Breaking News
Home / featured / ವಿಶ್ವಗುರು ಬಸವಣ್ಣನವರು

ವಿಶ್ವಗುರು ಬಸವಣ್ಣನವರು

ವಿಶ್ವಗುರು , ಯುಗದ ಉತ್ಸಾಹ , ಇಷ್ಟಲಿಂಗ ಜನಕ , ಜಗಜ್ಯೋತಿ , ಮಹಾ ಮಾನವತಾವಾದಿ , ಲಿಂಗಾಯತ ಧರ್ಮ ಸಂಸ್ಥಾಪಕ , ಅನುಭವ ಮಂಟಪ ನಿರ್ಮಾತೃ , ಸ್ತ್ರೀ ಕುಲೋದ್ದಾರಕ , ದಲಿತೋದ್ದಾರಕ , ಸ್ವಯಂಕೃತಗುರು , ಪೂರ್ವಾಚಾರಿ , ಭವಹರ , ಕಾಮಧೇನು , ಕಲ್ಪವೃಕ್ಷ , ಚಿಂತಾಮಣಿ . ಪರುಷದ ಖಣಿ , ತಂದೆ – ತಾಯಿ – ಬಂಧು , ಭಕ್ತಿ ಭಂಡಾರಿ , ಗುರುಲಿಂಗಜಂಗಮ , ವಿಭೂತಿ , ರುದ್ರಾಕ್ಷಿ , ಪಾದೋದಕ , ಪ್ರಸಾದ , ಮಂತ್ರ , ಕೃಪಾನಿಧಿ , ಕರುಣಾಮೂರ್ತಿ , ಶಿವನೆ ಬಸವ ಬಸವಾ ಶಿವನೆ , ಕಾಲಹರ , ಕರ್ಮಹರ , ೭೭೦ಅಮರಗಣಂಗಳ ಮಾಡಿದಾತ ಬಸವಣ್ಣ ಎಂದು ಮುಂತಾಗಿ ಅವರ ಸಮಕಾಲಿನ ಶರಣರು ತಮ್ಮ ವಚನಗಳಲ್ಲಿ ಬರೆದಿರುವುದನ್ನು ಕಾಣುತ್ತೇವೆ . ಇಂತಹ ಮಹಿಮಾ ಯುಗ ಪುರುಷ ೧೨ನೇ ಶತಮಾನದಿಂದ ಹಿಡಿದು ಇದುವರೆಗೂ ಕನ್ನಡ ಭಾಷೆ , ಸಾಹಿತ್ಯ ಸಂಸ್ಕೃತಿ , ಸಮಾಜ ಧರ್ಮ , ಕಲೆ , ವಿಜ್ಞಾನ , ಸಂಸ್ಕಾರ , ವಚನತತ್ವ ಚಿಂತನೆಗಳ ಮೇಲೆ ಬಸವಣ್ಣನವರಿಂದ ಆದಷ್ಟು ಪ್ರಭಾವ ಈ ಭರತ ಖಂಡದಲ್ಲಿ ಇನ್ನೊಬ್ಬರಿಂದಾಗಿಲ್ಲ ಎಂಬುದು ಅಷ್ಟೇ ಸತ್ಯ . ಬಸವಣ್ಣನವರ ಕುರಿತು ನಡೆದಷ್ಟು ಅಧ್ಯಯನಗಳು , ಪುಸ್ತಕ ಮುದ್ರಣಗಳು ಇನ್ನೊಬ್ಬರ ಬಗೆಗೆ ನಡೆದಿಲ್ಲ , ದೇಶ , ಕಾಲ ಮಿತಿಗಳನ್ನು ಮೀರಿ ಮುಂದುವರೆದಿರುವ ಬಸವಣ್ಣನವರ ವ್ಯಕ್ತಿತ್ವದ ವಿಶೇಷತೆ ಇದು . ಅಂತೆಯೇ ಯುಗ ಯುಗದ ಉತ್ಸಾಹ , ಯುಗಪುರುಷ ಬಸವಣ್ಣ ಎಂದು ಕರೆಯುತ್ತಾರೆ,ಇಂದಿಗೂ ಅವರ ವಚನಗಳನ್ನು ಓದುತ್ತಿದ್ದರೆ ನಮ್ಮ ಇವತ್ತಿನ ಸಂದರ್ಭವನ್ನೇ ಕುರಿತು ಬಸವಣ್ಣನವರು ತಮ್ಮ ವಚನಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಅನಿಸುತ್ತದೆ . ನಾವಿಂದು ಎದುರಿಸುತ್ತಿರುವ ಅನೇಕ ಸಮಸ್ಯೆ, ತವಕ ತಲ್ಲಣಗಳಿಗೆ ಮತ್ತು ನಮಗೆ ಕಾಡುತ್ತಿರುವ ಪ್ರಶ್ನೆಗಳಿಗೆ ಬಸವಣ್ಣನವರು ವಚನಗಳ ಮೂಲಕ ಉತ್ತರಿಸುತ್ತಿದ್ದಾರೆಂದು ಅನಿಸುತ್ತದೆ . ೧೨ನೇ ಶತಮಾನದ ಬಸವಣ್ಣನವರು ೨೧ ನೇ ಶತಮಾನಕ್ಕೆ ಸಲ್ಲುವ ಈ ಪರಿ ನಿಜಕ್ಕೂ , ಅದ್ಭುತವೆನಿಸುತ್ತದೆ .

