Breaking News
Home / featured / ಕ್ರಿಯಾಶೀಲ ವ್ಯಕ್ತಿತ್ವದ ಲಿಂಗಾಯತ ನಾಯಕ ಮುರುಗೇಶ ನಿರಾಣಿ

ಕ್ರಿಯಾಶೀಲ ವ್ಯಕ್ತಿತ್ವದ ಲಿಂಗಾಯತ ನಾಯಕ ಮುರುಗೇಶ ನಿರಾಣಿ

ಮುಧೋಳ: ಉತ್ಪಾದನೆ ಸ್ಥಗಿತಗೊಳಿಸಿ ಬಾಗಿಲು ಮುಚ್ಚಿದ ಕಾರ್ಖಾನೆಗಳನ್ನು ಪುನಃಶ್ಚೇತನಗೊಳಿಸುವುದು ತುಂಬ ಕಠಿಣವಾದ ಕೆಲಸ. ಶಾಸಕ ಮುರುಗೇಶ ನಿರಾಣಿ ಬಾಗಿಲು ಮುಚ್ಚಿದ ಅರ್ಧ ಡಜನ್ ಕಾರ್ಖಾನೆಗಳನ್ನು ಪುನಃಶ್ಚೇತನಗೊಳಿಸಿ ಚೆನ್ನಾಗಿ ನಡೆಸುತ್ತಿರುವುದು ನಿಜಕ್ಕೂ ಒಂದು ಮಾದರಿಯ ಕಾರ್ಯವಾಗಿದೆ.

ಎಲ್ಲ ಆಶಯಗಳನ್ನು ಕಳೆದುಕೊಂಡು ಮುಚ್ಚಿದ ಗಿರಣಿ ಮತ್ತೆ ಆರಂಭವಾಗುವುದು ಸಣ್ಣ ಮಾತಲ್ಲ. ತಣ್ಣಗೆ ಬಾಗಿಲು ಮುಚ್ಚಿದ ಗಿರಣಿಗಳ ಬಾಗಿಲು ತೆರೆದು ಹೊಸ ಗಾಳಿ ಸೂಸುವಂತೆ ಮಾಡುವುದರ ಹಿಂದೆ ಬಹಳ ರಿಸ್ಕ್ ಗಳಿರುತ್ತವೆ. ಒಂದಲ್ಲ, ಎರಡಲ್ಲ ಒಟ್ಟು ೬ ಕಾರ್ಖಾನೆಗಳನ್ನು ನಿರಾಣಿ ಅವರು ಪುನಃಶ್ಚೇತನಗೊಳಿಸಿರುವುದು ಒಂದು ವಿಶಿಷ್ಟ ದಾಖಲೆಯಾಗಿದೆ.
ಕೃಷಿ ಕುಟುಂಬದಿಂದ ಬಂದ ಮುರುಗೇಶ ನಿರಾಣಿ ಬಿ.ಇ ಪದವೀಧರರಾದ ನಂತರ ಮುಧೋಳ ಹೊರವಲಯದಲ್ಲಿ ದಿನಕ್ಕೆ ೫೦೦ ಟನ್ ಕಬ್ಬು ಅರೆಯುವ ಕಾರ್ಖಾನೆ ಕಟ್ಟಿದರು. ಈ ಮಿನಿ ಕಾರ್ಖಾನೆಯನ್ನು ಅವರು ಶ್ರಮದಿಂದ ಚೆನ್ನಾಗಿ ನಡೆಸಿದರು. ಹೀಗೆ ಆರಂಭವಾದ ಅವರ ಕೈಗಾರಿಕೆ ಯಾತ್ರೆ ಇಂದು ಅವರನ್ನು ರಾಷ್ಟ್ರಮಟ್ಟದಲ್ಲಿ ನಂಬರ – ೧ ಸಕ್ಕರೆ ಕೈಗಾರಿಕೆ ಸಾಮ್ರಾಟ್‌ನನ್ನಾಗಿ ರೂಪಿಸಿದೆ.

