Breaking News
Home / General News / ಲಿಂಗಾಯತ ಸ್ವತಂತ್ರ ಧರ್ಮ

ಲಿಂಗಾಯತ ಸ್ವತಂತ್ರ ಧರ್ಮ

ಲಿಂಗಾಯತ ಸ್ವತಂತ್ರ ಧರ್ಮ
ಡಾ. ಸಿದ್ಧರಾಮ ಸ್ವಾಮಿಗಳು
ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ಹಿಂದೂ ಧರ್ಮದಿಂದ ಭಿನ್ನವಾಗಿದ್ದು, ಅವೈದಿಕ ಧರ್ಮವೆನಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವ ಹೋರಾಟ ನಡೆದಿರುವ ಸಂದರ್ಭದಲ್ಲಿಯೇ ಅದಕ್ಕೆ ವಿರುದ್ಧವಾದ ಹೋರಾಟವೂ ನಡೆದಿರುವುದು ವಿಪರ್ಯಾಸದ ಸಂಗತಿ. ಹನ್ನೆರಡನೆಯ ಶತಮಾನದಲ್ಲಿ ವೈದಿಕ ಧರ್ಮೀಯರ ಶೋಷಣೆಯಿಂದ ಜನಸಾಮಾನ್ಯರನ್ನು ಮುಕ್ತಗೊಳಿಸುವುದಕ್ಕಾಗಿ ಧರ್ಮಗುರು ಬಸವಣ್ಣನವರು ಸ್ಥಾಪಿಸಿದ ವಿನೂತನ ಧರ್ಮವೇ ಲಿಂಗಾಯತ. ಇದು ವರ್ಗ-ವರ್ಣ ರಹಿತವಾದ ಸರ್ವಸಮಾನತೆಯನ್ನು ಸಾರುವ, ಕಾಯಕ ಮತ್ತು ದಾಸೋಹ ತತ್ವಗಳ ಅಡಿಯಲ್ಲಿ ರೂಪಿತಗೊಂಡಿರುವ ಧರ್ಮವಾಗಿದೆ. ಬಸವಾದಿ ಶರಣರ ಕಾಲದಲ್ಲಿ ಮತ್ತು ನಂತರ ಈ ಧರ್ಮಕ್ಕೆ ಪ್ರವೇಶ ಪಡೆದ ಶೈವ ಪಂಥೀಯರು ಕಾಲಾಂತರದಲ್ಲಿ ತಮ್ಮ ಮೂಲ ಆಚರಣೆ ತತ್ವ-ಸಿದ್ಧಾಂತಗಳನ್ನು ಲಿಂಗಾಯತದಲ್ಲಿ ಬೆರೆಸಿ ಪ್ರಬಲವಾಗಿರುವುದೇ ಇಂದಿನ ಪರ-ವಿರೋಧದ ಹೋರಾಟಕ್ಕೆ ಪ್ರಮುಖ ಕಾರಣವಾಗಿದೆ.
