Breaking News
Home / featured / ಬಸವ ವಿರೋಧಿ ಸವದತ್ತಿಮಠ ನಿಲುವಿಗೆ RBD ರಾಷ್ಟೀಯ ಅದ್ಯಕ್ಷ ಧನ್ನೂರ ಖಂಡನೆ

ಬಸವ ವಿರೋಧಿ ಸವದತ್ತಿಮಠ ನಿಲುವಿಗೆ RBD ರಾಷ್ಟೀಯ ಅದ್ಯಕ್ಷ ಧನ್ನೂರ ಖಂಡನೆ

ಬಸವ ಭಕ್ತರ ಕ್ಷಮೆಯಾಚನೆಗೆ ಆಗ್ರಹ

ಬೀದರ್: ಸಾಹಿತಿ ಡಾ. ಸಂಗಮೇಶ ಸವದತ್ತಿಮಠ ಅವರು ಪತ್ರಿಕೆಯೊಂದರಲ್ಲಿ ಬರೆದ ಲೇಖನದಲ್ಲಿ ಬಸವ ಜಯಂತಿಯ ದಿನ ಎತ್ತುಗಳಿಗೆ ಪೂಜೆ ಸಲ್ಲಿಸಿ ಮೌಢ್ಯ ಪ್ರದರ್ಶಿಸಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಡೆ ಹಾಗೂ ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದ್ದರು ಎನ್ನುವ ರಂಭಾಪುರಿ ಶ್ರೀಗಳ ಸುಳ್ಳು ಹೇಳಿಕೆಯನ್ನು ಸಮರ್ಥಿಸಿರುವುದನ್ನು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತೀವ್ರವಾಗಿ ಖಂಡಿಸಿದ್ದಾರೆ.
ಶಾಮನೂರು ಮಾಡಿದ ತಪ್ಪು ಹಾಗೂ ರಂಭಾಪುರಿ ಶ್ರೀಗಳ ಹೇಳಿಕೆಗೆ ನಾಡಿನಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರ ಮಧ್ಯೆ ಸವದತ್ತಿಮಠ ಇಬ್ಬರನ್ನೂ ಸಮರ್ಥಿಸುವ ಭರದಲ್ಲಿ ದಡ್ಡತನ ಪ್ರದರ್ಶಿಸಿ ಬಸವ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಬಸವಣ್ಣನವರೇ ತಮ್ಮ ಒಂದು ವಚನದಲ್ಲಿ ತಮ್ಮನ್ನು ತಾವು ಎತ್ತು ಎಂದುಕೊಂಡಿದ್ದಾರೆ ಎಂದು ಉಲ್ಲೇಖಿಸಿರುವ ಸವದತ್ತಿಮಠ ಅವರಲ್ಲಿ ವಚನ ಸಾಹಿತ್ಯ ಅಧ್ಯಯನದ ಕೊರತೆ ಎದ್ದು ಕಾಣುತ್ತದೆ. ಭಾಷಾ ಶಾಸ್ತ್ರ ಪ್ರಾಧ್ಯಾಪಕ, ಸಾಹಿತಿ ಎಂದು ಹೇಳಿಕೊಳ್ಳುವ ಅವರು ವಚನದ ಭಾವಾರ್ಥವನ್ನು ಅರಿಯದೆ, ತನಗೆ ತಿಳಿದಂತೆ ಅರ್ಥೈಸಿಕೊಂಡು ಲೇಖನ ಬರೆದಿರುವುದು ಅವರ ಯೋಗ್ಯತೆಯನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಬಸವಣ್ಣನವರು ಜಗತ್ತು ಕಂಡ ಮಹಾ ಪ್ರವಾದಿ,
ಮಹಾ ಮಾನವತಾವಾದಿ, ದಾರ್ಶನಿಕ, ವಿಭೂತಿ ಪುರುಷ, ಸ್ವತಂತ್ರ ವಿಚಾರವಾದಿ, ಜಗಜ್ಯೋತಿ, ವಿಶ್ವಗುರು ಆಗಿದ್ದಾರೆ. ಅವರ ಮಹಾನ್ ವ್ಯಕ್ತಿತ್ವ ಹಾಗೂ ಜಗದೋದ್ಧಾರಕ ವಿಚಾರಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ. ಅವುಗಳನ್ನು ಹತ್ತಿಕ್ಕಲು ೯೦೦ ವರ್ಷಗಳಿಂದ ಷಡ್ಯಂತ್ರ ನಡೆಯುತ್ತಲೇ ಇದೆ. ಸವದತ್ತಿಮಠ ಬಸವ ವಿರೋಧಿ ಸಂತತಿಯ ವಾರಸುದಾರರಂತೆ ಕಂಡು ಬರುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಶಾಮನೂರು ಶಿವಶಂಕರಪ್ಪ, ರಂಭಾಪುರಿ ಶ್ರೀ, ಸವದತ್ತಿಮಠ ಅಂತಹವರು ಏನೇ ಪ್ರಯತ್ನ ಮಾಡಿದರೂ ಬಸವಣ್ಣನವರ ಇತಿಹಾಸ ಬದಲಿಸಲು ಹಾಗೂ ಅವರ ವ್ಯಕ್ತಿತ್ವವನ್ನು ಹಿಡಿದಿಡಲು ಸಾಧ್ಯವಿಲ್ಲ. ಅವರು ವಿಶ್ವವನ್ನು ವ್ಯಾಪಿಸಿದ್ದಾರೆ. ಅವರ ವ್ಯಕ್ತಿತ್ವ ಹಾಗೂ ತತ್ವಗಳು ಜಗತ್ತಿಗೆ ದಾರಿದೀಪವಾಗಿವೆ ಎಂದು ಹೇಳಿದ್ದಾರೆ.
ಸಾಹಿತಿಯಾದವರು ಸಮಾಜ ಸುಧಾರಣೆಗೆ ಪೂರಕವಾದ ಸಾಹಿತ್ಯ ರಚಿಸಬೇಕು. ಇತಿಹಾಸ ಪುರುಷರ ಕುರಿತು ಸರಿಯಾದ ಅಧ್ಯಯನ ಇದ್ದರೆ ಮಾತ್ರ ಲೇಖನ ಬರೆಯಬೇಕು. ಇಲ್ಲವಾದರೆ ತಮ್ಮ ಪಾಡಿಗೆ ತಾವು ಇರಬೇಕು. ಇಲ್ಲಸಲ್ಲದ್ದನ್ನು ಬರೆಯಲು ಹೋದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ತಮ್ಮ ಪ್ರಮಾದಕ್ಕಾಗಿ ಸವದತ್ತಿಮಠ ಬಸವ ಭಕ್ತರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!