Breaking News
Home / featured / ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ: ದುಷ್ಕರ್ಮಿಗಳ ಬಂದನಕ್ಕೆ ಆಗ್ರಹ

ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ: ದುಷ್ಕರ್ಮಿಗಳ ಬಂದನಕ್ಕೆ ಆಗ್ರಹ

ಬೆಳಗಾವಿ: ಲಿಂಗಾಯತ ಧರ್ಮದ ಪ್ರಖರ ಪ್ರವಚನಕಾರರಾಗಿರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಮಹಾಸ್ವಾಮೀಜಿಗಳಿಗೆ ಕೊಲೆ ಬೆದರಿಕೆ ಹಾಕುತ್ತಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ವಿವಿಧ ಲಿಂಗಾಯತ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಬುಧವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕೊರೋನಾ ಸಂಕಷ್ಟದ ಕಾಲದಲ್ಲಿ ದೇಶವೇ ಲಾಕ್‍ಡೌನ್ ಆಗಿದ್ದ ಸಂದರ್ಭದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಕೆಡಿಸಲು ಕೆಲ ದುಷ್ಕರ್ಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಲಿಂಗಾಯತ ಧರ್ಮದ ಪ್ರಖರ ಪ್ರವಚನಕಾರರಾಗಿರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಪ್ರಭು ಮಹಾಸ್ವಾಮೀಜಿಗಳಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಶ್ರೀಗಳ ವಿರುದ್ಧ ಅಸ್ಲೀಲ ಪದಗಳನ್ನು ಬಳಸಿದ್ದಾರೆ.

