Breaking News
Home / featured / 886ನೇ ಬಸವ ಜಯಂತಿ: ಸಂತಸ, ದುಃಖ, ಆತಂಕ

886ನೇ ಬಸವ ಜಯಂತಿ: ಸಂತಸ, ದುಃಖ, ಆತಂಕ

ವಿಶೇಷ ಲೇಖನ: ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವಧರ್ಮ ಪೀಠ ಬಸವಕಲ್ಯಾಣ.

886ನೇ ವಿಶ್ವಗುರು ಬಸವಣ್ಣನವರ ಜಯಂತಿಯ ನಿಮಿತ್ಯ ವಿಶ್ವದ ಜೀವಗಳಿಗೆ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು.ಬಸವಧರ್ಮವನ್ನು ಪುನುರುತ್ಥಾನಗೊಳಿಸಿದ ಮತ್ತು ಬಸವ ಜಯಂತಿ ಆಚರಣೆಗೆ ಕಾರಣರಾದ ಪೂಜ್ಯನೀಯರಿಗೆ ಹಾಗೂ ಮಹನೀಯರಿಗೆ ಹೃದಯ ತುಂಬಿ ಬಾಗಿದ ತಲೆ ಮುಗಿದ ಕೈಯಾಗಿರಿಸಿ ಶರಣು ಶರಣಾರ್ಥಿ ಸಲ್ಲಿಸುವೆ.

ವಿಶ್ವದಲ್ಲಿ ಶಾಂತಿ ಭಂಗ ಮಾಡಿ ಸಾಂಕ್ರಾಮಿಕ ರೋಗವಾಗಿ ಮಾನವರ ಜೀವದ ಮೇಲೆ ಮರಣ ಮೃದಂಗ ಬಾರಿಸುತ್ತಿರುವ ಕೋವಿದ್-19 ಕೊರೋನಾ ವೈರಸ್ ಭೀತಿಯಲ್ಲಿಯೂ ಮಹಾತ್ಮರ ಜಯಂತಿಯನ್ನು ಮನೆಯಲ್ಲಿಯೇ ಇದ್ದು ಕುಟುಂಬದೊಟ್ಟಿಗೆ ಆಚರಿಸಿ ತುಸು ಮನಕ್ಕೆ ನೆಮ್ಮದಿ ತಂದುಕೊಂಡು, ಮಹಾತ್ಮರಿಗೆ ಕೃತಜ್ಞತೆ ಸಲ್ಲಿಸುತ್ತಾ ಅವರು ಕೊಟ್ಟಿರುವ ವಿಶ್ವ ಸಂದೇಶಗಳನ್ನು ಮೆಲುಕು ಹಾಕುವ ಸುಧೈವಕಾಲ ನಮ್ಮದಾಗಿದೆ.

886ನೇ ಬಸವಜಯಂತಿಯ ಭಕ್ತಿಯ ಹೊಸ್ತಿಲಲ್ಲಿ ನಿಂತಿರುವ ನನಗೆ ಅಪಾರವಾದ ಸಂತಸ ಮತ್ತು ಅತೀವ ದುಃಖ ಹಾಗೂ ಬಿಟ್ಟು ಬಿಡದೆ ಕಾಡುವ ಆತಂಕ ಮೂರು ಒಮ್ಮೆಗೆ ಧುತ್ತೆಂದು ನನ್ನ ಮನದ ಭಾವನೆಗಳನ್ನು ಆಕ್ರಮಿಸಿ… ಮತ್ತೆ ವಿಶ್ವಗುರು ಬಸವಣ್ಣನೆಡೆಗೆ ಮುಖ ತಿರುಗಿಸಿ ಉತ್ತರ ಕಂಡುಕೊಳ್ಳಲು ಅಣಕಿಸುತ್ತವೆ.

ಭವ್ಯ ಭಾರತದ ಇತಿಹಾಸದಲ್ಲಿ ಬೆಳ್ಳಿಚುಕ್ಕೆಯಂತೆ ಕಂಗೊಳಿಸುತ್ತಾ ಸಕಲಜೀವಾತ್ಮರಿಗೆ ಲೇಸನ್ನೇ ಬಯಸಿದ; ಸಮತಾವಾದಿಯ ಗುಣಗಾನ ಮಾಡಿ ಸಂತೋಷಪಡಲೆ…? ಅಥವಾ ಯಾರಿಗಾಗಿ ಬಸವಣ್ಣನವರು ತಮ್ಮ ಚಿಕ್ಕವಯಸ್ಸಿನಲ್ಲಿಯೇ ಮನೆಯನ್ನು , ತಂದೆ-ತಾಯಿಯನ್ನು ತೊರೆದು, ಭಾರತದ ಮಹಿಳೆ ಮತ್ತು ದೀನದಲಿತರಿಗೆ ಹಗಲಿರುಳು ಶ್ರಮಿಸಿ ಅವರ ಕೀರ್ತಿಯನ್ನು ಉತ್ತುಂಗ ಶಿಖರಕ್ಕೆ ಏರಿಸಲು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಮತ್ತು ಸ್ವಾತಂತ್ರ್ಯ ನೀಡಿದ್ದಕ್ಕಾಗಿ ಅವರು ನಿನ್ನನ್ನೇ ಮರೆತು ನಿನಗೆ ಬೆನ್ನು ತೋರಿಸಿ ನಡೆದಿರುವುದನ್ನು ಕಂಡು ದುಃಖ ಪಡಲೇ…?
ಇಲ್ಲವೇ ವಿರಕ್ತ ಮಠಗಳು ಪೀಠಾಧಿಪತಿಗಳು ಗುರು ಬಸವಣ್ಣನವರನ್ನು ತಮ್ಮ ಮಾತಿನ ಚಾಪಲ್ಯಕ್ಕೆ ವ್ಯವಹಾರಕ್ಕೆ ಬಳಸಿಕೊಂಡು ಅವರ ತತ್ವಕ್ಕೆ ವಿರುದ್ಧವಾಗಿ ನಡೆಯುತ್ತಾ; ಒಳಗೊಳಗೆ ಬಸವ ತತ್ವವನ್ನು ಹೇಳಹೆಸರಿಲ್ಲದೆ ಮುಚ್ಚಿಹಾಕುವ ಹುನ್ನಾರವನ್ನು ಕಂಡು ಹಾಗೂ ದೇವಸ್ಥಾನಗಳ ಒಳಗೂ-ಹೊರಗೂ ಬಸವಣ್ಣನವರನ್ನು ನಂದಿಯಾಗಿ ಕೂಡಿಸಿ ಅಪಮಾನ ಮಾಡಿದ ಮೂಢ ಭಕ್ತರನ್ನು ಕಂಡು ಆ ಭಕ್ತಿಗೆ ಕಾರಣರಾದ ಪಂಚಪೀಠಾಧೀಶರನ್ನು ಕಂಡು ಮನದಲ್ಲಿ ಆತಂಕ ಪಡಲೇ….?

ಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಕೇವಲ 19ನೇ ವರ್ಷದಲ್ಲಿ ಅವರ ತತ್ವಕ್ಕಾಗಿ ನನ್ನ ಜೀವನ ಮುಡಿಪಾಗಿಸಿಗಬೇಕೆಂದು ಸಂಕಲ್ಪಿಸಿ ಧರ್ಮ ಪ್ರಸಾರಕ್ಕೆ ಜಂಗಮ ದೀಕ್ಷೆ ಪಡೆದು ಏಪ್ರಿಲ್ 28ಕ್ಕೆ ಹದಿನಾಲ್ಕು ವರ್ಷಗಳು ಗತಿಸಿ; 15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವೆ ಆದರೆ ನನ್ನೊಳಗಿನ ಈ ಮೇಲಿನ ಮೂರು ವೈರುಧ್ಯದ ಪದಗಳು ಬಿಟ್ಟೂಬಿಡದೆ ಕಾಡುತ್ತಿವೆ.
ಏನು ಬರೆಯಲಿ? ಏತಕ್ಕಾಗಿ ಬರೆಯಲಿ? ಯಾರಿಗಾಗಿ ಬರೆಯಲಿ? ಎಂಬ ಪ್ರಶ್ನೆಗಳು ಗುಣುಗುಡುತ್ತಿವೆ. ನನ್ನೊಳಗಾದ ಮಾನಸಿಕ ಸಂಘರ್ಷಕ್ಕೆ ಸಿಕ್ಕ ಉತ್ತರ ಇದು…. ನೀನು ಹಾಡಿದರೆ… ಬರೆದರೆ.. ಚೈತನ್ಯಾತ್ಮಕ ಬಸವಣ್ಣನ ಬಗ್ಗೆ ಹಾಡು; ಬಸವನ ಹೊಗಳು; ಬಸವನ ವಿಚಾರಗಳನ್ನೇ ಬರೆ; ನಿನ್ನೊಳಗಿನ ಬಸವತತ್ವದ ಉಸಿರಿಗೆ ಸಾಂತ್ವಾನ ಹೇಳಲು ಬರೆ, ಯಾರಿಗಾಗಿ ಬೇಡ ನಿನಗಾಗಿ ನೀ ಬರೆದುಕೋ…! “ಲೋಕದ ಡೊಂಕ ನೀನೇಕೆ ತಿದ್ದುವೆ ನಿನ್ನ ತನು ನಿನ್ನ ಮನ ಸಂತೈಸಿಕೊಳ್ಳು” ಎಂಬ ಗುರುಬಸವನ ವಾಣಿಗೆ ಗೌರವ ಕೊಟ್ಟು, ನನ್ನ ಆತ್ಮ ವಾಣಿಯಿಂದ ಪ್ರೇರಣೆಗೊಂಡು ನನ್ನೆರಡು ವಿಚಾರಗಳನ್ನು ಆತ್ಮವಂಚನೆ ಇಲ್ಲದೆ ನಿಮ್ಮೆದುರು ಬರೆದು ಹಂಚಿಕೊಳ್ಳುವೆ.

ಗುರು ಬಸವಣ್ಣನವರ ಜಯಂತಿಯನ್ನು ನಾವು ಆಚರಿಸುತ್ತಿದ್ದೇವೆ ಎಂದರೆ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇವೆ ಎನ್ನುವ ಸಾಮಾನ್ಯ ಪ್ರಜ್ಞೆ ನಮ್ಮಲ್ಲಿ ಹುಟ್ಟದೇ ಹೋದರೆ, ನಾವು ಬೇರೆ ಪ್ರಾಣಿಗಳಂತೆ ದ್ವಿಪಾದ ಪಶುಗಳೇ ಸರಿ.

ಅಸ್ಪೃಶ್ಯತೆಯ ಗಾಳಿಯನ್ನು ಸೋಂಕಿಸಿಕೊಂಡು, ಅಸ್ಪೃಶ್ಯತೆಯ ಗಂಜಿಯನ್ನು ಕುಡಿದು, ಅರೆಹೊಟ್ಟೆಯಲ್ಲಿ ನೊಂದು ಬೆಂದು, ನಾಲ್ಕಕ್ಷರ ಕಲಿತು, ಅಸ್ಪೃಶ್ಯತೆಯ ಕರಾಳ ಕಗ್ಗತ್ತಲೆಯಲ್ಲಿ ಬದುಕಿದವನು ನಾನು. ನಮ್ಮಂಥವರಿಗೆ ಬಸವಣ್ಣನವರು ಬಾಳ ಬಟ್ಟೆಯ ಬೆಳಕಾಗಿ, ನಂದಾದೀಪವಾಗಿ, ಕರುಳಬಳ್ಳಿಯಾಗಿ, ಸಮಾನತೆಯ ಎದೆಹಾಲುಣಿಸುವ ತಾಯಿಯಾಗಿ, ಸ್ವಾಭಿಮಾನದ ಕೆಚ್ಚು ಬೆಳೆಸಿದ ತಂದೆಯಾಗಿ, ಕಷ್ಟ ಸುಖದಲ್ಲಿ ಧೈರ್ಯ ಉತ್ಸಾಹ ತಂದುಕೊಳ್ಳಲು ವಚನಗಳ ಸಂದೇಶ ನೀಡಿದ ಬಂಧುವಾಗಿ, ಸದಾ ನಮ್ಮ ಬೆಂಗಾವಲಿಗೆ ನಿಲ್ಲುವ ದಿವ್ಯತ್ವದ ಮಹಾಶಕ್ತಿಯಾಗಿದ್ದಾರೆ.

ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ,ಚಿಕ್ಕಯ್ಯ ನೆಮ್ಮಯ್ಯ ಕಾಣಿರಣ್ಣಾ ಅಣ್ಣನು ನಮಮ್ಮ ಕಿನ್ನರಿ ಬ್ರಹ್ಮಯ್ಯ ಲಿಂಗದೇವಾ ಎನ್ನನೇತಕ್ಕರಿಯರಿ.
ಎಂದು ಬ್ರಾಹ್ಮಣರಾಗಿದ್ದರು ಬ್ರಾಹ್ಮಣ್ಯತ್ವದ ಸೋಂಕನ್ನು ಮುಟ್ಟಿಸಿಕೊಳ್ಳದ ಪಂಕಜ ವಿಶ್ವಗುರು ಬಸವಣ್ಣನವರು.

ನಿಮ್ನ ವರ್ಗದ ಜೊತೆಗೆ ಅದೆಷ್ಟು ಕೆಳಗಿಳಿದು ಅವರನ್ನು ಅಪ್ಪಿಕೊಂಡರೂ ಬಸವಣ್ಣನವರಿಗೆ ತೃಪ್ತಿ ಇಲ್ಲ‌. “ಕಾಗೆ ವಿಷ್ಟಿಸುವ ಹೊನ್ನ ಕಳಸಕ್ಕಿಂತ ನಿಮ್ಮ ಶರಣರ ಚಮ್ಮಾವುಗೆ ಕಾಯುವ ಜೋಗಯ್ಯನ” ಮಾಡು. “ನಿಮ್ಮ ಶರಣರ ಪಾದರಕ್ಷೆ ಕಾಯುವ ಕಡು ಬಂಟ ನಾನಯ್ಯ” “ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ” ನಾನು ಭಕ್ತ. ನನ್ನ ಹೆಸರುಗಳು ಕಾತುಗ, ಕೆತ್ತುಗ, ಪೋಲಿಗ, ಕೆಂಚ, ಕರಿಯ ಎಂದು ಹೇಳಿಕೊಳ್ಳುತ್ತಾ ಅವರ ಜೊತೆಗೆ ಜೀವಕ್ಕೆ-ಜೀವವಾಗಿ, ಪ್ರಾಣಕ್ಕೆ-ಪ್ರಾಣವಾಗಿ, ಭಾವಕ್ಕೆ-ಭಾವವಾಗಿ, ಆತ್ಮಕ್ಕೆ ಆತ್ಮವಾಗಿ ಅಪ್ಪಿಕೊಂಡು ಸಮಾನತೆ ಸಾರಿದ ಬಸವಣ್ಣನವರು ನಮ್ಮೊಳಗೆ ಒಂದಾಗುವ ಜಂಗಮ ಪ್ರೇಮಿ. ಈ ನಿಲುವನ್ನು ಕಂಡೇ; ವ್ಯೋಮಕಾಯಸಿದ್ಧ, ಶೂನ್ಯ ಪೀಠಾಧೀಶ ಅಲ್ಲಮಪ್ರಭುದೇವರು ಮನಮೆಚ್ಚಿ, ಹೃದಯ ಬಿಚ್ಚಿ, ಭಾವ ಸ್ನೇಹದ.ಮಾತುಗಳಿಂದ ನುಡಿ ಕಾಣಿಕೆ ಸಲ್ಲಿಸುತ್ತಾರೆ ನೋಡಿ…
*ಕುಲದೊಳಗೆ ಹುಟ್ಟಿ ಕುಲವ ಬೆರಸದೆ, ತಮ್ಮ ನಿಲುವು ಬಲಿದಿಪ್ಪವರು ಇನ್ನಾರು ಹೇಳಾ?*
*ಹಬ್ಬಿದ ಮೂರು ಬೆಟ್ಟಕ್ಕೆ ನನ್ನ ಮನವ ಹಬ್ಬಲಿಯದೆ. ಲಿಂಗ ಜಂಗಮಕ್ಕೆ ಸವೆಸಿ, ಸ್ವಯಲಿಂಗವಪ್ಪವರು ಇನ್ನಾರು ಹೇಳಾ? ಸ್ವಯೊ ಶರಣ ಸ್ವಯೊ ಲಿಂಗ ಸ್ವಯಂಭೋಗ ಎಂದುದಾಗಿ ಗುಹೇಶ್ವರ ನಿಮ್ಮ ಶರಣ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.*

