Breaking News
Home / featured / ರಾಜಾರಾಮ್ ಮೋಹನ್ ರಾಯ್: ಸತಿಸಹಗಮನ ಪದ್ಧತಿಯ ವಿರುದ್ಧ ಸಮರ ಸಾರಿದ ಮೇಧಾವಿ

ರಾಜಾರಾಮ್ ಮೋಹನ್ ರಾಯ್: ಸತಿಸಹಗಮನ ಪದ್ಧತಿಯ ವಿರುದ್ಧ ಸಮರ ಸಾರಿದ ಮೇಧಾವಿ

~ ಡಾ. ಜೆ ಎಸ್ ಪಾಟೀಲ.

ಗಂಡ ಸತ್ತ ಮೇಲೆ ಹೆಂಡತಿಯನ್ನು ಗಂಡನ ಚಿತೆಯಲ್ಲಿ ಸಹಗಮನದ ಹೆಸರಿನಲ್ಲಿ ಕೊಲ್ಲುವ ಸಂಪ್ರದಾಯ ಸನಾತನ ವೈದಿಕ ಸಂಪ್ರದಾಯಕ ಮಹಾ ಕ್ರೌರ್ಯಗಳಲ್ಲಿ ಒಂದು. ಸನಾತನ ವೈದಿಕ ಮತ ಇಂಥ ಅನೇಕ ಕ್ರೌರ್ಯಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಭರತ ಖಂಡವನ್ನು ಶತಶತಮಾನಗಳಿಂದ ಸುಡುತ್ತಿದೆ. ಗಂಡ ಸತ್ತ ಹೆಣ್ಣು ವಿಧವೆಯಾಗಿ ಉಳಿದು ಬಿಟ್ಟರೆ ಆಕೆ ಶೀಲಗೆಡಬಹುದು ಎನ್ನುವ ಮೇಲ್ನೋಟದ ಸಮರ್ಥನೆಗಿಂತ ಆಕೆ ಗಂಡನ ಚಿತೆ ಏರುವ ಮೊದಲು ತನ್ನ ಮೈಮೇಲಿರುವ ಬೆಲೆ ಬಾಳುವ ಒಡವೆಗಳನ್ನು ಪುರೋಹಿತರಿಗೆ ದಾನ ಮಾಡಬೇಕಿತ್ತು. ಆಕೆ ಒಡವೆವ ಮೇಲಿನ ಮೋಹ ಒಂದು ಕಡೆಯಾದರೆ ವಿಧವೆಗೆ ಪಾಲು ಕೊಡುವ ಗೊಡವೆಯನ್ನು ತಪ್ಪಿಸಿಕೊಳ್ಳುವುದು ಇನ್ನೊಂದು ಹುನ್ನಾರವಾಗಿತ್ತು. ಗಂಡನೊಂದಿಗೆ ಚಿತೆ ಏರಿ ಸಾಯುವ ಮೂಲಕ ಹೆಣ್ಣು ಪತಿಯೊಡನೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾಳೆಂಬ ಕಥೆ ಕಟ್ಟಿದ್ದ ವೈದಿಕರು ತಮ್ಮ ಈ ಕ್ರೂರ ಹುನ್ನಾರಗಳಿಗೆ ಸಂಪ್ರದಾಯದ ಚೌಕಟ್ಟನ್ನು ಸ್ರಷ್ಟಿಸಿ ಅಮಾನವೀಯ ಪದ್ದತಿಗಳನ್ನು ಜಾರಿಗೆ ತಂದಿದ್ದರು.ನಿನ್ನೆ ಮೇ 22 ರಾಜಾ ರಾಮ್ ಮೋಹನರಾಯ್ ಅವರು ಹುಟ್ಟಿದ ದಿನ. ಭಾರತದಲ್ಲಿ ಮೊಟ್ಟಮೊದಲು ರಾಯ್ ಅವರು ಈ ಕ್ರೂರ ವೈದಿಕ ಆಚರಣೆಯ ವಿರುದ್ಧ ಧ್ವನಿ ಎತ್ತಿದವರು. ಒಡಹುಟ್ಟಿದ ಅಣ್ಣ ಅಕಾಲ ಮ್ರತ್ಯುವಿಗೀಡಾದಾಗ ನಂತರ ತನ್ನ ಅತ್ತಿಗೆ ಅಣ್ಣನ ಚಿತೆ ಏರಲು ತಯ್ಯಾರಾಗಿ ನಿಂತಾಗ ಅವಳನ್ನು ಆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುತ್ತಾರೆ ಮೋಹನ್ ರಾಯ್. ಆದರೆ ಅಲ್ಲಿ ನೆರೆದಿದ್ದ ಸಂಪ್ರದಾಯವಾದಿಗಳು ಆ ಹೆಣ್ಣುಮಗಳನ್ನು ಒತ್ತಾಯಿಸಿ ಚಿತೆ ಏರುವಂತೆ ಮಾಡುತ್ತಾರೆ. ಒಲ್ಲದ ಮನಸ್ಸಿನಿಂದ ಚಿತೆಯಾಗ್ನಿಯ ಕೆನ್ನಾಲಿಗೆ ಸೋಂಕಿದಾಗಿನ ಆ ಹೆಣ್ಣು ಮಗಳ ಆಕ್ರಂದನದಿಂದ ಮೋಹನ್ ರಾಯ್ ವ್ಯಾಕುಲರಾಗುತ್ತಾರೆ. ಸಂಪ್ರದಾಯವಾದಿಗಳು ಮಹಾನ್ ಸಾಧನೆ ಮಾಡಿದವರಂತೆ ಸಂತೋಷಗೊಳ್ಳುತ್ತಾರೆ. ಸಂಪ್ರದಾಯದ ಹೆಸರಿನಲ್ಲಿ ಕಣ್ಣೆದುರಿಗೆ ನಡೆದ ತನ್ನ ಅತ್ತಿಗೆಯ ಮೇಲಿನ ದೌರ್ಜನ್ಯದಿಂದ ಮನನೊಂದ ರಾಜಾರಾಮ್ ಮೋಹನ್ ರಾಯ್ ಈ ಕ್ರೂರ ಸತಿಸಹಗಮನ ಪದ್ದತಿಯ ವಿರುದ್ಧ ಮುಂದೆ ದೊಡ್ಡ ಸಮರವನ್ನೆ ಸಾರುತ್ತಾರೆ.

