Breaking News
Home / featured / ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ?

ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ?

ಇದು ಶಾಮನೂರು ಶಿವಶಂಕರಪ್ಪ ಬಸವ ಜಯ೦ತಿ ಆಚರಿಸಿದ ಪರಿ. ಉದ್ದೇಶ ಪೂವ೯ಕ ಈ ರೀತಿ ಮಾಡುತ್ತಿದ್ದಾರೆ.

ಹುಟ್ಟದ ಬೀಜವಿರ್ದಡೇನಯ್ಯಾ ಧರೆಯೊಳಗೆ ?
ಅಟ್ಟುಣ್ಣಬಾರದ ಮಡಕೆ ಇರ್ದಡೇನಯ್ಯಾ ಮನೆಯೊಳಗೆ ?
ಶಿವ ನಿಮ್ಮ ಮುಟ್ಟದ ಮನವಿರ್ದಡೇನಯ್ಯಾ
ತನುವಿನೊಳಗೆ ?
ಕೆಚ್ಚಲ ಕಚ್ಚಿದ ಉಣ್ಣೆ ಬಲ್ಲುದೆ ಕ್ಷೀರದ ರುಚಿಯ ?
ಬಚ್ಚಲೊಳಗಣ ಬಾಲ್ಪುಳು ಬಲ್ಲುದೆ ನಿಚ್ಚಳದ ನೀರ ಸುಖವ ?
ನಿಚ್ಚ ನಿಚ್ಚಲೋದುಗ ಗೀಳಿ ಬಲ್ಲುದೆ ತನಗೆ ಬಹ ಬೆಕ್ಕಿನ ಬಾಧೆಯ ? ಇದು ಕಾರಣ, ಒಡಲ ಪಡೆದಡೇನು?
ಮಡಿದಯ ನೆರಹಿದಡೇನು ? ಒಡವೆಯ ಗಳಿಸಿದಡೇನು?
ಶಿವನೆ ನಿಮ್ಮನರಿಯದ ಮನುಜನ ಒಡಲೆಂಬುದು
ಹೊಲೆ ಜೋಗಿಯ ಕೈಯ ಒಡೆದ ಸೋರೆಯಂತೆ
ಕಾಣಾ , ಕಲಿದೇವಯ್ಯಾ

ಬಸವ ಜಯಂತಿಯ ನಿಮಿತ್ತ ಮಡಿವಾಳ ಮಾಚಿದೇವರ ಈ ಮೇಲಿನ ವಚನ ಓದುತ್ತಾ ಕುಳಿತಿದ್ದೆ. ನನ್ನ ಮಗ ಅಲ್ಲಮ ಓಡೋಡಿ ಬಂದು ಸೋಸಿಯಲ್ ಮೀಡಿಯಾದಲ್ಲಿ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪನವರು ಬಸವ ಜಯಂತಿಯನ್ನು ಎತ್ತುಗಳ ಪೂಜೆಯನ್ನು ಮಾಡುವ ಮೂಲಕ ಆಚರಿಸಿದ ಪೋಟೋಗಳನ್ನು ತೋರಿಸಿದ. ಇದರಿಂದ ನನಗೇನೂ ಆಶ್ಚರ್ಯವಾಗಲಿಲ್ಲ. ಏಕೆಂದರೆ ನಾನು ಹಾಗೂ ನೀವೆಲ್ಲ ಬಲ್ಲಂತೆ ಶಾಮನೂರು ಶಿವಶಂಕರಪ್ಪ ಎಂಬ ಹಳೆ ತಲೆಮಾರಿನ ಮನುಷ್ಯನೊಳಗೆ ಮಿದುಳು ಇಲ್ಲವೆ ಇಲ್ಲವೆಂದು ಎಲ್ಲರಿಗೂ ಖಾತ್ರಿಯಾಗಿ ಹೋಗಿದೆ. ಅಧಿಕಾರದ ದಾಹಕ್ಕಾಗಿ , ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಏನೆಲ್ಲವನ್ನೂ ಅಡವಿಡಲು ಸಿದ್ದ ಎಂಬುದನ್ನು ಹಲವಾರು ಪ್ರಸಂಗಗಳಲ್ಲಿ ತೋರಿಸಿಕೊಟ್ಟಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿ ಹುಟ್ಟಿ ಅಭೂತಪೂರ್ವ ಕ್ರಾಂತಿಯನ್ನುಂಟು ಮಾಡಿದ, ಯುಗ ಯುಗಗಳ ಉತ್ಸಾಹ ಬಸವಣ್ಣನವರ ಕುರಿತು ಇಂದು ಇಡೀ ಜಗತ್ತು ಹಾಡಿ ಹೊಗಳುತ್ತಿದೆ. ಬಸವಣ್ಣನಂಥÀ ಕರ್ತೃತ್ವ ಶಕ್ತಿ , ಜಗತ್ತಿನ ಬೆಳಕು. ಬೆಳಕಿನ ಈ ಪಂಜನ್ನು ಸಾಧ್ಯವಾದಷ್ಟು ಆರಿಸಿಯೇ ತೀರಬೇಕು ಎಂದು ಪಟ್ಟಭದ್ರರು ಹನ್ನೆರಡನೆಯ ಶತಮಾನದಿಂದ ಇಂದಿನ ವರೆಗೂ ನಿರಂತರವಾಗಿ ತಮ್ಮ ಕಾರ್ಯವನ್ನು ವ್ಯವಸ್ಥಿತವಾಗಿ ಮುಂದುವರೆಸಿದ್ದಾರೆ. ಆಗಾಗ ಶಾಮನೂರು ಶಿವಶಂಕರಪ್ಪ ಎಂಬ ಅರೆಬೆಂದ, ಹುಟ್ಟದ ಬೀಜಗಳನ್ನು ಆಗಾಗ ಬಳಸಿಕೊಳ್ಳುತ್ತಿರುತ್ತಾರೆ.

