Breaking News
Home / featured / ಬಸವ ಜಯಂತಿಯಂದು ದನಗಳ ಪೂಜಿಸಿದ ವೀರಶೈವ ಮಹಾಸಭೆಯ ನಡೆ ಖಂಡನೀಯ

ಬಸವ ಜಯಂತಿಯಂದು ದನಗಳ ಪೂಜಿಸಿದ ವೀರಶೈವ ಮಹಾಸಭೆಯ ನಡೆ ಖಂಡನೀಯ

ಬೆಂಗಳೂರು: ಬಸವ ಜಯಂತಿಯ ಅಂಗವಾಗಿ ವೀರಶೈವ ಮಹಾಸಭೆಯ ಅದ್ಯಕ್ಷರಾದ ಶ್ರೀಯುತ ಶಾಮನೂರು ಶಿವಶಂಕರಪ್ಪನವರು ಎತ್ತುಗಳ ಪೂಜೆ ಮಾಡಿ ಬಸವಣ್ಣನವರನ್ನು ದನಗಳಿಗೆ ಹೋಲಿಸಿದ್ದು ಖಂಡಿಸಿ ಏಪ್ರಿಲ್ 29 ರಂದು ಪತ್ರಿಕೆಗಳಲ್ಲಿ ಬಂದ ಜಾಗತಿಕ ಲಿಂಗಾಯತ ಮಹಾಸಭೆಯ ಹೇಳಿಕೆಗೆ ವೀರಶೈವ ಮಹಾಸಭೆ ಪ್ರತಿಕ್ರೀಯೆ ನೀಡಿದೆ. ವೀರಶೈವ ಮಹಾಸಭೆಯ ಈ ಪ್ರತಿಕ್ರೀಯೆಯು ಈ ಕೆಳಗಿನಂತೆ ಅನೇಕ ದ್ವಂದ್ವ ಮತ್ತು ತಿರುಚುವಿಕೆಯನ್ನೊಳಗೊಂಡಿದೆ :

1. ಶ್ರೀಯುತ ಶಿವಶಂಕರಪ್ಪನವರ ಕ್ರತ್ಯವನ್ನು ಖಂಡಿಸಿದ ನಾವು ಬಸವಣ್ಣನವರ ತತ್ವ ಪರಿಪಾಲಕರು ಎನ್ನಲು ಹೆಮ್ಮೆ ಎನ್ನಿಸುತ್ತದೆ. ವೀರಶೈವ ಮಹಾಸಭೆಯವರ ಹೇಳಿಕೆಯಂತೆ ಶಿವಶಂಕರಪ್ಪನವರೂ ಸಹ ಬಸವತತ್ವದ ಪರಿಪಾಲಕರು ಎನ್ನುವ ಸಂಗತಿ ನಮಗೆ ಸಂತಸ ತರುತ್ತದೆ. ಬಸವತತ್ವ ಪರಿಪಾಲಕ ಎಂದರೆ ಅರಿವುಗೊಂಡವ ಎಂದರ್ಥ. ಆತ ಎಂದೂ ಅಜ್ಞಾನಿಯಂತೆ ವರ್ತಿಸಲಾರ. ಆದರೆ ಬಸವ ತತ್ವ ಪರಿಪಾಲಕರಾದ ಶಿವಶಂಕರಪ್ಪನವರು ಬಸವ ಜಯಂತಿಯಂದು ಎತ್ತುಗಳ ಪೂಜೆ ಮಾಡಿದ್ದು ಆಶ್ಚರ್ಯದ ಸಂಗತಿಯಾಗಿದೆ.

2. ವೀರಶೈವ ಮಹಾ ಸಭೆ ಅಭಿಪ್ರಾಯ ಪಟ್ಟಂತೆ ಎತ್ತುಗಳು ಶ್ರಮ ಸಂಸ್ಕ್ರತಿಯ ಸಂಕೇತ ಮತ್ತು ಅನ್ನಬ್ರಹ್ಮನ ಉತ್ಪತ್ತಿಗೆ ಕಾರಣ ಎನ್ನುವುದು ನಾವೂ ಒಪ್ಪಿಕೊಂಡು ಗೌರವಿಸುತ್ತ ಆ ಶ್ರಮ ಸಂಸ್ಕ್ರತಿಯ ಎತ್ತುಗಳನ್ನು ಗೌರವಿಸಲೆಂದೆ ನಮ್ಮ ಹಿರಿಯರು ಗುರುತಿಸಿದ ಕಾರಹುಣ್ಣಿವೆˌ ಮಣ್ಣೆತ್ತಿನ ಅಮವಾಸೆ ಮತ್ತು ಸಂಕ್ರಾಂತಿ ಹಬ್ಬಗಳಿದ್ದಾಗ್ಯೂ ಬಸವ ಜಯಂತಿಯ ದಿನವೇ ಎತ್ತುಗಳು ಪೂಜಿಸುವ ಕ್ರತ್ಯವು ಪೂರ್ವನಿಯೋಜಿತವು ಮತ್ತು ದುರುದ್ದೇಶಪೂರಕವೂ ಆಗಿತ್ತು ಎಂದು ಹೇಳಬಯಸುತ್ತೇವೆ.