ಶ್ರೇಣೀಕೃತ ವ್ಯವಸ್ಥೆಯ ತುತ್ತ ತುದಿಯಲ್ಲಿದ್ದ ಬಸವಣ್ಣನವರು; ಪಾತಾಳದಲ್ಲಿ ಅರೆಹೊಟ್ಟೆಯಲ್ಲಿ ನೊಂದು-ಬೆಂದು ಬಸವಳಿದ, ಅತಿ ಶೂದ್ರರ ಜೊತೆ ಸ್ನೇಹ ಮಾಡಿದ. ಅಲ್ಲಲ್ಲ… ಸ್ನೇಹದ ಜೊತೆ ಅಪ್ಪಿ ಮುಟ್ಟಿಸಿಕೊಂಡ, ಅವರ ಮನೆಯಲ್ಲಿ ಉಂಡುಟ್ಟ, ಮಿಗಿಲಾಗಿ ಬಾಯ ತಾಂಬೂಲ ಮೇಲಿದ. ಕರ್ತಾರನ ಕಮ್ಮಟದ ಭಕ್ತಿ ಬಾಗಿಲು ತೆರೆದು, ಧರ್ಮದೀಕ್ಷೆ ನೀಡಿದ, ದೇವನ ಮನೆಯ ಮಕ್ಕಳೆಂದು ಘೋಷಿಸಿದ.
ಇವನಾರವ, ಇವನಾರವ,ಇವನಾರವ ಎಂದೆನಿಸದಿರಯ್ಯಾ. ಇವನಮ್ಮವ, ಇವನಮ್ಮವ, ಇವನಮ್ಮವ ಎಂದೆನಿಸಯ್ಯ ಲಿಂಗದೇವ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯ .

ಜಾತಿ, ವರ್ಣ, ವರ್ಗ, ಲಿಂಗಭೇದ ಎನ್ನುವ ಯಾವುದೇ ತಾರತಮ್ಯವಿಲ್ಲದೆ ವಿಶ್ವ ಸಹೋದರತೆ ಸಾರಿ ವಿಶ್ವ ಕುಟುಂಬತ್ವದ ಸಂಕೇತವಾಗಿ ಅನುಭವ ಮಂಟಪ ಕಟ್ಟಿದ. ಅತೀ ಶೂದ್ರ ಪಟ್ಟಕ್ಕೆ ಸೇರಿದ್ದ ಅಗ್ರಗಣ್ಯ ಅಲ್ಲಮನನ್ನೇ ಅಧ್ಯಕ್ಷರನ್ನಾಗಿ ನೇಮಿಸಿದ. ಹಗಲಿರುಳು ನಿಮ್ನ ವರ್ಗದ ಮತ್ತು ಮಹಿಳೆಯರ ಸ್ವತಂತ್ರಕ್ಕಾಗಿ ಚಿಂತಿಸಿದ, ಮರುಗಿದ, ಉಂಡು-ಉಡುವ ಕೊಡು-ಕೊಳ್ಳುವ ವ್ಯವಸ್ಥೆಗೆ ಮುನ್ನುಡಿ ಬರೆದ. “ಕಾಯಕವೇ ಕೈಲಾಸ” ಮಂತ್ರ ಸಾರಿ; ‘ದುಡಿದ’ ದುಡಿಸಿದ, ಗಳಿಸಿದ್ದನ್ನು ದಾಸೋಹ ತತ್ವದಲ್ಲಿ ಬಳಸಿದ. ತನ್ನನ್ನೇ ಸಮರ್ಪಿಸಿಕೊಂಡ, ಸರ್ವಾಂಗಲಿಂಗಿಯಾಗಿ ಬಾಳಿನ ಕೊನೆಗೆ ಸರ್ವರೋಳು ಒಂದಾದ.

ಜಡ ಸಂಸ್ಕೃತಿ ವಿರುದ್ಧ ಚೈತನ್ಯ ಸಂಸ್ಕೃತಿಯನ್ನು ಸೂರ್ಯ ಚಂದ್ರ ಇರುವವರೆಗೂ ಜೀವಂತ ಗೊಳಿಸಿದ, ನಾನು ಮಡಿದರೆ ಏನಂತೆ? ತನ್ನೊಳಗಿನ ಪ್ರಜ್ಞೆ ಬ್ರಹ್ಮಾಂಡದ ಬೃಹದೊಡಲು ಅಣು ಅಣುವಾಗಿ ಸೇರಿದ. ಕಾಲಕಾಲಕ್ಕೆ ಅಣುರಣಿಸುತ್ತಿರುವ ಆ ಅಣುವೇ ನಮ್ಮಲ್ಲಿ ಜೀವ ಕಣವಾಗಿ ಸಂಚರಿಸುತ್ತಿರುವುದು. ಅಂತೆಯೇ ಬಸವ ಪ್ರಜ್ಞೆಯನ್ನು ಜನಪದವು ಮಂತ್ರವಾಗಿಸಿತಲ್ಲದೆ ನಡೆ-ನುಡಿ, ಅರಿವು-ಆಚಾರ, ಕಾಯಕ-ದಾಸೋಹಕ್ಕೆ ಸಾಕ್ಷಿಯಾಗಿರಿಸಿಕೊಂಡ ಜನಪದರ ಹೃದಯ ಮಾತುಗಳನ್ನು ನಾವಿಲ್ಲಿ ಪುನರುಚ್ಛರಿಸೋಣ‌.
*ಎಲ್ಲ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ ಚೆಲ್ಲಿದನು ತಂದು ಶಿವ ಬೆಳಕ ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು.*
*ಉತ್ತಿ ಬಿತ್ತುವ ಮಂತ್ರ, ಬಿತ್ತಿ ಬೆಳೆಯುವ ಮಂತ್ರ, ಸತ್ಯ ಶಿವ ಮಂತ್ರ ನಿನ್ನೆಸರು ಬಸವಯ್ಯ ಮರ್ತ್ಯದೊಳು ಮಂತ್ರ ಜೀವನಕ್ಕೆ.*
*ನಡೆವಾಗ-ನುಡಿವಾಗ,* *ಉಡುವಾಗ-ಕೊಂಬಾಗ ಬಿಡನಯ್ಯಾ ನಿಮ್ಮ ಹಸ್ತವನ್ನು ಈ ಛಲವ ಕಡೆ ಮುಟ್ಟಿಸೆನಗೆ ಬಸವೇಶ.*
*ಶರಣು ಶರಣೆಂಬುವೆವು ಹರಣ ಹಾರುವ ತನಕ ಕರುಣಿಸಿರಿ ಬಸವಯ್ಯ ನಮಗಿನ್ನು ಹರಸಿರಿ ಪ್ರತಿ ಕ್ಷಣಕ್ಷಣಕ್ಕೂ.*

ವಿಶ್ವಗುರು ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳದ ದುರಭಿಮಾನಿಗಳ ಕನ್ನಡದ ನೆಲದಲ್ಲಿ ಹುಟ್ಟಿ ಬಸವಣ್ಣನವರು ತಮಗೆ ತಾವೇ ಅವಮಾನ ಮಾಡಿಕೊಂಡಿದ್ದರು ಸಹಿತ; ಕನ್ನಡ ಭಾಷೆಯಲ್ಲಿ ಅನುಭವ ಸಾಹಿತ್ಯವಾದ ವಚನ ಸಾಹಿತ್ಯವನ್ನು ರಚಿಸಿ, ಕನ್ನಡ ಭಾಷೆಯನ್ನು ವಿಶ್ವದ ಶ್ರೀಮಂತ ಭಾಷೆಯ ಪಟ್ಟಿಯಲ್ಲಿ ಸೇರಿಸುವಲ್ಲಿ ಯಶಸ್ಸು ಪಡೆದು ಕನ್ನಡಮ್ಮನ ಋಣ ತೀರಿಸಿದ್ದಾರೆ. ಇಂದಲ್ಲ ನಾಳೆ ಇಡೀ ವಿಶ್ವವೇ ಬಸವತತ್ವಕ್ಕೆ ತಿರುಗಿ ವಿಶ್ವಸಂಸ್ಥೆಯಲ್ಲಿ ವಿಶ್ವ ನಾಯಕನ ಪಟ್ಟ ಪಡೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಈ ಕಾರಣಕ್ಕಾಗಿ ಅಪಾರ ಸಂತಸವಾಗುತ್ತದೆ. ನನ್ನ ಎಷ್ಟೋ ಜನ್ಮದ ಪುಣ್ಯದ ಫಲದಿಂದಲೋ ಏನೋ!! ನನಗೆ ಬಸವತತ್ವದ ಮಾರ್ಗದಲ್ಲಿ ಸಾಗಲು ಆಶೀರ್ವದಿಸಿದ ತಂದೆ-ತಾಯಿ ಮತ್ತು ಆ ಮಾರ್ಗದಲ್ಲಿ ಎಡೆಬಿಡದೆ ಕೈ ಹಿಡಿದು ಮುನ್ನಡೆಸಲು ಧರ್ಮ ಸಂಸ್ಕಾರ ನೀಡಿದ ಪರಮಪೂಜ್ಯ ಶ್ರೀ ಮಹಾಜಗದ್ಗುರು ಮಾತೆ ಮಹಾದೇವಿಯವರನ್ನು ಇಂದು ಬಸವಜಯಂತಿಯ ದಿನ ಭಾವತುಂಬಿ ಸ್ಮರಿಸಿಕೊಳ್ಳುತ್ತೇನೆ.

