಲ್ಲಿ ಇನ್ನೂರ ಐವತ್ತಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಬೆಡಗಿನ ವಚನಗಳೆ ಅಧಿಕವಾಗಿವೆ. ಕೆಲವು ವಚನಗಳು ಕಥನಶೈಲಿಯನ್ನು ಹೊಂದಿದ್ದು ಷಟ್-ಸ್ಥಲ ತತ್ವನಿರೂಪಣೆಗೆ ಆದ್ಯತೆ ನೀಡಿದ್ದಾರೆ. ಇವರ ವಚನಗಳು ಗ್ರಹಿಸಲು ಸುಲಭವಾಗಿದ್ದು ಸಮಾಜಕ್ಕೆ ಮೌಲಿಕ ಸಂದೇಶಗಳನ್ನು ಬಿತ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಇವರಿಗೆ ಸಂಸ್ಕೃತಜ್ಞಾನ ಅಪಾರವಾಗಿತ್ತೆಂಬುದಕ್ಕೆ ಇವರ ವಚನಗಳೇ ಸಾಕ್ಷಿ. ನುಡಿಯಂತೆ ನಡೆ, ವಿಚಾರದಂತೆ ಆಚಾರ ಇವುಗಳಿಂದ ಕೂಡಿ ನಿಷ್ಠೆಯ ಕೆಚ್ಚಿನಿಂದ ಮೂಡಿ ಬಂದಿರುವ ಇವರ ವಚನಗಳು, ನಮ್ಮೆಲ್ಲರ ಬಾಳಿನ ಬೆಳಕಿಂಡಿಗಳಂತಿವೆ. ಅತ್ಯಂತ ಸರಳ, ನೇರ ಮತ್ತು ಹೃದಯತಲಸ್ಪರ್ಶಿ. ಬಸವಪ್ರಿಯ ಕೂಡಲಸಂಗಯ್ಯ ಎಂಬ ಅಂಕಿತದಿಂದ ರಚಿತವಾದ ವಚನಗಳಲ್ಲಿ ಕಾಯಕನಿಷ್ಠೆ, ದಾಸೋಹ ನಿಷ್ಠೆ, ಭಕ್ತಿ, ವೈರಾಗ್ಯ, ಆಚಾರ ವಿಚಾರ, ಇತ್ಯಾದಿ ವಿಷಯಗಳನ್ನು ವೈಚಾರಿಕತೆಯ ನೆಲೆಯಲ್ಲಿ ವಿಡಂಬನಾತ್ಮಕವಾಗಿ ಬೆಡಗಿನ ವಚನಗಳ ಮೂಲಕ ತಿಳಿಸಿದ್ದಾರೆ.

ಸಂಕವ್ವ ಸೂಳೆ ಎಂಬ ಕಾರಣಕ್ಕೆ ಅವರ ವಚನಗಳಿಗೆ ಅಶ್ಲೀಲ ಎಂಬ ಹಣೆಪಟ್ಟಿ ಕಟ್ಟಿದಾಗ ಶೀಲದ ಬಗ್ಗೆ ಧ್ವನಿ ಎತ್ತುವವರಿಗೆ ಬಂಡಾಯವಾಗಿ ನೆಲಕ್ಕೆ ಶೀಲ ಇದೆಯೇ, ಜಲಕ್ಕೆ ಶೀಲ ಇದೆಯೇ, ಗಾಳಿಗೆ ಶೀಲ ಇದೆಯೇ, ಬೆಳಕಿಗೆ ಶೀಲ ಇದೆಯೇ, ಹೊನ್ನಿಗೆ ಶೀಲ ಇದೆಯೇ, ಏಕೆ ಸಂಕವ್ವನ ವಚನಗಳಿಗೆ ಕೊಂಕು ಹೇಳುತ್ತಿರಿ ? ಎಂದು ಬಂಡಾಯ ಧ್ವನಿ ಎತ್ತಿದ ಅಪ್ಪಣ್ಣನವರು, ಅನುಭವ ಮಂಟಪದಲ್ಲಿ ‘ನಿಂದರೆ ನೆಳಲಿಲ್ಲದ ಸುಳಿದಿರೆ ಹೆಜ್ಜೆಯಿಲ್ಲದ’ ಅಲ್ಲಮಪ್ರಭುಗಳ ನಂತರ ಕೆಳ ಸಮುದಾಯದವರ ಮಾಹಿತಿಗಳು ಮೇಲೆ ಬರಲು ಸಾಧ್ಯವಾಗದೇ ಇದ್ದಂತಹ ಸಮಯದಲ್ಲಿ ಬೆಡಗಿನ ವಚನಗಳ ಮೂಲಕ ಸರಳ ಸಜ್ಜನಿಕೆಯ ಮತ್ತು ಬಂಡಾಯದ ಧ್ವನಿಯನ್ನು ವ್ಯಕ್ತಪಡಿಸಿದರು.
