Breaking News
Home / featured / ಶರಣರ ಸಂಗದಿಂದ ಲಿಂಗತತ್ವ ನೆಲೆಗೊಳ್ಳುವುದು

ಶರಣರ ಸಂಗದಿಂದ ಲಿಂಗತತ್ವ ನೆಲೆಗೊಳ್ಳುವುದು

ಬಸವಣ್ಣನಿಂದ ಲಿಂಗ ಹುಟ್ಟಿತ್ತು ಎಂದು ಅಲ್ಲಮಪ್ರಭುಗಳು ಬಸವಣ್ಣನನ್ನು ಹಾಡಿ ಹೊಳಗುತ್ತಾರೆ. ಆದರೆ ಆ ಲಿಂಗವನ್ನು ಅರಿಯುವ ಪರಿ ಹೇಗೆ ಹೇಳು ಎಂದು ಬಸವಣ್ಣನವರು ಅಲ್ಲಮರ ಸಲಹೆ ಕೇಳುತ್ತಾರೆ. ಇದು ಬಸವಣ್ಣ ಮತ್ತು ಶರಣರಲ್ಲಿ ಅಳವಟ್ಟಿದ್ದ ಅವಿನಾಭಾವ ಸಂಬಂಧ ಮತ್ತು ಪರಸ್ಪರ ಆದರ ಗೌರವವನ್ನು ಪ್ರತಿಬಿಂಬಿಸುವ ಬಸವಣ್ಣನವರ ವಚನ :

ಅರಿದಿಹೆನೆಂದಡೆ ಅರಿವಿಂಗಸಾಧ್ಯ,
ನೆನೆದಿಹೆನೆಂದಡೆ ನೆನಹಿಂಗಸಾಧ್ಯ,
ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,
ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ,
ಗುರು ತೋರದನ್ನಕ್ಕರ ?
ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿಲಿಂಗವು
ಉದಯವಪ್ಪುದೆಂಬ ಶ್ರುತಿ ಹುಸಿಯೆ ?
ಕೂಡಲಸಂಗಮದೇವಾ, ನಿಮ್ಮ ಮಹಾನುಭಾವರ ಮಥನದಿಂದ
ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ.”

ಅರಿದಿಹೆನೆಂದಡೆ ಅರಿವಿಂಗಸಾಧ್ಯ, ನೆನೆದಿಹೆನೆಂದಡೆ ನೆನಹಿಂಗಸಾಧ್ಯ,

ಈ ಲಿಂಗತತ್ವವನ್ನು ತಿಳಿಯಲು ಪ್ರಯತ್ನಿಸುತ್ತಿರುವೆ. ಆದರೆ ಅದು ನನ್ನ ಅರಿವಿನ ವ್ಯಾಪ್ತಿಗೆ ಮೀರಿದ್ದಾಗಿದೆ. ಈ ಲಿಂಗತತ್ವವನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಿರುವೆ. ಆದರೆ ಅದು ನನ್ನ ನೆನಪಿನ ಸೀಮೆಯನ್ನು ದಾಟಿದಂತದ್ದು.

ಭಾವಿಸಿಹೆನೆಂದಡೆ ಭಾವಕ್ಕಸಾಧ್ಯ,

ಲಿಂಗತತ್ವವನ್ನು ಕಲ್ಪಿಸಿಕೊಳ್ಳುವ ಅಥವ ಭಾವಿಸಿಕೊಳ್ಳುವ ಯತ್ನ ಮಾಡುತ್ತಿರುವೆ. ಆದರೆ ಅದು ನನ್ನ ಭಾವಕ್ಕೆ ಮೀರಿದ್ದಾಗಿದೆ.

ವಾಙ್ಮನಕ್ಕಗೋಚರ ಲಿಂಗವನರಿವ ಪರಿಯೆಂತಯ್ಯಾ, ಗುರು ತೋರದನ್ನಕ್ಕರ ?

ಮಾತಿನ ಶಬ್ಧಗಳಿಗೆˌ ಸಾಹಿತ್ಯದ ಭಂಡಾರದ ವ್ಯಾಪ್ತಿಗೆ ನಿಲುಕದ ಲಿಂಗತತ್ವವು ಗುರುವಿಲ್ಲದೆ ಅರಿಯುವ ಪರಿ ಯಾವುದಯ್ಯಾ ಎಂದು ಬಸವಣ್ಣ ಅಲ್ಲಮರನ್ನು ಪ್ರಶ್ನಿಸುತ್ತಾರೆ.

ಗುರುಶಿಷ್ಯರ ಮಥನದಲ್ಲಿ ಸ್ವಯಂಜ್ಯೋತಿಲಿಂಗವು ಉದಯವಪ್ಪುದೆಂಬ ಶ್ರುತಿ ಹುಸಿಯೆ ?

ಗುರು ಶಿಷ್ಯರ ನಡುವೆ ನಡೆಯುವ ಅನುಧಾವದ ಸಂವಾದˌ ಅಥವ ಮಂಥನದಿಂದ ಸ್ವಯಂ ಪ್ರಕಾಶಮಾನವಾದ ಲಿಂಗತತ್ವವು ಉತ್ಪತ್ತಿಯಾಗುತ್ತದೆ ಎನ್ನುವ ವೇದಪ್ರಮಾಣವು ಸುಳ್ಳಲ್ಲ.

ಕೂಡಲಸಂಗಮದೇವಾ, ನಿಮ್ಮ ಮಹಾನುಭಾವರ ಮಥನದಿಂದ ಎನ್ನಲ್ಲಿ ನಿಜವ ನೆಲೆಗೊಳಿಸಾ, ಪ್ರಭುವೆ.

ಕಲ್ಯಾಣದ ಶರಣರ ಸಾಂಗತ್ಯ ಮತ್ತು ಅವರ ಒಡನಾಟದಿಂದ ಉದ್ಭವಿಸುವ ಜ್ಞಾನದಿಂದ ನನ್ನಲ್ಲಿ ಲಿಂಗತತ್ವವು ನೆಲೆಗೊಳಿಸಿ ಕಾಪಾಡು ಎಂದು ಅಲ್ಲಮರನ್ನು ಬಸವಣ್ಣ ವಿನಂತಿಸು ವಿನಮ್ರ ಭಾವ ಈ ವಚನದಲ್ಲಿ ಬಿಂಬಿತವಾಗಿದೆ.

~ ಡಾ. ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!