Breaking News
Home / featured / ವೀರ ಕೇಸರಿ: ಅಮಟೂರು ಬಾಳಪ್ಪ

ವೀರ ಕೇಸರಿ: ಅಮಟೂರು ಬಾಳಪ್ಪ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಅಮಟೂರೆಂಬ ಹಳ್ಳಿಯೊಂದಿದೆ. ಆ ಊರಲ್ಲಿ ಜನಸಿದ ಮರಿಸಿಂಹವೊಂದು, ಬ್ರಿಟಿಷರ ಭೇಟಿ‌ಯಾಡುತ್ತದೆ. ಕಿತ್ತೂರು ಸಂಸ್ಥಾನದ ಮೇಲೆ ಆಕ್ರಮಣ ಮಾಡಿದ‌ ಬ್ರಿಟಿಷ್ ಅಧಿಕಾರಿ ಥ್ಯಾಕರೆಯ ರಕ್ತದ ರುಚಿ‌ ನೋಡುತ್ತದೆ. ಆ ಸಿಂಹ ಬೇರೆ ಯಾರು ಅಲ್ಲಾ, ವೀರ ಕೇಸರಿ “ಅಮಟೂರು ಬಾಳಪ್ಪ”. ಬ್ರಿಟಿಷರ ಎದೆಗೆ ನೇರವಾಗಿ ಗುಂಡಿಕ್ಕಿ, ಕಿತ್ತೂರಿನಲ್ಲಿ ನಂದಿಧ್ವಜ ಹಾರಿಸಿದ ವೀರ ಯೋಧನ ಬಗ್ಗೆ ಅದೆಷ್ಟೊ ಜನಕ್ಕೆ ಗೊತ್ತಿಲ್ಲದಿರುವುದು ವಿಪರ್ಯಾಸ. ಜನರಿಗೆ ಈ ವೀರಯೋಧನ ಸಾಹಸದ ಕಥೆ ಹೇಳಬೇಕಿದ್ದ ಸರ್ಕಾರಗಳು, ಯಾಕೋ ಇವರನ್ನಾ ಮರೆತಂತೆ‌ ಕಾಣುತ್ತಿದೆ. ಸರ್ಕಾರಗಳು ಮರೆತ್ರೆ ಏನಂತೆ, ಈ ಊರಿನ ಜನರೇ ಅಮಟೂರು ಬಾಳಪ್ಪನವರ ಹೆಸರಲ್ಲಿ‌ ಟ್ರಸ್ಟ್ ಒಂದನ್ನು ಕಟ್ಟಿ, ಅವರ ಇತಿಹಾಸ ಇನ್ನೂ ಜೀವಂತ ಉಳಿಯುವಂತೆ ಮಾಡಿದ್ದಾರೆ. ಹಾಗಾದ್ರೆ ಯಾರು ಈ ಅಮಟೂರು ಬಾಳಪ್ಪ, ಯಾಕೆ ಇವರನ್ನಾ ಸರ್ಕಾರ ನೆನೆಯಬೇಕು, ಇವರಿಂದ ನಮ್ಮ ನಾಡಿಗೆ ಆದ ಪ್ರಯೋಜನವಾದ್ರು ಏನು, ಈ ಎಲ್ಲ ವಿವರಗಳನ್ನಾ ನಾನು ನಿಮ್ಮ ಮುಂದೆ ಹೇಳ್ತಿನಿ.