ಶರಣ ಸಂಸ್ಕøತಿಯ ಮೂಲ ಆಶಯವೇ ಕಾಯಕ ನಿಷ್ಠೆಯಾಗಿದ್ದು ಕಾಯಕದಲ್ಲಿ ಕೈಲಾಸ ಕಾಣುವ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಕಾಯಕ ತತ್ವದ ಪರಿಕಲ್ಪನೆಯೆ ತುಂಬಾ ಪ್ರಾಮುಖ್ಯವಾಗಿದ್ದು ಬದಲಾದ ಇಂದಿನ ಸನ್ನಿವೇಶದಲ್ಲಿ ಅದರ ಮಹತ್ವವು ಹೆಚ್ಚು ಪ್ರಸ್ತುತವಾಗಿದೆ.. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ. ಕಾಯಕ ಮಾಡದೆ ಉಣ್ಣುವುದು ಅಪರಾಧ ಎಂಬ ಮನೋಧೋರಣೆಯ ಭಾವನೆಯನ್ನು ಬಿತ್ತಬೇಕಾಗಿದೆ. ಶರಣರ ವಚನಗಳಲ್ಲಿನ ಸಾರವನ್ನು ಪಚನ ಮಾಡಿಕೊಳ್ಳಲು ಅಪ್ಪಣ್ಣನವರ ಕಾಯಕ ಪ್ರಿಯ ವಚನಗಳನ್ನು ಉಲ್ಲೇಖಿಸುವುದಾದರೆ,
ಅನ್ನ ಉದಕವ ಕೊಂಡೆಹೆನೆಂದಡೆ ಭೂಮಿಯ ಹಂಗು,
ಹೊನ್ನ ಹಿಡಿದೆಹೆನೆಂದಡೆ ಲಕ್ಷ್ಮಿಯ ಹಂಗು.
ಹೆಣ್ಣ ಹಿಡಿದೆಹೆನೆಂದಡೆ ಕಾಮನ ಹಂಗು.
ಹಾಲ ಕೊಂಡೆಹೆನೆಂದಡೆ ಹಸುವಿನ ಹಂಗು.
ಹೂಫಲಾದಿಗಳ ಕೊಂಡೆಹೆನೆಂದಡೆ ತರುಮರದ ಹಂಗು.
ತರಗೆಲೆಯ ಕೊಂಡೆಹೆನೆಂದಡೆ ವಾಯುವಿನ ಹಂಗು.
ಬಯಲಾಪೇಕ್ಷೆಯ ಕೊಂಡೆಹೆನೆಂದಡೆ ಆಕಾಶದ ಹಂಗು.
ಇದನರಿದು, ಇವೆಲ್ಲವನು ಕಳೆದು,
ವಿಶ್ವಬ್ರಹ್ಮಾಂಡಕ್ಕೆ ನಡೆನುಡಿ ಚೈತನ್ಯವಾದ ಜಂಗಮಲಿಂಗದ ಪಾದವಿಡಿದು,
ಅವರು ಬಿಟ್ಟ ಪ್ರಸಾದವ, ಉಟ್ಟ ಮೈಲಿಗೆಯ, ಉಗುಳ ತಾಂಬೂಲವ,
ಈ ತ್ರಿವಿಧವ ಕೊಂಡೆನ್ನ ಭವಂ ನಾಸ್ತಿಯಾಯಿತ್ತು.
