Breaking News
Home / General News / ‘ಜಾನಪದ ರತ್ನ’ ಸಿಂಪಿ ಲಿಂಗಣ್ಣನವರು

‘ಜಾನಪದ ರತ್ನ’ ಸಿಂಪಿ ಲಿಂಗಣ್ಣನವರು

ಸಿಂಪಿ ಲಿಂಗಣ್ಣ

ಲೇಖನ : ಮಹೇಶ ಚನ್ನಂಗಿ KES
ಚನ್ನಮ್ಮನ ಕಿತ್ತೂರ,

ಸಿಂಪಿ ಲಿಂಗಣ್ಣನವರು ‘ಜಾನಪದ ರತ್ನ’ರೆಂದು ಖ್ಯಾತರಾದವರು. ಅವರು ಜನಿಸಿದ್ದು ಫೆಬ್ರವರಿ 10, 1905ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ ಸೀರೆ ನೇಯ್ದು ಮಾರುವ ಕೆಲಸ ಕೈಗೊಂಡರೆ, ಲಿಂಗಣ್ಣ ಬಿಡುವಿನ ವೇಳೆಯಲ್ಲಿ ಉಪ್ಪು ಮಾರಿ ಸ್ವತಃ ಅಡುಗೆ ಮಾಡಿಕೊಂಡು ಜೀವನ ಸಾಗಿಸುವ ಬದುಕು ಮೂಡಿತ್ತು. ನಂತರ ಅಣ್ಣ ಈರಣ್ಣ, ‘ಗುರಮ್ಮ’ ಎಂಬಾಕೆಯನ್ನು ಮದುವೆಯಾದಾಗ ಲಿಂಗಣ್ಣನವರಿಗೆ ಅಡುಗೆ ತಾಪತ್ರಯದಿಂದ ವಿಮುಕ್ತಿ ದೊರೆಯಿತು. ಈ ಅತ್ತಿಗೆ ‘ಗುರಮ್ಮ’ ಹೇಳುತ್ತಿದ್ದ ಗರತಿ ಹಾಡುಗಳು ಲಿಂಗಣ್ಣನವರಿಗೆ ಜನಪದ ಸಾಹಿತ್ಯದ ಹುಚ್ಚು ಹಿಡಿಸಿತು. ಸಿಂಪಿ ಲಿಂಗಣ್ಣನವರ ಮಕ್ಕಳಲ್ಲಿ ವೀರೇಂದ್ರ, ಸಿಂಪಿ, ಈಶ್ವರ ಸಿಂಪಿ ಹಾಗೂ ಭುವನೇಶ್ವರಿ ಅವರು ಕೂಡಾ ಸಾಹಿತ್ಯಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಚಿಕ್ಕಂದಿನಲ್ಲೇ ಲಿಂಗಣ್ಣನವರ ಮನೆಯಲ್ಲಿ ಬಾಡಿಗೆಗಿದ್ದ ಶ್ರೀಮಧುರಚೆನ್ನರು ಲಿಂಗಣ್ಣನವರಿಗೆ ಪರಮಾಪ್ತರಾದರು. 1922ರಲ್ಲಿ ಲಿಂಗಣ್ಣ ಮುಲ್ಕೀ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಪಾಸಾದರೂ ಮುಂದೆ ಓದಲು ಹಣವಿಲ್ಲದೆ, ಅಣ್ಣನ ಜೊತೆಯಲ್ಲಿ ಸೀರೆ ನೇಯುವ ಕಾಯಕಕ್ಕೆ ತೊಡಗಿದರು. ಓದುವ ಹವ್ಯಾಸ ಬತ್ತಲಿಲ್ಲ. ಗೆಳೆಯರ ಜೊತೆ ಸೇರಿ ‘ವಾಗ್ವಿಲಾಸ’ ಎಂಬ ವಾಚನಾಲಯ ತೆರೆದರು. ಊರಿನ ಜನರಿಂದ 800 ಗ್ರಂಥಗಳನ್ನು ಸಂಗ್ರಹಿಸಿ ಜನರಿಗೆ ಓದುವ ಹವ್ಯಾಸ ಹಚ್ಚಿದರು. ಹಲಸಂಗಿ ಮಲ್ಲಪ್ಪ ಮತ್ತು ಸಿಂಪಿ ಲಿಂಗಣ್ಣ ಜೊತೆಗೂಡಿ ‘ಹಲಸಂಗಿ’ ಗೆಳೆಯರ ಬಳಗ ನಿರ್ಮಿಸಿದರು. ಮುಂದೆ ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆಯಲು ಧಾರವಾಡಕ್ಕೆ ಹೋದಾಗ ಶಂಭಾ, ಬೇಂದ್ರೆ, ಆಲೂರರ ಪರಿಚಯ ಮಾಡಿಕೊಂಡರು.

ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿದರು. ಸದಾ ಚಿಂತನಶೀಲರು, ಕ್ರಿಯಾಶೀಲ ವ್ಯಕ್ತಿತ್ವ. ವೈಚಾರಿಕ ಮನೋಧರ್ಮದವರು. ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಹೊಂದಿಕೊಂಡು ಮಕ್ಕಳಿಗೆ ಜ್ಞಾನ ನೀಡಿದರು. ಶಾಲೆಗಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು. ‘ಕಮತಿಗ’ ವಾರಪತ್ರಿಕೆ ಹೊರಡಿಸಿ ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿದರು. ರಾಷ್ತ್ರೀಯ ಲಾವಣಿ ರಚಿಸಿ, ಹಾಡಿಸಿ, ಸ್ವಾತಂತ್ರ ಚಳುವಳಿಗೆ ಕುಮ್ಮಕ್ಕು ನೀಡಿದರೆಂದು ಬೇರೆ ಊರಿಗೆ ವರ್ಗವಾದರು. ಅಸ್ಪೃಶ್ಯತೆಯನ್ನು ಎತ್ತಿ ತೋರಿಸುವ ‘ಮರೆ ಮುಚ್ಚಕ’ ನಾಟಕ ರಚಿಸಿ, ಆಡಿಸಿ, ಸಮಾಜದ ಬಹಿಷ್ಕಾರಕ್ಕೆ ಒಳಗಾದರು. ಯಾವ ಊರಿಗೆ ವರ್ಗವಾಗಿ ಹೋದರೂ ಸಿಂಪಿ ಲಿಂಗಣ್ಣನವರು ತಮ್ಮ ಕೆಲಸವನ್ನು ನಿಲ್ಲಿಸಿದವರಲ್ಲ. ಓದುವುದು ಓದಿಸುವುದು, ಬರೆಯುವುದು, ಆಡಿಸುವುದು, ಅವರ ನಿತ್ಯಕರ್ಮದಲ್ಲಿ ಒಂದಾಗಿತ್ತು. ಶುಭ್ರ ಖಾದಿಧೋತರ, ಖಾದಿಶರ್ಟು, ಮೇಲೊಂದು ಕೋಟು, ತಲೆಯಮೇಲೆ ಗಾಂಧೀ ಟೋಪಿ ಇವು ಅವರ ಪರಿಶುದ್ಧಜೀವನವನ್ನೇ ಪ್ರತಿಬಿಂಬಿಸುತ್ತಿದ್ದವು.

ಬಾಲ್ಯದ ಗೆಳೆಯರಾದ ಶ್ರೀಮಧುರಚೆನ್ನರ ಒಡನಾಟದಿಂದ ಸಿಂಪಿ ಲಿಂಗಣ್ಣನವರಲ್ಲಿಯೂ ಅಧ್ಯಾತ್ಮದ ಒಲವು ಮೂಡಿತು. ಆಧ್ಯಾತ್ಮದಲ್ಲಿ ಸಿಂಪಿಯವರು ತಮ್ಮ ಒಡನಾಡಿ ಗೆಳೆಯರಾದ ಶ್ರೀ ಮಧುರ ಚೆನ್ನರಿಂದ ಪ್ರೇರಿತರಾಗಿ ಶ್ರೀ ಅರವಿಂದರ ಆಶ್ರಮಕ್ಕೆ ಸಂದರ್ಶನವಿತ್ತು ‘ಪೂರ್ಣಯೋಗ’ ಪಥದಲ್ಲಿ ಸಾಮರಸ್ಯ ಪಡೆದರು. ಶ್ರೀ ಮಾತ ಅರವಿಂದರ ಪರಮಭಕ್ತರಾಗಿ ದಿವ್ಯಜೀವನ ಸಾಗಿಸಿದರು.