3. ವೀರಶೈವ ಮಹಾಸಭೆಯೇ ಹೇಳಿದಂತೆ ಬಸವ ಜಯಂತಿಯ ದಿನ ನಮ್ಮ ಹಿರಿಯರು ಯಾರದೊ ಹುನ್ನಾರಕ್ಕೆ ಬಲಿಯಾಗಿ ಆಚರಿಸಿಕೊಂಡು ಬರುತ್ತಿದ್ದ ದನಗಳ ಪೂಜಾ ಪದ್ದತಿಯನ್ನು ನಿಲ್ಲಿಸಿ ಶಿವಶಂಕರಪ್ಪನವರ ಊರಾದ ದಾವಣಗೆರೆಯಲ್ಲಿ 107 ವರ್ಷಗಳ ಹಿಂದೆ ಶರಣ ಹರ್ಡೇಕರ್ ಮಂಜಪ್ಪನವರು ಮತ್ತು ಪೂಜ್ಯ ಮ್ರತ್ಯುಂಜಯಪ್ಪಗಳು ಬಸವ ತತ್ವ ಪ್ರಚಾರದ ಉದ್ದೇಶದಿಂದ ಬಸವ ಜಯಂತಿ ಪ್ರಥಮವಾಗಿ ವೈಚಾರಿಕವಾಗಿ ಆಚರಿಸಲು ಆರಂಭಿಸಿದರು. ಆದರೆ ಶಿವಶಂಕರಪ್ಪನವರು ನಮ್ಮ ಹಿರಿಯರು ಹಾಕಿದ ಸಂಪ್ರದಾಯವನ್ನು ದಿಕ್ಕರಿಸಿ ಮತ್ತದೆ ಹಳೆಯ ಹುನ್ನಾರಕ್ಕೆ ಬಲಿಯಾಗಿ ಬಸವ ಜಯಂತಿಯ ದಿನದಂದು ದನಗಳನ್ನು ಪೂಜಿಸಿ ಮೌಢ್ಯ ಮೆರೆದದ್ದು ವಿಪರ್ಯಾಸದ ಸಂಗತಿಯಾಗಿದೆ.

4. ಒಬ್ಬೊಬ್ಬರ ವಿಚಾರಗಳು ಭಿನ್ನವಾಗಿರುತ್ತವೆ ಮತ್ತು ಬೇರೆಯವರಿಗೆ ಕೇಡು ಮಾಡದಂತೆ ವೈಯಕ್ತಿಕವಾಗಿ ಅವರವರಿಗೆ ಅವರ ಮನಸ್ಸಿಗೆ ಬಂದಂತೆ ಮಾಡಲು ಸ್ವಾತಂತ್ರ್ಯವಿದೆ ಎನ್ನುವ ವೀರಶೈವ ಮಹಾಸಭೆಯ ಹೇಳಿಕೆಯನ್ನು ಗೌರವಿಸುತ್ತೇವೆ. ಆದರೆ ಇಲ್ಲಿ ಶಿವಶಂಕರಪ್ಪನವರು ಒಬ್ಬ ವ್ಯಕ್ತಿಯಾಗಿರದೆ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಸಮಸ್ತ ಸಮುದಾಯವನ್ನು ಪ್ರತಿನಿಧಿಸುತ್ತಾರಾದ್ದರಿಂದ ಅವರ ಸಾರ್ವಜನಿಕ ನಡೆಗಳು ಬಸವತತ್ವಕ್ಕೆ ಪೂರಕವಾಗಿರಬೇಕೆಂದು ಸಮುದಾಯ ಸದಾ ಬಯಸುತ್ತದೆ. ಬಸವ ತತ್ವವು ಕುರುಡನೊಬ್ಬ ಆನೆಯನ್ನು ವರ್ಣಿಸಿದಂತೆ ಎಂದು ಹೇಳಿರುವ ಮಾತು ಸತ್ಯವಾಗಿದೆ. ಶಿವಶಂಕರಪ್ಪನವರು ಈಗ ಆ ಕುರುಡನಂತೆ ವರ್ತಿಸಿದ್ದಾರೆ ಎಂದು ಹೇಳಲು ವಿಷಾದವಾಗುತ್ತಿದೆ.