ಮಡಿವಾಳ ಮಾಚಿದೇವರು ಹೇಳುವಂತೆ ಅಟ್ಟಣ್ಣಲು ಯೋಗ್ಯವಲ್ಲದ ಮಡಕೆ ಎಲ್ಲಿದ್ದರೇನು ? ಕೆಲಸಕ್ಕೆ ಬರುವುದಿಲ್ಲ. ಮೊಳಕೆ ಒಡೆಯುವ ಶಕ್ತಿ ಇಲ್ಲದ ಬೀಜ ಯಾವ ಮಣ್ಣಲ್ಲಿ ಹಾಕಿದರೂ ಅಷ್ಟೆ, ನಿರೂಪಯೋಗಿ. ನಿತ್ಯವು ಉಣ್ಣೆ ಹಾಲಿನ ಕೆಚ್ಚಲಿನಲ್ಲಿಯೆ ಇರುತ್ತದೆ. ಆದರೆ ಅದು ಹಾಲನ್ನು ಕುಡಿಯುವುದಿಲ್ಲ. ಕೆಚ್ಚಲಿನೊಳಗಿನ ರಕ್ತ ಮಾತ್ರ ಕುಡಿಯುತ್ತಿರುತ್ತದೆ. ಬಚ್ಚಲೊಳಗೆ ಬಾಲುಳಗಳು ಎಂದಿಗೂ ಪರಿಶುಭ್ರವಾದ ನೀರಿನಲ್ಲಿ ಓಲಾಡಿ, ಈಜಾಡಿ, ಸುಖ ಸಂತೋಷವನ್ನು ಅನುಭವಿಸಿ ಅವಕ್ಕೆ ಗೊತ್ತಿಲ್ಲ. ಗೊಜ್ಜು ನೀರಿನಲ್ಲಿಯೆ ಅವುಗಳ ಹುಟ್ಟು ಮತ್ತು ಸಾವು. ಹುಚ್ಚು ಹಿಡಿಸಿಕೊಂಡ ನಾಯಿ ತನ್ನ ಒಡೆಯನನ್ನು ಎಂದೂ ಗುರುತಿಸದು. ಎಲ್ಲರ ಭವಿಷ್ಯವನ್ನು ಹೇಳುವ ಗಿಳಿ ತನ್ನನ್ನು ಬೆಕ್ಕು ಯಾವಾಗ ನುಂಗಿ ಹಾಕುತ್ತದೆ ? ಎಂಬ ವಸ್ತು ಜ್ಞಾನ ಅದಕ್ಕೆ ಇರುವುದಿಲ್ಲ. ಅದರಂತೆ ದೇಹವಿದೆ, ಹೆಂಡತಿ ಇದ್ದಾಳೆ, ಮಕ್ಕಳು ಮರಿಗಳು ಇವೆ. ಒಡವೆ ಕಾರು ಬಂಗಲೆ ಅಂತಸ್ತು ಅಧಿಕಾರ ಮುಂತಾವುಗಳೂ ಇರಬಹುದು. ಆದರೆ ಸತ್ಯವನ್ನು ಅರಿಯುವ ಮನಸ್ಸು ಇಲ್ಲದೆ ಹೋದರೆ ಅದು ವ್ಯರ್ಥ.