ಚಿಕ್ಕಂದಿನಿಂದಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಲಿಂಗಣ್ಣನವರು 1922ರಲ್ಲಿ ‘ಸಾವಿನ ಸಮಸ್ಯೆ’ ಎಂಬ ಏಕಾಂಕ ನಾಟಕ ಬರೆದು ಸಾಹಿತ್ಯಕ್ಷೇತ್ರವನ್ನು ಪ್ರವೇಶಿಸಿದರು. ಜನಪದ ಸಾಹಿತ್ಯ, ಕಾವ್ಯ, ಪ್ರಬಂಧಗಳು, ಜೀವನ ಚರಿತ್ರೆ, ಸಣ್ಣಕಥೆ, ಕಾದಂಬರಿ, ಏಕಾಂಕ ನಾಟಕ, ಮಕ್ಕಳ ಹಾಗೂ ನವ್ಯ ಸಾಕ್ಷರ ಸಾಹಿತ್ಯ, ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯ ಹೀಗೆ ವಿಭಿನ್ನ ನೆಲೆಗಳ ಸಾಹಿತ್ಯದಲ್ಲಿ ಒಂದು ನೂರಕ್ಕೂ ಹೆಚ್ಚಿನ ಕೃತಿಗಳನ್ನು ಲಿಂಗಣ್ಣನವರು ನೀಡಿದ್ದಾರೆ. ಸಿಂಪಿಯವರು ಹಳ್ಳಿಯ ಬಾಳಿನ ಮುತ್ತುರತ್ನಗಳಿಂದ ಜನಪದ ಸಾಹಿತ್ಯದ ಹಾಡು, ಕಥೆ, ಗಾದೆ, ಒಗಟು, ನುಡಿಗಟ್ಟುಗಳನ್ನೂ ಅಪಾರವಾಗಿ ಸಂಗ್ರಹಿಸಿ, ಸಂಪಾದಿಸಿ ಕೊಟ್ಟುದಲ್ಲದೆ, ಆಯಾ ಸಂಗ್ರಹಗಳಿಗೆ ವಿಚಾರಾತ್ಮಕ, ವಿಶ್ಲೇಷಣಾತ್ಮಕ ಪ್ರಸ್ತಾವನೆಗಳನ್ನು ಬರೆದಿರುವರಲ್ಲದೆ ಅನೇಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಅವರು ಬರೆದ ಗದ್ಯ ಕೃತಿಗಳು ಆಧುನಿಕ ಗದ್ಯ ಸಾಹಿತ್ಯದಲ್ಲಿ ಮಹತ್ವದ್ದಾಗಿವೆ.

ಲಿಂಗಣ್ಣನವರ ಅತ್ತಿಗೆ ಗುರುಬಾಯಿ ಜನಪದ ತವನಿಧಿ ಆಗಿದ್ದರು. ಅವರು ಹೇಳುವ
“ಕರಿಯಂಗಿ ಕಸೂತಿ
ತಲೆ ತುಂಬಾ ಜಾವುಳ
ಅಂಗಳದಾಗ ನವಿಲಾಟ
ಲಿಂಗಯ್ಯನಾಟ ವಿಪರೀತ”

ಎನ್ನುವ ಹಾಡು ಅವರಲ್ಲಿ ಚಿಕ್ಕಂದಿನಿಂದಲೇ ಜನಪದ ಸಾಹಿತ್ಯದ ಬೀಜ ನೆಟ್ಟಿತು. ಮನೆಯ ತಂದೆ, ತಾಯಿ, ಅಣ್ಣ, ಅತ್ತಿಗೆ ಅವರ ಜನಪದ ಪ್ರತಿಭೆಯ ಜೊತೆಗೆ ಊರಿನಲ್ಲಿ ನಡೆಯುತ್ತಿದ್ದ ಜನಪದ, ಕೋಲಾಟದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಲಿಂಗಣ್ಣನವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹಲಸಂಗಿ ಗೆಳೆಯರಾದ ಶ್ರೀ ಮಧುರಚೆನ್ನ, ಕಾಪಸೆ ಸೀನಪ್ಪ, ಪಿ. ಧೂಲಾ ಅವರೊಂದಿಗೆ ಸೇರಿ ರಚಿಸಿದ ಜನಪದ ಸಾಹಿತ್ಯದ ಪ್ರಮುಖ ಮಾರ್ಗದರ್ಶಿ ಸಂಗ್ರಹಗಳಾದ ‘ಗರತಿ ಹಾಡು’, ‘ಜೀವನ ಸಂಗೀತ’, “ಮಲ್ಲಿಗೆ ದಂಡೆ’, ಮುಂತಾದ ಗ್ರಂಥಗಳು ಅವರಿಗೆ ಜನಪ್ರಿಯತೆಯನ್ನು ತಂದುದಲ್ಲದೆ ನಾಡಿನ ವಿದ್ವಾಂಸರಿಂದ ಪ್ರಶಂಸೆಗೆ ಪಾತ್ರವಾಯಿತು. ‘ಗರತಿಯ ಹಾಡು’, ‘ಜೀವನ ಸಂಗೀತ’ ಸಂಗ್ರಹಗಳು ಇಂದಿಗೂ ಕಾವ್ಯದ ದೃಷ್ಟಿಯಿಂದ ಅದ್ವಿತೀಯ ಸಂಗ್ರಹಗಳೆಂದು ಆಧುನಿಕ ಸಾಹಿತ್ಯದ ಪ್ರಸಿದ್ಧ ವಿಮರ್ಶಕರಾದ ಗಿರಡ್ಡಿ ಗೋವಿಂದರಾಜರು ಅಭಿಪ್ರಾಯ ಪಟ್ಟಿದ್ದಾರೆ.