5. ಶಿವಶಂಕರಪ್ಪನವರಾಗಲಿ ಅಥವ ಇನ್ನಾರೇ ಆಗಿರಲಿ ಬಸವ ಜಯಂತಿಯ ದಿನ ಎತ್ತುಗಳನ್ನು ಪೂಜಿಸುವ ಈ ಪೂರ್ವನಿಯೋಜಿತ ಮತ್ತು ದುರುದ್ದೇಶಪೂರಿತ ನಡೆಯನ್ನು ಪ್ರಶ್ನಿಸುವ ನೈತಿಕತೆ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಸಮಸ್ತ ಬಸವಾನುಯಾಯಿಗಳಿಗೆ ಇರುವುದರಿಂದಲೇ ಅಂಥವರ ಈ ಬಸವ ವಿರೋಧಿ ನಡೆಯನ್ನು ಖಂಡಿಸುತ್ತಿದ್ದೇವೆ ಮತ್ತು ಪ್ರಶ್ನಿಸುತ್ತಿದ್ದೇವೆ. ಬಸವಾದಿ ಶರಣರು ಪ್ರಶ್ನಿಸುವ ಅಧಿಕಾರವನ್ನು ನೀಡಿರುವುದು ನಾವ್ಯಾರೂ ಮರೆಯುವಂತಿಲ್ಲ.

6. ಬಸವಾನುಯಾಯಿಗಳೆಂದು ಹೇಳಿಕೊಂಡವರ ಬಸವ ವಿರೋಧಿ ನಿಲುವನ್ನು ಖಂಡಿಸುವ ಕೆಲಸವು ವೀರಶೈವ ಮಹಾಸಭೆವರಿಗೆ ಸಮಾಜ ಒಡೆಯುವ ಕೆಲಸವಾಗಿ ಕಂಡಿರುವುದು ಅವರ ಬೌದ್ದಿಕ ದಿವಾಳಿತನದ ಸಂಕೇತವಾಗಿದೆ. ಜಾಗತಿಕ ಲಿಂಗಾಯತ ಮಹಾಸಭೆಯು ಬಸವಾದಿ ಶರಣರ ಆಶಯದಂತೆ ಸಮಸ್ತ ಶ್ರಮಿಕ ಮತ್ತು ಕಾಯಕ ವರ್ಗದ ಎಲ್ಲ ಉಪಪಂಗಡಗಳನ್ನು ಒಳಗೊಂಡು ಸಮಾಜ ಕಟ್ಟುವ ಕೆಲಸ ಮಾಡುವುದೇ ಹೊರತು ಕೇವಲ ಶ್ರೀಮಂತರ ತಾಳಕ್ಕೆ ಕುಣಿಯುವಂತ ಸಮಾಜ ವಿಘಟನೆಯ ಕಾರ್ಯ ಮಾಡುವುದಿಲ್ಲ.