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಅನ್ನ, ಹೊನ್ನು, ಹೆಣ್ಣು, ಹಾಲು, ಹೂ ಹಣ್ಣು, ಗಿಡ ಮರಗಳು, ಇವುಗಳಲ್ಲಿ ಯಾವುದನ್ನು ನೇರವಾಗಿ ತೆಗದುಕೊಂಡರು ಅದು ಇನ್ನೊಂದರ ಹಂಗಾಗಿರುತ್ತದೆ. ಹಾಗಾಗಿ ತನ್ನ ತಾಂಬೂಲದ ಕೆಲಸ ಮಾಡಿ ಲಿಂಗಜಂಗಮರು ನೀಡಿದ ಪ್ರಸಾದವನ್ನು ತಿಂದರೆ ನನ್ನ ಹುಟ್ಟು ಸಾರ್ಥಕವಾಗಿ ಮುಕ್ತಿ ಸಿಗುತ್ತದೆಂಬ ಮುಕ್ತಭಾವನೆಯನ್ನು ಇಲ್ಲಿ ವ್ಯಕ್ತಮಾಡಿದ್ದಾರೆ. ನಿಜ ಶ್ರಮದಿಂದ ಏನನ್ನೂ ಮಾಡದೆ ಎಲ್ಲವೂ ಬೇಕೆನ್ನುವ ಪ್ರಸ್ತುತ ಸಮಾಜಕ್ಕೆ ಅಪ್ಪಣ್ಣನವರ ಈ ಮಾತು ಖಂಡಿತಾ ಮಾರ್ಗದರ್ಶಿಯಾಗುತ್ತದೆ. “ತನ್ನ ಕೆಲಸವನ್ನು ತಾನು ಮಾಡದ ನಾಯಿ ತನ್ನ ಬಾಲಕ್ಕೆ ಹೇಳಿದಂತೆ ಕೆಲಸ ಮಾಡುವರಿಗೆಲ್ಲ ಈ ವಚನವು ಅನ್ವಯವಾಗುತ್ತದೆ. ತಮ್ಮ ಕೆಲಸವನ್ನು ತಾವು ಮಾಡಿ ಯಾವುದೇ ಹಂಗಿಲ್ಲದ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ ಇಂದಿನ ಸಮಾಜಕ್ಕೆ ಇರುವುದರಿಂದ ಇಂಥ ವಿಚಾರಗಳನ್ನು ತಿಳಿಸುವ ವಚನಗಳು ಬೆಳಕಾಗಬೇಕಿದೆ.

ಪ್ರಸ್ತುತ ಸಮಾಜದಲ್ಲಿ ಮನುಷ್ಯ ವಿವೇಕರಹಿತ ನಡೆಯನ್ನು ನಡೆಯುತ್ತ ನಡೆ ನುಡಿಗೂ ವ್ಯತ್ಯಾಸವನ್ನು ತಿಳಿಯದೆ ಪ್ರಕೃತಿಯ ಚರಾಚರವು ತನ್ನ ಪಿತ್ರಾರ್ಜಿತ ಆಸ್ತಿ ಎಂದು ಭಾವಿಸಿ ದುರಃಹಂಕಾರದಿಂದ ವರ್ತಿಸುತ್ತಿದ್ದಾನೆ. ಯಾವುದೇ ಒಂದು ಕೆಲಸವನ್ನು ನಾನು ಮಾಡಿದೆ, ನನ್ನಿಂದಲೇ ಆಗಲು ಸಾಧ್ಯವಾಯಿತೆಂದು ಸಾಧಕನಂತೆ ಮೆರೆಯುತ್ತಾನೆ. ಮತ್ತೊಬ್ಬರಿಗೆ ಮಾಡುವ ಅತಿ ಚಿಕ್ಕ ಸಹಾಯವನ್ನು ಊರಿಗೆ ಡಂಗುರ ಸಾರಿ ಹೇಳುತ್ತಾನೆ. ಇಂಥ ಸಮಾಜದ ಎದುರಿಗೆ ಅಪ್ಪಣ್ಣ ಇಟ್ಟ ಪ್ರಶ್ನಾವಳಿಯ ವಚನ ಇಂತಿದೆ.
ಅನ್ನವನ್ನಿಕ್ಕಿದರೇನು? ಹೊನ್ನ ಕೊಟ್ಟರೇನು?
ಹೆಣ್ಣು ಕೊಟ್ಟರೇನು? ಮಣ್ಣು ಕೊಟ್ಟರೇನು? ಪುಣ್ಯ ಉಂಟೆಂಬರು.
ಅವರಿಂದಾದೊಡವೆ ಏನು ಅವರೀವುದಕ್ಕೆ?
ಇದಕ್ಕೆ ಪುಣ್ಯವಾವುದು, ಪಾಪವಾವುದು?
