Breaking News
Home / featured / ಸವದತ್ತಿಮಠ ಲೇಖನಕ್ಕೆ ಬಸವಪ್ರಭು ಸ್ವಾಮೀಜಿ ಪ್ರತಿಕ್ರಿಯೆ.

ಸವದತ್ತಿಮಠ ಲೇಖನಕ್ಕೆ ಬಸವಪ್ರಭು ಸ್ವಾಮೀಜಿ ಪ್ರತಿಕ್ರಿಯೆ.

 

ಬಸವ ಕಲ್ಯಾಣ : ಲಿಂಗಾಯತ ಧರ್ಮ ಹೋರಾಟವನ್ನು ವ್ಯವಸ್ಥಿತವಾಗಿ ಹಿಂದೊಮ್ಮೆ ಮುಚ್ಚಿ ಹಾಕುವ ಸರ್ವ ಪ್ರಯತ್ನ ಮಾಡಿದ ಅವಾಸ್ತವಿಕ, ಅವೈಚಾರಿಕ ಅರ್ಧ ಸತ್ಯ ಮತ್ತು ಅರ್ಧ ಸುಳ್ಳು ಹೇಳುವ ಸಂಶೋಧಕ ಚಿದಾನಂದ ಮೂರ್ತಿಯವರ ಸಾಲಿಗೆ ಈಗ ಡಾ‌. ಸಂಗಮೇಶ ಸವದತ್ತಿ ಮಠ ಅವರು ಸೇರುತ್ತಿರುವುದು ವಿಶೇಷವೇನಲ್ಲ.

ಬಹಳ ದೀರ್ಘ ಸಮಯ ತೆಗೆದುಕೊಂಡು ಗೊಳ್ಳು ಪುರಾಣಗಳ ಸಾಣೆ ಹಿಡಿದು ತಿಣುಕಾಡಿ ಬಸವಣ್ಣ ಎತ್ತು ಮತ್ತು ಬ್ರಾಹ್ಮಣ ಎಂಬ ಅವೈಚಾರಿಕ, ಅಪ್ರಬುದ್ದತೆ, ಅವಾಸ್ತವಿಕ ಲೇಖನವನ್ನು ಪಂಚಾಚಾರ್ಯರ ಮತ್ತು ವೈಧಿಕ ಮನಸ್ಸುಗಳವರಿಂದ ಭುಜ ಛಪ್ಪರಿಸಿಕೊಳ್ಳಲು ಬರೆದಿದ್ದಾರೆ ಎಂಬುದು ನಿರೀಕ್ಷತವೇ..

ಐತಿಹಾಸಿಕ ಪುರುಷ ಬಸವಣ್ಣನವರ 887ನೇ ಜಯಂತಿ ದಿನ ವಿಶ್ವವೇ ಅವರ ಭಾವಚಿತ್ರ ಇಟ್ಟು ಜಯಂತಿಯನ್ನು
ಆಚರಿಸಿ ಅವರು ಬರೆದ ವಚನಗಳನ್ನು ಓದಿ ಕೃತಜ್ಞತೆ ಸಲ್ಲಿಸಿತು. ಸ್ವತಃ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಭಿಮಾನದ ಮಾತುಗಳನ್ನಾಡಿ ಅವರ ವಚನಗಳನ್ನು ಓದಲು ಪ್ರೇರೆಪಿಸಿದರು. ಆದರೆ ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು ವಿಶ್ವಗುರು ಬಸವಣ್ಣನವರ ಸಮಾನತೆ, ಸಹೋದರತೆ ಒಪ್ಪದ ಕೂಪಮಂಡೂಕ ಸ್ವಭಾವದ ಅಜ್ಞಾನಿ ಶ್ಯಾಮನೂರು ಶಿವಶಂಕ್ರಪ್ಪ ಎತ್ತನ್ನು ಪೂಜಿಸಿದರೆ ಮತ್ತವರ ಪಂಚಾಚಾರ್ಯರು ಬಸವಣ್ಣನವರು ವೀರಶೈವ ಧರ್ಮ ಸೇರಿದ್ದರು ಎಂಬ ಅಪ್ರಸ್ತುತ ಸಂದರ್ಭ ಸೂಚಿತವಲ್ಲದ ಹೇಳಿಕೆ ನೀಡುವುದಲ್ಲದೆ, ಕೇದಾರದ ಏಕೋರಾಮರ ಜಯಂತಿ ಇಂದೇ ಇದೆ. ಸಮಾಜ ಅವರನ್ನೂ ಮರೆಯಬಾರದು ಅವರ ಜಯಂತಿ ಆಚರಿಸಬೇಕು ಎಂಬ ಬಾಲಿಶತನದ ಹೇಳಿಕೆ ನೀಡಿದ್ದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ ಎಂಬುದು ನಿಜ ಬಸವ ಭಕ್ತರಿಗೆ ಅರ್ಥವಾಗದ್ದೇನಲ್ಲ. ಎಂಬುದನ್ನು ಡಾ. ಎಸ್ ಮಠ ಅವರು ಅರ್ಥೈಸಿಕೊಳ್ಳಲಿ.