ಜಗತ್ತಿನಲ್ಲಿಯೇ ಹಿಂದೆ ಎಂದೂ ಕಾಣದ , ಮುಂದೆ ಎಂದೂ ನಡೆಯದ ಲಕ್ಷದ ಮೇಲೆ ತೊಂಭತ್ತಾರು ಸಾವಿರ ಶರಣರು ಏಕಕಾಲದಲ್ಲಿ ವಚನಕ್ರಾಂತಿ , ಒಂದೇ ನೆಲದಲ್ಲಿ ಎಲ್ಲ ವರ್ಗದ , ಎಲ್ಲ ವರ್ಣದ , ಎಲ್ಲ ಕಾಯಕದ , ಗಂಡು – ಹೆಣ್ಣೆಂಬ ಭೇದವಿಲ್ಲದ , ಕನ್ನಡ ನಾಡಿನಲ್ಲಿ ಆಡುಭಾಷೆ , ಮಾತೃಭಾಷೆ , ಅಚ್ಚ ಕನ್ನಡ ಭಾಷೆಯಲ್ಲಿ ಲಿಂಗಾಯತ ಧರ್ಮಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ‘ ಸಾಮಾಜಿಕ – ಧಾರ್ಮಿಕ ಚಳವಳಿ ‘ ಯು ಮಹಾತ್ಮ ಗೌತಮ ಬುದ್ಧನ ನಂತರದ ಪರಿಣಾಮಕಾರಿ ಚಳವಳಿಯಂದು ಹೆಸರಾಗಿದೆ , ಈ ಕ್ರಾಂತಿ ಅಸಮಾನತೆಯ ಎಲ್ಲ ಬಿರುಕುಗಳನ್ನು ಮುಚ್ಚಿ , ಶೋಷಣೆಯ ಎಲ್ಲ ಬೇರುಗಳನ್ನು ಬೇರು ಸಹಿತ ಕಿತ್ತು ಚೆಲ್ಲಿ , ಅಲ್ಲಿ ಸಮಾನತೆಯ ಸಮ ಸಮಾಜ ನಲೆಗೊಳ್ಳುವಂತೆ ಮಾಡಿತು . – “ ಮರ್ತ್ಯಲೋಕದ ಮಹಾಮನೆ ಹಾಳಾಗಿ ( ಹೋಗಬಾರದೆಂದು ಕರ್ತನಟ್ಟಿದನಯ್ಯಾ ಒಬ್ಬ ಶರಣನ , ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವ ಮಾಡಿ , ಮರ್ತ್ಯಲೋಕ – ಶಿವಲೋಕವೆರಡಕ್ಕೆ ನಿಚ್ಚಣಿಕೆಯಾದನು ನಮ್ಮ ಗುಹೇಶ್ವರನ ಶರಣ ಸಂಗನ ಬಸವಣ್ಣ ” ಎಂದು ಅಲ್ಲಮಪ್ರಭುದೇವರು ಅಂದೇ ಹೇಳಿದ್ದಾರೆ . ಸ್ವಯಂಕೃತ ಗುರು ಬಸವಣ್ಣನವರು : ಅರಿವೇ ಗುರು , ಆಚಾರವೇ ಲಿಂಗ , ಅನುಭಾವವೇ ‘ ಜಂಗಮ ಎನ್ನುವಂತೆ ‘ ಬಿತ್ತಿದ ಬೀಜದ ಫಲವು ವಿಪರೀತ ಚಾರಿತ್ರ್ಯ ನೋಡಾ , ತನ್ನಲ್ಲಿ ತಾನೆಯಾಗಿ ಆಗಮವ ನೇರಿದಾತನೇ ಸ್ವ ಯಂಕೃತ ಸಹಜ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನು ‘ ಎಂದು ಚೆನ್ನಬಸವಣ್ಣನವರು ತಮ್ಮ ವಚನದಲ್ಲಿ ಸ್ವಯಂಕೃತ – ಗುರು ಬಸವಣ್ಣನವರು ಎಂದು ಹೇಳಿದ್ದಾರೆ . ‘ ಬಸವಣ್ಣನವರು ಆ ನಿರಾಕಾರ – ಚೈತನ್ಯ ಸ್ವರೂಪವಾದ ಕೂಡಲಸಂಗಮದೇವರನ್ನೇ ಜ್ಞಾನ , ಗುರುವನ್ನಾಗಿ ಮಾಡಿಕೊಂಡಿದ್ದಾರೆ . ಅಲ್ಲದೇ ತಮ್ಮ ವಚನದಲ್ಲಿ ಪ್ರಸ್ತುತಪಡಿಸಿರುವುದನ್ನು ನೋಡಬಹುದು . ಎನ್ನಗುರು ಪರಮಗುರು . ನೀವೆ ಕಂಡಯ್ಯಾ , ಎನ್ನ ಗತಿಮತಿ ನೀವೆ ಕಂಡಯ್ಯಾ , ಎನ್ನ ಅರಿವಿನ ಜ್ಯೋತಿ ನೀವೆ ಕಂಡಯ್ಯಾ , ಎನ್ನಂತರಂಗ ಬಹಿರಂಗದ ಮಹವು ನೀವೆ ಕಂಡಯ್ಯಾ , ಕೂಡಲಸಂಗಮದೇವಾ , ನೀವೆನಗೆ ಗುರು , ನಾ ನಿಮಗೆ ಶಿಷ್ಯನೆಂಬುದನು ನಿಮ್ಮ ಶರಣ ಸಿದ್ದರಾಮಯ್ಯದೇವರೆ ಬಲ್ಲರು ‘ ಎಂದು ಸ್ಪಷ್ಟವಾಗಿ ಬಸವಣ್ಣನವರು ತಮ್ಮ ಗುರು ಕೂಡಲಸಂಗಮದೇವರು ಎಂಬುದನ್ನು ತಿಳಿಸಿದ್ದಾರೆ .

ಬಸನಗೌಡ ಗೌಡರ
ಬಸವಧರ್ಮ ಪೀಠ ಕೂಡಲಸಂಗಮ

ಇಷ್ಟಲಿಂಗ ಜನಕ ಬಸವಣ್ಣನವರು : ಬಸವಣ್ಣನವರು ಕಪ್ಪಡಿಸಂಗಮದಲ್ಲಿದ್ದಾಗ ಹಲವಾರು ಧರ್ಮಗ್ರಂಥ , ವೇದಾಗಮ , ಶಾಸ್ತಪುರಾಣ ಗ್ರಂಥಗಳನ್ನು ಅಧ್ಯಯನ ಮಾಡಿ ಅದರಲ್ಲಿರುವ ನೂನ್ಯತೆಯನ್ನು ತಿಳಿದುಕೊಂಡು , “ ಜಗದಗಲ ಮುಗಿಲಗಲ ಮಿಗೆಯಗಲ – ನಿಮ್ಮಗಲ ” ಇರುವಂತಹ ಪರಮಾತ್ಮ ( ದೇವರು ) ನಿರಾಕಾರವಾಗಿದ್ದಾನೆಂದು ತಿಳಿದು ನಿಶ್ಚಯಿಸಿಕೊಂಡು ಜಗತ್ತು ಗೋಳಾಕಾರವಾಗಿದೆ . ಆ ಗೋಳಾಕಾರ ರೂಪದಲ್ಲಿ ಇಷ್ಟಲಿಂಗವನ್ನು ಕಂಡು ಹಿಡಿದು , ಅದನ್ನು ತಯಾರಿಸಿ ಮೊದಲು ತಾವು ಧರಿಸಿ ನಂತರ ಅಕ್ಕನಾಗಲಾಂಬಿಕೆಯವರಿಗೆ ಕೊಟ್ಟು ಮುಂದೆ ಇತರ ಶರಣರ ಬಳಗಕ್ಕೆ ದೀಕ್ಷೆಯ ಮೂಲಕ ನೀಡಿದರು . ಈ ಕಾರ್ಯ ಕಪ್ಪಡಿ ಸಂಗಮದಲ್ಲಿದ್ದಾಗ ೧೨ ವರ್ಷಗಳ ತಪಸ್ಸಿನ ( ಅಧ್ಯಯನ ) ಫಲವಾಗಿ ಸತತ ಪರಿಶ್ರಮ ಸಾದನೆಯಿಂದ ಸಾಧ್ಯವಾಗಿದೆ ಎಂದು ತಮ್ಮ ವಚನದಲ್ಲಿಯೆ ತಿಳಿಸಿದ್ದಾರೆ . ಎನ್ನ ಹೃದಯ ಸಿಂಹಾಸನದ ಮೇಲೆ ಮೂರ್ತಗೊಂಡಡೆ , ಎನ್ನ ಬಯಕೆ ಸಯವಾಯಿತ್ತು ಹಿಂದೆ ಹನ್ನೆರಡು ವರುಷದಲ್ಲಿದ್ದ ಚಿಂತೆಯಿಂದು ನಿಶ್ಚಿಂತೆಯಾಯಿತ್ತು , ಕೂಡಲಸಂಗಮದೇವರು ಕೃಪಾಮೂರ್ತಿಯಾದ ಕಾರಣ ನಾನು ಬದುಕಿದೆನು ‘ ಎಂದಿದ್ದಾರೆ . ಇನ್ನು ಬಸವಣ್ಣನವರ ಸಮಕಾಲಿನ ಶರಣರು ತಮ್ಮ ವಚನಗಳಲ್ಲಿ ‘ ಇಷ್ಟಲಿಂಗ ಜನಕ ‘ – ಬಸವಣ್ಣನವರೆಂಬುದನ್ನು ಸ್ಪಷ್ಟಪಡಿಸಿದ್ದಾರೆ .ಹರಿಬ್ರಹ್ಮಾದಿಗಳಿಗಗೊಚರವಾದ ಕೂಡಲಚೆನ್ನಸಂಗಯ್ಯನೆಂಬ ಲಿಂಗವ ತೋರಿದ ಬಸವಣ್ಣ ಗುರುವೇ ಶರಣು ಶರಣು ‘ , ಅಯ್ಯಾ ನಿಮ್ಮ ಶರಣ ಬಸವಣ್ಣನಿಂದ ಲಿಂಗವ ಕಂಡು ಒಳಗೆ ಬೈಚಿಟ್ಟುಕೊಂಡೆನಯ್ಯಾ ‘ , ‘ ಪ್ರಥಮಂತು ಬಸವಣ್ಣ ದ್ವಿತಿಯಂತು ಲಿಂಗವು ತೃತಿಯಂತು ತತ್ವಬ್ರಹ್ಮಾಂಡವೆಲ್ಲ ಅಕಳಂತ ಗುಣನಿಧಿ ಚಿದಾನಂದ ಬಸವಂಗೆ ಬಕುತನಾದನೈ ಯೋಗಿನಾಥ ‘ , ‘ ಆದಿ ಲಿಂಗ ಅನಾದಿ ಬಸವಣ್ಣನು . ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು ‘ , ‘ ಜಗತ್ ಸ್ವಯಂಭು ‘ ಎಂಬ ಗುಹೇಶ್ವರನ ಕರಸ್ಥಲದಲ್ಲಿ ಹಿಡಿದಾಡುತ್ತಿರ್ದಡೆ ಆದಿಲಿಂಗವೆಂದು ಬಗೆಯದು ಲೋಕವೆಲ್ಲ ಗುಹೇಶ್ವರಾ ನಿಮ್ಮ ಶರಣ ಬಸವಣ್ಣ , ಅಚ್ಚಲಿಂಗವ ಹಿಡಿದ ಕಾರಣ . ಬರಿಯ ಲಿಂಗದ ಮಸ್ತಕವಾಯಿತ್ತು ತ್ರಿಜಗದೊಳಗೆ!

