Breaking News
Home / featured / ಸವದತ್ತಿಮಠರಂಥ ಇತರ ಸಾಹಿತಿಗಳೆ, ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?

ಸವದತ್ತಿಮಠರಂಥ ಇತರ ಸಾಹಿತಿಗಳೆ, ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ?

ಡಾ. ಸಂಗಮೇಶ ಸವದತ್ತಿಮಠರ ‘ಬಸವಣ್ಣ ಎತ್ತು ಮತ್ತು ಬ್ರಾಹ್ಮಣ’ ವಿಜಯವಾಣಿ ಅಂಕಣ “ಅನಿಸಿಕೆ” ಲೇಖನಕ್ಕೆ ಪ್ರತಿಕ್ರಿಯೆ

ವಿಜಯವಾಣಿಯಲ್ಲಿ ದಿನಾಂಕ 12-05-2020 ರಂದು ‘ಅನಿಸಿಕೆ’ ಅಂಕಣದಲ್ಲಿ ಪ್ರಕಟವಾದ “ಬಸವಣ್ಣ, ಎತ್ತು ಮತ್ತು ಬ್ರಾಹ್ಮಣ..”. ಎಂಬ ಲೇಖನದಲ್ಲಿ ಡಾ. ಸಂಗಮೇಶ ಸವದತ್ತಿಮಠರವರು ವಚನಗಳನ್ನು ತಪ್ಪಾಗಿ ಅರ್ಥೈಸಿ, ಮೌಢ್ಯತೆಯನ್ನು ಪ್ರದರ್ಶಿಸಿದ್ದಾರೆ.ಲಕ್ಷಾರ್ಥ ಮತ್ತು ವಾಚ್ಯಾರ್ಥಗಳನ್ನು ತಿಳಿಯದ ಸಂಗಮೇಶ ಸವದತ್ತಿಮಠರನ್ನು ಹಿರಿಯ ಸಾಹಿತಿ ಮತ್ತು ಭಾಷಾವಿಜ್ಞಾನಿ ಎನ್ನಲಾಗದು.

ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಷಭನೆಂಬ ವಾಹನವಾಗಿರ್ದೆ ಕಾಣಾ,
ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದೆಹೆನೆಂದು
ಜಂಗಮ ಲಾಂಛನವಾಗಿ ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ.

ಮೇಲಿನ ವಚನದಲ್ಲಿ ವೃಷಭ ಎತ್ತಲ್ಲ, ಏರಿದಾತ ವ್ಯಕ್ತಿಯಲ್ಲ, ಜಂಗಮವೆಂಬುದು ಜಾತಿಯಲ್ಲ.

ದೇವನು ನಿರಾಕಾರನೂ ಮತ್ತು ಸಾಕಾರನೂ ಆಗಿದ್ದಾನೆ. ದೇವನ ನಿರಾಕಾರ ಸ್ವರೂಪವನ್ನು ಅರಿಯಲು ಸುಜ್ಞಾನ ಬೇಕು. ನಿರಾಕಾರವು ಆಕಾರಕ್ಕೆ ಬರಬೇಕಾದರೆ ಜ್ಞಾನ ಕ್ರಿಯೆಯಾಗಿ ಪರಿವರ್ತಿತವಾಗಬೇಕು. ಅಂದರೆ ಜ್ಞಾನ (ಅರಿವು) ಮತ್ತು ಕ್ರಿಯೆಯೆ (ಆಚಾರ) ಮೂಲಕವೆ ನಿರಾಕಾರವು ಆಕಾರಕ್ಕೆ ಬರುವುದು ಎಂದರ್ಥ.
ಶಿವನನ್ನು ಅರಿವಿನಲ್ಲಿ ಕಂಡು ಸದಾಚಾರಿಯಾದ ಪರಿಪೂರ್ಣ ಸಾಧಕನ ಸಹಸ್ರಾರದಲ್ಲಿ ಶಿವನ ಕಳೆ ಬೆಳಗುತ್ತಿರುವುದು.