ಕೋವಿಡ್ -19 ಕೋರೋನಾ ವೈರಸ್ ರೋಗಾಣುವಿನಿಂದ ಜಗತ್ತು ತತ್ತರಿಸುವಾಗ, ಶಾಂತ ಚಿತ್ತ ಸಮತೆಯಿಂದ ಐತಿಹಾಸಿಕ ಜಾತ್ಯಾತೀತ ಯುಗಪುರುಷ ಬಸವಣ್ಣನವರು ಜಯಂತಿ ಮಾಡುವಾಗ ಬಸವಣ್ಣನವರ ಕುರಿತು ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡಿದ್ದು ಯಾರು? ನೀವು ಮತ್ತು ನಿಮ್ಮ ರಂಭಾಪುರಿ ಶ್ರೀಗಳಲ್ಲವೆ? ಪಾಶ್ಚಿಮಾತ್ಯವೇತ್ಯರು, ಭಾರತೀಯ ವಿದ್ವಾಂಸರು, ತತ್ವವೇತ್ಯರು ಬಸವಣ್ಣನವರೊಬ್ಬ ಐತೀಹಾಸಿಕ ಪುರುಷರೆಂದು ಅವರ ಜಯಂತಿಯ ದಿನವನ್ನು ಅಕ್ಷಯ ತೃತಿಯ ದಿನವೆಂದು ಗುರುತಿಸಿ ಆಚರಿಸುತ್ತಿರುವಾಗ ಈ ಸುಳ್ಳು ಕಂತೆಯ ಆವಾಸ್ತವಿಕ ಪುರಾಣಗಳ ಉಲ್ಲೇಖ ನೀಡಿ ನಂದಿಯ ಅವತಾರವೆಂದು ಹೇಳುವುದು ನಿಮ್ಮ ಅಜ್ಞಾನದ ಪರಮಾವಧಿಯಲ್ಲದೆ ಮತ್ತೇನು?. ನಿಮ್ಮ ವೈಧಿಕ ತಂತ್ರಗಾರಿಕೆಗಳು ಏನೆಂಬುದನ್ನು ಡಾ. ಅಂಬೇಡ್ಕರವರು ಅಂದೇ ಬಯಲು ಮಾಡಿದ್ದಾರೆ. ವೈದಿಕ ಬುಡಕ್ಕೆ ಕೈ ಹಾಕಿ ಸಮಾನತೆ ಸಾರುವ ಒಬ್ಬ ಐತಿಹಾಸಿಕ ಪುರುಷನನ್ನು ಒಂದೋ.. ಜೀವಂತವಿದ್ದಾಗ ಕೊಲೆ ಮಾಡಲು ಯತ್ನಿಸುವುದು. ಎರಡೋ.. ಅವನ ಜೀವನ ತೇಜೋವಧೆ ಮಾಡುವುದು. ಇಲ್ಲವೆ? ಅವರನ್ನು ಬ್ರಾಹ್ಮಣೀಕರಿಸುವುದು.

