Breaking News
Home / featured / ಬಸವ ಧರ್ಮದ ಬಲಿದಾನ ಕ್ಷೇತ್ರ ಕಲ್ಯಾಣಮ್ಮನವರ ಐಕ್ಯಕ್ಷೇತ್ರ ತಿಗಡಿ

ಬಸವ ಧರ್ಮದ ಬಲಿದಾನ ಕ್ಷೇತ್ರ ಕಲ್ಯಾಣಮ್ಮನವರ ಐಕ್ಯಕ್ಷೇತ್ರ ತಿಗಡಿ

ಬೆಳಗಾವಿ: ಸಮಾಜದ ಕಟ್ಟ ಕಡೆಯ ಮಹಾಜ್ಞಾನಿಗಳಿಗೆ ಅಕ್ಷರ ಕಲಿಸಬೇಕೆಂಬ ಅಕ್ಷರ ಅಭಿಯಾನದಿಂದ ಆರಂಭವಾಗಿದ್ದ ಬಸವಾಕ್ಷರ ಕ್ರಾಂತಿಯೊಂದು ವಚನ ಚಳುವಳಿಯಾಗಿ ಮಾರ್ಪಟ್ಟು, ಆ ವಚನ ಚಳುವಳಿಯು ಲಕ್ಷಾಂತರ ಶರಣರ ಬಲಿದಾನದಿಂದ ಮಹೋನ್ನತ ಲಿಂಗಾಯತ ಧರ್ಮವಾಗಿ ರೂಪುಗೊಂಡಿರುವ 12 ನೇ ಶತಮಾನದ ಬಸವಾದಿ ಶರಣರ ಕ್ರಾಂತಿಯೂ ಜಗತ್ತಿನ ಬಹುದೊಡ್ಡ ವಿಸ್ಮಯ.

ಲೋಕದ ಮಹಾಜ್ಞಾನ ಅಡಗಿರುವುದೆ ಕಾಯಕ ಜೀವಿಗಳಲ್ಲಿ ಎಂಬುದನ್ನು ಗುರುತಿಸಿದ್ದ ಬಸವಣ್ಣನವರ ಅಕ್ಷರ ಕ್ರಾಂತಿಯ ಆಯ್ಕೆಯೇ ದಿಗ್ಭ್ರಮೆ ಮೂಡಿಸುವಂತಹದು. ಅಕ್ಷರಗಳನ್ನು ದೂರದಿಂದ ನೋಡಲಿಕ್ಕೂ ಅಧಿಕಾರ ಇಲ್ಲದಿದ್ದ ಆ ಕಾಲಘಟ್ಟದಲ್ಲಿ ಬಸವಣ್ಣನವರ ಆ ಆಯ್ಕೆಯು ಭಯ ಹುಟ್ಟಿಸುವಂತಹದು. ಸಾಧಿಸಲೇ ಬೇಕು ಎಂಬ ಛಲವು ಆ ಭಯವನ್ನು ಮೆಟ್ಟಿ ನಿಂತಿತ್ತು.
ಆ ಕಾಯಕ ಜೀವಿಗಳಲ್ಲಿ ವಿವಿಧ ವೃತ್ತಿಗಳ ಪ್ರಾವಿಣ್ಯತೆ ಇತ್ತು. ಲೋಕದ ಅನುಭವ ಇತ್ತು. ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಆಕ್ರೋಶ ಇತ್ತು. ಆಚಾರ್ಯ ಅಮಾತ್ಯರು ಸೃಷ್ಟಿಸಿದ್ದ ಕೃತಕ ಹಸಿವಿನ ತಳಮಳ ಇತ್ತು. ತಲೆಯ ಮೇಲೆ ಸೂರಿಲ್ಲದ, ಅರೆನಗ್ನ ಜೀವನದಿಂದ ಬಿಡುಗಡೆ ಬೇಕಾಗಿತ್ತು. ಮಾತನಾಡುವ ಸ್ವಾತಂತ್ರ್ಯ ಬೇಕಾಗಿತ್ತು. ಭಾವನೆಗಳ ಅಭಿವ್ಯಕ್ತಿಗೆ ವೇದಿಕೆ ಬೇಕಾಗಿತ್ತು. ಮನುಷ್ಯ ಮನುಷ್ಯನನ್ನು ಪ್ರೀತಿಸುವದನ್ನು ಕಲಿಸುವ ಧರ್ಮ ಬೇಕಾಗಿತ್ತು.

