Breaking News
Home / featured / ಕಾಯಕ ತತ್ವವೇ ಕಾರ್ಮಿಕ ಒಕ್ಕೂಟಗಳಿಗೆ ಬುನಾದಿ

ಕಾಯಕ ತತ್ವವೇ ಕಾರ್ಮಿಕ ಒಕ್ಕೂಟಗಳಿಗೆ ಬುನಾದಿ

ಬೀದರ : ಕಾಯಕ ಮನುಷ್ಯನ ದೈಹಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರತಿಯೊಬ್ಬರ ಬದುಕಿಗೆ ಕಾಯಕವೇ ಮೂಲಾಧಾರವಾಗಿದೆ. ಅದು ಯಾವುದೇ ಕಾಯಕವಾದರೂ ಸತ್ಯ ಶುದ್ಧವಾಗಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಕೂಡ ಹೌದು. ಯಾವುದೇ ವೃತ್ತಿ ಇರಲಿ ಅದು ಜೀವನದ ಅನುಭಾವ ನೀಡುತ್ತದೆ. ಯಾರು ಸತ್ಯ ಶುದ್ಧ ಕಾಯಕ ಮಾಡುವರೋ ಅವರ ಬದುಕು ನೆಮ್ಮದಿಯಿಂದ ರೂಪುಗೊಳ್ಳಲು ಸಾಧ್ಯವಿದೆ.

12ನೇ ಶತಮಾನದ ಬಸವಾದಿ ಶರಣರು ಮೊಟ್ಟ ಮೊದಲಿಗೆ ಕಾಯಕಕ್ಕೆ ಹೆಚ್ಚಿನ ಮಹತ್ವದ ನೀಡಿರುವುದು ಕಾಣುತ್ತೇವೆ. ವಿವಿಧ ಸಮುದಾಯದ ಅಸಂಘಟಿತ ಶ್ರಮಿಕ ಜೀವಿಗಳನ್ನು ಒಗ್ಗೂಡಿಸಿ ಕಾಯಕ ಚಳುವಳಿ ಕಟ್ಟಿದ ಜಗತ್ತಿನ ಮೊದಲ
ಸಮೂಹ ನಾಯಕ ಬಸವಣ್ಣ ಎಂದು ಹೇಳಬಹುದು. ರಾಜ್ಯಪ್ರಭುತ್ವದ ಅಟ್ಟಹಾಸ ದೌರ್ಜನ್ಯ,
ತೆರಿಗೆ ಮತ್ತು ಸುಲಿಗೆಯಿಂದ ಶೋಷಣೆಗೆ ಒಳಗಾದ ಕಾಯಕ ಜೀವಿಗಳನ್ನು, ಎಲ್ಲಾ ಹಕ್ಕುಗಳಿಂದ ವಂಚಿತಗೊಂಡ ಅಸ್ಪೃಶ್ಯರು, ಮಹಿಳೆಯರು, ದಲಿತರನ್ನು ಕಾಯಕ ಸಿದ್ಧಾಂತ ಪರಿಕಲ್ಪನೆ ಮೂಲಕ ಸರ್ವಸಮಾನತೆ ಸಮಾಜ ರೂಪಿಸಿದ ಬಸವಣ್ಣನವರು ಕಾಯಕ ಚಳುವಳಿಯ ನಿರ್ಮಾಪಕರಾಗಿದ್ದಾರೆ.