ಬಸವಣ್ಣನವರ, ಬುದ್ಧನ, ರಾಮನ, ಕೃಷ್ಣನ, ಕನಕದಾಸರ ವಿವೇಕಾನಂದರ ಹೆಸರಲ್ಲಿ ಹೆಣೆದ ಜೀವನ ವೃತ್ತಾಂತ ಪುರಾಣಗಳು ಬ್ರಾಹ್ಮಣೀಕರಿಸಿದ್ದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಅಷ್ಟಕ್ಕೂ ನಂದಿಗೂ ಬಸವಣ್ಣನವರಿಗೂ ಏನು ಸಂಬಂಧ?. ಕೃಷಿ ಕ್ಷೇತ್ರದಲ್ಲಿ ರೈತನ ಬೆನ್ನೆಲಬು ಎತ್ತು ಎಂದು ನಾವು ಹೇಳುತ್ತಾ ಬಂದಿರುವ ಎಲ್ಲ ಮಹಾತ್ಮರ ಜಯಂತಿಯ ಹಿಂದೆ ಪೂಜಿಸಲು ಸಾಧ್ಯವೆ? ಹಾಗಾದರೆ ಕಲ್ಲಿನೊಳಗೆ ಜನಿಸಿದ ರೇಣುಕಾಚಾರ್ಯರ ಮತ್ತವರ ಶಿಷ್ಯ ಪರಂಪರೆಯ ರಂಭಾಪುರಿ ಶ್ರೀಗಳು ತಮ್ಮ ಜಯಂತಿಯನ್ನು ಎತ್ತಿನ ಜಯಂತಿ ಎಂದು ಏಕೆ ಆಚರಿಸಬಾರದು.? ರಾಷ್ಟ್ರ ಮತ್ತು ವ್ಯಕ್ತಿಯ ಸಂಕೇತ ಎಂದು ಹೇಳುವ ಡಾ. ಎಸ್ ಮಠರವರ ಅಭಿಪ್ರಾಯದಲ್ಲಿ ಬುದ್ಧನ ಜೀವನದ ಹಿಂದೆ ಹೆಣೆದ ಜಿಂಕೆಯನ್ನು, ಏಸುವಿನ ಜೀವನದ ಹಿಂದೆ ಹೆಣೆದ ಕುರಿಯನ್ನು ಅವರ ಜಯಂತಿಯ ದಿನ ಆಚರಿಸಬೇಕೆ? ಈ ಹೇಳಿಕೆಗಳು ಎಷ್ಟೊಂದು ಹಾಸ್ಯಸ್ಪದ ಮತ್ತು ವಿಪರ್ಯಸವಲ್ಲವೇ?.. ನಾಗರಿಕ ಸಮಾಜ ಇಂಥಹ ಹೇಳಿಕೆಯನ್ನು ಒಪ್ಪಬೇಕೆ?. ಒಬ್ಬ ಭಾಷಾ ವಿಜ್ಞಾನಿಯಾಗಿ, ಖ್ಯಾತ ಸಂಶೋಧಕನಾಗಿ ಪಂಚಾಚಾರ್ಯರು ಕೊಡುವ ಬಂಗಾರದ ಉಂಗುರು, ಹಣದ ಆಶೆ ಆಮಿಷಗಳಿಗಾಗಿ, ಅವರನ್ನು ಮೆಚ್ಚಿಸುವ ಬರದಲ್ಲಿ ಐತಿಹಾಸಿಕ ವ್ಯಕ್ತಿಯನ್ನು ಮೂಖ ಪ್ರಾಣಿಗೆ ಹೋಲಿಸುತ್ತಿರುವುದು ಖಂಡನೀಯ. ನಿಮ್ಮ ಹೇಳಿಕೆಯು ನಿಮ್ಮ ಬುದ್ಧಿಯನ್ನು ಮತ್ತು ಮಾಸೀಕತೆಯನ್ನು ಎತ್ತಿ ತೋರಿಸುತ್ತದೆ.

ಬಸವಣ್ಣನವರು ಕರ್ಮಸಿದ್ಧಾಂತಿಗಳಾಗಿರದೆ, ಕರ್ಮ ಭಾವಿಗಳಾಗಿದ್ದರು.