ಬಸವಣ್ಣನವರ ಅಕ್ಷರ ಕ್ರಾಂತಿ ಈ ಎಲ್ಲದಕ್ಕೂ ಪ್ರಬಲ ಅಸ್ತ್ರವಾಯಿತು. ಕಾಯಕ ಜೀವಿಗಳೆಲ್ಲರು ಮೈಗೊಡವಿ ಎದ್ದು ಬಂದರು. ಅಕ್ಷರ ಕಲಿತರು. ಅಕ್ಷರ ಜೋಡಿಸಿದರು. ವಚನ ಸಾಹಿತ್ಯ ಎಂಬ ಜಗತ್ತಿನ ಪ್ರಪ್ರಥಮ ಜನಪರ, ಪ್ರಪ್ರಥಮ ಬಂಡಾಯ, ಪ್ರಪ್ರಥಮ ವೈಚಾರಿಕ ಚಿಂತನೆಗಳ ಅತ್ಯಂತ ಗಟ್ಟಿಯಾದ ಸಾಹಿತ್ಯ ಮೂಡಿಬಂತು. ಅನುಭವ ಮಂಟಪವು ಕರ್ತಾರನ ಕಮ್ಮಟವಾಯಿತು. ತಾವೇ ದೇವರಾದರು. ವಚನ ಸಾಹಿತ್ಯವೇ ಬಸವಾದಿ ಶರಣರ ಜೀವನವಾಯಿತು. ವಿನೂತನ ಧರ್ಮವೇ ಉಸಿರಾಯಿತು. ಮಹಿಳೆಯರು ಮಕ್ಕಳೆನ್ನದೆ ಇಡಿ ಶೋಷಿತ ಸಮುದಾಯಗಳಿಗಾಗಿ ಸರ್ವ ಸಮ್ಮತ ಧರ್ಮ ನೀಡಿದ್ದೆ ಬಸವ ಕ್ರಾಂತಿಯ ಜಗಮೆಚ್ಚುವ ಸಾಧನೆ.

ಸಾಹಿತ್ಯ ಮತ್ತು ಧರ್ಮ ಬೇಕಾ ಅಥವಾ ಅಧಿಕಾರ ಬೇಕಾ ಎಂಬ ಪ್ರಶ್ನೆ ಎದುರಾದಾಗ ಬಸವಣ್ಣನವರು ಧರ್ಮ ಮತ್ತು ಸಾಹಿತ್ಯವನ್ನೆ ಆಯ್ಕೆ ಮಾಡಿಕೊಂಡರು. ಲೌಕಿಕ ಬದುಕು ಬೇಕಾ ಅಥವಾ ಸಾಹಿತ್ಯ ಮತ್ತು ಧರ್ಮ ಬೇಕಾ ಎಂಬ ಪ್ರಶ್ನೆ ಎದುರಾದಾಗ ಆ ಬಸವಣ್ಣನವರ ಮಕ್ಕಳು ಸಾಹಿತ್ಯ ಮತ್ತು ಧರ್ಮವನ್ನೆ ಆಯ್ಕೆ ಮಾಡಿಕೊಂಡರು. ಧರ್ಮ ಮತ್ತು ಸಾಹಿತ್ಯದ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನು ಬಲಿ ನೀಡಿದರು. ಆ ನಿರ್ಭಯ ಹುತಾತ್ಮರ ಬಲಿದಾನದಿಂದ ಇಂದಿಗೂ ಧರ್ಮ ಮತ್ತು ಸಾಹಿತ್ಯ ಉಳಿದುಕೊಂಡಿದೆ.

