Breaking News
Home / featured / ಗಾಂಧಿ ಹತ್ಯೆ ಮತ್ತು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು

ಗಾಂಧಿ ಹತ್ಯೆ ಮತ್ತು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು

 

~ ಡಾ. ಜೆ ಎಸ್ ಪಾಟೀಲ.
ಭಾರತದಲ್ಲಿ ಸ್ವತಂತ್ರಪೂರ್ವದಲ್ಲೇ ಧಾರ್ಮಿಕ ಮೂಲಭೂತವಾದ ಸಣ್ಣನೆ ಕುಡಿಯೊಡೆದಿತ್ತು. ಬ್ರಿಟೀಷರ ವಿರುದ್ಧ ದೇಶಭಕ್ತ ಜನರೆಲ್ಲರು ಸ್ವಾತಂತ್ರಕ್ಕಾಗಿ ಆಂದೋಲನ ಆರಂಭಿಸುತ್ತಿದ್ದಂತೆ ಧಾರ್ಮಿಕ ಮೂಲಭೂತವಾದಿಗಳು ಚುರುಕಾಗಿ ಸಂಘಟಿತರಾಗಲಾರಂಭಿಸಿದರು. ಭಾರತದಲ್ಲಿ ಧಾರ್ಮಿಕ ಮೂಲಭೂತವಾದಿಗಳು ಬೆಳೆದ ಬಗೆಯನ್ನು ಅವಲೋಕಿಸೋಣ :

1. 1922ರಲ್ಲಿ ಒಂದಷ್ಟು ಪ್ರಮುಖ ಧಾರ್ಮಿಕ ಮೂಲಭೂತವಾದಿಗಳ ಗುಪ್ತ ಸಮಾಲೋಚನೆ.

2. 1925ರಲ್ಲಿ ರಾಷ್ಟ್ರೀಯತೆ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳ ಮುಖವಾಡದಲ್ಲಿ ಧಾರ್ಮಿಕ ಮೂಲಭೂತವಾದಿ ಸಂಘಟನೆ ಸ್ಥಾಪನೆಗೆ ಮುಹೂರ್ತ.

3.1932 ರಲ್ಲಿ ಪ್ರಪ್ರಥಮ ಬಾರಿಗೆ ದೇಶದಲ್ಲಿ ಹಿಂದು-ಮುಸ್ಲಿಂ ಕೋಮುಗಲಭೆ ಹುಟ್ಟುಹಾಕುವಲ್ಲಿ ಸಫಲ. ಮತ್ತು ಅದನ್ನು ಶಾಸ್ವತವಾಗಿ ಮುಂದುವರಿಸುವ ಗೂಢಾಲೋಚನೆ.

4. 1945ರಲ್ಲಿ‌ ನಡೆಯುತ್ತಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಳ್ಗೊಂಡಿದ್ದ ದಲಿತರು
ಮತ್ತು ಭ್ರಾಹ್ಮಣರ ನಡುವೆ ಉದ್ರೇಕಕಾರಿ ವಾತಾವರಣದ ನಿರ್ಮಾಣ ಮತ್ತು ಆ ಮೂಲಕ ಪರಸ್ಪರ ಘರ್ಷಣೆಗೆ ಪ್ರಚೋದನೆ.

5. 1947 ರಲ್ಲಿ ದೇಶ ವಿಭಜನೆಯ ನೆಪ ಮಾಡಿಕೊಂಡು ದೇಶಾದ್ಯಂತ ಕೋಮು ಗಲಭೆ.

6. 1948ರಲ್ಲಿ ರಾಷ್ಟ್ರಪಿತ ಗಾಂಧಿ ಹತ್ಯೆ.

7. 1962ರಲ್ಲಿ ಹೈದರಾಬಾದ್ ನಗರದ ಹೆಸರು ಬದಲಾಯಿಸಬೇಕೆಂಬ ವಿವಾದವನ್ನು ಹುಟ್ಟುಹಾಕುವ ಮೂಲಕ ಕೋಮು ಸಂಘರ್ಷಕ್ಕೆ ನಾಂದಿ.

8. 1972 ರಿಂದ 1977ರ ತನಕ ನಾಸಿಕ್ ನಲ್ಲಿ‌ ಹಿಂದೂ-ಮುಸ್ಲಿಂ-ಕ್ರೈಸ್ತರನ್ನು ಪರಸ್ಪರ ಎತ್ತಿಕಟ್ಟಿ ಗಲಬೆಗೆ ಪ್ರಚೋದನೆ.