ಕೊನೆಯದಾಗಿˌ ಬಸವಣ್ಣನವರು ಹೇಳಿದಂತೆ ” ಮನವರಿಯದ ಕಳ್ಳತನ ಅದಾವುದೂ ಇಲ್ಲ….” ಎನ್ನುವ ಸಂಗತಿ ನಾವೆಲ್ಲರೂ ಅರಿಯಬೇಕಿದೆ ಹಾಗೂ ಲಿಂಗೈಕ್ಯ ಮಹಾದೇವ ಬಣಕಾರ ಅವರ ” ಬಸವಣ್ಣಗೊಂದು ಗುಡಿಯ ಕಟ್ಟಿ ˌ ಬಸವಣ್ಣನೆಂದು ಪಶುವ ಪೂಜಿಪ ನರಪಶುಗಳನ್ನೇನೆಂಬೆನಯ್ಯಾ…..” ಎನ್ನುವ ಅಧುನಿಕ ವಚನವನ್ನು ಜ್ಞಾಪಿಸುತ್ತ ವೀರಶೈವ ಮಹಾಸಭೆ ಮತ್ತು ಶಿವಶಂಕರಪ್ಪನವರು ಅಥವ ಇನ್ನಾರೇ ಆಗಿರಲಿ ನಮ್ಮ ಹಿರಿಯರು ಆರಂಭಿಸಿದ ಬಸವ ಜಯಂತಿಯ ನೈಜ ವೈಚಾರಿಕ ಉದ್ದೇಶವನ್ನು ಅರಿತುಕೊಳ್ಳಲಿ ಮತ್ತು ತಮ್ಮ ಈ ದುರುದ್ದೇಶದ ಕ್ರತ್ಯಕ್ಕೆ ಬಸವಾನುಯಾಯಿಗಳಲ್ಲಿ ಕ್ಷಮೆಯಾಚಿಸಲಿ ಎಂದು ಮತ್ತೊಮ್ಮೆ ಆಗ್ರಹಿಸುತ್ತೇವೆ.

~ ಡಾ. ಎಸ್ ಎಂ ಜಾಮದಾರ್ˌ
ಮಹಾಪ್ರಧಾನ ಕಾರ್ಯದರ್ಶಿಗಳು, ಜಾಗತಿಕ ಲಿಂಗಾಯತ ಮಹಾಸಭಾ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

One comment

 1. ಬಸವ ತತ್ವಗಳೆಂಬ ಕ್ರಾಂತಿಯ ಬೀಜಗಳು ಮತ್ತವುಗಳ ಮರುವ್ಯಾಖ್ಯಾನದ ಅವಶ್ಯಕತೆ!!

  ಬಸವಣ್ಣನವರನ್ನು ಎತ್ತನ್ನಾಗಿಸಿ ಪೂಜಿಸುತ್ತಿರುವವರ ಬಗ್ಗೆ ತೀವ್ರ ತೆರನಾದ ಅನುಕಂಪವೂ, ಸಿಟ್ಟೂ ಎರಡೂ ಇವೆ. ಈ ತೆರನಾದ ಆಚರಣೆಗಳು, ಬಸವ ತತ್ವಗಳನ್ನು ಮೂಲೆಗುಂಪಾಗಿಸುವ ಮುಂದುವರೆದ ಭಾಗಗಳೂ, ಬಸವನೆಂಬ ಮಹಾಮಾನವತಾವಾದಿಗೆ ಎಸಗುವ ಬಹುದೊಡ್ಡ ಅಪಚಾರಗಳೂ ಎಂದು ನಾನು ಪರಿಭಾವಿಸುತ್ತೇನೆ.

  ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು ತಲೆಮಾರುಗಳಿಗೆ ಕಟ್ಟಿಕೊಡುವಲ್ಲಿ ಇಡೀ ಸಮಾಜ ಸೋತಿದೆ ಅಥವಾ ಬೇಕೆಂದೇ ಬದಿಗಿರಿಸಿದೆ. ಉದಾಹರಣೆಗೆ ನಾವೋದುತ್ತಿರುವ ಪಠ್ಯ ಪುಸ್ತಕಗಳಲ್ಲಿ ಬಸವಣ್ಣನವರನ್ನು ಕೇವಲ ಶಂಕರ, ರಾಮಾನುಜ, ವಿದ್ಯಾರಣ್ಯರ ಸಾಲಿನಲ್ಲಿ ಬರುವ ಒಬ್ಬ ಸಮಾಜ ಸುಧಾರಕನನ್ನಾಗಿಯೋ ಇಲ್ಲ, ಕೇವಲ ಭಕ್ತಿ ಪಂಥದಲ್ಲಿ ಬರುವ ಭಕ್ತನನ್ನಾಗಿಯೋ ಬಿಂಬಿಸಲಾಗಿದೆಯೇ ವಿನಃ ಬಸವಣ್ಣನ ಬಹುಮುಖ ವ್ಯಕ್ತಿತ್ವವನ್ನು, ಅವರ ಮಾನವತೆ ಪರ ವಿಚಾರಗಳನ್ನು ತೆರೆದಿಡುವಲ್ಲಿನ ಸೋಲು ಅದನ್ನೋದುವ ತಲೆಮಾರುಗಳ ದಿಕ್ಕು ತಪ್ಪಿಸಿದೆ ಮತ್ತು ಅದರ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ.