ಬಸವಣ್ಣನವರು ರೂಪಿಸಿಕೊಟ್ಟಿದ್ದ ಇಷ್ಟಲಿಂಗದ, ಕಾಯಕ-ದಾಸೋಹದ ವಿನೂತನ ಲಿಂಗಾಯತ ಧರ್ಮದ ರಕ್ಷಣೆಗಾಗಿ ಮೊದಲ ಬಲಿದಾನ ನೀಡಿದವರು, ಸಮಗಾರ ಹರಳಯ್ಯ, ಶೀಲವಂತ ಮತ್ತು ಮಧುವರಸರು. ನಂತರ ಧರ್ಮ ಮತ್ತು ಸಾಹಿತ್ಯದ ರಕ್ಷಣೆಗಾಗಿ ನಡೆದ ಬಲಿದಾನಗಳಿಗೆ ಲೆಕ್ಕ ಇಲ್ಲ. ಆ ಬಲಿದಾನಗಳೇ ಧರ್ಮವನ್ನು ಗಟ್ಟಿಗೊಳಿಸಿತು. ಸಾಹಿತ್ಯವನ್ನು ಉಳಿಸಿತು.
ಲಿಂಗಾಯತ ಧರ್ಮಕ್ಕೆ ಮೊದಲ ಬಲಿದಾನ ನೀಡಿರುವ ಸಮಗಾರ ಹರಳಯ್ಯನವರ ಧರ್ಮಪತ್ನಿ ಕಲ್ಯಾಣಮ್ಮನವರ ಸಮಾಧಿಯು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿದೆ. ಬೆಳಗಾವಿ ನಗರದಿಂದ ಕೇವಲ 25 ಕೀ.ಮೀ. ಅಂತರದಲ್ಲಿರುವ ಆ ಕ್ಷೇತ್ರವು ಬಸವ ಧರ್ಮದ ಬಲಿದಾನ ಕ್ಷೇತ್ರ. ಧರ್ಮಕ್ಕಾಗಿ ತನ್ನ ಪತಿ ಮತ್ತು ಮಗನನ್ನು ಕಳೆದುಕೊಂಡ ನಂತರವೂ ಧರ್ಮ ಮತ್ತು ಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಆ ಮಹಾತಾಯಿಯ ಸೇವೆ ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಪ್ರತಿಯೊಬ್ಬ ಲಿಂಗಾಯತರು ಆ ಮಹಾತಾಯಿಯ ಸನ್ನಿದಿಗೆ ಬಂದು ಕೈ ಮುಗಿಯಲೇ ಬೇಕು.
ನನಗೆ ಧರ್ಮದ ಹೋರಾಟಕ್ಕೆ ಆ ಕ್ಷೇತ್ರ ಅತ್ಯಂತ ಪ್ರೇರಣಾದಾಯಕ.

ಕೊರೋನಾ ಲಾಕ್ ಡೌನದಿಂದಾಗಿ ಕಳೆದ ಒಂದುವರೆ ತಿಂಗಳಿನಿಂದ ಆ ಕ್ಷೇತ್ರಕ್ಕೆ ಹೋಗಲಿಕ್ಕೆ ಆಗಿರಲಿಲ್ಲ. ಈಗ ಬಿಡುವು ಆಗಿದ್ದರಿಂದ ಆ ಕ್ಷೇತ್ರಕ್ಕೆ ಹೋಗಿ, ಆ ಮಹಾತಾಯಿಯ ದರ್ಶನ ಪಡೆದೆ. ಈ ಅವಧಿಯಲ್ಲಿ ಅನೇಕ ದೇವಾಲಯಗಳಿಗೆ ಬೀಗ ಬಿದ್ದಿದೆ. ಆದರೆ, ಆ ಗದ್ದುಗೆಯ ಪೂಜಾರಿ ಬಸಪ್ಪ ರಾಮತಿ ಅವರು ಒಂದು ದಿನವೂ ಪೂಜೆಯನ್ನು ತಪ್ಪಿಸಿಲ್ಲ. ಅಲ್ಲಿ ನಿರಂತರ ಪೂಜೆ ನಡೆದಿದೆ. ಈ ಜೀವಂತಿಕೆಯೇ ಬಸವಾದಿ ಶರಣರ ಐಕ್ಯ ಕ್ಷೇತ್ರಗಳ ಸತ್ವ ಮತ್ತು ಶಕ್ತಿ.

ಲಿಂಗಾಯತರೆಲ್ಲರು ವರ್ಷಕ್ಕೊಮ್ಮೆಯಾದರೋ ಈ ಕ್ಷೇತ್ರಕ್ಕೆ ಬನ್ನಿರಿ.

ಶರಣು ಶರಣಾರ್ಥಿಗಳು
ಆರ್.ಎಸ್.ದರ್ಗೆ, ಪತ್ರಕರ್ತ
ಬೆಳಗಾವಿ. ಮೋ.ನಂ.9986710560

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!