ನದಿಯ ಉದಕವ ನದಿಗೆ ಅರ್ಪಿಸಿ,
ತನತನಗೆ ಪುಣ್ಯ ಉಂಟೆಂಬ ಬಡಹಾರುವರಂತೆ,
ಸದಮಳ ಶಾಶ್ವತ ಮಹಾಘನಲಿಂಗವನರಿಯದೆ,
ಇವೇನ ಮಾಡಿದರೂ ಕಡೆಗೆ ನಿಷ್ಪಲವೆಂದಾತ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಈ ವಚನದಲ್ಲಿ ಪ್ರಧಾನವಾಗಿ ಅನ್ನ, ಹೊನ್ನು, ಮಣ್ಣು ಮತ್ತು ಹೆಣ್ಣುಗಳನ್ನು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂಬ ಅರ್ಥವಿಲ್ಲದ ಮಾತನ್ನು ಪ್ರಶ್ನಿಸಲಾಗಿದೆ. ಇಲ್ಲಿ ಇರುವ ಮುಖ್ಯವಾದ ಪ್ರಶ್ನೆಯೆಂದರೆ ಅನ್ನ, ನೀರು, ಹಣ ಇತ್ಯಾದಿಗಳನ್ನು ಕೊಟ್ಟು ಪುಣ್ಯ ಪಡೆಯಲು ಆ ವಸ್ತುಗಳನ್ನೇನು ಅವರೇ ಸೃಷ್ಟಿಸಿದರೆ? ಇಂಥ ಸುಲಭ ವಿಚಾರಗಳನ್ನು ಅರಿಯದೇ ವರ್ತಿಸುವ ಜನರ ಬಗ್ಗೆ ಏನು ಹೇಳಲಿ? ಇದನ್ನು ತಿಳಿಯದೇ ಇರುವ ವ್ಯಕ್ತಿಗಳು ಈ ರೀತಿಯ ಯಾವ ದಾನ, ಸೇವೆಗಳಿಂದ ಯಾವುದೇ ಫಲವಿಲ್ಲ ಎಂಬುದು ಇಲ್ಲಿಯ ಆಶಯವಾಗಿದೆ.
ಮತ್ತೊಂದು ವಚನದಲ್ಲಿ ತನು ಮನ ಧನವನ್ನು ದಾನವ ಮಾಡಿದೆಂನೆಂದು ಬೀಗುವವರನ್ನು ಕುರಿತು ರಚಿಸಿದ ವಚನವು ಅದ್ಭುತವಾಗಿದೆ.

ತನುವ ಕೊಟ್ಟು ಭಕ್ತರಾದೆವೆಂಬರು
ಮನವ ಕೊಟ್ಟು ಭಕ್ತರಾದೆವೆಂಬರು 
ಧನವ ಕೊಟ್ಟು ಭಕ್ತರಾದೆವೆಂಬರು
ತನುಮನಧನವೆಂತು ಕೊಟ್ಟಿರಿ ಹೇಳಿರಣ್ಣಾ ?
ನಿಮ್ಮ ಒಡವೆ ನಿಮ್ಮಲ್ಲೆ ಇದೆ ಅದು ಹೇಗೆಂದರೆ ಬಲ್ಲವರು ನೀವು ಕೇಳಿ.
ತನುವ ನೀವು ಕೊಟ್ಟರೆ ನೀವು ರೂಪಾಗಿ ಇರುವುದಕ್ಕೇನು ?
ಮನವ ನೀವು ಕೊಟ್ಟರೆ ನಿಮಗೆ ನಡೆ ನುಡಿ ಚೈತನ್ಯವೇನು ?
ಧನವ ನೀವು ಕೊಟ್ಟರೆ ಕ್ಷುತ್ತಿಗೆ ಭಿಕ್ಷ ಸೀತಕ್ಕೆ ರಗಟೆ ಏನು ? ಅಂತಲ್ಲ ಕೇಳಿರಣ್ಣ
ತನುವ ಕೊಟ್ಟುದಾವುದೆಂದರೆ; ಹುಸಿ ಹೋದರೆ 
ಉಟ್ಟೇನು ತೊಟ್ಟೆನೆಂಬ ಗುಣವಳಿದರೆ ತನುವೆ ಗುರುವಾಯ್ತು.