1824 ರಲ್ಲಿ ಕಿತ್ತೂರು ಸಂಸ್ಥಾನದ ಮೇಲೆ ಬ್ರಿಟಿಷರ ಕಣ್ಣು ಬಿದ್ದಿತ್ತು. ರಾಣಿ ಚೆನ್ನಮ್ಮಳ ಈ ಸಂಸ್ಥಾನವನ್ನಾ, ಹೇಗಾದ್ರು ಮಾಡಿ ತಮ್ಮ ವಶಕ್ಕೆ ತೆಗೆದುಕೊಳ್ಳಬೇಕೆಂದು ಹೊಂಚುಹಾಕಿ ಕುಳಿತಿದ್ದರು ಈ ಬ್ರಿಟಿಷರು. ಆದರೆ ಬ್ರಿಟಿಷರಿಗೆ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಕಿತ್ತೂರು ಸಂಸ್ಥಾನ ಚಿಕ್ಕದಾಗಿದ್ದರು, ತಮ್ಮ ಸಂಸ್ಥಾನವನ್ನಾ ಪರಕೀಯರಿಂದ ಪ್ರಾಣ ಕೊಟ್ಟಾದರು ಕಾಪಾಡಬೇಕೆಂಬ ಸಾವಿರಾರು ಶೂರರು ಅಲ್ಲಿದ್ದರು. ಈ ಶೂರರಲ್ಲಿ ಪ್ರಮುಖವಾಗಿ ಕೇಳಿ ಬರುವುದೆ ಎರಡು ಹೆಸರುಗಳು. ಒಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಇನ್ನೊಬ್ಬ ಅಮಟೂರು ಬಾಳಪ್ಪ. ಈ ಇಬ್ಬರು ಕೂಡ ರಾಣಿ ಚೆನ್ನಮ್ಮನ‌ ಎರಡು ಕಣ್ಣುಗಳಂತಿದ್ದರು. ರಾಯಣ್ಣನ ಬಗ್ಗೆ ನಾವು ನೀವೆಲ್ಲಾ ತಿಳಿದುಕೊಂಡಿದ್ದೇವೆ. ಇಂದಿನ ಇಂಟರ್ನೆಟ್ ಯುಗದಲ್ಲಿ ರಾಯಣ್ಣನ ಕುರಿತಾದ ನೂರಾರು‌ ಲೇಖನಗಳನ್ನು ನಾವೆಲ್ಲಾ ಓದಿದ್ದೇವೆ. ಆದರೆ ಇನ್ನೋಬ್ಬ ಧೀರ ಯೋಧ ಅಮಟೂರು ‌ಬಾಳಪ್ಪನ‌ ಬಗ್ಗೆ ನಮಗೆ ಹೆಚ್ಚಾಗಿ ಲೇಖನಗಳು‌ ಸಿಗುವುದಿಲ್ಲ. ಹೀಗಾಗಿಯೆ ಈ‌ ಲೇಖನದ ಮೂಲಕವಾದರು, ಹತ್ತು ಜನರಿಗಾದರು ಅಮಟೂರು ಬಾಳಪ್ಪನ ಬಗ್ಗೆ ತಿಳಿಸುವುದೇ ನನ್ನ ಉದ್ದೇಶ. ಆಗ್ಲೆ ಹೇಳ್ತಾ ಇದ್ದೆ ಅಲ್ವಾ, 1824 ರಲ್ಲಿ‌ ಬ್ರಿಟಿಷರು ಕಿತ್ತೂರಿನ ಮೇಲೆ ಆಕ್ರಮಣ ಮಾಡೋಕೆ ಸಜ್ಜಾಗಿ ನಿಂತಿದ್ರು ಅಂತಾ, ಬ್ರಿಟಿಷರು ಅಂದುಕೊಂಡಂತೆ ಕಿತ್ತೂರಿನ ಮೇಲೆ ಆಕ್ರಮಣ ಮಾಡ್ತಾರೆ. ಹಾಗಾದ್ರೆ ಮುಂದೆನಾಗುತ್ತೆ, ಬ್ರಿಟಿಷರು ಗೆಲ್ತಾರಾ, ನಮ್ಮ ಪುಟ್ಟ ಸಂಸ್ಥಾನವೊಂದು ಬ್ರಿಟಿಷರಿಗೆ ತಲೆಬಾಗುತ್ತಾ ನೋ, ಆಗ ಅಲ್ಲಿ‌ ರಾಣಿ ಚೆನ್ನಮ್ಮನ ಅಂಗರಕ್ಷಕ ಅಮಟೂರು ಬಾಳಪ್ಪ ಒಂದು ಸಾಹಸದ ಕೆಲಸ ಮಾಡ್ತಾನೆ, ಅದನ್ನಾ ಕೇಳಿದ್ರೆ ನಮ್ಮ ಮೈಯೆಲ್ಲಾ ರೋಮಾಂಚನ ಆಗುತ್ತೆ. ತನ್ನ ನಾಡಿಗಾಗಿ ಅಪಾರವಾದ ಬ್ರಿಟಿಷರ ಸೈನ್ಯದ ಮುಂದೆ ತೊಡೆತಟ್ಟಿ ನಿಂತ ಆ ಯೋಧ ಮಾಡಿದ್ದಾದ್ರು ಏನು..? ಮುಂದೆ ಓದಿ ..