ಲಿಂಗಾಯತ ಧರ್ಮ ಸಂಸ್ಥಾಪಕ ಬಸವಣ್ಣನವರು : ಭಾರತ ದೇಶದಲ್ಲಿ ಜೈನ , ಬೌದ್ಧ , ಸಿಖ್ಖ , ಧರ್ಮಗಳಂತೆಯೇ ‘ಲಿಂಗಾಯತ ಧರ್ಮ ‘ ವೂ ಸ್ವತಂತ್ರವಾದ ಧರ್ಮವಾಗಿದೆ . ವೈದಿಕ ಧರ್ಮದ ಅಸಮಾನತೆಯ ನೆಲೆಗಳನ್ನು ವಿರೋಧಿಸಿ ಈ ಧರ್ಮ ಹನ್ನೆರಡನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು , ಶರಣ ಚಳುವಳಿಯ ನಾಯಕ ಬಸವಣ್ಣನವರೇ ಈ ಧರ್ಮದ ಸಂಸ್ಥಾಪಕರು . ಬಸವಣ್ಣನವರು ಹೇಳುವಂತೆ ‘ ದಯವೇ ಧರ್ಮದ ಮೂಲವಯ್ಯಾ ‘ , ಸಕಲ ಜೀವಾತ್ಮರಿಗೆ ಲೇಸನೇ ಬಯಸುವುದೇ ಈ ಧರ್ಮದ ನಿಲುವಾಗಿದೆ . ಅಷ್ಟಾವರಣ ಪಂಚಆಚಾರ , ಷಟ್‌ಸ್ಥಲ ಸಾಧನ ಕಾಯಕ ದಾಸೋಹ , ಶಿವಯೋಗ ತತ್ವಗಳ ಆಚರಣೆ ಮೂಲಕ ವ್ಯಕ್ತಿ ಕಲ್ಯಾಣದ ಜೊತೆಗೆ ಸಮಾಜ ಕಲ್ಯಾಣವನ್ನು ಬಯಸುವುದೇ ಲಿಂಗಾಯತ ಧರ್ಮದ ಗುರಿಯಾಗಿದೆ . ವೈದಿಕ ಧರ್ಮದ ಕಂದಾಚಾರಗಳನ್ನು ವಿರೋಧಿಸಿ ಬಂದಂತಹ ಲಿಂಗಾಯತ ಧರ್ಮಕ್ಕೆ ತನ್ನದೇಯಾದ ಸಂಸ್ಕಾರ , ಸಂವಿಧಾನ , ಆಚಾರ ಸಂಹಿತೆಗಳು ಇರುತ್ತವೆ. ವರ್ಗ , ವರ್ಣ , ಲಿಂಗ , ಭೇದವಿಲ್ಲದ ಸರ್ವಸಮಾನತೆಯನ್ನು ಸಾರುವ ಏಕೈಕ ಧರ್ಮ ಲಿಂಗಾಯತ ಧರ್ಮ , ಈ ಧರ್ಮದ ಸ್ಥಾಪಕರೇ ಬಸವಣ್ಣನವರು .

