ಬೆಳಗಾವಿ: ಹಿರೇಬಾಗೇವಾಡಿಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇದ್ದರೂ, ಪೊಲೀಸರ ಕಣ್ಣು ತಪ್ಪಿಸಿ ಬೇಕರಿ ವ್ಯಾಪಾರಿಯೊಬ್ಬ 22 ಕಿ.ಮೀ ದೂರದ ಬೈಲಹೊಂಗಲಕ್ಕೆ ಹೋಗಿ ಬಿಸ್ಕಿಟ್ ಮಾರಾಟ ಮಾಡಿ ಬಂದಿರುವ ಸಂಗತಿ ಬೆಳಕಿಗೆ ಬಂದಿದ್ದು, ಬೈಲಹೊಂಗಲದ ಜನರು ಆತಂಕಕ್ಕೆ ಈಡಾಗುವಂತೆ ಮಾಡಿದೆ.
ಸುದ್ದಿ ಗೊತ್ತಾದ ಹಿನ್ನೆಲೆಯಲ್ಲಿ, ಹಿರೇಬಾಗೇವಾಡಿಯ ವ್ಯಕ್ತಿಯಿಂದ ಬಿಸ್ಕಿಟ್ ಖರೀದಿಸಿದ್ದ ಎರಡು ಸ್ವೀಟ್ ಮಾರ್ಟ್ ಗಳನ್ನು ಬೈಲಹೊಂಗಲ ತಾಲೂಕು ಆಡಳಿತ ಮತ್ತು ಪೊಲೀಸರು ಇಂದು ಮಧ್ಯಾಹ್ನ ಸೀಜ್ ಮಾಡಿದ್ದಾರೆ. ನಸುಕಿನ ಜಾವ ಜೀಪಿನಲ್ಲಿ ಬಿಸ್ಕಿಟ್ ಮತ್ತು ಬೇಕರಿ ಪದಾರ್ಥಗಳನ್ನು ತೆಗೆದುಕೊಂಡು ಹೋಗಿದ್ದ ಹೋಲಸೇಲ್ ಬೇಕರಿ ವ್ಯಾಪಾರಿ, ಬೆಳಿಗ್ಗೆ 7 ಗಂಟೆ ಸುಮಾರಿಗೆ ಅಲ್ಲಿಂದ ವಾಪಸ್ ಬರುವಾಗ ಜನರಿಗೆ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ತಾನು ಹಿರೇಬಾಗೇವಾಡಿಯಿಂದ ಬಂದಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ವಿಷಯ ತಿಳಿದ ಬಳಿಕ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಇದಾದ ಬಳಿಕ ತಾಲೂಕು ಆಡಳಿತದ ವತಿಯಿಂದ ಪಟ್ಟಣದಲ್ಲಿನ ಬಹದ್ದೂರಗಂಡು ಸ್ವೀಟ್ಸ್ ಮತ್ತು ಸಂಗಮ ಸ್ವೀಟ್ ಮಾರ್ಟ್ ಗಳನ್ನು ಸೀಜ್ ಮಾಡಲಾಗಿದೆ. ಬೈಲಹೊಂಗಲ ಪಿಎಸ್ಐ ಹೂಗಾರ ಅವರ ಪ್ರಕಾರ ‘ಬೇಕರಿ ವ್ಯಾಪಾರಿಯು ಅಗತ್ಯ ವಸ್ತುಗಳನ್ನು ಸಾಗಿಸುವ ಪಾಸ್ ಹೊಂದಿದ್ದಾನೆ. ಆತನ ಬಳಿ ಮಾರ್ಚ್ 24 ರಿಂದ ಏಪ್ರಿಲ್ 14 ವರೆಗಿನ ಅಗತ್ಯ ವಸ್ತುಗಳನ್ನು ಸಾಗಿಸುವ ಪಾಸ್ ಇದೆ. ಲಾಕ್ ಡೌನ್ ಮುಂದುವರಿದ ಬಳಿಕ ಅದೇ ಪಾಸ್ ಮುಂದುವರಿದಿದೆ. ಕೇಳಿದವರಿಗೆ ಪಾಸ್ ತೋರಿಸುತ್ತಾನೆ” ಎಂದು ಹೇಳಿದರು.