ಮಾನವನ ಅಂತರಂಗ ಶುದ್ಧಿ ಹಾಗೂ ಏಕತೆ ಸಾಧಿಸಲು ಕಾಯಕದಿಂದ ಮಾತ್ರ ಸಾಧ್ಯ. ಭೂಲೋಕದ ಅನುಭವ ಅರಿಯಲು ಕಾಯಕವೇ ಯೋಗ್ಯ ಸಾಧನವಾಗಿದೆ. ಹಾಗಾಗಿ ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಶ್ರೇಷ್ಠ ಅಥವಾ ಕನಿಷ್ಠ ಇಲ್ಲ. ಯಾವುದೇ ವೃತ್ತಿಯಿರಲಿ ಅದನ್ನು ಕಾಯಕವೇ ಕೈಲಾಸ ಎನ್ನುವ ತತ್ವದ
ನೆಲೆಯಲ್ಲಿ ಕಂಡುಕೊಂಡು ಬದುಕನ್ನು ಪ್ರೀತಿಸುವಂತೆ ಶರಣರು ಮಾರ್ಗದರ್ಶನ ಮಾಡಿದ್ದಾರೆ.

‘ಸತ್ಯ ಶುದ್ಧವಿಲ್ಲದುದು ಕಾಯಕವಲ್ಲ’ ಎಂದು
ಶರಣೆ ಕಾಳವ್ವೆ ಹೇಳುವ ವಚನದ ಸಾಲು ಅದೆಷ್ಟು ಮಹತ್ತರವಾದ ವಿಚಾರ ಒಳಗೊಂಡಿದೆ. ಹೀಗೆ ಅನೇಕ ಕಾಯಕ ಜೀವಿಗಳನ್ನು ತಮ್ಮ ವೃತ್ತಿ ಅನುಭವ ನುಡಿಗಳನ್ನು ಅನುಭಾವದ ವಚನಗಳಾಗಿ ಮಾರ್ಪಟ್ಟಿವೆ. ಪ್ರಸ್ತುತ ಸಮಾಜಕ್ಕೆ ಇಂತಹ ಸತ್ಯ ಶುದ್ಧ ಶ್ರಮಿಕರು ದೊರಕುವುದು ಅಪರೂಪವಾಗಿದೆ. ಕಾಯಕದಲ್ಲಿಯೂ ಮೇಲು – ಕೀಳು, ಶ್ರೇಷ್ಠ – ಕನಿಷ್ಠ, ಬಡವ – ಶ್ರೀಮಂತ ಹೀಗೆ ವಿಂಗಡಣೆಯಾಗಿ ಕಾಯಕ ವಲಯದಲ್ಲಿ ವೃತ್ತಿ-ತಾರತಮ್ಯ ಸೃಷ್ಟಿಯಾಗಿದೆ. ಎಲ್ಲರ ಬದುಕಿಗೆ ಆಸರೆಯಾದ ಕಾಯಕವನ್ನು ಗೌರವಿಸಿ ಪ್ರೀತಿಸಬೇಕಾದರೆ ಬಸವಾದಿ ಶರಣರ ಕಾಯಕ ಚಳುವಳಿ ತತ್ವಸಿದ್ಧಾಂತ ಮೈಗೂಡಿಸಿಕೊಳ್ಳಬೇಕಾಗಿದೆ.

 

“ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು, ಲಿಂಗಪೂಜೆಯಾದಡೂ ಮರೆಯಬೇಕು, ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು”
ಎಂದು ಶರಣ ಆಯ್ದಕ್ಕಿ ಮಾರಯ್ಯನವರ ಈ ವಚನ ಸ
ಕಾಯಕದ ಮಹತ್ವ ಪರಾಕಾಷ್ಠೆ ತೋರುತ್ತದೆ.
ಗುರು, ಲಿಂಗ, ಜಂಗಮಕ್ಕಿಂತಲೂ ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಸಲಹೆ ಶರಣರು ನೀಡುತ್ತಾರೆ.

“ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದು ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ,”
ಎಂದು ಶರಣ ಲದ್ದೆಯ ಸೋಮನು ಕಾಯಕ ಬದುಕಿನ ಕುರಿತು ಅನನ್ಯವಾಗಿ ವಿಶ್ಲೇಷಿಸುತ್ತಾರೆ. ಕಾಯಕದಲ್ಲಿ ಯಾವುದೇ ತಾರತಮ್ಯ, ಭೇದವಿಲ್ಲದೆ ಎಲ್ಲವೂ ಒಂದೇ ಕಾಯಕವೆಂದು ನಿರ್ವಹಿಸಲು ಪ್ರತಿಪಾದಿಸಿದ್ದಾರೆ.