ನಿಮ್ಮ ಮೂಗಿನ ನೇರಕ್ಕೆ ಬಸವಣ್ಣನವರ ಜೀವನವನ್ನು ಅವರ ವಚನಗಳ ಮೂಲಕ ಉಲ್ಲೇಖಿಸಿದ್ದೀರಿ. ಆದರೆ ಅದೆಷ್ಟು ಸತ್ಯ?. ಅಂದಿನ ಕಾಲದಲ್ಲಿಯೂ ಬಸವಣ್ಣನವರ ತೇಜೋವಧೆಯನ್ನು ಮಾಡುವ ನಿಮ್ಮಂಥ ಭೂಪರಿಂದಲೇ ಅವರ ಮತ್ತು ಶರಣರ ವಚನಗಳಲ್ಲಿ ಏನೆಲ್ಲಾ ತಿರುಚಿ ಸಂಸೃತ ಬಲದಿಂದ ಬ್ರಾಹ್ಮಣ್ಯೀಕರಿಸಿ; ನಂದಿ ಅವತಾರ ಮಾಡಿರುವರು. ಸೇರಿಸಲ್ಪಟ್ಟ ಹೆಚ್ಚಿನ ಅಂತಹ ನಾಲ್ಕೈದು ವಚನಗಳನ್ನಿಟ್ಟುಕೊಂಡು ಬಸವಣ್ಣನವರನ್ನು ನಂದಿ ಮಾಡವುದು ಎಷ್ಟು ಸರಿ? ಬಸವಣ್ಣನವರೆಂದೂ ಕರ್ಮಸಿದ್ಧಾಂತವನ್ನು ಒಪ್ಪಿಲ್ಲ; ಬದಲಿಗೆ ಇದೇ ಜನ್ಮದ ಕರ್ಮಭಾವವನ್ನು ತಾಳಿದ್ದಾರೆ ಎಂಬುದನ್ನು ಸ್ಥಲಗಳಿಗನುಸಾರವಾಗಿ ಅವರ ವಚನಗಳನ್ನು ಓದಿದರೆ ಅರ್ಥವಾದೀತು. ಅವರು

ನಂದಿಯಲ್ಲ ಅವರೊಬ್ಬ ಮಹಾಮಾನವತಾವಾದಿ.

ಬಸವಣ್ಣನವರೆಂದೂ ವೀರಶೈವ ಧರ್ಮ ಸೇರಿಲ್ಲ ವೀರಶೈವವು ಧರ್ಮವಲ್ಲ.
ಗುರು ಬಸವಣ್ಣನವರು ಇಪ್ಪತ್ತೊಂದು ವರ್ಷದವರಿರುವರೆಗೆ ಶೈವ ಪ್ರಭಾವಕ್ಕೊಳಗಾಗಿ ಏಕ ದೇವತಾ(ಸ್ಥಾವರ ಲಿಂಗ ಪೂಜಿಸಿದ್ದಾರೆ) ಕುರಿತು ವಚನಗಳನ್ನು ಬರೆದಿದ್ದಾರೆ. ಆದರೆ ಜಗದೊಡೆಯ ಲಿಂಗದೇವನ ಸಾಕ್ಷಾತ್ಕಾರವಾದ ಬಳಿಕ ಅವರು ಇಷ್ಟಲಿಂಗ ಕಂಡುಹಿಡಿದು ಏಕದೇವೋಪಾಸಕರಾಗಿ “ಲಿಂಗಾಯತ ಧರ್ಮ” ಸ್ಥಾಪಿಸಿದ್ದಾರೆ ಎಂಬುದನ್ನು ನಾವು ಸಾಬೀತು ಪಡಿಸಲು ಸಿದ್ಧರಿದ್ದೇವೆ. ಬಸವಣ್ಣನವರು ಶೈವ ಮತದ ವೀರಶೈವ ಪಂಥವನ್ನು ಸೇರಿಲ್ಲ; ಈ ಬಗ್ಗೆ ನಾವು ಚರ್ಚೆಗೆ ಸಿದ್ಧರಿದ್ದೇವೆ. ಸಾವಿರ ಬಾರಿ ಚರ್ಚೆಗೆ ಕರೆದರೂ ಬರದ ಪಂಚಾಚಾರ್ಯರು ಮಠದ ಗೂಡಿನಲ್ಲಿ ಕುಳಿತು ಕಣ್ಣು ಕಾಣದ ಗೂಗೆಯಂತೆ ಹಲುಬುವುದನ್ನು, ಬಸವಣ್ಣನವರ ತತ್ವಗಳಿಗೆ ಮತ್ಸರಿಸುವುದನ್ನು ಬಿಡಬೇಕು. ಇಂದಿನ ವೈಜ್ಞಾನಿಕ ಯುಗದಲ್ಲಿ ನಿಮ್ಮ ಗೊಳ್ಳು ಪುರಾಣ, ಕಲ್ಲಿನಿಂದ ಉದ್ಭವ ಕಥೆ ಯಾರನ್ನೂ ಉದ್ಧರಿಸಲಾರವು.

