Breaking News
Home / featured / ಸುಕ್ಷೇತ್ರ ದೇವನೂರು ಗುರುಮಲ್ಲೇಶ್ವರ ಇತಿಹಾಸ

ಸುಕ್ಷೇತ್ರ ದೇವನೂರು ಗುರುಮಲ್ಲೇಶ್ವರ ಇತಿಹಾಸ

ನಂಜನಗೂಡು: ಹನ್ನೆರಡನೆಯ ಶತಮಾನದಲ್ಲಿ ಕಾಯಕ-ದಾಸೋಹ ತತ್ತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 19ನೇ ಶತಮಾನದ ಪೂರ್ವಾರ್ಧಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀಮನ್ನಿರಂಜನ ಗುರುಮಲ್ಲೇಶ್ವರರ ಕಾಲದಲ್ಲಿ. ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ತ್ವವು ಶ್ರೀಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು!

ಹೊನ್ನಾಳಿ ತಾಲ್ಲೂಕಿನ ಚವುಳಂಗ ಗ್ರಾಮ ಶ್ರೀಗುರು ಮಲ್ಲೇಶ್ವರರ ಪೂರ್ವಿಕರಿದ್ದ ಸ್ಥಳ. ಅಲ್ಲಿ ನಂದಿಬಸವಾರ್ಯರೆಂಬ ಗೃಹಸ್ಥರು. ಇವರ ಮಗ ಶರಣಪ್ಪ. ಇವರ ಪತ್ನಿ ಶರ್ವಾಣಮ್ಮ. ಶರಣಪ್ಪನವರಿಗೆ ಶಿವಾಂಬೆ ಎಂಬ ಇನ್ನೊಬ್ಬ ಮಡದಿ ಇದ್ದರೆಂದು ಹೇಳಲಾಗಿದೆ. ಇಂಥ ಶಿವದಂಪತಿಗಳ ಮಗನೇ ಗುರುಮಲ್ಲೇಶ. ಇವರು 1827ರ ಅವಧಿಯಲ್ಲಿ ಜನಿಸಿದರೆಂದು ಹೇಳಲಾಗುತ್ತಿದೆ. ಶರಣಪ್ಪ ದಂಪತಿ ಗುರು-ಲಿಂಗ-ಜಂಗಮ ಪ್ರೇಮಿಗಳು. ಇವರ ಮನೆ ದಾಸೋಹಕ್ಕೆ ಹೆಸರಾಗಿತ್ತು. ಬಾಲಕ ಗುರುಮಲ್ಲೇಶ ಮತ್ತು ಶರಣಪ್ಪ ದಂಪತಿ ಚವುಳಂಗದಿಂದ ಮೈಸೂರಿಗೆ ಬಂದು ನೆಲೆಸಿದರು. ಇದಕ್ಕೆ ಎರಡು-ಮೂರು ಕಾರಣಗಳನ್ನು ಹೇಳುತ್ತಾರೆ. ಅವುಗಳಲ್ಲಿ ವಾಸ್ತವಿಕವಾದದ್ದು ಇದೆಂದು ತೋರುತ್ತದೆ. ಶರಣಪ್ಪ ದಂಪತಿ ಮಾಡುತ್ತಿದ್ದ ಧರ್ಮಪ್ರಸಾರ ಹಾಗೂ ದಾಸೋಹಕಾರ್ಯಗಳ ಜನಪ್ರಿಯತೆ ಆಗ ಮೈಸೂರನ್ನು ಆಳುತ್ತಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿಯುತ್ತದೆ. ಉದಾರ ಚರಿತರೂ ಧರ್ವಭಿ ಮಾನಿಗಳೂ ಆದ ಮಹಾರಾಜರು ಚವುಳಂಗ ಸಮೀಪದ ಜೋಡಿಗ್ರಾಮಗಳನ್ನು ಹಾಗೂ ನ್ಯಾಮತಿಗೆ ಹೋಗುವ ಮಾರ್ಗದಲ್ಲಿರುವ ಶಿವಾಲಯದ ಸಮೀಪದ ಹಿರೇಹಳ್ಳದ ಜಮೀನನ್ನು ಇವರಿಗೆ ಇನಾಮಾಗಿ ನೀಡಿದ್ದರು. ಈ ಹೊಲಗಳಿಂದ ಬಂದ ಆದಾಯದಿಂದ ಗುರು-ಲಿಂಗ-ಜಂಗಮ ಸೇವೆ ಮಾಡಿಕೊಂಡು ದಂಪತಿ ಇರುತ್ತಿದ್ದರು. ಆಗಾಗ್ಗೆ ಮೈಸೂರಿಗೆ ಮಹಾರಾಜರನ್ನು ನೋಡಲು ಬರುತ್ತಿದ್ದುದೂ ಉಂಟು. ಹೀಗೆ ಬಂದಾಗ, ದೀವಟಿಗೆಯ ಬೀದಿಯಲ್ಲಿದ್ದ ಅನೇಕ ವೀರಶೈವಮಠಗಳಿಗೆ ಭೇಟಿನೀಡಿ ಸ್ವಾಮಿಗಳ ದರ್ಶನಾಶೀರ್ವಾದ ಪಡೆಯುತ್ತಿದ್ದರು. ಇಲ್ಲಿದ್ದ ಅನೇಕ ಮಠಗಳಲ್ಲಿ ಚೌಕಿಮಠವೂ ಒಂದು. ಈ ಮಠದ ಸ್ವಾಮಿಗಳಾಗಿದ್ದವರು ಶ್ರೀಗುರುಮಲ್ಲೇಶ್ವರರು. ಇವರನ್ನು ಶರಣಪ್ಪ ಸ್ವಾಮಿಗಳೆಂದು ಜನ ಕರೆಯುತ್ತಿದ್ದರು. ಇವರ ಬಗ್ಗೆ ಶರಣಪ್ಪ ದಂಪತಿಗೆ ಅಪಾರ ಗೌರವ, ಭಕ್ತಿ. ಇದು ಅಂತಿಮವಾಗಿ ಮೈಸೂರಿನ ಚೌಕಿಮಠದಲ್ಲಿ ಉಳಿಯಲು ಕಾರಣವಾಯಿತು. ಆಗ ಇವರ ಮಗ ಗುರುಮಲ್ಲೇಶನಿಗೆ ಎರಡು ವರ್ಷ.

ಶರಣಪ್ಪ ದಂಪತಿ ಮೈಸೂರಿಗೆ ಬಂದ ಮೇಲೆ ಶಿವಯೋಗ-ಶಿವಧ್ಯಾನ- ಶಿವಕಾಯಕದಲ್ಲಿ ನಿರತರಾದರು; ಸ್ವಾಮಿಗಳ ಸೇವೆಗೆ ನಿಂತುಕೊಂಡರು. ಮಗನಿಗೆ ಸ್ವಾಮಿಗಳು ‘ಗುರುಮಲ್ಲ’ ಎಂದು ನಾಮಕರಣ ಮಾಡಿ, ಗುರು-ಲಿಂಗ-ಜಂಗಮದ ರಹಸ್ಯ ಬೋಧಿಸಿದರು. ಈತ ಮುಂದೆ ದೊಡ್ಡ ಗುರುವಾಗುತ್ತಾನೆಂದು ತಿಳಿಸಿದರು. ಗುರುಮಲ್ಲನ ಶಿವಪ್ರತಿಭೆ ಇದರಿಂದಾಗಿ ಪುಟಿದು ಬೆಳೆಯಿತು. ಶರಣಪ್ಪ ಸ್ವಾಮಿಗಳು ಶತಾಯುಷಿಗಳಾಗಿದ್ದರು. ಅವರು ಗುರುಮಲ್ಲನನ್ನು ಮಹಾಲಿಂಗೇಶ್ವರ ಮಠದ ಬೆತ್ತಲೆಗುಂಡೆ ಸ್ವಾಮಿಗಳಿಗೆ ಒಪ್ಪಿಸಿದರು. ಕೆಲವು ದಿನಗಳಲ್ಲೇ ಶರಣಪ್ಪ ಸ್ವಾಮಿ ಲಿಂಗೈಕ್ಯರಾದರು. ಬಾಲಕ ಗುರುಮಲ್ಲ ಬೆತ್ತಲೆಗುಂಡೆ ಸ್ವಾಮಿಗಳ ಸನ್ನಿಧಿಯಲ್ಲಿ ಶಿವಯೋಗ ತತ್ತ್ವದ ರಹಸ್ಯ ತಿಳಿದನು. ಊರಿಗೆ ಹೋಗಿದ್ದ ಶರಣಪ್ಪ ಅಕಾಲಿಕ ಮರಣಕ್ಕೆ ತುತ್ತಾದ. ಇತ್ತ ಚೌಕಿಮಠದಲ್ಲಿದ್ದ ತಾಯಿ ಶರಣಾಂಬೆಯೂ ಶಿವೈಕ್ಯಳಾದಳು. ಗುರುಮಲ್ಲ ಈಗ ಪ್ರೌಢಾವಸ್ಥೆಗೆ ತಲುಪಿದ್ದ. ಅವನು ಪ್ರತಿನಿತ್ಯ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಬೆಟ್ಟದ ಮಧ್ಯದಲ್ಲಿರುವ ಮಹಾನಂದಿಯ ಆಜುಬಾಜಿನ ಬೃಹತ್ ಬಿಲ್ವವೃಕ್ಷದ ಅಡಿಯಲ್ಲಿ ಸತತವಾಗಿ ಹನ್ನೆರಡು ವರ್ಷ ಲಿಂಗಾನುಷ್ಠಾನ ಮಾಡತೊಡಗಿದ. ಶಿವಕಳೆ ಆತನಲ್ಲಿ ವರ್ಧಿಸಿತು. ಗುರುಮಲ್ಲಪ್ಪ ಶಿವಯೋಗದ ಮರ್ಮ ತಿಳಿದು ಅನುಭಾವಿ ಸ್ಥಿತಿಗೆ ತಲುಪಿದ್ದು ಸಹಜವೇ ಆಗಿತ್ತು.

ಸಾಧನೆಯ ಶಿಖರ: ಗುರುಮಲ್ಲಪ್ಪ ಪ್ರತಿನಿತ್ಯ ಲಿಂಗಾನುಷ್ಠಾನದಲ್ಲಿದ್ದು, ಸೂರ್ಯ ಹುಟ್ಟಿ ಮೇಲೆ ಬರುವವರೆಗೆ ಏಕಚಿತ್ತದಿಂದ ಅನುಸಂಧಾನ ಮಾಡುತ್ತ ಅಂತಮುಖಿಗಳಾಗುತ್ತಿದ್ದರು. ಅನಂತರ ಮಠಕ್ಕೆ ಬಂದು ಸ್ನಾನ, ಪೂಜಾದಿಗಳನ್ನು ಮುಗಿಸುತ್ತಿದ್ದರು. ಸ್ವಾಮಿಗಳ ಅಣತಿಯಂತೆ ಅವರು ಕಂತೆಭಿಕ್ಷೆಗಾಗಿ ಅರಮನೆಯಿಂದ ಹಿಡಿದು ಭಕ್ತರ ಮನೆಯವರೆಗೂ ಹೋಗಿ ಪ್ರಸಾದವನ್ನು ತಂದು ಲಿಂಗಕ್ಕೆ ಅರ್ಪಿಸಿ ಮಠದಲ್ಲಿ ಸೇರುತ್ತಿದ್ದ ಗುರುಜಂಗಮರಿಗೆ, ಅನಾಥರಿಗೆ ಬಡಿಸಿ ಅವರ ತೃಷೆ ನೀಗಿಸುತ್ತಿದ್ದರು. ನಂತರ ಸೂಕ್ತರೀತಿಯಲ್ಲಿ ಶಿವಬೋಧೆ ಮಾಡುತ್ತಿದ್ದರು. ಇದೆಲ್ಲದರ ಪ್ರಭಾವದಿಂದಾಗಿ ಗುರುಮಲ್ಲಪ್ಪ ಸದ್ಭಕ್ತರನ್ನು ಸಂಪಾದಿಸಿದರು. ಗುರುಮಲ್ಲಪ್ಪನವರ ಹೆಸರಿನಲ್ಲಿ ಹಲವು ಪವಾಡಗಳು ನಡೆದಿವೆ. ಅವುಗಳಲ್ಲಿ ಕರುಳಿನ ಪವಾಡ, ಬ್ರಹ್ಮಪಿಶಾಚಿ ಮುಕ್ತಗೊಳಿಸಿದ ಪವಾಡ ಪ್ರಮುಖವಾದವು.