ಒಬ್ಬ ಸಾಮಾನ್ಯ ಕಸಗೂಡಿಸುವ ಕಾಯಕದಿಂದ ದೇಶದ ರಾಷ್ಟ್ರಪತಿ ಹುದ್ದೆಯವರೆಗೆ ಯಾವುದೇ ಕಾಯಕವಿರಲಿ ಅದು ಆತ್ಮಸಾಕ್ಷಿಯಿಂದ ನಿಸ್ವಾರ್ಥ ಭಾವದಿಂದ ನಿರ್ವಹಿಸಬೇಕು. ತನ್ನ ಕಾಯಕದ ಬಗ್ಗೆ
ತನಗೆ ಹೆಮ್ಮೆ ಹಾಗೂ ಆತ್ಮತೃಪ್ತಿ ಹೊಂದುವ ಮೂಲಕ ಕಾಯಕ ಧರ್ಮಕ್ಕೆ ಬದ್ಧವಾಗಬೇಕು. ಯಾವುದೇ ಕಾಯಕವು ಅದು ಅಭಿಮಾನ ಹಾಗೂ ಸ್ವಾಭಿಮಾನದ ಪ್ರತೀಕವೆಂಬುದು ಅರಿಯಬೇಕು. ಕಾಯಕದಿಂದ ಬಂದಿದ್ದನ್ನು ದಾಸೋಹ ಭಾವದಿಂದ ಗುರು ಲಿಂಗ ಹಾಗೂ ಸಮಾಜಕ್ಕೆ ಅರ್ಪಿಸುವಂತೆ ಶರಣರು ಸೂಚಿಸಿದರು.

ಜೀವನ ಎಂದರೆ ಏನು? ಎಂಬ ಪ್ರಶ್ನೆಗೆ ಯಾವುದೇ ಗೊಂದಲ ಹಾಗೂ ತಕರಾರು ಬೇಡವೆಂದು ಹೇಳುವ ಮೂಲಕ ಖಚಿತ ನಿಲುವು ವ್ಯಕ್ತಪಡಿಸುತ್ತಾರೆ.
ಸುಖ – ದುಃಖ, ನೋವು – ನಲಿವು ಸೇರಿದಂತೆ ಬದುಕಿನ ಎಲ್ಲಾ ಜಂಜಾಟಗಳನ್ನು ಒಳಗೊಂಡಿರುವುದೇ ನಿಜವಾದ ಜೀವನ, ಬದುಕಿನ
ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಾದರೆ ಸತ್ಯ ನಿಷ್ಠೆ, ಮತ್ತು ಪ್ರಾಮಾಣಿಕತೆ ಕಾಯಕ ಮಾಡು, ಕಾಯಕದ ಅನುಭಾವ ಜೀವನಾನುಭವ ನೀಡುತ್ತದೆ ಎಂದು ಶರಣರು ಮನಮುಟ್ಟುವಂತೆ ತಿಳಿಸುತ್ತಾರೆ.

ರೋಗ ಬಂದರೆ ನರಳು, ನೋವಾದರೆ ಅರಚು, ಕೊನೆಗೆ ಸಾವು ಬಂದರೆ ಸಾಯಬೇಕು. ಆದರೆ ರೋಗ, ನೋವು, ಸಾವುಗಳಿಗೆ ಹೆದರದಿರು, ಇಂತಹ ಕಷ್ಟಗಳಿಗೆ ಭಯಪಟ್ಟು ದೇವರ ಹತ್ತಿರ ಹೋಗುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸುತ್ತಾರೆ. ದೇವರ ಮೊರೆ ಹೋದರೆ ನಿನ್ನ ನೋವು, ಯಾತನೆ, ಸಾವು ದೂರವಾಗಲು ಸಾಧ್ಯವೇ? ಖಂಡಿತ ಸಾಧ್ಯವಿಲ್ಲ. ಹುಟ್ಟಿದ ಮೇಲೆ ಕೊನೆಗೆ ಸಾವು ಖಚಿತ ಅಲ್ಲವೇ? ಮತ್ತೇಕೆ ಭಯ ಹಾಗೂ ಆತಂಕ ಎಂದು ಮನಮುಟ್ಟುವಂತೆ ತಿಳಿಸುತ್ತಾರೆ.