ಅಕ್ಟೋಬರ್ 21, 1824 ರಲ್ಲಿ ಬ್ರಿಟಿಷ್ ಅಧಿಕಾರಿಗಳಾದ ಥ್ಯಾಕರೆ, ಮನ್ರೋ ಮತ್ತು ಚಾಪ್ಲಿನ್ ಕಿತ್ತೂರಿನ ಮೇಲೆ ಆಕ್ರಮಣ ಮಾಡಲು‌ ಸನ್ನದ್ಧರಾಗಿರುತ್ತಾರೆ. ಅಕ್ಟೋಬರ್ 23 ರಂದು ಇನ್ನೇನು ಕಿತ್ತೂರು ನಮ್ಮ ಕೈತಪ್ಪಿ ಹೋಗುತ್ತದೆ ಅಂದುಕೊಂಡಾಗ, ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಕಿತ್ತೂರಿನ ಸೈನ್ಯ, ಬ್ರಿಟಿಷರ ಮೇಲೆ‌ ಮುಗಿಬಿದ್ದಿತು. ಆಗ ನಮ್ಮ ವೀರ ಯೋಧ, ರಾಣಿ ಚೆನ್ನಮ್ಮಳ ಅಂಗರಕ್ಷಕನಾದ ಅಮಟೂರು ಬಾಳಪ್ಪ ಬ್ರಿಟಿಷ್ ಅಧಿಕಾರಿ ಥ್ಯಾಕ್ರೆಯ ಎದೆಗೆ ಗುರಿ‌ ಇಟ್ಟು ಬಂದೂಕು ಪ್ರಯೋಗ ಮಾಡುತ್ತಾನೆ. ಆ ಗುರಿಕಾರನ ಗುರಿ ತಪ್ಪಲಿಲ್ಲಾ, ಕಿತ್ತೂರು ಬ್ರಿಟಿಷರ ವಶವಾಗಲಿಲ್ಲ. ನೋಡು ನೋಡುತ್ತಿದ್ದಂತೆ ಕೆಂಪು ಮುಖದ ಆ ಅಧಿಕಾರಿ ರಕ್ತದ ಮಡುವಿನಲ್ಲಿ ಬಿದ್ದು ಅಸುನೀಗುತ್ತಾನೆ. ಈ ಐತಿಹಾಸಿಕ ದಿನವನ್ನಾ ಕರ್ನಾಟಕ ಸರ್ಕಾರ “ಕಿತ್ತೂರು ಉತ್ಸವ” ಎಂಬ ಹೆಸರಿನಲ್ಲಿ ಆಚರಿಸುತ್ತಾ ಬಂದಿದೆ. ಆದರೆ ಈ ಉತ್ಸವಕ್ಕೆ ಕಿರಿಟವಾಗಬೇಕಿದ್ದ ವೀರಯೋಧ ಅಮಟೂರು ‌ಬಾಳಪಪ್ಪನನ್ನಾ ನಾವೆಲ್ಲಾ ಮರೆತಿರುವುದನ್ನಾ ಇತಿಹಾಸ ಯಾವತ್ತು ಕ್ಷಮಿಸುವುದಿಲ್ಲಾ. ಅಮಟೂರು ಬಾಳಪ್ಪ ಥ್ಯಾಕ್ರೆಯನ್ನಾ ಕೊಂದ ಮಾತ್ರಕ್ಕೆ ಜನಾ ಅವನನ್ನಾ ಈ ಪ್ರಮಾಣದಲ್ಲಿ ನೆನಸ್ತಾ ಇರ್ಲಿಲ್ಲಾ. ಹಾಗಾದ್ರೆ ಇದಕ್ಕಿಂತ ಇನ್ನೂ ಏನಾದ್ರು ಸಾಧಿಸಿರ್ಬೇಕು ಅಲ್ವಾ ಈ ಮನುಷ್ಯ, ಹೌದು ಹಾಗಾದ್ರೆ ಅಮಟೂರು ಬಾಳಪ್ಪ ತನ್ನ ನಾಡಿಗಾಗಿ ಮತ್ತೇನು ಮಾಡಿದ? ಅದು ನಿಜಕ್ಕೂ ರೋಚಕ .
ಕಿತ್ತೂರಿನಲ್ಲಿ ಆದ ಅವಮಾನದ ಸೇಡು ಬ್ರಿಟಿಷರ ಎದೆಯಲ್ಲಿ ಕೊತ ಕೊತ ಕುದಿಯುತ್ತಿತ್ತು. ಅವಕಾಶಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದವರಿಗೆ, ನಮ್ಮ ನೆಲದ ಕೆಲವು ನರಿ ಬುದ್ಧಿಯುಳ್ಳ ವಿಶ್ವಾಸಘಾತುಕರು ಸಹಾಯ ಮಾಡಿದ್ರು. ಪರಿಣಾಮ ಬ್ರಿಟಿಷರು ಎರಡನೇ ಬಾರಿಗೆ ಕಿತ್ತೂರಿನ ಮೇಲೆ ಯುದ್ಧ ಸಾರಿದ್ರು. ಡಿಸೆಂಬರ್ 3,1824 ರಂದು ಅಪಾರ ಸೈನ್ಯದೊಂದಿಗೆ ಆಗಮಿಸಿದ ಬ್ರಿಟಿಷರು, ಕಿತ್ತೂರು ಎಂಬ ಪುಟ್ಟ ಸಂಸ್ಥಾನದ ಮೇಲೆ ಆಕ್ರಮಣ ಮಾಡಿಯೇ ಬಿಟ್ರು. ಬಹುಶಃ ನಮ್ಮ ನೆಲದ ಮಲ್ಲಪ್ಪನಂತವರು ಬ್ರಿಟಿಷರಿಗೆ ಸಹಕಾರ ಕೊಡದಿದ್ದಿದ್ರೆ ಎರಡನೇ ಯುದ್ಧದಲ್ಲು ನಂದಿಧ್ವಜ ಕಿತ್ತೂರಿನ ಕೋಟೆಯ ಮೇಲೆ ಹಾರುತ್ತಿತ್ತೆನೊ. ಆದರೆ ಆ ವಿಧಿಯ ಆಟವೇ ಬೇರೊಂದಾಗಿತ್ತು. ಡಿಸೆಂಬರ್ 4 ರ ಯುದ್ಧದ ಸಮಯದಲ್ಲಿ, ಚೆನ್ನಮ್ಮನಿಗೆ ಬಂದೂಕಿನಿಂದ ಗುರಿಯಿಟ್ಟ ಬ್ರಿಟಿಷರಿಗೆ ಅಣೆಕಟ್ಟಿನಂತೆ ಅಡ್ಡಲಾಗಿ ನಿಂತಿದ್ದು ಇದೇ ಅಮಟೂರು ಬಾಳಪ್ಪ. ಆದರೆ ಆ ಕುತಂತ್ರದ ಪ್ರವಾಹದಲ್ಲಿ ನಮ್ಮ ವೀರ ಯೋಧನಿಗೆ ಸಾವಾಯಿತು‌. ಬ್ರಿಟಿಷರ ಗುಂಡೇಟಿಗೆ ಎದೆ ಕೊಟ್ಟು ನಿಂತ ವೀರ ಕೇಸರಿ ಅಮಟೂರು ಬಾಳಪ್ಪ ಯುದ್ಧದಲ್ಲಿ ಹುತಾತ್ಮನಾದ. ತನ್ನ ತಾಯಿ ಸಮಾನಳಾದ ರಾಣಿ ಚೆನ್ನಮ್ಮನ ಪ್ರಾಣ ಕಾಪಾಡಲು, ತನ್ನ ಪ್ರಾಣವನ್ನೆ ನಾಡಿಗಾಗಿ ಅರ್ಪಿಸಿದ ಮಹಾನ್ ತ್ಯಾಗಿ ಈ ಅಮಟೂರು ಬಾಳಪ್ಪ. ಇಂತಹ ವೀರ ಯೋಧನ ಬಗ್ಗೆ ಇತಿಹಾಸದಲ್ಲಾಗಲಿ ಅಥವಾ ಪಠ್ಯ ಪುಸ್ತಕದಲ್ಲಾಗಲಿ ಸ್ಥಾನಮಾನ ಸಿಗದಿರುವುದು ನಿಜಕ್ಕೂ ದುಃಖದ ಸಂಗತಿ.