ಒಂದು ದಿನ ಮೈಸೂರಿನ ಮಹಾಲಿಂಗೇಶ್ವರ ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಪ್ರವಚನ ನಡೆಯುತ್ತಿತ್ತು. ಒಡೆಹುಲ್ಲ ಬಂಕಯ್ಯ ಎಂಬ ಶರಣನ ಜೀವನ-ಸಾಧನೆ ಕುರಿತು ಪುರಾಣಿಕರು ಪ್ರವಚನ ನೀಡುತ್ತ, ‘ಇಂಥ ಶರಣರು ಯಾರಿದ್ದಾರೆ? ಈಗಿನವರೆಲ್ಲ ಕಪಟಿಗಳು, ವಂಚಕರು’ ಎಂದು ಜರಿದರು. ಗುರುಮಲ್ಲಪ್ಪನವರಿಗೆ ಈ ಮಾತು ಇಷ್ಟವಾಗಲಿಲ್ಲ. ಅವರು ಕೋಪೋದ್ರಿಕ್ತರಾಗಿ ತಮ್ಮ ಹೊಟ್ಟೆಯನ್ನು ಸೀಳಿ ಕರುಳನ್ನು ತಮ್ಮ ಕೊರಳಿಗೆ ಹಾಕಿಕೊಂಡರು! ಈ ದೃಶ್ಯನೋಡಿದ ಪುರಾಣಿಕರು ಮತ್ತು ಭಕ್ತರು ಭಯಭೀತರಾಗಿ ಕ್ಷಮೆಯಾಚಿಸಿದರು. ಈ ಸುದ್ದಿ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ತಿಳಿಯಿತು. ಅವರು ಬಂದು ಭಕ್ತರನ್ನು ರಕ್ಷಿಸಬೇಕೆಂದು ಶ್ರೀಗಳಲ್ಲಿ ಕೋರಿದರು. ಶರಣಪ್ಪ ದಂಪತಿ ವಿಷಯ ತಿಳಿದು ಅಲ್ಲಿಗೆ ಬಂದು ಪಾದೋದಕ ಕುಡಿಸಿ, ಕರುಳನ್ನು ಹೊಟ್ಟೆಗೆ ಹಾಕಿ ವಿಭೂತಿಯ ಲೇಪನ ಮಾಡಿದರು.

ಗುರುಮಲ್ಲೇಶ್ವರರ ‘ಕರುಳ ಪವಾಡ’ದಿಂದ ಅವರ ಮಹತ್ವ ಅರಿತ ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ಅರಮನೆಗೆ ಶ್ರೀಗಳನ್ನು ಆಹ್ವಾನಿಸಿದರು. ರಾಜೋಚಿತವಾದ ಸತ್ಕಾರ ಅಲ್ಲಿ ನಡೆಯಿತು. ಒಂದು ಹರಿವಾಣದಲ್ಲಿ ಮುತ್ತು -ರತ್ನ-ಚಿನ್ನಾಭರಣಗಳನ್ನು ತುಂಬಿ ಸ್ವೀಕರಿಸಬೇಕೆಂದು ಮಹಾರಾಜರು ಬಿನ್ನವಿಸಿಕೊಂಡರು. ಕಾಯಕನಿಷ್ಠರಾದ ಗುರುಮಲ್ಲಪ್ಪನವರು ‘ಮಹಾರಾಜರೇ ಇವೆಲ್ಲ ಯಾರ ಸ್ವತ್ತು? ಪ್ರಜೆಗಳದ್ದು ಅಲ್ಲವೆ? ಇವು ನ್ಯಾಯವಾಗಿ ಅವರಿಗೆ ಸಲ್ಲ ಬೇಕು. ಶಿವನಿಗದು ಪ್ರಿಯವಲ್ಲ’ ಎಂದು ನಯವಾಗಿ ತಿರಸ್ಕರಿಸಿದರು. ನಂತರ ‘ನೋಡಿ ಮಹಾರಾಜರೇ, ಪ್ರತಿಯೊಬ್ಬರು ತನುಮನಗಳನ್ನು ದಂಡಿಸಿ ಸತ್ಯಶುದ್ಧ ಕಾಯಕದಿಂದ ಸಂಪಾದಿಸಿ ತಂದುಕೊಟ್ಟದ್ದು ಮಾತ್ರ ನಿಜವಾದ ಭಕ್ತಕಾಣಿಕೆ’ ಎಂದು ಹೇಳಿ ಮಹಾರಾಜರನ್ನು ಆಶೀರ್ವದಿಸಿ ಅರಮನೆಯಿಂದ ಹೊರಟರು. ಇದಾದ ಕೆಲದಿನಗಳ ನಂತರ ಮಹಾರಾಜರು ಮಾರುವೇಷ ಧರಿಸಿ ಕಮ್ಮಾರನ ಕುಲುಮೆಯಲ್ಲಿ ಕಾಯಕ ಮಾಡಿದರು. ಅವರು ನೀಡಿದ ಒಂದು ಹಾಗ (ನಾಲ್ಕಾಣೆ)ವನ್ನು ಗುರುಮಲ್ಲೇಶ್ವರರಿಗೆ ಅರ್ಪಿಸಿದರು. ಸತ್ಯಶುದ್ಧಕಾಯಕದ ಮಹತ್ವವನ್ನು ಅವರು ಅರಿತರು. ಗುರುಮಲ್ಲೇಶ್ವರರ ನಿಃಸ್ವಾರ್ಥ ಮತ್ತು ಸರಳತೆ ನೋಡಿ ಮಹಾರಾಜರಲ್ಲಿ ಅವರ ಬಗೆಗಿನ ಭಕ್ತಿ-ಗೌರವ-ವಿಶ್ವಾಸಗಳು ಇನ್ನಷ್ಟು ಅಧಿಕಗೊಂಡವು. ಮಹಾರಾಜರು ಗುರುಮಲ್ಲೇಶ್ವರರಿಂದ ಲಿಂಗತತ್ತೊ್ವೕಪದೇಶ ಪಡೆದರು. ನಂತರ ಕಳೆದುಹೋದ ರಾಜ್ಯಾಡಳಿತ ಮೈಸೂರು ಮಹಾರಾಜರಿಗೆ ದೊರಕಿತು. ಇದು ಗುರುಮಲ್ಲೇಶ್ವರರ ಮಹಿಮೆಯೇ ಸರಿ.

ದೇವನೂರಿನತ್ತ: ಗುರುಮಲ್ಲೇಶ್ವರರು ಮೈಸೂರನ್ನು ಬಿಟ್ಟು ನಂಜನಗೂಡು ತಾಲ್ಲೂಕಿಗೆ ಸೇರಿದ ದೇವನೂರನ್ನು ತಮ್ಮ ಸುಕ್ಷೇತ್ರವನ್ನಾಗಿ ಮಾಡಿಕೊಂಡದ್ದು ಸರಿಯಷ್ಟೆ. ಅದು ಸ್ವಾಮಿಗಳ ಪಾದಸ್ಪರ್ಶದಿಂದ ಅವಿಮುಕ್ತ ಕ್ಷೇತ್ರವಾಯಿತು. ಗುರುಮಲ್ಲೇಶ್ವರರು ಇಲ್ಲಿ ಬಂದು ನೆಲೆಸಲು ಒಂದು ಅನಿಮಿತ್ತಕಾರಣ ಉಂಟು. ಈ ಊರಿನ ಮುಖಂಡರು ಪಟೇಲ್ ಸುಬ್ಬೇಗೌಡರು. ಇವರ ಧರ್ಮಪತ್ನಿ ಶಂಕರಮ್ಮ. ಈಕೆಗೆ ಬಹಳ ದಿನಗಳಿಂದ ಬ್ರಹ್ಮಪಿಶಾಚಿಯೊಂದು ಆವರಿಸಿಕೊಂಡಿತ್ತು. ಪಟೇಲರು ಇದನ್ನು ಹೋಗಲಾಡಿಸಲು ನಾನಾ ಪ್ರಯತ್ನ ಮಾಡಿದರು. ಆದರೆ, ಅದು ಸಾಧ್ಯವಾಗಲಿಲ್ಲ. ಗುರುಮಲ್ಲೇಶ್ವರರನ್ನು ಕರೆತಂದರೆ ನಿವಾರಣೆ ಆಗುತ್ತದೆಂಬ ವಿಷಯ ಸುಬ್ಬೇಗೌಡರ ಕಿವಿಗೆ ಬಿದ್ದಿತು. ಅವರು ಸಾಹಸಪಟ್ಟು ಶ್ರೀಗಳನ್ನು ತಮ್ಮ ಮನೆಗೆ ಕರೆತಂದರು. ಗುರುಮಲ್ಲೇಶ್ವರರು ತಮ್ಮೊಡನೆ ಮುಪ್ಪಿನಸ್ವಾಮಿಗಳನ್ನೂ ಕರೆದೊಯ್ದಿದ್ದರು. ಬ್ರಹ್ಮಪಿಶಾಚಿ ಆವರಿಸಿಕೊಂಡಿದ್ದ ಶಂಕರಮ್ಮನನ್ನು ಕರೆತಂದರು. ಆಕೆ ಸ್ವಾಮಿಗಳ ಪಾದಗಳಿಗೆ ನಮಸ್ಕರಿಸಿ ಕುಳಿತುಕೊಂಡರು. ಶಂಕರಮ್ಮನವರ ಮಸ್ತಕದ ಮೇಲೆ ಗುರುಮಲ್ಲೇಶ್ವರರು ಹಸ್ತ ಇಡುತ್ತಿದ್ದಂತೆ ಬ್ರಹ್ಮಪಿಶಾಚಿ ‘ನನ್ನ ಜನ್ಮ ಸಾರ್ಥಕ ಆಯಿತು’ ಎಂದು ಹೇಳುತ್ತ ಶಂಕರಮ್ಮನವರನ್ನು ಬಿಟ್ಟು ಹೊರಟು ಹೋಯಿತು. ಸುಬ್ಬೇಗೌಡರಿಗೆ ಬೆಟ್ಟದಂತೆ ಬಂದ ಆಪತ್ತು ಮಂಜಿನಂತೆ ಕರಗಿಹೋಯಿತು. ಕೆಲವುದಿನ ಅಲ್ಲಿ ಶ್ರೀಗಳು ಕಂತೆಭಿಕ್ಷೆ ಮೂಲಕ ಜನರ ಪ್ರೀತಿ ಗಳಿಸಿದರು. ದೇವನೂರಿನ ಜನ ಶ್ರೀಗಳು ತಮ್ಮ ಊರಿನಲ್ಲೇ ಇರಬೇಕೆಂದು ಕೋರಿಕೊಂಡರು. ಭಕ್ತರೆಲ್ಲರ ಪ್ರಾರ್ಥನೆಯಂತೆ ದೇವನೂರಿನಲ್ಲಿಯೇ ನೆಲೆ ನಿಲ್ಲಲು ಶ್ರೀಗಳು ನಿರ್ಧರಿಸಿದರು. ಸ್ವಲ್ಪದಿನ ಸುಬ್ಬೇಗೌಡರ ಮನೆಯಲ್ಲಿದ್ದು, ಅನಂತರ ವಿಶಾಲವಾದ ಬೇರೊಂದು ಮನೆಯ ವ್ಯವಸ್ಥೆಯೂ ಆಯಿತು. ಮೈಸೂರಿನ ಮಹಲಿಂಗೇಶ್ವರ ಮಠದಲ್ಲಿ ನಡೆಯುತ್ತಿದ್ದಂತೆ ಇಲ್ಲಿಯೂ ಕಂತೆಭಿಕ್ಷದ ಕಾಯಕ ಪ್ರಾರಂಭಿಸಿದರು. ಈ ಕಾಯಕದಿಂದ ಮನೆಮನೆಗಳಲ್ಲಿ ನೀಡುತ್ತಿದ್ದ ಪ್ರಸಾದ ತಂದು ಸಮಸ್ತರಿಗೂ ಬಡಿಸುತ್ತಿದ್ದರು. ಶ್ರೀಗುರು ಮಲ್ಲೇಶ್ವರರು ‘ಸದ್ಭಕ್ತರ ಕಾಮಧೇನು’ ಎಂದು ಪ್ರಕೀರ್ತಿತಗೊಂಡರು. ಜನರು ಅವರಿಂದ ಲಿಂಗತತ್ತೊ್ವೕಪದೇಶ ಮಾಡಿಸಿಕೊಳ್ಳಲು ತಾಮುಂದು, ನಾ ಮುಂದು ಎಂದು ಮುಗಿ ಬೀಳತೊಡಗಿದರು. ಇಂತಹ ಜನರಿಗೆ ವೀರಶೈವಧರ್ಮದ ಅಷ್ಟಾವರಣ, ಪಂಚಾಚಾರ ಮತ್ತು ಷಟ್​ಸ್ಥಲ ತತ್ತ್ವಗಳನ್ನು ಬಲು ಸುಲಭವಾಗಿ ತಿಳಿಯ ಹೇಳತೊಡಗಿದರು. ಗುರುಮಲ್ಲೇಶ್ವರರು ಶಿವಯೋಗ ಸಂಪತ್ತನ್ನು ಜನರಿಗೆ ಹಂಚುತ್ತಿದ್ದುದು ಸರಿಯಷ್ಟೆ. ಅವರು ಒಳ್ಳೆಯ ಅಂಗಸಾಧಕರು ಮತ್ತು ಯೋಗಪಟುಗಳಾಗಿದ್ದರು. ಗ್ರಾಮಗ್ರಾಮಗಳಲ್ಲಿ ‘ಗರಡಿಮನೆ’ ಕಟ್ಟಿಸಿ, ಯುವಕರಿಗೆ ಅಂಗಸಾಧನೆಗೆ ಬೆಂಬಲ ನೀಡಿದರು. ಇದು ಲಿಂಗಾನುಸಂಧಾನಕ್ಕೆ ಪರೋಕ್ಷ ದಾರಿ ಎಂದು ತಿಳಿಸುತ್ತಿದ್ದರು.