9. 1982 ರಲ್ಲಿ ದೇಶದಾತ್ಯಂತ ಕೋಮು ಗಲಬೆ ಹುಟ್ಟುಹಾಕುವಲ್ಲಿ ಸಫಲ.

10.1992ರಲ್ಲಿ ಬಾಬರಿ ಮಸೀದಿ ದ್ವಂಸ ಮತ್ತು ತದನಂತರದ ಕೋಮು ಗಲಭೆ.

11. 2002 ರಲ್ಲಿ ಗುಜರಾತಿನಲ್ಲಿ ವ್ಯಾಪಕ ಮತ್ತು ಭೀಕರ ಕೋಮು ಗಲಭೆ.

12. 2006 ರಲ್ಲಿ ಮಾಲೆಗಾಂವ್ ನಲ್ಲಿ ಬಾಂಬ್ ಸ್ಪೋಟ.

13. 2007ರಲ್ಲಿ ಮಕ್ಕಾ ಮಸೀದಿಯಲ್ಲಿ ಬಾಂಬ್ ಸ್ಪೋಟ ಮತ್ತು ಅದೇ ವರ್ಷ ಸಂಜೋತಾ ಎಕ್ಸ್‌ಪ್ರೆಸ್‌ ಸ್ಪೂಟ್ ಪ್ರಕರಣ.

14. 2008ರಲ್ಲಿ ಮುಂಬೈ ಸ್ಪೋಟ. ಘಟನೆಯನ್ನು ಅಲ್ಪಸಂಖ್ಯಾತರ ತಲೆಗೆ ಕಟ್ಟುವ ಹುನ್ನಾರಗಳು.

15. 2010 ರಲ್ಲಿ ಮುಂಬೈ ಬಾಂಬ್ ಸ್ಪೋಟದ ಪ್ರಕರಣವನ್ನು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದ ಪೋಲಿಸ್ ಅಧಿಕಾರಿ ಹೇಮಂತ್ ಕರ್ಕರೆ ಅವರ ಅನುಮಾನಾಸ್ಪದ ಹತ್ಯೆ.

16. 2012ರಲ್ಲಿ ಒರಿಸ್ಸಾದಲ್ಲಿ ಕೋಮು ಗಲಭೆ. ಕಳೆದ ಆರು ವರ್ಷಗಳಲ್ಲಿ ದೇಶಾದ್ಯಂತ 600 ಕ್ಕಿಂತಲೂ ಹೆಚ್ಚಿನ ಗಲಭೆಗಳು, ಕೊಲೆ, ಗುಂಪು ಹಲ್ಲೆಗಳುˌ ಅತ್ಯಾಚಾರಗಳು.

17. ದಕ್ಷಿಣ ಬಾರತದ್ಯಂತ ಮತ್ತು ಮುಖ್ಯವಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ಕೋಮುವಾದಿಗಳು ತಮ್ಮ ರಾಕ್ಷಸೀ ಕ್ರತ್ಯಗಳ ಪ್ರದರ್ಶನ. ಚರ್ಚ ಮತ್ತು ಪಬ್ ಮೇಲಿನ ದಾಳಿಗಳು.

18. 2015 ಮತ್ತು 2017ರ ಮಧ್ಯದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಖ್ಯಾತ ವಿಚಾರವಾದಿ ನರೇಂದ್ರ ದಾಬೋಲ್ಕರ್ˌ ಜನಪರ ಹೋರಾಟಗಾರ ಗೋವಿಂದ ಪನ್ಸಾರೆˌ ಖ್ಯಾತ ಸಂಶೋಧಕ ಡಾ. ಕಲಬುರಗಿˌ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಅನಾಮಿಕ ಧಾರ್ಮಿಕ ಮೂಲಭೂತವಾದಿ ಭಯೋತ್ಪಾದಕರಿಂದ ಹತ್ಯೆ.