ಮುಧೋಳದ ಮಿನಿ ಸಕ್ಕರೆ ಕಾರ್ಖಾನೆಯನ್ನು ದಿನಕ್ಕೆ ೨೦ ಸಾವಿರ ಟನ್ ಅರೆಯುವ ಬೃಹತ್ ಕಾರ್ಖಾನೆಯಾಗಿ ಬೆಳೆಸಿದ್ದಾರೆ. ಜಮಖಂಡಿ ತಾಲೂಕು ಹಿಪ್ಪರಗಿಯಲ್ಲಿ ಎರಡನೆಯ ಹಾಗೂ ಬದಾಮಿ ತಾಲೂಕು ಕಲ್ಲಾಪುರದಲ್ಲಿ ೩ ನೆಯ ಸಕ್ಕರೆ ಕಾರ್ಖಾನೆ ಕಟ್ಟಿದ್ದಾರೆ. ಸಕ್ಕರೆಯೊಂದಿಗೆ ವಿದ್ಯುತ್, ಇಥೆನಾಲ್, ಆಲ್ಕೋಹಾಲ್, ಬಯೋಫರ್ಟಿಲೈಜರ್ ಉಪಉತ್ಪನ್ನಗಳನ್ನು ಈ ಕಾರ್ಖಾನೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ.
ಇದೇ ಅವಧಿಯಲ್ಲಿ ಅವರು ಹೊಸದುರ್ಗ ಹೊರವಲಯದಲ್ಲಿ ಸ್ಥಗಿತಗೊಂಡ ರಾಜೇಶ್ವರಿ ಸಿಮೆಂಟ್ ಘಟಕ ಖರೀದಿಸಿದರು. ಅದನ್ನು ಅಭಿವೃದ್ಧಿ ಪಡಿಸಿ ತಮ್ಮ ಗೆಳೆಯರೊಬ್ಬರಿಗೆ ಮಾರಾಟ ಮಾಡಿದರು. ನಂತರ ಲೋಕಾಪೂರ ಸಮೀಪದ ವಾಸುಪೂಜ್ಯ ಸಿಮೆಂಟ್ ಕಾರ್ಖಾನೆ ಖರೀದಿಸಿದರು. ಅದು ನಿರ್ಮಾಣ ಹಂತದಲ್ಲೇ ಸ್ಥಗಿತಗೊಂಡಿತ್ತು. ಅದನ್ನು ಪೂರ್ಣ ಕಟ್ಟಿ ೫ ವರ್ಷ ನಡೆಸಿ ತಮ್ಮ ಮತ್ತೊಬ್ಬ ಮಿತ್ರನಿಗೆ ಮಾರಾಟ ಮಾಡಿದರು. ಬೆಳಗಾವಿ ಜಿಲ್ಲೆಯ ಯಾದವಾಡ ಗ್ರಾಮದಲ್ಲಿಯ ರತ್ನಾ ಸಿಮೆಂಟ್ ಕಾರ್ಖಾನೆ ಆಡಳಿತ ವೈಫಲ್ಯದಿಂದ ಸ್ಥಗಿತಗೊಂಡಿತ್ತು. ಈ ಕಾರ್ಖಾನೆ ತೆಗೆದುಕೊಂಡು ಅಭಿವೃದ್ಧಿ ಪಡಿಸಿ ನಡೆಸುತ್ತಿದ್ದಾರೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದ್ದಾರೆ. ಇದನ್ನು ಬೃಹತ್ ಸಿಮೆಂಟ್ ಘಟಕ ಮಾಡುವ ಯೋಜನೆಯನ್ನು ನಿರಾಣಿ ರೂಪಿಸಿದ್ದಾರೆ.
ಬಾಗಿಲು ಮುಚ್ಚಿದ ೩ ಸಕ್ಕರೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ನಿರಾಣಿ ಮುಂದಾಗಿದ್ದಾರೆ. ಬದಾಮಿ ತಾಲೂಕು ಬದಾಮಿ ಹಾಗೂ ಕೆರಕಲಮಟ್ಟಿಯ ಕೇದಾರನಾಥ ಕಾರ್ಖಾನೆಗಳು ಅಸಮರ್ಪಕ ಆಡಳಿತದಿಂದ ಬಾಗಿಲು ಮುಚ್ಚಿವೆ. ಇವುಗಳನ್ನು ಪುನಃ ಆರಂಭಿಸುವ ಕೆಲಸ ತ್ವರಿತಗತಿಯಲ್ಲಿ ನಡೆದಿದೆ. ಸಿಬ್ಬಂದಿ ನೇಮಕ ಕಾರ್ಯ ಪೂರ್ಣಗೊಂಡಿದೆ.

ಇದೀಗ ಮಂಡ್ಯ ಜಿಲ್ಲೆಯ ಪಾಂಡವಪುರ ಸಕ್ಕರೆ ಕಾರ್ಖಾನೆ ೪೦ ವರ್ಷ ಅವಧಿಗೆ ನಡೆಸಲು ನಿರಾಣಿ ಅವರು ಪಡೆದಿದ್ದಾರೆ. ಈ ಕಾರ್ಖಾನೆ ಕಳೆದ ೩ ವರ್ಷಗಳಿಂದ ಉತ್ಪಾದನೆ ನಿಲ್ಲಿಸಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಾವೇ ಪ್ರೀತಿಯಿಂದ ನಿರಾಣಿ ಅವರ ಬಾಯಲ್ಲಿ ಸಕ್ಕರೆ ಹಾಕಿ ಈ ಕಾರ್ಖಾನೆ ನಡೆಸಲು ಅನುಮತಿ ನೀಡಿದ್ದಾರೆ. ಕಾರ್ಖಾನೆ ಪುನಃಶ್ಚೇತನ ಕೆಲಸ ತೀವ್ರಗತಿಯಲ್ಲಿ ನಡೆದಿದೆ. ಸಕ್ಕರೆಯ ತಂತ್ರಜ್ಞರು, ಇಂಜನೀಯರಗಳು ಕಾರ್ಖಾನೆಯ ಸೈಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಾರ್ಖಾನೆಯ ಆವರಣದಲ್ಲಿ ಈಗ ಮತ್ತೆ ನಗೆ ಅರಳತೊಡಗಿದೆ.

ನಿರಾಣಿ ಸ್ವಶ್ರಮದಿಂದ ಉದ್ಯಮಿಯಾಗಿ ಬೆಳೆದಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು, ಬ್ಯಾಂಕ್‌ಗಳನ್ನು ಆರಂಭಿಸಿದ್ದಾರೆ.
ಸಕ್ಕರೆ ಉತ್ಪಾದನೆ ಹಂಗಾಮಿನಲ್ಲಿ ನಿರಾಣಿ ಉದ್ಯಮ ಸಮೂಹದಲ್ಲಿ ೭೦ ಸಾವಿರ ಜನ ಕೆಲಸ ಮಾಡುತ್ತಾರೆ. ಈ ವರ್ಷದ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ ೧ ಲಕ್ಷಕ್ಕೆ ಹೆಚ್ಚಲಿದೆ. ಲಾಕ್‌ಡೌನ್‌ದಲ್ಲಿ ಅನೇಕ ಉದ್ದಿಮೆಗಳು ಬಾಗಿಲು ಮುಚ್ಚಿವೆ. ಆದರೆ ನಿರಾಣಿ ಅವರು ಲಾಕ್‌ಡೌನ್‌ನ್ನೂ ಕೂಡ ಒಂದು ಅವಕಾಶವಾಗಿ ಬದಲಿಸಿಕೊಂಡು ಸ್ಯಾನಿಟೈಜರ್ ಉತ್ಪಾದನೆಯ ನೂತನ ಘಟಕ ಮುಧೋಳದಲ್ಲಿ ಆರಂಭಿಸಿದ್ದಾರೆ. ಇಲ್ಲಿ ೪೦ ಜನ ಯುವಕರಿಗೆ ಉದ್ಯೋಗ ದೊರೆತಿದೆ. ನಿರಾಣಿ ಅವರ ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಇದೊಂದು ಸಣ್ಣ ಉದಾಹರಣೆಯಾಗಿದೆ.