ಅಂತಹ ಸಾಧಕನೇ ವೃಷಭ, ಆತನ ಅರಿವಿನಲ್ಲಿ (ಮಸ್ತಕದಲ್ಲಿ) ಬೆಳಗುತ್ತಿರುವುದು ಶಿವತತ್ವದ ಬೆಳಗು. ಶಿವನ ವಾಹನ ವೃಷಭನೆಂಬುದು ವಾಚ್ಯಾರ್ಥವಾದರೆ, ಶಿವತತ್ವ ಸಾಧಕನೆಂಬುದು ಲಕ್ಷಾರ್ಥ. ಷಟಸ್ಥಲ ಸಾಧನೆಯಿಂದ ಸಾಧಕ ಶಿವನೇ ಆಗುತ್ತಾನೆ. ಇದನ್ನು ಗಮನಿಸಿದ ಮಡಿವಾಳ ಮಾಚಿದೇವರು ಬಸವಣ್ಣನವರನ್ನು ಕುರಿತು ಹೀಗೆ ವಚಿಸುತ್ತಾರೆ.

ಶಿವ ತಾನೀತ ಮರ್ತ್ಯಲೋಕವ ಪಾವನವ ಮಾಡಲು,
ಗುರು ತಾನೀತ ಎನ್ನ ಭವರೋಗವ ವೇದ್ಥಿಸಲು,
ಭಕ್ತ ತಾನೀತ ಎನಗೆ ವಿಸ್ತಾರವಾಗಿ.
ಎನಗೆ ಜಂಗಮ ತಾನೀತ ಅನಾದಿ ಸಂಸಿದ್ಧ ಘನಮಹಿಮನಾಗಿ.
ಲಿಂಗ ತಾನೀತ ಎನಗೆ ಪ್ರಾಣಲಿಂಗ ತಾನಾಗಿ.
ಎನ್ನ ವಿಸ್ತಾರ ತಾನೀತ ಎನ್ನ ನಿಲುಕಡೆಯ ತಾನಾಗಿ.
ಎನ್ನ ಸರ್ವಸ್ವಾಯತವ ಮಾಡಿದ ಮಹಿಮ ತಾನೀತ ಕಾಣಾ,
ಕಲಿಗೆದೇವರದೇವ, ನಿಮ್ಮ ಶರಣ ಬಸವಣ್ಣ.

ಸಂಗಮೇಶ ಸವದತ್ತಿಮಠರವರು ಅಜ್ಞಾನದಿಂದ ತಪ್ಪಾಗಿ ಅರ್ಥೈಸಿದ ಇತರ ವಚನಗಳೆಲ್ಲವನ್ನೂ ಶಿವತತ್ವದ ಬೆಳಕಿನಲ್ಲಿ ನಿರ್ವಚಿಸಿದಾಗ ಬಸವಣ್ಣನವರ ದಿವ್ಯ, ಭವ್ಯ ನಿಜ ಸ್ವರೂಪ ಗೋಚರವಾಗುತ್ತದೆ.
ಶರಣರ ಅಸಂಖ್ಯ ವಚನಗಳು ಬಸವಣ್ಣನವರನ್ನು ಗುರು, ಲಿಂಗ, ಜಂಗಮ, ಶಿವ, ಪರಶಿವ, ಪರಬ್ರಹ್ಮ, ಮಹಂತ, ದಿವ್ಯ ಜ್ಞಾನಿ, ವಿಭೂತಿ, ಮಹಾತ್ಮ, ಪರಮಗುರು, ಜಗದ್ಗುರು ಎಂದು ಉದ್ಗರಿಸಿದರೆ ಸಂಗಮೇಶ ಸವದತ್ತಿಮಠರಂಥ ಸಾಹಿತಿಗಳು ಬಸವ ಬೆಳಕನ್ನು ಕಾಣದೆ ಜಾತಿಯ ಕತ್ತಲ್ಲಲ್ಲಿ ಎತ್ತು, ಬ್ರಾಹ್ಮಣ ಎಂದು ಕನವರಿಸುತ್ತಿರುವುದು ವಿಪರ್ಯಾಸವೇ ಸರಿ.

ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ.(1-345)
ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ…. ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ, ಅಶುದ್ಧನ ಶುದ್ಧನ ಮಾಡಿದನಾಗಿ (1-716) ಎಂದು ವಿಪ್ರಕರ್ಮವನ್ನು ಬಿಟ್ಟವರು

ಬಸವಣ್ಣನವರು ವೈದಿಕ ವೈಷ್ಣವ ಬ್ರಾಹ್ಮಣರನ್ನೇ ಗುರಿಯಾಗಿಸಿಕೊಂಡಿದ್ದರೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದು ತಪ್ಪು. ನಡೆ-ನುಡಿಯೊಂದಾಗದ ಕರ್ಮಕಾಂಡ ಮೂಲದ ಯಾವುದೇ ಪಂಥಗಳಿರಲಿ ಬಸವಣ್ಣನವರು ಖಂಡಿಸಿದ್ದಾರೆ. ಕೆಳಗಿನ ವಚನದಲ್ಲಿ ಆಗಮಿಕ ಶೈವರನ್ನು ಸಹ ದೂರವಿರಿಸಿದ್ದಾರೆ.

ತಮತಮಗೆಲ್ಲ ನೊಸಲಕಣ್ಣವರು, ತಮತಮಗೆಲ್ಲ ನಂದಿವಾಹನರು, ತಮತಮಗೆಲ್ಲ ಖಟ್ವಾಂಗಕಪಾಲತ್ರಿಶೂಲಧರರು.ದೇವರಾರು ಭಕ್ತರಾರು ಹೇಳಿರಯ್ಯಾ ! ಕೂಡಲಸಂಗಮದೇವಾ, ನಿಮ್ಮ ಶರಣರು ಸ್ವತಂತ್ರರು, ಎನ್ನ ಬಚ್ಚಬರಿಯ ಬಸವನೆನಿಸಯ್ಯಾ.(1-819)

ಸವದತ್ತಿಮಠರಂಥ ಇತರ ಸಾಹಿತಿಗಳೆ, ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ? ಎನ್ನುವ ವೈಜ್ಞಾನಿಕ ಮನೋಭಾವ ನಿಮಗಿದ್ದರೆ ಬಸವಪಥದಲ್ಲಿ ಹೆಜ್ಜೆ ಹಾಕಿ.

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.

ಕಲ್ಲೊಳಗೆ ಹುಟ್ಟಿದವರು ಸತ್ಯವೆಂಬ ಕಡು ಮೌಢ್ಯತೆಯ ಮನೋಭಾವವಿದ್ದರೆ, ನೀವಿದ್ದಲ್ಲಿಯೇ ಇರಿ. ಕೂಡಲಸಂಗನ ಶರಣರೊಂದಿಗೆ ಸರಸವಾಡಿದರೆ ವಿಷಸರ್ಪವ ಹಿಡಿದು ಕೆನ್ನೆಯ ತುರಿಸಿಕೊಂಡಂತಾದೀತು, ಎಚ್ಚರಿಕೆ.

ಅರಗಿನ ಪುತ್ಥಳಿಯನುರಿಯ ನಾಲಗೆ ಹೊಯಿದು ಮಾತಾಡುವ ಸರಸ ಬೇಡ !
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ ಚಲ್ಲವಾಡಿದಡೆ ಹಲ್ಲು ಹೋಹುದು !
ಕೂಡಲಸಂಗನ ಶರಣರೊಡನೆ ಸರಸವಾಡಿದಡೆ ಅದು ವಿರಸ ಕಾಣಿರಯ್ಯಾ.

-ಶಿವಶರಣಪ್ಪ ಮದ್ದೂರ್,
ಉಪಾಧ್ಯಕ್ಷರು,
ಜಾಗತಿಕ ಲಿಂಗಾಯತ ಮಹಾಸಭಾ
ಬೆಂಗಳೂರು ಘಟಕ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!