ಸತ್ಯ ಶುದ್ಧ, ನಿಷ್ಠೆ, ಪ್ರಾಮಾಣಿಕ, ನ್ಯಾಯಯುತವಾದ ಕಾಯಕ ಮಾಡುವ ಮೂಲಕ ನಮ್ಮ ಬದುಕು ಆದರ್ಶಮಯವಾಗಬೇಕು. ಕಾಯಕದಲ್ಲಿಯೇ ದೇವರು ಕಾಣುವಂತರಾಗಬೇಕು. ಕಾಯಕ ನಮ್ಮ ಬದುಕಿನ ಉಸಿರಾದರೆ ಜ್ಞಾನ ತಂತಾನೇ ವೃದ್ಧಿಗೊಂಡು ಶರಣನಾಗಿಸುತ್ತದೆ ಎಂದು ಬಸವಾದಿ ಶರಣರು ಕಾಯಕ ಬದುಕಿನ ಕುರಿತು ವಿಶಿಷ್ಟವಾದ ನೆಲೆಯಲ್ಲಿ ಅದ್ಭುತವಾದ ಚಿಂತನೆಗಳು ತಿಳಿಸಿದ್ದಾರೆ.

ಪ್ರತಿವರ್ಷ ಮೇ 1ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ‘ಕಾರ್ಮಿಕರ ದಿನ’ವನ್ನು ಲೇಬರ್ ಡೇ,ವರ್ಕರ್ಸ್ ಡೇ ಎಂದೂ ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕಾರ್ಮಿಕ ದಿನವನ್ನು ಆಚರಿಸುತ್ತಾರೆ. ವಿವಿಧ ಸ್ತರಗಳಲ್ಲಿ ದುಡಿಯುವ ಕಾರ್ಮಿಕರು ಸಮಾಜ ಹಾಗೂ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಭಾರತದಲ್ಲಿ ಕಾರ್ಮಿಕರನ್ನು ಸಂಘಟಿತ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರೆಂದು ವಿಭಾಗಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ವಾಮ್ಯದಡಿ ದುಡಿಯುವ ಕಾರ್ಮಿಕರು ಬಹುತೇಕ ಸಂಘಟಿತ ಕಾರ್ಮಿಕರು ಹೋರಾಟಗಳ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳುತ್ತಿದ್ದರೆ, ಇನ್ನುಳಿದ ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಭೂ ರಹಿತ ಕುಟುಂಬದವರು, ಮಹಿಳೆಯರು, ಹೊಟೇಲ್‍ಗಳಲ್ಲಿ, ಹಾಗೂ ಸಣ್ಣ ಕೈಗಾರಿಕೆ ಇನ್ನಿತರ ಕ್ಷೇತ್ರಗಳಲ್ಲಿ ದುಡಿಯುವ ಅಸಂಘಟಿತ ಕಾರ್ಮಿಕರು ಅನೇಕ ಹಕ್ಕುಗಳಿಂದ ವಂಚಿತಗೊಂಡು ಕನಿಷ್ಠ ವೇತನದಲ್ಲಿ ಬೆವರು ಸುರಿಸುತ್ತಿದ್ದಾರೆ.