ಲಿಂಗಣ್ಣನವರು ರಚಿಸಿದ ಉತ್ತರ ಕರ್ನಾಟಕದ ಜನಪದ ಕತೆಗಳು ಎಂಬ ಗ್ರಂಥದಲ್ಲಿ ಸುಮಾರು 73 ಕಥೆಗಳನ್ನು ಸಂಗ್ರಹಿಸಿ ಅವುಗಳನ್ನು ಶಾಸ್ತ್ರೀಯವಾಗಿ ಎಂಟು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ. ಅವರ ‘ಜನಪದ ಜೀವಾಳ’ ಎಂಬ ಮೌಲಿಕ ಗ್ರಂಥವು ಜನಪದ ಸಾಹಿತ್ಯದ ಅಧ್ಯಯನಕ್ಕೆ ಅಡಿಗಲ್ಲಾಗಿದೆ. “ಜನಪದ ಸತ್ವದಿಂದ ಪರಿಪುಷ್ಟವಾದ ಸಿಂಪಿಯವರ ಪರಿಪಕ್ವ ಭಾವಕೋಶದ ಅಭಿವ್ಯಕ್ತಿಯನ್ನೇ ಇಲ್ಲಿ ಕಾಣಬಹುದು” ಎಂದು ಖ್ಯಾತ ಕವಿ ಚೆನ್ನವೀರ ಕಣವಿಯವರು ಹೇಳಿದ್ದಾರೆ.

ಉತ್ತರ ಕರ್ನಾಟಕದ ವೈವಿಧ್ಯಮಯ ಹಾಡುಗಳನ್ನು ಪರಿಚಯಿಸುವುದು ‘ಉತ್ತರ ಕರ್ನಾಟಕದ ಜನಪದ ಗೀತೆಗಳು’ ಎಂಬ ಗ್ರಂಥವಾದರೆ, ‘ಅಯ್ದಕಥೆ’ ದೃಷ್ಟಾಂತ ಕಥೆಗಳ ಸ್ವಾರಸ್ಯವನ್ನು ಸ್ವಲ್ಪದರಲ್ಲೇ ತಿಳಿಸುವುದು. ‘ಕಿರಿದರೊಳೆ ಪಿರಿದರ್ಥದ ಚಲಕ” ಎಂಬುದು ಉಪನ್ಯಾಸ ಗ್ರಂಥ. ಉತ್ತರ ಕರ್ನಾಟಕದ ಪ್ರಸಿದ್ಧ ಲಾವಣಿಗಳ ಸಂಗ್ರಹವಾದ ‘ಲಾವಣಿಗಳು’ ಎಂಬ ಗ್ರಂಥದಲ್ಲಿ ಲಾವಣಿಗಳ ಹುಟ್ಟು, ಸ್ವರೂಪ ಬೆಳವಣಿಗೆಯನ್ನು ಕುರಿತು ಲಿಂಗಣ್ಣನವರು ವಿವೇಚಿಸಿದ್ದಾರೆ.

