ಬೌದ್ಧ ಪೂರ್ಣಿಮೆ ಶುಭಾಶಯಗಳು
ಈಗೆಲ್ಲ ಹಿಂದೂ ಧರ್ಮದ ಕೊಡುಗೆ ಅಂತ ಹೇಳಿಕೊಳ್ಳುತ್ತಿರುವುದೆಲ್ಲ ವಾಸ್ತವವಾಗಿ ಬೌದ್ಧಧರ್ಮದ ಕೊಡುಗೆ. ಒಂದೊಂದಾಗಿ ಉದಾಹರಿಸುವುದಾದರೆ,
೧. ಗೋಹತ್ಯೆ ನಿಷೇಧ:
ವೇದಕಾಲದಲ್ಲಿ ಮಹರ್ಷಿಗಳು ಪುರೋಹಿತರು ಮತ್ತು ಜನಸಾಮಾನ್ಯರು ದನದ ಮಾಂಸ ತಿನ್ನುತ್ತಿದ್ದುದು ಎಲ್ಲರಿಗೂ ಗೊತ್ತಿರುವುದೇ. ಜನರು ಪೂಜೆಗೆಂದು ಪುರೋಹಿತರನ್ನು ಕರೆದಾಗ ಅವರಿಗೆ ಕಡ್ಡಾಯವಾಗಿ ದನವನ್ನು ಕಡಿದು ಬಡಿಸಬೇಕಿತ್ತು. ಯೌವನಿಗರಾದರೆ ಹೋರಿಯನ್ನೂ, ಮುದುಕರು ಬಂದರೆ ಎಳೆಗರುವನ್ನೂ ಕಡಿದು ಬಡಿಸಬೇಕಿತ್ತು. ಆಗ ತಾನೆ ಕೃಷಿ ಸ್ಥಿರವಾಗಿದ್ದ ಸಮಯದಲ್ಲಿ ದನಕರುಗಳು ಮುಖ್ಯ ಆಸ್ತಿಯಾಗಿದ್ದವು. ಕೃಷಿಗೆ ಹೊಡೆತ ಬೀಳುತ್ತಿರುವುದನ್ನು ಕಂಡು ಬುದ್ದ ದನಗಳನ್ನು ಕೊಲ್ಲದಂತೆ ಜನರ ಮನವೊಲಿಸಿ ಸತ್ತ ದನಗಳನ್ನು ಮಾತ್ರ ತಿನ್ನಬೇಕು ಎಂಬ ವ್ಯವಸ್ಥೆಯನ್ನು ಜಾರಿಗೆ ತಂದ.
೨. ಅಹಿಂಸೆ:
ಆಗ ಚಿಕ್ಕ ಚಿಕ್ಕ ಬುಡಕಟ್ಟು ಗುಂಪುಗಳಿದ್ದವು. ಇವುಗಳನ್ನು ಗಣಗಳೆಂದೂ ಇವುಗಳ ಮುಖ್ಯಸ್ಥರನ್ನು ಗಣಪತಿಗಳೆಂದೂ ಕರೆಯುತ್ತಿದ್ದರು. ಅವುಗಳ ನಡುವೆ ಅಪಾರ ಜಗಳಗಳಾಗುತ್ತಿದ್ದವು. ಸಾವುನೋವುಗಳಾಗುತ್ತಿದ್ದವು. ಬುದ್ದ ಗಣಗಳಿಗೆಲ್ಲ ಅಹಿಂಸೆಯನ್ನು ಬೋಧಿಸಿ ಅವುಗಳ ನಡುವೆ ಸಾಮರಸ್ಯವನ್ನು ತಂದ.
೩. ಕಾವಿ/ಕೇಸರಿ:
ಬುದ್ಧ ತನ್ನ ಹೆಂಡತಿ ಮಗುವನ್ನು ತೊರೆದು ಸತ್ಯವನ್ನರಸಿ ಹೊರಟಾಗ ಆತ ಕೆಂಪು ಮತ್ತು ಹಳದಿ ಬಣ್ಣದ ನಡುವಿನ ಬಣ್ಣದ ಬಟ್ಟೆಯನ್ನು ತೊಟ್ಟಿದ್ದ ಎಂದು ಅನೇಕ ಉಲ್ಲೇಕಗಳು ಬರುತ್ತವೆ, ಇದೇ ಬಣ್ಣದ ಬಟ್ಟೆಯಲ್ಲೇ ಬುದ್ದ ತನ್ನ ಜೀವನವನ್ನು ಕಳೆದ. ಈ ಬಣ್ಣವೇ ಮುಂದೆ ವಿಕಾಸವಾಗುತ್ತಾ ಬಂದಿತು,
೪. ಮೂರ್ತಿ ಪೂಜೆ:
ವೇದಗಳಲ್ಲಿ ಮುಲತಃ ಮೂರ್ತಿ ಪೂಜೆ ಇಲ್ಲ. ಬುದ್ಧನ ನಂತರ ಧರ್ಮಪ್ರಸಾರಕ್ಕಾಗಿ ಹಾಗೂ ರಾಜರುಗಳ ಬೆಂಬಲದಿಂದ ಸಾವಿರಾರು ಸ್ಥೂಪಗಳು ನಿರ್ಮಾಣವಾದವು. ಮೂರ್ತಿಗಳು ನಿರ್ಮಾಣವಾದವು, ಬುದ್ಧನನ್ನು ವಿತ್ರಿಸಲೇಮ ತತ್ವಗಳನ್ನು ಚಿತ್ರಿಸಲೇ ಕಲಾಪ್ರಕಾರಗಳು ಹುಟ್ಟಿಕೊಂಡವು. ಶುಷ್ಕಗೊಂಡಿದ್ದ ಆಧ್ಯಾತ್ಮಕ್ಕೆ ಹೊಸ ಲವಲವಿಕೆ ತಂದುಕೊಟ್ಟದ್ದು ಈ ಕಲಾಪ್ರಕಾರಗಳು. ಮುಂದೆ ಸಾಕಷ್ಟು ಬುದ್ಧ ಮೂರ್ತಿಗಳು ವಿಷ್ಣು ಮೂರ್ತಿಗಳಾಗಿಯೂ ಸ್ತೂಪ ಬಸದಿಗಳುದ ದೇವಸ್ಥಾನಗಳಾಗಿಯೂ ಬದಲಾದವು.
