Breaking News
Home / featured / ಮದ್ಯಪಾನ ನಿಷೇಧದಿಂದ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ

ಮದ್ಯಪಾನ ನಿಷೇಧದಿಂದ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ

 

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
ಬಸವಕೇಂದ್ರ, ಶಿವಮೊಗ್ಗ.

ಅಡಗ ತಿಂಬರು; ಕಣಿಕದ ಅಡಿಗೆಯಿರಲ್ಕೆ.
ಕುಡಿವರು ಸುರೆಯ, ಹಾಲಿರಲ್ಕೆ.
ಬಂಗಿಯ ಮುಕ್ಕುವರು, ಸಕ್ಕರೆ ಇರಲ್ಕೆ.
ಸ್ವಸ್ತ್ರೀ ಇದ್ದಂತೆ ಪರಸ್ತ್ರೀಗಳುಪುವರು.
ಸತ್ತ ನಾಯ ಭಕ್ಷಿಸುವ ಹಡಕಿಗರನೇನೆಂಬೆನಯ್ಯ ರಾಮನಾಥ!
-ಜೇಡರ ದಾಸಿಮಯ್ಯ

ಒಳ್ಳೆಯ ಗೋಧಿಯಿಂದ ಮಾಡಿದ ಅಡಿಗೆಯಿದ್ದರೂ ಮಾಂಸ ತಿನ್ನುವ, ಅಮೃತ ಸಮನಾದ ಹಾಲಿದ್ದರೂ ಹೆಂಡ ಕುಡಿಯುವ, ಸಕ್ಕರೆ ತಿಂದು ಸುಖಿಸುವುದ ಬಿಟ್ಟು ಭಂಗಿ ಸೊಪ್ಪು ಸೇದುವ ಹಾಗು ತನ್ನ ಹೆಂಡತಿಯಿದ್ದರೂ ಪರ ಹೆಣ್ಣನ್ನು ಮೋಹಿಸುವ ಜನರು ಸತ್ತ ನಾಯಿಯನ್ನು ತಿನ್ನುವಂಥವರು, ಹೇಸಿಗೆಯ ಬದುಕು ಅವರದು. ಹೀಗೆ ತನ್ನ ಕಾಲದಲ್ಲಿದ್ದ ಕೆಲವು ದುಶ್ಚಟಗಳನ್ನು ಕಂಡು ಸಿಟ್ಟಾಗಿ ದಾಸಿಮಯ್ಯ ನುಡಿದಿದ್ದಾರೆ. ಇಂದು ಅತಿಯಾಗಿರುವ ದುಶ್ಚಟಗಳ ಆಟಾಟೋಪವನ್ನು ಕಂಡಿದ್ದರೆ ಅವರಿಗೆಷ್ಟು ಸಿಟ್ಟು ಬರುತ್ತಿತ್ತೋ? ಅವರ ಸಿಟ್ಟು ಈ ದುಶ್ಚಟಗಳಿಂದ ಬದುಕು ಹಾಳಾಗಿಬಿಡುತ್ತದೆ ಎಂಬ ಕಾರಣಕ್ಕೆ ಹೊರತು ಮನುಷ್ಯನ ಮೇಲಲ್ಲ. ಚಟಗಳಿಂದ ಮುಕ್ತನಾದರೆ ಅವನು ಎಷ್ಟೋ ಉತ್ತಮನಾಗಿ ಬದುಕಬಲ್ಲ. ಅವನ ಕುಟುಂಬವೂ ನೆಮ್ಮದಿಯಿಂದ ಇರಬಹುದು.