ಈ ದಿನ ದುಃಖವಾಗಲಿ ಬಲವಾದ ಕಾರಣವಿದೆ. ನಿರ್ಧಾಕ್ಷಿಣ್ಯವಾಗಿ ನಾನು ಆರೋಪಿಸುವುದು ವಿರಕ್ತಮಠ ಮತ್ತು ಗುರುಪೀಠದ ಮಠಾಧೀಶರನ್ನು ಹಾಗೂ ವ್ಯಾಪಾರ ಕೇಂದ್ರಗಳಂತಿರುವ ದೇವಸ್ಥಾನಗಳನ್ನು. 12ನೇ ಶತಮಾನದಲ್ಲಿ ಗುರು ಬಸವಣ್ಣನವರ ಆದಿಯಾಗಿ ಶರಣರು ತಾವು ಕಟ್ಟಿ ಬೆಳೆಸಿದ ಸ್ವತಂತ್ರ್ಯ ಲಿಂಗಾಯತ ಧರ್ಮವನ್ನು ಬಳುವಳಿಯಾಗಿ ಮುಂದುವರಿಸಿಕೊಂಡು ಹೋಗಲು, ತತ್ವ-ಸಿದ್ಧಾಂತಗಳ ಅನುಭವದ ವಚನ ಸಾಹಿತ್ಯವನ್ನೂ, ಧರ್ಮಪ್ರಚಾರಕ್ಕೆ ಬೇಕಾದ ಜಂಗಮರನ್ನೂ ಮತ್ತು ಒಂದೇ ಕಡೆ ಉಳಿದು ವಚನಗಳ ಕಟ್ಟು ಬಿಚ್ಚಿ ಅವುಗಳನ್ನು ಮುದ್ರಿಸಿ ಪ್ರಕಟಿಸಲು ವಿಭೂತಿ ರುದ್ರಾಕ್ಷಿಗಳನ್ನು ತಯಾರಿಸಿ ಸಂಗ್ರಹಿಸಿ ಧರ್ಮಪ್ರಚಾರಕರಿಗೆ ಧರ್ಮಬೋಧೆ ಮಾಡುವಾಗ ಅವುಗಳನ್ನು ಕಳಿಸಲು ಹಾಗೂ ಧರ್ಮಪ್ರಚಾರಕರಿಗೆ ಪ್ರಸಾದ ದಾಸೋಹ ನೆರವೇರಿಸಲು ಮಹಾಮನೆ ಮಹಾ ಮಠಗಳನ್ನು ಸ್ಥಾಪಿಸಲು ಪ್ರೇರೇಪಿಸಿದರು. ಆದರೆ ಈಗ ಧರ್ಮ ಪ್ರಚಾರ ಮರೆತು ಜಂಗಮತ್ವವನ್ನು ಕಳೆದುಕೊಂಡು ಜಾತಿ ಜಂಗಮರಾಗಿ ಪಾದ ಪೂಜೆ ಮಾಡಿಸಿಕೊಂಡು ತಿರುಗುವವರು ಜಂಗಮರಾದರೆ, ವಿರಕ್ತ ಮಠಗಳನ್ನು ಹಿರೇಮಠ ಎಂದು ಮಾಡಿಕೊಂಡು ಯಾವ ಗುರು ಬಸವಾದಿ ಪ್ರಮಥರು ಮುಂದಿನ ಬಾಗಿಲಿನಿಂದ ಮನು ಸಂಸ್ಕೃತಿಯ ಕರ್ಮಕಾಂಡಗಳಿಗೆ ಆಶ್ರಯ ನೀಡಿದ ವೇದ, ಆಗಮ, ಶೃತಿ, ಸ್ಮೃತಿ, ಪುರಾಣ ಇವುಗಳನ್ನು ಹೊರಹಾಕಿ ಅದರ ಬದಲಾಗಿ ನೆಲದ ಭಾಷೆಯ ಕನ್ನಡದಲ್ಲಿ ಹೃದಯ ಭಾವವನ್ನು ತುಂಬಿ ವಚನ ಸಾಹಿತ್ಯವನ್ನು ರಚಿಸಿ ಕೊಟ್ಟಿದ್ದರೋ ಈ ವಚನ ಸಾಹಿತ್ಯವನ್ನು ಮಠದ ಒಂದು ಮೂಲೆಯಲ್ಲಿ ಗಂಟು ಕಟ್ಟಿ ಮುಚ್ಚಿಟ್ಟು ಮತ್ತೆ ವೇದ, ಆಗಮ,ಶೃತಿ, ಸ್ಮೃತಿ, ಪುರಾಣಗಳನ್ನು ಹಿತ್ತಲ ಬಾಗಿಲಿನಿಂದ ತಂದು, ಮಠದಲ್ಲಿ ಸಂಸ್ಕೃತ ಪಾಠಶಾಲೆ ತೆರೆದು, ವೈದಿಕತೆಯನ್ನು ಬೋಧಿಸುತ್ತಾ ಗುರು ಬಸವಣ್ಣನವರಿಗೆ ಮತ್ತು ವಚನ ಸಾಹಿತ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಿ ವಿರಕ್ತ ಅಕ್ಷಮ್ಯ ಅಪರಾಧಕ್ಕೆ ಗುರಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಗುರು ಬಸವಣ್ಣನವರು ರಚಿಸಿಕೊಟ್ಟ ಲಿಂಗಾಯತ ಧರ್ಮದ ಆಚಾರ-ವಿಚಾರಗಳನ್ನು ಗಾಳಿಗೆ ತೂರಿ. ತಮ್ಮ ಮಠವನ್ನು ಶ್ರೀಮಂತಗೊಳಿಸಲು ದುಡ್ಡು ಸಂಗ್ರಹಿಸುವುದರ ಕಡೆ, ಶಿಕ್ಷಣ ಸಂಸ್ಥೆಯನ್ನು ತೆರೆಯುವುದರ ಕಡೆ ಗಮನವಿತ್ತು. ಬಸವಣ್ಣನವರನ್ನು ವ್ಯಾಪಾರೀಕರಣದ ವಸ್ತುವನ್ನಾಗಿ ಮಾಡಿರುವುದು ದುರಂತದ ಸಂಗತಿಯಲ್ಲವೇ?.
ಅಸ್ಪೃಷ್ಯತೆಯಲ್ಲಿ ಹುಟ್ಟಿದ ನಾನೊಬ್ಬ ಸಮಾನತೆಯ ಧರ್ಮವನ್ನು ಪಾಲಿಸಲು ಹಂಬಲಿಸಿ, ಬಸವ ಜಯಂತಿಯ ಹಿಂದಿನ ದಿನ ಬಸವ ಮಂಟಪದಲ್ಲಿ ಲಿಂಗ ದೀಕ್ಷೆ ಪಡೆಯಲು ಹೋಗಿ ಬಸವಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕಾಗಿ ನಾನು ಓದುತ್ತಿದ್ದ ಮಠದ ಪೂಜ್ಯರು ಮತ್ತು ಮಠದ ಮ್ಯಾನೇಜರ್ ನನ್ನನ್ನು ವಿಚಾರಿಸಿದ ನಾನು ಓದುತ್ತಿರುವ ಮಠದ ಪೂಜ್ಯರು ನಾನು ಬಸವ ಮಂಟಪಕ್ಕೆ ಹೋಗಿರುವ ಸಂಗತಿಯನ್ನು ತಿಳಿದು ನಾನು ದೀಕ್ಷ ತೆಗೆದುಕೊಂಡಿರುವುದನ್ನು ಖಂಡಿಸಿ ವಿಪರೀತ ಕಿರುಕುಳ ಕೊಟ್ಟಿದ್ದಲ್ಲದೆ, ಊಟಕ್ಕೆ ಹೋದಾಗ ನನ್ನ ಮೂಲ ಜಾತಿಯನ್ನು ಕೇಳಿ, ನನ್ನ ಜಾತಿ ಪ್ರಮಾಣ ಪತ್ರವನ್ನು ತರಿಸಿಕೊಂಡು ದಾಸೋಹ ಭವನದಲ್ಲಿ ನನ್ನ ಸ್ನೇಹಿತರ ಮುಂದೆ ಅವಮಾನಿಸಿ ರಾತ್ರೋರಾತ್ರಿ ಮಠದಿಂದ ಹೊರಗೆ ಹಾಕಿ ನನ್ನ ಅಭ್ಯಾಸವನ್ನು ಕುಂಠಿತ ಗೊಳಿಸಲು ಕಾರಣ ಏನು ಗೊತ್ತೆ? ನಾನು *ಬಸವಧರ್ಮ ಪೀಠದ ಮಹಾಜಗದ್ಗುರು ಮಾತೆ ಮಹಾದೇವಿ ಯವರಿಂದ ದೀಕ್ಷೆ ಹೊಂದಿರುವುದು ಮತ್ತು ಬಸವಣ್ಣನವರನ್ನು ಧರ್ಮಗುರುವಾಗಿ ಸ್ವೀಕರಿಸುವುದ್ದಕ್ಕೆ.* ಈ ನೋವು ನನ್ನನ್ನು ಪ್ರತಿಕ್ಷಣವೂ ಕಾಡುತ್ತಿದೆ; ನೆನೆದಾಗಲೆಲ್ಲ ದುಃಖ ಉಮ್ಮಳಿಸಿ ಬರುತ್ತದೆ. ಈ ಅವಮಾನಗಳು ನನ್ನನ್ನು ಜಂಗಮ ದೀಕ್ಷೆ ಪಡೆದು ಬಸವತತ್ವ ಧರ್ಮ ಪ್ರಚಾರಕ್ಕೆ ಸಮರ್ಪಿಸಿಕೊಳ್ಳಲು ಪ್ರೇರಣೆಯಾಗಿವೆ. ವಿರಕ್ತರು ಈ ಮಾರ್ಗವನ್ನು ಅನುಸರಿಸಿದ್ದು ಬಸವ ತತ್ವವನ್ನು ಗಾಳಿಗೆ ತೂರಿ ಬಸವತತ್ವದ ವಿರೋಧಿಗಳಾಗಿ ಜಾತಿಯತೆಯನ್ನು ಮಠದಲ್ಲಿ ಪಾಲಿಸುತ್ತಿರುವುದು ಮತ್ತು ಮಠದಲ್ಲಿ ದುರಹಂಕಾರಿಗಳಾಗಿ ನಡೆದುಕೊಳ್ಳುತ್ತಿರುವುದು ನನಗೆ ಅತೀವ ದುಃಖವನ್ನುಂಟು ಮಾಡಿದೆ.

ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಬಸವಣ್ಣನವರಿಗೆ ಸಂಬಂಧವಿಲ್ಲದ ಪಂಚ ಪೀಠಾಧೀಶರುಗಳು ಬಸವಣ್ಣನನ್ನು ಮತ್ತು ಅವರ ತತ್ವಗಳನ್ನು ಒಪ್ಪಿಕೊಳ್ಳದಿದ್ದರೆ ಹೋಗಲಿ, ಅವರ ಪಾಡಿಗೆ ಅವರಿದ್ದರೆ ಸಾಕಾಗಿತ್ತು. ಆದರೆ ಹಾಗೆ ಮಾಡದೆ ಬಸವಣ್ಣನವರ ಸಮಾನತೆಯ ಸಂದೇಶ. ಅವರ ಜೀವಪರ ಕಾಳಜಿ. ಅವರು ಅನುಸರಿಸಿದ ಸರಳ ಮಾರ್ಗ ಇವರ ಅಸ್ತಿತ್ವವನ್ನೇ ಬುಡಮೇಲು ಮಾಡುತ್ತಿರುವುದರಿಂದ ವೈದಿಕ-ಬ್ರಾಹ್ಮಣ ವ್ಯವಸ್ಥೆಯನ್ನು ಮೈಗೂಡಿಸಿಕೊಂಡು ಐತಿಹಾಸಿಕ ಮಹಾಪುರುಷ ಬಸವಣ್ಣನನ್ನು ನಾಲ್ಕು ಕಾಲಿನ, ಎರಡು ಕೋಡಿನ ಒಂದು ಬಾಲದ ಎತ್ತು-ನಂದಿಯನ್ನಾಗಿ ದೇವಸ್ಥಾನದ ಒಳಗೂ-ಹೊರಗೂ ಪ್ರತಿಷ್ಠಾಪಿಸಿ, ಲಿಂಗಾಯತರನ್ನು ವ್ಯವಸ್ಥಿತವಾಗಿ ದಾರಿತಪ್ಪಿಸಲೋಸುಗ ಬಸವಣ್ಣ ಎಂದರೆ ನಂದಿ; ನಂದಿ ಎಂದರೆ ಬಸವಣ್ಣ ಎಂದು ಸಾರಿದರಲ್ಲದೆ, ಕೃಷಿ ಕಾಯಕಕ್ಕೆ ಬೇಕಾದ ಅಮೂಲ್ಯ ಸಂಪತ್ತನ್ನು ಒದಗಿಸುವ, ರೈತನ ಬೆಂಗಾವಲಿಗೆ ಸೇವೆಸಲ್ಲಿಸಲು ದುಡಿಯುವವನು ಬಸವ ಎಂದು ಭಾವನಾತ್ಮಕವಾಗಿ ನಂಬಿಸಿ ಪೂಜೆ ಮಾಡಲು ಹೇಳಿ ಅದಕ್ಕೆ ಸುಳ್ಳು ಪವಾಡಗಳನ್ನು ಸೃಷ್ಟಿಸಿ ರಾಜಾರೋಷವಾಗಿ ವ್ಯಾಪಾರಕ್ಕೆ ಇಳಿದಿದ್ದು ದೂರ ಮತ್ತು ದುರಾಲೋಚನೆಯ ಪ್ರತೀಕವಾಗಿ ಎಣೆದ ಬಹುದೊಡ್ಡ ಷಡ್ಯಂತ್ರವಲ್ಲದೆ ಮತ್ತೇನು? ಇವರ ಒಳಬೊಳ್ಳತನ ಹೇಗಿರುತ್ತೆ ಎಂಬುದಕ್ಕೆ ಇಲ್ಲೊಂದು ನಗೆಹನಿ ಎರಡು ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಇಂತಹ ವ್ಯವಸ್ಥೆಯನ್ನು ಅಣಕಿಸುವ ಮತ್ತು ವಾಸ್ತವದ ಸತ್ಯವನ್ನು ಸಾರುತ್ತದೆ ನೋಡಿ.
ಬಸವಣ್ಣ
ಗುರು: ಶಿಷ್ಯನೇ ಬಸವಣ್ಣ ಎಂದರೆ ಎತ್ತು.
ಶಿಷ್ಯ: ಗುರುಗಳೇ ಬಸವಣ್ಣ ಎಂದರೆ ವಿಶ್ವಗುರು ಅಲ್ಲವೇ? ಗುರು: ನಿಮಗೆ ತತ್ವ ಮುಖ್ಯವೋ! ಹೊಟ್ಟೆಪಾಡು ಮುಖ್ಯವೋ!
ಶಿಷ್ಯ: ಹೊಟ್ಟೆಪಾಡು ಮುಖ್ಯ ಗುರುಗಳೇ.
ಗುರು: ಈಗ ಹೇಳು ಬಸವಣ್ಣ ಎಂದರೆ ಯಾರು?
ಶಿಷ್ಯ: ಎತ್ತು ಗುರುಗಳೇ, ನಂದಿ ಗುರುಗಳೇ.
ಗುರು: ಶಭಾಷ್ ಶಿಷ್ಯ ದುಡಿಯದಿದ್ದರೂ ದುಡ್ಡು ತಾನಾಗಿ ಬರುತ್ತದೆ ಹೋಗು.
ನೋಡಿದಿರಾ… ಈ ವ್ಯವಸ್ಥೆಯನ್ನ. ಬಹಳ ಆಳಕ್ಕೆ ಬೇರುಬಿಟ್ಟಿರುವಂತದ್ದನ್ನ ಸ್ವತಃ ಬಸವಣ್ಣನವರು ಬಂದರೂ ಸುಧಾರಿಸಿದ ಹಂತಕ್ಕೆ ಬೆಳೆದು ನಿಂತಿದೆ.