ಅನುಭವ ಮಂಟಪ , ೭೭೦ಅಮರಗಣಂಗಳ ಮಾಡಿದಾತ ಬಸವಣ್ಣನವರು ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ ( ಸಂಸತ್ ) ಎಂದು ಕರೆಯಲ್ಪಡುತ್ತಿರುವ ಅನುಭವ ಮಂಟಪ ೧೨ನೇ ಶತಮಾನದಲ್ಲಿ ಧರ್ಮಗುರು ಬಸವಣ್ಣನವರು ಸ್ಥಾಪಿಸಿದರು . ಈ ಅನುಭವ ಮಂಟಪದಲ್ಲಿ ಎಲ್ಲ ಕಾಯಕದ , ಎಲ್ಲ ಜನಾಂಗದ , ಶರಣ ಶರಣೆಯರು ಸದಸ್ಯರಾದರು . ನಿತ್ಯ ಶರಣರು ತಮ್ಮ ಅನುಭಾವದ ವಚನಗಳನ್ನು ರಚಿಸಿ , ಇಲ್ಲಿ ಚರ್ಚಿಸಿ ವಚನ ಭಂಡಾರಕ್ಕೆ ಒಪ್ಪಿಸುತ್ತಿದ್ದರು ಈ ಅನುಭವ ಮಂಟಪದಲ್ಲಿಯೇ ಶೂನ್ಯಪೀಠ ಸ್ಥಾಪಿಸಲ್ಪಟ್ಟು , ಅದರ ಪ್ರಥಮಾಧ್ಯಕ್ಷರನ್ನಾಗಿ ವ್ಯೋಮಕಾಯ ಜಂಗಮ ಮೂರ್ತಿ ಅಲ್ಲಮ ಪ್ರಭುದೇವರನ್ನು ನೇಮಿಸಿದ್ದರು . ಇವರ ಮಾರ್ಗದರ್ಶನದಂತೆ ಬಸವಣ್ಣವರು ಮೊದಲುಗೊಂಡು ಎಲ್ಲ ಶರಣ ಬಂಧುಗಳು ನಡೆದುಕೊಳ್ಳುತ್ತಿದ್ದರು . ಇವರಲ್ಲಿ ೭೭೦ ಅಮರಗಣಂಗಳು , ಉಳಿದ ಶರಣ – ಶರಣೆಯರು ಬಂದು ಚಿಂತನೆಯಲ್ಲಿ – ಪಾಲ್ಗೊಳ್ಳುತ್ತಿದ್ದರು . ಅನುಭವ ಮಂಟಪವನ್ನು ಮಾಡಿ ಅನುಭವ ಮೂರ್ತಿಯಾದ ನಮ್ಮ ಬಸವಯ್ಯನು , ಏಳುನೂರಪ್ಪತ್ತು
ಅಮರಗಣಂಗಳ ಅನುಭವಮೂರ್ತಿ ಮಾಡಿದಾತ
ನಮ್ಮ ಬಸವಯ್ಯನು ‘ ಎಂದು ತಾಯಿ ನೀಲಾಂಬಿಕೆ ಯವರು ತಮ್ಮ ವಚನದಲ್ಲಿ ಉಲ್ಲೇಖಿಸಿದ್ದಾರೆ . ಇಂತಹ
“ ಮಹಾಮಹಿಮ ಸಂಗನಬಸವಣ್ಣ ಎನಗೆಯೂ ಗುರು , ನಿಮಗೆಯೂ ಗುರು , ಜಗವೆಲ್ಲಕ್ಕೂ ಗುರು ಕಾಣಾ ಗುಹೇಶ್ವರ ” ಎಂದು ಪ್ರಭುದೇವರು ಹೇಳಿದ್ದಾರೆ .
ಗುರು ಬಸವಣ್ಣನವರು ಕ್ರಿ . ಶ . ೧೧೦೫ ರಲ್ಲಿ ಈಗಿನ ವಿಜಯಪುರ ಜಿಲ್ಲೆಯ ಬಾಗೇವಾಡಿ ಮಂಡಿಗೆಯ ಮಾದರಸನ ಸತಿ ಮಾದಲಾಂಬಿಕೆಯರ ಉದರದಲ್ಲಿ ಜನ್ಮತಾಳಿ ಬಾಗೇವಾಡಿಯಿಂದ – ಕಪ್ಪಡಿಸಂಗಮಕ್ಕೆ ನಂತರ ಮಂಗಳವೆಡೆಗೆ – ಇಲ್ಲಿಂದ ಕಲ್ಯಾಣಕ್ಕೆ ಬಂದು ೬೨ ವರ್ಷಗಳ ಕಾಲ ಬಾಳಿ ನಮ್ಮ ನಿಮ್ಮೆಲ್ಲರಿಗೂ ಬೆಳಕಾಗಿದ್ದಾರೆ . ಈ ಮಹಾತ್ಮರ ಕರುಣೆ ನಮ್ಮ ನಿಮ್ಮೆಲ್ಲರಿಗೆ ದೊರೆಯಲೆಂದು ಪ್ರಾರ್ಥಿಸುವೆ . ಬಸವ ಗುರುವಿನ ಪಾದಕ್ಕೆ ಶರಣು ಶರಣಾರ್ಥಿಗಳು .
ಶರಣ: ಪ್ರಕಾಶ ಅಸುಂಡಿ ಕಾರ್ಯಾಧ್ಯಕ್ಷರು , ಬಸವದಳ , ಗದಗ – ಬೆಟಗೇರಿ ,
ಮೊ : ೯೩೪೨೯೩೯೦೮

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!