ಜನಪದ ಸಾಹಿತ್ಯ ಸಂಸ್ಕೃತಿಯನ್ನು ಕುರಿತು ಪ್ರಬುದ್ಧ ಪ್ರಬಂಧಗಳ ಸಂಕಲನ ‘ಹೆಡೆಗೆ ಜಾತ್ರೆ’ಯಾದರೆ, ಹೆಣ್ಣು, ಮಗಳು, ಸೊಸೆ, ಸತಿ, ತಾಯಿಯಾಗುವ ಗರತಿಯ ನಾಲ್ಕು ಅವತಾರಗಳನ್ನು ಹಾಡಿನ ಮೂಲಕ ವ್ಯಾಖ್ಯಾನಿಸಿರುವ ಗ್ರಂಥ ‘ಗರತಿಯ ಬಾಳ ಸಂಹಿತೆ’. ಗಾದೆಗಳ ಮೂಲ ಸ್ವರೂಪ, ಅರ್ಥವ್ಯಾಪ್ತಿ ಅವುಗಳಲ್ಲಿರುವ ಕಾವ್ಯಾಂಶ ಮತ್ತು ಪ್ರಭಾವ ಕುರಿತು ವಿಶ್ಲೇಷಿಸಿರುವ ‘ಗಾದೆಗಳ ಗಾರುಡಿ’ ಗ್ರಂಥದ ಲಿಂಗಣ್ಣನವರ ಈ ಸಾಧನೆಗಾಗಿ ‘ಗಾದೆಯ ವೇದವನ್ನು ಕ್ರೋಢೀಕರಿಸಿದ ಇಂದಿನ ವೆದವ್ಯಾಸರೆಂದು’ ಶ್ರೀ ಎನ್ಕೆ ಅವರು ಲಿಂಗಣ್ಣನವರನ್ನು ಕೊಂಡಾಡಿದ್ದಾರೆ. ಸಿಂಪಿ ಲಿಂಗಣ್ಣನವರು 100ಕೃತಿಗಳನ್ನು ರಚಿಸಿದರೂ ಅವರ ಜನಪದ ಕೃತಿಗಳು ಚಿರಂತನವಾದವು. ಹಳ್ಳಿಯ ಬಾಳಿನಲ್ಲಿ ಬೆರೆತು ಜನಜೀವನದ ಮಾತುಕತೆ ಸಂಗ್ರಹಿಸಿ ಸಂಪಾದಿಸಿ ವಿಮರ್ಶಿಸಿ ಬದುಕಿದ ಲಿಂಗಣ್ಣನವರು “ಜಾನಪದ ಸಂಗಮ ವಿಶ್ವವಿದ್ಯಾಲಯವೇ” ಆಗಿದ್ದರು.

ಕನ್ನಡ ಸಾಹಿತ್ಯದ ನವೋದಯದ ಸಂದರ್ಭದಲ್ಲಿ ಸಿಂಪಿ ಲಿಂಗಣ್ಣನವರು ಕವಿತೆಗಳನ್ನು ಬರೆದರು. 1936ರಲ್ಲಿಯೇ ಅವರು ಹಿಂದಿಯ ಪ್ರಸಿದ್ಧ ರಾಮನರೇಶ ತ್ರಿಪಾಠಿಯವರು ಬರೆದ ‘ಮಿಲನ’ ಎಂಬ ಖಂಡಕಾವ್ಯವನ್ನು ಪ್ರಥಮವಾಗಿ ಕನ್ನಡಕ್ಕೆ ಅನುವಾದಿಸಿದರು. ಅರವಿಂದರ ಅನುಯಾಯಿಗಳಾದ ಹತ್ತು ವರ್ಷಗಳ ನಂತರ ಅಧ್ಯಾತ್ಮದ ಅನುಭಾವ ಗೀತವಾದ 62 ಕವನಗಳಿಂದ ಕೂಡಿದ ‘ಮುಗಿಲ ಜೇನು’ ಎಂಬ ಹೊಸ ಸಂಕಲನವನ್ನು ನೀಡಿದರು. ಬಸವಣ್ಣನವರ ಜೀವನ ಹಾಗೂ ಸಾಧನೆಗಳನ್ನು ಕುರಿತ 63ಕವನಗಳ ಸಂಗ್ರಹ ‘ಶ್ರುತಾಶ್ರುತ’.