ಬಸವಣ್ಣನವರನ್ನು ನಂದಿಯಾಗಿ ಪೂಜೆ ಮಾಡುವ ದೇವಸ್ಥಾನಗಳನ್ನು ನಾವು ಪಟ್ಟಿ ಮಾಡುತ್ತ ಹೋದರೆ, ಇಡೀ ಪುಸ್ತಕವೇ ಮಾಡಬಹುದು! ಅಷ್ಟು ನಂದಿ ದೇವಸ್ಥಾನಗಳು ಇವೆ. ಒಂದು ವೇಳೆ ಆ ಜಾಗದಲ್ಲಿ ಐತಿಹಾಸಿಕ ಬಸವಣ್ಣನ ಮೂರ್ತಿಗಳು ಇರುತ್ತಿದ್ದರೆ ಎಸ್. ದ್ವಾರಕನಾಥವರು ಅಭಿಪ್ರಾಯ ಪಟ್ಟಂತೆ ಭಾರತದ ಸಾಂಸ್ಕೃತಿಕ ನಾಯಕ ಬಸವಣ್ಣನವರಾಗಿರುತ್ತಿದ್ದರು. ಲಿಂಗಾಯತ ಧರ್ಮ ಎಂದೋ ಜಾಗತೀಕ ಧರ್ಮಗಳ ಸಾಲಿನಲ್ಲಿ ಅಗ್ರಗಣ್ಯ ಸ್ಥಾನ ಪಡೆಯುತ್ತಿತ್ತು. ಈ ಪಟ್ಟವನ್ನು ತಪ್ಪಿಸಿದ ಐತಿಹಾಸಿಕ ದೋಷ ವೈದಿಕ ಮನುವಾದಕ್ಕೆ ಬಲಿಪಶುಗಳಾದ ಲಿಂಗಾಯತ ಮಠಾಧೀಶರು ಮತ್ತವರ ದೇವಸ್ಥಾನಗಳು ಹೊತ್ತುಕೊಳ್ಳಬೇಕು.

ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಧರ್ಮಪ್ರಚಾರಕ್ಕೆ ಹೋಗಿದ್ದ ಕಡೆಯಲ್ಲೆಲ್ಲ ನಂದಿಯನ್ನು ಕೂಡಿಸಿ, ಬಸವಣ್ಣನವರಿಗೆ ಐತಿಹಾಸಿಕ ಅಪಚಾರವೆಸಗಿದ್ದು ಬಸವಣ್ಣನವರು ಎಂದೂ ಕ್ಷಮಿಸಲಾರರು. ಉದಾಹರಣೆ: ಕೊತ್ತಲ ಬಸವೇಶ್ವರ ಸೇಡಂ, ಶರಣಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ನಂದಿ ಬಸವಣ್ಣ,. ಬಸವೇಶ್ವರ ದಂಡಗುಂಡ ಬಸವೇಶ್ವರ, ಮಹಾರಾಷ್ಟ್ರದ ಖೀಳೆಗಾವದಲ್ಲಿರುವ ನಂದಿ ಬಸವಣ್ಣ, ಬಸವನಬಾಗೇವಾಡಿಯಲ್ಲಿರುವ ನಂದಿ ಬಸವಣ್ಣ, ಗುಡ್ಡಾಪುರದ ದಾನಮ್ಮನ ದೇವಸ್ಥಾನದ ಮೇಲಿರುವ ನಂದಿ ಬಸವಣ್ಣ, ಸಂಖದಲ್ಲಿರುವ ನೀಲಮ್ಮ ಬಸವಣ್ಣನ ದೇವಸ್ಥಾನದಲ್ಲಿರುವ ನೀಲಮ್ಮನ ಪಕ್ಕದಲ್ಲಿ ನಂದಿ ಬಸವಣ್ಣ. ಇನ್ನಿತರ ದೇವಸ್ಥಾನದ ಮತ್ತು ಮಠಗಳ ಮೇಲೆ-ಕೆಳಗೆ ಹೊರಗೆ-ಒಳಗೆ ದ್ವಾರಬಾಗಿಲು ಮೇಲೆ ನಂದಿ ಬಸವಣ್ಣನನ್ನ ಕೂಡಿಸಿ ಐತಿಹಾಸಿಕವಾಗಿ ಬಸವಣ್ಣ ನನ್ನ ಮರೆಮಾಚಲು, ಲಿಂಗಾಯತ ಸಮುದಾಯದ ದಿಕ್ಕು ತಪ್ಪಿಸಲು ಮಾಡಿದ ಹುನ್ನಾರಗಳು. ಇದು ಅಪಚಾರವಲ್ಲವೇ ಅವಮಾನವಲ್ಲವೇ?*

ಕೇವಲ ನಂದಿ ಮಾಡಿ ಅಪಚಾರ ಮಾಡಿದ್ದಲ್ಲದೆ, ಬಸವಣ್ಣನವರನ್ನು ಭಕ್ತ, ಆತನೊಬ್ಬ ಸಂಸಾರಿ, ರಾಜಕಾರಣಿ, ಆತನ ಗುರುಗಳು ನಾವು ಪಂಚಾಚಾರ್ಯರು ಎಂದು ದಾಷ್ಟ್ಯತನದಿಂದ ಮೆರೆಯುವ ಈ ಪಂಚಾಚಾರ್ಯರಿಗೆ ಯಾವ ವಚನಗಳು ಹೇಳಿ ಇವರ ಅಹಂಕಾರವನ್ನು ಮುರಿಯಬೇಕು ತಿಳಿಯದು. ವಚನಗಳ ಬಗ್ಗೆ ತಾತ್ಸಾರ ಹೊಂದಿದ ಇವರು ವೇದ-ಆಗಮಗಳ ಸಂಸ್ಕೃತ ಭೂಯಿಷ್ಠನ್ನು ತಲೆಯಲ್ಲಿ ತುಂಬಿಕೊಂಡಿರುವ ಇವರುಗಳು ಕಲ್ಲಿನಲ್ಲಿ ಹುಟ್ಟಿದ ಭೌತಿಕವಾದಿಗಳು. ಕಲ್ಲಿಗೆ ಏನಾದರು ಜೀವವಿದೆಯೆ ಹಾಗೆ ಇವರಿಗೆ ಮಾನವತ್ವದ ಜೀವವಿಲ್ಲದ ಶವಗಳು ಇವರ ಜೊತೆ ವಾದ ಮಾಡುವುದು ಕೋಣದ ಮುಂದೆ ಕಿನ್ನರಿ ಬಾರಿಸುವುದು ಒಂದೆ. ನಮ್ಮ ಸಮಾಧಾನಕ್ಕಾದರೂ ಬಸವಣ್ಣನವರ ಘನ ವ್ಯಕ್ತಿತ್ವವನ್ನು ತಿಳಿದುಕೊಳ್ಳಬೇಕಾಗಿದೆ. ಯೋಗಿಗಳ ಯೋಗಿ ವ್ಯೋಮಕಾಯಸಿದ್ಧ ಶೂನ್ಯಪೀಠಾಧೀಶ ಅಲ್ಲಮಪ್ರಭುದೇವರು, ಲಿಂಗಾಂಗಯೋಗಿ ಸಿದ್ದರಾಮೇಶ್ವರರು, ಷಟಸ್ಥಲ ಜ್ಞಾನಿ ಚನ್ನಬಸವಣ್ಣನವರು, ವೀರ ವಿರಾಗಿಣಿ ಜಗನ್ಮಾತೆ ಅಕ್ಕಮಹಾದೇವಿಯವರು, ವೀರಮಾತೆ ಅಕ್ಕನಾಗಲಾಂಬಿಕೆ, ವೀರ ಗಣಾಚಾರಿ ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಮೋಳಿಗೆ ಮಾರಯ್ಯ ಹೀಗೆ ಅಸಂಖ್ಯಾತ ಪ್ರಮಥಗಣಂಗಳು ಬಸವಣ್ಣನವರ ಘನ ವ್ಯಕ್ತಿತ್ವವನ್ನು ಹಾಡಿ ಕೊಂಡಾಡಿದ್ದಲ್ಲದೆ, ಅವರನ್ನು ವಿಶ್ವಗುರುವನ್ನಾಗಿ ಸ್ಮರಿಸಿದ್ದಾರೆ. ಅದಕ್ಕೆ ಅಲ್ಲಮಪ್ರಭುವಿನ ಒಂದು ವಚನವೇ ಸಾಕ್ಷಿ.
ಶಿವ ಗುರುವೆಂದು ಬಲ್ಲಾತನೆ ಗುರು, ಶಿವಲಿಂಗವೆಂದು ಬಲ್ಲಾತನೆ ಗುರು, ಶಿವ ಜಂಗಮವೆಂದು ಬಲ್ಲಾತನೆ ಗುರು, ಶಿವ ಪ್ರಸಾದವೆಂದು ಬಲ್ಲಾತನೆ ಗುರು, ಶಿವ ಆಚಾರ್ಯರೆಂದು ಬಲ್ಲಾತನೆ ಗುರು, ಇಂತಿ ಪಂಚವಿಧವೇ, ಪಂಚ ಬ್ರಹ್ಮವೆಂದರುಹಿದ ಮಹಾಮಹಿಮ ಸಂಗನಬಸವಣ್ಣನು ಎನಗೆಯೂ ಗುರು, ನಿನಗೆಯೂ ಗುರು, ಜಗಕ್ಕೆಲ್ಲಕ್ಕೂ ಗುರು ಕಾಣಾ ಗುಹೇಶ್ವರ.

