ವರ್ಣಾಶ್ರಮ ಜಾತಿ-ಧರ್ಮಗಳ ಆಧರಿತ ರಾಜಕಾರಣದಿಂದ ದೇಶ ವಿನಾಶದ ಹಂತ ತಲುಪುತ್ತಿದೆ.
ನಿಜಗುಣಾನಂದ ಶ್ರೀಗಳಿಂದ ಕಳವಳ ವ್ಯಕ್ತ.
ಚನ್ನಮ್ಮನ ಕಿತ್ತೂರು :
ಭಾರತ ದೇಶ ವರ್ಣಾಶ್ರಮ ಪದ್ಧತಿಯಲ್ಲಿ ಜಾತಿ ಆಧರಿತ ರಾಜಕಾರಣದ ಈ ದಿನಗಳಲ್ಲಿ ದೇಶವನ್ನು ಗಂಡಾಂತರದಿಂದ ಪಾರು ಮಾಡುವ ಮಹತ್ತರ ಹೊಣೆ ಯುವ ಜನಾಂಗದ ಮೇಲಿದೆ ಎಂದು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಗಳು ಮಾತನಾಡಿದರು.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ನಲ್ಲಿ ಸತೀಶಣ್ಣಾ ಗ್ರೂಪ್ಸ್ ನ ಸಂಸ್ಥಾಪಕ ಅಧ್ಯಕ್ಷ ಹಬೀಬ ಶಿಲ್ಲೇದಾರ ಅವರು ನಿರ್ಮಾಣ ಮಾಡಿರುವ ಸತೀಶಣ್ಣಾ ಕಲ್ಯಾಣ ಮಂಟಪದ ಜಚನಿ ಮುಖ್ಯಧ್ವಾರ ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿದ್ಯವಹಿಸಿ ಮಾತನಾಡುತ್ತಾ ಇಂದು ಮಾಧ್ಯಮಗಳೂ ಕೂಡ ರಾಜಕೀಯ ಪಕ್ಷಗಳ ಕೈಗೊಂಬೆಯಾಗುತ್ತಿರುವ ಅಪಾಯ ಎದುರಾಗಿದೆ. ಯುವಜನರು ಇತಿಹಾಸವನ್ನು ಅರಿತುಕೊಳ್ಳಲು ಮುಂದಾಗಬೇಕು. ಸಮಾಜದ ಒಳಿತನ್ನು ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಪೂಜ್ಯರು ಬುದ್ಧ ಬಸವ ಅಂಬೇಡ್ಕರ್ ವಿಶ್ವವಿದ್ಯಾಲಯ ಸ್ಥಾಪನೆ ಕುರಿತಂತೆ ಸಚಿವ ಸತೀಶ ಜಾರಕಿಹೊಳಿಗೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿ ಮಾತನಾಡಿದ ಸಚಿವರು
ಬುದ್ಧ-ಬಸವ -ಅಂಬೇಡ್ಕರ್ ಹೆಸರಿನಲ್ಲಿ ಖಾನಾಪುರ ಬಳಿ 100 ಎಕರೆ ಜಾಗೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ತಾವು ಸಿದ್ಧ. ಇದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಬೇಕಿದೆ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಂತಹ ವಿಶ್ವವಿದ್ಯಾಲಯ ಕಟ್ಟುವುದು ತಮ್ಮ ಬಹುದಿನಗಳ ಕನಸು. ಅದನ್ನು ಸಾಕಾರಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಈ ಉದ್ದೇಶಿತ ಹೊಸ ವಿಶ್ವವಿದ್ಯಾಲಯ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲ ವ್ಯಕ್ತಿಗಳ ಶೋಧ ಕಾರ್ಯ ನಡೆಸಲಾಗುವುದು. ಅದಕ್ಕೆ ಬೇಕಾದ ಇತರೆ ಸಂಪನ್ಮೂಲ ಕ್ರೋಢೀಕರಣಕ್ಕೂ ಗಮನ ಹರಿಸಲಾಗುವುದು ಎಂದೂ ಸಚಿವರು ತಿಳಿಸಿದರು.
ಹಬೀಬ ಶಿಲ್ಲೇದಾರ ಅವರು ಗ್ರಾಮೀಣ ಭಾಗದಲ್ಲಿ ಇಂತಹ ಒಂದು ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಅವರು ಮಾಡಿರುವ ಸೇವೆ ಶ್ಲಾಘನೀಯ. ಕಲ್ಯಾಣ ಮಂಟಪದ ಮೂಲಕ ಈ ಭಾಗದಲ್ಲಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಅವರು ಇಂದಿನ ಯುವಪೀಳಿಗೆಗೆ ಒಬ್ಬ ಮಾದರಿ ವ್ಯಕ್ತಿ ಎಂದು ಸಚಿವರು ಬಣ್ಣಿಸಿದರು.
ತಮ್ಮ ದುಡಿಮೆಯ ಶೇ. 25 ರಷ್ಟು ಭಾಗವನ್ನು ಸಾಮಾಜಿಕ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿರುವ ಶಿಲ್ಲೇದಾರ ಎಲ್ಲರಿಗೂ ಆದರ್ಶರಾಗಿ ನಿಲ್ಲುತ್ತಾರೆ ಎಂದರು.
ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ಮಾತನಾಡಿ ಬರೀ ಮಾತಿನಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿಲ್ಲ, ಕೃತಿಯಿಂದ ಅದು ಸಾಧ್ಯವಿದೆ ಎಂದು ಪ್ರತಿಪಾದಿಸಿದರು. ಯುವಜನರು ಇತಿಹಾಸವನ್ನು ಅರಿತುಕೊಳ್ಳಲು ಯತ್ನಿಸಬೇಕು ಎಂದೂ ಅವರು ಕಿವಿಮಾತು ಹೇಳಿದರು.
ಕಲ್ಮಠದ ಮಡಿವಾಳ ರಾಜಯೋಗಿದ್ರ ಸ್ವಾಮೀಜಿ, ನೇಗಿನಹಾಳದ ಬಸವ ಸಿದ್ದಲಿಂಗ ಸ್ವಾಮೀಜಿ, ಹುಕ್ಕೇರಿ ಶರಣಬಸವ ಸ್ವಾಮೀಜಿ, ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ವೀರಕುಮಾರ್ ಪಾಟೀಲ, ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ, ಬಾಬಾಸಾಹೇಬ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ಸುನೀಲ ಹನುಮಣ್ಣವರ, ಪ್ರಿಯಾಂಕಾ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.