ಇಲ್ಲಿ ಹಲವಾರು ಅನುಮಾನಗಳು ಬರುತ್ತಿದ್ದು, ಅತ್ಯಂತ ರೆಡ್ ಹಾಟ್ ಸ್ಪಾಟ್ ಆಗಿರುವ ಹಿರೇಬಾಗೇವಾಡಿ ಪ್ರದೇಶದ ವ್ಯಕ್ತಿಗೆ ಗ್ರಾಮ ಬಿಟ್ಟು ಹೊರಗಡೆ ಹೋಗಿ ವ್ಯಾಪಾರ ಮಾಡಲು ಆಡಳಿತದಿಂದ ಪಾಸ್ ದೊರೆತದ್ದು ಹೇಗೆ?, ಅಗತ್ಯ ವಸ್ತುಗಳ ಸಾಗಣೆಗೆ ಪಡೆದುಕೊಂಡಿದ್ದ ಪಾಸ್ ಬೇಕರಿ ವ್ಯಾಪಾರಕ್ಕೆ ದುರ್ಬಳಕೆ ಆಗುತ್ತಿತ್ತಾ?, ಅಷ್ಟಕ್ಕೂ ಸೀಲ್ ಡೌನ್ ಆಗಿರುವ ಕಂಟೇನ್ಮೆಂಟ್ ಪ್ರದೇಶದಿಂದ ಆತ ಸರಾಗವಾಗಿ ಹೊರಗಡೆ ಹೋಗಿ ಅಷ್ಟೇ ಆರಾಮವಾಗಿ ಒಳಗಡೆ ಬರುತ್ತಿರುವುದು ಹೇಗೆ? ಬೈಲಹೊಂಗಲದ ಬೇಕರಿಯವರು ಆತ ಹಿರೇಬಾಗೇವಾಡಿಯವನೆಂದು ಗೊತ್ತಿದ್ದರೂ ಆತನಿಂದ ಪದಾರ್ಥಗಳನ್ನು ಖರೀದಿಸಿದ್ದು ಹೇಗೆ ಎನ್ನುವ ಪ್ರಶ್ನೆಗಳು ಈಗ ಎದ್ದು ಕುಳಿತಿದ್ದು, ಇದರಲ್ಲಿ ಯಾರ್ಯಾರ ನಿರ್ಲಕ್ಷ ಇದೆ ಎನ್ನುವುದು ತನಿಖೆಯಾಗಬೇಕಾಗಿದೆ.
ವ್ಯಾಪಾರಿಯು ಬೈಲಹೊಂಗಲದಲ್ಲಿನ ಎರಡೂ ಸ್ವೀಟ್ ಮಾರ್ಟ್ ಗಳಲ್ಲಿ ಕೇವಲ ಬಿಸ್ಕಿಟ್ ಮಾರಾಟ ಮಾಡಿರುವುದು ಕಂಡು ಬಂದಿದೆ. ಆದರೆ, ಆ ಬಿಸ್ಕಿಟ್ ಗಳನ್ನು ಇನ್ನೂ ಮಾರಾಟ ಮಾಡಲಾಗಿರಲಿಲ್ಲ ಎಂದು ಪಿಎಸ್ಐ ತಿಳಿಸಿದ್ದಾರೆ.
ಬೈಲಹೊಂಗಲ ತಾಲೂಕಿನಲ್ಲಿ ಇದುವರೆಗೆ ಒಂದೂ ಪಾಜಿಟಿವ್ ಪ್ರಕರಣ ಕಂಡು ಬಂದಿಲ್ಲ. ಹೀಗಾಗಿ ಜನ ನಿಶ್ಚಿಂತೆಯಿಂದ ಇದ್ದರು. ಈಗ ಈ ಪ್ರಕರಣದಿಂದ ತಲೆಕೆಡಿಸಿಕೊಳ್ಳುವಂತಾಗಿದೆ.