Breaking News
Home / featured / ಮೇ 01 ಕಾಯಕ ದಿನಾಚರಣೆ: ಕಾಯಕ ಜೀವಿಗಳಿಗೊಂದು ಸಲಾಮ್

ಮೇ 01 ಕಾಯಕ ದಿನಾಚರಣೆ: ಕಾಯಕ ಜೀವಿಗಳಿಗೊಂದು ಸಲಾಮ್

ಬೆಳಗಾವಿ: ನಾಲ್ಕು ದಶಕಗಳ ಪತ್ರಿಕಾ ರಂಗ ಮತ್ತು ಸಾರ್ವಜನಿಕ ಜೀವನದಲ್ಲಿ ಈ ವರ್ಷ ಅತ್ಯಂತ ಕಳವಳಕಾರಿ ಸನ್ನಿವೇಶವನ್ನು ಎದುರಿಸುತ್ತಿದ್ದೇನೆ. ಬೇಸಿಗೆಯ ಬಿರು ಬಿಸಿಲು, ಮಳೆಗಾಲದ ಸಿಡಿಲು-ಗುಡುಗು, ಮೈ ನಡುಗಿಸುವ ಚಳಿಗೆ ಅರೆ ಬಟ್ಟೆ ಉಟ್ಟ ಮೈ ಒಡ್ಡಿ ಈ ದೇಶವನ್ನು ಕಟ್ಟುತ್ತಿರುವ ಕಾಯಕ ಜೀವಿಗಳಿಗೆ, ಅವರ ಹೆಸರಿನಿಂದ ಆಚರಿಸುವ ದಿನದ ಶುಭಾಶಯಗಳನ್ನು ಹೇಳದೆ ಚಡಪಡಿಸುವಂತಾಗಿದೆ.

ಮೇ 1 ರಂದು ಆಚರಿಸಲಾಗುವ ಕಾಯಕ ಜೀವಿಗಳ ದಿನವೂ, ದಿನನಿತ್ಯ ದುಡಿದು ತಿನ್ನುವ ಕಾಯಕ ಜೀವಿಗಳಿಗೇನು ಸಂಭ್ರಮದ ದಿನವಾಗಿರಲಿಲ್ಲ. ಮೇ 1 ರಂದು ನಾವು ಬಹುತೇಕ ಪತ್ರಕರ್ತರುಗಳು, ಎಪಿಎಂಸಿ, ಟ್ರಾನ್ಸ್‍ಪೋರ್ಟ್ ಕಂಪನಿಗಳಿರುವ ಪ್ರದೇಶಗಳಿಗೆ ತೆರಳಿ, ಅಲ್ಲಿ ಕಾರ್ಮಿಕರ ದಿನದಂದೂ ತಳ್ಳು ಗಾಡಿಗಳಿಗೆ ನೊಗವಡ್ಡಿ ಆ ದಿನದ ಹೊಟ್ಟೆ ಪಾಡಿಗಾಗಿ ದುಡಿಯುತ್ತಿರುವ ಅಸಹಾಯಕ ಜೀವಿಗಳ ಸಂದರ್ಶನ ಮಾಡುತ್ತಿದ್ದೇವು. ಕಾರ್ಮಿಕರ ದಿನದಂದೂ ಅವರಿಗೆ ರಜೆ ಇಲ್ಲ ಎಂಬ ಸುದ್ದಿಗಳು ಮರುದಿನ ಮಾಧ್ಯಮಗಳ ಮುಖ ಪುಟಗಳಲ್ಲಿ ರಾರಾಜಿಸುತ್ತಿದ್ದವು. ನಮ್ಮ ಸಾಮಾಜಿಕ ಹೋರಾಟದ ಭಾಗವಾಗಿ ಮೇ 1 ರಂದು ಕಾಯಕ ಜೀವಿಗಳ ದಿನ ಆಚರಿಸುತ್ತಿದ್ದೇವೆ. ಮೇ 1 ರಂದು ಖಾಸಗಿ ವಲಯದಲ್ಲೂ ಕಾರ್ಮಿಕರಿಗೆ ಆ ಒಂದು ದಿನ ವೇತನ ಸಹಿತ ರಜೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವು. ಕಾಯಕ ಜೀವಿಗಳಿಗೆ ಗೌರವಯುತ ಬದುಕು ಕಟ್ಟಿಕೊಡುವ ಹೋರಾಟಕ್ಕೆ ಮುನ್ನುಡಿ ಬರೆದ ಬಸವ-ಅಂಬೇಡ್ಕರರನ್ನು ಸ್ಮರಿಸುತ್ತಿದ್ದೇವು. ಅಲ್ಲಲ್ಲಿ ಕಾರ್ಮಿಕರ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಈ ಚರ್ಚೆ, ಹೋರಾಟಗಳಿಂದ ಕಾರ್ಮಿಕರ ಬದುಕು ಹೇಳಿಕೊಳ್ಳುವಷ್ಟು ಹಸನಾಗದಿದ್ದರೂ ದುಡಿಯುವ ಜೀವಗಳಿಗೆ ಮಿಡಿಯುವ ಮನಸ್ಸುಗಳು ಇವೆ ಎಂಬ ಸಮಾಧಾನ ಇರುತ್ತಿತ್ತು.