ಕೈಗಾರಿಕೆಗಳನ್ನು ಕಟ್ಟುವುದು ಮತ್ತು ನಡೆಸುವುದು ನಿರಾಣಿ ಅವರಿಗೆ ತುಂಬ ಆಸಕ್ತಿಯ ಹವ್ಯಾಸ. ಅವರು ೨೦೦೮-೨೦೧೩ ರ ವರೆಗೆ ರಾಜ್ಯದ ಬೃಹತ್ ಕೈಗಾರಿಕೆ ಸಚಿವರಾಗಿದ್ದರು. ಕೈಗಾರಿಕೋದ್ಯಮಿಯೊಬ್ಬರು ಕೈಗಾರಿಕೆ ಮಂತ್ರಿಯಾಗಿದ್ದ ಒಂದು ವಿಶೇಷ ಸಂದರ್ಭ ಅದು. ಮಂತ್ರಿಯಾಗಿ ಜಗತ್ತಿನ ಬಹಳಷ್ಟು ಕೈಗಾರಿಕೆಗಳನ್ನು ಅವರು ನೋಡಿದ್ದಾರೆ. ಕೈಗಾರಿಕೆಯ ಸಮಸ್ಯೆ, ಸವಾಲು, ಹಣದ ಝೆಂಕಾರ, ಆರ್ಥಿಕ ಮುಗ್ಗಟ್ಟು ಎಲ್ಲ ಅನುಭವಗಳು ಅವರಿಗಿವೆ.
ಈಚೆಗೆ ಅಟ್ಲಾಸ್ ಸೈಕಲ್ ಕಂಪನಿ ಬಂದ್ ಆಗಿರುವುದು ತಿಳಿದು ನಿರಾಣಿ ಅವರು ಬಹಳ ಕಳವಳವ್ಯಕ್ತಪಡಿಸಿದರು. ನಾನು ಸೈಕಲ್ ಓಡಿಸುತ್ತ ಬೆಳೆದವನು. ಈ ಸಂಸ್ಥೆ ಸೈಕಲ್ ಉತ್ಪಾದನೆಯನ್ನು ಬೇಗ ಆರಂಭಿಸಬೇಕು ಎಂಬುದು ನನ್ನ ಕೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ಕಾರ್ಖಾನೆ ಎಂದರೆ ಒಂದು ಮಿನಿ ಜಗತ್ತು ಇದ್ದ ಹಾಗೆ. ಅಲ್ಲಿ ದೇಶ-ವಿದೇಶದವರು ಬಂದು ಬದುಕು ಕಟ್ಟಿಕೊಂಡಿರುತ್ತಾರೆ. ಅವರ ಜಾಣ್ಮೆ, ಉತ್ಸಾಹ ಇಲ್ಲಿ ಕ್ರಿಯಾಶೀಲವಾಗಿರುತ್ತದೆ. ಜಗತ್ತಿನ ಯಾವ ಮಗವೂ ಅನಾಥವಾಗಬಾರದು ಎಂಬುದು ಎಲ್ಲ ತಾಯಂದಿರ ಹಂಬಲ. ಜಗತ್ತಿನ ಯಾವ ಕಾರ್ಖಾನೆಯೂ ಮುಚ್ಚಬಾರದು ಎಂಬುದು ನನ್ನ ಆಶಯ ಎನ್ನುತ್ತಾರೆ.
ಜಗತ್ತಿನ ಯಾವುದೇ ಕಾರ್ಖಾನೆ ಬಂದ್ ಆದರೆ ನನಗೆ ನೋವಾಗುತ್ತದೆ. ಕಾರ್ಖಾನೆಯ ಚಕ್ರ ಉರುಳುತ್ತಲೇ ಇರಬೇಕು. ಅಲ್ಲಿ ಸದಾ ನಗೆ ಇರಬೇಕು ಎಂಬುದು ನನ್ನ ಹಂಬಲ ಎಂದು ನಿರಾಣಿ ಅವರು ನಮ್ರವಾಗಿ ಹೇಳುತ್ತಾರೆ.

ಕಾರ್ಖಾನೆಯ ಮಾಲೀಕ ತಾನು ಕಾರ್ಖಾನೆಯ ಹಣದ ಒಡೆಯ ಅಲ್ಲ. ಈ ಹಣವನ್ನು ಸಮರ್ಪಕವಾಗಿ ನಿರ್ವಹಿಸುವ ಕಸ್ಟೋಡಿಯನ್ ಎಂದು ತಿಳಿದುಕೊಂಡು ಕೆಲಸ ಮಾಡಿದರೆ ಯಾವ ಕಾರ್ಖಾನೆಯೂ ಮುಚ್ಚುವುದಿಲ್ಲ ಎಂಬ ಸರಳ ಸತ್ಯವನ್ನು ಉದ್ಯಮಿಗಳು ಅರ್ಥಮಾಡಿಕೊಳ್ಳಬೇಕು. ಯುವಕರು ಹೆಚ್ಚು ಹೆಚ್ಚು ಉದ್ಯಮಿಗಳಾಗಿ ಬೆಳೆಯಬೇಕು ಎಂಬುದು ನಿರಾಣಿ ಅವರ ಅಭಿಪ್ರಾಯವಾಗಿದೆ.
ಅವರು ಬೃಹತ್ ಕೈಗಾರಿಕೆ ಮಂತ್ರಿಯಾಗಿದ್ದಾಗ ರೂಪಿಸಿದ ’ಒಂದು ಕರ್ನಾಟಕ ಹಲವು ಅವಕಾಶಗಳು’ ಮತ್ತು ’ಉದ್ಯಮಿಯಾಗು ಉದ್ಯೋಗ ನೀಡು’ ಎಂಬ ಘೋಷವಾಕ್ಯಗಳು ತುಂಬ ಜನಪ್ರಿಯವಾಗಿವೆ.

ಲೇಖನ: ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

Leave a Reply

Your email address will not be published. Required fields are marked *

error: Content is protected !!