ನಾಡಿಗಾಗಿ ಪ್ರಾಣ ತ್ಯಾಗ ಮಾಡಿದ ಅಮಟೂರು ಬಾಳಪ್ಪನಂತ ವೀರ ಯೋಧರು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಅಮಟೂರು ಬಾಳಪ್ಪನ ಬಗ್ಗೆ ಹೆಚ್ಚೆಚ್ಚು ಲೇಖನಗಳು ಪ್ರಕಟವಾಗಬೇಕು. ಸರ್ಕಾರ ಈ ವೀರ ಕೇಸರಿಯ ಹೆಸರಲ್ಲಿ “ಅಮಟೂರು ಬಾಳಪ್ಪ ಉತ್ಸವ” ಅಂತಾ ಮಾಡಬೇಕು. ಈ ವೀರಯೋಧನ ಹೆಸರಲ್ಲಿ ಪುಟ್ಟದಾದ ಗ್ರಂಥಾಲಯವೊ, ಶಾಲೆಯೊಂದನ್ನಾ ಅಥವಾ ಬಡ ವಿದ್ಯಾರ್ಥಿಗಳ ವಸತಿ ನಿಲಯವೊಂದನ್ನೊ ಸರ್ಕಾರ ಪ್ರಾರಂಭಿಸಿದರೇ, ಅದು ಈ ಯೋಧನಿಗೆ ನಾವು ಕೊಡುವ ಮರ್ಯಾದೆ. ದಯವಿಟ್ಟು ಈ ಸ್ವಾತಂತ್ರ್ಯದ ಕಿಡಿಗೆ ಇನ್ನು ಮುಂದಾದರು ನಾವೆಲ್ಲಾ ಗೌರವದ ಸ್ಥಾನ ಕೊಟ್ಟು ನೆನೆಯೋಣ.