  ಅವರ ಸಾವಿರಾರು ವಚನಗಳೇ ಅವರ ಬಹುಮುಖ ವ್ಯಕ್ತಿತ್ವವನ್ನು ಅನಾವರಣಗೊಳಿಸಿವೆ. ಅವರು ಕೇವಲ ಭಕ್ತಿ ಭಂಡಾರಿಯಲ್ಲ ಅವರಲ್ಲೊಬ್ಬ ನಿಜವಾದ…

  1. ಸಮಾಜವಾದಿ
  2. ಜಾತ್ಯಾತೀತವಾದಿ
  3. ಮಾನವತಾವಾದಿ
  4. ಸ್ತ್ರೀವಾದಿ
  5. ವಿಚಾರವಾದಿ
  6. ಸಮಾಜ ಶಾಸ್ತ್ರಜ್ಞ
  7. ರಾಜ್ಯ ಶಾಸ್ತ್ರಜ್ಞ
  8. ಪ್ರಜಾಪ್ರಭುತ್ವವಾದಿ
  9. ಕಾಯಕಯೋಗಿ
  10. ಕನ್ನಡಾಭಿಮಾನಿ
  11.ಸಮಾನತಾವಾದಿ
  12.ಉದಾರತಾವಾದಿ
  13. ಜನ ನಾಯಕ
  14. ಮನಶಾಸ್ತ್ರಜ್ಞ
  15.ಅರ್ಥಶಾಸ್ತ್ರಜ್ಞ
  16. ಆಧ್ಯಾತ್ಮವಾದಿ
  17. ಸಮುದಾಯ ಸಂಘಟಕ
  18. ಹೊಸ ಧರ್ಮದ ಪ್ರವಾದಿ
  19. ಸಾಹಿತಿ
  20. ಶಿಕ್ಷಕ ಇತ್ಯಾದಿ.

  ಬಸವಣ್ಣನ ವ್ಯಕ್ತಿತ್ವ ಸಾಗರ, ಈಗ ಅವರ ಬಗ್ಗೆ ಆಗಿರುವ ಸಂಶೋಧನೆಗಳು ಬಹುಶಃ ಅವರ ಬಹುಮುಖ ವ್ಯಕ್ತಿತ್ವದ ಶೇಕಡಾ 1ರಷ್ಟು ಮಾತ್ರ. ಬಹಳ ಹೆಮ್ಮೆಯಿಂದ ಹೇಳಬಹುದು ಅವರ ಕೇವಲ ಒಂದೇ ಒಂದು ವಚನವನ್ನು ವಿಶ್ಲೇಷಿಸಿ ಒಂದಿಡಿ ಪುಸ್ತಕವನ್ನು ಬರೆಯಬಹುದೆಂದು, ಅದು ಬಸವ ತತ್ವಗಳಿಗಿರುವ ತಾಕತ್ತು. ಬಸವಣ್ಣ ಏರಿದ ಎತ್ತರಕ್ಕೆ ಬಹುಶಃ ಮತ್ತಾರೂ ಏರಲಾರರು. ಬಸವಣ್ಣನಿಗೆ ಬಸವಣ್ಣ ಮಾತ್ರ ಸಾಟಿ.

