Breaking News
Home / featured / ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚೆನ್ನಬಸವಣ್ಣ

ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚೆನ್ನಬಸವಣ್ಣ


ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚೆನ್ನಬಸವಣ್ಣ
Feb 19 Ulavi Channabasavanna Rathostava

ಚನ್ನಬಸವಣ್ಣನವರ ವ್ಯಕ್ತತ್ವದ ಬಗೆಗೆ ಷಟಸಥಲಸಿದ್ಧಾಂತ ಮತ್ತು ಆಚರಣೆಯ ನಿರ್ಣಯದಲ್ಲಿ ಚನ್ನಬಸವಣ್ಣನವರು ವಹಿಸಿದ ಮಹತ್ವಪೂರ್ಣ ಪಾತ್ರವನ್ನು ತಿಳಿಯಲು ಸಾಕಷ್ಟು ಸಾಮಗ್ರಿ ನಮಗೆ ದೊರೆಯುತ್ತದೆ. ಆದರೆ ಅವರ ಜೀವನಚರಿತ್ರೆಯ ಬಗ್ಗೆ ಅವರನ್ನೇ ಕುರಿತು ಬರೆದ ವಿರೂಪಾಕ್ಷಪಂಡಿತನ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ಸಾಂದರ್ಭಿಕವಾಗಿ ಕೆಲವು ವಿವರಗಳು ದೊರೆಯುತ್ತಿವೆಯಾದರೂ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನು, ಭಕ್ತಿ, ಜ್ಞಾನ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಚೆನ್ನಬಸವಣ್ಣನು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನನೆಂದು ಪ್ರಸಿದ್ಧನಾಗಿದ್ದಾನೆ.
ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರಿಗೆ ಪುತ್ರನಾಗಿ ಕ್ರಿ. ಶ. ೧೧೪೪ ರಲ್ಲಿ ಜನಿಸಿದ ಚೆನ್ನಬಸವಣ್ಣ ಅತಿಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷನಾಗಿದ್ದಾನೆ. ಚೆನ್ನಬಸವಣ್ಣ ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನನಾದನು ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕರ್ಯಗಳಲ್ಲಿ ಸಹಯಕನಾದವನು. ಅನುಭವ ಮಂಟಪದ ಎಲ್ಲಾಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮನಿಗೆ ಲಿಂಗಧಾರಣೆ ಮಾಡಿದ ಮಹಾಮಹಿಮಶಾಲಿ. ಈತ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ದಿವ್ಯತ್ವವನ್ನು ಗ್ರಹಿಸಿ ಶಿವಯೋಗ ಶಕ್ತಿಯನ್ನು ಅರಿತ ಅವರು ಆಕೆಯನ್ನು ಹೀಗೆ ಸ್ತುತಿಸಿದ್ದಾರೆ.
ಅಜಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.
ಜನ್ಮಸ್ಥಳ : ಕಲ್ಯಾಣ
ತಂದೆ : ಶಿವಸ್ವಾಮಿ ಅಥವಾ ಶಿವದೇವ
ತಾಯಿ : ಅಕ್ಕನಾಗಮ್ಮ (ಗುರು ಬಸವಣ್ಣನವರ ಸಹೋದರಿ)
ಅಂಕಿತ: ಕೂಡಲಚೆನ್ನಸಂಗಮದೇವ
ಕಾಯಕ: ಆಚಾರ್ಯ ಪುರುಷ, ಮೂರನೇಯ ಶೂನ್ಯ ಪೀಠಾಧ್ಯಕ್ಷ

ಚೆನ್ನಬಸವಣ್ಣ ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿಶಾಸ್ತ್ರಜ್ಞರಾಗಿದ್ದರು, ಶೂನ್ಯಪೀಠದ ಅಧ್ಯಕ್ಷರಾದರು. ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳಿಗೆ ಸರಿಯಾಗಿ ರೂಪಿಸಿದರು. ಅವರು ೧೫೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವರು. ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಮತ್ತು ವಚನ ಸಂಪತ್ತನ್ನು ರಕ್ಷಿಸುವ ಹೊಣೆಹೊತ್ತು ಹೋರಾಡಿದರು. ಕೊನೆಗೆ ಅವರು ಉಳವಿಯಲ್ಲಿ ಲಿಂಗೈಕ್ಯರಾದರು. ಅವರ ವಚನವೊಂದರಲ್ಲಿ ದೇವರ ನಿಲುವನ್ನು ಈ ರೀತಿ ಹೇಳಿದ್ದಾರೆ.
ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.
ಬಸವಣ್ಣವನರ ಸೋದರಿ ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣ ಆದರಿಂದ ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನಾಗುತ್ತಾನೆ. ಚನ್ನಬಸವಣ್ಣನವರ ತಂದೆಯ ಹೆಸರನ್ನು ’ಅಮಲಬಸವ ಚಾರತ್ರ್ಯ’ (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರುಕಡೆ ಅಕ್ಕನಾಗಮ್ಮನ ಪತಿ ನೆಂದು ಬರುತ್ತದೆ.
ಪ್ರಭುದೇವರ ಅನಂತರ ಚನ್ನಬಸವಣ್ಣ ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ. ಕಲ್ಯಾಣದಲ್ಲಿ ನಡೆದ ಕ್ರಾತಿಯಿಂದಾಗಿ ಶರಣ ಶರಣೆಯರೆಲ್ಲ ಬೇರೆ ಬೇರೆ ಕಡೆ ಚದುರಿಹೋಗುತ್ತಾರೆ. ಚನ್ನಬಸವಣ್ಣನವರು ಕ್ರಾಂತಿಯ ಅನಂತರ ಕೆಲವುದಿನ ಕಲ್ಯಾಣದಲ್ಲಿಯೇ ಉಳಿದು ಅಲ್ಲಿದ್ದ ಶರಣರ ಯೋಗಕ್ಷೇಮವನ್ನು ನೋಡಿಕೊಂಡಿರುವ ಸಾಧ್ಯತೆ ಇದೆ. ಆಮೇಲೆ ಪರಿಸ್ಥಿತಿ ಇನ್ನೂ ಉಲ್ಬಣಗೊಂಡಾಗ ಉಳಿದ ಶರಣರ ಜೊತೆಯಲ್ಲಿ ಅವರು ಉಳವಿಯತ್ತ ಪ್ರಯಾಣ ಬೆಳೆಸಿದಂತೆ ಕೆಲವು ಕೃತಿಗಳಿಂದ ತಿಳಿದುಬರುತ್ತದೆ. ಚನ್ನಬಸವಣ್ಣನವರು ಬಯಲಾದುದು ಉಳವಿಯಲ್ಲಿಯೇ ಎಂಬ ನಂಬಿಕೆ ಈಗಲೂ ಅನೇಕ ಜನರಲ್ಲಿ ಬಲವತ್ತರವಾಗಿದೆ.

ಉಳವಿ :
ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದಲ್ಲಿ ಶರಣರು ಅಂತರ್ಜಾತಿ ಮದುವೆ ನಡೆಸಿದಾಗ ಕಲ್ಯಾಣ ಕ್ರಾಂತಿಯಾಗಿ ಬಸವಣ್ಣನವರು ಕೂಡಲ ಸಂಗಮಕ್ಕೆ ಹೋದರು. ಬಸವಣ್ಣನವರ ಅಳಿಯ ಚನ್ನಬಸವಣ್ಣ ,ಅಕ್ಕ ನಾಗಲಾಂಬಿಕೆ ಹಾಗೂ ಇತರ ಶರಣರ ದಂಡು ಕಟ್ಟಿಕೊಂಡು ಸುರಕ್ಷಿತ ಜಾಗ ಹುಡುಕಿ ಹೊರಟರು. ಶರಣರು ರಚಿಸಿದ ವಚನ ಸಾಹಿತ್ಯ ದ ಗಂಟುಗಳು ಈ ಶರಣರ ಹೆಗಲ ಮೇಲಿದ್ದವು. ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ಸುರಕ್ಷಿತವಾಗಿ ತಲುಪಿಸುವ ಉದ್ದೇಶದಿಂದ ಹೊರಟ ಇವರು ತಲುಪಿದ್ದು ದೂರದ ಗೋವಾ ಬಳಿಯ ಕಾಡಿನ ಬೆಟ್ಟದ ಹತ್ತಿರ ಬಂದು ಉಳಿದು ಕೊಂಡರು. ಬಿಜ್ಜಳನ ಸೈನಿಕರ ಜೊತೆ ಹೊಡೆದಾಡುತ್ತಲೇ ಈ ಜಾಗಕ್ಕೆ ಅವರು ಬಂದು ಮುಟ್ಟಿದ್ದರು. ಅಲ್ಲೇ ಲಿಂಗೈಕ್ಯರಾದರು. ಅಲ್ಲಿಯೇ ಚನ್ನಬಸವಣ್ಣನವರ ಸಮಾಧಿ ಯನ್ನು ಕಟ್ಟಲಾಗಿದೆ. ಚನ್ನಬಸವಣ್ಣನ ತಾಯಿ ಮತ್ತು ಬಸವಣ್ಣನ ಸೋದರಿ ಅಕ್ಕ ನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿಗೆ ಹತ್ತಿರದಲ್ಲಿ ಇದೆ. ಶರಣರು ಬಂದು “ಉಳಿ”ದುಕೊಂಡದ್ದರಿಂದ ಈ ಸ್ಥಳವು “ಉಳವಿ” ಅಂತ ಆಯಿತು ಈ ಕ್ಷೇತ್ರವು ಇಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಇಂದು ಅದುವೇ ಪ್ರಖ್ಯಾತ ಚನ್ನಬಸವೇಶ್ವರ ದೇವಾಲಯವಾಗಿದೆ.