ಮನವ ಕೊಟ್ಟುದಾವುದೆಂದರೆ; ವ್ಯಾಕುಲವೆಲ್ಲ ಅಳಿದು 
ನಿರಾಕುಳವಾಗಿ ನಿಂದರೆ ಮನವೆ ಲಿಂಗವಾಯ್ತು
ಧನವ ಕೊಟ್ಟಿಹೆವಾವುದೆಂದರೆ; ಇಂದಿಗೆ ನಾಳೆಗೆ ಎಂಬ 
ಸಂದೇಶ ಭಾವಕ್ಕೆ ಭಯಕ್ಕೆ ಭವವಳಿದುದೇ ಜಂಗಮವಾಯಿತ್ತು
ಇಂತಿದೀಗ ನಮ್ಮ ಮುನ್ನಿನ ಆಧ್ಯರ ನಡೆನುಡಿ, ಮಾಟಕೂಟ, 
ಇದನರಿಯದೆ ಏನೊಂದು ಮಾಡಿದರೂ ನೀಡಿದರೂ ಕೊಟ್ಟರೂ 
ಕೊಂಡರೆಯಾ ವಾಯಕ್ಕೆ ವಾಯ ಬಸವಪ್ರಿಯ ಕೂಡಲ ಚನ್ನ ಬಸವಣ್ಣ ||
ಈ ರೀತಿ ತನು ಮನ ಧನದ ಅರ್ಥ, ಆಶಯವನ್ನು ಅರಿಯಬೇಕು. ಇವುಗಳ ವಾಸನೆಯು ಮನಸ್ಸಿನಲ್ಲಿ ಹರಿದು ಪರಿಶುದ್ಧವಾಗಬೇಕು. ಇಲ್ಲದಿದ್ದರೆ ನಮ್ಮಯ ಭಕ್ತಿಯು ಭಿನ್ನ ಭಕ್ತಿಯಾಗಿ ಡಾಂಭಿಕವಾಗುತ್ತದೆ. ನಾವು ಅರ್ಪಿಸುವ ಭಕ್ತಿಯ ದಾನವು ಯಾವುದೇ ವ್ಯಾಪಾರ ವಹಿವಾಟಿನಂತೆ ಕೊಟ್ಟು ತೆಗೆದುಕೊಳ್ಳುವಂತಿರಬಾರದು. ಇಂದು ನೀಡಿದ ತನುಮನಧನದ ದಾನಕ್ಕೆ ಪ್ರತಿಕಾರವಾಗಿ ಭಗವಮತನಿಂದ ಬಡ್ಡಿ ಸಮೇತವಾಗಿ ಕೇಳುವ ಸಣ್ಣ ಬುದ್ಧಿಯಿಂದ ದೂರಾಗಿ ಪರಿಶುದ್ಧವಾದ ಭಕ್ತಿಯಿಂದ ಸಮರ್ಪಿಸಿದಾಗ ಮಾತ್ರ ಆ ದಾನಕ್ಕೆ ಧನ್ಯತೆ ದೊರಕುತ್ತದೆ. ಹಾಗಾಗಿ ಯಾರು ತನುವನ್ನು ಅರ್ಪಿಸಿದೆನೆಂದು ಹೇಳಿದರೆ, ಆ ತನುವಿನ ಅಭಿಮಾನ ಅವರಲ್ಲಿ ಅಳಿದಿರಬೇಕು. ಮನವ ಅರ್ಪಿಸಿದೆನೆಂದರೆ ಆ ಮನದ ಆತಂಕ ಅಳಿದಿರಬೇಕು. ಧನವ ಕೊಟ್ಟಿನೆಂದರೆ ಆ ಧನದ ಆಸೆ ಅಳಿದಿರಬೇಕು. ಅಲ್ಲಿ ಕೊಟ್ಟು ಪಡೆವ, ಕೊಟ್ಟು ಕುದಿವ ಭಾವಕ್ಕೆ ಅವಕಾಶವಿರದೆ ನಾಳಿನ ಸಂದೇಹಗಳಿಗೆ ಮನದಲ್ಲಿ ಜಾಗ ನೀಡದಿದ್ದಾಗ ಮಾತ್ರ, ತನುವು ಗುರುವಿನ ಗದ್ದುಗೆ ಏರುತ್ತದೆ. ಮನವು ಲಿಂಗದ ಸ್ವರೂಪವಾಗುತ್ತದೆ. ಧನವು ಜಂಗಮ ಜಗಲಿಯೇರುತ್ತದೆ. ಇದಕ್ಕೆ ಹೊರತಾಗಿ ಅರ್ಪಿಸಿದೆವೆಂದರೆ. ಹಡಪದ ಅಪ್ಪಣ್ಣನವರು ಹೇಳಿದಂತೆ ವಾಯಕ್ಕೆ ವಾಯ ಎಂದರೆ ಅದು ಕೇವಲ ಕಪಟ ನಾಟಕವೆಂದಾಗುತ್ತದೆ.