ಲಿಂಗಣ್ಣನವರು ಪ್ರಸಿದ್ಧ ಪ್ರಬಂಧಕಾರರೂ ಆಗಿದ್ದರು. ಭಾರತದ ಇತಿಹಾಸ, ಸಂಸ್ಕೃತಿ, ವೈಚಾರಿಕ ನಿಲುವುಗಳು, ಕನ್ನಡ ಭಾಷೆ ಮತ್ತು ಸಂಸ್ಕೃತಿ, ಹಳ್ಳಿಯ ಜೀವನ ಮತ್ತು ಸಂಸ್ಕೃತಿ ಕುರಿತಾದ ಮಹತ್ವದ ಪ್ರಬಂಧಗಳನ್ನು ಸಿಂಪಿ ಲಿಂಗಣ್ಣನವರು ರಚಿಸಿದ್ದಾರೆ.

ಬಹುಮುಖ ವ್ಯಕ್ತಿತ್ವದ ಸಿಂಪಿ ಲಿಂಗಣ್ಣನವರು ಅನೇಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಶ್ರೀಮಧುರ ಚೆನ್ನ, ಬೇಂದ್ರೆ, ಬಸವಣ್ಣ, ರಾಮಕೃಷ್ಣ ಪರಮಹಂಸ, ರಬೀಂದ್ರನಾಥ ಠಾಕೂರ್, ರಾಮತೀರ್ಥ, ಶ್ರೀಮಾತೆ, ಶ್ರೀ ಅರವಿಂದರು, ಇವುಗಳಲ್ಲಿ ಪ್ರಮುಖವಾಗಿವೆ. ‘ಮೂವತ್ತೈದು ವರ್ಷ’, ‘ಕನ್ನಡದ ಕುಲದೀಪ ಬಸವಣ್ಣನವರ ಜೀವನ’, ‘ಪ್ರಿಯದರ್ಶಿ ಅಶೋಕ’ , ‘ಶ್ರೀ ಮಧುರಚೆನ್ನರ ಸ್ಮೃತಿಗಳು – ಅವರ ಜೀವನ ಮತ್ತು ಕಾರ್ಯ’, ‘ವಿಶ್ವಕವಿ’, ‘ಸಿಡಿಲು ಸನ್ಯಾಸಿ’, ‘ಮಹತ್ಕ್ರಾಂತಿಯ-ಮಹಾಮನು’ ಮುಂತಾದ ಕೃತಿಗಳು ಕನ್ನಡ ಸಾಹಿತ್ಯದ ಜೀವನ ಚರಿತ್ರೆಗಳಲ್ಲಿ ಮೈಲಿಗಲ್ಲಾಗಿವೆ.

ಸಿಂಪಿ ಲಿಂಗಣ್ಣನವರ ಕಥಾಸಂಕಲನಗಳು ‘ಕಣ್ಮಸಕು’ ಮತ್ತು ‘ಮಧುವನ’. ಟಾಲ್ಸ್ ಟಾಯ್ ಅವರ ಏಳು ಕತೆಗಳನ್ನು ಹಿಂದಿಗೆ ಭಾಷಾಂತರಿಸಿದ ಪ್ರೇಮಚಂದರ ಕೃತಿಯನ್ನು ಸಿಂಪಿ ಲಿಂಗಣ್ಣನವರು ‘ಪವಿತ್ರ ಜೀವನ’ ಎಂಬ ಹೆಸರಿಟ್ಟು ಕನ್ನಡದ ಅನುವಾದವಾಗಿ ಪ್ರಕಟಿಸಿದರು. ಅರವಿಂದಾಶ್ರಮದ ಶ್ರೀ ಮಾತೆಮಹಾಮಾತೆಯವರ ಜೀವನ ಸಂದೇಶ ವಿವರಿಸುವ ‘ಸುಂದರ ಕತೆಗಳು’ ಎಂದಾಗಿಯೂ, ಸಿದ್ಧೇಶ್ವರ ಸ್ವಾಮಿಗಳ ಪ್ರವಚನದಲ್ಲಿ ಮೂಡಿಬಂದ ಕಥಾನಕಗಳನ್ನು ‘ಡಾಳಿಸಿದ ದೀಪ’ ಎಂಬ ಕಥಾ ಸಂಕಲನವನ್ನಾಗಿಯೂ ಹಾಗೂ ಉತ್ತರ ಕರ್ನಾಟಕದ ಹಿಂದಿನ ತಲೆಮಾರಿನ ಜನರ ರೀತಿ-ನೀತಿ ಕುರಿತು ಮನೋಜ್ಯ್ನವಾಗಿ ಬರೆದ ಕತೆಗಳ ಸಂಕಲನವನ್ನು ‘ಸತ್ಯಕತೆಗಳು’ ಎಂದಾಗಿಯೂ ಲಿಂಗಣ್ಣನವರು ಪ್ರಕಟಿಸಿದರು.

ಸಿಂಪಿ ಲಿಂಗಣ್ಣನವರು ಬರೆದದ್ದು ಒಂದೇ ಕಾದಂಬರಿ. ಅದು ‘ಬೆಟ್ಟದ ಹೊಳೆ’. ಹಳ್ಳಿಯ ಬಡಯುವಕನೊಬ್ಬ ಕಷ್ಟ ಅನುಭವಿಸಿ ಶಿಕ್ಷಕನಾಗಿ ಆದರ್ಶವ್ಯಕ್ತಿ ಹಾಗೂ ಸಾಹಿತಿಯಾಗಿ, ಅನುರೂಪಳಾದ ಹೆಂಡತಿ ಪಡೆದು ಸುಖ ಸಂಸಾರಿಯಾದುದನ್ನೇ ಚಿತ್ರಿಸುತ್ತದೆ. ಒಂದು ರೀತಿಯಲ್ಲಿ ಇಂದು ಸಿಂಪಿ ಲಿಂಗಣ್ಣನವರ ಆತ್ಮ ಚರಿತ್ರೆಯೇ ಆಗಿದೆ. ಹಲವು ಏಕಾಂಕ ನಾಟಕಗಳು, ಮಕ್ಕಳಿಗಾಗಿ ಹಲವಾರು ಕಥೆಗಳು, ರಾಮತೀರ್ಥರ ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯದಲ್ಲಿ ಹನ್ನೆರಡು ಕೃತಿಗಳು ಇವೆಲ್ಲ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗಗಳಾಗಿವೆ.

ಹೀಗೆ ಡಾ. ಸಿಂಪಿ ಲಿಂಗಣ್ಣನವರು ಕನ್ನಡ ನಾಡಿನ ಹಿರಿಯ ಜಾನಪದ ವಿದ್ವಾಂಸರಾಗಿ, ಕಥೆಗಾರರಾಗಿ, ಭಾಷಣಕಾರರಾಗಿ, ಪ್ರಕಾಶಕರಾಗಿ ಮತ್ತು ಅಧ್ಯಾತ್ಮಿಕವಾದಿಗಳಾಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದಂತೆ, ಕನ್ನಡಿಗರ ಮನವನ್ನೂ ಗೆದ್ದರು. ಅವರು ಬಿಸಿಲನಾಡಿನ ಅನುಭವಗಳನ್ನು ಕುರಿತು ವೈವಿಧ್ಯಮಯವಾದ ಲೇಖನಗಳನ್ನು ಬರೆದು ‘ಬಯಲನಾಡಿನ ಭೈರವರಾಗಿದ್ದಾರೆ’.

ಸಿಂಪಿ ಲಿಂಗಣ್ಣನವರಿಗೆ ಭಾರತ ಸರ್ಕಾರದ ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಅಕಾಡೆಮಿ ಪ್ರಶಸ್ತಿ, ವಿಶ್ವವಿದ್ಯಾಲಯದ ಗೌರವ ಡಿಲಿಟ್, ಜಾನಪದ ಆಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ಹೀಗೆ ಹಲವಾರು ಗೌರವಗಳು ಸಂದಿವೆ.

ಹಳ್ಳಿಯಲ್ಲಿ ಹುಟ್ಟಿ ಹಳ್ಳಿಯಲ್ಲಿ ಬೆಳೆದು ಶಿಕ್ಷಕನಾಗಿ, ಸಾಹಿತಿಯಾಗಿ, ಯಾವ ಬಲವಿಲ್ಲದೆ ಸ್ವಪ್ರಯತ್ನದಿಂದ, ಗೆಳೆಯರೊಡನೆ ಪ್ರೀತಿಯಿಂದ ಕೂಡಿ ಹಲವು ಕಾರ್ಯಗಳನ್ನು ನಾಡಿನ ಜನಮೆಚ್ಚುವಂತೆ ಮಾಡಿ, ಸಾಹಿತ್ಯದಲ್ಲಿ ಸಿದ್ದಹಸ್ತರಾದಂತೆ ಅಧ್ಯಾತ್ಮದಲ್ಲಿಯೂ ಸಿದ್ಧಿಯನ್ನು ಪಡೆದ ಮೇರುಸದೃಶ ವ್ಯಕ್ತಿತ್ವದ ಸಿಂಪಿ ಲಿಂಗಣ್ಣನವರು ಮೇ 5, 1993ರಂದು ತಮ್ಮ ಅಪಾರ ಗೆಳಯರು, ಅಭಿಮಾನಿಗಳನ್ನು ಬಿಟ್ಟು ಅಗಲಿದರು. ಈ ಮಹಾನ್ ವ್ಯಕ್ತಿತ್ವಕ್ಕೆ ಗೌರವ ಭಾವದಿಂದ ನಮಿಸೋಣ.