ಮೇಲಿನ ಘಟನೆಗಳನ್ನು ಹೊರತು ಪಡಿಸಿ ಭಾರತದಲ್ಲಿ ಕಳೆದ 100 ವರ್ಷಗಳಲ್ಲಿ ಧಾರ್ಮಿಕ ಮೂಲಭೂತವಾದಿಗಳು ಮಾಡಿದ ಅವಾಂತರಗಳು ಒಂದೆರಡಲ್ಲ. ಇಂದು ಗಾಂಧಿ ದ್ವೇಷವನ್ನು ಸಾರ್ವತ್ರಿಕವಾಗಿ ಪ್ರದರ್ಶಿಸುತ್ತಿರುವ ಸನಾತನಿಗಳು ಗಾಂಧಿ ಹತ್ಯೆಯ ಆರೋಪದಿಂದ ತಪ್ಪಿಸಿಕೊಳ್ಳಲು ಪಡುತ್ತಿರುವ ಪಾಡು ನೋಡಲಾಗದು. ಬಹಿರಂಗವಾಗಿ ಗಾಂಧಿ ಹತ್ಯೆಯನ್ನು ಸಮರ್ಥಿಸಿಕೊಳ್ಳಲಾರದೆ ಅಂತರಂಗದಲ್ಲಿ ಗಾಂಧಿ ದ್ವೇಷ ಕಾರುವ ಸನಾತನಿ ಮೂಲಭೂತವಾದಿಗಳು ಇರಲಾರದ ಕಟ್ಟುಕಥೆಗಳ ಮೂಲಕ ಗಾಂಧಿ ಹತ್ಯೆಯ ಆರೋಪ ಬೇರೆಯವರ ತಲೆಗೆ ಕಟ್ಟಲು ಹವಣಿಸುತ್ತಿವೆ. ಗಾಂಧಿ ಕೊಲೆಗೆ ಕಾರಣರಾದ ಮೂಲಭೂತವಾದಿಗಳೇ ಮತ್ತೊಬ್ಬ ಗಾಂಧಿ ಕೊಲೆಗಾರನ ಹುಡುಕಾಟದಲ್ಲಿ ನಿರತವಾಗಿವೆ. ಎಷ್ಟೇ ವಿಫಲ ಯತ್ನ ಮಾಡಿದರೂ ಗಾಂಧಿ ಹತ್ಯೆಯಿಂದ ತಮ್ಮ ಮುಖಕ್ಕೆ ಮೆತ್ತಿಕೊಂಡ ರಕ್ತದ ಕಲೆಗಳನ್ನು ಈ ಸನಾತನಿ ಭಯೋತ್ಪಾದಕರು ಅಳಿಸಿಕೊಳ್ಳುವುದು ಅಸಾಧ್ಯ.