  ಅವರ ಜನಾಕರ್ಷಕ ನಾಯಕತ್ವ ಯಾವಾಗಲೂ ಅಚ್ಚರಿಯ ವಿಷಯ, ಅದು ಹೇಗೆ ಬಸವಣ್ಣ ಧರ್ಮ ಬಾಹಿರ ಜನರನ್ನು ವ್ಯವಸ್ಥಿತವಾಗಿ ಸಂಘಟಿಸಿ ಹೊಸಬೆಳಕನ್ನು ನೀಡಿದರು? ಅದು ಹೇಗೆ ಆಫ್ಘಾನಿಸ್ತಾನ, ಕಾಶ್ಮೀರದವರೆಗೆ ಅವರ ಕೀರ್ತಿ ಹಬ್ಬಿತ್ತು? ಅದು ಹೇಗೆ ಅವರು ಅನುಭವ ಮಂಟಪವೆಂಬ ಪ್ರಜಾಪ್ರಭುತ್ವ ಸಂಸ್ಥೆ ಸ್ಥಾಪಿಸಿದರು? ಅದು ಹೇಗೆ ಅವರು ಪ್ರಭುತ್ವದ ಹಳವಂಡಗಳನ್ನು ದಿಟ್ಟವಾಗಿ ಎದುರಿಸೋ ಎದೆಗಾರಿಕೆ ತೋರಿಸಿದರು? ಅವರೇಕೆ ವ್ಯವಸ್ಥೆಯೊಂದಿಗೆ ಯಾವ ಸಂದರ್ಭ, ಇನ್ನೂ ನಿಖರವಾಗಿ ಹೇಳುವುದಾದರೆ ಪ್ರಾಣಾಪಾಯವಿದ್ದರೂ ರಾಜಿಯಾಗಲಿಲ್ಲ? ಅವರಿಗೇಕೆ ಬೇರೆಯವರ ಹಾಗೆ ಅಧಿಕಾರದ ದರ್ಪ ತಲೆಗೇರಲಿಲ್ಲ? ಅವರಿಗೇಕೆ ಅಂದಿನ ಘೋಷಿತ ತಳಸಮುದಾಯದ ಜನರ ಬಗ್ಗೆ ಸಹಾನುಭೂತಿಯಿತ್ತು? ಅವರೇಕೆ ಕನ್ನಡವನ್ನೇ ಬಳಸಿ, ಬೆಳೆಸಿದರು? ಅವರಿಗೇಕೆ ಶರಣ ಸಮುದಾಯ ಜೀವಕ್ಕೆ ಜೀವ ನೀಡಲೂ ಹಿಂಜರಿಯುತ್ತಿರಲಿಲ್ಲ? ಅವರೇಕೆ ಇಷ್ಟಲಿಂಗ ಸಂಶೋಧಿಸಿದರು? ಅವರೇಕೆ ಶರಣ ಸಮುದಾಯವನ್ನು ಸಾಕ್ಷರ ಸಮುದಾಯವನ್ನಾಗಿಸಿದರು? ಅವರೇಕೆ ಎಲ್ಲರಿಗೂ ಇಷ್ಟಲಿಂಗ ದೀಕ್ಷೆ ನೀಡಿದರು? ಅಪಾರ ಜನಬೆಂಬಲವಿದ್ದರೂ ಬಿಜ್ಜಳನ ನಂತರ ಅವರು ರಾಜಪದವಿ ಸ್ವೀಕರಿಸಲಿಲ್ಲ? ಶರಣರ ಬೇಟೆ ನಡೆದಾಗಲೂ ಅವರೇಕೆ ಎಂದೂ ಸೇಡಿನ ರಾಜಕಾರಣ ಮಾಡಲಿಲ್ಲ?

  ಏಕೆಂದರೆ ಅವರು ಮಹಾಮಾನವತಾವಾದಿ, ದೂರದೃಷ್ಟಿಯುಳ್ಳ ಜನನಾಯಕ, ಉನ್ನತ ವಿಚಾರಗಳುಳ್ಳ ಉದಾತ್ತ ಆದರ್ಶವಾದಿ. ಅದಕ್ಕೆ ಹೇಳೋದು ಬಸವಣ್ಣ ಏರಿದ ಎತ್ತರಕ್ಕೆ ಮತ್ತಾರೂ ಏರಲಾರರೆಂದು. ಬಸವ ತತ್ವಗಳನ್ನು ಹುಗಿಯಲು ಯತ್ನಿಸಿದವರಿಗೆ ಅವು ಕ್ರಾಂತಿಯ ಬೀಜಗಳೆಂದು ಗೊತ್ತಿರಲಿಲ್ಲ. ಬಸವಣ್ಣ ಯಾವಾಗಲೂ ಸ್ಫೂರ್ತಿಯ ಚಿಲುಮೆ, ಆದರ್ಶ ನಾಯಕ. ಬಸವಣ್ಣನ ಪ್ರತಿ ಮುಖ ವ್ಯಕ್ತಿತ್ವದ ಅಧ್ಯಯನವೆಂಬುದು ಈ ಹೊತ್ತಿನ ಅಗತ್ಯತೆ ಮತ್ತು ಸ್ಥಾಪಿತ ಹಿತಾಸಕ್ತಿ ತಪ್ಪಾಗಿ ವ್ಯಾಖ್ಯಾನಿಸಿದ ಅವರ ತತ್ವಗಳ ಮರುವ್ಯಾಖ್ಯಾನದ ಭಾಗ.

Leave a Reply

Your email address will not be published. Required fields are marked *

error: Content is protected !!