ಸುಗಯ್ಯ ಹಿರೇಮಠರ ಸಿಂಪಿ ಲಿಂಗಣ್ಣನವರ ಕುರಿತ ಬರಹ ಈ ಲೇಖನದ ಆಧಾರಿತ

About Shivanand

Admin : Lingayat Kranti Monthly news paper 8884000008 lingayatkranti@gmail.com

Check Also

ನ. 22 ರಂದು ಡಾ. ಹೆಚ್.ಆರ್.ಗಿರಿಯಾಲ ಅವರಿಗೆ ನುಡಿನಮನ

ಚನ್ನಮ್ಮನ ಕಿತ್ತೂರು: ಸಮೀಪದ ಬೈಲೂರು ಗ್ರಾಮದ ಖ್ಯಾತ ವೈದ್ಯ ಡಾ ಹಣಮಂತ ಆರ್ ಗಿರಿಯಾಲ ಅವರು ಕಳೆದ ಸೆಪ್ಟೆಂಬರ್ 30 …

ಲಿಂಗಾಯತ ಧರ್ಮದ ಹೋರಾಟ ಸರಣಿ-2

  ಲಿಂಗಾಯತ ಧರ್ಮದ ಮಠಾಧೀಶರ ನಿಯೋಗ ಮುಖ್ಯಮಂತ್ರಿಗೆ ಭೇಟಿ ಮಾಡಬಾರದೇಕೆ? ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿ ಸ್ಥಾನ ವಹಿಸಿ ಅತ್ಯಂತ …

ಸಾಮಾಜಿಕ ಪ್ರಾತಿನಿಧ್ಯತೆ : ಬಿ.ಜೆ ಪಾಟೀಲ

  ವಿಜಯಪುರ : ಸಮಸಮಾಜ ಕಟ್ಟಲು, ಸಂವಿಧಾನದಲ್ಲಿ ಮೂಲಭೂತ ಹಕ್ಕಗಳ ಬಗ್ಗೆ ಮಾತನಾಡುವಾಗ ಮೂರೂ ಬಿಂದುಗಳು ( Article 15, …

ಲಿಂಗಾಯತ–ವೀರಶೈವರಿಗೆ ಶೇ 16 ಮೀಸಲಾತಿ ನೀಡಿ: ಶಿವಮೂರ್ತಿ ಮುರುಘಾ ಶರಣರು

  ಚಿತ್ರದುರ್ಗ: ಜಾತಿ, ಉಪಜಾತಿಗೆ ಒಂದೊಂದು ವಿಧವಾದ ಮೀಸಲಾತಿ ನೀಡುವ ಬದಲು ಲಿಂಗಾಯತ–ವೀರಶೈವ ಸಮುದಾಯಕ್ಕೆ ಶೇ 16ರಷ್ಟು ಮೀಸಲಾತಿಯ ನಿಗದಿಪಡಿಸುವುದು …

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಡಾ. ತೋಂಟದ ಸಿದ್ಧರಾಮ ಶ್ರೀಗಳ ಆಕ್ಷೇಪ

  ಗದಗ: ಸರ್ಕಾರ ತರಾತುರಿಯಲ್ಲಿ ಲಿಂಗಾಯತ ವೀರಶೈವ ಅಭಿವೃದ್ಧಿ ನಿಗಮ ಘೋಷಿಸಿದ್ದು, ಇದಕ್ಕೆ ಯಾವುದೇ ಗೊತ್ತು ಗುರಿಯಾಗಲಿ, ಸ್ಪಷ್ಟತೆಯಾಗಲಿ ಇಲ್ಲ …

Leave a Reply

Your email address will not be published. Required fields are marked *

error: Content is protected !!