✍️✍️ ಮಹದೇವ ತಳವಾರ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

ರವಿ ಬೆಳಗೆರೆ ಒಂದು ಕನಸು ನನಸು ಮಾಡಲು ಆಗಲಿಲ್ಲ..!

  ಚನ್ನಮ್ಮನ ಕಿತ್ತೂರು: ಪಿ. ಲಂಕೇಶರ ನಂತರ ಕನ್ನಡ ಪತ್ರಿಕೋದ್ಯಮ ಮತ್ತೊಂದು ರೀತಿ ಕಲ್ಪನೆ ಮೀರಿ ಮುನ್ನಡಿಸಿದ್ದ ಕೀರ್ತಿ ರವಿಗೆ …

ಬಿಜಗುಪ್ಪಿಯ ಘಟನೆ ಆಕಸ್ಮಿಕ

  ಬೆಳಗಾವಿ: ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ನ.8ರಂದು ಬಸವೇಶ್ವರರ ಮೂರ್ತಿಯ ಕೈ ಮುರಿದಿತ್ತು. ಜಗಜ್ಯೋತಿ ಬಸವೇಶ್ವರರ ಮೂರ್ತಿಯ ಕೈ …

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ …

Leave a Reply

Your email address will not be published. Required fields are marked *

error: Content is protected !!