ಈಗಿನ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ದಲ್ಲಿ 30-04- 1134 ರಲ್ಲಿ ಬ್ರಾಹ್ಮಣ ಕುಲದ ಸ್ಮಾರ್ಥ ಸಂಪ್ರದಾಯದ ಕುಟುಂಬಸ್ಥರಾದ ಮಾದರಸ-ಮಾದಲಾಂಬಿಕೆಯ ಮಗನಾದ ಬಸವಣ್ಣನವರು, 12ನೇ ಶತಮಾನ ಕಂಡ ಭಾರತದ ಅಪ್ರತಿಮ ಸಮತಾವಾದಿ, ಭಾರತ ಜಾತ್ಯಾತೀತವಾದಿ ಎಂಬ ಐತಿಹಾಸಿಕ ಸತ್ಯವನ್ನು ಅರಿಯದ ಮಂದಮತಿಗಳು ವ್ಯಕ್ತಿಯ ವ್ಯಕ್ತಿತ್ವದ ಹಾದರಕ್ಕಿಳಿದು ಬಸವಣ್ಣನವರನ್ನು ಒಂದು ನಂದಿ ಮಾಡಿ ಕುಡಿಸದ್ದು ದುರಂತವೇ ಸರಿ. ಹೀಗೆ ಅವಮಾನ ಮಾಡಿದ್ದಲ್ಲದೆ, ಬಸವಣ್ಣನವರನ್ನು ವ್ಯಾಪಾರಿಕರಣ ಗೊಳಿಸಿ ದುಡ್ಡು ಮಾಡಿದರು. ಇವರು ಮಾಡಿದ ಇನ್ನೊಂದು ಕೆಟ್ಟ ಕೆಲಸವೆಂದರೆ ಪಾಶ್ಚಿಮಾತ್ಯ ತತ್ವಜ್ಞಾನಿಗಳು, ಪ್ರಧಾನಿಗಳು, ಚಿಂತಕರು ಭಾರತಕ್ಕೆ ಬಂದು ಮಠಗಳಿಗೆ ಭೇಟಿ ಕೊಟ್ಟಾಗ ಅವರಿಗೆ ತಭ್ಮ ಪೋಟೊ ಇಲ್ಲವೆ, ನಂದಿ ಬಸವಣ್ಣನ ವಿಗ್ರಹ ಕೊಟ್ಟು ಕಾಲ್ಪನಿಕ ಕಟ್ಟುಕಥೆ ಹೆಣೆದ ನಂದಿಯ ಅವತಾರದ ಗ್ರಂಥಗಳನ್ನು ಅವರ ಕೈಗಿತ್ತು, ಐತಿಹಾಸಿಕ ಪುಣ್ಯಪುರುಷ ಬಸವಣ್ಣನನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ ಭೂಪರು. ಇವರು ಎಂದು ಕ್ಷಮೆಗೆ ಅರ್ಹರಲ್ಲ ವೈಚಾರಿಕ ನಿಜ ಲಿಂಗಾಯತರು ಎಂದೂ ಕ್ಷಮಿಸಲಾರರು.

ಭಾರತಕ್ಕೆ ಬಂದ ಪಾಶ್ಚಿಮಾತ್ಯರು ಅವರೇನು ದಡ್ಡರು ಇರಲಿಲ್ಲ. ವೈಚಾರಿಕ ವೈಜ್ಞಾನಿಕ ತಳಹದಿಯಲ್ಲಿ ತತ್ವಜ್ಞಾನವನ್ನು ಮತ್ತು ಐತಿಹಾಸಿಕ ಪುರುಷರನ್ನು ತಿಳಿದುಕೊಳ್ಳುವಲ್ಲಿ ಮೇಧವಿಗಳಾಗಿದ್ದರು. ಭಾರತದ ಇತಿಹಾಸವನ್ನು ಕೂಲಂಕಷವಾಗಿ ಸಂಶೋಧಿಸಿ ಇಲ್ಲಿನ ಮಹಾತ್ಮರ ಜೀವನದ ಚಿತ್ರವನ್ನು ಕಲೆಹಾಕಿದರು. ಅಂಥವರ ಸಾಲಿನಲ್ಲಿ *ಐತಿಹಾಸಿಕ ಸಮತಾವಾದಿ ಬಸವಣ್ಣನವರ ಬಗ್ಗೆ ಮಾತನಾಡಿದವರೆಂದರೆ, ಬ್ರಿಟನ್ನಿನ ಅರ್ಥರ್ ಮೈಲ್ಸ್, ಸಿಪಿ ಬ್ರೌನ್, ಬ್ರಿಟನ್ನಿನ ಪ್ರೊಫೆಸರ್ ಆರ್ ಡಿ ರಾನಡೆ, ಸರ್ ಜೇಮ್ಸ್ ಕ್ಯಾಂಪ್ ಬೆಲ್, ಆರ್ ಬ್ಲೇಕ್ ಮೈಕೆಲ್, ಕೆ.ವಿ.ಜ್ವೆಲೇಬಿಲ್,ಡೆವಿಡ್, ಎನ್, ಲೋರೆಂಜಿನ್, ಜೆ.ಪಿ.ಸ್ಕೌಟಿನ್, ರಾಬರ್ಟಸನ್, ಝೋನ್.ಡಿ.ಮೈನ್, ನ್ಯೂಜಲ್ಯಾಂಡಿನ್ ಫಿಲ್ ಗೋಪ್, ಕ್ರಿಸ್, ಕಾರ್ಟರ್.

ಹಾಗೆಯೇ ಭಾರತದ ರಾಷ್ಟ್ರಪತಿಗಳು, ಪ್ರಧಾನಿಗಳು, ಉಪಪ್ರಧಾನಿಗಳು, ಉಪರಾಷ್ಟ್ರಪತಿಗಳು, ತತ್ವಜ್ಞಾನಿಗಳು, ಸಂಶೋಧಕರು, ಕವಿಗಳು, ಸಾಹಿತಿಗಳು, ಚಿಂತಕರು, ಧಾರ್ಮಿಕ ನೇತಾರರು ತಮ್ಮ ಅಧ್ಯಯನದಲ್ಲಿ ಬಸವಣ್ಣನವರು ಒಬ್ಬ ಸ್ವತಂತ್ರ ವಿಚಾರವಾದಿ, ಜೀವಪರ ಸಮಾಜದ ಚಿಂತಕ, ಕನ್ನಡಾಂಬೆ ಮತ್ತು ಭಾರತಾಂಬೆ ಕಂಡ ಅಪ್ರತಿಮ ಧಾರ್ಮಿಕ ಚಿಂತಕ, ಮಾನವತೆಯ ಹರಿಕಾರ, ಕಾಯಕಯೋಗಿ, ಆಧ್ಯಾತ್ಮದ ಗಿರಿಶಿಖರ, ಶತಶತಮಾನಗಳ ಕಾಲ ಯಾರನ್ನು ಗೆಲ್ಲಲು ಸಾಧ್ಯವಾಗಿಲ್ಲವೋ, ಅಂತವರ ಮನ ಹೃದಯ ಗೆದ್ದ ಮನಶಾಸ್ತ್ರಜ್ಞ, ಜಂಗಮ ಪ್ರೇಮಿ, ದಾರ್ಶನಿಕ, ತತ್ವಜ್ಞಾನಿ, ಕನ್ನಡ ದೃವತಾರೆ, ಕನ್ನಡ ಕುಲದ ಕಣ್ಮಣಿ,ವಿಶ್ವಗುರು ಲಿಂಗಾಯತ ಧರ್ಮದ ಧರ್ಮ ಸಂಸ್ಥಾಪಕ ಎಂದು ಅವರ ಬಹುಮುಖ ವ್ಯಕ್ತಿತ್ವವನ್ನು ಗುರುತಿಸಿ ಬಣ್ಣಿಸಿದ್ದಾರೆ.