ಹರಳಯ್ಯನವರ ಚಿಲುಮೆ:

ಬಿಜ್ಜಳನು ಹರಳಯ್ಯನವರನ್ನು ಅನೆ ಕಾಲಿಗೆ ಕಟ್ಟಿ ಎಳೆಸಿದಾಗ ಅವರು ಲಿಂಗೈಕ್ಕ್ಯರಾಗುತ್ತಾರೆ . ನಂತರ ಬಿಜ್ಜಳನ ಸೈನ್ಯ ಮತ್ತು ಜಾತಿ ವಾದಿಗಳು ವಚನಗಳನ್ನು ನಾಶಪಡಿಸಲು ಮುಂದಾಗುತ್ತಾರೆ. ಶರಣರು ವಚನ ಸಾಹಿತ್ಯದ ರಕ್ಷಣೆಗಾಗಿ ಉಳವಿ ತಲುಪುತ್ತಾರೆ. ಅಲ್ಲಿರುವ ಒಂದು ಚಿಲುಮೆಗೆ ಹುತಾತ್ಮರಾದ ಹರಳಯ್ಯನವರ ಹೆಸರಿಡುತ್ತಾರೆ. ಆ ನೀರಿನ ಚಿಲುಮೆ ಇನ್ನು ಇದೆ, ಅದುವೇ ಹರಳಯ್ಯನವರ ಚಿಲುಮೆ.

ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು
ಕಲ್ಯಾಣದ ಕ್ರಾಂತಿ ಆದಾಗ ವಚನ ಸಾಹಿತ್ಯದ ಉಳಿವಿಗೆ ಹೋರಾಡಿ ಮಾಡಿದವರ ನೆನಪಿಗಾಗಿ ಮಾಡಿದಂಥ ವೀರಗಲ್ಲು. ಉಳವಿಯ ಬಸವಣ್ಣನ ಗುಡಿಯ ಮುಂಬಾಗ ಈಗ ವೀರಗಲ್ಲನ್ನು ಕಾಣಬಹುದು. ವಚನ ಕ್ರಾಂತಿಗೆ ಯುದ್ದದ ಮಾಹಿತಿಗೆ ಮುನ್ನುಡಿಗೆ ಪುಷ್ಟಿ ಮತ್ತು ಆಧಾರ ನೀಡುವಂತಹದು.
ಇಂದು ಇದು ಲಿಂಗಾಯತ ಜನರ ಒಂದು ಪ್ರಮುಖ ಯಾತ್ರಾಸ್ಥಳವಾಗಿದೆ. ಲಿಂಗಾಯತ ಜನರು ಬಹುವಾಗಿ ಗೌರವಿಸುವ ಚನ್ನಬಸವಣ್ಣನವರ ಸಮಾಧಿ ಇಲ್ಲಿ ಇದೆ.
ಉಳುವಿ ಅಣಶಿ ಘಟ್ಟದ ಹಾಗೂ ಸುಪದ ಮೇಲಿಂದ ಇಲ್ಲಿಗೆ ಬರಲು ಎರಡು ಅರಣ್ಯ ಮಾರ್ಗಗಳಿವೆ. ಗವಿಮಠ ಎನ್ನುವ ಸ್ಥಳದಲ್ಲಿ ಕೆಲವು ಹಳೆಯ ಗುಹೆಗಳಿವೆ. ಇವು ಲಿಂಗಾಯತ ಸಾಧಕರು ವಾಸವಾಗಿದ್ದರು ಎನ್ನಲಾಗುತ್ತದೆ. ಇಲ್ಲಿ ಅಕ್ಕನಾಗಮ್ಮ ವಾಸಿಸಿದ ಗವಿ ಇದೆ ಎನ್ನುತ್ತಾರೆ. ೧೨ ನೇ ಶತಮಾನದಲ್ಲಿ ಚನ್ನಬಸವಣ್ಣನವರು ಲಿಂಗೈಕ್ಯ ಆಗುವ ಮೊದಲು ಕಲ್ಯಾಣ ದಿಂದ ಉಳವಿಗೆ ಬಂದರು. ತಾಯಿ ಅಕ್ಕನಾಗಲಾಂಬಿಕೆ ಹೆಸರಿನಲ್ಲಿರುವ ಗುಹೆಯು ಈ ಪವಿತ್ರ ಸಮಾಧಿ ಹತ್ತಿರದಲ್ಲಿ ಇದೆ. ಉಳವಿ ಜಾತ್ರೆಗೆ ಕರ್ನಾಟಕದ ಎಲ್ಲೆಡೆಯಿಂದ ಭಕ್ತರು ಬರುತ್ತಾರೆ.
ಉಳವಿಯು ಪಶ್ಚಿಮ ಘಟ್ಟಗಳಲ್ಲಿ ಇದ್ದು ಇಲ್ಲಿನ ದಟ್ಟ ಕಾಡುಗಳಲ್ಲಿ ಹುಲಿ, ಚಿರತೆ, ಆನೆ, ಸಾರಂಗ, ನಾಗರಹಾವು ಮತ್ತು ಇತರ ವನ್ಯಜೀವಿಗಳಿವೆ.