ಅಪ್ಪಟ ಜಾತ್ಯಾತೀತ ಹಿಂದೂ ಆಗಿದ್ದ ಗಾಂಧಿಯನ್ನು ಮತೀಯವಾದಿ ಭಯೋತ್ಪಾದಕನ ಮೂಲಕ ಕೋಮುವಾದಿ ಸಂಘಟನೆಗಳು ಕೊಲೆ ಮಾಡಿಸಿದ್ದವು. ಈ ಮೂಲಭೂತವಾದಿಗಳು ತಮ್ಮನ್ನು ತಾವು ಹಿಂದೂಗಳೆಂದು ಕರೆದುಕೊಳ್ಳುವ ಅರ್ಹತೆ ಕಳೆದುಕೊಂಡಿವೆ. ಹತ್ಯೆಯ ಸಂದರ್ಭದಲ್ಲಿ ಹೇ ರಾಮ್ ಎನ್ನುವ ಗಾಂಧಿಯವರ ಚೀತ್ಕಾರವು ಈ ಮೂಲಭೂತವಾದಿಗಳಿಗೆ ಕೊನೆಯವರೆಗೆ ಕಾಡಲಿದೆ. ಗಾಂಧಿ ರಾಮನನ್ನು ಜಡ ಮಂದಿರದಲ್ಲಿ ಗುರುತಿಸದೆ ಸತ್ಯ ನುಡಿಯುವುದರಲ್ಲಿ ಮತ್ತು ದೇಶದ ಜಾತ್ಯಾತೀತ ತತ್ವಗಳ ಆಚರಣೆಯಲ್ಲಿ ಕಂಡವರು. ಆದರೆ ಮೂಲಭೂತವಾದಿಗಳು ಆ ರಾಮನನ್ನು ಮತಗಳಿಕೆಯ ಅಸ್ತ್ರವಾಗಿ ಬಳಸಿ ಕೇವಲ ನಾಲ್ಕು ಗೋಡೆಗಳ ಗುಡಿಯಲ್ಲಿ ಗುರುತಿಸುತ್ತಿವೆ. ದಿನ ನಿತ್ಯ ರಾಮ ಭಜನೆ ಮಾಡುತ್ತಿದ್ದ ಗಾಂಧಿˌ ರಾಮನ ಪ್ರಾರ್ಥನೆಗೆ ಹೋಗುವ ಸಮಯದಲ್ಲೇ ನಕಲಿ ರಾಮಭಕ್ತರ ಭಂಟ ಮತ್ತು ಭಾರತ ದೇಶದ ಪ್ರಥಮ ಧಾರ್ಮಿಕ ಭಯೋತ್ಪಾದಕ ಗೋಡ್ಸೆಯ ಗುಂಡಿನಿಂದ ಕೊಲೆಯಾದರು.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತಾವು ಸಾಚಾ ಎಂದು ಗುರುತಿಸಿಕೊಳ್ಳಲು ಮೂಲಭೂತವಾದಿ ಸಂಘಟನೆಗಳು ಗಾಂಧಿ ಹತ್ಯೆಯ ಕಳಂಕದಿಂದ ಪಾರಾಗಲು ಹವಣಿಸುತ್ತಿವೆ. ರಾಮನ ನೈಜ ಪರಮಭಕ್ತ ಗಾಂಧಿಯನ್ನು ಕೊಲೆ ಮಾಡಿಸಿದ ಶಕ್ತಿಗಳೇ ಇಂದು ರಾಮನಿಗೆ ಮಂದಿರ ಕಟ್ಟುವ ಮಾತನಾಡುತ್ತಿವೆ. ಈ ವ್ಯಂಗ್ಯವನ್ನು ಪ್ರಜ್ಞಾವಂತರು ಗುರುತಿಸಿದ್ದಾರೆ. ಅಂತರಂಗದಲ್ಲಿ ಗಾಂಧಿ ಕೊಲೆಯನ್ನು ಸಮರ್ಥಿಸುವ ಮತ್ತು ಸಂಭ್ರಮಿಸುವ ಮೂಲಭೂತವಾದಿಗಳು ಬಹಿರಂಗದಲ್ಲಿ ಗೋಡ್ಸೆ ನಮ್ಮ ಸಂಸ್ಥೆಗೆ ಸೇರಿದವನಲ್ಲ ಎಂದು ಹುಸಿ ವಾದವನ್ನು ಮುಂದಿಡುತ್ತ ಬಂದಿವೆ. ಆದರೆ ದೇಶದ ಜನರು ಗೋಡ್ಸೆ ಯಾವ ಸೈದ್ಧಾಂತಿಕ ಸಂಘಟನೆಗೆ ಸೇರಿದವನು ಎನ್ನುವುದು ತಿಳಿಯದಷ್ಟು ಮೂರ್ಖರಲ್ಲ.

ಒಂದು ಕಡೆ ಗೋಡ್ಸೆ ನಮ್ಮವನಲ್ಲ ಎನ್ನುವ ಪಲಾಯನವಾದ ಮಾಡುತ್ತಲೆ ಮತ್ತೊಂದು ಕಡೆ ಗಾಂಧಿ ಕೊಲೆ ಗೋಡ್ಸೆ ಗುಂಡಿನಿಂದ ಆಗಿದ್ದಲ್ಲ ಎನ್ನುವ ವಿಲಕ್ಷಣ ಮತ್ತು ಗೋಡ್ಸೆಯನ್ನು ಸಮರ್ಥಿಸುವ ವಾದವನ್ನು ಈ ಮೂಲಭೂತವಾದಿ ಸಂಘಟನೆಗಳು ತೇಲಿ ಬಿಡುತ್ತಿವೆ. ಗಾಂಧಿಯ ಎದೆ ಹೊಕ್ಕ ಗುಂಡು ಗೋಡ್ಸೆ ಹೊಡೆದದ್ದಲ್ಲ ಎನ್ನುವ ಹೊಸ ನಾಟಕವೊಂದನ್ನು ಈ ಕೋಮುವಾದಿಗಳು ಆರಂಭಿಸಿ ಕೆಲವಾರು ವರ್ಷಗಳೇ ಆದವು.