ನಾಗರಿಕ ಸಮಾಜಕ್ಕೆ ವ್ಯತಿರಿಕ್ತವಾಗಿದ್ದ ವೈದಿಕರ ಈ ವಿಕ್ರತಿಯನ್ನು ನಿಲ್ಲಿಸುವ ಅಚಲ ನಿರ್ಧಾರ ಮಾಡಿದ ರಾಯ್ ಮುಂದೆ ನವೋದಯದ ಧೃವತಾರೆಯಾಗಿ ಹೊರಹೊಮ್ಮುತ್ತಾರೆ. 1772ˌ ಮೇ 22 ರಂದು ಬಂಗಾಳದ ರಾಧಾನಗರದಲ್ಲಿ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ರಾಜಾ ರಾಮ್ ಮೋಹನ್ ರಾಯ್ ತಮ್ಮ ವಿದ್ಯಾಬ್ಯಾಸವನ್ನು ಪೂರೈಸಿಕೊಂಡು ಪ್ರಗತಿಪರ ವಿಚಾರಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ತಮ್ಮ ಮನೆˌ ಸುತ್ತಮುತ್ತಲಿನ ಪರಿಸರದಲ್ಲಿ ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿದ್ದ ಕ್ರೌರ್ಯ ಮತ್ತು ಮೌಢ್ಯಾಚರಣೆಗಳನ್ನು ಅವರು ಪ್ರಶ್ನಿಸುವ ಎದೆಗಾರಿಕೆ ಬೆಳೆಸಿಕೊಂಡಿರುತ್ತಾರೆ. ರಾಯ್ ಅವರು ಇಸ್ಲಾಂ ಮತ್ತು ಬೌದ್ಧ ಧರ್ಮಗಳಲ್ಲಿನ ಸುಧಾರಿತ ಚಿಂತನೆಗಳಿಂದ ಆಕರ್ಶಿತರಾಗಿರುತ್ತಾರೆ. ಆನಂತರ ಸನಾತನ ವೈದಿಕ ಮತದ ವೇದˌ ಉಪನಿಷತ್ತುಗಳನ್ನು ಆಳವಾಗಿ ಅಭ್ಯಸಿಸುತ್ತಾರೆ. ಧರ್ಮ ಶಾಸ್ತ್ರಗಳ ಒಳಗಿನ ಸಾರಕ್ಕೂ ಮತ್ತು ನೈಜ ಆಚರಣೆಗು ಅಜಗಜಾಂತರ ವ್ಯತ್ಯಾಸವನ್ನು ಗ್ರಹಿಸಿದ ರಾಯ್ ವೇದಗಳನ್ನು ಬಂಗಾಳೀ ಭಾಷೆಗೆ ಅನುವಾದಿಸುತ್ತಾರೆ. ಎಲ್ಲ ಸುಧಾರಿತ ಧರ್ಮಗಳ ಪ್ರಗತಿಪರ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಯ್ ಜನರನ್ನು ಆ ದಿಶೆಯಲ್ಲಿ ಜಾಗ್ರತಗೊಳಿಸುವ ಕಾರ್ಯ ಆರಂಭಿಸುತ್ತಾರೆ.