ಕೋವಿಡ್-೧೯ ಕಾರಣಕ್ಕೆ ನಿರ್ಬಂಧದ ಜೀವನ ನಡೆಸಬೇಕಾದ ಈ ಸಂದರ್ಭವನ್ನು ಚಟಸ್ಥರು ದುಶ್ಚಟಗಳಿಂದ ಹೊರಬರಲು ಒದಗಿದ  ಅತ್ಯುತ್ತಮ ಅವಕಾಶ ಎಂದು ಭಾವಿಸಿಕೊಂಡು ಚಟಮುಕ್ತರಾಗುವ ಸಂಕಲ್ಪ ಮಾಡಬೇಕಾಗಿದೆ. ಚಟ ಮಾಡಲು ಅವಕಾಶವಿಲ್ಲದೆ ಮಾಸಿಕ, ದೈಹಿಕ ಸಮಸ್ಯೆಗಳಿಂದ ಬಳಲುವ ಅಂಥವರಿಗೆ ಸೂಕ್ತ ಆಪ್ತ ಸಮಾಲೋಚನೆ ಮತ್ತು ವೈದ್ಯಕೀಯ ಪರಿಹಾರಗಳನ್ನು ಒದಗಿಸುವ ಕೆಲಸವನ್ನು ಅವರೊಂದಿಗೆ ಇರುವವರು ಮಾಡಬೇಕಾಗಿದೆ. ಆ ಮೂಲಕ ದುಶ್ಚಟ ಮುಕ್ತ ನಾಡು ಸ್ಥಾಪನೆಯಾಗಬೇಕಿದೆ.

ಸಾಂದರ್ಭಿಕ ಚಿತ್ರ

ಮದ್ಯಪಾನದಿಂದ ಜನರನ್ನು ಮುಕ್ತಗೊಳಿಸಲು ಸರಕಾರವೇ ಮದ್ಯಪಾನ ಸಂಯಮ ಮಂಡಳಿಯನ್ನು ಅಸ್ತಿತ್ವಕ್ಕೆ ತಂದಿದೆ. ಈ ಸಂಸ್ಥೆ ಇಲ್ಲಿಯವರೆಗೆ ಯಾವ ಘನಕಾರ್ಯ ಮಾಡಿದೆಯೆಂಬುದಂತೂ ನಮಗಾರಿಗೂ ತಿಳಿದಿಲ್ಲ. ಕರೋನಾದಿಂದ ಉಂಟಾಗಿರುವ ಈ ದಿಗ್ಬಂಧನದ ಸಂದರ್ಭವನ್ನು ಬಳಸಿಕೊಂಡು ಮದ್ಯಪಾನ ಸಂಯಮ ಮಂಡಳಿಯು ಇತರೆ ಧಾರ್ಮಿಕ, ಸಾಮಾಜಿಕ ಸಂಘಟನೆಗಳೊಂದಿಗೆ ಕೈಜೋಡಿಸಿ ಮದ್ಯಪಾನಿಗಳಲ್ಲಿ ಸಂಯಮ ಮೂಡಿಸಿ ಅವರನ್ನು ಚಟಮುಕ್ತರನ್ನಾಗಿ ಮಾಡಿ ತನ್ನ ಅಸ್ತಿತ್ವವನ್ನು ಸಾಬೀತು ಪಡಿಸಿಕೊಳ್ಳಬೇಕಿದೆ. ಮನೋ ವೈಜ್ಞಾನಿಕ ನೆಲೆಯಲ್ಲಿ ಇಂತಹ ಕಾರ್ಯ ಮಾಡುವುದು ಬಿಟ್ಟು ಸರ್ಕಾರ ಮತ್ತೆ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಿರುವುದು ದುರದೃಷ್ಟಕರ. ಇದಕ್ಕೆ ಕೊಡುವ ಕಾರಣ, ನಮ್ಮ ರಾಜ್ಯವೊಂದಕ್ಕೇ ವಾರ್ಷಿಕ ಸುಮಾರು ೨೨ಸಾವಿರ ಕೋಟಿ ಆದಾಯ ನಷ್ಟವಾಗುತ್ತದೆ ಎಂದು. ಇದು ಪ್ರತ್ಯಕ್ಷ ಆದಾಯವಾದರೆ, ಮದ್ಯಪಾನದಿಂದ ಉಂಟಾಗುವ ಸಾಮಾಜಿಕ, ನೈತಿಕ, ಕೌಟುಂಬಿಕ ಹಾಗು ಆರೋಗ್ಯದ ಸಮಸ್ಯೆಗಳಿಂದ ಪರೋಕ್ಷವಾಗಿ ಈ ಆದಾಯದ ಎರಡು ಮೂರು ಪಟ್ಟು ನಷ್ಟ ಉಂಟಾಗುತ್ತದೆ ಎಂಬುದನ್ನು ಗಮನಿಸಬೇಕು.