ಗಾಂಧಿಯ ಎದೆ ಸೀಳಿದ ಗುಂಡು ಬೇರೆ ಯಾರೋ ಹೊಡೆದದ್ದು ಎನ್ನುವ ಕಟ್ಟುಕಥೆಯನ್ನು ಹೆಣೆದು ನ್ಯಾಯಾಲಯದ ಮೆಟ್ಟಿಲೇರಿರುವ ಕೋಮುವಾದಿಗಳು ಮಾಮೂಲಿನಂತೆ ಸುಳ್ಳು ಕಥೆ ಕಟ್ಟುವ ತಮ್ಮ ಹಳೆ ಚಾಳಿ ಮುಂದುವರೆಸಿವೆ. ಈ ಕಪೋಲಕಲ್ಪಿತ ಕಥೆಯನ್ನು ಕಟ್ಟಿ ನ್ಯಾಯಾಲಯದ ಮೆಟ್ಟಿಲೇರಿದಾತ ಸಾವರಕರ್ ಸ್ಥಾಪಿಸಿದ ಅಭಿನವ ಭಾರತ ಸಂಸ್ಥೆಯ ಟ್ರಸ್ಟಿ ಮತ್ತು ತನ್ನನ್ನು ತಾನು ಸಂಶೋಧಕನೆಂದು ಕರೆದುಕೊಳ್ಳುವ ಮುಂಬೈ ಮೂಲದ ಡಾ. ಪಂಕಜ್ ಫಡ್ನಿಸ್ ಎನ್ನುವ ಫಂಡಾಮೆಂಟಲಿಸ್ಟ್. ಆದರೆ ದುರ್ಭಾಗ್ಯದ ಸಂಗತಿ ಏನೆಂದರೆˌ ಈ ವಿಲಕ್ಷಣ ವಾದವನ್ನು ವಜಾಗೊಳಿಸಿ ಫಡ್ನಿಸ್ ಗೆ ದಂಡ ವಿಧಿಸಬೇಕಾದ ಸರ್ವೋಚ್ಛ ನ್ಯಾಯಾಲಯ ಈ ಪ್ರಕರಣವನ್ನು 2017ರಲ್ಲಿ ವಿಚಾರಣೆಗೆ ಸ್ವೀಕರಿಸಿತ್ತು. ಆನಂತರ ನ್ಯಾಯಪೀಠವು ಈ ವ್ಯಾಜ್ಯದ ಕುರಿತು ನ್ಯಾಯಾಲಯಕ್ಕೆ ನೆರವು ನೀಡಲು ಆ್ಯಮಿಕಸ್ ಕ್ಯೂರಿಯಾಗಿ ಹಿರಿಯ ನ್ಯಾಯವಾದಿ ಹಾಗೂ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮ್ರೇಂದ್ರ ಶರಣ್ ಅವರನ್ನು ನಿಯೋಜಿಸಿತ್ತು.

65 ವರ್ಷಗಳಷ್ಟು ಹಳೆಯ ಮತ್ತು ಸ್ವತಃ ಗೋಡ್ಸೆ ತಾನು ಗಾಂಧಿಯನ್ನು ಕೊಂದದ್ದು ನಿಜವೆಂದು ಒಪ್ಪಿಕೊಂಡು ಗಲ್ಲಿಗೇರಿರುವ ಈ ಕೇಸು ವಿಚಾರಣೆಗೆ ಎಷ್ಟು ಯೋಗ್ಯ ಎನ್ನುವ ಪ್ರಶ್ನೆ ಸಹಜವಾದದ್ದು. ಆದರೆ ಈ ವಾದವು ಒಂದು ವಿಚಾರಣೆಯ ಪ್ರಹಸನವೊಂದಕ್ಕೆ ಮಾತ್ರ ಒಪ್ಪಿಗೆಯ ಮುದ್ರೆ ಒತ್ತಿದಂತೆ ಕಾಣುತ್ತಿದೆ. ಈ ಕಟ್ಟುಕಥೆ ಕೇವಲ ಗಾಂಧಿ ಹತ್ಯೆಯ ಕುರಿತು ಗೊಂದಲವನ್ನು ಸ್ರಷ್ಠಿಸುವುದಲ್ಲದೆ ಬೇರೇನೂ ಅಲ್ಲ. ನ್ಯಾಯಾಲಯ ಕೂಡ ಈ ಹೊಸ ವಾದದ ವಿಚಾರಣೆಯನ್ನು ಮುಂದುವರೆಸುವುದಿಲ್ಲ ಎಂಬ ಸತ್ಯ ಮೂಲಭೂತವಾದಿಗಳಿಗೆ ಗೊತ್ತಿದೆ. ಆದರೆ ಅಲ್ಲಿಯ ತನಕ ಜನರ ತಲೆಯಲ್ಲಿ ಗೊಂದಲದ ಹುಳ ಬಿಡುವ ಕಾರ್ಯವನ್ನು ನಡೆದುಹೋಗುತ್ತದೆ ಎನ್ನುವುದು ಮೂಲಭೂತವಾದಿಗಳ ಹುನ್ನಾರ.