ವೈದಿಕ ಧರ್ಮದ ಶಾಖೆಯಾಗಿರುವ ಶೈವಮತದ ಶಾಖೆಯೇ ವೀರಶೈವ. ಈ ವೀರಶೈವ ಮತೀಯರೇ ಲಿಂಗಾಯತದಲ್ಲಿ ಸೇರಿಕೊಂಡವರು. ಲಿಂಗಾಯತಕ್ಕೆ ಬದಲಾಗಿ ವೀರಶೈವವನ್ನು ಮುಂದೆಮಾಡಿಕೊಂಡು ಅನೇಕ ಸಂಸ್ಕೃತ ಗ್ರಂಥಗಳನ್ನು ರಚಿಸಿ ಅವೈದಿಕ ಲಿಂಗಾಯತರನ್ನು ವೈದಿಕ ಧರ್ಮದತ್ತ ಕೊಂಡೊಯ್ದವರು ಮತ್ತು ಕೊಂಡೊಯುತ್ತಿರುವವರು ಈ ವೀರಶೈವರೇ ಆಗಿದ್ದಾರೆ. ಲಿಂಗಾಯತ ಧರ್ಮದಲ್ಲಿ ವಿವಿಧ ಕಾಯಕಗಳನ್ನು ಮಾಡುತ್ತಿದ್ದ ಸಮುದಾಯಗಳನ್ನು ಜಾತಿಗಳನ್ನಾಗಿಸಿ ಮತ್ತೆ ವರ್ಣ-ವರ್ಗ ಭೇದ ವ್ಯವಸ್ಥೆಯನ್ನು ಇವರು ಪ್ರಚಲಿತಗೊಳಿಸಿದವರು. ಇಪ್ಪತ್ತನೆಯ ಶತಮಾನದಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಅವಿರತ ಪರಿಶ್ರಮ ಕಾರಣವಾಗಿ ಹೊರಬಂದ ವಿಪುಲ ವಚನ ಸಾಹಿತ್ಯದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಲಿಂಗಾಯತವು ಭಿನ್ನವೆಂಬ ಪ್ರಬಲ ಅಭಿಪ್ರಾಯ ಮೂಡಿಬಂದ ಹಿನ್ನೆಲೆಯಲ್ಲಿ ಇವತ್ತು ಲಿಂಗಾಯತವನ್ನು ಪರಿಶುದ್ಧಗೊಳಿಸಬೇಕಾದ ಅಗತ್ಯ ಉಂಟಾಗಿದೆ.
ವೀರಶೈವವನ್ನು ಪ್ರತಿಪಾದಿಸುವ ಸಿದ್ಧಾಂತ ಶಿಖಾಮಣಿ, ಆಗಮಗಳಲ್ಲಿ ವೀರಶೈವರನ್ನು ಶೈವರೆಂದೇ ಕರೆಯಲಾಗಿದೆ. ’ವೀ ಶಬ್ದೇ ನೋಚ್ಯತೇ ವಿದ್ಯಾ ಶಿವಜೀವೈಕ್ಯ ಬೋಧಿಕಾ| ತಸ್ಯಾಂ ರಮಂತೇ ಯೇ ಶೈವಾಃ ವೀರಶೈವಾಸ್ತು ತೇ ಮತಾಃ|| ಶಿವಜೀವೈಕ್ಯ ವಿದ್ಯೆಯಲ್ಲಿ ಆನಂದಿಸುವ ಶೈವರೇ ವೀರಶೈವರಾಗಿದ್ದಾರೆ ಎಂಬ ಸಿದ್ಧಾಂತ ಶಿಖಾಮಣಿ (೫-೧೬)ಯ ಉಕ್ತಿ ಅದಕ್ಕೊಂದು ನಿದರ್ಶನ. ವಾಸ್ತವವಾಗಿ ಶಿವಜೀವೈಕ್ಯ ಎಂಬುದು ಲಿಂಗಾಯತರ ಪಾರಿಭಾಷಿಕ ಪದವಲ್ಲ. ಅಂಗಲಿಂಗ ಸಾಮರಸ್ಯ ಎಂಬುದು ಲಿಂಗಾಯತರ ಪದವಾಗಿರುವುದು. ವೀರಾಗಮದಲ್ಲಿ ಹೇಳಿರುವ ಸರ್ವೇಷಾಮಪಿ ಶೈವಾನಾಂ ವೀರಶೈವಂ ಮಹತ್ತರಮ್’ ಎಂಬ ಮಾತೂ ಕೂಡ ವೀರಶೈವರು ವೈದಿಕರಾದ ಶೈವರೆಂಬುದನ್ನು ದೃಢಪಡಿಸುತ್ತದೆ. ಕ್ರಿಯಾಸಾರ (೧.