ಬಸವಣ್ಣನವರು ಬ್ರಾಹ್ಮಣರೇ?
ಡಾ. ಸವದತ್ತಿಯವರು ಅರ್ಧ ಸತ್ಯ ಹೇಳಿದ್ದಾರೆ. ಬಸವಣ್ಣನವರು ಬ್ರಾಹ್ಮಣ ಕುಲದಲ್ಲಿ ಹುಟ್ಟಿದ್ದರೂ ಬ್ರಾಹ್ಮಣ್ಯವನ್ನು ತಿರಸ್ಕರಿಸಿ ಹೊರ ನಡೆದರು. ಆದಕ್ಕೆ ಅಲ್ಲಮಪ್ರಭು ದೇವರು ಹೇಳುವ ಈ ವಚನವೇ ಸಾಕ್ಷಿ.

ಕುಲದೊಳಗೆ ಹುಟ್ಟಿ ಕುಲವ ಬೆರಸದೆ, ತಮ್ಮ ನಿಲುವು ಬಲಿದಿಪ್ಪವರು ಇನ್ನಾರು ಹೇಳಾ?
ಹಬ್ಬಿದ ಮೂರು ಬೆಟ್ಟಕ್ಕೆ ನನ್ನ ಮನವ ಹಬ್ಬಲಿಯದೆ. ಲಿಂಗ ಜಂಗಮಕ್ಕೆ ಸವೆಸಿ, ಸ್ವಯಲಿಂಗವಪ್ಪವರು ಇನ್ನಾರು ಹೇಳಾ? ಸ್ವಯೊ ಶರಣ ಸ್ವಯೊ ಲಿಂಗ ಸ್ವಯಂಭೋಗ ಎಂದುದಾಗಿ ಗುಹೇಶ್ವರ ನಿಮ್ಮ ಶರಣ ಬಸವಣ್ಣಂಗೆ ನಮೋ ನಮೋ ಎನುತಿರ್ದೆನು.

ಹಾಗೆ ಹೋದ ಬಸವಣ್ಣನವರು 21ವರ್ಷದವರೆಗೆ ತಮ್ಮ ಸ್ವ-ವಿಮರ್ಶಾಗಾರದಲ್ಲಿ ಶೈವದ-ಆಗಮ ವೈದಿಕರ ವೇದಗಳನ್ನು ಆಧ್ಯಯನಿಸಿ, ಪಾಂಡಿತ್ಯಪೂರ್ಣ ಜ್ಞಾನ ಗಳಿಸಿಕೊಂಡು ಆಗಮ ವೇದಗಳ ಅಸಮಾನತೆ, ಕರ್ಮಕಾಂಡವನ್ನು ಹೀಯಾಳಿಸಿ ಸ್ವತಂತ್ರ್ಯ ಲಿಂಗಾಯತ ಧರ್ಮ ಸಂಶೋಧಿಸಿರುವುದು ಡಾ. ಸಂಗಮೇಶ ಸವದತ್ತಿಮಠ ಅಂಥವರಿಗೆ ಅರ್ಥವಾಗದಿರುವುದು ದುರಂತವೇ ಸರಿ. ಒಬ್ಬ ವ್ಯಕ್ತಿ ಯಾವ ಜಾತಿ ಯಾವ ಧರ್ಮ ಅನುಸರಿಸಿದನೆಂಬುವುದು ಅವನು ಹುಟ್ಟಿದಾಗ ನಿರ್ಧರಿಸುವುದಕ್ಕಿಂತ ಅವನು ಅಂತಿಮ ದಿನಗಳಲ್ಲಿ ಯಾವ ಧರ್ಮ ಸ್ಥಾಪಿಸಿದ ಎನ್ನುವುದು ಮುಖ್ಯ; ಅದೇ ಜಗತ್ತಿಗೆ ಇತಿಹಾಸವಾಗಿ ಉಳಿಯುವುದು. ಈ ಸಾಮಾನ್ಯ ಅರಿವು ಡಾ. ಸವದತ್ತಿಯವರಿಗೆ ಇರದಿರುವುದನ್ನು ಕಂಡು ಅವರ ಸಂಶೋಧನಾ ಲೇಖನದ ಬಗ್ಗೆ ಅನುಕಂಪವೆನಿಸುತ್ತದೆ. ಮಹಾತ್ಮರನ್ನು ಮತ್ತು ಅವರ ನೀಡಿದ ತತ್ವ, ಧರ್ಮ, ಸಂದೇಶವನ್ನು ಕಾಲಾನಂತರದಲ್ಲಿ ಮರೆಮಾಚುವ ಪ್ರಮಾದಕ್ಕೆ ಗುರಿಯಾಗುವ ಡಾ. ಸಂಗಮೇಶ ಅಂಥವರು ಬಹಳ ಜನ ಹಿಂದೆಯೂ ಇದ್ದರು. ಈಗಲೂ ಇದ್ದಾರೆ. ಮುಂದೆಯೂ ಇರುತ್ತಾರೆ. ಇವರ ನಡೆಯನ್ನು ಬಸವತತ್ವದ ಅಭಿಮಾನಿಗಳು ಉಗ್ರವಾಗಿ ಖಂಡಿಸಲೇಬೇಕು. ಇದಕ್ಕೊಂದು ಅಂತಿಮ ವಿದಾಯ ಹೇಳಲೇಬೇಕು.