ನೂರಾರು ಜನರಿರುವ ಸಾರ್ವಜನಿಕ ಸ್ಥಳದಲ್ಲಿ ನಡೆದ ಗಾಂಧಿ ಹತ್ಯೆಯ ಬಗ್ಗೆ ಅದು ಹೇಗೆ ಕಥೆ ಕಟ್ಟಲು ಈ ಸನಾತನಿಗಳು ಪ್ರಯತ್ನಿಸುತ್ತಿದ್ದಾರೊ ಕಾಣೆ. ಗೋಡ್ಸೆ ಎನ್ನುವ ಭಯೋತ್ಪಾದಕ ಗಾಂಧಿ ಎದುರಿಗೆ ನಿಂತುˌ ಅವರನ್ನು ನಮಿಸಿಯೇ ಕೊಲೆ ಮಾಡಿದ್ದಾನೆ. ಹಾಗೆಂದು ಆತ ಒಪ್ಪಿಕೊಂಡು ನೇಣಿಗೂ ಏರಿಯಾಗಿದೆ. ಸನಾತನಿಗಳ ಈ ವಿಲಕ್ಷಣ ವಾದದಲ್ಲಿ ಒಂದು ವೇಳೆ ಸತ್ಯಾಂಶ ಇದ್ದದ್ದೇ ಆದರೆ ನಾಲ್ಕನೇ ಗುಂಡು ಹೊಡೆದವನು ಗೋಡ್ಸೆಯನ್ನು ಗಾಂಧಿ ಕೊಲೆಗೆ ಪ್ರಚೋದಿಸಿˌ ಮಾರ್ಗದರ್ಶನ ಮಾಡಿದ್ದ ಆತನ ಹಿರಿಯ *ಪುರುಷ* ಸ್ನೇಹಿತನೇ ಆಗಿರಬಹುದು ಎನ್ನುವ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಏಕೆಂದರೆ ಗೋಡ್ಸೆಯ ಗುಂಡು ಗುರಿ ತಪ್ಪಿದರೆ ಕೊಲೆಯ ಹುನ್ನಾರ ವಿಫಲವಾಗಬಾರದೆನ್ನುವ ಕಾರಣದಿಂದ ಗೋಡ್ಸೆ ಗುಂಪಿನ ಹಿರಿಯ ಸದಸ್ಯನೇ ನಾಲ್ಕನೇ ಗುಂಡು ಯಾಕೆ ಹಾರಿಸಿರಬಾರದು? ಘೋಡ್ಸೆ ಮತ್ತು ಆತನ ಗುಂಪು ಗಾಂಧಿ ಕೊಲೆಗೆ 1932 ರಿಂದ ಒಟ್ಟು ಆರು ಬಾರಿ ಪ್ರಯತ್ನಿಸಿ 1948 ರಲ್ಲಿ ಯಶಸ್ವಿಯಾಗಿದೆ.