ಗುರುಮಲ್ಲೇಶ್ವರರು ಅಪ್ರತಿಮ ಶಿವಯೋಗನಿಷ್ಠರು. ಎಲ್ಲೋ ಹುಟ್ಟಿ, ಮತ್ತೆಲ್ಲೊ ಬೆಳೆದು, ಇನ್ನೆಲ್ಲೊ ಸಾಧನೆಯ ಶಿಖರವೇರಿದ್ದು ಸಾಮಾನ್ಯವಲ್ಲ. ಅವರು ದುಡಿದು ತಿನ್ನುವ ಕಾಯಕವನ್ನು ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೋಧಿಸಿದರು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೈಸೂರಿನ ಕಡೆ ನಾನಾ ಕಾರಣಗಳಿಂದಾಗಿ ವೀರಶೈವರು ಅಷ್ಟಾವರಣಗಳಿಂದ ದೂರವಿದ್ದರು. ಇಂಥ ಜನರಿಗೆ ‘ಲಿಂಗಬೋಧೆ’ ಮಾಡಿ ಅರಿವನ್ನು ಹೆಚ್ಚಿಸಿದರು. ಇಂಥ ಮಹಾತ್ಮರ ಶಿಷ್ಯರಲ್ಲಿ ಪೂಜ್ಯ ಭಿಕ್ಷದಾರ್ಯರು, ಶರಣಬಸಪ್ಪ ತಾತ ಪ್ರಮುಖರು. ಅವರು ಷಟ್​ಸ್ಥಲ ತತ್ತ್ವ ಬೋಧಿಸುವ ಪರಿಯಂತೂ ವಿಶಿಷ್ಟವಾಗಿತ್ತು. ಸಾಧಕನು ಭಕ್ತಸ್ಥಲದಿಂದ ಹೊರಟು ಐಕ್ಯಸ್ಥಲದಲ್ಲಿ ಪ್ರಯಾಣಮಾಡಿ, ಶಿವನಲ್ಲಿ ಸಮರಸಗೊಳ್ಳುತ್ತಿದ್ದ. ಇಲ್ಲಿ ಭಕ್ತಿಯೇ ಮೊದಲ ಸೋಪಾನ. ಪ್ರತಿಯೊಬ್ಬರೂ ಮೊದಲು ತಮ್ಮ ಹೃದಯದಲ್ಲಿ ಪ್ರೇಮಜ್ಯೋತಿ ಹೊತ್ತಿಸಿಕೊಂಡು ಆ ಜ್ಯೋತಿಗೆ ತ್ಯಾಗದ ಎಣ್ಣೆ ಎರೆಯುತ್ತ ಪ್ರಪಂಚವೆಲ್ಲ ದೇವನ ಕರುಣೆಯೆಂದು ತಿಳಿದು, ಪ್ರಪಂಚದ ಕಣಕಣದಲ್ಲಿಯೂ ಪರಮಾತ್ಮ ಇರುವನೆಂದು ಅರಿತು, ಜೀವಭಾವವನ್ನು ಬಿಟ್ಟು ದೇವಭಾವವನ್ನು ಹಿಡಿಯಬೇಕೆಂದು ಶ್ರೀಗಳು ಅರುಹುತ್ತಿದ್ದರು. ಸಾಧಕನು ಸದಾನಂದನಾಗಿ ಪ್ರಪಂಚದಲ್ಲಿದ್ದರೂ ಪರಮಾತ್ಮನಲ್ಲಿ ಅವನ ಮನ ಏಕಭಾವಗೊಳ್ಳುತ್ತಿತ್ತು. ಸಾಧಕನು ಆರು ಸೋಪಾನಗಳನ್ನು ಹಂತಹಂತವಾಗಿ ಏರಿ, ಭಗವಂತನ ಸಾಕ್ಷಾತ್ಕಾರವನ್ನು ಇದರಿಂದ ಪಡೆಯಲು ಸಾಧ್ಯ. ಭಕ್ತರು ಸಾಧನೆಗೆ ಪೂರಕವಾಗಿ ನೂರಾರು ಊರುಗಳಲ್ಲಿ ಶ್ರೀಗುರುಮಲ್ಲೇಶ್ವರರ ಹೆಸರಿನಲ್ಲಿ ಭಜನಾ ಸಂಘಗಳನ್ನು ರಚಿಸಿಕೊಂಡರು.