ಅಮಿತ ಜೈನ್ ಎನ್ನುವ ಕಿಡಿಗೇಡಿ ಮತ್ತು ಅವನ ಸಂಗಡಿಗರು ಫೇಸ್‍ಬುಕ್ ಮೂಲಕ ಸಂಘಟಿತ ಅಪರಾಧ ನಡೆಸಲು ಪ್ರಚೋದನೆ ಹಾಗೂ ಕುಮ್ಮಕ್ಕು ನೀಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭೆ ವತಿಯಿಂದ ಸಲ್ಲಿಸಲಾಗಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿಯಲ್ಲಿ ಫೇಸ್‍ಬುಕ್‍ನ ವಿವರ ನೀಡಲಾಗಿದೆ.
ಮನವಿ ಸಲ್ಲಿಸಿ ಮಾತನಾಡಿದ ರಾಷ್ಟ್ರೀಯ ಬಸವ ಸೇನೆಯ ಜಿಲ್ಲಾಧ್ಯಕ್ಷ ಶಂಕರ ಗುಡಸ್ ಅವರು, ನಿಜಗುಣಪ್ರಭು ಶ್ರೀಗಳಿಗೆ ಕೆಲ ದುಷ್ಕರ್ಮಿಗಳು ಪುನಃ ಪುನಃ ಜೀವ ಬೆದರಿಕೆ ಒಡ್ಡುತ್ತಿರುವದು ಲಿಂಗಾಯತ ಸಮಾಜದಲ್ಲಿ ಆತಂಕ ಮೂಡಿಸಿದೆ. ಧರ್ಮ ಪ್ರಚಾರ ನಿಲ್ಲಿಸದಿದ್ದರೇ, ಎಂ.ಎಂ.ಕಲಬುರಗಿಯವರಿಗೆ ಕಾಣಿಸಿದ ಗತಿ ನಿಮಗೂ ಕಾಣಿಸುತ್ತೇವೆ. ಕೆಲವೇ ದಿನಗಳಲ್ಲಿ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಆ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು. ಮುಂದೆ ಆಗಬಹುದಾದ ಅನಾಹುತ ತಡೆಯದಿದ್ದರೇ, ಉಗ್ರ ಹೋರಾಟ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, ನಿಜಗುಣಪ್ರಭು ಶ್ರೀಗಳು ಲಿಂಗಾಯತ ಧರ್ಮದ ಪ್ರಖರ ಪ್ರಚಾರಕರು. ಅವರ ವೈಚಾರಿಕ ಚಿಂತನೆಗಳಿಂದ ಲಿಂಗಾಯತ ಸಮಾಜ ಸೇರಿದಂತೆ ಅನೇಖ ಸಮುದಾಯಗಳ ಜನರು ಜಾಗೃತರಾಗುತ್ತಿದ್ದಾರೆ. ನಿಜಗುಣಪ್ರಭುಗಳು ಕೇವಲ ಕರ್ನಾಟಕ ಮತ್ತು ಭಾರತ ದೇಶದಲ್ಲಷ್ಟೆ ಅಲ್ಲ ದೇಶ ವಿದೇಶಗಳಲ್ಲಿ ಬಸವಾದಿ ಶರಣರ ವೈಚಾರಿಕ ಚಿಂತನೆಗಳ ಪ್ರಚಾರ ನಡೆಸಿದ್ದಾರೆ. ಅವರ ವೈಚಾರಿಕ ಚಿಂತನೆಗಳನ್ನು ಸಹಿಸದ ಕೆಲವರು ಅವರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಕೊಲೆ ಬೆದರಿಕೆ ಹಾಕುತ್ತಿರುವವರನ್ನು ಬಂಧಿಸುವಂತೆ ಈ ಹಿಂದೆಯು ಮನವಿ ಸಲ್ಲಿಸಲಾಗಿತ್ತು. ಸರಕಾರ ಕ್ರಮ ಜರುಗಿಸದರಿಂದ ದುಷ್ಕರ್ಮಿಗಳ ಅಟ್ಟಹಾಸ ಮುಂದುವರೆದಿದೆ. ತಕ್ಷಣ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಲಿಂಗಾಐತ ಮತ್ತು ಹಿಂದುತ್ವದ ನಡುವೆ ಇರುವದು ವೈಚಾರಿಕ ಸಂಘರ್ಷ ಎಂಬುದನ್ನು ಅರ್ಥಮಾಡಿಕೊಳ್ಳದ ಕೆಲ ಮೂಲಭೂತವಾದಿಗಳು ಕೊಲೆ ಮತ್ತು ಕೊಲೆ ಬೆದರಿಕೆಯ ಮಟ್ಟಕ್ಕೆ ಇಳಿದಿದ್ದಾರೆ. ಈ ಬೆದರಿಕೆಗಳಿಂದ ಲಿಂಗಾಯತ ಧರ್ಮದ ಹೋರಾಟ ನಿಲ್ಲುವದಿಲ್ಲ. ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ದೊರೆಯುವವರೆಗೆ ಈ ಸಂಘರ್ಷಅಂತ್ಯವಾಗುವದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡುವ ಮೂಲಕ ಈ ಸಂಘರ್ಷವನ್ನು ಕೊನೆ ಗಾಣಿಸಬೇಕು. ಕೊಲೆ ಬೆದರಿಕೆ ಹಾಕುತ್ತಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಬುದ್ದಿ ಕಲಿಸಬೇಕು ಎಂದು ಒತ್ತಾಯಿಸಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಅರವಿಂದ ಪರುಶೆಟ್ಟಿ, ಅಶೋಕ ಮಳಗಲಿ, ಅನ್ನಪೂರ್ಣ ಮಳಗಲಿ, ಸದಾನಂದ ಬಸೆಟ್ಟಿ, ರಾಜು ಕುಂದಗೋಳ, ಪ್ರಭು ಬೆಣ್ಣಿ, ರಾಜು ಮಗದುಮ್, ಮಹಾಂತೇಶ ದಿವಟಗಿ, ಬಿ.ಪಿ.ಜೆವಣಿ, ಪತ್ರಕರ್ತ ಶಿವಾನಂದ ಮೆಟ್ಯಾಳ ಮುಂತಾದವರು ಉಪಸ್ಥಿತರಿದ್ದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!