ಅವತ್ತಿನ ದಿನ ಗಾಂಧಿ ಕೊಲೆಗೆ ಮುಹೂರ್ತವಿಟ್ಟಿದ್ದ ಸಂಗತಿ ಗೋಡ್ಸೆ ಗುಂಪಿನ ಸನಾತನಿ ವಿದ್ವಂಸಕರಿಗಲ್ಲದೆ ಬೇರೆ ಯಾರಿಗಾದರೂ ತಿಳಿದಿರುವುದು ಅಸಾಧ್ಯದ ಮಾತು. ಹೀಗಾಗಿ ಗಾಂಧಿ ಕೊಲೆಯ ಷಡ್ಯಂತ್ರದಲ್ಲಿ ಭಾಗಿಯಾಗಿದ್ದ ಆ ಗುಂಪಿನ ಯಾರಾದರೊಬ್ಬ ಹಿರಿಯ ಸದಸ್ಯನೇ ಒಂದು ವೇಳೆ ಗೋಡ್ಸೆ ಗುರಿ ತಪ್ಪಿದರೆ ಕೆಲಸ ಕೆಡಬಾರದೆಂದು ಮತ್ತೊಂದು ಗುಂಡು ಹಾರಿಸಿರಬಹುದಲ್ಲವೆ? ಈ ಪಂಕಜ್ ಫಡ್ನಿಸ್ ಮತ್ತು ಆತನ ಹಿಂದೆ ನಿಂತು ಈ ಕಟ್ಟುಕಥೆ ಹೆಣೆದಿರುವ ಸನಾತನಿಗಳು ದೇಶದ ಜನರ ಕಣ್ಣಿಗೆ ಮಂಕು ಬೂದಿ ಎರಚುವ ಕೆಲಸ ಮಾಡಿವೆ. ಗಾಂಧಿಯನ್ನು ಈ ಮೂಲಭೂತವಾದಿಗಳು ಅಂದು ಮಾತ್ರ ಕೊಲೆ ಮಾಡಿ ಸುಮ್ಮನಾಗಲಿಲ್ಲ. ನಿರಂತರವಾಗಿ ಗಾಂಧಿಯ ತೇಜೋವಧೆ ಮಾಡುವ ಮೂಲಕ ದಿನ ನಿತ್ಯ ಗಾಂಧಿ ಕೊಲೆ ಮಾಡುತ್ತಿದ್ದಾರೆ. ಗಾಂಧಿ ಹುಟ್ಟಿದ ಗುಜರಾತಿನ ಮಣ್ಣಿನಲ್ಲಿ ಮಹಾ ನರಮೇಧ ನಡೆದುಹೋಗಿದೆ. ಗುಜರಾತಿನಲ್ಲಿ ನಡೆದ ಭೀಕರ ನರಮೇಧವು ಅಸಂಖ್ಯಾತ ಗಾಂಧಿಗಳ ಹತ್ಯೆಗೆ ಸಮನಾದದ್ದು. ಭಯೋತ್ಪಾದಕ ಗೋಡ್ಸೆಯನ್ನು ವೈಭವೀಕರಿಸುವˌ ಆತನಿಗೆ ಗುಡಿ ಕಟ್ಟುವ ಮತ್ತು ಆ ಭಯಂಕರ ನರ ರಕ್ಕಸನನ್ನು “ಪಂಡಿತ್ ಗೋಡ್ಸೆ” ಎಂಬ ವಿಶೇಷಣ ಬಳಸಿ ಸಂಬೋಧಿಸುವ ಮೂಲಕ ಸನಾತನಿಗಳು ದಿನನಿತ್ಯ ಗಾಂಧಿ ಕೊಲೆ ಮಾಡುತ್ತಿದ್ದಾರೆ.