ಗುರುಮಲ್ಲೇಶ್ವರರು ನಿತ್ಯನಿರಂತರವಾಗಿ ಕಾಯಕ-ದಾಸೋಹ ನಿಷ್ಠೆ ಮಾಡಿದರು. ಆಚಾರ-ವಿಚಾರಗಳನ್ನು ಅಭೇದಗೊಳಿಸಿದರು. ಪರಿಪೂರ್ಣ ಸಾಧಕರಾಗಿ ವಿರಾಜಮಾನರಾದರು. ಶ್ರೀಗಳು ಕ್ರಿ.ಶ.1899ರ ಜೂನ್ 25ರಂದು ಬೆಳಗ್ಗೆ ಬಯಲಲ್ಲಿ ಬಯಲುಗೊಂಡರು. ಗುರುಗಳ ಅಂಗಕ್ರಿಯೆ ನಿಂತು ಲಿಂಗಮಯವಾಯಿತು. ಇವರು ಬಯಲುಗೊಳ್ಳುವ ಪೂರ್ವದಲ್ಲಿ ಭಿಕ್ಷದಾರ್ಯರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಅವರ ಮಸ್ತಕದ ಮೇಲೆ ಹಸ್ತವನ್ನು ಇಟ್ಟು ‘ನನ್ನನ್ನು ಕಂಡಂತೆ ಎಲ್ಲರನ್ನು ಕಾಣು’ ಎಂದು ಹೇಳಿ ಮೌನವಾದರು. ಗುರುಮಲ್ಲೇಶ್ವರರು ನಿರ್ವಲಯವಾದ ಸುದ್ದಿ ಹರಡಿತು. ಜನ ತಂಡೋಪತಂಡವಾಗಿ ಬಂದರು. ಶ್ರೀಗಳ ಲಿಂಗಶರೀರವನ್ನು ಶ್ರೀಮಠದಲ್ಲಿ ಸಾಂಪ್ರದಾಯಕವಾಗಿ ಕ್ರಿಯಾಸಮಾಧಿಯಲ್ಲಿ ನಿಕ್ಷೇಪಿಸಿದರು. ಅನಂತರ ಬಯಲು ಗದ್ದುಗೆ ನಿರ್ವಿುಸಲಾಯಿತು. ಶ್ರೀಗುರು ಮಲ್ಲೇಶ್ವರರು ಬಯಲಿನೊಳಗಿನ ಬಯಲಾಗಿ ನೂರ ಇಪ್ಪತ್ತು ವರ್ಷಗಳು ಕಳೆದಿವೆ. ಅವರು ಸ್ಥಾಪಿಸಿದ ಮುನ್ನೂರಕ್ಕೂ ಹೆಚ್ಚು ಭಿಕ್ಷಾಮಠಗಳು ಜನರ ಸೇವಾಕಾರ್ಯಕ್ಕೆ ಸಂಕೇತವಾಗಿ ಉಳಿದುಕೊಂಡಿವೆ. ಅವರು ಹೊತ್ತಿಸಿದ ಒಲೆ ಆರದೆ ಇಂದಿಗೂ ಉರಿಯುತ್ತಿದೆ. ದೇವನೂರು ಸುಕ್ಷೇತ್ರವಾಗಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!