೧೪-೧೫)ದಲ್ಲಿ ಅಗಸ್ತ್ಯ ಜೈಮಿನಿ, ವಿಶ್ವಾಮಿತ್ರ, ಕಸ್ಯಪ, ಭಾರದ್ವಾಜ, ಆಂಗೀರ, ಅತ್ರಿ, ವಶಿಷ್ಟ ಮುಂತಾದ ಋಷಿಮುನಿಗಳನ್ನು ವೀರಶೈವರೆಂದು ಹೆಸರಿಸಲಾಗಿದೆ. ಚಂದ್ರಜ್ಞಾನಾಗಮದಲ್ಲಿ ವರ್ಣವ್ಯವಸ್ಥೆಯನ್ನು ಅಂಗೀಕರಿಸಲಾಗಿದೆ. ಇಂದಿಗೂ ವೀರಶೈವರಲ್ಲಿ ಲಿಂಗಾಯತಕ್ಕೆ ವಿರುದ್ಧವಾದ ಹೋಮ-ಹವನ, ಬಹುದೇವತಾ ಉಪಾಸನೆ, ವೈದಿಕ ಮಂತ್ರಗಳ ಪಠನ, ಸ್ಥಾವರ ದೇವತೆಗಳ ಪೂಜೆ ಮುಂತಾದ ಆಚರಣೆಗಳು ಬಳಕೆಯಲ್ಲಿವೆ. ಅಯ್ಯಾಚಾರವೆಂಬ ವೈದಿಕ ಸಂಸ್ಕಾರ ಕೇವಲ ಪುರುಷರಿಗಿದೆ. ಹೆಣ್ಣು ಮಕ್ಕಳು ಅಯ್ಯಾಚಾರ ಮಾಡಿಸಿಕೊಂಡ ಉದಾಹರಣೆ ಇಲ್ಲ. ಹೀಗೆ ಎಲ್ಲಂದದಲ್ಲಿ ಲಿಂಗಾಯತಕ್ಕಿಂತ ಭಿನ್ನವಾಗಿರುವ ವೀರಶೈವ ಪದವನ್ನು ಬದಿಗಿಟ್ಟು, ಲಿಂಗಾಯತವೆಂಬ ಒಂದೇ ಛತ್ರದ ಅಡಿಯಲ್ಲಿ ಎಲ್ಲರೂ ಸೇರಿ ಲಿಂಗಾಯತವನ್ನು ಉಳಿಸುವ, ಬೆಳೆಸುವ ಅದಕ್ಕೆ ಸಂವಿಧಾನದ ಮಾನ್ಯತೆಯನ್ನು ದೊರಕಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.
ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನದಲ್ಲಿ ರಾಜಾಶ್ರಯದಿಂದ (ಪೇಶ್ವೆ ಆಡಳಿತ) ಪ್ರಬಲರಾಗಿದ್ದ ವೈದಿಕ ಧರ್ಮೀಯರು ಕೃಷಿಕಾಯಕ ಮಾಡಿಕೊಂಡಿದ್ದ ಲಿಂಗಾಯತರನ್ನು ಶೂದ್ರ ವರ್ಣದಲ್ಲಿ ಪರಿಗಣಿಸಿದ್ದರು. ಇದರ ಪರಿಣಾಮವಾಗಿ ಲಿಂಗಾಯತರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದುದಲ್ಲದೆ ಗೌರವಹೀನ ಬದುಕನ್ನು ಸಾಗಿಸುವಂತಾಗಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರಣಿಕ ಯುಗಪುರುಷ ಲಿಂ. ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಆ ಕಾಲದ ಎಲ್ಲ ಲಿಂಗಾಯತ ಪ್ರಮುಖರ ಸಭೆ ಸೇರಿಸಿ ಲಿಂಗಾಯತರ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಗಾಗಿ ಕಟ್ಟಿದ ಸಂಸ್ಥೆಯೇ ಅಖಿಲಭಾರತ ವೀರಶೈವ ಮಹಾಸಭೆ. ಲಿಂಗಾಯತದ ಬದಲು ವೀರಶೈವ ಪದವನ್ನು ಬಳಸಿಕೊಳ್ಳುವಲ್ಲಿ ಶ್ರೇಷ್ಠತ್ವದ ವ್ಯಸನ ಅಂದರೆ ವೈದಿಕರಿಂದ ಸಂಬೋಧಿಸಲ್ಪಡುತ್ತಿದ್ದ ಶೂದ್ರತ್ವದಿಂದ ಮೇಲೇಳಬೇಕೆಂಬ ಅಭಿಲಾಷೆಯೇ ಮುಖ್ಯವಾಗಿರುವುದನ್ನು ಗಮನಿಸಬೇಕು. ಇದು ಲಿಂಗಾಯತರನ್ನು ಬ್ರಾಹ್ಮಣರಾಗಿಸುವ ವಿಫಲ ಪ್ರಯತ್ನವಷ್ಟೇ. ಸೊಲ್ಲಾಪುರದಲ್ಲಿ ವಾರದ ಮಲ್ಲಪ್ಪನವರು ಲಿಂಗೀಬ್ರಾಹ್ಮಣ ಗ್ರಂಥಮಾಲೆ ಪ್ರಾರಂಭಿಸಿರುವುದು, ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು ಪರಳೀ ವ್ಯಾಜ್ಯದಲ್ಲಿ ಲಿಂಗಾಯತರಿಗೆ ಲಿಂಗಾಯತರದಲ್ಲದ ಸ್ಥಾವರ ಲಿಂಗದ ಪೂಜೆಯ ಹಕ್ಕು ಕೊಡಿಸಿರುವುದು ಇವೆಲ್ಲವೂ ಲಿಂಗಾಯತರನ್ನು ಶೂದ್ರತ್ವದಿಂದ ಮೇಲೆತ್ತುವ ಪ್ರಯತ್ನಗಳೇ ಆಗಿವೆ.
ಇಂದು ಬಸವಾದಿ ಶರಣರಿಂದ ರಚಿತವಾದ ವಚನ ಸಾಹಿತ್ಯವು ಅಧ್ಯಯನ ಮತ್ತು ಸಂಶೋಧನೆಗೊಳಪಟ್ಟಿದೆ. ೧೬ ಮತ್ತು ೧೭ನೆಯ ಶತಮಾನದಲ್ಲಿ ಬೃಹತ್ ಪ್ರಮಾಣದಲ್ಲಿ ನಡೆದ ವಚನಗಳ ಸಂಕಲನ, ಸಂಪಾದನ ವರ್ಗೀಕರಣ ಮತ್ತು ಪ್ರತಿಮಾಡುವ ಸಂದರ್ಭದಲ್ಲಿಯೂ ಲಿಂಗಾಯತದಲ್ಲಿ ಸೇರಿಕೊಂಡಿರುವ ಶೈವ(ವೀರಶೈವ)ರು ಸಾಕಷ್ಟು ಕಲಸು ಮೇಲೋಗರ ಮಾಡಿರುವುದು, ಲಿಂಗಾಯತದ ಬದಲಿಗೆ ವೀರಶೈವವನ್ನು ಸೇರಿಸಿರುವುದು ಅಧ್ಯಯನ ಮತ್ತು ಸಂಶೋಧನೆಯಿಂದ ದೃಢಪಟ್ಟಿದೆ. ಲಿಂಗಾಯತದ ಧಾರ್ಮಿಕ ಆಚರಣೆಗಳು ಹಾಗು ವೀರಶೈವದ ಧಾರ್ಮಿಕ ಆಚರಣೆಗಳು ಯಾವವು ಎಂಬುದೂ ಸ್ಪಷ್ಟವಾಗಿದೆ. ಹೀಗಿರುವಾಗ ನಮ್ಮದಲ್ಲದ ವೀರಶೈವವನ್ನು ಬದಿಗೆ ಸರಿಸಿ ಲಿಂಗಾಯತವನ್ನು ಮುಂದೆ ಮಾಡಿ ಅದು ವೈದಿಕ (ಹಿಂದೂ) ಧರ್ಮದಿಂದ ಭಿನ್ನವೆಂಬುದನ್ನು ತೋರ್ಪಡಿಸಿದಾಗ ಮಾತ್ರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಲಭ್ಯವಾಗುತ್ತದೆ. ಶೈವದ ಶಾಖೆಯಾಗಿರುವ ವೀರಶೈವವನ್ನು ಲಿಂಗಾಯತಕ್ಕೆ ಜೋಡಿಸುವುದರಿಂದ ಮಾನ್ಯತೆ ದೊರೆಯುವುದು ಮತ್ತು ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರೆನಿಸಿ ಸಂವಿಧಾನದತ್ತ ಸೌಲಭ್ಯಗಳನ್ನು ಪಡೆಯುವುದು ಕಷ್ಟವಾಗುತ್ತದೆ.