ಶಾಮನೂರು ಶಿವಶಂಕರಪ್ಪನವರನ್ನು ವೀರಶೈವ ಮಹಾಸಭೆಯ ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನೆಂದೇನೂ ಕರ್ನಾಟಕದ ವೀರಶೈವರು ಆ ಸ್ಥಾನಕ್ಕೆ ಕೂಡಿಸಿಲ್ಲ. ಅಧಿಕಾರ ಇದೆ. ಅಂತಸ್ತು ಇದೆ. ದುಡ್ಡೂ ಇದೆ. ಯಾವತ್ತಾದರೂ ನಮಗೆ ಕೆಲಸಕ್ಕೆ ಬೀಳಬಹುದು ಎಂಬ ದುರಾಸೆಯಿಂದ ಕೂಡಿಸಿದ್ದಾರೆ. ಆ ದುರಾಸೆಯ ದುಷ್ಟತನಕ್ಕೆ ಇಡೀ ಸಮಾಜ ಇಂದು ತಲೆ ತಗ್ಗಿಸುವಂತೆ ಆಗಿದೆ.

ಒಂದು ಶತಮಾನಗಳ ಹಿಂದೆ ಇದೆ ದಾವಣಗೆರೆಯಿಂದ ಹರ್ಡೇಕರ್ ಮಂಜಪ್ಪನವರು ಹಾಗೂ ಪೂಜ್ಯ ಶ್ರೀ ಮೃತ್ಯುಂಜಯ ಅಪ್ಪಗಳು ಬಸವ ಜಯಂತಿಯನ್ನು ಆರಂಭಿಸಿದರು. ಇದಕ್ಕಿಂತ ಮುಂಚೆ ಎಲ್ಲರೂ ಎತ್ತುಗಳನ್ನೆ ಬಸವ ಎಂದು ನಂಬಿ ಪೂಜಿಸುತ್ತಿದ್ದುದು ಸುಳ್ಳಲ್ಲ. ಲಿಂಗಾಯತರಲ್ಲಿ ಹೆಚ್ಚಾನೆಚ್ಚು ಜನ ರೈತರು. ಅವರ ಜೀವನ ಆರಂಭ ಆಗುವುದೆ ಎತ್ತುಗಳಿಗೆ ಮೇವು ಹಾಕುವ ಮೂಲಕ. ಇದು ಸತ್ಯ. ಎತ್ತು ಕೂಡ ಸಾಧು ಪ್ರಾಣಿಯಾಗಿದ್ದರಿಂದ ( ಪುರೋಹಿತರ ಕುತಂತ್ರ ಅರಿಯದ ಮುಗ್ಧ ಮನಸ್ಸುಗಳು ) ಎತ್ತನ್ನೆ ಬಸವಣ್ಣನೆಂದು ನಂಬಿ ಪೂಜಿಸುತ್ತ ಬಂದಿದ್ದವು.

M.B.Patil

ಹರ್ಡೇಕರ ಮಂಜಪ್ಪ ಹಾಗೂ ಮೃತ್ಯುಂಜಯ ಅಪ್ಪಗಳ ಪ್ರಜ್ಞಾ ಪೂರ್ವಕ ನಡೆಯಿಂದ ಬಸವಣ್ಣನವರ ಭವ್ಯವಾದ- ದಿವ್ಯವಾದ ವ್ಯಕ್ತಿತ್ವ ಪರಿಚಯವಾಯಿತು. ಜನ ಮಾನಸಕ್ಕೂ ಇದು ತಲುಪಿತು. ಈಗ ಎಲ್ಲಿ ನೋಡಿದಡಲ್ಲಿ ಬಸವನ ಆಚಾರ ವಿಚಾರ ನಡತೆ ವಚನಗಳದೇ ಝೇಂಕಾರ. ದೇಶ ವಿದೇಶದಲ್ಲೂ ಅಪ್ಪ ಬಸವಣ್ಣನವರದೆ ಸುದ್ದಿ.

