Breaking News
Home / featured / ಶರಣರು ತಿಳಸಿದ ಕಾಯಕದ ತತ್ವ

ಶರಣರು ತಿಳಸಿದ ಕಾಯಕದ ತತ್ವ

ವಿಜಯಪುರ : ಮನುಷ್ಯ ಸ್ವಾವಲಂಬಿಯಾಗಿರಬೇಕು ಎನ್ನುವುದು ಶರಣರ ಅಚಲ ನಿಲುವು. ಸೌಜನ್ಯಕ್ಕಾಗಿ ಬಂಧುಗಳ ಮನೆಯಲ್ಲಿ ಉಣ್ಣುವುದನ್ನೂ ಶರಣರು ವಿರೋಧಿಸುತ್ತಾರೆ. ಒಟ್ಟಾರೆ ಕಾಯಕದ ಮಹತ್ವ ಮತ್ತು ಸ್ವಾವಲಂಬನೆಯ ಅನಿವಾರ್ಯತೆಯನ್ನು ಶರಣರು ಪ್ರತಿಪಾದಿಸಿದ್ದಾರೆ. ಶರಣೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯ ಒಂದು ವಚನ :

” ಉಂಡೊಡೆಯರಲ್ಲಿ ಕೊಂಬ
ಪ್ರಸಾದ ಕಾರಿದ ಕೂಳು.
ಸಣ್ಣವರಲ್ಲಿ ಕೊಂಬ ಪ್ರಸಾದ
ಸಂತೆಯ ಸೂಳೆಯ ಎಂಜಲು.
ಅಳಿಯನಲ್ಲಿ ಕೊಂಬ ಪ್ರಸಾದ ಅಮೇಧ್ಯ.
ಮಕ್ಕಳಲ್ಲಿ ಕೊಂಬ ಪ್ರಸಾದ ಗೋಮಾಂಸ.
ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ.
ನಂಟರಲ್ಲಿ ಕೊಂಬ ಪ್ರಸಾದ ನರಮಾಂಸ.
ವಂದಿಸಿ ನಿಂದಿಸಿ ಕೊಂಬ ಪ್ರಸಾದವ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.”

~ ಶರಣೆ ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ.

ಉಂಡೊಡೆಯರಲ್ಲಿ ಕೊಂಬ ಪ್ರಸಾದ ಕಾರಿದಕೂಳು.

ನಾವು ಕೆಲಸ ಮಾಡುವ ಮನೆಯ ಯಜಮಾನನ ಮನೆಯಲ್ಲಿ ಉಣ್ಣುವುದು ಆತ ಉಂಡು ಉಳಿದ ಎಂಜಲ ಕೂಳಿಗೆ ಸಮನಾದದ್ದು ಎನ್ನುತ್ತಾಳೆ ಶರಣೆ.

ಸಣ್ಣವರಲ್ಲಿ ಕೊಂಬ ಪ್ರಸಾದ ಸಂತೆಯ ಸೂಳೆಯ ಎಂಜಲು.

ಸಣ್ಣವರಲ್ಲಿ ಅಂದರೆ ಇಲ್ಲಿ ನಮಗಿಂತ ಯವಸ್ಸಿನಲ್ಲಿ ಸಣ್ಣವರು ಅಂತಲ್ಲ. ಸಣ್ಣತನದ ಗುಣವುಳ್ಳ ಜನರ ಮನೆಯಲ್ಲಿ ಮಾಡಿದ ಊಟವು ಸಂತೆಯ ಸೂಳೆಯ ಎಂಜಲು ಎನ್ನುವುದು ಶರಣೆಯ ಸ್ಪಷ್ಟ ಅಭಿಮತ. ಸಂತೆಯ ಸೂಳೆ ಎನ್ನುವ ಉಪಮೇಯ ಇಲ್ಲಿ ಸಾಂಕೇತಿಕವಾಗಿ ಒಬ್ಬ ಗೆಣೆಗಾರ ತನ್ನ ಮನೆಯಲ್ಲಿ ಉಂಡ ಸಂಗತಿ ಮಾರನೇ ದಿನ ರಾತ್ರಿ ಮತ್ತೊಬ್ಬ ಗೆಣೆಗಾರನಿಗೆ ದೊಡ್ಡಸ್ತಿಕೆಯಿಂದ ಹೇಳುತ್ತಾಳೆ ಎನ್ನುವ ಅರ್ಥದಲ್ಲಿ ಪ್ರಯೋಗಿಸಲಾಗಿದೆ.

ಅಳಿಯನಲ್ಲಿ ಕೊಂಬ ಪ್ರಸಾದ ಅಮೇಧ್ಯ.

