Breaking News
Home / featured / ಈ ದಿನದ ವಚನ ಅನುಸಂಧಾನ

ಈ ದಿನದ ವಚನ ಅನುಸಂಧಾನ

 

ಲಿಂಗಾಯತ ಕ್ರಾಂತಿ: ಈಗಾಗಲೇ ತಿಳಿದಿರುವ ಹಾಗೆ, ಈ ಭೂಮಿಯ ಮೇಲಿನ ಮಾನವ ಇತಿಹಾಸದ ಹನ್ನೆರಡನೆಯ ಶತಮಾನದ ಕಾಲಘಟ್ಟದಲ್ಲಿ ಕಲ್ಯಾಣ ಕ್ರಾಂತಿಯ ಕೇಂದ್ರವಾಗಿದ್ದ ಅಪ್ಪ ಬಸವಾದಿ ಶರಣರು ಮಾಡಿ ತೋರಿದ; ಅರಿವು ಆಚರಣೆಯ ಅತ್ಯದ್ಭುತವಾದ ಲೌಕಿಕ ಅಲೌಕಿಕದ (ಇಹಪರದ) ವ್ಯಕ್ತಿಗತವಾದ ಬದುಕು ಮತ್ತು ಸಾಮಾಜಿಕ ಬದುಕು ಅನನ್ಯವೂ ಅದ್ವಿತೀಯವೂ ಆದುದಾಗಿದೆ. ಶರಣರು ತಮ್ಮ ವ್ಯಕ್ತಿಗತ ಜೀವನ ಮತ್ತು ಸಾಮಾಜಿಕ ಬದುಕಿನ ನೆಲೆಯಲ್ಲಿ ಸಾಧಿಸಿದ ಆ ಸರ್ವತೋಮುಖವಾದ ಅಭಿವೃದ್ಧಿಯು; ಅತ್ಯಂತ ವೈಚಾರಿಕ ವೈಜ್ಞಾನಿಕ ನೈಸರ್ಗಿಕ ನೈತಿಕ ಆರ್ಥಿಕ ಧಾರ್ಮಿಕ ಸಾರ್ವತ್ರಿಕ ಹೀಗೆ ಬಹು ಆಯಾಮದಲ್ಲಿ ವಿಕಸನವ ಹೊಂದಿ ಬೆಳಗಿದ್ದಲ್ಲದೇ ಅರಿವಿನ ಅಕ್ಷರವಾದ ವಚನದಲ್ಲಿ ಇಂಬಿಟ್ಟು ಕೊಟ್ಟಂಥಾ ಕ್ರಾಂತಿಯು ಹಿಂದೆಂದೂ ಆಗಿರದ್ದು ಹಾಗೂ ಇನ್ನೆಂದೂ ಆಗಲಾರದ್ದು.ಇದು ಕೇವಲ ಅಭಿಮಾನದ ಮಾತಲ್ಲ. ಇದನ್ನ ನಿಜಕ್ಕೂ ತಿಳಿಯ ಬಯಸುವ ಮನಸುಗಳು ವಚನಗಳನ್ನು ಅಧ್ಯಯನ ಮಾಡಿ ಮನಗಾಣ ಬಹುದು. ಈಗ ಇಲ್ಲಿ ಢಕ್ಕೆಯ ಬೊಮ್ಮ(ಮಾರ)ಯ್ಯ ಶರಣರ ಈ ಪ್ರಸ್ತುತ ವಚನದ ಅನುಸಂಧಾನ ಮಾಡೋಣ

ವಚನ:

ಶ್ವೇತಾಂಗ ಬಹುವರ್ಣವ ಬೆರಸಿದಂತೆ
ಆತ್ಮನೊಂದಾಗಿ,
ಪ್ರಕೃತಿ ಹಲವ ಧರಿಸಿದಂತೆ;