ಬಹಳಷ್ಟು ವಚನಕಾರರು ಭಕ್ತಿಗೆ ಪ್ರಾಮುಖ್ಯತೆ ನೀಡಿದ್ದಾರೆ. ಭಕ್ತಿಯೆಂಬುದು ತೋರುಂಬ ಲಾಭವಲ್ಲ. ಹಾಗೆಯೇ ಭಕ್ತನಾಗುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಅಂಥದ್ದರಲ್ಲಿ ಭಕ್ತಿಯ ಹೆಸರೇಳಿ ಬದುಕುವ ವ್ಯಕ್ತಿಗಳಿಗೇನು ಕಡಿಮೆ ಇರಲಿಲ್ಲ. ಹಾಗಾಗಿಯೇ ಬಹುತೇಕ ವಚನಕಾರರು ಭಕ್ತಿಯ ಕುರಿತಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಬರುಸೆಟಗನ ಭಕ್ತಿ ದಿಟವೆಂದು ನಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟನೆಗೆದಂತಾಯ್ತು ಕಾಣಾ ರಾಮನಾಥ ||
ಎಂದು ಹೇಳುವ ಮೂಲಕ ಜೇಡರ ದಾಸಿಮಯ್ಯನವರು ಢಾಂಬಿಕ ಭಕ್ತಿಯ ಮುಖವಾಡವನ್ನು ಕಳಚಿದ್ದಾರೆ. ಮೋಸಗಾರನ ಭಕ್ತಿಯು ಸತ್ಯವಾದುದೆಂದು ತಿಳಿದು ಮೋಸ ಹೋಗದಿರುವಂತೆ ಎಚ್ಚರಿಸಿದ್ದಾರೆ. ಬೆಕ್ಕು ಎಷ್ಟು ವೇದಾಂತ ಕೇಳಿದರೂ, ಶಾಂತವಾಗಿ ಧ್ಯಾನದಲ್ಲಿ ಕುಳಿತರೂ, ಇಲಿಯ ಕಂಡೊಡನೆ ನೆಗೆದು ಹಿಡಿದಂತೆ, ಮೋಸಗಾರನ ಭಕ್ತಿಯಿರುತ್ತದೆ. ಎಂಬ ವಾಕ್ಯಗಳಲ್ಲಿ ಖಂಡಿತವಾದವಿದೆ, ಅಂದಿನ ಮತ್ತು ಇಂದಿನ ಜನ ಜೀವನದ ಕಟು ಸತ್ಯದ ವಾಸ್ತವದ ವಿಮರ್ಶೆಯಿದೆ. ಇದಕ್ಕೆ ವಿಭಿನ್ನವೆಂಬಂತೆ ಹಡಪದ ಅಪ್ಪಣ್ಣನವರು ತಮ್ಮ ವಚನದಲ್ಲಿ ಭಕ್ತನ ಇರುವೆಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಯ್ಯಾ ನಿಮ್ಮ ಶರಣರು ವೇಷವ ತೋರಿ ಗ್ರಾಸವ ಬೇಡುವರಲ್ಲ.
ದೇಶವ ತಿರುಗಿ ಕಲಿತಮಾತ ನುಡಿವರಲ್ಲ.
ಲೇಸಾಗಿ ನುಡಿವರು, ಆಶೆ ಇಲ್ಲದೆ ನಡೆವರು, ರೋಷವಿಲ್ಲದೆ ನುಡಿವರು.
ಹರುಷವಿಲ್ಲದೆ ಕೇಳುವರು, ವಿರಸವಿಲ್ಲದೆ ಮುಟ್ಟುವರು.
ಸರಸವಿದ್ದಲ್ಲಿಯೇ ವಾಸಿಸುವರು.
ಇಂತಪ್ಪ ಬೆರಸಿ ಬೇರಿಲ್ಲದ ನಿಜೈಕ್ಯಂಗೆ ನಮೋ ನಮೋ ಎಂಬೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
ಇಂತಪ್ಪ ಶರಣರ ನೆಲೆಯ ನಾನೆತ್ತ ಬಲ್ಲೆನಯ್ಯಾ ? /861 [1]

ಈ ವಚನದಲ್ಲಿ ಶರಣರು ಮಾಡುವ ಭಕ್ತಿ ಜೀವನ ಮುಖವಾಡವಿಲ್ಲದ ನೈಜವಾದುದು ಎಂಬುದನ್ನು ಹೇಳುವುದರ ಮೂಲಕ ಆದರ್ಶ ಶರಣತ್ವದ ಸ್ಥಿತಿಯನ್ನು ವರ್ಣಿಸಿದ್ದಾರೆ. ಆದರೆ ಎಲ್ಲಾ ಶರಣರು ತಮ್ಮ ಭಕ್ತಿಯನ್ನು ಹೀಗೆ ಮಾಡುವುದಿಲ್ಲ ಎಂಬುದನ್ನು ತಿಳಿಸಿ ಆ ಮೂಲಕ ಶರಣರ ನಾಟಕೀಯತೆಯನ್ನು ದಾಸಿಮಯ್ಯನವರನ್ನು ಸ್ಮರಿಸಿ ವಿಡಂಬನೆ ಮಾಡಿದ್ದನ್ನು ಈ ಎರಡು ವಚನಗಳಲ್ಲಿ ಕಾಣಬಹುದಾಗಿದೆ.