ಅಳಿಯನ ಮನೆಯಲ್ಲಿ ಉಣ್ಣಬಾರದು ಎನ್ನುವ ಮಾತು ಇಲ್ಲಿ ಲೌಕಿಕ ಅರ್ಥದಲ್ಲಿ ಹೇಳಲಾಗಿದೆ. ಏಕೆಂದರೆ ಅಳಿಯನಾದವನು ತನ್ನ ಹೆಂಡತಿಗೆ ನಿಮ್ಮಪ್ಪ ನಮ್ಮ ಮನೆಯಲ್ಲಿ ಉಂಡು ಹೋದ ಎನ್ನುವ ಸಾಧ್ಯತೆಗಳಿರುವುದರಿಂದ ಆ ಮಾತು ತನಗೂ ಹಾಗೂ ಮಳಗಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಅಳಿಯನ ಮನೆಯ ಊಟ ಹೇಸಿಗೆಗೆ ಸಮ ಎನ್ನುತ್ತಾಳೆ ಶರಣೆ.ಬಾರದೆನ್ನುವರು ಉಂಡರೆ ಅದು ಹೇಸಿಗೆ ತಿಂದಂತೆ.

ಮಕ್ಕಳಲ್ಲಿ ಕೊಂಬ ಪ್ರಸಾದ ಗೋಮಾಂಸ.

ಮಕ್ಕಳ ಮನೆಯಲ್ಲಿ ಮಾಡುವ ಊಟ ಅದು ಗೋಮಾಂಸ ತಿಂದಂತೆ ಎನ್ನುತ್ತಾಳೆ ಶರಣೆ. ಗೋಮಾಂಸವನ್ನು ಬುದ್ಧ ಪೂರ್ವದ ಕಾಲದಲ್ಲಿ ವೈದಿಕರು ತಿನ್ನುತ್ತಿದ್ದರು ಎಂದು ವೇದಗಳು ಹೇಳುತ್ತವೆ. ಗೋವು ಪವಿತ್ರವಾಗಿದೆ ಎಂದು ನಂಬುವ ವೈದಿಕರೆ ಗೋಮಾಂಸ ತಿನ್ನುವ ವೈಪರಿತ್ಯವನ್ನು ಶರಣೆ ಮಕ್ಕಳ ಮನೆಯಲ್ಲಿ ಕೊಳ್ಳುವ ಪ್ರಸಾದಕ್ಕೆ ಹೋಲಿಸಿದ್ದಾಳೆ.

ತಮ್ಮನಲ್ಲಿ ಕೊಂಬ ಪ್ರಸಾದ ಸಿಂಗಿ.

ಸಹೋದರರ ಮನೆಯಲ್ಲಿ ಉಣ್ಣುವ ಊಟವು ವಿಷದಂತೆ ಎನ್ನುವ ಶರಣೆ ಆ ಸಹೋದರರ ಹೆಂಡಂದಿರು ಹಿಂದೆ ಆಡಿಕೊಳ್ಳುವ ಮಾತು ವಿಷದಂತೆ ಕಾಡುತ್ತದೆ ಎನ್ನುವ ಅರ್ಥದಲ್ಲಿ ಹೇಳಿದ್ದಾಳೆ.

ನಂಟರಲ್ಲಿ ಕೊಂಬ ಪ್ರಸಾದ ನರಮಾಂಸ.

ಬಂಧು ಬಾಂಧವರ ಮನೆಯಲ್ಲಿ ಉಂಡರೆ ಅದು ಮನುಷ್ಯನ ಮಾಂಸ ತಿಂದಂತೆ. ಅಂದರೆ ಮನುಷ್ಯನಾಗಿ ಮನುಷ್ಯನ ಮಾಂಸ ತಿನ್ನುವ ವಿಕ್ರತ ಭಾವ ಎನ್ನುತ್ತಾಳೆ ಶರಣೆ.

ವಂದಿಸಿ ನಿಂದಿಸಿ ಕೊಂಬ ಪ್ರಸಾದವ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.

ನಾವು ಅನೇಕ ಕಡೆ ನೋಡಿರುತ್ತೇವೆ. ಸೌಜನ್ಯಕ್ಕೆ ವಂದಿಸಿ ಊಟಕ್ಕೆ ಬನ್ನಿ ಎನ್ನುವ ಜನರಿರುತ್ತಾರೆ. ನಾವು ಆಗಲಿ ಎಂದು ಊಟ ಮಾಡಿದೆವೊ ಆಮೇಲೆ ನಿಂದಿಸುತ್ತಾರೆ. ಹೀಗೆ ಮುಖದೆದುರಿಗೆ ವಂದಿಸಿˌ ಆಮೇಲೆ ನಿಂದಿಸುವವರ ಮನೆಯ ಅನ್ನವು ನನಗೆ ಬೇಡ. ನಾವು ಉಣ್ಣುವ ಅನ್ನ ನಮ್ಮ ಕಾಯಕದ ಶ್ರಮದಿಂದ ಸಂಪಾದಿಸಿದ ಅನ್ನವಾಗಿಬೇಕು. ಆಗಲೇ ಅದು ದೇವರಿಗೆ ಅರ್ಪಿತವಾಗುತ್ತದೆ ಎನ್ನುವುದು ಶರಣೆ ಕಾಳವ್ವೆಯ ಅಚನ ನಿಲುವು.

~ ಡಾ. ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!