೨೦೨೦ ಈ ವರ್ಷ ಭಾರತದಲ್ಲಿ ಜಗತ್ತಿನ ಯಾವುದೇ ದೇಶದಲ್ಲಿರಲಾರದಷ್ಟು ಯುವಕರಿದ್ದಾರೆ. ಇಂದು ದೃಷ್ಯ ಮಾದ್ಯಮಗಳಲ್ಲಿ ಮದ್ಯಕ್ಕಾಗಿ ಸಾಲುಗಟ್ಟಿರುವ ಯುವಕರ ಸಂಖ್ಯೆ ನೋಡಿ ಆತಂಕವಾಯಿತು. ನಾವೆಲ್ಲ ಸೇರಿ ಯುವ ಜನರನ್ನು ಸಬಲರಾಗಿಸುವುದನ್ನು ಬಿಟ್ಟು ದುರ್ಬಲರನ್ನಾಗಿಸುತಿದ್ದೇವೆಯೇ?

ಆಲ್ಕೋಹಾಲ್ ಮೂಲಕ ಆದಾಯ ಹೊಂದಲು ಜನರಿಗೆ ಅದನ್ನು ಕುಡಿಸು ನೀಚ ಕಾರ್ಯಕ್ಕೆ ಇಳಿಯದೇ, ಅದರ ಇತರೆ ಉಪಯೋಗಗಳೆಡೆಗೂ ಗಮನಹರಿಸಬೇಕಾಗಿದೆ. ಅಮೆರಿಕಾ ಪ್ರತೀ ವರ್ಷ ೮೩೮ ಬ್ಯಾರಲ್ನಷ್ಟು ಆಲ್ಕೋಹಾಲನ್ನು ಇಂಧನವಾಗಿ ಬಳಸುತ್ತಿದೆ. ಭಾರತ ಕೇವಲ ೫.೩೦ ಬ್ಯಾರಲ್ ಅಷ್ಟೇ ಬಳಸುತ್ತಿರುವುದು. ಸಾರಿಗೆ, ಕೈಗಾರಿಕಾ ರಂಗಗಳಲ್ಲಿ ಇಂಧನವಾಗಿ ಆಲ್ಕೋಹಾಲನ್ನು ಬಳಸಿಕೊಳ್ಳುವ ಇತರೆ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಅದಕ್ಕೂ ಮೊದಲು ಕೇಂದ್ರ ಹಾಗು ರಾಜ್ಯ ಸರಕಾರಗಳು ತಕ್ಷಣದಿಂದ ಮದ್ಯ ನಿಷೇದವನ್ನು ಜಾರಿಗೊಳಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ
ಬಸವಕೇಂದ್ರ, ಶಿವಮೊಗ್ಗ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಡೊಂಗಿ ಮಂತ್ರವಾದಿ ಲಪಟಾಯಿಸಿದ್ದು 6 ಕೋಟಿ

  ಬೆಳಗಾವಿ: ಖ್ಯಾತ ಸಂಗೀತ ಸಂಯೋಜಕ ಕೆ.ಕಲ್ಯಾಣ ಅವರ ದಾಂಪತ್ಯ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಡೊಂಗಿ ಮಂತ್ರವಾದಿ ಲಪಟಾಯಿಸಿದ …

Leave a Reply

Your email address will not be published. Required fields are marked *

error: Content is protected !!