ಹೊತ್ತುಹೊತ್ತಿಗೆ ಲಿಂಗಪೂಜೆಯ ಮಾಡಿಯೂ
ಮತ್ತೆಯು ಸತ್ಯವಾವುದು, ನಿತ್ಯವಾವುದೆಂದರಿಯದೆ ಕೆಟ್ಟರೆಲ್ಲ ಜಗವು.
ಸತ್ಯವಾಗಿ ನುಡಿವ ಶರಣರ ಕಂಡರೆ, ಕತ್ತೆಮಾನವರೆತ್ತಬಲ್ಲರೊ ?
ಅಸತ್ಯವನೆ ನುಡಿದು, ಹುಸಿಯನೆ ಬೋಧಿಸುವ ಹಸುಕರ ಕಂಡರೆ,
ಇತ್ತ ಬನ್ನಿ ಎಂಬರು.
ಇಂತಪ್ಪ ಅನಿತ್ಯದೇಹಿಗಳ ಭಕ್ತರೆಂದು ಜಂಗಮವೆಂದು
ನೋಡಿದರೆ, ನುಡಿಸಿದರೆ, ಮಾತನಾಡಿದರೆ, ನೀಡಿದರೆ,
ಅಘೋರನರಕವೆಂದು ನಮ್ಮ ಆದ್ಯರ ವಚನ ಸಾರುತಿದೆ,
ಬಸವಪ್ರಿಯ ಕೂಡಲಚೆನ್ನಬಸಣ್ಣಾ . /1078 [1]

ಅಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. 
ಲಿಂಗವ ಮಾರಿಕೊಂಡು ಉಂಬಾತನೊಬ್ಬ ಠಕ್ಕ. 
ಜಂಗಮವ ತೋರಿಕೊಂಡು ಉಂಬಾತನೊಬ್ಬ ಠಕ್ಕ. 
ಇವರು ಮೂವರು ಕಂಗಳು ಕಾಲು ಹೋದವರ ಸಂಗದಂತೆ, 
ಲಿಂಗ ಜಂಗಮಕ್ಕೆ ದೂರ, 
ನಮ್ಮ ಶರಣರ ಸಂಗಸುಖಕ್ಕೆ ಸಲ್ಲರು ನೋಡಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.

ಭಕ್ತಿಯನ್ನು ಲಾಭದ ಆಸೆಗೆ, ಮೋಸದ ಕ್ರಿಯೆಗೆ ಬಳಸಿಕೊಂಡು ಹೆಸರು ಪಡೆವವರಿದ್ದಾರೆ. ಹಾಗೆ ಮಾಡಿದರೆ ಅದರಿಂದ ಯಾವ ಲಾಭವೂ ಸಿಗಲಾರದೆಂಬ ಆಶಯವು ಈ ವಚನಗಳದ್ದಾಗಿದೆ. ಭಕ್ತನಾದವನ ಭಾವನೆಯು ಶುದ್ಧವಾಗಿದ್ದರೆ ಭಾಗ್ಯಕ್ಕೆ ಯಾವ ಕೊರತೆ ಇರಲಾರದು. ಭಕ್ತಿಮಾರ್ಗವು ಜೀವನದ ಸನ್ಮಾರ್ಗದ ಕ್ರಮವೆಂದು ಭಾವಿಸಿ,ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿ ಮಾಡುವ ಭಕ್ತಿಯು ಜೀವ ಚೈತನ್ಯದ ಶಕ್ತಿಯಾಗಿ ಜೀವನ ಮುಕ್ತಿ ನೀಡುವಂತಾಗಲಿ.
ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು
ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು 
ಎನ್ನ ಅರಿವು ನಿಮ್ಮ ಘನದೊಳಗೆ ಸವೆದು 
ನಿಶ್ಚಲ ನಿಜೈಕ್ಯವಾಗಿ ಬಸವ ಪ್ರಿಯ ಕೂಡಲ ಸಂಗಯ್ಯ
ನಾ ನೀನೆಂಬುದು ಏನಾಯಿತ್ತೆಂದರಿಯೆ! 
ಇಂಥಹ ವಿಶಾಲ ನೆಲೆಯಲ್ಲಿ ಮೂಡಿ ಬಂದಿರುವ ಎಲ್ಲ ಶರಣರ ವಚನಗಳನ್ನು ಓದಿದರೆ ವಚನ ಸಾಹಿತ್ಯವು ಶ್ರೀಮಂತಗೊಳ್ಳುತ್ತದೆ. ವಚನಗಳ ಸಾರ ಪಚನವಾಗಿ ಜೀವನದಲ್ಲಿ ಪ್ರಕಟವಾದರೆ ಸುಖ ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ.
ಹಡಪದ ಅಪ್ಪಣ್ಣನವರು ಭಕ್ತಿ ಭಂಡಾರಿ ಬಸವಣ್ಣನವರ ಕಾಯದ ನೆಳಲಾಗಿ, ಸತ್ಸಂಗದ ಫಲವಾಗಿ ಕಾಯದ ಶುದ್ಧಿಯನ್ನರಿತು ತನ್ನ ಸರ್ವಾಚಾರ ಸಂಪತ್ತುಗಳನ್ನು ಬಸವಣ್ಣನವರಲ್ಲಿ ಸಮರ್ಪಿಸಿ ನಿಜವಾಸಿಯಾಗಿದ್ದ ನಿಜಸುಖಿಶರಣರಾಗಿದ್ದಾರೆ. ಬಸವಣ್ಣನವರ ಅನುಯಾಯಿಗಳಾಗಿದ್ದ ಅಪ್ಪಣ್ಣನವರ ಶಿವಾನುಭಾವದ ಮಹತ್ವ ಅವರ ಅಂತ್ಯಕಾಲದಲ್ಲಿ ಗೋಚರವಾಗುತ್ತದೆ. ಅಂತ್ಯಕಾಲದಲ್ಲಿ ಕೂಡಲಸಂಗಮಕ್ಕೆ ಬಂದ ಬಸವಣ್ಣನವರು ತಾವು ಕೈಹಿಡಿದ ಧರ್ಮಪತ್ನಿ ನೀಲಾಂಬಿಕೆಯನ್ನು ಕರೆದು ತರುವಂತೆ ಒಡನಾಡಿಯಾದ ಅಪ್ಪಣ್ಣನನ್ನೇ ಕಳುಹಿಸಿದಾಗ, ಬರಿಕೈಲಿ ಹಿಂತಿರುಗಿ ಬಂದು ನಿಜೇಷ್ಟಲಿಂಗದಲ್ಲಿಯೇ ಗುರು ಹಾಗೂ ಪತಿ ಬಸವಣ್ಣನವರನ್ನು ಕಂಡು ಅದರಲ್ಲಿಯೇ ಸಮರಸಳಾದ ನೀಲಾಂಬಿಕೆಯ ರೀತಿಯನ್ನು ವರ್ಣಿಸುತ್ತಲೇ ತಾನೂ ನಿಜಲಿಂಗದಲ್ಲಿ ಐಕ್ಯನಾದ ನಿಜಸುಖಿ ಅಪ್ಪಣ್ಣನ ಜೀವನ ‘ಶರಣರನ್ನು ಮರಣದಲ್ಲಿ ನೋಡು’ ಎಂಬ ಉಕ್ತಿಗೆ ಆದರ್ಶವಾಗಿದೆ. ನೀಲಾಂಬಿಕೆಯ ಸಮಾಧಿಯ ಬಳಿಯಲ್ಲೇ ಅಪ್ಪಣ್ಣನವರ ಸಮಾಧಿಯೂ ಇದೆ. ಇಂತಹ ನಿಜ ಲಿಂಗಯೋಗಿಯ ಜಯಂತ್ಯೋತ್ಸವವು ನಿತ್ಯೋತ್ಸವಾಗಿ ಸವಿತಾ ಸಮಾಜವನ್ನಷ್ಟೆ ಅಲ್ಲ ಇಡೀ ಮನುಕುಲವನ್ನು ಬೆಳಗುವಂತಾಗಲಿ.

ಶರಣ: ರವಿ ರಾ ಕಂಗಳ
 ಬಾದಾಮಿ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!