ಭಾರತೀಯ ಧಾರ್ಮಿಕ ಗೋಮುಖ ವ್ಯಾಘ್ರಗಳ ದಡ್ಡ ಶಿಖಾಮಣಿಗಳು ವಿಶ್ವಕ್ಕೆ ಬಸವಣ್ಣನನ್ನು ನಂದಿ ಮಾಡಿ ತೋರಿಸಿದ ಈ ಕೂಪಮಂಡೂಕಗಳಿಗೆ ಬಸವಣ್ಣ ನಂದಿ ಅಲ್ಲ; ಮಾನವತೆಯನ್ನು ಎತ್ತಿ ಹಿಡಿಯಲು ಬಂದ ಮಾನವತಾವಾದಿ ಎಂದು ಪಾಶ್ಚಿಮಾತ್ಯರು, ದೇಶದ ಹಿತಚಿಂತಕರು ಹೃದಯ ತುಂಬಿ ಅವರ ಕೀರ್ತಿಯನ್ನು ಮುಗಿಲೆತ್ತರಕ್ಕೆ, ಬಾನೆತ್ತರಕ್ಕೆ, ಜಗದಗಲವಾಗಿ ವಿಶ್ವಕ್ಕೆ ಮುಟ್ಟಿಸಿದ್ದಾರೆ. ಇವರೆಲ್ಲ ಆತ್ಮರುಗಳಿಗೆ 886ನೇ ಬಸವಜಯಂತಿಯ ಹಾರ್ದಿಕ ಶುಭಾಶಯಗಳನ್ನು ಹೇಳದಿದ್ದರೆ ತಪ್ಪಾದೀತು. ಬಸವಣ್ಣನವರ ಘನ ವ್ಯಕ್ತಿತ್ವವನ್ನು ಗುರುತಿಸಿದ ಅವರಿಗೆ ಅನಂತ ಕೋಟಿ ಕೃತಜ್ಞತೆಗಳು.

ಈ ಮೇಲಿನ ಎಲ್ಲಾ ಕಾರಣಗಳಿಗಾಗಿ ಒಂದು ಕಡೆ ಸಂತೋಷ, ಮತ್ತೊಂದು ಕಡೆ ದುಃಖ, ಮಗದೊಂದು ಕಡೆ ಆತಂಕ ನನ್ನನ್ನು ಆವರಿಸಿದರು. ವಿಶ್ವಗುರು ಬಸವಣ್ಣನವರು ನನ್ನ ಬದುಕಿಗೆ ಧೀಮಂತ ವ್ಯಕ್ತಿತ್ವದ ದಿವ್ಯ ಮೂರ್ತಿ ಪರಿಪೂರ್ಣ ಆತ್ಮ ಸಾಕ್ಷಾತ್ ಚಿನ್ಮಯಾನಂದ ಸ್ವರೂಪವೇ ಆಗಿದ್ದಾರೆ. ಅವರು ನನ್ನ ವಿಚಾರಗಳಲ್ಲಿ ಮರುಹುಟ್ಟು ಹೊಂದಿದ್ದಾರೆ. ಆದ್ದರಿಂದ ನಾನು ಅವರ ಮೂರ್ತಿಗಿಂತ ಅವರು ವಚನ ಸಂದೇಶಗಳ ತತ್ವವನ್ನು ಅಪಾರವಾಗಿ ಗೌರವಿಸುತ್ತೇನೆ. ಪ್ರೀತಿಸುತ್ತೇನೆ.

ಇಂದು ನಾವು ನೀವೆಲ್ಲಾ ಸಂಕಲ್ಪ ಮಾಡುವ ಸಂಕ್ರಮಣ ಕಾಲ ಒದಗಿ ಬಂದಿದೆ. ಜಾಗತಿಕವಾಗಿ ಅನಾರೋಗ್,ಯ ಯುದ್ಧದ ಭೀತಿ, ಭಯೋತ್ಪಾದನೆ, ಅನೈತಿಕತೆ, ಭ್ರಷ್ಟಾಚಾರ, ಅತ್ಯಾಚಾರ, ಜಾತಿಯತೆ, ಕೋಮುಗಲಬೆ ಈ ಎಲ್ಲ ಜಾಗತಿಕ ಸಮಸ್ಯೆಗಳಿಂದ ನಾವಿರುವ ವಿಶ್ವ ತಲ್ಲಣಗೊಂಡಿದೆ. ಇಂತಹ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ಬುದ್ಧನ ಶಾಂತಿಯ ಸಂದೇಶಗಳು, ವಿಶ್ವಗುರು ಬಸವಣ್ಣನ ಸಮಾನತೆ ಸಂದೇಶಗಳು, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರರ ಸಾಂವಿಧಾನಿಕ ಚಿಂತನೆಗಳು ವಿಶ್ವವನ್ನು ಸುವ್ಯವಸ್ಥಿತವಾಗಿ ಸುಂದರವಾಗಿ ಜಾತ್ಯತೀತವಾಗಿ ಸಹೋದರತೆಯಿಂದ ಕಟ್ಟಲು ಯೋಗ್ಯವಾಗಿವೆ, ಶಾಂತಿ ಬಯಸುವ ದಿವ್ಯ ಔಷದಿಗಳಾಗಿವೆ.

ಬಸವ ಜಯಂತಿಯ ಉತ್ಸಾಹದ ಉನ್ಮಾದದಲ್ಲಿರುವ ನಾವುಗಳು ವಿಶ್ವಗುರು ಬಸವಣ್ಣನವರು ರಚಿಸಿದ ವಚನಗಳು 1416. ಈ ಎಲ್ಲಾ ವಚನಗಳನ್ನು ಓದುವುದಲ್ಲದೆ, ನಮ್ಮ ಬದುಕಿನಲ್ಲಿ ಅನುಷ್ಠಾನ ಮಾಡಿ ನಮ್ಮ ಜೀವನವನ್ನು ಸಾರ್ಥಕಗೊಳಿಸೋಣ. ಜೊತೆಗೆ ಅವರು ನೀಡಿದ *”ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು” “ಕಾಯಕವೇ ಕೈಲಾಸ” “ದಾಸೋಹವೇ ದೇವ ದಾಮ” “ಆಚಾರವೇ ಸ್ವರ್ಗ ಅನಾಚಾರವೇ ನರಕ” “ಅರಿವೇ ಗುರು” ಎಂಬ ವಾಕ್ಯಗಳನ್ನು ಜನುಮನಕ್ಕೆ ಪ್ರೀತಿಯಿಂದ ಮುಟ್ಟಿಸುವ ಗುರುತರ ಜವಾಬ್ದಾರಿ ನಭ್ಮ ಮೇಲಿದೆ.

ಬಸವನನ್ನು ಹಾಡೋಣ, ಬಸವನನ್ನು ಸ್ಮರಿಸೋಣ, ಜಾತ್ಯಾತೀತವಾಗಿ ಬಸವ ತತ್ವದಲ್ಲಿ ಒಂದಾಗೋಣ. ತಮ್ಮೆಲ್ಲರಿಗೂ ಮತ್ತೊಮ್ಮೆ 886ನೇ ಬಸವಜಯಂತಿಯ ಹೃದಯತುಂಬಿದ ಶುಭಾಶಯಗಳು.

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಬಸವಧರ್ಮ ಪೀಠ ಬಸವಕಲ್ಯಾಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!