ಲಿಂಗಾಯತರ ಪ್ರಾತಿನಿಧಿಕ ಸಂಸ್ಥೆಯೆನಿಸಿದ ಅಖಿಲಭಾರತ ವೀರಶೈವ ಮಹಾಸಭೆಯು ಇತ್ತ ಲಿಂಗಾಯತವನ್ನು ಬಿಡದೆ ಅತ್ತ ವೀರಶೈವವನ್ನೂ ಬಿಡದೆ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ವೀರಶೈವ-ಲಿಂಗಾಯತ ಎಂಬ ಎರಡೂ ಪದಗಳನ್ನು ಇಟ್ಟುಕೊಂಡು ಸ್ವತಂತ್ರಧರ್ಮದ ಮಾನ್ಯತೆಗೆ ಪ್ರಯತ್ನಿಸಿ ಮೂರು ಭಾರಿ ವಿಫಲವಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿಯೂ ವೀರಶೈವ ಲಿಂಗಾಯತವು ಸ್ವತಂತ್ರಧರ್ಮವಾಗಿದೆ ಎಂದು ಅದು ಹೇಳಿದೆ ಹೊರತಾಗಿ ವೀರಶೈವ ಲಿಂಗಾಯತವು ಹಿಂದೂಧರ್ಮದಿಂದ ಹೇಗೆ ಭಿನ್ನ ಎಂಬುದನ್ನು ಹೇಳಿಲ್ಲ. ವೀರಶೈವ ಪದವೇ ಇರಬೇಕೆನ್ನುವವರು ತಮ್ಮನ್ನು ಹಿಂದೂಗಳೆಂದೇ ಪ್ರತಿಪಾದಿಸುತ್ತಾರೆ ಅಷ್ಟೇ ಅಲ್ಲ, ಅಖಿಲ ಭಾರತ ವೀರಶೈವ ಮಹಾಸಭೆಯವರೂ ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೀಗೆ ಅಖಿಲ ಭಾರತ ವೀರಶೈವ ಮಹಾಸಭೆ ಇಕ್ಕಟ್ಟಿನಲ್ಲಿ ಸಿಲುಕಿದೆ. ಅದು ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಇದು ಸಕಾಲ. ಲಿಂಗಾಯತವನ್ನು ಸ್ವತಂತ್ರಧರ್ಮ ಮಾಡುವ ಪ್ರಾಮಾಣಿಕ ಕಳಕಳಿ ಇದ್ದರೆ ಅದು ಲಿಂಗಾಯತರು ಹಿಂದೂಗಳಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು ಮತ್ತು ಹಿಂದೂತ್ವವಾದಿಗಳನ್ನು ಅನಿವಾರ್ಯವಾಗಿ ಕೈಬಿಡಬೇಕು. ಅಕ್ಕಿಯ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎನ್ನುವುದಾದರೆ ಅದು ಮತ್ತಷ್ಟು ಅವಹೇಳನಕ್ಕೆ ಗುರಿಯಾಗಬೇಕಾಗುತ್ತದೆ.