೫. ಬ್ರಹ್ಮಚರ್ಯ:
ಬುದ್ಧನ ಅಷ್ಟಶೀಲಗಳಲ್ಲಿ ಬ್ರಹ್ಮಚರ್ಯವೂ ಒಂದು. ಮೊದಲು ದೈಹಿಕ ಸಂಯಮವನ್ನು ಸಮಾಜಕ್ಕೆ ಬೋಧಿಸಿದವನು ಬುದ್ಧ.
೬. ಧ್ಯಾನ:
ಮನೆ ಬಿಟ್ಟ ಆರು ವರ್ಷಗಳ ಕಾಲದ ತನ್ನ ದೈನಂದಿನ ತಿರುಗಾಟದಲ್ಲಿ ಬುದ್ಧ ಪ್ರತಿದಿನ ಸಾವು ನೋವುಗಳನ್ನು ಜನರ ನರಳುವಿಕೆಯನ್ನು ಕಂಡು ವಿಚಲಿತಗೊಳ್ಳುತ್ತಿದ್ದ. ಹೀಗೆ ವಿಚಲಿತಗೊಂಡ ಮನಸ್ಸಿಗೆ ಧಾರ್ಢ್ಯ ತಂದುಕೊಡಲು ಮನಸ್ಸನ್ನು ತಿಳಿಗೊಳಿಸಲು ಸಕಲ ಯೋಚನೆಗಳನ್ನೂ ತಟಸ್ಥಗೊಳಿಸಲು ಬುದ್ದ ಕಂಡುಕೊಂಡ ಮಾರ್ಗವೇ ಧ್ಯಾನ.
೭. ಕಮಲ:
ಬಿಳಿ ಕಮಲ ಬುದ್ಧನಿಗೆ ಪ್ರಿಯವಾದುದು. ಬೌದ್ಧರಿಗೆ ಪವಿತ್ರ ಎಂದು ಪರಿಗಣಿಸಲ್ಪಡುತ್ತದೆ. ಕಮಲದ ಮೇಲೆ ಕುಳಿತಂತೆಯೇ ಬುದ್ಧನ ಮೂರ್ತಿಗಳು ಸಾಕಷ್ಟು ಕಡೆ ಚಿತ್ರಿತವಾಗಿವೆ ಮತ್ತು ಮೂರ್ತಿಗಳು ಕೆತ್ತಲ್ಪಟ್ಟಿವೆ. ಇದನ್ನು ಮುಂದೆ ಹಿಂದೂ ಮೂರ್ತಿಗಳನ್ನು ಕೆತ್ತುವಾಗ ಎರವಲು ಪಡೆಯಲಾಗಿದೆ.
೮. ಮುದ್ರೆಗಳು:
ಆಶೀರ್ವಾದ ಮಾಡುತ್ತಿರುವ ಎಲ್ಲಾ ದೇವರ ಮುದ್ರೆಗಳು ಬುದ್ಧನ ಅಂಗೈ ಮುದ್ರೆಯೇ! ಯೋಗಮುದ್ರೆಗಳೆಲ್ಲ ಬೌದ್ಧ ಧರ್ಮದ ಕೊಡುಗೆಗಳು.
ಹಿಂದೂ ಧರ್ಮವಿಲ್ಲದೆ ಭಾರತ ದರ್ಶನವಾಗಬಹುದು ಆದರೆ ಬೌದ್ಧ ಧರ್ಮವಿಲ್ಲದೇ ಭಾರತ ದರ್ಶನ ಸಾಧ್ಯವಿಲ್ಲ! ಬೌದ್ಧ ಧರ್ಮ ಮೂಲ ಜನಪದ ಧರ್ಮ.
ಲೇಖನ: ಶ್ರೀಹರ್ಷ ಸಾಲಿಮಠ