ಹಿಂದೊಂದು ಸಂದರ್ಭವಿತ್ತು. ಹಿರಿಯರು ಏನು ಮಾಡಿದರೂ ಅದನ್ನು ಸಹಿಸಿಕೊಳ್ಳುವ ದಡ್ಡತನವಿತ್ತು. ಆದರೆ ಇಂದು ಲಿಂಗಾಯತ ಸಮುದಾಯ ಪ್ರಜ್ಞೆಯತ್ತ ಹೆಜ್ಜೆ ಇಟ್ಟಿದೆ. ಅವರಿಗೆ ಬಸವಣ್ಣನವರ ಬಗೆಗೆ ಗೊತ್ತು, ಈ ಗುರು – ಜಗದ್ಗುರು ಎಂಬ ಸೋಗಲಾಡಿಗಳ ಕುರಿತು ಗೊತ್ತು. ಅಂದಂತೆ ಈ ಶಾಮನೂರರ ಬಗೆಗೆ ಗೊತ್ತಿರಲಾರದೆ ಇದ್ದೀತೆ ? ಮನೆಗೆ ಬಂದ ಅತಿಥಿಯನ್ನು ಹೇಗೆ ಸ್ವಾಗತ ಮಾಡಬೇಕು ಎಂಬ ಸಾಮಾನ್ಯ ಜ್ಞಾನವನ್ನು ತನ್ನ ಮಗನಿಗೆ ಕಲಿಸಿಲ್ಲ ಎಂಬುದು ಇಡೀ ನಾಡು ಕಂಡ ಸತ್ಯವಾಗಿದೆ.

ಆದರೆ ಮುದ್ದಾಂ ಆಗಿ ಬಸವ ಜಯಂತಿಯನ್ನು ಎತ್ತುಗಳಿಗೆ ಪೂಜೆ ಮಾಡುವ ಮೂಲಕ ಆಚರಿಸಿದ ಮನುಷ್ಯ ಎಷ್ಟು ಉದ್ದಟರಿದ್ದಾರೆ ಎಂಬುದು ಯಾರಿಗಾದರೂ ಮನದಟ್ಟಾಗುವ ಮಾತು ಆಗುತ್ತದೆ. ಶಾಮನೂರು ಶಿವಶಂಕರಪ್ಪ ಅವರ ಗುರುಗಳಾದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರೆ ಹಿಂದೊಂದು ಪ್ರಸಂಗದಲ್ಲಿ ಯಾರು ಮಾನ್ಯತೆ ಕೊಡಲಿ ಬಿಡಲಿ, ಲಿಂಗಾಯತ ಧರ್ಮವೆಂಬುದು ಇದ್ದೇ ಇದೆ. ಅದಕ್ಕೆ ಬಸವಣ್ಣನವರೆ ಮೂಲ ಕಾರಣಿಕರ್ತರು ಎಂಬ ಮಾತನ್ನು ಯಾರನ್ನೋ ಸಂಪ್ರೀತಗೊಳಿಸಲು ಹೇಳಿಲ್ಲ. ಸತ್ಯವನ್ನೇ ಅವರು ಹೇಳಿದ್ದಾರೆ. ಅಲ್ಲದೆ ಹಿಂದಿನ ಗುರುಗಳಾದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಬರೆದ ಒಂದು ವಚನವೇ ಬಸವಣ್ಣನವರು ಯಾರು ? ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಅದನ್ನಾದರೂ ಶಿವಶಂಕರಪ್ಪನವರು ಓದಬೇಕು.