ಸತಿಸಹಗಮನˌ ಬಾಲ್ಯವಿವಾಹˌ ಬಹುಪತ್ನಿತ್ವ, ಭ್ರೂಣ ಹತ್ಯೆ, ಜಾತಿ ವ್ಯವಸ್ದೆ ಮುಂತಾದ ವೈದಿಕ ಕ್ರೂರ ಆಚರಣೆಗಳನ್ನು ತೊಡೆದು ಹಾಕಲು ರಾಯ್ ಅವರು ಬ್ರಹ್ಮ ಸಮಾಜವನ್ನು ಸ್ಥಾಪಿಸುತ್ತಾರೆ. ಬ್ರಹ್ಮಸಮಾಜ ಸ್ಥಾಪನೆಯ ಮೂಲಕ ಸಂಘಟಿತ ಜನಜಾಗ್ರತೆ ಕಾರ್ಯ ಆರಂಭಿಸಿದ ರಾಯ್ ತಮ್ಮ ವಿದ್ವತ್ ಲೇಖನಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಆರಂಭಿಸುತ್ತಾರೆ. ಅಂದು ಕಲ್ಕತ್ತಾದಲ್ಲಿ ನಡಿಯಿತೆನ್ನಲಾದ ಸಾಮೂಹಿತ ಸತಿಸಹಗಮನ ಕಾರ್ಯವನ್ನು ಪತ್ರಿಕೆಗಳಲ್ಲಿ ಸುದ್ದಿಯಾಗುವಂತೆ ಮಾಡಿದ ಮೋಹನ್ ರಾಯ್ˌ ಆ ಮೂಲಕ ಸರಕಾರದ ಗಮನವನ್ನು ಸೆಳೆಯುತ್ತಾರೆ. ಆನಂತರ ಸರಕಾರಕ್ಕೆ ಲಿಖಿತ ಮನವಿ ಸಲ್ಲಿಸುವ ಮೂಲಕ ಈ ಕ್ರೂರ ಪದ್ದತಿ ನಿಷೇಧಿಸುವಂತೆ ಒತ್ತಾಯಿಸುತ್ತಾರೆ. ಇವರ ಸರಣಿ ಹೋರಾಟದಿಂದ ಬ್ರಿಟೀಷ ಸರಕಾರ ಎಚ್ಚತ್ತುಕೊಂಡು 1829ರಲ್ಲಿ ಸತಿಸಹಗಮನ ಪದ್ದತಿಯನ್ನು ನಿಷೇಧಿಸುವ ಕಾನೂನು ಜಾರಿಗೊಳಿಸುತ್ತದೆ.

ಈ ಕಾನೂನು ಜಾರಿಯಾದ ಮೇಲೆ ಹಂತಹಂತವಾಗಿ ಸತಿಹಸಗಮನ ಪದ್ದತಿಯು ಸಂಪೂರ್ಣವಾಗಿ ನಿಂತುಹೋಗುತ್ತದೆ. ತಮ್ಮ ಜೀವಿತದ ಕೊನೆಯ ಉಸಿರಿರುವ ತನಕ ಸ್ತ್ರೀ ಸಂವೇದನೆಗಳನ್ನು ಗೌರವಿಸುತ್ತ ಅವರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ ರಾಜಾರಾಮ್ ಮೋಹನ್ ರಾಯ್ 1833 ರಲ್ಲಿ ಲಂಡನ್‍ನ ಬ್ರಿಸ್ಟಲ್‍ನಲ್ಲಿ ತಮ್ಮ ಕೊನೆಯುಸಿರೆಳೆದರು. ಸ್ತ್ಯೀಯರ ಸಮಸ್ಯೆಗಳಿಗೆ ಸ್ಪಂದಿಸಿ ಸನಾತನ ವೈದಿಕ ಕ್ರೌರ್ಯಗಳಿಂದ ಅವರನ್ನು ಮುಕ್ತಗೊಳಿಸಿದ ಮಹಾನ್ ಚೇತನವನ್ನು ನಾವೆಲ್ಲರೂ ಗೌರವಪೂರ್ವಕವಾಗಿ ಸ್ಮರಿಸೋಣ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಬಡತನದ ಬೇರು ಕತ್ತರಿಸುವ ಕಾರ್ಯ ಮಾಡಿದವರು ಬಸವಾದಿ ಶರಣರು

  ಗಜೇಂದ್ರಗಡ: ಸಮಾಜವನ್ನು ಕಾಡುವ ಬಡತನದ ಬೇರನ್ನು ಕತ್ತರಿಸುವ ಕಾರ್ಯವನ್ನು ಬಸವಾದಿ ಶರಣರು ತಮ್ಮ ನಡೆ ನುಡಿಯ ಮೂಲಕ ಹೇಳಿ …

Leave a Reply

Your email address will not be published. Required fields are marked *

error: Content is protected !!