ತಾ ಬಂದ ಗುಣವನರಿದು,
ಇದ್ದ ಇರವಿನ ಸದ್ವರ್ತನೆಯಿಲ್ಲದೆ
ಆಚರಣೆಗೆ ಅನುಸರಣೆಯಿಲ್ಲದೆ

ಅರಿವನರಿದು ಅಮಂಗಲಕ್ಕೊಳಗಾಗದೆ
ನಿರ್ಮಲ ತರಂಗವನೆಯ್ದಿ ಸಂದುದು
ಕಾಲಾಂತಕ ಭೀಮೇಶ್ವರಲಿಂಗದಂಗ.
ಢಕ್ಕೆಯ ಬೊಮ್ಮ(ಮಾರ)ಯ್ಯ
ಅನುಸಂಧಾನ:

ಈ ಪ್ರಸ್ತುತ ಮೇಲಿನ ವಚನವನ್ನಿಲ್ಲಿ ಓದಿದಾಗ; ಢಕ್ಕೆಯ ಬೊಮ್ಮ(ಮಾರ)ಯ್ಯನವರ ಅರಿವಿನ ಆಳ ಹಾಗೂ ಅದರ ಹಾಸುಬೀಸು ಒಳಗೊಂಡ ಪ್ರಜ್ಞೆಯ ಪ್ರಕಾಶವಂತೂ ನಿಜಕ್ಕೂ ಬೆಕ್ಕಸಬೆರಗು ಮೂಡಿಸುವಂತಿದೆ! ಅದು ಹೇಗೆಂದರೆ ‘ಶ್ವೇತಾಂಗ ಬಹುವರ್ಣವ ಬೆರಸಿದಂತೆ’ ಎಂಬ ಈ ಸಾಲನ್ನು ಅನುಸಂಧಾನ ಮಾಡಿ ನೋಡಿದಾಗ;ಅದು ಏಳು ಬಣ್ಣಗಳು ಸೇರಿ ಬಿಳಿಯ ಬಣ್ಣವು ಆಗಿದೆ ಎಂಬ ಈ ವೈಜ್ಞಾನಿಕ ಸತ್ಯದ ಹೊಳವು ಅಪ್ಪ ಬಸವಾದಿ ಶರಣರಿಗೆ ಅಂದೇ ತಿಳಿದಿತ್ತು!! ಎಂಥ ಸೋಜಿಗ!!!

ಶ್ವೇತಾಂಗ ಬಹುವರ್ಣವ ಬೆರಸಿದಂತೆ ಆತ್ಮನೊಂದಾಗಿ,
ಪ್ರಕೃತಿ ಹಲವ ಧರಿಸಿದಂತೆ;

ಹೀಗೆ ಬಿಳಿಯ ಬಣ್ಣ ಒಂದರಲ್ಲಿ ವಿವಿಧ ಏಳು ಬಣ್ಣಗಳು ಬೆರೆಸಿರುವಂತೆ, ಶರೀರವೊಂದರಲ್ಲಿ; ಪ್ರಕೃತಿಯಲ್ಲಿನ ಪಂಚಭೂತತತ್ವಗಳಾದ ಭೂಮಿ ಆಕಾಶ ನೀರು ಅಗ್ನಿ ವಾಯು ಇವುಗಳ ಜೊತೆಗೆ ಸೂರ್ಯ ಚಂದ್ರ ಮತ್ತು ಆತ್ಮಗಳು ಸೇರಿಕೊಂಡ ಅಷ್ಟಾವರಣದ ಸ್ಥೂಲರೂಪವಾದ ಶರೀರದಲ್ಲಿ ಆತ್ಮವು ಒಂದಾಗಿರುತ್ತದೆ.ಹಾಗಾಗಿ,