ನಮ್ಮ ನೆಲದ ನ್ಯಾಯಾಲಯಕ್ಕೆ ಗಾಂಧಿಯ ಬಗ್ಗೆ ನಿಜವಾದ ಕಳಕಳಿ ಇದ್ದರೆ ಗಾಂಧಿ ನಿಂದನೆಯಲ್ಲಿ ತೊಡಗುವ ಮತ್ತು ಗೋಡ್ಸೆ ವೈಭವೀಕರಿಸುವ ಸನಾತನಿ ಮೂಲಭೂತವಾದಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಅಂದು ಗೋಡ್ಸೆ ಕೇವಲ ಗಾಂಧಿ ಒಬ್ಬರನ್ನು ಮಾತ್ರ ಕೊಲ್ಲಲಿಲ್ಲ. ಆತ ಭಾರತದ ಸಭ್ಯ ˌ ಜಾತ್ಯಾತೀತˌ ಮತ್ತು ಸತ್ಯ ಸಂಸ್ಕ್ರತಿಯನ್ನು ಕೂಡ ಕೊಲೆಮಾಡಿದ. ಗಾಂಧಿ ಕೊಲೆಯ ತದನಂತರದಲ್ಲಿ ಗಾಂಧಿ ನಿಂದನೆ ಮತ್ತು ಈ ನೆಲದ ಅನೇಕ ಚಿಂತಕರ ಕೊಲೆಗಳ ಹಿಂದೆ ಅದೇ ಭಯೋತ್ಪಾದಕ ಗೋಡ್ಸೆಯ ಕೊಲೆಗಡುಕ ಸಿದ್ಧಾಂತದ ಕೈವಾಡವಿರುವುದು ಅಲ್ಲಗಳೆಯಲಾಗದು. ಗಾಂಧಿ ಕೊಲೆಯ ಹಿಂದಿದ್ದ ಮತೀಯವಾದಿ ಶಕ್ತಿಗಳು ಇಂದು ಹಿಂದೆಂದಿಗಿಂತಲೂ ಸಂಘಟಿತ ಹಾಗು ಸಶಕ್ತವಾಗಿವೆ. ಭಾರತದಲ್ಲಿ ನಡೆಯುತ್ತಿರುವ ಪ್ರತಿಯೊಂದು ಕೊಲೆˌ ಗುಂಪುಹಲ್ಲೆ ˌ ಅತ್ಯಾಚಾರˌ ಅನಾಚಾರˌ ಭ್ರಷ್ಟಾಚಾರ ಮತ್ತು ಅನೇಕ ಬಗೆಯ ಉಗ್ರವಾದದ ಚಟುವಟಿಕೆಗಳ ಹಿಂದೆ ಈ ಮತೀಯವಾದಿ ಸಂಘಟನೆಗಳ ಕೈವಾಡವಿರುವುದು ನಿಚ್ಚಳವಾದ ಸತ್ಯ ಸಂಗತಿ.

ಸಾಂಸ್ಕ್ರತಿಕ ಮತ್ತು ರಾಷ್ಟ್ರೀಯವಾದದ ಮುಖವಾಡ ತೊಟ್ಟಿರುವ ಈ ಉಗ್ರವಾದಿ ಸಂಘಟನೆಗಳನ್ನು ಗುರುತಿಸಿ ಅವುಗಳ ಗುಪ್ತ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡುವ ಅಗತ್ಯ ಇಂದು ಹೆಚ್ಚಿದೆ. ಅನುಮಾನಗಳು ದಟ್ಚವಾಗುವ ಸೂಚನೆಗಳಿದ್ದರೆ ಅಂತಹ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕಾದದ್ದು ನಮ್ಮ ನ್ಯಾಯಾಲಯದ ಆದ್ಯ ಕರ್ತವ್ಯವಾಗಬೇಕಿದೆ. ಮತ್ತೆಲ್ಲ ವಿಷಯಗಳನ್ನು ಬದಿಗಿರಿಸಿ ನ್ಯಾಯಾಲಯವು ಗಾಂಧಿ ದ್ವೇಷದ ಸಂಗತಿಗಳನ್ನು ಪ್ರಮುಖ ಅಪರಾಧ ಚಟುವಟಿಕೆ ಎಂದು ಪರಿಗಣಿಸಬೇಕಿದೆ. ಗಾಂಧಿ ಕೊಲೆಗಾರರ ಸಂತತಿಯೇ ಗಾಂಧಿಯನ್ನು ಬೇರೆ ಯಾರೊ ಕೊಂದರೆನ್ನುತ್ತ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳು ಮಾಡುತ್ತಿರುವ ಪ್ರಕರಣ ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದಿದ್ದರೆ ದೇಶವು ಮುಂದೊಂದು ದಿನ ಅಫಘಾನಿಸ್ತಾನವು ತಾಲಿಬಾನಿ ಉಗ್ರರು ವಶಪಡಿಸಿಕೊಂಡಂತೆ ಈ ಭಾರತದ ಮೂಲಭೂತವಾದಿಗಳು ಈ ನೆಲದ ನ್ಯಾಯಾಂಗ ಮತ್ತು ಸೈನ್ಯದ ಮೇಲೆ ಹಿಡಿತ ಸಾದಿಸಿ ಈ ದೇಶವನ್ನು ಧಾರ್ಮಿಕ ಮೂಲಮೂತವಾದಿ ದೇಶವಾಗಿ ಮಾರ್ಪಡಿಸಿದರೆ ಆಶ್ಚರ್ಯ ಪಡಬೇಕಿಲ್ಲ.

~ ಡಾ.ಜೆ ಎಸ್ ಪಾಟೀಲ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!