ಈ ವರ್ಷ ಅಂತಹ ಸಮಾಧಾನವನ್ನೂ ಪಡುವ ಸ್ಥಿತಿ ಇಲ್ಲ. ಈಗ ಎಪಿಎಂಸಿಗಳಲ್ಲಾಗಲಿ, ಟ್ರಾನ್ರ್ಸ್‍ಪೋರ್ಟ್ ಕಂಪನಿಗಳ ಪ್ರದೇಶಗಳಲ್ಲಾಗಲಿ ದಿನ ದುಡಿದು ತಿನ್ನುವ ಬಡಕಲು ಜೀವಗಳು ಕಾಣುತ್ತಿಲ್ಲ. ಒಂದೆ ಒಂದು ದಿನ ದುಡಿಯದಿದ್ದರೂ ಅಂದಿನ ತುತ್ತು ಸಿಗದ ಆ ಹಸಿದ ಕರಳುಗಳು ಕಳೆದ 40 ದಿನಗಳಿಂದ ಹೇಗೆ ಬದುಕುತ್ತಿರಬಹುದು ಎಂಬದನ್ನು ಊಹಿಸಿಕೊಂಡರೆ ನಿಜಕ್ಕೂ ಭಯವಾಗುತ್ತಿದೆ.
ಕೊರೋನಾ ಕೊಲ್ಲುವ ಮಹಾಅಸ್ತ್ರವಾಗಿ ದೇಶವ್ಯಾಪಿ ಘೋಷಿಸಲಾಗಿರುವ ಲಾಕ್‍ಡೌನ್‍ದಿಂದ ಅತ್ಯಂತÀ ಹೆಚ್ಚು ಕಷ್ಟ-ನೋವು ಅನುಭವಿಸಿದವರೇ, ಈ ಕಾಯಕ ಜೀವಿಗಳು. ಅದರಲ್ಲೂ ವಿಶೇಷವಾಗಿ ಅಸಂಘಟಿತ ಕಾರ್ಮಿಕರು. ದೊಡ್ಡ ದೊಡ್ಡ ಕಟ್ಟಡ ಕಾಮಗಾರಿ ನಡೆಯುವ ಸ್ಥಳದ ಪಕ್ಕದಲ್ಲೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಂಡು ತಮ್ಮ ಮಕ್ಕಳನ್ನು ಸಾಕುತ್ತಿದ್ದವರು, ಕಂಟೇನರ್‍ಗಳಲ್ಲಿ ರಾತ್ರಿ ಕಳೆಯುವವರು, ಹೆಂಡತಿ ಮಕ್ಕಳನ್ನು ದೂರದ ಊರಿನಲ್ಲಿ ಬಿಟ್ಟು ಅಂಗಡಿಗಳ ಮುಂದೆ ಮಲಗುವವರು, ಕೊಳಚೆ ಪ್ರದೇಶಗಳಲ್ಲಿ, ಖುಲ್ಲಾ ಜಾಗಗಳಲ್ಲಿ ಪ್ಲಾಸ್ಟಿಕ್ ಕವರಗಳಿಂದ ಆಸರೆ ಕಟ್ಟಿಕೊಂಡು ಬದುಕುವ ಚಿಂದಿ ಆಯುವವರು. ಈ ಲಾಕ್ ಡೌನ್ ಎಂಬ ಕರಾಳ ದಿನಗಳನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ಊಹಿಸಿಕೊಳ್ಳುವುದೆ ಭಯಾನಕ.