ತಾ ಬಂದ ಗುಣವನರಿದು,
ಇದ್ದ ಇರವಿನ ಸದ್ವರ್ತನೆಯಿಲ್ಲದೆ
ಆಚರಣೆಗೆ ಅನುಸರಣೆಯಿಲ್ಲದೆ

ಈ ಶರೀರಗತವಾದ ಆತ್ಮವು ತಾನು ಮರ್ತ್ಯಕ್ಕೆ ಬಂದ ಉದ್ದೇಶನ್ನು ಅರಿತು, ಈಗ ಇದ್ದಿರುವಂಥಾ ಮಾಯಾ ಮಲತ್ರಯಗಳ ಮತ್ತು ಅರಿಷಡ್ವರ್ಗಗ ಳ ಕಾರಣದಿಂದಾಗಿ ಸದ್ವರ್ತನೆಯಿಲ್ಲದೇ ಒಳ್ಳೆಯ ಆಚರಣೆ ಮಾಡಲು ಸರಿಯಾದ ಮಾದರಿಯೂ ಇಲ್ಲದೇ ಇರುವಾಗ; ಈ ದೋಷಗಳು ಇರುವುದು ತಿಳಿದಿರುವಾಗ, ಅಪ್ಪ ಬಸವಣ್ಣ ಕರುಣಿಸಿ ಕೊಟ್ಟ ‘ಇಷ್ಟಲಿಂಗ’ ಅರಿವಿನ ಪ್ರಕಾಶವಾಗಿ ಬೆಳಗುತ್ತಿದೆ.

ಅರಿವನರಿದು ಅಮಂಗಲಕ್ಕೊಳಗಾಗದೆ
ನಿರ್ಮಲ ತರಂಗವನೆಯ್ದಿ ಸಂದುದು ಕಾಲಾಂತಕ ಭೀಮೇಶ್ವರಲಿಂಗದಂಗ.

ಈ ಅರಿವನ್ನರಿತೂ ಕೂಡಾ ಅದನ್ನು ಶ್ರದ್ಧೆಯಿಂದ ಆಚರಿಸದೆ, ಅಮಂಗಲಕ್ಕೆ ಈಡಾಗದೆ, ಪರಿಶುದ್ಧ ಭಾವನೆಗಳನ್ನು ಸೂಸುತ್ತ ಆಚರಿಸಿತ್ತಾ ನಡೆದದ್ದು ಈ ಕಾಲಾಂತಕ ಭೀಮೇಶ್ವರ ಲಿಂಗದ ಕಾರುಣ್ಯದ ಕೊಡುಗೆಯಾದ ತಮ್ಮ ಈ ಶರೀರ, ಅಂದರೆ ತನು ಅಂಗ ಎನ್ನುವ ಮೂಲಕ ಪ್ರಕೃತಿದತ್ತವಾಗಿಯೇ ಪ್ರಾಪ್ತವಾದ ತನುವಿನೊಂದಿಗೆ ತದ್ಗತವಾಗಿ ಬಂದ ಆತ್ಮಪ್ರಕಾಶವಿರುವಂಥ ನಿಸರ್ಗ ಸಹಜ ಅರಿವಿನ ಜ್ಞಾನವನ್ನ ಪ್ರಸ್ತುತ ವಚನದಲ್ಲಿ ಢಕ್ಕೆಯ ಬೊಮ್ಮ (ಮಾರ)ಯ್ಯ ಶರಣರು ಎತ್ತಿ ತೋರಿದ್ದಾರೆ ಎಂದು ಅನಿಸುತ್ತದೆ.

ಸಂಕ್ಷಿಪ್ತ ಪರಿಚಯ:

ಸಾಂದರ್ಭಿಕ ಚಿತ್ರ ಮಾಹಿತಿ ಅಂತರ್ಜಾಲದ ಕೃಪೆ
ಢಕ್ಕೆಯ ಬೊಮ್ಮ(ಮಾರ)ಯ್ಯನವರು ಜಾನಪದ ಕಲಾವಿದರು.ಇವರಿಗೆ ಢಕ್ಕೆಯ ಬೊಮ್ಮಣ್ಣನೆಂಬ ಹೆಸರೂ ಉಂಟು. ಈ ಎರಡೂ ಹೆಸರಿನ ವಚನ ಗಳ ಅಂಕಿತ “ಕಾಲಾಂತಕ ಭೀಮೇಶ್ವರ ಲಿಂಗ” ಎಂದಿರುವುದರಿಂದ ಇವರಿಬ್ಬರು ಒಬ್ಬರೇ ಎಂದು ಹೇಳಲಾಗುತ್ತದೆ. ಶರಣರಾಗುವ ಮೊದಲಿವರು; ‘ಮಾರಿ’ಯನ್ನ ತಲೆಮೇಲೆ ಹೊತ್ತು, ಢಕ್ಕೆ(ಡೊಳ್ಳು) ಯನ್ನ ಬಾರಿಸುತ್ತ, ಬೇವಿನ ಸೊಪ್ಪನ್ನ ಸೊಂಟಕ್ಕೆ ಕಟ್ಟಿಕೊಂಡು, ಬಾಳು ಬಟ್ಟಲನ್ನು ಕೈಯಲ್ಲಿ ಹಿಡ ಕೊಂಡು, ಬಳೆಯನ್ನು ತೊಟ್ಟು ಕೊಂಡು, ‘ಮಾರಿ’ ಯನ್ನು ಮೊರದಲ್ಲಿ ಹಾಕಿಕೊಂಡು, ಭಕ್ತರ ಮನೆ ಮನೆಯ ಮುಂದೆ ನಿಂತು; ಪುರಾತನರ ತತ್ವಗಳ ನ್ನು ಹೇಳುವದು; ಆದ್ಯರ ವಚನಗಳನ್ನ ಉಗ್ಘಡಿ ಸುವದು; ನೀತಿ, ವಿನಯ, ಸದಾಚಾರ ಸುವಿಚಾರ ಗಳನ್ನು ಜನರಿಗೆ ತಿಳಿಸಿ, ತಿದ್ದಿ, ಅವರಿಗೆ ವಿಚಾರ ಸ್ವಾತಂತ್ರ್ಯ ಕಲಿಸಿ, ಸದಾಚಾರಿಗಳನ್ನಾಗಿ ಮಾಡು ವುದು ಇವರ ದಿನಂಪ್ರತಿಯ ಕಾಯಕವಾಗಿತ್ತು. ಇದರಿಂದಾಗಿ ‘ಶಿವಾನುಭವ’ ಜನರ ಮನೆ ಮನೆ, ಮನ ಮನಕ್ಕೆ ಮುಟ್ಟುತ್ತಿತ್ತು. ಅಪ್ಪ ಬಸವಾದಿ ಶರಣರ ಸಂಪರ್ಕವನ್ನು ಸಾಧಿಸಿದ ನಂತರದಲ್ಲಿ
ಶರಣರಾದ ಮೇಲೆ ಅನುಭವ ಮಂಟಪದ 770 ಅಮರ ಗಣಂಗಳಲ್ಲೊಬ್ಬ ವಚನಕಾರ ಶರಣರಾ ಗಿ ‘ಕಾಲಾಂತಕ ಭಿಮೇಶ್ವರಲಿಂಗ’ಈ ಅಂಕಿತದಲ್ಲಿ ರಚಿಸಿದ ಇವರ 90 ವಚನಗಳು ದೊರೆತಿವೆ. ಆ ವಚನಗಳಲ್ಲಿವರು ತಮ್ಮ ಕಲೆಯ; ವೇಷಭೂಷ ಣ ಹಾಗೂ ಆ ಪರಿಭಾಷೆಯನ್ನು ಸಂಕೇತವಾಗಿ ಬಳಸಿಕೊಂಡಿದ್ದಾರೆ. ತಮ್ಮನ್ನ ತಿದ್ದಿತೀಡಿ ರೂಪಿಸಿ ದ ಅಪ್ಪ ಬಸವಾದಿ ಶರಣರನ್ನು ಢಕ್ಕೆಯ ಬೊಮ್ಮ (ಮಾರ)ಯ್ಯನವರು ತಮ್ಮ ವಚನಗಳಲ್ಲಿ ಮನ ಸಾರೆ ನೆನೆಯುತ್ತಾರೆ.

ಅಳಗುಂಡಿ ಅಂದಾನಯ್ಯ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!