ಉಳವಿ ಎಂಬ ಉಲ್ಲೇಖ :
ಉಳುವಿ ಶಬ್ದದ ಅರ್ಥ ನಾನು ಇಲ್ಲಿ ಉಳಿಯುವೆ ಎಂದಾಗುತ್ತದೆ. ೧೨ನೆಯ ಶತಮಾನದಲ್ಲಿ ಕಲ್ಯಾಣದ ಕ್ರಾಂತಿಯಾದ ಮೇಲೆ ಲಿಂಗಾಯತರು ಯಲ್ಲಾಪುರ ಮತ್ತು ಗಣೇಶನ ಗುಡಿ ರಸ್ತೆಯಿಂದ ಉಳುವಿಯನ್ನು ಪ್ರವೇಶಿಸಿದರು. ಆಗ ಇದನ್ನು ವೃಶಾಪುರ ಎನ್ನಲಾಗುತ್ತಿತ್ತು. ವಲಸೆ ಬಂದ ಶರಣರ ಮಾರ್ಗದರ್ಶಿಗಳಾಗಿ ಚೆನ್ನಬಸವಣ್ಣ, ಅಕ್ಕನಾಗಮ್ಮ ಮುಂತಾದ ಇನ್ನೂ ಅನೇಕ ಶರಣರೂ ವಚನಕಾರರೂ ಇಲ್ಲಿಗೆ ಬಂದರು. ಇಲ್ಲಿಯೇ ಲಿಂಗಾಯತ ಧರ್ಮದ ಭವಿಷ್ಯತ್ತಿನ ಬಗ್ಗೆ ಯೋಜನೆಗಳನ್ನು ರೂಪಿಸಿ ಧರ್ಮಪ್ರಚಾರ ಕೈಕೊಳ್ಳಲಾಯಿತು. ಚೆನ್ನಬಸವಣ್ಣನವರು ಇಲ್ಲಿ ಲಿಂಗೈಕ್ಯರಾದರು.

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

‘ಶರಣಾರ್ಥಿ’ ಗುರು ಪ್ರವೇಶ..!

  ಗಜೇಂದ್ರಗಡದ ಶರಣದಂಪತಿಗಳು ನೂತನ ಮನೆಗೆ ‘ಶರಣಾರ್ಥಿ’ ಎಂದು ವಿಶಿಷ್ಟ ರೀತಿಯಲ್ಲಿ ಮನೆ ನಾಮಕರಣ ಮಾಡಿ ಗುರುಪ್ರವೇಶ, ಅನುಭಾವ ಹಾಗೂ …

Leave a Reply

Your email address will not be published. Required fields are marked *

error: Content is protected !!