ಲಿಂಗಾಯತ ಧರ್ಮದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸುವ ಕಾಯಕ ಜಂಗಮ ಸಮುದಾಯದ್ದು. ಲಿಂಗಾಯತವು ಸ್ವತಂತ್ರ ಧರ್ಮವಾಗುವುದರಿಂದ ಅವರ ಘನತೆ ಗೌರವಕ್ಕೆ ಯಾವುದೇ ಧಕ್ಕೆ ಬರದು. ಪಂಚಪೀಠಗಳ ಪರಂಪರೆಯೂ ಹಿಂದಿನಂತೆ ಮುಂದುವರೆಯುತ್ತದೆ. ಯಾವುದೇ ಸಂದೇಹ ಬೇಡ. ಅಖಿಲಭಾರತ ವೀರಶೈವ ಮಹಾಸಭೆಯ ಹೆಸರನ್ನು ಅಖಿಲ ಭಾರತ ಲಿಂಗಾಯತ ಮಹಾಸಭೆ ಮಾಡುವುದರಿಂದ ಯಾರಿಗೂ ಯಾವುದೇ ರೀತಿಯ ತೊಂದರೆಯಾಗದು, ವ್ಯರ್ಥ ಚಿಂತೆ ಬೇಡ. ಅದರ ಸಂಸ್ಥಾಪಕರೂ ಲಿಂ. ಹಾನಗಲ್ಲ ಕುಮಾರ ಸ್ವಾಮಿಗಳವರೇ ಆಗಿರುತ್ತಾರೆ. ಇದಕ್ಕೆ ಬೇಕಾದಷ್ಟು ಉದಾಹರಣೆ ಕೊಡಬಹುದು. ಯಾರಾದರೂ ಅಖಿಲ ಭಾರತ ವೀರಶೈವ ಮಹಾಸಭೆಗೆ ಪರ್ಯಾಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದರೆ ಲಿಂ. ಹಾನಗಲ್ಲ ಶ್ರೀಗಳಿಗೆ ಅಪಚಾರ ಮಾಡಿದಂತಾಗುತ್ತದೆ. ಇಂಥ ಅಪಚಾರಕ್ಕೆ ಮಹಾಸಭೆಯವರೇ ಕಾರಣೀಭೂತರಾದಂತಾಗುತ್ತದೆ. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಲಿಂಗಾಯತ ಪದವೊಂದನ್ನೇ ಉಳಿಸಿಕೊಳ್ಳುವುದು ಲಿಂಗಾಯತ ಧರ್ಮಕ್ಕೆ ಸ್ವತಂತ್ರಧರ್ಮದ ಮಾನ್ಯತೆಯನ್ನು ಕೊಡಿಸುವಲ್ಲಿ ಸಹಕಾರಿಯಾಗುತ್ತದೆ. ಲಿಂಗಾಯತ ಧರ್ಮದ ಅಸ್ಮಿತೆಯನ್ನು ಮತ್ತು ಲಿಂಗಾಯತರ ಸರ್ವಸಮಾನತೆಯ ವಿಶಿಷ್ಟ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರಲು ಸಾಧ್ಯವಾಗುತ್ತದೆ.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಜಾತಿ ಲಿಂಗಾಯತರು ಮತ್ತು ಬೇಡ ಜಂಗಮ ಪಂಚಾಚಾರ್ಯರು ಸತ್ಯವೆಂದು ನಂಬಿ ಲಿಂಗಾಯತ ಧರ್ಮದ ಮಾನ್ಯತೆ ತಪ್ಪಿಸುತ್ತಿದ್ದಾರೆ. ಬಸವಕಲ್ಯಾಣ: 12ನೇ …

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

Leave a Reply

Your email address will not be published. Required fields are marked *

error: Content is protected !!