ಚಪ್ಪಾಳೆ ತಟ್ಟುವದರಿಂದ, ದೀಪ ಹಚ್ಚುವದರಿಂದ ಹಸಿವು ತಣಿಯುವದಿಲ್ಲ. ಹಸಿದ ಕರಳುಗಳಿಗೆ ಅನ್ನ ನೀಡಿ, ಋಣ ತೀರಿಸಿಕೊಳ್ಳಿ ಎಂಬ ಲೇಖನ ಬರೆದಾಗ, ಹೊಟ್ಟೆ ತುಂಬಿದ ಕೆಲವರು ಟೀಕೆ ಮಾಡಿದರು. ರಾಜಕೀಯ ಮಾಡಬೇಡಿ ಎಂಬ ತಮ್ಮ ಜೀವಮಾನದ ಬಹುದೊಡ್ಡ ಸಲಹೆ ನೀಡಿದರು. ಈ ಕೆಲ ಜನರನ್ನು ಬಿಟ್ಟರೇ, ಬಹುತೇಕ ಜನರು ಬೆಂಬಲ ಸೂಚಿಸಿದರು. ದಾಸೋಹದ ಸುದ್ದಿಗಳು ಹೆಚ್ಚಾಗಿ ಬರತೊಡಗಿದವು. ಮನಸ್ಸಿಗೆ ನೆಮ್ಮದಿ ತಂದಿತು.
ಸುಮಾರು 30-35 ಕೋಟಿ ಕಾರ್ಮಿಕರಿರುವ ಈ ದೇಶದ ಆಳುವ ದೊರೆಗಳಿಗೆ ತನ್ನ ದೇಶದ ನಿಜ ಸ್ಥಿತಿ ಅರ್ಥವಾಗಬೇಕಿತ್ತು. ಲಾಕ್ ಡೌನ್ ಮಾಡುವ ಮುನ್ನ ಈ ಕಾರ್ಮಿಕರಿಗೊಂದು ಗೌರವಯುತ ವ್ಯವಸ್ಥೆ ಕಲ್ಪಿಸಬೇಕಾಗಿತ್ತು. 9 ಘಂಟೆಗೆ ಘೋಷಣೆ ಮಾಡಿ, 12 ಗಂಟೆಗೆ ಇಡಿ ದೇಶ ಬಂದ್ ಮಾಡಲು ದೇಶವೆಂಬುದು ಮಾಲ್ ಅಲ್ಲ ಎಂಬ ಕನಿಷ್ಟ ಅರಿವು ಇರಬೇಕಿತ್ತು ಎಂದು ಹೇಳಿದರೇ, ಅದನ್ನು ವಿರೋಧಿಸುವ ಭಕ್ತರಿಗೇನು ಕಡಿಮೆ ಇಲ್ಲ.

ಆದರೆ, ಹಸಿವಿನ ಸಂಕಟವನ್ನು ಅರ್ಥ ಮಾಡಿಕೊಂಡಿರುವ ಮಾನವೀಯ ಹೃದಯಗಳು ದಾಸೋಹಕ್ಕೆ ಮುಂದೆ ಬರದಿದ್ದರೇ, ಕೊರೋನಾಗಿಂತ ಹೆಚ್ಚಿನ ಸಾವುಗಳು ಸಂಭವಿಸುತ್ತಿದ್ದವು ಎಂಬುದರಲ್ಲಿ ಎರಡು ಮಾತಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬಂದು ದೆಹಲಿಯಲ್ಲಿ ನೆಲೆಸಿದ್ದ ಕಾರ್ಮಿಕರುಗಳು, ಬಹುದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಬರುವವರೆಗೆ ಆ ಬಡಪಾಯಿ ಕಾರ್ಮಿಕರು ಸುದ್ದಿಯಾಗಲೇ ಇಲ್ಲ. ಸುದ್ದಿಯಾದ ನಂತರ ಒಂದಿಷ್ಟು ನೆರವುಗಳು ಸಿಕ್ಕವು.
ಸುಮಾರು 40 ದಿನಗಳ ನಂತರ ಈ ದೇಶದ ಮಹಾನ್ ಅರ್ಥ ಶಾಸ್ತ್ರಜ್ಞರಿಗೆ ಈ ದೇಶದ ಸ್ಥಿತಿ ಅರ್ಥವಾಗಿದೆ. ಲಾಕ್ ಡೌನ್ ತೆಗೆಯದಿದ್ದರೇ, ಈ ದೇಶದಲ್ಲಿ ಕೊರೋನಾಗಿಂತ ಹೆಚ್ಚಿನ ಸಾವುಗಳು ಸಂಭವಿಸುತ್ತವೆ ಎಂಬ ಸಲಹೆ ನೀಡಿದ್ದಾರೆ. 40 ದಿನಗಳ ನಂತರ ಈ ಮಹಾನುಭಾವರಿಗೆ ಈಗ ಜ್ಞಾನೋದಯವಾಗಿದೆ. ಕೃಷಿ ಪ್ರಧಾನ ದೇಶವೆಂದು ಹೇಳಿಕೊಂಡರೋ ತನ್ನ ದೇಶದ ಜನರಿಗೆ ಕೇವಲ 30 ದಿನಗಳ ಕಾಲ ಅನ್ನ ನೀಡುವ ಶಕ್ತಿ ಇಲ್ಲ ಎಂಬ ಸತ್ಯವನ್ನು ಮರೆಮಾಚಿ ಭಾರತವನ್ನು ವಿಶ್ವಗುರುವಾಗುತ್ತಿದೆ ಎಂಬ ಭ್ರಮೆ ಹುಟ್ಟಿಸಿದ ಇದೆ ಮಹಾನುಭಾವರಿಗೆ ಸತ್ಯದ ಅರಿವಾಗಿದೆ.

ಈ ದೇಶದಲ್ಲಿ ನೀತಿಗಳಿಗೆ ಕೊರತೆ ಇಲ್ಲ. ನಾಯಕರಿಗೂ ಕೊರತೆ ಇಲ್ಲ. ಆದರೆ, ನಿಯತ್ತಿನ ಕೊರತೆ ಇದೆ. ಚಹಾ ಮಾರುವವರಿಗೆ ಚಿಂದಿ ಆಯುವವರ ಚಿಂತೆ ಇರಬೇಕು.
ಕೊರೋನಾ ತಂದೊಡ್ಡಿರುವ ಸಂಕಷ್ಟಗಳನ್ನೂ ಸಹಿಸಿಕೊಂಡು, ಮತ್ತೆ ದೇಶ ಕಟ್ಟಲು ಸಿದ್ದರಿರುವ ಕಾಯಕ ಜೀವಿಗಳಿಗೊಂದು ಸಲಾಮ್. ದೇಶದ ಸ್ಥಿತಿ ಅರ್ಥ ಮಾಡಿಕೊಂಡಿರುವ ದೇಶವಾಸಿ ಅರ್ಥ ಶಾಸ್ತ್ರಜ್ಞರಿಗೂ
ಶರಣು ಶರಣಾರ್ಥಿ

ಆರ್.ಎಸ್.ದರ್ಗೆ, ಪತ್ರಕರ್ತ, ಬೆಳಗಾವಿ
ಮೋ.ನಂ.9986710560

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!