ಬಸವಣ್ಣ ನಂದಿಯಲ್ಲ; ಬಸವಣ್ಣ ವೀರಶೈವ ಪಂಥ ಸೇರಿಲ್ಲ.
ಬಸವಣ್ಣ ಯಾರು?(Who is basaveshwara)

ಬಸವಣ್ಣ ಮಾನವನೇ? ಅಲ್ಲ…ಸಕಲ ಜೀವಾತ್ಮರಿಗೆ ಲೇಸ ಬಯಸಿದ ಮಹಾಮಾನವ.
ಬಸವಣ್ಣ ಮೂರ್ತಿಯೇ? ಅಲ್ಲ…ಸಮಾನತೆಯ, ಸಹೋದರತೆಯ ಸಾಕಾರದ ಸಂಕೇತ.
ಬಸವಣ್ಣ ನಂದಿಯೇ?(ಎತ್ತು) ಅಲ್ಲ…ಮಾಹಾಮಾನವತ್ವದ ದಿವ್ಯ ಶಕ್ತಿಯಿಂದ ಎತ್ತಲು ಬಂದ ಮಾನವತಾವಾದಿ.
ಬಸವಣ್ಣ ಭಕ್ತನೇ? ಅಲ್ಲ… ಪರಿಪೂರ್ಣ ಅವತಾರಿ, ಯುಗಪುರುಷ, ಯುಗದ ಉತ್ಸಾಹಿ ವಿಶ್ವಗುರು.
ಬಸವಣ್ಣ ಬ್ರಾಹ್ಮಣನೇ? ಅಲ್ಲ…ಬ್ರಾಹ್ಮಣ್ಯತ್ವದ ವಿರೋದಿ, ಬಹುತ್ವದ ಪರವಾದಿ ಬ್ರಾಹ್ಮಣ.
ಬಸವಣ್ಣ ವೀರಶೈವನೆ ಅಲ್ಲ, ಲಿಂಗ ಸಮಾನತೆಯ ಲಿಂಗಾಯತ.
ಬಸವಣ್ಣ ಲಿಂಗಾಯತ ಜಾತಿ ಸ್ಥಾಪಕನೇ? ಅಲ್ಲ…ಅಂಗ-ಲಿಂಗರ ಬೆಸೆವ ಲಿಂಗಾಯತ ಧರ್ಮ ಸ್ಥಾಪಕ.
ಬಸವಣ್ಣ ರಾಜಕಾರಣಿಯೇ ಅಲ್ಲ…ಇಂದಿಂಗೆ ನಾಳಿಂಗೆ ಎಂದು ಬೇಕೆನ್ನದ ಮಹಾ ರಾಜಕೀಯ ಮುತ್ಸದ್ಧಿ.
ಬಸವಣ್ಣ ಜಂಗಮನೇ ಅಲ್ಲ… ಸರ್ವರೋಳು ಒಂದಾಗುವ ಮಹಾಜಂಗಮ ಪ್ರೇಮಿ.

ಅವೈಚಾರಿಕ ಮತ್ತು ಪೂರ್ವಾಗ್ರಹ ಪೀಡಿತ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ

ಪ್ರಗತಿಪರ ಚಿಂತಕರು,
✍️ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ
ಬಸವಧರ್ಮ ಪೀಠ, ಬಸವಕಲ್ಯಾಣ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!