ಪ್ರಸ್ತುತ ದೇಶದಲ್ಲಿ ಬಂಡವಾಳಶಾಹಿ ಖಾಸಗಿ ವಲಯದ ಕೂಲಿಕಾರ್ಮಿಕರ ಬದುಕು ಶೋಚನೀಯವಾಗಿದೆ. ಹೆಚ್ಚಿನ ಕಾಲ ದುಡಿಸಿಕೊಂಡು ಕನಿಷ್ಠ ಕೂಲಿ ನೀಡುವ ಮೂಲಕ ಬಡ ಕೂಲಿಕಾರ್ಮಿಕರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಇದಕ್ಕೆಲ್ಲಾ ಅಸಂಘಟಿತವೇ ಕಾರಣ ಎಂದು ಹೇಳಬಹುದು. ಸಂಘಟಿತ ಕಾರ್ಮಿಕ ಒಕ್ಕೂಟಗಳು ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸುವ ಮೂಲಕ ಐಕ್ಯತೆ ಕಾಪಾಡಿಕೊಂಡು ಹೋರಾಟ ಮಾಡಲು ಮುಂದಾಗಬೇಕಾದ ಅನಿವಾರ್ಯತೆ ಇದೆ. ಆಗ ಶೋಷಣೆ ನಿಲ್ಲುತ್ತದೆ. ಕಾರ್ಮಿಕರಿಗೂ ನ್ಯಾಯ ದೊರೆಯುತ್ತದೆ. ಇದು ಕೇವಲ ಕಾರ್ಮಿಕರ ಐಕ್ಯತೆಯಿಂದ ಮಾತ್ರ ಸಾಧ್ಯ.

ಇಡೀ ಜಗತ್ತಿಗೆ ಆವರಿಸಿರುವ ಕೊರೊನಾ ಮಹಾಮಾರಿಗೆ ಹಲವು ದೇಶಗಳು ಸ್ಥಬ್ಧಗೊಂಡಿವೆ. ಅನಿರೀಕ್ಷಿತ ಲಾಕ್ ಡೌನ್ ದಿಂದ ಹಲವು ದೇಶಗಳಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಕಳೆದ 40 ದಿನಗಳಿಂದ ಜಾರಿಯಲ್ಲಿರುವ ಲಾಕ್ ಡೌನ್ ದಿಂದ ಭಾರತದ ಭಾರತದ ಆರ್ಥಿಕತೆ ಪಾತಾಳ ಸೇರಿದೆ. ಇನ್ನೂ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಜೀವನ ಶೋಚನೀಯವಾಗಿದೆ. ಇಂತ‌ಹ ದುರಿತ ಕಾಲದಲ್ಲಿ ಬಡ ಕೂಲಿಕಾರ್ಮಿಕರ ಬದುಕಿಗೆ ಪೂರಕವಾದ ಪರಿಹಾರ ರೂಪಿಸಲು ಸರ್ಕಾರ ಮುಂದಾಗಬೇಕು. ಕೆಲಸ ಇಲ್ಲದೇ ಗ್ರಹ ಬಂಧನದಲ್ಲಿರುವ ಅಸಂಖ್ಯಾತ ಕಾರ್ಮಿಕರ ಜೀವ ಉಳಿಸುವ ಜೊತೆಗೆ ಜೀವನ ನಿರ್ವಹಣೆಗೆ ಪೂರಕವಾದ ಪರಿಹಾರ ಒದಗಿಸುವ ಮೂಲಕ ‘ಕಾರ್ಮಿಕ ದಿನಾಚರಣೆ’ ಮಹತ್ವ ಹೆಚ್ಚಿಸಬೇಕಾಗಿದೆ.

 

ಲೇಖನದ ಕುರಿತು ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳಲು ಸಂಪರ್ಕಿಸಿರಿ.

ಶರಣ : ಬಾಲಾಜಿ ಕುಂಬಾರ, ಚಟ್ನಾಳ
ಶಿಕ್ಷಕ  ಶರಣ ಸಾಹಿತಿಗಳು, ಬೀದರ್
Cell: 9739756216

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!