ಹಿಂದೆ ರಾಜ್ಯದ ಗೃಹ ಸಚಿವನಾಗಿದ್ದ ಎಂ.ಬಿ.ಪಾಟೀಲರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿ ಯಾವ ರೀತಿ ತಂದೆ ಮಕ್ಕಳು ನಾಟಕವಾಡಿದರು ? ಎಂಬ ಸಂಗತಿ ಗೊತ್ತಿದೆ. ದುಡ್ಡಿಗಾಗಿ, ಅಧಿಕಾರಕ್ಕಾಗಿ ಸಮಾಜವನ್ನು ಒತ್ತೆ ಇಟ್ಟು ಏನು ಬೇಕಾದರೂ ಮಾಡಬಲ್ಲರು ಎಂಬುದಕ್ಕೆ ನಿನ್ನೆಯ ಘಟನೆಯೆ ಸಾಕ್ಷಿಯಾಗಿದೆ. ಈ ಮನುಷ್ಯ ಹಿಂದೊಮ್ಮೆ ಕೇಂದ್ರ ಸರಕಾರಕ್ಕೆ ವೀರಶೈವ/ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಿರಿ ಎಂದು ಆಗ್ರಹಿಸಿ ಪತ್ರ ಬರೆದುದು ಉಂಟು ! ಲಿಂಗಾಯತವೆಂದರೆ ಬರೀ ದುಡ್ಡು ಕಾಸು ಅಧಿಕಾರ ಅಂತಸ್ತು ಮೋಸ ತಟವಟ ಅಲ್ಲ. ಅದೊಂದು ಸಿದ್ಧಾಂತ. ಮನುಕುಲದ ಮಹತ್ವವನ್ನು ಜಗತ್ತಿಗೆ ಅರುಹಿಸಿದ ಕನ್ನಡಿಗರ ಸಾಂಸ್ಕøತಿಕ ಪರಂಪರೆ.

ಬಸವಣ್ಣನವರೆಂದರೆ ಏನೂ ಅರಿಯದ ಇಂಥ ಗೊಡ್ಡುಗಳು ವೀರಶೈವ ಮಹಾಸಭೆಗೆ ಭೂಷಣವಲ್ಲ. ವೀರಶೈವ ಮಹಾಸಭೆಯ ಬೈಲಾದಲ್ಲಿ ಇಂದಿಗೂ ಧರ್ಮ ಗುರು ಬಸವಣ್ಣ ಎಂದಿದೆ. ತಮ್ಮ ಬೈಲಾವನ್ನು ಸರಿಯಾಗಿ ಗ್ರಹಿಸದ ವಿವೇಕರಹಿತ ವ್ಯಕ್ತಿ ಆ ಮಹಾಸಭೆಗೆ ಅಧ್ಯಕ್ಷ. ಇಂಥ ಪುಣ್ಯಾತ್ಮರ ಕೈಯಲ್ಲಿ ಅಖಿಲ ಭಾರತ ವೀರಶೈವ/ಲಿಂಗಾಯತ ಮಹಾಸಭೆ ! ?

ವಿವೇಕ ಶೂನ್ಯ ನಡಾವಳಿಕೆಯ, ಸ್ವಾರ್ಥಕ್ಕಾಗಿ ತನ್ನ ಸಮಾಜವನ್ನು ಬಲಿಕೊಡಲು ಹೊರಟಿರುವ ಇಂಥ ಉಸರವಳ್ಳಿಯನ್ನು ಜನತೆ ಸಹಿಸಲಾರದು. ಇಳಿ ವಯಸ್ಸಿನಲ್ಲಿಯಾದರೂ ಸದ್ಭುದ್ಧಿ ಪಡೆದುಕೊಂಡು ವರ್ತಿಸಿದರೆ ಚೆನ್ನಾಗಿರುತ್ತದೆ. ಇಲ್ಲದೆ ಹೋದರೆ ಪ್ರಜ್ಞಾವಂತ ಲಿಂಗಾಯತ ಯುವ ಸಮೂಹ ಶಾಮನೂರರನ್ನು ಕಂಡ ಕಂಡಲ್ಲಿ ತರುಬಿ ಮರ್ಯಾದೆ ತೆಗೆಯುವುದರಲ್ಲಿ ಯಾವುದೆ ಅನುಮಾನವಿಲ್ಲ.

ಶರಣ: ವಿಶ್ವಾರಾಧ್ಯ ಸತ್ಯಂಪೇಟೆ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!